ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹೊಸಕೆರೆಹಳ್ಳಿ ಕೆರೆ ಪುನರುಜ್ಜೀವನ

ಬೆಂಗಳೂರು ತಂಪು ಹವೆಗೆ ಹೆಸರಾಗಿದ್ದ ನಗರ. ಇದಕ್ಕೆ ಕಾರಣ ಇಲ್ಲಿಯ ಭೂಪ್ರದೇಶ ಸಮುದ್ರ ಮಟ್ಟದಿಂದ ೯೦೦ ಮೀಟರ್ ಎತ್ತರದಲ್ಲಿರುವುದಷ್ಟೇ ಅಲ್ಲ, ಅಸಂಖ್ಯ ವೃಕ್ಷಗಳು, ನೂರಾರು ಸಣ್ಣದೊಡ್ಡ ಕೆರೆಗಳು ಇಲ್ಲಿನ ವಾತಾವರಣವನ್ನು ಬೇಸಿಗೆಯಲ್ಲೂ ಸಹನೀಯವಾಗಿಸಿದ್ದವು. ಕೆರೆಗಳಿದ್ದರೆ ಸುತ್ತಲಿನ ಪರಿಸರವೂ ತಂಪಾಗಿರುತ್ತದೆ. ಕೆರೆ ಏರಿಯಲ್ಲಿ ಬೆಳೆಸಿದ ಮರಗಳು ತಂಪು ಹವೆಯ ಜೊತೆಗೆ ಸುಂದರ ಪ್ರಕೃತಿ ಸೊಬಗನ್ನು ಸೃಷ್ಟಿಸುತ್ತವೆ. ಕೆರೆಯಿಂದ ಬೀಸುವ ತಂಗಾಳಿ ದೂರದವರೆಗೆ ಸಾಗಿ ಸುತ್ತಲಿನ ಪ್ರದೇಶವನ್ನು ತಣ್ಣಗಿರಿಸುತ್ತವೆ. ಕೆರೆ ಸುತ್ತ ಅಂತರ್ಜಲ ಹೆಚ್ಚಿ ಸಹಜವಾಗಿಯೇ ಭೂಮಿಯೊಳಗಿನ ಕಾವು ಕಡಿಮೆಯಾಗುತ್ತದೆ.

ಉದ್ಯಾನವನಗಳ ನಗರಿಯಾಗಿದ್ದ ಬೆಂಗಳೂರು ಈಗ ‘ಗಾರ್ಬೇಜ್ ಸಿಟಿ’ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಎರಡನೇ ಮಹಾಯುದ್ಧದ ನಂತರ ಬೆಂಗಳೂರು ಬೆಳೆಯುತ್ತಲೇ ಹೋಯಿತು. ಕೈಗಾರಿಕೀಕರಣದಿಂದಾಗಿ ವಲಸಿಗರ ಸಂಖ್ಯೆ ಹೆಚ್ಚುತ್ತಲೇ ಬಂತು. ಭಾರತವು ಜಾಗತೀಕರಣಕ್ಕೆ ತೆರೆದುಕೊಂಡ ಮೇಲಂತೂ, ಬೆಂಗಳೂರು ಐ.ಟಿ. ಹಬ್ ಆಗಿಯೂ ಹೆಸರು ಮಾಡಿತು. ಇದೀಗ ಸ್ಟಾರ್ಟ್‌ಅಪ್ ಕಂಪನಿಗಳ ತವರೂ ಆಗುತ್ತಿದೆ. ಹೀಗಾಗಿ ಉದ್ಯೋಗವನ್ನರಸಿ ಬೆಂಗಳೂರಿಗೆ ಪ್ರತಿದಿನ ವಲಸಿಗರ ದಂಡೇ ಬಂದಿಳಿಯುತ್ತಿದೆ.

ಒಂದೇ ಒಂದು ಕೆರೆ ಮಾಲಿನ್ಯಕ್ಕೊಳಗಾದರೆ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಅಗಾಧ. ಕೆರೆ ಸುತ್ತಲಿನ ವಾತಾವರಣ ಬಿಸಿಯೇರಲು ಕಾರಣವಾಗುತ್ತದೆ. ಇನ್ನು ನೈಸರ್ಗಿಕ ಏರ್‌ಕಂಡೀಶನರ್‌ಗಳಾಗಿದ್ದ ಹಲವಾರು ಕೆರೆಗಳು ಮಾಲಿನ್ಯಗೊಂಡು ನಾಶವಾಗುತ್ತಿವೆ. ಬೆಂಗಳೂರಿನ ತಂಪು ವಾತಾವರಣ ಬಿಸಿಯಾಗುತ್ತಿದೆ. ಇದರ ಜೊತೆಗೆ ಅಸಂಖ್ಯಾತ ವಾಹನಗಳು ಉಗುಳುವ ಹೊಗೆ, ಕೈಗಾರಿಕೆಗಳು, ಎ.ಸಿ., ದೊಡ್ಡ ದೊಡ್ಡ ಗಾಜಿನ ಕಿಟಕಿ ಮುಂತಾದವು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿದೆ. ಚಳಿಗಾಲದಲ್ಲೂ ಬಿಸಿಲು, ಸೆಖೆಯ ಅನುಭವವಾಗುತ್ತಿದೆ.

ಈ ಎಲ್ಲದರ ಪರಿಣಾಮ ಬೆಂಗಳೂರು ಹೊಲಗದ್ದೆ, ಮರ, ಕೆರೆಕಟ್ಟೆಗಳನ್ನು ನುಂಗಿ ತ್ವರಿತವಾಗಿ ಬೆಳೆಯುತ್ತಿದೆ. ನಗರೀಕರಣದ ಹೊಡೆತಕ್ಕೆ ಸಿಲುಕಿ ಅದೆಷ್ಟೋ ಕೆರೆಗಳು ಬಡಾವಣೆ, ಬಸ್ಸು ನಿಲ್ದಾಣ, ಕ್ರೀಡಾಂಗಣ, ಪುರಸಭಾ ಕಟ್ಟಡ, ವಸತಿ ಸಮುಚ್ಚಯಗಳಾಗಿ ರೂಪಾಂತರ ಹೊಂದಿವೆ. ಇಟ್ಟಮಡು ಕೆರೆಯಂತಹವು ಒತ್ತುವರಿಗೆ ಒಳಗಾಗಿ ನಾಮಾವಶೇಷವಾಗಿವೆ. ಕೆರೆ, ಮರಗಳ ನಾಶದಿಂದಾಗಿ ನೈಸರ್ಗಿಕ ಏರ್‌ಕಂಡೀಶನರ್‌ನಂತಿದ್ದ ಬೆಂಗಳೂರಿನ ಬಿಸಿ ಏರುತ್ತಾ ಜಾಗತಿಕ ತಾಪಮಾನ ಹೆಚ್ಚಳಕ್ಕೆ ಉದಾಹರಣೆಯಾಗಿ ನಿಲ್ಲುತ್ತಿದೆ. ೨೦೨೦ರ ವೇಳೆಗೆ ಬೆಂಗಳೂರಿನಲ್ಲೂ ಬೇಸಿಗೆಯಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಗಳಿವೆಯೆಂದು ತಜ್ಞರು ಎಚ್ಚರಿಸಿದ್ದಾರೆ.

ಮಣ್ಣು, ಗಾಳಿ, ಜಲ, ಬೆಳಕಿನ ಮಾಲಿನ್ಯಗಳು ಬೆಂಗಳೂರನ್ನು ಬಾಧಿಸುತ್ತಿವೆ. ಹಸಿರು ವಲಯದಲ್ಲಿ ತೀವ್ರ ಕಡಿತ, ವಾಹನಗಳು, ಏ.ಸಿ., ದೊಡ್ಡ ಗಾಜಿನ ಕಿಟಕಿಗಳು, ಮಿತಿಮೀರಿದ ಕಟ್ಟಡಗಳ ನಿರ್ಮಾಣ, ಉದ್ಯಾನಗಳು ಮತ್ತು ಕೆರೆಕುಂಟೆಗಳು ಕಾಣೆಯಾಗುತ್ತಿರುವುದರಿಂದ, ಬೆಂಗಳೂರು ನಗರವು ಸಮಸ್ಯೆಗಳ ಕೂಪಕ್ಕೆ ಸಿಲುಕಿದೆ. ಹಸಿರು ಮನೆ ಅನಿಲ ಹೊರಹಾಕುವಲ್ಲೂ ಬೆಂಗಳೂರು ಮುಂಚೂಣಿಯಲ್ಲಿದೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿ, ಆ ಮೂಲಕ ಹವಾಮಾನ ಬದಲಾವಣೆಗೆ ಕಾರಣವಾಗುತ್ತಿದೆ.

Hosakere 5ಬೆಂಗಳೂರಿನಲ್ಲಿ ಈಗ ಅಳಿದುಳಿದಿರುವ ಕೆರೆಗಳು ತೀವ್ರತರನಾದ ಮಾಲಿನ್ಯಕ್ಕೆ ಒಳಗಾಗಿವೆ. ದಿನೇದಿನೇ ಒತ್ತುವರಿದಾರರ ಕೈಸೇರುತ್ತಿವೆ. ಇಂತಹ ಕೆರೆಗಳಲ್ಲಿ ಪ್ರಕೃತಿ ಸೊಬಗು ಹಿತವಾದ ವಾತಾವರಣಕ್ಕೆ ಹೆಸರಾಗಿದ್ದ ಹೊಸಕೆರೆಹಳ್ಳಿ ಕೆರೆ ಇಂದು ಅವನತಿಯ ಹಾದಿಯಲ್ಲಿದೆ. ನಗರೀಕರಣದ ಬಿಸಿ ಬೆಂಗಳೂರಿನ ಉಳಿದ ಕೆರೆಗಳಂತೆ ಈ ಕೆರೆಗೂ ತಟ್ಟಿ ಒತ್ತುವರಿ, ಮಾಲಿನ್ಯ ಕಸದ ತಾಣವಾಗಿ ಮಾರ್ಪಟ್ಟಿದೆ. ಸುತ್ತಲಿನ ಹಳ್ಳಿಗಳ ಜನರ ಜೀವನಾಡಿಯಾಗಿದ್ದ ಕೆರೆ ಇಂದು ಅಳಿವಿನಂಚಿನಲ್ಲಿದೆ. ಕೆರೆಯನ್ನು ಅವಲಂಬಿಸಿದ್ದ ಜಲಚರಗಳು, ಪಕ್ಷಿಸಂಕುಲ, ಜಾನುವಾರುಗಳು ಇಲ್ಲವಾಗಿವೆ. ಕೃಷಿ ಮುಖ್ಯ ವೃತ್ತಿಯಾಗಿತ್ತು. ಹೇರಳವಾಗಿ ಸ್ಥಳೀಯ ಮೀನುಗಳು ಸಿಗುತ್ತಿದ್ದವು. ಹೊಸಕೆರೆಹಳ್ಳಿ ಊರು ಪಶುಸಂಗೋಪನೆಗೆ ಹೆಸರಾಗಿತ್ತು. ಕೆರೆಯಿಂದಲೇ ಬದುಕು ಕಟ್ಟಿಕೊಂಡಿದ್ದ ರೈತರು, ಮೀನುಗಾರರು, ಪಶುಸಂಗೋಪಕರು, ಮಡಿವಾಳರು ವೃತ್ತಿ ತೊರೆದಿದ್ದಾರೆ. ನರಸಮ್ಮ, ಲಕ್ಷ್ಮಿದೇವಿಯಂತಹ ಕೆಲವೇ ಮಂದಿ ಹೈನುಗಾರಿಕೆ ಬಿಡಲಾರದೆ ಮನೆಯ ಮುಂದೆಯೇ ಹಸು ಸಾಕುತ್ತಿದ್ದಾರೆ.

ಕೆರೆ ವಿಶಾಲವಾಗಿರುವುದರಿಂದ, ಪುನಶ್ಚೇತನಗೊಳಿಸಿದರೆ ಹಲವಾರು ಪ್ರಯೋಜನಗಳಿವೆ. ಕೆರೆ ಸುತ್ತಲೂ ಬೆಳೆದಿರುವ ಹೊಸಕೆರೆಹಳ್ಳಿ, ಹೃಷಿಕೇಶ್ ನಗರ, ಸಪ್ತಗಿರಿ ನಗರ, ಮೂಕಾಂಬಿಕಾ ನಗರ, ದತ್ತಾತ್ರೇಯನಗರ, ಆದಿತ್ಯ ಲೇಔಟ್, ಕೆರೆಕೋಡಿ, ವೆಂಕಟಪ್ಪ ಲೇಔಟ್ ಮುಂತಾದ ಬಡಾವಣೆಗಳ ಜನರಿಗೆ ಉತ್ತಮ ಪರಿಸರದಲ್ಲಿ ಬದುಕುವ ಅವಕಾಶ ದೊರಕುತ್ತದೆ. ಅಂತರ್ಜಲ ಹೆಚ್ಚುವುದಲ್ಲದೆ, ಗುಣಮಟ್ಟವು ಉತ್ತಮವಾಗುತ್ತದೆ. ಕೆರೆ ಸುತ್ತಲಿನ ವಾತಾವರಣ ತಂಪಾಗುತ್ತದೆ. ಸ್ಥಳೀಯರಿಗೆ ಕೆರೆಯ ಸುತ್ತ ವಾಯುವಿಹಾರಕ್ಕೆ ಒಳ್ಳೆಯ ಜಾಗ ದೊರಕುತ್ತದೆ. ಕೆರೆಯಂಚಿನಲ್ಲಿ ಮರಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿನ ಇಂಗಾಲದ ಡೈ ಆಕ್ಸೈಡ್ ಪ್ರಮಾಣ ತಗ್ಗಿಸಲು ಸಹಕಾರಿಯಾಗುತ್ತದೆ. ಇದರಿಂದ ಸ್ಥಳೀಯರ ಆರೋಗ್ಯ ಹೆಚ್ಚುತ್ತದೆ. ಕೆರೆಯಲ್ಲಿ ಜಲಚರಗಳು, ಪಕ್ಷಿಗಳಿಗೆ ಮತ್ತೆ ಆಶ್ರಯ ಸಿಗುತ್ತದೆ. ಕೆರೆ ಸೌಂದರ್ಯ ಸಾಕಷ್ಟು ಮರಳುತ್ತದೆ.

ಹಾಗೆ ನೋಡಿದರೆ ಯಾವುದೇ ಜಲಮೂಲಗಳಿಲ್ಲದ ಬೆಂಗಳೂರು ಬೆಳೆದಿದ್ದೇ ಕೆರೆಗಳಿಂದ. ಅದೇ ಕೆರೆಗಳು ನಗರೀಕರಣದಿಂದಾಗಿ ಹಾಳಾಗಿವೆ. ಕೆರೆ ನಿರ್ಮಾಣದ ಮೂಲ ಉದ್ದೇಶವೇ ಕುಡಿಯಲು, ನಿತ್ಯಬಳಕೆ, ಕೃಷಿ, ಹೈನುಗಾರಿಕೆ, ಮೀನುಗಾರಿಕೆ, ಪಕ್ಷಿಗಳಿಗೆ ಆಶ್ರಯ ನೀಡುವುದಾಗಿತ್ತು. ಕೆರೆ ಸುತ್ತಲಿನ ಹಳ್ಳಿಗಳ ತೋಡುಬಾವಿಗಳ ನೀರು ಸಮೃದ್ಧಿಗೂ ಕಾರಣವಾಗಿರುತ್ತಿತ್ತು. ಆದರೆ ಈಗ ಇಂತಹ ಉದ್ದೇಶಗಳನ್ನೇ ಮರೆತು ಕೆರೆಯನ್ನು ಕೊಳಚೆ ನೀರು ಸಂಗ್ರಹದ ತಾಣವಾಗಿರಿಸಿರುವುದು ಬೆಂಗಳೂರಿನ ದುರಂತಗಳಲ್ಲೊಂದು.

ಹೊಸಕೆರೆಹಳ್ಳಿ ಕೆರೆ ೨೦ ವರ್ಷಗಳ ಹಿಂದೆ ಈ ಪ್ರಮಾಣದಲ್ಲಿ ಒತ್ತುವರಿಯಾಗಿರಲಿಲ್ಲ. ಕೆರೆಯ ದಡದ ಸುತ್ತ ಸಾಕಷ್ಟು ಖಾಲಿ ಜಾಗವಿತ್ತು. ದೂರದಿಂದ ನಿಂತು ಕೆರೆಯ ಸಂಪೂರ್ಣ ದೃಶ್ಯ ನೋಡುತ್ತಿದ್ದೆವು. ಆಗ ಕೆರೆಯ ಸಮೀಪ ನಿಂತರೆ ಈಗಿನಂತೆ ದುರ್ವಾಸನೆ ಬರುತ್ತಿರಲಿಲ್ಲ. ಕೆರೆಯಲ್ಲಿ ಸಾಕಷ್ಟು ನೀರಿರುವ ಭಾಗ ಕಾಣುತ್ತಿತ್ತು. ಕೆಲವು ಕಡೆ ಮಾತ್ರ ಜೊಂಡು ಮುಂತಾದ ಜಲಕಳೆಗಳು ಇದ್ದವು. ಈಗ ಅವು ಸಂಪೂರ್ಣ ಬೆಳೆದು, ಕೊಳಚೆಯ ಸಾಮ್ರಾಜ್ಯ ಸೃಷ್ಟಿಯಾಗಿ, ಅಲ್ಲಿ ಒಂದು ಕ್ಷಣವೂ ನಿಲ್ಲಲು ಆಗದಂತಹ ವಾತಾವರಣ ಸೃಷ್ಟಿಯಾಗಿದೆ. ನೋಡನೋಡುತ್ತಾ ಕೆರೆಯ ಸುತ್ತ ಮನೆಗಳು, ಕೆರೆಕೋಡಿಯಲ್ಲಿ ವಾಣಿಜ್ಯ ಮಳಿಗೆಗಳು ಒಂದೊಂದಾಗಿ ತಲೆಯೆತ್ತಿದವು.

ಕೆರೆಯ ಸುತ್ತ ಇದ್ದ ಅಚ್ಚುಕಟ್ಟು ಪ್ರದೇಶದಲ್ಲಿ ತೆಂಗು, ಬಾಳೆತೋಟ, ಹೊಲಗದ್ದೆಗಳನ್ನು ಕಣ್ಣಾರೆ ಕಂಡ ನೆನಪಿದೆ. ರಿಂಗ್ ರಸ್ತೆಯಿಂದ ಕೆರೆಕೋಡಿಗೆ ಹೋಗುವ ರಸ್ತೆಗೆ ಹೊಂದಿಕೊಂಡಿದ್ದ ಜಮೀನಿನಲ್ಲಿ ವಿವಿಧ ಸೊಪ್ಪುಗಳನ್ನು ಬೆಳೆಯುತ್ತಿದ್ದರು. ಇವರಿಗೆ ಹಣ ನೀಡಿ ನಾವೇ ಸೊಪ್ಪು ಕಿತ್ತುಕೊಳ್ಳುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ನೈಸ್ ರಸ್ತೆ ಮತ್ತು ಹೊಸದಾಗಿ ನಿರ್ಮಿತವಾದ ನಿವೇಶಗಳಿಂದ ಎಲ್ಲವೂ ಮಂಗಮಾಯವಾದವು. ಈಗಲೂ ಕೆರೆಕೋಡಿಯಿಂದ ರಾಜರಾಜೇಶ್ವರಿನಗರಕ್ಕೆ ಹೋಗುವ ದಾರಿಯಲ್ಲಿ ಒಂದೆರಡು ತೆಂಗು, ಬಾಳೆತೋಟಗಳನ್ನು ಕಾಣಬಹುದು. ಕೆಲವರು ಹೈನುಗಾರಿಕೆಗೆ ಬೇಕಾದ ಹುಲ್ಲು ಬೆಳೆಯುತ್ತಿದ್ದಾರೆ. ಒಂದಿಬ್ಬರು ಹೂಗಳನ್ನು ಬೆಳೆಯುತ್ತಾರೆ.

ಹೊಸಕೆರೆಹಳ್ಳಿ ಕೆರೆಯನ್ನು ನಂಬಿ ಬದುಕಿದ ಹಲವು ಹಿರಿಯ ಜೀವಿಗಳು ಈಗಲೂ ಅಂದಿನ ಗತವೈಭವ ನೆನೆದು ಭಾವುಕರಾಗುತ್ತಾರೆ. ೭೫ ವರ್ಷದ ನರಸಮ್ಮ ಇಲ್ಲಿ ಆರು ದಶಕಗಳಿಂದ ನೆಲೆಸಿದ್ದಾರೆ. ಕೃಷಿ ಮತ್ತು ಹೈನುಗಾರಿಕೆ ಮಾಡುತ್ತಿದ್ದರು. ಯೇಸುಗುಡ್ಡದಲ್ಲಿ ಅವರ ಹೊಲವಿತ್ತು. ಅವರು ಹೇಳುವಂತೆ ಕೆರೆಯಲ್ಲಿ ಬೇಸಿಗೆಯಲ್ಲೂ ನೀರಿರುತ್ತಿತ್ತು. ಕೆರೆ ತುಂಬಾ ಆಳವಾಗಿತ್ತು. ಮಧ್ಯೆ ಬಂಡೆಗಳಿದ್ದವು. ಕೆರೆ ಸುತ್ತ ಗಡಿಕಲ್ಲುಗಳಿದ್ದವು. ಕೆರೆ ಏರಿ ವಿಶಾಲವಾಗಿತ್ತು. (ಈಗ ರಸ್ತೆಯಾಗಿದೆ)

ಹೊಸಕೆರೆಹಳ್ಳಿ ಕೆರೆಯ ಇತಿಹಾಸದ ಕುರಿತು ಬೆಂಗಳೂರು ಗೆಜೆಟಿಯರ್, ಬೆಂಗಳೂರು ಇತಿಹಾಸ, ಬೆಂಗಳೂರಿನ ಕೆರೆಗಳ ಬಗ್ಗೆ ಬಂದಿರುವ ಪುಸ್ತಕಗಳಲ್ಲಾಗಲೀ, ವೆಬ್‌ಸೈಟ್‌ನಲ್ಲಾಗಲೀ ಮಾಹಿತಿ ಇಲ್ಲ. ರಾಣಿಯೊಬ್ಬಳು ಕೆರೆಯ ಅಗತ್ಯ ಮನಗಂಡು, ಈ ಜಾಗ ಕೆರೆಗೆ ಸೂಕ್ತವಾಗಿದೆ ಎಂದು ನಿರ್ಧರಿಸಿ, ತಾನೇ ನಿಂತು ಕಟ್ಟಿಸಿದಳು ಎಂದು ಇಲ್ಲಿನ ಹಿರಿಯರು ಕೆರೆ ಹುಟ್ಟಿದ ಕಥೆ ಹೇಳುತ್ತಾರೆ. “ಕೆರೆ ಇರೋ ಜಾಗದಿಂದ ಸ್ವಲ್ಪ ದೂರದಲ್ಲಿ ಲಂಜಗುಂಡು ಅಂತ ಒಂದು ಕಲ್ಲಿದೆ. ಅದರ ಮೇಲೆ ಕಾಲು ಮೇಲೆ ಕಾಲು ಹಾಕ್ಕೊಂಡು ಎಲೆಅಡಿಕೆ ತಿನ್ನುತ್ತಾ ಕೆರೆ ಉಸ್ತುವಾರಿ ನೋಡ್ತಿದ್ಲಂತೆ. ದಿನಾ ನಿಂತು ಕೆರೆ, ಕೆರೆ ಏರಿ ಎರಡೂ ಕಟ್ಟಿಸಿದ್ಲಂತೆ. ಈ ಹೊಸ ಕೆರೆಯಿಂದ ಎಲ್ಲ ಚೆನ್ನಾಗಿದ್ದರೆ ನನಗದೇ ಸಂತೋಷಾಂತ ರಾಣಿ ಹೇಳ್ತಿದ್ಲಂತೆ” ಎಂದು ಕೆರೆ ಇತಿಹಾಸದ ಕುರಿತು ತಮ್ಮ ಪೂರ್ವಜರಿಂದ ಕೇಳಿದ್ದನ್ನು ಹೇಳುತ್ತಾರೆ.

ಹೊಸಕೆರೆಹಳ್ಳಿ ಕೆರೆಯು ಬನಶಂಕರಿ ಮೂರನೇ ಹಂತದ ರಿಂಗ್ ರಸ್ತೆಯ ಸಮೀಪದಲ್ಲಿ ಯೇಸುಗುಡ್ಡದ ತಪ್ಪಲಲ್ಲಿದೆ. ೫೯.೨೫ ಎಕರೆಗಳಷ್ಟು ವಿಶಾಲವಾದ ಕೆರೆ ಕೆಲ ದಶಕಗಳ ಹಿಂದೆ ತಿಳಿಜಲದಿಂದ ನಳನಳಿಸುತ್ತಿತ್ತು. ಜೀವವೈವಿಧ್ಯತೆಯ ತವರಾಗಿತ್ತು. ಹೊಸಕೆರೆಹಳ್ಳಿ ಮತ್ತು ಸುತ್ತಲಿನ ಹಳ್ಳಿಗಳ ಜನರ ಜೀವನಾಡಿಯಾಗಿತ್ತು. ಸುತ್ತಲಿನ ಎತ್ತರದ ಪ್ರದೇಶಗಳು ಮತ್ತು ಯೇಸುಗುಡ್ಡದ ಮೇಲಿನಿಂದ ಹರಿದು ಬರುತ್ತಿದ್ದ ಮಳೆನೀರು ನೇರವಾಗಿ ಕೆರೆಪಾತ್ರ ಸೇರುವಂತೆ ಕೆರೆಯ ರಚನೆಯಾಗಿತ್ತು. ಚೆನ್ನಮ್ಮನಕೆರೆ ಅಚ್ಚುಕಟ್ಟು, ಚಿಕ್ಕಲ್ಲಸಂದ್ರ, ಇಟ್ಟಮಡು ಕೆರೆಗಳ ಕೋಡಿ ನೀರು ಹಳ್ಳದ ಮೂಲಕ ಹೊಸಕೆರೆಹಳ್ಳಿ ಕೆರೆ ಸೇರುತಿದ್ದರಿಂದ ನೀರಿಗೆ ಸಮೃದ್ಧಿಯಿತ್ತು. ೩೦ ಅಡಿ ಆಳವಿದ್ದ ಕೆರೆ ತುಂಬಿದಾಗ ಹರಿದುಹೋಗುತ್ತಿದ್ದ ಕೋಡಿನೀರು ವೃಷಭಾವತಿ ಕಣಿವೆಯನ್ನು ಸೇರುತ್ತಿತ್ತು.

ಕೆರೆಯ ಮೇಲುದಂಡೆಯಲ್ಲಿ ಹೊಸಕೆರೆಹಳ್ಳಿ ಊರು ಮತ್ತು ಹೊಲಗಳಿದ್ದವು. ರಾಗಿ ಜೊತೆಗೆ ಹರಳು, ಸಾಸಿವೆ, ಜೋಳ, ನವಣೆ. ಸಜ್ಜೆ, ತೊಗರಿ ಮುಂತಾದವನ್ನು ಅಕ್ಕಡಿ ಸಾಲಿನಲ್ಲಿ ಬೆಳೆಯುತ್ತಿದ್ದರು. ಪ್ರತಿ ಹೊಲದಲ್ಲೂ ಬೇವು, ಹೊಂಗೆ, ಹುಣಸೆ, ಹಲಸು ಮುಂತಾದ ಒಂದೆರಡು ಮರಗಳಾದರೂ ಇದ್ದವು. ಕೆರೆಕೋಡಿಯ ಕೆಳಭಾಗದಲ್ಲಿ ಅಚ್ಚುಕಟ್ಟು ಪ್ರದೇಶವಿತ್ತು. ನೂರಾರು ಎಕರೆ ಭತ್ತದ ಗದ್ದೆ, ತೋಟಗಳಿದ್ದವು. ಕೆರೆಯ ಸುತ್ತಲಿನ ಪ್ರದೇಶ ತಂಪಾದ ಹವೆಗೆ ಹೆಸರಾಗಿತ್ತು. “ಎಂಥಾ ಉರಿ ಬೇಸಿಗೇಲೂ ನಮ್ ಕೆರೆ ಸುತ್ತ ಒಳ್ಳೆ ವಾತಾವರಣ ಇತ್ತು. ಕೆರೆ ಏರಿ ಮೇಲೆ ಓಡಾಡ್ತಿದ್ರೆ ಸುಂಯ್ ಅಂತ ಗಾಳಿ ಬೀಸೋದು, ಹೊಲದಲ್ಲೂ ಅಷ್ಟೆ ಮಣ್ಣಲ್ಲಿ ಏನ್ ತಂಪು ಇರೋದು ಅಂತೀರಿ” ಎಂದು ಹಿರಿಯರಾದ ಭೈರೇಗೌಡ ನೆನಪಿಸಿಕೊಳ್ಳುತ್ತಾರೆ.

ಕೆರೆ ಏರಿ ಮೇಲೆ ವಿವಿಧ ಮರಗಳಿದ್ದವು. ಕೆರೆ ಪ್ರತಿ ವರ್ಷವೂ ತುಂಬುತ್ತಿತ್ತು ಎಂದು ತಮ್ಮ ಅನುಭವ ಹೇಳುತ್ತಾರೆ ನರಸಮ್ಮ. “ಪ್ರತಿ ವರ್ಷ ಕೆರೆಕೋಡಿ ತುಂಬಿದಾಗ ನೋಡಾಕೆ ಎರಡ್ ಕಣ್ ಸಾಲ್ತಿರಲಿಲ್ಲ. ಊರವರೆಲ್ಲ ಸೇರಿ ಹತ್ತು ಸೇರು ಅಕ್ಕಿ ಆರತಿ ಮಾಡಿ, ಮರಿ ಕಡಿಯೋರ್ (ಪ್ರಾಣಿಬಲಿ). ಎಲ್ಲ ಸೇರ್ಕೋಂಡ್ ಹಾಡುಹಸೇಂತ ಊರಹಬ್ಬ ಮಾಡೋವ್ರು. ಈಗ ಯಾವ ಹಬ್ಬಾನೂ ಕಾಣೆ, ನೋಡಿ ಹೆಂಗಾಗದೆ ನಮ್ ಕೆರೆ”, ಎಂದು ನೆನಪಿಸಿಕೊಳ್ಳುತ್ತಾ ನಿಟ್ಟುಸಿರು ಬಿಡುತ್ತಾರೆ. ಎಡೆಯೂರು ಕೆರೆ ಪುನಶ್ಚೇತನಗೊಳಿಸುವ ಸಂದರ್ಭದಲ್ಲಿ ಕೆರೆಯಲ್ಲಿದ್ದ ನೀರನ್ನು ಬರಿದು ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು, ರಾಜಕಾಲುವೆ ಮೂಲಕ ಹೊಸಕೆರೆಹಳ್ಳಿ ಕೆರೆಗೆ ಹರಿಸಲಾಯಿತು. ಮೊದಲೇ ಮಾಲಿನ್ಯದಿಂದ ತತ್ತರಿಸುತ್ತಿದ್ದ ಕೆರೆಗೆ ಮತ್ತಷ್ಟು ಕೊಳಚೆ ನೀರನ್ನು ಹರಿಸಲಾಯಿತು. ಒಂದು ಕೆರೆ ಪುನಶ್ಚೇತನಗೊಳಿಸಲು ಇನ್ನೊಂದು ಕೆರೆ ಮಾಲಿನ್ಯಗೊಳಿಸುವುದು ಯಾವ ನ್ಯಾಯ?

Hosakere for Rekha Sampath articleಹೊಸಕೆರೆಹಳ್ಳಿ ಅವನತಿಯತ್ತ ಸಾಗಲು ಕಾರಣಗಳು ಹಲವಾರು. ಸ್ಥಳೀಯರ ಪ್ರಕಾರ ಮೊದಲು ಕೆರೆ ಮಾಲಿನ್ಯಕ್ಕೆ ಒಳಗಾಯಿತು. ನಂತರ ಒತ್ತುವರಿದಾರರ ಪಾಲಾಯಿತು. ಕೆರೆಗೆ ನೀರು ಹೊತ್ತು ತರುತ್ತಿದ್ದ ಹಳ್ಳ ಕೊಳಚೆ ನೀರನ್ನು ತರುತ್ತಿದೆ. ಜಯನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ಪದ್ಮನಾಭನಗರ, ಚಿಕ್ಕಲ್ಲಸಂದ್ರ, ಇಟ್ಟಮಡು, ಎ.ಜಿ.ಎಸ್. ಲೇಔಟ್, ಅರೇಹಳ್ಳಿ, ಹೊಸಕೆರೆಹಳ್ಳಿ ಮುಂತಾದ ಬಡಾವಣೆಗಳ ಕೊಳಚೆ ನೀರು ರಾಜಕಾಲುವೆ ಮೂಲಕ ಕೆರೆ ಸೇರುತ್ತಿದೆ. ರಾಜಕಾಲುವೆ ಪಾಲಿಕೆಗೆ ಸೇರಿದೆ. ಕಾಲುವೆಯ ಒತ್ತುವರಿಯ ತೆರವು ಮತ್ತು ಸ್ವಚ್ಛತೆಯ ಕಡೆ ಅದು ಗಮನ ಕೊಡುತ್ತಿಲ್ಲ. ಶುದ್ಧನೀರನ್ನು ಪೂರೈಸುವ ಉದ್ದೇಶದಿಂದ ಹುಟ್ಟಿಕೊಂಡ ಜಲಮಂಡಳಿಯು ಕೆರೆ ಮಾಲಿನ್ಯಕ್ಕೆ ಭಯಂಕರ ಕೊಡುಗೆ ನೀಡುತ್ತಿರುವುದು ವಿಪರ್ಯಾಸ. ಒಳಚರಂಡಿಯ ಚೇಂಬರುಗಳನ್ನು ನೇರವಾಗಿ ಕೆರೆಗೆ ಸಂಪರ್ಕ ಕಲ್ಪಿಸಲಾಗಿದೆ. ಪರಿಣಾಮ ಜೊಂಡು ಮುಂತಾದವು ಬೆಳೆದು ನಿಂತಿದೆ.

ಕೆರೆಗೆ ಬೇರೆ ಬಡಾವಣೆಗಳ ಜನರು ಕಸ ತಂದು ಸುರಿಯುತ್ತಿದ್ದಾರೆ. ಮದುವೆ, ಗೃಹಪ್ರವೇಶ ಮುಂತಾದ ಸಮಾರಂಭಗಳ ಎಂಜಿಲೆಲೆ ತಂದು ಹಾಕುತ್ತಾರೆ. ಹಳೆಯ ಇಟ್ಟಿಗೆ, ಗಾರೆ, ಮಣ್ಣು ಮುಂತಾದ ಕಟ್ಟಡ ಸಾಮಗ್ರಿಗಳನ್ನು ಸುರಿಯುವ ಜಾಗವಾಗಿದೆ. ಹಂದಿಗಳ ಆವಾಸಸ್ಥಾನವಾಗಿದೆ. “ಸಂಜೆಯಾದರೆ ಸೊಳ್ಳೆಗಳು ವಿಪರೀತ, ವಾಸನೆ ಬೇರೆ. ಯಾವಾಗಲೂ ಕಿಟಕಿ, ಬಾಗಿಲು ಹಾಕೇ ಇರಬೇಕು” ಎನ್ನುತ್ತಾರೆ ಜಯರತ್ನ. ತಂಪು ಹೊತ್ತು ತರುತ್ತಿದ್ದ ಗಾಳಿ ದೂರದವರೆಗೆ ದುರ್ವಾಸನೆ ಹಬ್ಬಿಸುತ್ತಿದೆ. ಕೆರೆಯ ಸುತ್ತ ಮೂಗು ಮುಚ್ಚಿಕೊಂಡು ಓಡಾಡುವುದಿರಲಿ, ಆ ದೃಶ್ಯವೇ ವಾಕರಿಕೆ ತರಿಸುತ್ತದೆ.

hosakere 3ಹಲವಾರು ವರ್ಷಗಳಿಂದ ಕೆರೆ ಸಮೀಪದಲ್ಲೇ ವಾಸ ಮಾಡುತ್ತಿರುವ ಜಯರತ್ನ, ಸೀನಣ್ಣ, ಗುರುಮೂರ್ತಿ, ರಾಮಯ್ಯ, ವಾಸುದೇವಮೂರ್ತಿ ಮುಂತಾದವರು ಕೆರೆಗೆ ಕಸ ಹಾಕದಂತೆ ತಡೆಯಲು ಯತ್ನಿಸಿದ್ದಾರೆ. “ಎಲ್ಲಿಂದಲೋ ಬಂದು ಜನ ಕಸ ಹಾಕಿಬಿಡುತ್ತಾರೆ. ಹಾಕಬೇಡೀಂದ್ರೆ ನಿಮ್ಮಪ್ಪಂದಾ ಕೆರೆ ಎಂದು ಬಾಯಿಗೆ ಬಂದಂತೆ ಮಾತಾಡ್ತಾರೆ. ಇಪ್ಪತ್ನಾಲ್ಕು ಗಂಟೆ ಇಲ್ಲೇ ನಿಂತು ಕಾಯೋಕ್ಕಾಗಲ್ಲ, ಅದೂ ಕೆರೆ ಈ ರೀತಿ ಗಬ್ಬು ನಾರ್ತಿರೋವಾಗ” ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕೆರೆ ಮೊದಲು ಅರಣ್ಯ ಇಲಾಖೆಯ ಸುಪರ್ದಿಯಲ್ಲಿತ್ತು. ಒತ್ತುವರಿ ಆಗುತ್ತಿದ್ದರೂ ಅಧಿಕಾರಿಗಳು ಕಾಣದಂತಿದ್ದರು. “ಬಾಂದ ಕಲ್ಲು (ಗಡಿಕಲ್ಲು) ಕೀಳ್ತಿದ್ರೂ ನೋಡ್ಕೊಂಡು ಎಲ್ಲಾ ಸುಮ್ನಿದ್ರು.” ಎನ್ನುತ್ತಾರೆ ನರಸಮ್ಮ. ನಂತರ ಕೆರೆ ಪಾಲಿಕೆಯ ವಶಕ್ಕೆ ಬಂತು. ಕೆರೆಯ ಅಭಿವೃದ್ಧಿಗಾಗಿ ಬಿಡಿಎಗೆ ಒಪ್ಪಿಸಿ, ಅಭಿವೃದ್ಧಿಯ ನಂತರ ಮರಳಿ ಪಡೆಯಬೇಕು ಎಂಬ ಕೆರೆ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶನದಂತೆ, ಕೆರೆ ಬಿಡಿಎ ಉಸ್ತುವಾರಿಗೆ ಬಂತು.

ಕೆರೆ ಅಭಿವೃದ್ಧಿ ಮಾಡಬೇಕಾದ ಬಿಡಿಎ ಒಂದೆರಡು ಬಾರಿ ಸರ್ವೆ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ಕೆರೆಗಳ ಅಭಿವೃದ್ಧಿಯನ್ನು ಅವುಗಳ ವಿಸ್ತೀರ್ಣ, ಸ್ಥಿತಿಗತಿ, ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಸಹಕಾರಿ ಆಗುವುದೇ ಎಂಬ ಮಾನದಂಡವನ್ನು ಬಿಡಿಎ ಅನುಸರಿಸುತ್ತದೆ. ನಗರದ ಬೇರೆ ಕೆಲವು ಕೆರಗಳನ್ನು ಪುನರುಜ್ಜೀವನಗೊಳಿಸಿದ್ದು ಬಿಟ್ಟರೆ, ಹೊಸಕೆರೆಹಳ್ಳಿ ಕೆರೆಯ ಪ್ರಗತಿಯಾಗಲಿಲ್ಲ. ಬಿಡಿಎಗೆ ವಹಿಸಿದ ಮೇಲೆಯೇ ಕೆರೆಯ ಸ್ಥಿತಿ ಇನ್ನೂ ಶೋಚನೀಯವಾಯಿತು ಎಂಬ ಅಭಿಪ್ರಾಯ ಸ್ಥಳೀಯರದು. ಅವರ ಒತ್ತಡಕ್ಕೆ ಮಣಿದು ಕೆರೆ ಅಭಿವೃದ್ಧಿ ಆಗ, ಈಗ ಎಂದು ಸುಳ್ಳು ಹೇಳುತ್ತಲೇ ಬಂತು. ಒಂದು ವಿಧದಲ್ಲಿ ಕೆರೆಗಳ ಉದ್ಯಾನ ನಗರಿ ಆಗಿದ್ದ ಬೆಂಗಳೂರು, ಬಿಡಿಎ ಅವಧಿಯಲ್ಲೇ ಹಾಳಾಗಿರುವುದು. ಇದು ಅದೆಷ್ಟೋ ಕೆರೆಗಳನ್ನು ನುಂಗಿ ಬಡಾವಣೆಗಳನ್ನು ನಿರ್ಮಿಸಿದೆ.

ಮತ್ತೊಂದೆಡೆ ಪಾಲಿಕೆಯು ಕೆರೆ ಅಭಿವೃದ್ಧಿ ಮಾಡಲು ಬಿಡಿಎಗೆ ೫೦:೫೦ರ ಅನುಪಾತದಲ್ಲಿ ಹಣ ನೀಡಬೇಕಿತ್ತು. ಆದರೆ ನಯಾಪೈಸೆ ನೀಡಲಿಲ್ಲ. ಹಿಂದಿನ ಜನಪ್ರತಿನಿಧಿಯ ವಿರುದ್ಧ ಸ್ಥಳೀಯರಲ್ಲಿ ಅಸಮಾಧಾನವಿದೆ. ಕೆರೆಯನ್ನು ಮರಳಿ ತೆಗೆದುಕೊಳ್ಳಬೇಕೆಂಬ ಬಿಡಿಎ ಪತ್ರಗಳಿಗೂ ಪಾಲಿಕೆ ಸ್ಪಂದಿಸಿಲ್ಲ.

ಜಲಮಂಡಳಿಯೂ ಭವಿಷ್ಯದ ದೃಷ್ಟಿಯಿಂದ ಯೋಜನೆಗಳನ್ನು ರೂಪಿಸುವಲ್ಲಿ ಸೋತಿದೆ. ರೂಪಿಸುವ ಯೋಜನೆಗಳೂ ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಕೊಳಚೆ ನೀರು ಇನ್ನೂ ಹೆಚ್ಚಾಗಿರುತ್ತದೆ. ಉದಾಹರಣೆಗೆ ಒಂದು ಎಸ್.ಟಿ.ಪಿ. ಹಾಕುವಷ್ಟರಲ್ಲಿ ಅದರ ಸಾಮರ್ಥ್ಯಕ್ಕೆ ಮೀರಿದ ಕೊಳಚೆ ನೀರು ಬರಲು ಶುರುವಾಗಿರುತ್ತದೆ. ಹೊಸಕೆರೆಹಳ್ಳಿಯಲ್ಲಿ ಇನ್ನೂ ಘಟಕವೇ ಬಂದಿಲ್ಲ. ಒಟ್ಟಾರೆ ಕೆರೆಯ ಅಭಿವೃದ್ಧಿ ಮರೀಚಿಕೆಯಾಗಿದೆ. ಸ್ಥಳೀಯರು ಮತ್ತು ಪರಿಸರವಾದಿಗಳು ಕೆರೆ ಒತ್ತುವರಿ ತೆರವು, ಸಂರಕ್ಷಣೆಗೆ ಒತ್ತಾಯಿಸುತ್ತಲೇ ಬಂದರು. ಒತ್ತಡ ಹೆಚ್ಚಿದಾಗ ಮಾತ್ರ ಇಲ್ಲಿನ ಮಹಾನಗರಪಾಲಿಕೆಯ ಮಾಜಿ ಸದಸ್ಯರು “ಬಿಡಿಎ ೩೩ ಕೋಟಿ ವೆಚ್ಚದಲ್ಲಿ ಕೆರೆ ಪುನರುಜ್ಜೀವನದ ಯೋಜನೆ ಹಮ್ಮಿಕೊಂಡಿದೆ ಎಂದು ಹೇಳುತ್ತಲೇ ಕಾಲ ತಳ್ಳಿದರು. ಕೆರೆ ಈಗ ೨೩ ಎಕರೆಯಷ್ಟು ಒತ್ತುವರಿಯಾಗಿದೆ ಎಂದು ‘ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ’ ಹೇಳುತ್ತದೆ.

hosakere 2ಹೊಸಕೆರೆಹಳ್ಳಿ ಕೆರೆಯ ಮಾಲಿನ್ಯ ತಡೆಯದ ಪರಿಣಾಮ ಜೀವಜಲ ಇಂದು ಜೀವ ತೆಗೆಯುವ ಜಲವಾಗಿ ಪರಿಣಮಿಸಿದೆ. ಕೆರೆ ಸುತ್ತಲಿನ ಅಂತರ್ಜಲವೂ ಕಲುಷಿತವಾಗಿದೆ. ಸಾಲದ್ದಕ್ಕೆ ಜಲಮಂಡಳಿಯು ನೀರು ಪೂರೈಸುವ ಮತ್ತು ಒಳಚರಂಡಿ ಚೇಂಬರ್ ಎರಡನ್ನೂ ಅಕ್ಕಪಕ್ಕದಲ್ಲಿ ಸ್ಥಾಪಿಸಿದೆ. “ನಾವು ಮಾತ್ರ ಕಾವೇರಿ ನೀರು ಕುಡಿಯೊಲ್ಲಾರಿ. ಕೆಲವು ಸಲ ಒಳಚರಂಡಿ ನೀರು ಕುಡಿಯುವ ನೀರಿಗೆ ಮಿಕ್ಸ್ ಆಗಿ, ಅದ್ನೇ ಕೊಡ್ತಾರೆ. ಕೆರೆಯಿಂದ ಸಾಕಷ್ಟು ಮೇಲ್ಭಾಗದಲ್ಲಿರೋ ಬೋರ್‌ವೆಲ್‌ನಿಂದ ಬಿಡೋ ನೀರೇ ಚೆನ್ನಾಗಿರುತ್ತೆ. ಅದನ್ನೇ ಎಲ್ಲದಕ್ಕೂ ಬಳಸ್ತೀವಿ” ಎನ್ನುತ್ತಾರೆ ಮೂಕಾಂಬಿಕಾ ನಗರದ ಲಕ್ಷ್ಮೀ.

ಒಟ್ಟಾರೆ ಕೆರೆ ಮಾಲಿನ್ಯಕ್ಕೆ ಕೆಲವು ಅಂಶಗಳನ್ನು ಪಟ್ಟಿ ಮಾಡಬಹುದು:

• ಫಾಸ್ಪೇಟ್: ಸ್ನಾನದ ಸೋಪು, ಬಟ್ಟೆ ಸೋಪು, ಪಾತ್ರೆ ಸೋಪು ಮತ್ತು ಡಿಟರ್ಜೆಂಟ್‌ಗಳಲ್ಲಿ ರಂಜಕದ ಸಂಯುಕ್ತವಾದ ಫಾಸ್ಪೇಟ್ ಇರುತ್ತದೆ. ಇದು ಜೊಂಡು ಗಿಡಗಳಿಗೆ ಒಳ್ಳೆಯ ಆಹಾರ. ಜೊಂಡು, ಹಯಾಂಥಿಸ್, ಕತ್ತೆಕಿವಿ, ಕಳೆಹುಲ್ಲು ಮುಂತಾದವು ಹೆಚ್ಚಿದಷ್ಟೂ ಕೆರೆಯಲ್ಲಿ ಫಾಸ್ಫೇಟ್ ಅಂಶ ಹೆಚ್ಚಾಗಿದೆ ಎಂಬುದರ ಸೂಚಕವಾಗಿದೆ.
• ಸಾರಜನಕ: ಮನೆಗಳಿಂದ ಒಳಚರಂಡಿ ಸೇರುವ ಶೌಚಾಲಯದ ನೀರಿನಲ್ಲಿ ಸಾರಜನಕದ ಅಂಶ ಹೇರಳವಾಗಿರುತ್ತದೆ. ಇದೂ ಸಹ ಕಳೆಗಿಡಗಳಿಗೆ ಕಾರಣವಾಗಿದೆ. ಮತ್ತೊಂದೆಡೆ ಕೆರೆ ಬಯಲು ಶೌಚಾಲಯವಾಗಿದೆ.
• ಅಮೋನಿಯಾ: ಜೊಂಡು ಕೆರೆ ನಾಶಕ್ಕೆ ನಾಂದಿ ಹಾಡುತ್ತದೆ. ಇದು ಮಿತಿಮೀರಿದಾಗ ಇವುಗಳ ಬೇರುಗಳಲ್ಲಿ ಬ್ಯಾಕ್ಟೀರಿಯಾಗಳು ನೆಲೆಸಿರುತ್ತವೆ. ಇವು ಅಮೋನಿಯಾ ಬಿಡುಗಡೆ ಮಾಡುತ್ತವೆ. ಜೊಂಡು ಹೆಚ್ಚಿ ಕೆರೆಪೂರ್ತಿ ಆವರಿಸಿಕೊಂಡಾಗ ನೀರಿನಲ್ಲಿರುವ ಜಲಚರಗಳಿಗೆ ಸೂರ್ಯನ ಬೆಳಕಾಗಲೀ, ಆಮ್ಲಜಕನವಾಗಲೀ ದೊರಕುವುದಿಲ್ಲ. ಆಗ ಅವು ಸಾಯುತ್ತವೆ. ಹೀಗೆ ಸತ್ತ ಜಲಚರಗಳು ನೀರಿನಾಳದಲ್ಲಿ ಹೂತು ಮತ್ತಷ್ಟು ಅಮೋನಿಯಾ ಬಿಡುಗಡೆಗೆ ಕಾರಣವಾಗುತ್ತದೆ.
• ಪೊಟ್ಯಾಷಿಯಂ: ಕಾರ್ಖಾನೆಗಳಿಂದ ಬಿಡುವ ಬೂದಿಯಲ್ಲಿ ಪೊಟ್ಯಾಷಿಯಂ ಅಂಶವಿದ್ದು, ಇದೂ ಸಹ ಕಳೆಗಿಡಗಳ ಬೆಳವಣಿಗೆಗೆ ಪೂರಕವಾಗಿದೆ.
• ಕಸ ಸುರಿಯುವುದರಿಂದ ಅದರಲ್ಲಿರುವ ಪ್ಲಾಸ್ಟಿಕ್ ಚೀಲ, ಆಹಾರ ಪದಾರ್ಥಗಳ ಉಳಿಕೆ, ಮೆಡಿಕಲ್ ತ್ಯಾಜ್ಯ ಇ-ವೇಸ್ಟ್, ಮುಂತಾದವು ಕೆರೆಯನ್ನು ತೀವ್ರವಾಗಿ ಮಲಿನಗೊಳಿಸುತ್ತಿವೆ.
• ಕಟ್ಟಡದ ಸಾಮಗ್ರಿಗಳು
• ಕೆರೆಯಂಚಿನಲ್ಲಿ ಗಾರ್ಮೆಂಟ್ ವಸ್ತ್ರಗಳನ್ನು ತೊಳೆಯುವ ಕಾರ್ಖಾನೆ ಇದೆ. ಇದರಿಂದ ಹೊರಬರುವ ತ್ಯಾಜ್ಯನೀರು ಕೆರೆ ಸೇರುತ್ತಿದೆ.
• ಯೇಸುಗುಡ್ಡದ ಮೇಲೆ ನಿರ್ಮಾಣ ಹಂತದಲ್ಲಿರುವ ಬೃಹತ್ ವಸತಿ ಸಮುಚ್ಚಯದಿಂದ ಧೂಳು, ಕಸ ಸೇರುತ್ತಿದೆ.

ಹೊಸಕೆರೆಹಳ್ಳಿ ಪುನಶ್ಚೇತನದ ಹಾದಿಯಲ್ಲಿ ಹಲವಾರು ತೊಡಕುಗಳಿವೆ. ಜಲಮಂಡಳಿಯ ಜಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಸಧ್ಯಕ್ಕೆ ಪರಿಹಾರ ಸಿಗುವುದು ಕಷ್ಟ. ಬಿಡಿಎ ಮತ್ತು ಪಾಲಿಕೆಗೂ ಬದ್ಧತೆಯಿಲ್ಲ. ಸಣ್ಣ ನೀರಾವರಿ ಇಲಾಖೆಯು ಕೇಂದ್ರ ಸರ್ಕಾರದ ಅನುದಾನದಿಂದ ಕೆರೆಗಳ ಅಭಿವೃದ್ಧಿ ಮಾಡುತ್ತಿತ್ತು. ಆದರೆ ಕೇಂದ್ರ ಸರ್ಕಾರವು ಆರ್.ಆರ್.ಆರ್. ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ, ಇಲಾಖೆಗೆ ನೀಡುತ್ತಿದ್ದ ೧೦೦ರಿಂದ ೨೦೦ ಕೋಟಿ ರೂಪಾಯಿ ಅನುದಾನವನ್ನು ನಿಲ್ಲಿಸಿದೆ. ಮೊದಲೇ ಅಭಿವೃದ್ಧಿಗೆ ಮನಸ್ಸು ಮಾಡಲಿಲ್ಲ. ಇನ್ನು ಹಣದ ಕೊರತೆ ಒಂದು ನೆಪವಾಗಬಹುದು.

hosakere 1ಹೊಸಕರೆಹಳ್ಳಿ ವಾರ್ಡ್‌ನಿಂದ ಹೊಸದಾಗಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯೆ ರಾಜೇಶ್ವರಿ ಚೋಳರಾಜ್ ಅವರಾದರೂ ಕೆರೆ ಪುನಶ್ಚೇತನಕ್ಕೆ ಮನಸ್ಸು ಮಾಡಬೇಕಿದೆ. ತಮ್ಮದೇ ಪಕ್ಷದ ಮಾಜಿ ಸದಸ್ಯ ನಾರಾಯಣ್ ಅವರನ್ನು ಎದುರು ಹಾಕಿಕೊಂಡು ಈ ಕೆಲಸಕ್ಕೆ ಮುಂದಾಗುತ್ತಾರೆಯೇ ನೋಡಬೇಕು. ಅವರನ್ನು ಸಂಪರ್ಕಿಸಿದಾಗ “ಈಗಷ್ಟೇ ಆಯ್ಕೆಯಾಗಿದ್ದೀನಿ. ಕೆರೆ ಸಮಸ್ಯೆ ಅಧ್ಯಯನ ಮಾಡಬೇಕು. ನಮ್ಮ ವಾರ್ಡ್‌ನ ಹೆಮ್ಮೆಯ ಕೆರೆಯ ಸಂರಕ್ಷಣೆ ಕುರಿತು ನನಗೆ ವಿಶೇಷ ಕಾಳಜಿ ಇದೆ. ಮೊದಲಿಗೆ ಕೆರೆಯನ್ನು ಪಾಲಿಕೆ ವಶಕ್ಕೆ ಪಡೆದು, ನಂತರ ಕ್ರಿಯಾಯೋಜನೆ ರೂಪಿಸಬೇಕು” ಎನ್ನುತ್ತಾರೆ. ಹಿಂದಿನ ಸದಸ್ಯರಿಂದ ಆಗದ್ದು, ಇವರ ಅವಧಿಯಲ್ಲಾದರೂ ಆಗಲಿ ಎಂಬ ಅಶಯ ಸ್ಥಳೀಯರದ್ದು. ಕೆರೆ ಅಭಿವೃದ್ಧಿಗೆ ತಾವು ಮಾಡಿದ ಪ್ರಯತ್ನಗಳು ಈಗಾದರೂ ಫಲ ಕೊಡಬಹುದು ಎಂಬ ಆಶಾಭಾವನೆ ಅವರದ್ದು.

ಕೆರೆ ಮಾಲಿನ್ಯ ತಡೆಯಲು ಆಗಬೇಕಾದ ಪ್ರಯತ್ನಗಳನ್ನು ಹೀಗೆ ಪಟ್ಟಿ ಮಾಡಬಹುದು:
• ಕೆರೆ ಒತ್ತುವರಿಯನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು. ಯಾವುದೇ ಪ್ರಭಾವ, ಒತ್ತಡಗಳಿಗೆ ಮಣಿಯಬಾರದು.
• ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳ ಒತ್ತುವರಿಯಾಗಿವೆ. ಇವನ್ನು ತೆರವು ಮಾಡಬೇಕು. ಕಾಲುವೆಗಳನ್ನು ಪಾಲಿಕೆ ಆಗಾಗ್ಗೆ ಸ್ವಚ್ಛಗೊಳಿಸುತ್ತಿರಬೇಕು.
• ೩೦x೪೦ಕ್ಕಿಂತ ದೊಡ್ಡ ನಿವೇಶನಗಳಲ್ಲಿ ಹೊಸದಾಗಿ ಕಟ್ಟುವ ಹಾಗೂ ಹಿಂದೆ ಕಟ್ಟಿರುವ ೪೦x೬೦ರ ನಿವೇಶನದ ಮನೆಗಳಿಗೆ ಮಳೆಕೊಯ್ಲು ಕಡ್ಡಾಯವಾಗಿದೆ. ನಾಗರಿಕರು ಇದನ್ನು ಪಾಲಿಸುತ್ತಿಲ್ಲ. ಜಲಮಂಡಳಿಯು ಮೊದಲು ಇದರತ್ತ ನಿಗಾ ಕೊಡಬೇಕು. ಇದರಿಂದ ಮಳೆ ನೀರು ಚರಂಡಿ ಸೇರಿ, ಚರಂಡಿ ಮೂಲಕ ಕೆರೆ ಸೇರುವುದು ತಪ್ಪುತ್ತದೆ. ನೀರುಳಿತಾಯವೂ ಆಗುತ್ತದೆ. ಒಡೆದ ನೀರಿನ ಪೈಪುಗಳನ್ನು ರಿಪೇರಿ ಮಾಡಿ ಸೋರಿಕೆಯನ್ನು ತಪ್ಪಿಸಬೇಕು. ಆಗಾಗ್ಗೆ ಒಡೆದ ಪೈಪುಗಳಿಂದ ಹರಿಯುವ ಅಧಿಕ ನೀರು ಒಳಚರಂಡಿ ಸೇರುತ್ತದೆ. ವಾರ್ಷಿಕವಾಗಿ ೯೦೦ ಮಿಲಿಮೀಟರ್ ಮಳೆ ಸುರಿಯುವ ಬೆಂಗಳೂರಿನಲ್ಲೇ ನೀರಿನ ಅಭಾವ ತೀವ್ರವಾಗಿದೆ. ಕೆರೆ ಹಾಳು ಮಾಡಿ ಹೊರಗಿನ ಜಲ ಸಂಪನ್ಮೂಲಗಳನ್ನು ಅವಲಂಬಿಸಿದ್ದರ ಪರಿಣಾಮವಿದು. ಮಳೆ ಕೊಯ್ಲು ಇದಕ್ಕೆ ಉತ್ತಮ ಪರಿಹಾರ. “ಬೆಂಗಳೂರಿನಲ್ಲಿ ವರ್ಷಕ್ಕೆ ೨೩ ಟಿ.ಎಂ.ಸಿ. ಯಷ್ಟು ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಇದರಲ್ಲಿ ಅರ್ಧದಷ್ಟು ಮಳೆ ಕೊಯ್ಲು ಮಾಡಿದರೂ ನೀರಿನ ಸಮಸ್ಯೆ ಪರಿಹಾರ ಸಾಧ್ಯ” ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮಂಡಳಿಯ ಹಿರಿಯ ವಿಜ್ಞಾನಿ ಶಿವಕುಮಾರ್ ಅಮೂಲ್ಯ ಸಲಹೆ ನೀಡುತ್ತಾರೆ. ಅವರು ತಮ್ಮ ಮನೆಯಲ್ಲಿ ಜಲಮಂಡಳಿಯ ನೀರನ್ನು ಬಳಸದೇ ಸಂಪೂರ್ಣವಾಗಿ ಮಳೆನೀರನ್ನು ಮಾತ್ರ ಬಳಸುತ್ತಿರುವುದು ವಿಶೇಷವಾಗಿದೆ.
• ಈ ಕೆರೆಗೆ ಕೊಳಚೆ ನೀರು ಬಂದು ಸೇರುವ ಹಾದಿಯಲ್ಲಿ ನೂರಾರು ವಸತಿ ಸಮುಚ್ಚಯಗಳ ಪಾತ್ರವಿದೆ. ಇವುಗಳಿಗೆ ಎಸ್.ಟಿ.ಪಿ. ಅಳವಡಿಕೆ ಕಡ್ಡಾಯಗೊಳಿಸಬೇಕು. ಜಲಮಂಡಳಿಯೇನೋ ಐದು ಮನೆಗಳಿರುವ ಚಿಕ್ಕ ಅಪಾರ್ಟ್‌ಮೆಂಟ್‌ಗಳಿಗೂ ಎಸ್.ಟಿ.ಪಿ. ಕಡ್ಡಾಯಗೊಳಿಸುವ ಚಿಂತನೆ ನಡೆಸುತ್ತಿದೆ. ಇದು ರೆಫ್ರಿಜರೇಟರ್ ಗಾತ್ರ ಹೊಂದಿದ್ದು, ಎರಡರಿಂದ ಮೂರು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಇದರಿಂದ ಶುದ್ಧೀಕರಿಸಿದ ನೀರು ಕುಡಿಯಲು ಹೊರತುಪಡಿಸಿ ಉಳಿದದ್ದಕ್ಕೆ ಬಳಸಬಹುದು. ಇದರಿಂದ ನೀರಿನ ಮರುಬಳಕೆಯೂ ಆಗುತ್ತದೆ. ಕೊಳಚೆ ನೀರು ಜಲಮೂಲಗಳಿಗೆ ಸೇರಿ ಕಲುಷಿತವಾಗುವುದೂ ತಪ್ಪುತ್ತದೆ. ಆದರೆ ಮಳೆ ಕೊಯ್ಲು ಕಡ್ಡಾಯ ಮಾಡಿದರೂ, ಕಟ್ಟುನಿಟ್ಟಾಗಿ ಜಾರಿ ಮಾಡದಿರುವ ಜಲಮಂಡಳಿ ಇದನ್ನು ಯಾವ ರೀತಿ ಅನುಷ್ಠಾನಗೊಳಿಸುತ್ತದೆ ನೋಡಬೇಕು.
• ಶುದ್ಧೀಕರಿಸದಿರುವ ಯಾವ ನೀರೂ ಕೆರೆ ಸೇರದಂತೆ ಎಚ್ಚರ ವಹಿಸಬೇಕು.
• ಸೋಪು ಮತ್ತು ಡಿಟರ್ಜೆಂಟ್ ತಯಾರಕರು ಶೇಖಡ ೧೦ಕ್ಕಿಂತ ಹೆಚ್ಚು ರಂಜಕ ಸೇರಿಸದಂತೆ ಕಟ್ಟುನಿಟ್ಟಾದ ನಿಯಮ ಮಾಡಬೇಕು. ಈಗ ಶೇಖಡ ೨೫ರವರೆಗೂ ಸೇರಿಸುತ್ತಿದ್ದಾರೆ. ಕೆರೆ ಮಾಲಿನ್ಯದಲ್ಲಿ ಇವರ ಪಾಲು ಬಹಳ ದೊಡ್ಡದಿದೆ. ಜೊಂಡು ಬೆಳೆಯಲು ಇವರೇ ಕಾರಣರಾಗಿದ್ದಾರೆ. ಇದನ್ನು ತಡೆಯದಿದ್ದರೆ, ಹೊಸಕೆರೆಹಳ್ಳಿ ಕೆರೆಯು ವರ್ತೂರು, ಬೆಳ್ಳಂದೂರು ಕೆರೆಗಳಂತೆ ನೊರೆ ಏಳುವ ಸಮಸ್ಯೆಗೆ ಗುರಿಯಾಗಬಹುದು. ಈಗಾಗಲೇ ಮಳೆ ಬಂದಾಗ ಕೆರೆಯಲ್ಲಿ ತುಂಬಿಕೊಳ್ಳುವ ನೀರು ಬಿಳಿಯಾಗಿ ಕಾಣುವುದರ ಜೊತೆಗೆ ವಾಸನೆಯನ್ನು ಉಂಟು ಮಾಡುತ್ತದೆ. ಕೆರೆ ತುಂಬಾ ಕಾಣುವ ನೀರು ಕೆಲವೇ ಗಂಟೆಗಳಲ್ಲಿ ಮಾಯವಾಗುತ್ತದೆ.
• ಹೊಸಕೆರೆಹಳ್ಳಿ ಕೆರೆ ಅಭಿವೃದ್ಧಿ ಪಡಿಸಿದ ನಂತರವೂ ಪ್ರತೀ ವರ್ಷ ಹೂಳು ತೆಗೆಸಿ ಸ್ವಚ್ಛಗೊಳಿಸಬೇಕು.
• ಕೆರೆಗಳ ರಕ್ಷಣೆಗೆಂದು ಹೈಕೋರ್ಟ್ ಆದೇಶದಂತೆ ಸ್ಥಾಪನೆಯಾದ ಕೆರೆ ಅಭಿವೃದ್ಧಿ ಪ್ರಾಧಿಕಾರ (ಎಲ್.ಡಿ.ಎ.) ತನ್ನ ಕಾರ್ಯನಿರ್ವಹಣೆಯಲ್ಲಿ ಎಡವಿದೆ. ಇದಕ್ಕೆ ಹೊಸ ಸ್ವರೂಪ ಕೊಡಬೇಕಿದೆ ಅಥವಾ ಕೆರೆ ನೀತಿ ಜಾರಿಗೊಳಿಸಿ ಬೇರೊಂದು ಸಂಸ್ಥೆ ಸ್ಥಾಪಿಸಬೇಕಿದೆ. ಈ ಸಂಸ್ಥೆಯಲ್ಲಿ ವಿಜ್ಞಾನಿಗಳು, ಪರಿಸರವಾದಿಗಳು, ಸ್ಥಳೀಯರು, ಪೋಲೀಸ್ ಅಧಿಕಾರಿಗಳು ಮುಂತಾದವರಿದ್ದು, ಅವರಿಗೆ ಸೂಕ್ತ ಜವಾಬ್ದಾರಿಗಳನ್ನು ವಹಿಸಬೇಕು. ಸಂಸ್ಥೆಗೆ ಸೂಕ್ತ ಅನುದಾನ ನೀಡಿ ಹೊಸಕೆರೆಹಳ್ಳಿ ಕೆರೆ ಸೇರಿದಂತೆ ನಗರದ ಎಲ್ಲಾ ಕೆರೆಗಳ ಪುನಶ್ಚೇತನವನ್ನು ಆದಷ್ಟೂ ಬೇಗ ಮಾಡಿಸಬೇಕು. ಬದ್ಧತೆಯಿಂದ ಈ ಕಾರ್ಯ ಮಾಡಿದರೆ, ಎಲ್ಲಾ ಕೆರೆಗಳು ಅಭಿವೃದ್ಧಿಯಾಗಲು ಒಂದೆರಡು ವರ್ಷ ಸಾಕು.
• ಕೆರೆಗೆ ಕೊಳಚೆ ನೀರು ಹರಿಸುತ್ತಿರುವ ಕಾರ್ಖಾನೆಗಳಿಗೆ ಕಡ್ಡಾಯವಾಗಿ ಎಸ್.ಟಿ.ಪಿ. ಅಳವಡಿಸಿಕೊಳ್ಳುವಂತೆ ಮಾಡಬೇಕು. ಪಾಲಿಸದವರ ಕಾರ್ಖಾನೆ ಮುಚ್ಚಿಸಬೇಕು.
• ಕೆರೆಗೆ ಪ್ರತಿದಿನ ಲಕ್ಷಾಂತರ ಲೀಟರ್ ಕೊಳಚೆ ನೀರು ಸೇರುತ್ತಿದೆ. ಇದನ್ನು ಶುದ್ಧೀಕರಿಸಲು ಅದರ ಸಾಮರ್ಥ್ಯಕ್ಕೆ ತಕ್ಕಂತೆ ಎಸ್.ಟಿ.ಪಿ. ಸ್ಥಾಪಿಸಬೇಕು.
• ಕೆರೆ ಪುನರುಜ್ಜೀವನ ಹೇಗಿರಬೇಕೆಂದು ಲಕ್ಷ್ಮಣರಾವ್ ಸಮಿತಿ ಎರಡು ಬಾರಿ ವರದಿ ಸಲ್ಲಿಸಿದೆ. ಸರ್ಕಾರವು ಸಮಿತಿಯ ಆಶಯದಂತೆ ಹೊಸಕೆರೆಹಳ್ಳಿ ಕೆರೆ ಸೇರಿದಂತೆ ನಗರದ ಕೆರೆಗಳನ್ನು ಅರಣ್ಯ ಇಲಾಖೆಗೆ ವಹಿಸಿತು. ವರದಿಯ ಪ್ರಕಾರ ಹೊಸಕೆರೆಹಳ್ಳಿ ಕೆರೆ ಆ ಸಂದರ್ಭಲ್ಲಿ ಅತಿಯಾಗಿ ಮಲಿನಗೊಂಡಿರಲಿಲ್ಲ. ಇಂತಹ ಕೆರೆಗಳ ಅಂಚಿನಲ್ಲಿ ಗಿಡಮರ ಬೆಳೆಸುವುದು, ಬಡಾವಣೆಯಾಗಲು ಬಿಡದಿರುವುದು, ಕೊಳಚೆ ನೀರು ಬರದಂತೆ ತಡೆಯುವುದು ಮುಂತಾದ ಸಲಹೆಗಳಿದ್ದವು. ನೀರಿನ ಬಳಕೆ ಮತ್ತು ನಗರದ ತಂಪು ಹವೆ ಮರುಕಳಿಸುವಂತೆ ಮಾಡಲು ಕೆರೆಗಳನ್ನು ಅಭಿವೃದ್ಧಿಪಡಿಸಬೇಕೆಂದು ವರದಿ ಸ್ಪಷ್ಟವಾಗಿ ಹೇಳಿದೆ. ಆದರೆ ಕೆರೆಯನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆ ಕೆಲ ಬಿದಿರು ಮೆಳೆಗಳನ್ನು ಬೆಳೆಸಿದ್ದು ಬಿಟ್ಟರೆ ಉಳಿದಂತೆ ನಿಷ್ಕ್ರಿಯವಾಗಿತ್ತು. ನಂತರ ತನ್ನ ಜವಾಬ್ದಾರಿ ಕಳಚಿಕೊಂಡಿತು. ವರದಿಯ ಶಿಫಾರಸ್ಸುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದರೆ ಕೆರೆಗಳು ಈ ಸ್ಥಿತಿ ತಲುಪುತ್ತಿರಲಿಲ್ಲ. ಅವರ ಶಿಫಾರಸ್ಸುಗಳು ಇಂದಿಗೂ ಪ್ರಸ್ತುತವಾಗಿವೆ.
• ಕೆರೆಗಳ ಪುನರುಜ್ಜೀವನ ಏಕೆ ಅತ್ಯವಶ್ಯಕ ಎಂಬುದನ್ನು ನಿವೃತ್ತ ಐ.ಎ.ಎಸ್.ಅಧಿಕಾರಿ ವಿ.ಬಾಲಸುಬ್ರಣಿಯನ್ ಅವರು ನೀಡುವ ಸಲಹೆ ಅತ್ಯಮೂಲ್ಯವಾಗಿದೆ. ಇದನ್ನು ಪಾಲಿಸಬೇಕು. ಅವರ ಪ್ರಕಾರ ಕೆರೆಗಳ ಪುನಶ್ಚೇತನ ಮಾಡದಿದ್ದಲ್ಲಿ, ನಗರದ ಏಳಿಗೆಯು ಸಾಧ್ಯವಿಲ್ಲ. ಇಲ್ಲಿ ಪ್ರತಿದಿನ ೮೦೦ರಿಂದ ೯೦೦ ದಶಲಕ್ಷ ಲೀಟರ್ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಇಲ್ಲಿಯೂ ಸಿಂಗಾಪುರ ಮಾದರಿಯಲ್ಲಿ ಶುದ್ಧೀಕರಣ ಮಾಡುವ ಪ್ರಯತ್ನ ನಡೆದಿದೆ. ಅಲ್ಲಿ ಶೇಕಡ ೪೦ರಷ್ಟು ಕೊಳಚೆ ನೀರನ್ನೇ ಮರುಬಳಕೆ ಮಾಡಲಾಗುತ್ತದೆ. ಬೆಂಗಳೂರಿನಲ್ಲೂ ಇಂತಹ ಕ್ರಮ ಕೈಗೊಳ್ಳದಿದ್ದರೆ ಮುಂದೆ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

ಕೆರೆ ಉಳಿಸಲು ಜನಜಾಗೃತಿ ಮತ್ತು ಸಮುದಾಯ ಸಹಭಾಗಿತ್ವ
ಹೊಸಕೆರೆಹಳ್ಳಿ ಕೆರೆ ಉಳಿವಿಗೆ ಜನರಲ್ಲಿ ಜಾಗೃತಿ ಮಾಡಿಸುವುದು ಅತ್ಯವಶ್ಯ. ಇದು ನಮ್ಮ ಪರಿಸರದ ಕೆರೆ, ನಮಗೆ ಸೇರಿದ್ದು, ನಾವಿದನ್ನು ಜೋಪಾನ ಮಾಡಬೇಕು ಎಂಬ ಭಾವನೆ ಸಮುದಾಯದಲ್ಲಿರಬೇಕು. ಕಸ ಹಾಕದಂತೆ ಜಾಗೃತಿ ಮೂಡಿಸಬೇಕು. ಪಾಲಿಸದವರಿಗೆ ಭಾರೀ ದಂಡ ಹಾಕಬೇಕು. ಹಾಗೆಯೇ ನೀರು ಪೋಲು ಮಾಡದಂತೆ ಅರಿವು ಮೂಡಿಸಬೇಕು. ಈ ಕೆರೆಯ ಸುತ್ತಲಿನ ಶಾಲಾ ಕಾಲೇಜುಗಳಲ್ಲಿ ಕೆರೆಯ ಮಹತ್ವ ಸಾರುವ ಕೆಲಸಗಳಾಗಬೇಕು. ಭವಿಷ್ಯದ ಪ್ರಜೆಗಳಿಗೆ ಕೆರೆ ಸಂರಕ್ಷಣೆಯ ಅರಿವು ಮೂಡಿಸಬೇಕು. ಬೆಳ್ಳಂದೂರು ಕೆರೆ ಶುದ್ಧೀಕರಣಕ್ಕೆ ಒತ್ತಾಯಿಸಿ change.org ಮತ್ತು ಫೇಸ್‌ಬುಕ್‌ನಲ್ಲಿ ಅಭಿಯಾನ ಆರಂಭವಾಗಿದೆ. ೨೦ ಸಾವಿರ ಜನರು ಈಗಾಗಲೇ ಅಭಿಯಾನಕ್ಕೆ ಸ್ಪಂದಿಸಿದ್ದಾರೆ. ಹೊಸಕೆರೆಹಳ್ಳಿ ಕೆರೆ ಪುನಶ್ಚೇತನಕ್ಕೂ ಒತ್ತಾಯಿಸಿ ಇದೇ ವಿಧಾನ ಅನುಸರಿಸಬಹುದು.

ಕೆರೆ ಸಾರ್ವಜನಿಕ ಆಸ್ತಿ. ಇದನ್ನು ಉಳಿಸಲು ಸರ್ಕಾರದ ಮತ್ತಿತರ ಅಂಗ ಸಂಸ್ಥೆಗಳ ಪ್ರಯತ್ನದ ಜೊತೆ ಸಮುದಾಯದ ಪ್ರಯತ್ನ ಅತಿಮುಖ್ಯ. ಸಾರ್ವಜನಿಕ ಸಹಭಾಗಿತ್ವವಿಲ್ಲದೇ ಯಾವುದೇ ಯೋಜನೆ ಫಲಕಾರಿಯಾಗದು. ಆದ್ದರಿಂದ ಸರ್ಕಾರವು ಸಾರ್ವಜನಿಕ ಸಂಘಸಂಸ್ಥೆಗಳಿಗೆ ಕೆರೆ ನಿರ್ವಹಣೆ ವಹಿಸಲು ಅನುವು ಮಾಡಿಕೊಟ್ಟಿದೆ. ಜಕ್ಕೂರು ಕೆರೆಯನ್ನು ಉದಾಹರಣೆಯಾಗಿ ಹೆಸರಿಸಬಹುದು.

ಸರ್ಕಾರವು ಮಡಿವಾಳ ಕೆರೆಯ ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಐದು ವರ್ಷಗಳಲ್ಲಿ ೨೪.೭೨ ಕೋಟಿ ರೂಪಾಯಿಗಳ ಯೋಜನೆಗೆ ಅಧಿಕೃತ ಆದೇಶ ನೀಡಿದೆ. ಇದು ಯಶಸ್ವಿಯಾದರೆ ಬೇರೆ ಕೆರೆಗಳನ್ನು ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರ್ಕಾರ ಚಿಂತಿಸಬಹುದು ಎಂದು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ.ಮದನಗೋಪಾಲ್ ಹೇಳುತ್ತಾರೆ. ಅದೇನೋ ಸರಿ, ಆದರೆ ಈ ಯೋಜನೆ ಪೂರ್ಣಗೊಳ್ಳುವವರೆಗೆ, ಯಶಸ್ವಿಯಾಗುವವರೆಗೆ ಉಳಿದ ಕೆರೆಗಳ ಕಾಯಕಲ್ಪಕ್ಕಾಗಿ ಕಾಯುತ್ತಾ ಕೂರಬೇಕೆ?

ಮಡಿವಾಳ ಕೆರೆ ಅಭಿವೃದ್ದಿ ಹೇಗಿರಬೇಕೆಂದು ಕರ್ನಾಟಕ ಜ್ಞಾನ ಆಯೋಗದ ಶಿಫಾರಸ್ಸುಗಳನ್ನು ಇಲ್ಲಿ ಜಾರಿಗೊಳಿಸಲಾಗುತ್ತಿದೆ. ಇವನ್ನೇ ಹೊಸಕೆರೆಹಳ್ಳಿ ಕೆರೆಗೂ ಆದಷ್ಟು ಬೇಗನೆ ಅಳವಡಿಸಿಕೊಳ್ಳಬಹುದು :
• ಕೆರೆಯ ನೀರಿನ ಮಾದರಿ ಸಂಗ್ರಹಿಸಿ ಪರಿಶೀಲನೆ
• ಹೂಳು ತೆಗೆದು ಸ್ವಚ್ಛಗೊಳಿಸುವುದು.
• ಕೆರೆ ಅಂಚಿನುದ್ದಕ್ಕೂ ೫-೮ ಮೀಟರ್ ಅಗಲದ ಬಿದಿರು ಮೆಳೆ ಬೆಳೆಸುವುದು.
• ನೀರಿನಲ್ಲಿ ಬೆಳೆಯುವ ಸಸಿ, ಜೀವಿಗಳ ಬೆಳಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವುದು.
• ಗಿಡಮೂಲಿಕೆ, ಚಿಟ್ಟೆ ಮತ್ತು ಆರ್ಕಿಡ್ ಉದ್ಯಾನ ನಿರ್ಮಾಣ
• ಕೆರೆ ಮಧ್ಯೆ ಪಕ್ಷಿಗಳ ಆಶ್ರಯಕ್ಕಾಗಿ ಕೃತಕ ದ್ವೀಪಗಳ ನಿರ್ಮಾಣ
• ಸುಧಾರಿತ ದೋಣಿ ವಿಹಾರ ವ್ಯವಸ್ಥೆ
• ಕೆರೆ ಸುತ್ತ ಅನಧಿಕೃತ ಕಾರ್ಯಗಳನ್ನು ನಿಯಂತ್ರಿಸುವುದು.
• ಕೆರೆ ಪ್ರವೇಶದ್ವಾರ, ಇತರೆಡೆ ಮಾಲಿನ್ಯಕ್ಕೆ ಎಡೆಯಿಲ್ಲದಂತೆ ಎಚ್ಚರ ವಹಿಸುವುದು.
• ಕೆರೆ ಏರಿಯ ಬಲವರ್ಧನೆ, ಅರಣ್ಯೀಕರಣ, ಕೆರೆ ಮಾಲಿನ್ಯಕ್ಕೆ ತಡೆ
• ಕೆರೆ ಸುತ್ತಲೂ ಜ್ಯಾಗಿಂಗ್ ಟ್ರ್ಯಾಕ್, ಆಸನ, ದೀಪ ಮತ್ತಿತರ ವ್ಯವಸ್ಥೆ

ಯಾವುದಕ್ಕೂ ಸ್ಥಳೀಯರು ತಮ್ಮ ಪರಿಸರದ ಕೆರೆ ಉಳಿಸಿಕೊಳ್ಳಲು ಇನ್ನಿಲ್ಲದಂತೆ ಒತ್ತಡ ಹೇರಬೇಕು. ನಗರದ ಇತರರೂ ಇವರ ಜೊತೆಗೂಡಬೇಕು. ಜನರು ಒಕ್ಕೊರಲಿನಿಂದ ಹೋರಾಡಿದರೆ ಸರ್ಕಾರ ಹೊಸಕೆರೆಹಳ್ಳಿ ಕೆರೆಯ ಪುನಶ್ಚೇತನಕ್ಕೆ ಮುಂದಾಗಬಹುದು. ಕೆರೆ ಪುನರುಜ್ಜೀವನ ಮತ್ತು ನಂತರದ ನಿರ್ವಹಣೆಯಲ್ಲೂ ಸ್ಥಳೀಕರು ಸಾಧ್ಯವಾದಷ್ಟು ಜವಾಬ್ದಾರಿ ಹೊರಲು ಸಿದ್ಧರಾಗಬೇಕು. ನಮ್ಮ ಕೆರೆ ಉಳಿಸಿಕೊಳ್ಳಬೇಕು ಎಂಬ ಭಾವನೆ ಬಲವಾಗಿದ್ದರೆ ಇದು ಅಸಾಧ್ಯವೇನಲ್ಲ. ಹೊಸಕೆರೆಹಳ್ಳಿ ಕೆರೆಗಿಂತಲೂ ಬಹಳ ವಿಶಾಲವಾದ ಜಕ್ಕೂರು ಕೆರೆ ಸ್ಥಳೀಯರ ಸಹಭಾಗಿತ್ವದಿಂದ ಹೊಸ ಸ್ವರೂಪದಲ್ಲಿ ಕಂಗೊಳಿಸುತ್ತಿದೆ.

ಚಿತ್ರ-ಲೇಖನ: ಕೆ.ರೇಖಾ ಸಂಪತ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*