ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

1500 ಹಳ್ಳೀಲಿ ಜಲಕ್ಷಾಮ

ಇಂದು ವಿಶ್ವ ಜಲ ದಿನ. ಮನುಷ್ಯರಾದಿಯಾಗಿ ಸಕಲ ಜೀವಚರಗಳಿಗೂ ಅಗತ್ಯವಾದ ನೀರಿನ ಮಹತ್ವವನ್ನು ಸಾರಿ ಹೇಳುವ ದಿನ. ಇಡೀ ವಿಶ್ವ ಇಂಥದ್ದೊಂದು ಅರ್ಥಪೂರ್ಣ ದಿನವನ್ನು ಆಚರಿಸುವಾಗ ಇತ್ತ ರಾಜ್ಯದ ಹೈದರಾಬಾದ್-ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಹನಿನೀರಿಗೂ ತತ್ವಾರ ಉಂಟಾಗಿದೆ. 1500ಕ್ಕೂ ಹೆಚ್ಚು ಗ್ರಾಮಗಳು ಭೀಕರ ಜಲಕ್ಷಾಮಕ್ಕೆ ತತ್ತರಿಸಿವೆ. ಬೊಗಸೆ ನೀರಿಗಾಗಿ ಜನ, ಜಾನುವಾರುಗಳು ನಡೆಸುತ್ತಿರುವ ಹೋರಾಟ, ಪರದಾಟ ಕಣ್ಣಲ್ಲಿ ನೀರು ತರಿಸುವಂತಿದೆ. ಜಲಕ್ಷಾಮದ ಸಂಪೂರ್ಣ ಚಿತ್ರಣ ಇಲ್ಲಿದೆ.

ಬಿರು ಬಿಸಿಲಿನಿಂದ ಹೊತ್ತಿ ಉರಿಯುತ್ತಿರುವ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲೀಗ ಹೆಜ್ಜೆ ಹೆಜ್ಜೆಗೂ ಬರಗಾಲ. ಬಿಸಿಲಿನ ಪ್ರಖರತೆಗೆ ಜನ, ಜಾನುವಾರುಗಳು ಒದ್ದಾಡುತ್ತಿದ್ದು, ಹನಿ ನೀರಿಗೂ ತತ್ವಾರ ಎದುರಾಗಿದೆ. ಕೈಕೊಟ್ಟ ಮಳೆ ಮತ್ತು ಬಿಸಿಲಿನ ತಾಪದಿಂದಾಗಿ ಈ ಭಾಗದ ಆರು ಜಿಲ್ಲೆಗಳ 1500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭೀಕರ ಜಲಕ್ಷಾಮ ಉಂಟಾಗಿದ್ದು, ಬಿಸಿಗಾಳಿಯಿಂದ ರೋಗ ರುಜಿನಗಳ ಉಪಟಳವೂ ಮಿತಿಮೀರುತ್ತಿದೆ.

ಸದ್ಯ ಲಭ್ಯ ಮಾಹಿತಿ ಪ್ರಕಾರ, ಬೀದರ್ ಜಿಲ್ಲೆಯ 220, ಕಲಬುರಗಿ 400, ಯಾದಗಿರಿ 200, ರಾಯಚೂರು 220, ಕೊಪ್ಪಳ 115 ಮತ್ತು ಬಳ್ಳಾರಿ ಜಿಲ್ಲೆಯ 186 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆಗಳಿವೆ. ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೇ 100 ಹಳ್ಳಿಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಲಾಗುತ್ತಿದೆ. ದುರ್ದೈವವೆಂದರೆ, ಎಲ್ಲ ಆರು ಜಿಲ್ಲೆಗಳಲ್ಲಿರುವ ಹಳ್ಳ-ಕೊಳ್ಳಗಳು,
130211_DX_TapWater.jpg.CROP_.article568-large-568x400
ನದಿಗಳು, ತೆರೆದ ಬಾವಿಗಳು ಒಣಗಿವೆ. ಈ ಭಾಗಕ್ಕೆ ಕುಡಿಯುವ ನೀರು ಕೊಡುವ ಪ್ರಮುಖ ನದಿಗಳಾದ ಕೃಷ್ಣೆ, ಭೀಮಾ ಮತ್ತು ತುಂಗಭದ್ರಾಗಳಲ್ಲಿ ಹುಡುಕಿದರೂ ನೀರು ಸಿಗದಂಥ ಸ್ಥಿತಿ ಇದೆ. ಸಣ್ಣಪುಟ್ಟ ಜಲಮೂಲಗಳಲ್ಲಂತೂ ನೀರೇ ಇಲ್ಲ. ಹೀಗಾಗಿ ಇವು ಇದ್ದೂ ಇಲ್ಲದಂತಾಗಿದೆ. ಕೈಕೊಡುತ್ತಿರುವ ವಿದ್ಯುತ್​ನಿಂದಾಗಿ ಕೊಳವೆಬಾವಿಗಳ ನೀರು ಸಿಗುವುದೂ ಕಷ್ಟಕರವಾಗಿದೆ.

ಬಿಸಿಲಿನ ಬಾಧೆ ಮತ್ತು ನೀರಿಲ್ಲದ್ದರಿಂದ ಜಲಚರಗಳು ಮತ್ತಿತರ ಪ್ರಾಣಿ-ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಹಲವೆಡೆ ಇತ್ತೀಚೆಗೆ ಸಾವಿರಾರು ಮೀನು, ನಾಲ್ಕಾರು ಮೊಸಳೆಗಳು ಸಾವನ್ನಪ್ಪಿವೆ. ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಭಾಗದ ಮಲೆನಾಡು ಪ್ರದೇಶ ಎಂದು ಕರೆಯಲ್ಪಡುವ ಬೀದರ್ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ.

ಈಗಲೇ 6 ಜಿಲ್ಲೆಗಳಲ್ಲಿ ಸರಾಸರಿ 40-41 ಡಿಗ್ರಿ ಸೆಲ್ಸಿಯಸ್ ಬಿಸಿಲಿದೆ. ಏಪ್ರಿಲ್ ಮತ್ತು ಮೇ ತಿಂಗಳು ನೆನೆಸಿಕೊಳ್ಳುವುದು ಸಹ ಕಷ್ಟವಾಗಿದೆ. ಕಳೆದ ಕೆಲ ವರ್ಷಗಳಿಂದ ಬಿಸಿಲಿನ ತಾಪ ತಡೆಯದೇ ಸಾವನ್ನಪ್ಪಿದವರೂ ಇದ್ದಾರೆ. ಆರು ಜಿಲ್ಲೆಗಳಲ್ಲಿ ಭೂಮಿ ಕಾದ ಕಬ್ಬಿಣವಾಗಿದೆ. ಈ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದ್ದು, ನೀರಿನ ಮೂಲಗಳು ಬತ್ತಿ ಹೋಗಿವೆ. ಮಳೆಗಾಲ ಶುರುವಾಗುವವರೆಗೆ ದಿನಗಳು ಕರಾಳವಾಗಲಿವೆ ಎಂಬ ಭಯದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಗಳು ದಿನದೂಡುತ್ತಿವೆ.

ನೀರಿನ ಸಮಸ್ಯೆ ನೀಗಿಸಲು ಬೋರ್​ವೆಲ್ ಕೊರೆಸುವುದಾಗಿ ಜಿಲ್ಲಾಡಳಿತಗಳು ಹೇಳುತ್ತಿವೆ ಯಾದರೂ ನೀರೇ ಇಲ್ಲದ ನೆಲದಲ್ಲಿ ನೀರು ಉಕ್ಕುವುದೇ ಎಂದು ಜನರು ಹತಾಶರಾಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಮಳೆ ಬೀಳದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಹೀಗಾದಲ್ಲಿ ಸಾವು, ನೋವಿನ ಸಂಖ್ಯೆ ಹೆಚ್ಚಿದರೂ ಆಶ್ಚರ್ಯವಿಲ್ಲ ಎಂಬಂತಹ ಸ್ಥಿತಿ ನಿರ್ವಣವಾಗಿದೆ.

ಬಿಸಿಲ ಝುಳ, ತಳಮಳ

ಶನಿವಾರ ಬೀದರ್ ಜಿಲ್ಲೆಯಲ್ಲಿ 39 ಡಿಗ್ರಿ ಸೆಲ್ಸಿಯಸ್​ನಷ್ಟು ಬಿಸಿಲಿದ್ದರೆ, ಕಲಬುರಗಿಯಲ್ಲಿ 41.16, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸರಾಸರಿ 40 ಡಿಗ್ರಿ ಸೆಲ್ಸಿಯಸ್ ಬಿಸಿಲು ಇರುವುದು ದಾಖಲಾಗಿದೆ.

ಅನಾರೋಗ್ಯ ತಂದ ಬಿರುಬಿಸಿಲು

ಬಿಸಿಲಿನ ತಾಪದಿಂದಾಗಿ ಅನೇಕರು ಜ್ವರ, ತಲೆನೋವು, ಮೈ-ಕೈ ನೋವಿನಿಂದ ಬಳಲುತ್ತಿದ್ದರೆ, ಅನೇಕರಿಗೆ ಮೂಗಿನಲ್ಲಿ ರಕ್ತವೂ ಸೋರಲಾರಂಭಿಸಿದೆ. ಇಂಥ ಸ್ಥಿತಿಯಲ್ಲಿ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ಎದುರಿಸುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿಬಿಟ್ಟಿದೆ.

                                             ಇಂದಿನ ವಿಜಯವಾಣಿ ದಿನಪತ್ರಿಕೆಯಲ್ಲಿ ‘ವಿಶ್ವ ಜಲ’ ದಿನ ದ ಪ್ರಯುಕ್ತ ವಾದಿರಾಜ ವ್ಯಾಸಮುದ್ರ  ರವರ ಪ್ರಕಟಿತ ಲೇಖನ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*