ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಗುಡ್ಡದ ಮೇಲೊಂದು ಕೆರೆ- ರಾಮಮೂರ್ತಿ ‘ನೀರ್‌ಮೂರ್ತಿ’ ಆದ ಕಥೆ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಅರೆಹಳ್ಳದಲ್ಲಿ ಓರ್ವ ‘ನೀರ್ ಮೂರ್ತಿ’ ಇದ್ದಾರೆ. ರಾಮಮೂರ್ತಿ ಎಂಬುದು ಅವರ ಪೂರ್ತಿ ಹೆಸರು. ಪ್ರಗತಿಪರ ಕೃಷಿಕ. ಗುಡ್ಡಬೆಟ್ಟಗಳೇ ಹೆಚ್ಚಾಗಿರುವ ಅರೆಹಳ್ಳದಲ್ಲಿ ಗುಡ್ಡದ ತುದಿಗೊಂದು ಕೆರೆ ನಿರ್ಮಿಸುವುದೆಂದರೆ ಸುಮ್ಮನೆ ಮಾತಲ್ಲ.
೩೦೦ ಅಡಿ ಉದ್ದದ, ೬೦ ಅಡಿ ಅಗಲದ ಹಾಗೂ ೧೫ ಅಡಿ ಎತ್ತರದ ಈ ಕೆರೆಯನ್ನು ನೋಡುವುದು ಎಂದರೆ ಒಂದು ರೋಮಾಂಚನವೂ ಆಗುತ್ತದೆ. 6ಚಿಕ್ಕಮಗಳೂರು ಎಂದರೆ ಅದು ಕಾಫಿ ಬೆಳೆಗೆ ಪ್ರಖ್ಯಾತಿ. ರಾಮಮೂರ್ತಿ ಕೂಡ ೭೦ ಎಕರೆ ಕಾಫಿ ತೋಟ ಉಳ್ಳವರು. ಪ್ರತಿ ವರ್ಷ ನಿಗದಿತ ಸಮಯಕ್ಕೆ ಇಂತಿಷ್ಟೇ ಮಳೆ ಬರುತ್ತದೆಂಬ ಭರವಸೆ ಇರುವುದಿಲ್ಲ. ಹವಾಮಾನದ ಜೂಟಾಟ ಕೆಲವೊಮ್ಮೆ ಕಾಫಿ ಫಸಲನ್ನೇ ಬುಡಮೇಲು ಮಾಡಿಹಾಕುತ್ತದೆ. ಇಂತಹ ಹವಾಮಾನದ ಜೂಟಾಟದಿಂದ ಬಹಳಷ್ಟು ಬಾರಿ ತೊಂದರೆ ಅನುಭವಿಸಿದ ರಾಮಮೂರ್ತಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಕಾಫಿ ತೋಟದ ಗುಡ್ಡದ ಮೇಲೆ ಒಂದು ಕೃತಕ ಕೆರೆ ನಿರ್ಮಿಸಿ, ಅಲ್ಲಿ ಮಳೆನೀರು ಸಂಗ್ರಹಿಸಿ, ತಮ್ಮ ಕಾಫಿ ಬೆಳೆಗೆ ಬೇಕಾದ ಸಂದರ್ಭದಲ್ಲಿ ಅದನ್ನು ಬಳಸಿಕೊಳ್ಳುವುದು.

2ಸುಮಾರು ಎರಡು ವರ್ಷಗಳ ಹಿಂದೆ ಹೊಳೆದ ಕೆರೆ ನಿರ್ಮಾಣದ ಕಲ್ಪನೆಗೆ ಸಾಕಾರರೂಪ ಕೊಟ್ಟರು. ತಮ್ಮ ಕಾಫಿ ತೋಟದ ಬುಡಕ್ಕೆ ಹೋಲಿಸಿದರೆ ಸುಮಾರು ೫೬೦ ಅಡಿ ಎತ್ತರದಲ್ಲಿ ಒಂದು ಗುಡ್ಡದ ಮೇಲೆ ಕೆರೆ ನಿರ್ಮಾಣ ಕಾಮಗಾರಿ ಶುರುಮಾಡಿದರು. ಕೆರೆಗೆ ಬೇಕಾಗುವಷ್ಟು ಗುಂಡಿ ತೋಡಿ, ಆ ಗುಂಡಿಯ ಮೇಲೆ ಪಿವಿಸಿ ಕೋಟೆಡ್ ಫ್ಯಾಬ್ರಿಕ್ ಅಳವಡಿಸಿ ಮಳೆನೀರನ್ನು ಕೆರೆಯಲ್ಲಿ ಸಂಗ್ರಹಿಸಿದರು. ತೋಟದ ಮೂಲೆಮೂಲೆಗೂ ಈ ನೀರನ್ನು ಬಳಸಿಕೊಳ್ಳತೊಡಗಿದ್ದಾರೆ. “ಹೊಸದಾಗಿ ನಿರ್ಮಿಸಿದ ಕೆರೆಯಾದ್ದರಿಂದ ಕೆರೆ ದಂಡೆಯ ಮಣ್ಣು ಇನ್ನೂ ಗಟ್ಟಿಯಾಗಿರುವುದಿಲ್ಲ. ಅದಕ್ಕೆ ಕನಿಷ್ಟ ೫ ವರ್ಷ ಬೇಕೇಬೇಕು. ಹಾಗಾಗಿ ಕೆರೆಯಲ್ಲಿ ಅರ್ಧದಷ್ಟು ನೀರನ್ನು ಮಾತ್ರ ಸಂಗ್ರಹಿಸುತ್ತಿದ್ದೇನೆ. ಕೆರೆ ತುಂಬಾ ನೀರು ಸಂಗ್ರಹಿಸಿಬಿಟ್ಟರೆ, ನೀರಿನ ಭಾರಕ್ಕೆ ದಂಡೆ ಒಡೆದುಹೋಗುವ ಸಾಧ್ಯತೆಯಿರುತ್ತದೆ”, ಎಂದು ರಾಮಮೂರ್ತಿ ವಿವರಿಸುತ್ತಾರೆ.

 “ಫೆಬ್ರವರಿ ತಿಂಗಳಲ್ಲಿ ಹೂಮಳೆ ಬರಬೇಕು. ಮೇ ತಿಂಗಳಲ್ಲಿ ಕಾಫಿಗೆ ಹಿಮ್ಮಳೆ ಇರಬೇಕು. ಈ ಎರಡೂ ಮಳೆಗಳು ಕೈಕೊಟ್ಟಾಗ, ಈ ಕೃತಕ ಕೆರೆಯಿಂದ ಕಾಫಿಗೆ7 ನೀರು ಒದಗಿಸುತ್ತಿದ್ದೇನೆ. ಈ ಕೆರೆಯನ್ನು ನಿರ್ಮಿಸಲು ಸುಮಾರು ೨೦ ಲಕ್ಷ ರೂ. ಖರ್ಚುಮಾಡಿದ್ದೇನೆ. ಇಷ್ಟು ಹಣವನ್ನು ಕೇವಲ ೫ ವರ್ಷಗಳಲ್ಲಿ ಪಡೆದುಕೊಳ್ಳಬಲ್ಲೆ. ಕೃತಕ ಕೆರೆಯ ನಿರ್ಮಾಣದಿಂದ ನಷ್ಟ ಸಾಧ್ಯವೇ ಇಲ್ಲ. ಕಾಫಿ ತೋಟ ಲಕಲಕ ಎಂದು ಹೊಳೆಯಲು ಈ ಕೆರೆ ಸಾಕಷ್ಟು ಸಹಕರಿಸುತ್ತಿದೆ”, ಎಂದು ಸಂತೋಷ ವ್ಯಕ್ತಪಡಿಸುತ್ತಾರೆ.

ನೀರಾವರಿ ಇಲ್ಲದೆ ರೋಬಸ್ಟಾ ಕಾಫಿಯ ಕೃಷಿ ಸಾಧ್ಯವೇ ಇಲ್ಲ. ಜೊತೆಗೆ ಹವಾಮಾನದ ಸಮಸ್ಯೆ. ನೀರು ಇಲ್ಲದಿದ್ದರೆ ಕಾಫಿ ಬೆಳೆ ಸಾಧ್ಯವೇ ಇಲ್ಲ. ನೀರಿನ ಸಮಸ್ಯೆಯಿಂದ ನಷ್ಟ ಅನುಭವಿಸುವ ಬದಲು, ೭೦ ಎಕರೆ ಕಾಫಿ ತೋಟವನ್ನೇ ಮಾರಲು ಹೊರಟಿದ್ದರು ರಾಮಮೂರ್ತಿ. ಕಾಫಿ ತೋಟದಲ್ಲಿ ಫೆಬ್ರವರಿ ತಿಂಗಳಲ್ಲಿ ಹೂವು ಅರಳುವ ಕಾಲ. ಆಗ ಒಂದು ಸುತ್ತು ಈ ಕಾಫಿ ಗಿಡಗಳ ಮೇಲೆ ಹೂಮಳೆ ಆಗಲೇ ಬೇಕು. ಅದಾದ ೨೦ ದಿನಗಳ ನಂತರ ಹಿಮ್ಮಳೆ ಕಾಫಿ ಗಿಡಗಳ ಮೇಲೆ ಬೀಳಬೇಕು. ಇದನ್ನು ಬ್ಲಾಸಂ ಶವರ್ ಮತ್ತು ಬ್ಯಾಕಿಂಗ್ ಶವರ್ ಎಂದೇ ಕರೆಯಲಾಗುತ್ತದೆ.  ತಮ್ಮ ೭೦ ಎಕರೆ ತೋಟದಲ್ಲಿ ೨೦ ಎಕರೆಯಷ್ಟು ಕಾಫಿ ತೋಟವಿದೆ. ಈ ಕಾಫಿ ತೋಟಕ್ಕೆ ನೀರಿನ ಆಸರೆ ಇರಲಿಲ್ಲ. ೩ 3ಎಕರೆಯಷ್ಟು ಇರುವ ಅಡಿಕೆ ತೋಟಕ್ಕೆ ಸ್ವಲ್ಪ ದೂರದಲ್ಲಿಯೇ ಒಂದು ಸರ್ಕಾರಿ ಕೆರೆ ಇದೆ. ಅದರಿಂದ ನೀರು ದೊರಕುತ್ತಿತ್ತು. ಸುಮಾರು ಕೃಷಿಕರ ತೋಟಕ್ಕೂ ಈ ಸರ್ಕಾರಿ ಕೆರೆಯದೇ ನೀರು ಜೀವಾಳ. ಕೃತಕ ಕೆರೆ ನಿರ್ಮಿಸುವ ಮೊದಲು ರಾಮಮೂರ್ತಿ ನಾಲ್ಕು ಬೋರ್‌ವೆಲ್‌ಗಳನ್ನು ತೋಡಿಸಿದ್ದರು. ಆದರೆ, ಫಲಿತಾಂಶ ಮಾತ್ರ ಶೂನ್ಯ. ಆಗ ಮೂಡಿದ್ದೇ ಕೆರೆ ನಿರ್ಮಿಸುವ ಛಲ. ಪ್ಲಾಸ್ಟಿಕ್ ಶೀಟಿನ ಹೊದಿಕೆಯುಳ್ಳ ಗುಡ್ಡದ ತುದಿಯ ಈ ಕೆರೆ ಈಗ ಸಾಕಷ್ಟು ಕೃಷಿಕರ ಗಮನ ಸೆಳೆಯುತ್ತಿದೆ. ವಾರ್ಷಿಕ ಸರಾಸರಿ ೧೨೦ ಇಂಚು ಸುರಿಯುವ ಮಳೆಯಿಂದಲೇ ಈ ಕೆರೆ ಅರ್ಧದಷ್ಟು ತುಂಬಿರುತ್ತದೆ. ಬೇಸಿಗೆಗೆ ತಾವು ಮಾಡಿಕೊಂಡ ಸಿದ್ಧತೆಯಿದು ಎನ್ನುತ್ತಾರೆ ರಾಮಮೂರ್ತಿ.

ಕೃಷಿಕರು ಅದೃಷ್ಟವನ್ನೇ ಕೂರುವ ಬದಲು, ಇಂತಹ ಕೃತಕ ಕೆರೆಗಳನ್ನು ಬುದ್ಧಿವಂತಿಕೆಯಿಂದ ನಿರ್ಮಿಸಿಕೊಂಡರೆ, ಬರಬಿದ್ದ ಭೂಮಿಯಲ್ಲೂ ಬಂಗಾರ ಬೆಳೆಯಬಹುದು ಎಂಬುದಕ್ಕೆ ರಾಮಮೂರ್ತಿ ಸಾಕ್ಷಿ.

ಚಿತ್ರ-ಲೇಖನ: ಶಿ.ಜು.ಪಾಶ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*