ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬಳ್ಳಾರಿ ಕೋಟೆ ಬೆಟ್ಟ; ನಮ್ಮ ನೀರಿನ ಬುದ್ಧಿ ಮಟ್ಟ!

ಬಳ್ಳಾರಿ. ಊರ ಹೆಸರಷ್ಟೇ ಸಾಕು; ಮಲೆನಾಡ ಸೆರಗು ಧಾರವಾಡದಲ್ಲಿದ್ದವರಿಗೆ ಮೈಯೆಲ್ಲ ಕಾದು, ಬೆವರಿಳಿದ ಅನುಭವ!

ಕಾರದ ಮೆಣಸಿನಕಾಯಿ ಮಿರ್ಚಿ, ಬಳ್ಳೊಳ್ಳಿ ಚುರಮುರಿ.. ಪಾನಕದಂತಹ ಬಿಸಿ ಬಿಸಿ ಚಹಾ! ಸೂರ್ಯ ಹುಟ್ಟಿ ಮುಳುಗುವ ವರೆಗೆ ಯಾವುದೇ ಸಮಯ, ವಯಸ್ಸಿನ ಮಿತಿ ಇಲ್ಲದೇ ಕಾದ ಕೆಂಡದ ನೆಲದಲ್ಲಿ ಮನಸೋ ಇಚ್ಛೆ ಬಳಸುವುದು ಇಲ್ಲಿನ ಜನರ ಡಿ.ಎನ್.ಎ ಹೊಕ್ಕಿದೆ!

ನಮ್ಮ ಊರುಗಳಿಗೆ ವರ್ಷದಲ್ಲಿ ಮೂರು ಋತುಮಾನಗಳಾದರೆ, ಬಳ್ಳಾರಿಗೆ ವರ್ಷದುದ್ದಕ್ಕೂ ಒಂದೇ ಋತು.. ಬೇಸಿಗೆ! ಬಂಡೆಗಳೆಲ್ಲ ಕಾದು, ಬಿಸಿ ಗಾಳಿ ನಿಡುಸುಯ್ಯುತ್ತಿದ್ದರೆ.. ಮೈಗೆ ಕೆಂಡ ತೂರಿದ ಅನುಭವ. ತಲೆಯೆಲ್ಲ ಕಾದು, ನಮ್ಮ ನೆತ್ತಿಯಿಂದ ಸೂರ್ಯ ‘ಸ್ಟ್ರಾ’ ಹಚ್ಚಿ ಗ್ಲುಕೋಸ್ ಹೀರುವ ಜಾಹಿರಾತು ನೆನಪಿಸುವ ಸಾಕ್ಷಾತ್ ಚಿತ್ರಣ.

ಬಳ್ಳಾರಿಯ ಸುಡು ಬಿಸಿಲಿನಲ್ಲೂ ಆ ಜನ ಆನಂದದಿಂದ್ದಾರೆ. ಆ ನೆಲದ, ಮಣ್ಣಿನ ಗುಣವೂ ಎಂಬಂತೆ ಕಷ್ಟ ಸಹಿಷ್ಣುಗಳಾಗಿ, ‘ಬರೀ ಬೆಂದ್ರ ಬೇಂದ್ರೆ ಆಗೋದಿಲ್ಲೋ ತಮ್ಮಾ.. ಬೂದಿ ಆದಿ’ ಅಂದ ವರಕವಿಯ ಮಾತಿನಂತೆ ಅಲ್ಲಿನ ಹಿರೀಕರು ಬರಿ ಬೆಂದವರಲ್ಲ.. ಮಾಗಿದವರು. ಹಾಗಿತ್ತು ಅವರ ನೀರ ಜಾಣ್ಮೆ. ಇಂದು ಹೈದ್ರಾಬಾದ್ ಕರ್ನಾಟಕದ ಈ ಜಿಲ್ಲೆಯಲ್ಲಿ, ೧ ಲೀಟರ್ ಮಿನರಲ್ ವಾಟರ್‌ಗೆ ೨೫ ರೂಪಾಯಿ.. ಮಾರಾಟಗಾರನಿಗೆ ಪ್ರತಿ ಲೀಟರ್ ಬಾ???????????????????????????????ಟಲ್‌ಗೆ ೮ ರಿಂದ ೧೨ ರೂಪಾಯಿ ಕಮಿಷನ್! ಅರ್ಥಾತ್, ೨ ರೂಪಾಯಿ ವಸ್ತು ಪ್ಯಾಕೇಜ್ಡ್ ಪಾರ್ಮ್‌ನಲ್ಲಿ ಎಳೆನೀರಿಗೆ ಸಮ. ಅಂದಹಾಗೆ ಎಳೆನೀರಿಗೆ ಇಲ್ಲಿ ನೆಲೆ ಇಲ್ಲದ್ದಕ್ಕೆ, ಬೆಲೆ ಒಂದಕ್ಕೆ ರೂ.೩೫.

ಏನೂ ಇಲ್ಲದವ ಸರಳ ಜೀವನಾ ಮಾಡೋದು ದೊಡ್ಡ ಮಾತಲ್ಲ; ಎಲ್ಲ ಇದ್ದವ ತ್ಯಜಿಸಿ ಸರಳ ಜೀವನ ನಡೆಸೋದು, ದೊಡ್ಡದು. ಈ ಮಾತಿಗೆ ಅನ್ವರ್ಥಕ ಎಂಬುವಂತೆ, ಅಲ್ಲಿನ ಹಿರೀಕರು ಕಲ್ಲುಗಳ ಮಧ್ಯೆ ತಿಳಿಯಾದ ಮಳೆ ನೀರನ್ನು ಹೇರಳವಾಗಿ ಸಂಗ್ರಹಿಸಿ, ಬಳಸುತ್ತಿದ್ದ ರೀತಿ ಇಂದಿಗೂ ಅನುಕರಣೀಯ, ಅಧ್ಯಯನಯೋಗ್ಯ.

ಕಮ್ಯನಿಕೇಶನ್ ಫಾರ್ ಡೆವಲೆಪ್‌ಮೆಂಟ್ ಆಂಡ್ ಲರ್ನಿಂಗ್ – ಸಿಡಿಎಲ್, ಬೆಂಗಳೂರು ಯೂನಿಸೆಫ್ ಸಹಯೋಗದಲ್ಲಿ ‘ಬಯಲು ಶೌಚ – ಸುಶೌಚ’, ಮಾಧ್ಯಮ ಮಿತ್ರರಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಲಿಕಾರ್ಥಿಯಾಗಿ ಪಾಲ್ಗೊಳ್ಳಲು ಹೋದಾಗ, ಐತಿಹಾಸಿಕ ಏಕಶಿಲಾ ಬೆಟ್ಟ ಹಾಗೂ ಕೋಟೆಯನ್ನು ನೋಡುವ ಸೌಭಾಗ್ಯ ಸಿಕ್ಕಿತ್ತು. ಬಂಡೆಗಳೆಲ್ಲ ಕಾದು, ಕೆಂಪಾಗಿದ್ದರೂ ಆ ಬೆಟ್ಟದ ನೆತ್ತಿಯಲ್ಲಿ ಪಲ್ಲವಿಸಿರುವ ಸಾಲು-ಸಾಲು ಕೊಳಗಳು ಗಮನ ಸೆಳೆದವು. ಕೊಳಗಳೆಲ್ಲ ಈಗ ನಿರ್ವಹಣೆಯ ಕೊರತೆಯಿಂದ, ಹಸಿರು ಪಾಚಿಗಟ್ಟಿದ ಪಾಗಾರದಂತೆ ಕಂಡರೂ, ಮನದಲ್ಲಿ ತಂಗಾಳಿ ತೀಡಿ ಬೆಟ್ಟ ಹತ್ತಿದ್ದ ಆಯಾಸವನ್ನು ನನಗೂ, ಸಿಡಿಎಲ್’ನ ಗಣಪತಿ ಹಾಗೂ ಹೇಮಾ ಪ್ರಸನ್ನ ಅವರಿಗೂ ಮರೆಸಿದ್ದು ಈ ಕೊಳಗಳೇ!

ನಿಜಕ್ಕೂ ಹಿರೀಕರ ಪಾರಂಪರಿಕ ನೀರ ಬಳಕೆಯ ಜಾಣ್ಮೆಯ ಇತಿಹಾಸದ ಪುಟಗಳಾಗಿ ನಮಗೆ ಕಂಡವು. ಇಡೀ ಕೋಟೆಗೆ ನೀರುಣಿಸಲು ಸಮರ್ಥವಾಗಿದ್ದ ಆ ಮಾದರಿಗಳು, ಇಂದಿನ ಎಂಜಿನಿಯರಿಂಗ್ ಕೌಶಲ್ಯ ಬಲ್ಲ ನಮ್ಮಂಥವರಿಗೂ ಬೆರಗು ಹುಟ್ಟಿಸಿದ್ದು ವಿಶೇಷ. ಅತ್ಯಂತ ಕೌಶಲ್ಯಪೂರ್ಣ ನಿರ್ಮಿತಿಗಳು, ಪೂರ್ವಿಕರ ದೂರದೃಷ್ಟಿ ಇಂದಿಗೂ ಇಲ್ಲಿ ಧ್ವನಿಸುತ್ತದೆ.

ದಿ ಹಿಂದು ಪತ್ರಿಕೆಯ ಪ್ರಾಚಾರ್ಯ ವರದಿಗಾರರಾದ ಮತ್ತೀಹಳ್ಳಿ ಅಹಿರಾಜ್ ಅವರು ಹೇಳುವಂತೆ, “ಬಳ್ಳಾರಿಯ ಬೆಟ್ಟದ ಮೇಲಿನ ಪುಷ್ಕರಣಿ ಮಾದರಿಯ ಕೊಳಗಳು ಹೇಳಿಕೊಳ್ಳುವಂಥಹ ಯಾವುದೇ ವಿಶೇಷ ಅಥವಾ ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾದವಲ್ಲ. ಆ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ನೀರ ನೆಮ್ಮದಿಯ ಕಾಲು ಹಾದಿಯನ್ನು ಅರಸುವಾಗ ಸೂಕ್ಮ ಮನಸ್ಸುಗಳಿಗೆ ಹೊಳೆದ ಬದುಕುವ ದಾರಿ, ಮಾರ್ಗೋಪಾಯ.:

ಅಂದಿನ ನೀರಾವರಿ ವ್ಯವಸ್ಥೆಯ ಭಾಗವಾಗಿ ಜಲಸಂಗ್ರಹಕ್ಕೆ ಕಂಡುಕೊಳ್ಳಲಾದ ಪರ್ಯಾಯ, ಎನ್ನುತ್ತದೆ ಬಳ್ಳಾರಿಯ ಜಿಲ್ಲಾ ಗ್ಯಾಝೆಟಿಯರ್. ಬಳ್ಳಾರಿಯ ಬೆಟ್ಟದ ಮೇಲಿನ ಈ ಕೊಳಗಳ ನಿರ್ಮಾತೃ ಮೈಸೂರಿನ ಟಿಪ್ಪು ಸುಲ್ತಾನ್, ಎಂದು ಶೃತ ಪಡಿಸುತ್ತದೆ ಪುರಾತತ್ವ ಇಲಾಖೆ. ಅತ್ಯಂತ ಎತ್ತರದ ಬೆಟ್ಟಗಳನ್ನು ಹುಡುಕಿ ಆಳರಸರು ಕಟ್ಟಿರುವ ಬಹುತೇಕ ಕೋಟೆಗಳಲ್ಲಿ ಅಲ್ಲಿನ ಜನವಸತಿ, ಜಾನುವಾರುಗಳಿಗೆ ಅಲ್ಲಿಯೇ ಜಲಮೂಲಗಳನ್ನು ಆಕರಿಸಿ ಕೊಟ್ಟಿರುವುದು ವಿಶೇಷ. ಆಡಳಿತದ ಇಚ್ಛಾಶಕ್ತಿ, ರಾಜ-ಮಹಾರಾಜರ ದೂರದೃಷ್ಟಿ, ಜನರ ಪೌರಪ್ರಜ್ಞೆ ಮನನೀಯ.

ಬಳ್ಳಾರಿಯ ಕೋಟೆ???????????????????????????????ಯನ್ನೇ ಕುಲಂಕಷ ವಿಶ್ಲೇಷಿಸುವುದಾದರೆ, ೧೫೦ ರಿಂದ ೨೦೦ ಮೀಟರ್‌ದಷ್ಟು ಎತ್ತರದ ಕಲ್ಲು ಗುಡ್ಡದ ನೆತ್ತಿಯ ಮೇಲೆ ನೀರು ನಿಲ್ಲಿಸುವ ಯೋಚನೆ-ಯೋಜನೆ ಮೈನವಿರೇಳಿಸುತ್ತದೆ. ಅಲ್ಪ ಮಳೆಯನ್ನು ಹೊರತುಪಡಿಸಿ, ಬೇರೆ ಇನ್ನಾವುದೇ ಜಲಮೂಲಗಳು ಬೆಟ್ಟದ ಮೇಲೆ ಗೋಚರಿಸುವುದಿಲ್ಲ. ಹಿರೀಕರು ನಮಗಿಂತಲೂ ದೈಹಿಕವಾಗಿ ಗಟ್ಟಿಮುಟ್ಟಾಗಿದ್ದರು ಎಂಬುದನ್ನು ಅರೆಘಳಿಗೆ ಒಪ್ಪಿದರೂ, ದಿನಕ್ಕೆ ಹತ್ತಾರು ಬಾರಿ ನೀರಿಗಾಗಿ ಹತ್ತಿಳಿಯುವುದು ಸುಲಭದ ತುತ್ತಲ್ಲ.

ಎಲ್ಲೆಲ್ಲೂ ನೆಲಹಾಸಿನಂತೆ ನುಣುಪು ಶಿಲೆ ಚಾರಣಿಗರ ಕಾಲ ಸ್ನಾಯುಗಳನ್ನು ಬಿಗಿಗೊಳಿಸಿ, ನಡುಗಿಸದೇ ಬಿಡವು. ಬಿದ್ದ ವೇಗದಲ್ಲೇ ಜಾರಿ ನೆಲಸೇರುವ ನೀರನ್ನು ಕಲ್ಲಕೋರೆಗಳ ಮಧ್ಯೆಯೇ ವರ್ಷವಿಡೀ ಹಿಡಿದಿಡುವ ಸಂಕಲ್ಪ ಮೈನವಿರೇಳಿಸುತ್ತದೆ. ಮಳೆಗೆ ಬೆಟ್ಟವೂ, ಬಯಲೂ ಎರಡೂ ಒಂದೇ! ಸುರಿಯುವ ಪ್ರಮಾಣದಲ್ಲಿ ಎಳ್ಳಷ್ಟೂ ತಾರತಮ್ಯಭಾವ ಅದಕ್ಕಿಲ್ಲ. ಹಾಗಾಗಿ, ಬಿದ್ದ ಮಳೆಯ ನೀರನ್ನೇ ಹಿಡಿದಿಟ್ಟರೂ ಸಾಕು! ಮೊದಲೇ ನೈಸರ್ಗಿಕವಾಗಿ ನಿರ್ಮಾಣಗೊಂಡ ಹೊಂಡಗಳನ್ನೇ ಜಲಮೂಲ ಆಕರಗಳನ್ನಾಗಿ ಪರಿವರ್ತಿಸಿ, ಬಹುಶಃ ಟಿಪ್ಪು ಕೋಟೆ ಕಟ್ಟಲು ಸಹ ಇದೇ ನೀರನ್ನು ಬಳಸಿರಬಹುದು ಎಂಬ ಐತಿಹ್ಯಗಳಿವೆ.

ನಂತರ ಆತನ ಸಾಮಂತರು ಇಂತಹ ಹತ್ತಾರು ಪುಷ್ಕರಣಿಗಳನ್ನು ಗುರುತಿಸಿ, ತುಸು ಪಾತ್ರವನ್ನು ಹಿಗ್ಗಿಸಿ ಬೆಟ್ಟದ ಮೇಲೆ, ಕೋಟೆಯ ಒಳಗೆ ಸುರಿಯುವ ಮಳೆಯನ್ನೆಲ್ಲ ಹಿಡಿದಿಟ್ಟು, ವರ್ಷಪೂರ್ತಿ ಬೇಕಾವಷ್ಟು ಸಂಗ್ರಹಿಸಿಕೊಂಡು ನೀರಾವರಿಗೆಂದು ಬೆಟ್ಟದ ಕೆಳಗಿನ ಜಮೀನುಗಳಿಗೂ ಹರಿಸುತ್ತಿದ್ದರು ಎಂಬ ಮಾಹಿತಿ ಇದೆ. ಅರ್ಥಾತ್, ಅಂದಿನ ಮಳೆಯ ಪ್ರಮಾಣವೂ ಗಣನೀಯವಾಗಿತ್ತು ಎಂಬುದು ಇಲ್ಲಿ ದಾಖಲಾರ್ಹ.

ಪ್ರಾಧಾನ್ಯತೆಯ ವಿಷಯ ಕುಡಿಯುವ ನೀರು ಒದಗಿಸುವುದೇ ಆಗಿತ್ತು. ಹಾಗಾಗಿ, ೧೮ನೇ ಶತಮಾನದ ಆಸುಪಾಸು, ಬೆಟ್ಟದ ಸುಮಾರು ೬ ಎಕರೆ ಪ್ರದೇಶದಲ್ಲಿ ನೈಸರ್ಗಿಕವಾಗಿ ನಿರ್ಮಾಣಗೊಂಡ ಪುಟ್ಟ-ಪುಟ್ಟ ಹೊಂಡಗಳನ್ನು ಒಂದಕ್ಕೊಂದು ಸಂಪರ್ಕಿಸಲಾಗಿದೆ. ಹೊಮಡ ತುಂಬಿ ಮಿಕ್ಕುವ ನೀರು ಪೋಲಾಗದೇ ಮುಂದಿನ ಹೊಂಡಕ್ಕೆ ಹರಿದು ಸಾಗುತ್ತದೆ. ಅಂದಾಜು ಬೆಟ್ಟದ ತುಂಬ ೪೦ಕ್ಕೂ ಮಿಕ್ಕು ಪುಟ್ಟ ಕೆರೆಗಳು ಮೈದಳೆದಿವೆ.

ಮನುಷ್ಯ ಪ್ರಯತ್ನದಿಂದ ಇಲ್ಲಿ ನಿಮಾರ್ಣಗೊಂಡಿರುವ ಕುರುಹು ಕೇವಲ ಬೆಟ್ಟದ ತುದಿಯಿಂದ ನೆಲವನ್ನು ಸಂಪರ್ಕಿಸುವ ಕಾಲುವೆಯೊಂದೇ. ಕೋಟೆಯ ಗೋಡೆಗುಂಟ ???????????????????????????????ಇರುವ ಈ ಕಾಲುವೆ, ವೈರಿಗಳಿಂದ ರಕ್ಷಣೆ ಮತ್ತು ಬಳ್ಳಾರಿಯ ಹೃದಯ ಭಾಗಕ್ಕೆ ನೀರು ಪೂರೈಕೆ. ಇಂದಿಗೂ ಪಟ್ಟಣದ ಮಧ್ಯ ಭಾಗದಲ್ಲಿರುವ ಬಾವಿಗಳಿಗೆ ಅಂದು ಜಲಪೂರಣ ಈ ಬೆಟ್ಟದ ನೆತ್ತಿಯ ಮೇಲಿನ ಪುಷ್ಕರಣಿಗಳು ತುಂಬಿ ತುಳುಕಿದ ನೀರಿನಿಂದ!

ಅಲ್ಲಿನ ಬಾಯಿಯೊಂದಕ್ಕೆ ‘ಸೈನಿಕರ ಬಾವಿ’ ಎಂಬ ಹೆಸರೂ ಇದೆ, ಎಂಬುದು ಗೆಝೆಟಿಯರ್‌ನಲ್ಲಿ ಉಲ್ಲೇಖಿತ. ಯುದ್ಧ ಕಾಲದಲ್ಲಿ ಬೆಟ್ಟದ ಮೇಲಿನ ಕೋಟೆಯೊಳಗೆ ಬಿಡಾರ ಹೂಡುತ್ತಿದ್ದ ಸೈನ್ಯಕ್ಕೆ ಈ ಬಾವಿಯ ನೀರೇ ಜೀವದೃವ್ಯವಾಗಿತ್ತು. ಸುಮಾರು ಒಂದು ಸಾವಿರ ಜನ ಸೈನಿಕರು ಸತತ ಮೂರು ತಿಂಗಳು ಬಳಸಿದರೂ ಸಾಕಾಗುವಷ್ಟು ನೀರಿನ ಸಂಗ್ರಹ ಈ ಬಾವಿಯಲ್ಲಿತ್ತು!

ಬಂಡೆಗಳಿಂದ ಸೋಸಿ ಬಂದು ಈ ಕೊತ್ತಲದ ಕೆರೆಗಳಲ್ಲಿ ಮಳೆ ನೀರು ಸಂಗ್ರಹ ಗೊಳ್ಳುವುದರಿಂದ ನೀರು ತುಂಬ ಸಿಹಿ ಹಾಗೂ ತಿಳಿ; ಮತ್ತು ತಣ್ಣಗೆ. ನೇರವಾಗಿ ಮೋಡ ಸುರಿದ ಮುತ್ತಿನ ಹನಿಗಳಿಂದ ನೀರು ಸಂಗ್ರಹಗೊಳ್ಳುವುದರಿಂದ ಕಲುಷಿತತೆಗೆ ಅವಕಾಶವೇ ಇಲ್ಲ. ಆದರೆ, ಹೊಂಡ ಸ್ವಚ್ಛವಾಗಿರಬೇಕಷ್ಟೇ.. ಟಿಪ್ಪು ಕೂಡ ಹೆಚ್ಚು ಕಾಲ ಈ ಹೊಂಡಗಳ ನೀರು ಬಳಸಲಿಲ್ಲ ಎಂಬ ಉಲ್ಲೇಖಿತ ದಾಖಲೆಗಳಿವೆ.

ನಾವು ಇತ್ತೀಚೆಗೆ ಭೇಟಿ ನೀಡಿದಾಗ, ಈ ಪುಷ್ಕರಣಿಗಳ ನಿರ್ವಹಣೆಯ ಅವಶ್ಯಕತೆ ಕಣ್ಣಿಗೆ ರಾಚಿತು. ಪಾಚಿಗಟ್ಟಿದ ನೀರು, ಬೀಡಿ, ಸಿಗರೇಟ್, ಮಧ್ಯದ ಬಾಟಲಿ, ಉಂಡು ಎಸೆದ ಪ್ಲಾಸ್ಟಿಕ್ ಚೀಲ, ತಟ್ಟೆಗಳು, ನೀರು ಕುಡಿಯಲು ಬಳಸಿದ ಪ್ಲಾಸ್ಟಿಕ್ ಗ್ಲಾಸು, ಇಸ್ಪೇಟ್ ಆಟದ ಎಲೆಗಳು ಈ ಹೊಂಡಗಳನ್ನು ಕಸದ ತೊಟ್ಟಿಯಾಗಿಸಿದ್ದು, ಖೇದವೆನಿಸಿತು.

ಸ್ಥಳೀಯ ಮಾಧ್ಯಮ ಮಿತ್ರರ ಪ್ರಕಾರ ಕಳೆದ ೫ ವರ್ಷಗಳ ಕೆಳಗೆ ಜಿಲ್ಲಾ ಪಂಚಾಯ್ತಿ, ಸ್ಥಳೀಯ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಕೈಜೋಡಿಸಿ ಈ ಹೊಂಡಗಳನ್ನು ಸ್ವಚ್ಛಗೊಳಿಸುವ ಪ್ರಯತ್ನ ಮಾಡಿತ್ತು. ಆದರೆ, ಶುರುವಾತಿನ ಉಮ್ಮೇದಿ ಮುಗಿಸುವವರೆಗೆ ಇರಲಿಲ್ಲ! ಈಗಲಾದರೂ ಎರಡು ಹಂತದ ವ್ಯವಸ್ಥಿತ ಪ್ರಯತ್ನಗಳು ಈ ಹೊಂಡಗಳನ್ನು ಸುಸ್ಥಿತಿಗೆ ತರಬಹುದು. ಕಾಲುವೆಯನ್ನು ದುರಸ್ತಿಗೊಳಿಸಬಹುದು. ನಮ್ಮ ಕಾಲಘಟ್ಟದಲ್ಲಿಯೇ ಬಳ್ಳಾರಿಯ ಹೃದಯ ಭಾಗಕ್ಕೆ ಮತ್ತೊಮ್ಮೆ ಬೆಟ್ಟದ ಮೇಲಿನ ಹೊಂಡಗಳಿಂದ ತಿಳಿ ನೀರು ಹರಸಬಹುದು.

ಮತ್ತೆ ಮತ್ತೆ ಬೋರ್‌ವೆಲ್‌ಗಳನ್ನು ಕೊರೆಸುವುದಕ್ಕಿಂತ ಹಿರೀಕರ ನೀರ ಜಾಣ್ಮೆ ಅನುಸರಿಸುವುದು ಸುರಕ್ಷಿತ. ಹೌದು.. ಮಳೆ ಪ್ರಮಾಣ ಈಗ ಕಮ್ಮಿಯಾಗಿದೆಯಲ್ಲ..!?

ಚಿತ್ರ-ಲೇಖನ:  ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*