ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ ನೋಟ – ನೋಟ ೫: ಕಾವೇರಿ ಬಂದಳು, ಕೆರೆಗಳು ಕಳೆದುಹೋದವು!

ಹತ್ತಿದ ಏಣಿಯನ್ನು ಒದ್ದೇ ಮುಂದೆ ಸಾಗಬೇಕು ಎನ್ನುವುದು ಹೊಸಗಾದೆ, ಅಲ್ಲಲ್ಲ ಪಾಲನೆ, ಬೆಂಗಳೂರನ್ನು ಆವರಿಸಿದ್ದೇ ಆವರಿಸಿದ್ದು, ಇದಕ್ಕೆ ಯಾವ ಪರಿಧಿಯೂ ಇಲ್ಲದಂತೆ ಎಲ್ಲವನ್ನೂ ಆಪೋಷಣ ತೆಗೆದುಕೊಳ್ಳತೊಡಗಿತು. ಅದಕ್ಕೇ ಕುಡಿಯುವ ನೀರಿನ ತಾಣವಾಗಿದ್ದ ಬೆಂಗಳೂರಿನ ಜಲಮೂಲಗಳಾದ ಕೆರೆಗಳು ನಾಶವಾಗತೊಡಗಿದವು. ನೀರು ಕುಡಿದ ಋಣವನ್ನು ತೀರಿಸಲೂ ಯಾರೂ ಸಹ ಮುಂದಾಗಲಿಲ್ಲ. ಕಾವೇರಿ ಬಂದಳು ನೋಡಿ, ನೀರುಣಿಸಿದ ಕೆರೆಗಳು ಜನಮಾನಸದಿಂದ ದೂರಾಗತೊಡಗಿದವು. ಕೆರೆಗಳನ್ನು ಮರೆಯಲಾರಂಭಿಸಿದರು. ಇದನ್ನೇ ಕಾಯುತ್ತಿದ್ದ ಸರಕಾರ ಹಾಗೂ ಭೂದಾಹಿಗಳು ಕೆರೆಗಳಿಗೆ ಸಮಾಧಿ ಕಟ್ಟಲು ಆರಂಭಿಸಿದರು. ಕೆರೆಗಳನ್ನು ‘ಕಳೆದು’ಹಾಕಿದರು.

ಅಂದಿನ ಸರಕಾರ ಅಥವಾ ಆಡಳಿತ ೧೮೯೬ರವರೆಗೆ ಬೆಂಗಳೂರಿನ ನಾಗರಿಕರಿಗೆ ಕೆರೆಗಳಿಂದಲೇ ಕುಡಿಯಲು ನೀರು ಪೂರೈಸುತ್ತಿತ್ತು. ಕುಡಿಯುವ ನೀರಿಗೆ ಸಂಪೂರ್ಣವಾಗಿ ಕೆರೆಗಳನ್ನೇ ಅವಲಂಬಿಸಲಾಗಿದ್ದು, ಫಿಲ್ಟರ್ ಆಗದ ನೀರೇ ಕೆರೆಗಳಿಂದ ಪೂರೈಕೆಯಾಗುತ್ತಿತ್ತು. ೧೮೯೬ರಲ್ಲಿ ಹೆಸರಘಟ್ಟದಿಂದ ಹಾಗೂ ೧೯೩೩ರಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಪೂರೈಸಲಾಯಿತು. ಆದರೂ ಕೆರೆಗಳ ಮೇಲಿನ ಅವಲಂಬನೆ ಕಡಿಮೆ ಆಗಿರಲಿಲ್ಲ. ಏಕೆಂದರೆ ಈ ಜಲಾಶಯಗಳಿಂದ ನಗರದ ಕೆಲವು ಅಥವಾ ಪ್ರತಿಷ್ಠಿತ ಪ್ರದೇಶಗಳಿಗೆ ಮಾತ್ರ ನೀರು ಪೂರೈಕೆಯಾಗುತ್ತಿತ್ತು. ಇನ್ನುಳಿದವರು ತೆರೆದ ಬಾವಿ, ಅದಿಲ್ಲದವರು ಕೆರೆಗಳನ್ನೇ ಅವಲಂಬಿಸಿದ್ದರು. ನಿಮಗೆ ಗೊತ್ತಿರಲಿ, ನಗರದ ಜನರಿಗೆ ಕುಡಿಯುವ ನೀರು ಒದಗಿಸುತ್ತಿದ್ದ ಕೆರೆಗಳಲ್ಲಿ ಅಗ್ರಪಂಕ್ತಿಯಲ್ಲಿದ್ದದ್ದು ಧರ್ಮಾಂಬುಧಿ ಕೆರೆ.

MAJESTIC__BMTCಹೌದು, ಬಹುತೇಕ ಇಂದಿನ ಜನಕ್ಕೆ ಧರ್ಮಾಂಬುಧಿ ಕೆರೆ ಗೊತ್ತಿಲ್ಲ. ಮೆಜೆಸ್ಟಿಕ್ ಬಸ್‌ಸ್ಟ್ಯಾಂಡ್ ಅಂದರೆ ಎಲ್ಲರಿಗೂ ಗೊತ್ತು. ಮೆಜೆಸ್ಟಿಕ್ ಅಥವಾ ಕೆಂಪೇಗೌಡ ಬಸ್ ನಿಲ್ದಾಣ ಇರುವ ಪ್ರದೇಶವೇ ಧರ್ಮಾಂಬುಧಿ ಕೆರೆ. ಅಲ್ಲಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು. ಈ ಕೆರೆಯ ಜತೆಗೆ ಮಿಲ್ಲರ‍್ಸ್ ಕೆರೆಯ ನೀರನ್ನು ಉಪಯೋಗಿಸುತ್ತಿದ್ದರು. ಕಂಟೋನ್ಮೆಂಟ್ ಎದುರಿಗಿರುವ ಪ್ರದೇಶವೇ ಮಿಲ್ಲರ‍್ಸ್ ಕೆರೆಯಾಗಿತ್ತು. ಈ ಎರಡು ಕೆರೆಯ ಜತೆಗೆ ಇಂದೂ ಅಸ್ತಿತ್ವ ಉಳಿಸಿಕೊಂಡಿರುವ ಸ್ಯಾಂಕಿ ಹಾಗೂ ಹಲಸೂರು ಕೆರೆಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು.  ನಗರೀಕರಣದ ಜತೆಗೆ ೧೯೭೦ರಲ್ಲಿ ಕಾವೇರಿ ನದಿಯಿಂದ ೧೦೦ ಕಿಮೀ ದೂರದಿಂದ ನಗರಕ್ಕೆ ನೀರು ತರುವ ಯೋಜನೆ ಆದ ಮೇಲೆ ಈ ಕೆರೆಗಳು ಮೂಲೆಗುಂಪಾದವು. ನಗರೀಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಈ ಕೆರೆಗಳನ್ನು ಬಲಿಕೊಡಲಾಯಿತು. ಇಂತಹ ಬಲಿಗೆ ಒಳಗಾಗಿ ಲೆಕ್ಕಕ್ಕೆ ಸಿಕ್ಕಿರುವ ಬೃಹತ್ ಕೆರೆಗಳು ೪೩. ಇವೆಲ್ಲ ದಾಖಲೆಯೂ ಆಗಿವೆ. ಆದರೆ, ದಾಖಲೆಗೆ ಸಿಕ್ಕಿರದೆ ಮಣ್ಣಾಗಿರುವ ಕೆರೆಗಳು ಬಹಳಷ್ಟಿವೆ. ಅವುಗಳನ್ನೆಲ್ಲ ನಕ್ಷೆಯಲ್ಲದಾದರೂ ನೋಡಬೇಕಾದರೆ ೧೯೭೦ರ ಹಿಂದಿನ ಕಂದಾಯ ದಾಖಲೆಗಳೇ ಬೇಕು.

ನಗರದ ಹೃದಯ ಭಾಗದಲ್ಲಿದ್ದ ಧರ್ಮಾಂಬುಧಿ ಕೆರೆ ಮುಚ್ಚಿ ಅದನ್ನು ಬಸ್ ನಿಲ್ದಾಣ ಮಾಡಿ ರಾಜ್ಯ ಸರ್ಕಾರವೇ ಕೆರೆಗಳ ಆಹುತಿಗೆ ಮುನ್ನುಡಿ ಬರೆಯಿತು. ಇದಾದ ನಂತರ ಸರಕಾರ ಹಾಗೂ ಸರಕಾರಿ ಸಂಸ್ಥೆಗಳು ಕೆರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಮಾರಿಕೊಂಡವು. ಇಂತಹ ಕೆರೆಗಳ ಪಟ್ಟಿಯನ್ನು ಇಲ್ಲಿ ನೀಡುತ್ತಿದ್ದೇನೆ. ಕೆರೆಗಳ ಹೆಸರಿನ ಮುಂದೆ ಇಂದು ಕಟ್ಟಲಾಗಿರುವ ‘ಸೌಧ’ದ ಹೆಸರನ್ನು ನೀಡಲಾಗಿದೆ.

ಧರ್ಮಾಂಬುಧಿ ಕೆರೆ – ಕೆಂಪೇಗೌಡ ಬಸ್ ನಿಲ್ದಾಣ; ಮಾರೇನಹಳ್ಳಿ ಕೆರೆ – ಮಾರೇನಹಳ್ಳಿ; ಸಾರಕ್ಕಿ/ ದೊರೆಸಾನಿಪಾಳ್ಯ ಕೆರೆ – ಜೆಪಿ ನಗರ ೪ನೇ ಫೇಸ್; ಚಿನ್ನಾಗರ ಕೆರೆ – ಈಜಿಪುರ; ಚಲ್ಲಘಟ್ಟ ಕೆರೆ – ಕರ್ನಾಟಕ ಗಾಲ್ಫ್ ಅಸೋಸಿಯೇಷನ್; ದೊಮ್ಮಲೂರು ಕೆರೆ – ದೊಮ್ಮಲೂರು ೨ನೇ ಹಂತ; ಸಿದ್ದಾಪುರ ಕೆರೆ – ಸಿದ್ದಾಪುರ/ ಜಯನಗರ ೧ನೇ ಬ್ಲಾಕ್; ಗೆದ್ದಲಹಳ್ಳಿ ಕೆರೆ – ಆರ್‌ಎಂವಿ ೨ನೇ ಸ್ಟೇಜ್, ೧ನೇ ಬ್ಲಾಕ್; ನಾಗಶೆಟ್ಟಿಹಳ್ಳಿ ಕೆರೆ – ಆರ್‌ಎಂವಿ ೨ನೇ ಸ್ಟೇಜ್, ೨ನೇ ಬ್ಲಾಕ್; ಕದಿರೇನಹಳ್ಳಿ ಕೆರೆ – ಬನಶಂಕರಿ ೨ನೇ ಸ್ಟೇಜ್; ತ್ಯಾಗರಾಜನಗರ ಕೆರೆ – ತ್ಯಾಗರಾಜನಗರ; ತುಮಕೂರು ಕೆರೆ – ಮೈಸೂರು ಲ್ಯಾಂಪ್ಸ್; ರಾಮಶೆಟ್ಟಿಪಾಳ್ಯ ಕೆರೆ – ಮಿಲ್ಕ್ ಕಾಲೊನಿ (ಮೈದಾನ); ಅಗಸಾನ ಕೆರೆ – ಗಾಯತ್ರಿ ದೇವಿ ಪಾರ್ಕ್; ಕೇತಮಾರನಹಳ್ಳಿ ಕೆರೆ – ರಾಜಾಜಿನಗರ (ಮಹಾಲಕ್ಷ್ಮಿಪುರಂ); ಗಂಗಶೆಟ್ಟಿ ಕೆರೆ – ಮಿನರ್ವಾ ಮಿಲ್ಸ್ ಮತ್ತು ಮೈದಾನ; ಜಕ್ರಾಯ ಕೆರೆ – ಕೃಷ್ಣ ಫ್ಲೋರ್ ಮಿಲ್ಸ್; ಅಗ್ರಹಾರ ಹೊಸಕೆರೆ – ಚೆಲುವಾದಿಪಾಳ್ಯ; ಕಲಾಸಿಪಾಳ್ಯ ಕೆರೆ – ಕಲಾಸಿಪಾಳ್ಯ; ಸಂಪಂಗಿ ಕೆರೆ – ಕಂಠೀರವ ಕ್ರೀಡಾಂಗಣ; ಶೂಲೆ ಕೆರೆ – ಅಶೋಕನಗರ, ಫುಟ್‌ಬಾಲ್ ಸ್ಟೇಡಿಯಂ; ಅಕ್ಕಿ ತಿಮ್ಮನಹಳ್ಳಿ ಕೆರೆ – ಸಾಯಿ ಹಾಕಿ ಸ್ಟೇಡಿಯಂ; ಸುಂಕಲ್ ಕೆರೆ – ಕೆಎಸ್‌ಆರ್‌ಟಿಸಿ ಪ್ರಾಂತೀಯ ವರ್ಕ್‌ಶಾಪ್; ಕೋರಮಂಗಲ ಕೆರೆ – ನ್ಯಾಷನಲ್ ಡೇರಿ ರಿಸರ್ಚ್ ಇನ್‌ಸ್ಟಿಟ್ಯೂಟ್; ಕೋಡಿಹಳ್ಳಿ ಕೆರೆ – ನ್ಯೂ ತಿಪ್ಪಸಂದ್ರ/ ಸರಕಾರಿ ಕಟ್ಟಡಗಳು; ಹೊಸಕರೆ – ರೆಸಿಡೆನ್ಶಿಯಲ್ ರೈಲ್ವೆ ಸ್ಟಾಕ್‌ಯಾರ್ಡ್; ಸೊಣ್ಣೇನಹಳ್ಳಿ ಕೆರೆ – ಆಸ್ಟಿನ್ ಟೌನ್ (ಆರ್‌ಇಎಸ್ ಕಾಲೊನಿ); ಗೋಕುಲ ಕೆರೆ – ಮತ್ತಿಕೆರೆ; ವಿದ್ಯಾರಣ್ಯಪುರ ಕೆರೆ – ವಿದ್ಯಾರಣ್ಯಪುರ (ಜಾಲಹಳ್ಳಿ ಈಸ್ಟ್); ಕಾಡುಗೊಂಡನಹಳ್ಳಿ ಕೆರೆ – ಕಾಡುಗೊಂಡನಹಳ್ಳಿ; ಹೆಣ್ಣೂರು ಕೆರೆ – ನಾಗವಾರ (ಎಚ್‌ಬಿಆರ್ ಲೇಔಟ್); ಬಾಣಸವಾಡಿ ಕೆರೆ – ಸುಬ್ಬಯ್ಯಪಾಳ್ಯ ಎಕ್ಸ್‌ಟೆನ್ಷನ್; ಚೆನ್ನಸಂದ್ರ ಕೆರೆ – ಪುಳ್ಳರೆಡ್ಡಿ ಲೇಔಟ್; ವಿಜ್ಞಾನಪುರ (ಕೊತ್ತೂರು) ಕೆರೆ – ರಾಜೇಶ್ವರಿ ಲೇಔಟ್; ಮುರುಗೇಶ್‌ಪಾಳ್ಯ ಕೆರೆ – ಮುರುಗೇಶ್ ಪಾಳ್ಯ; ಪರಂಗಿಪಾಳ್ಯ ಕೆರೆ – ಎಚ್‌ಎಸ್‌ಆರ್ ಲೇಔಟ್; ಮೇಸ್ತ್ರಿಪಾಳ್ಯ ಕೆರೆ – ಮೇಸ್ತ್ರಿಪಾಳ್ಯ (ಮೈದಾನ); ಟೈಮರ್‌ಯಾರ್ಡ್ ಕೆರೆ – ಟೈಮರ್‌ಯಾರ್ಡ್ ಲೇಔಟ್; ಗಂಗೊಂಡನಹಳ್ಳಿ ಕೆರೆ – ಗಂಗೊಂಡನಹಳ್ಳಿ; ವಿಜಯನಗರ ಕಾರ್ಡ್‌ರೋಡ್ ಕೆರೆ – ವಿಜಯನಗರ; ಒಡ್ಡರಪಾಳ್ಯ ಕೆರೆ – ರಾಜಾಜಿನಗರ (ಕೈಗಾರಿಕೆ ಪ್ರದೇಶ); ಸಾಣೆಗುರುವನಹಳ್ಳಿ ಕೆರೆ – ಬಸವೇಶ್ವರನಗರ.

ಇಲ್ಲೊಂದು ವಿಪರ್ಯಾಸ ಎಂದರೆ, ಕೆರೆಗಳನ್ನು ಒತ್ತುವರಿ ಮಾಡಿ ಅದರ ಮೇಲೆ ಆಗಿರುವ ಒತ್ತುವರಿಗೆ ಆ ಕೆರೆಗಳ ಮೂಲ ಹೆಸರನ್ನೇ ಇಟ್ಟಿರುವುದು. ಕೆರೆ ಎಂಬ ಜಾಗದಲ್ಲಿ ಲೇಔಟ್, ಹಳ್ಳಿ, ಬಡಾವಣೆ, ಬ್ಲಾಕ್ ಎಂದು ಸೇರಿಸಲಾಗಿದೆ. ಪರಿಸರವನ್ನು ತನ್ನೊಟ್ಟಿಗೆ ಇಟ್ಟುಕೊಳ್ಳುವುದು ಎಂದರೆ ಇದೇ ಇರಬೇಕು!

ಚಿತ್ರ-ಲೇಖನ: ಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*