ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಮತ್ತು ಹಬ್ಬಗಳು: ಭಾಗ ೩

ಗೋವಿನ ಹಬ್ಬ ದೀಪಾವಳಿ

ದೀಪಾವಳಿ ರೈತರ ಹಬ್ಬ.  ಮಲೆನಾಡಿನಲ್ಲಿ ನೀರಿನ ಪೂಜೆ, ಗೋಪೂಜೆ, ಎತ್ತುಗಳ ಪೂಜೆ, ಕೃಷಿ ಉಪಕರಣಗಳ ಪೂಜೆ, ಗೊಬ್ಬರದ ಪೂಜೆ, ಹೊಸ ಫಸಲಿನ ಪೂಜೆ ನಡೆಯುತ್ತದೆ.  ಈ ಎಲ್ಲಾ ಪೂಜೆಗಳನ್ನು ಊರಿನವರು ವೈಯಕ್ತಿಕವಾಗಿ ಮತ್ತು ಸಮುದಾಯಗಳಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.  ಸಮುದಾಯಗಳ ಆಚರಣೆಗಳ ರೀತಿ ವಿಭಿನ್ನವಿದ್ದರೂ ಮೂಲತತ್ವಗಳು ಒಂದೇ.  ಸುಮಾರು ಐದು ದಿನಗಳ ಕಾಲ ನಡೆಯುವ ಇದು ದೊಡ್ಡ ಹಬ್ಬವೆಂದೇ ಪ್ರತೀತಿ.

cow pic for article 4ಆಶ್ವಯುಜ ಕೃಷ್ಣ ಚತುರ್ದಶಿ ಅಂದರೆ ನರಕ ಚತುರ್ದಶಿಯಂದು ಗಂಗೆ ತುಂಬುವ ಹಬ್ಬ.  ಹಿಂದಿನ ದಿನ ಸಂಜೆಯೇ ಬಾವಿಕಟ್ಟೆಗೆ ಮತ್ತು ಸುತ್ತಲೂ ಸಗಣಿಯಿಂದ ಸಾರಣೆ.  ಕೆಮ್ಮಣ್ಣು ಮತ್ತು ಬಿಳಿ ಜೇಡಿಮಣ್ಣಿನ ಚಿತ್ತಾರ ಸಿಂಗಾರ.  ಮಧ್ಯೆ ಮಧ್ಯೆ ರಂಗೋಲಿಗಳ ಅಲಂಕಾರ.  ಕುಂಬಾರರ ಮನೆಯಿಂದ ಹೊಸ ಗಡಿಗೆಯೊಂದನ್ನು ತಂದು ಅದಕ್ಕೂ ವಿವಿಧ ಹಸೆ ಚಿತ್ತಾರಗಳ ಚಿತ್ರಣ.  ಹಬ್ಬದ ದಿನ ಬೆಳಗಿನ ಜಾವ ಹೆಂಗಳೆಯರೆಲ್ಲಾ ಬಾವಿಕಟ್ಟೆ ಬಳಿ ಸೇರುತ್ತಾರೆ.  ಹೊಸ ಮಗೆ(ಮಣ್ಣಿನ ಕೊಡ)ಯಿಂದ ನೀರನ್ನು ಎತ್ತುತ್ತಾರೆ.  ಗಂಟೆ, ಜಾಗಟೆಗಳ ಸದ್ದಿನೊಂದಿಗೆ ಗಂಗೆ ಮೈದೋರುತ್ತಾಳೆ.  ಕಟ್ಟೆಯ ಮೇಲೆ ಅದಕ್ಕೆ ಆರತಿ.  ಅರಿಶಿನ, ಕುಂಕುಮಗಳಿಂದ ಪೂಜೆ, ಸಿಹಿಯ ನೈವೇದ್ಯ ಮತ್ತೆ ಅದನ್ನು ತಂದು ದೇವರ ಮುಂದಿಟ್ಟು ನಮಸ್ಕರಿಸುತ್ತಾರೆ.  ಕೆಲವರು ಮೂರು ದಿನ ಪೂಜಿಸಿದರೆ ಕೆಲವು ಸಮುದಾಯದವರು ಅಂದೇ ಅದನ್ನು ಬಚ್ಚಲಿಗೆ ಹಂಡೆಗೆ ತುಂಬಿಸುತ್ತಾರೆ.

ಬೆಳಗಿನ ಜಾವ ಪೂಜೆಗೆ ಎದ್ದ ಮಕ್ಕಳಿಗೆ ಅರಿಸಿನ, ಎಣ್ಣೆಯನ್ನು ಮೈಗೆಲ್ಲಾ ಹಚ್ಚಿ ಹರಳೆಣ್ಣೆ ತಲೆಗೆ ತಟ್ಟಿ, ಅಭ್ಯಂಜನ ತೊಟ್ಟಿಯಲ್ಲಿ ಬಿಸಿ ಬಿಸಿ ನೀರಿನ ಸ್ನಾನ.  ಅದಕ್ಕಾಗಿ ಹಿಂದಿನ ದಿನವೇ ಹಂಡೆಯನ್ನು ತೊಳೆದು, ಬೆಳಗಿ, ಮಾಲಿಂಗನ ಬಳ್ಳಿಯನ್ನು ತಂದು ಹಂಡೆಯ ಕಂಠದ ಸುತ್ತಲೂ ಕಟ್ಟಿರುತ್ತಾರೆ.  ಅದಕ್ಕೆ ಹೊಸ ನೀರು ತುಂಬಿ ಬಿಸಿ ಮಾಡುತ್ತಾರೆ.

ಮಧ್ಯಾಹ್ನ ಬಲಿ ಚಕ್ರವರ್ತಿಯ ಆಗಮನ.  ಒಂದು ಪುಟ್ಟ ಕವಳಿಗೆಯಲ್ಲಿ ಅಕ್ಕಿ, ಗೋಧಿ, ಕಡಲೆಬೇಳೆ ತುಂಬಿ ಮಾವಿನಎಲೆ, ಮೇಲೆ ಸುಲಿದ ತೆಂಗಿನಕಾಯನ್ನಿಟ್ಟು ಬಲೀಂದ್ರನನ್ನು ಮಾಡುತ್ತಾರೆ.  ಈತ ರೈತರ ಇಂದ್ರ, ಕೃಷಿಗೆ ಪ್ರಾಧಾನ್ಯತೆ ನೀಡಿದ ಅರಸ.  ಹೀಗಾಗಿ ಹೊಸ ಫಸಲು ಬರುವ ಸಮಯಕ್ಕೆ ವರ್ಷದಲ್ಲಿ ಮೂರು ದಿನ ಪೂಜೆ.

ನೈವೇದ್ಯಕ್ಕೆ ಸೌತೇಕಾಯಿ ಅಥವಾ ಸಿಹಿಗುಂಬಳಕಾಯಿಯ ಕೊಟ್ಟೆ ಕಡುಬು ಮಾಡುತ್ತಾರೆ.

ಸಂಜೆ ಭೂರೆ ಹಾಯುವ ಆಚರಣೆ ಅಂದರೆ ಸೌತೆಕಾಯಿ, ಕುಂಬಳಕಾಯಿ, ಹೀರೆ, ಅಲಸಂದೆ ಮುಂತಾದ ತರಕಾರಿಗಳು, ಎಳನೀರು, ನಿಂಬೆ, ಅಡಕೆ ಸಿಂಗಾರ, ಅಂಬಾಡಿ ಎಲೆ, ಚೆಂಡುಹೂ ಮುಂತಾದ ಹೂವು ಹಣ್ಣು ಇತ್ಯಾದಿ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಯಾರೇ ಆಗಲಿ ಯಾರದೇ ಮನೆಯ ಹಿತ್ತಿಲು, ತೋಟ, ಗದ್ದೆ, ಹೊಲಗಳಿಂದ ಕದಿಯಬಹುದು.  ಅಂದು ಕದ್ದವರು ಕಳ್ಳರಲ್ಲ.  ಸಿಕ್ಕಿಬಿದ್ದರೆ ಬೆತ್ತದ ಕಡುಬು ಉಂಟು.  ಮರುದಿನ ಪತ್ತೆಯಾದರೆ ಅವರನ್ನು ಶಿಕ್ಷಿಸುವಂತಿಲ್ಲ. ಕೆಲವೊಮ್ಮೆ ಕದ್ದಿದ್ದನ್ನು ಅಲ್ಲಿಯೇ ತಿಂದು ಸಿಪ್ಪೆ ಸಾಕ್ಷಿ ಮಾಡುವವರೂ ಇದ್ದಾರೆ.  ರಾತ್ರಿಯ ಗಾಢಾಂಧಕಾರದ ಇರುಳಿನಲ್ಲಿ ಹಗಲು ಕಂಡ ಮಾಲನ್ನು ಹುಡುಕಿ ಕದಿಯುವುದು, ತೆಂಗಿನರವನ್ನು ಕತ್ತಲಲ್ಲೇ ಹತ್ತಿ ಎಳನೀರನ್ನು ಕುಡಿಯುವುದು, ಕಾವಲು ನಿಂತವರನ್ನು ಬೇಸ್ತು ಬೀಳಿಸಿ ಅವರ ಜಾಗದಲ್ಲೇ ಕದಿಯುವುದು.  ಇವೆಲ್ಲಾ ಇಡೀ ರಾತ್ರಿಯ ತಮಾಷೆಯ ಹುನ್ನಾರಗಳು.   ತುಂಟಹುಡುಗರ ಈ ತುಡುಗಿನಿಂದ ಭಾರೀ ಲಾಭ ಇಲ್ಲ.  ಬೆಳೆದವರಿಗೆ ದೊಡ್ಡ ಲುಕ್ಸಾನೂ ಇಲ್ಲ.  ಸುಬುದ್ಧಿಯ, ಸನ್ನಡತೆಯ ಒಳಗೆಲ್ಲೋ ಅಡಗಿರುವ ಕುಬುದ್ಧಿ, ದುರ್ನಡತೆಗಳನ್ನು ಸಮಾಧಾನ ಮಾಡುವ ಆಚರಣೆ, ಕಳ್ಳ ಕೃಷ್ಣನ ಪ್ರತಿರೂಪ.

ಮರುದಿನ ಅಮಾವಾಸ್ಯೆ ಲಕ್ಷ್ಮೀಪೂಜೆ.  ರೈತರು ಮೊಟ್ಟಮೊದಲ ಫಸಲಿನ ಪೂಜೆ ಮಾಡುತ್ತಾರೆ.  ಜನಪದದಲ್ಲಿ ನರಕ ಚತುರ್ದಶಿ ಮಾಡಲು ದೀಪಾವಳಿ ಆಚರಿಸಲು ಹಿನ್ನೆಲೆಯಾಗಿ ಒಂದು ಕತೆಯಿದೆ.

ನರಕ ಚತುರ್ದಶಿ ಎನ್ನುವುದು ನರಕಾಸುರ ಸತ್ತ ದಿನ.  ಅವನ ಶ್ರಾದ್ಧದ ದಿನ ಅದೆಂತಹ ಹಬ್ಬ.  ಗುಜರಾತ್ ಬಳಿಯ ದ್ವಾರಕೆಯ ಕೃಷ್ಣ, ಅಸ್ಸಾಂ ಬಳಿಯ ಪ್ರಾಗ್ಜೋತಿಷಪುರದ ನರಕಾಸುರನನ್ನು ಕೊಂದ ಕತೆ ಏನದು?  ಇದಕ್ಕೂ ಕೃಷಿಕರಿಗೂ ಏನು ಸಂಬಂಧ!?

ದ್ವಾರಕೆಯ ರಾಜ್ಯ ಪ್ರಖ್ಯಾತವಾದದ್ದೇ ಕೃಷಿ ಮತ್ತು ಹೈನುಗಾರಿಕೆಯಿಂದ.  ಅಂದಿನ ಕಾಲದಲ್ಲಿ ಕೃಷಿ ಮತ್ತು ಹೈನು ಮಹಿಳೆಯರ ಕೈಯಲ್ಲಿತ್ತು.  ದ್ವಾರಕೆಯಲ್ಲಂತೂ ಹಾಲು ಮೊಸರಿನ ಹೊಳೆ.  ಸಾವಿರಾರು ಗೋಪಿಕೆಯರು, ಸುರಸುಂದರಿಯರು, ಆರೋಗ್ಯವಂತರು, ಸದೃಢರು.  ನರಕಾಸುರನಿಗೆ ಈ ಸಮೃದ್ಧಿಯ ಸುದ್ದಿ ಮುಟ್ಟಿತು.  ದ್ವಾರಕೆಗೆ ಬಂದ.  ನದೀತೀರದ ದಟ್ಟ ಕಾಡಿನಲ್ಲಿ ಸೇರಿದ.  ನೀರು ಕುಡಿಯಲು ಬಂದ ಹಸುಕರುಗಳನ್ನ ತಿಂದ.  ನೀರು ಒಯ್ಯಲು ಬಂದ ಸ್ತ್ರೀಯರನ್ನು, ಗೋಪಿಕೆಯರನ್ನು ಅಪಹರಿಸಿದ.  ದ್ವಾರಕೆಯಲ್ಲಿ ಹಸುಗಳು ಕಾಣೆಯಾಗುತ್ತಿರುವ ಆತಂಕ, ಮಹಿಳೆಯರ ಅಪಹರಣದ ಕೋಲಾಹಲ.  ಕೃಷ್ಣ ಬಲರಾಮರು ಪರಾಕ್ರಮದಲ್ಲಿ ಹೆಸರು ಮಾತು.  ಸಾವಿರಾರು ಹಸುಗಳ ಮಾಲೀಕರು.  ಹಸುಗಳ ಕಳವು, ಗೋಪಿಕೆಯರ ಅಪಹರಣದ ಸುಳಿವು ಸಿಕ್ಕಿತು.  ನರಕಾಸುರ ಸಿಕ್ಕಿಬಿದ್ದ.  ಕೈಸಿಕ್ಕ ಬಳ್ಳಿಯನ್ನು ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಕೊಂದರು.  ಅದೇ ಮಾಲಿಂಗನ ಬಳ್ಳಿ. ಈ ಬಳ್ಳಿ ಪೂಜನೀಯವಾಯಿತು.  ಅವನ ಬಂಧನದಲ್ಲಿದ್ದ ಗೋಪಿಕೆಯರಿಗೆ ಕೃಷ್ಣನೇ ಪತಿಯಾದ.  ಹಸುಗಳು ಉಳಿದವು.  ಮಲಿನವಾಗಿದ್ದ ನದಿ ಪವಿತ್ರವಾಯಿತು.  ನೀರಿನ ಪೂಜೆ ಆರಂಭವಾಯಿತು.  ನರಕಾಸುರನನ್ನು ಕೊಂದು ಬಂದ ಕೃಷ್ಣನಿಗೆ ಸನ್ಮಾನ ಸಮಾರಂಭ.  ಊರಿನಲ್ಲಿ ಅದೇ ದೊಡ್ಡ ಹಬ್ಬ.  ಸಾವಿರಾರು ಸ್ತ್ರೀಯರು ಕೃಷ್ಣನ ಹಿಂದೆ.  ಸಾವಿರಾರು ಹಸುಗಳು ಕೃಷ್ಣನ ಮುಂದೆ.  ಇಡೀ ದ್ವಾರಕೆಯೇ ಕೃಷ್ಣನ ಕೊಂಡಾಟದಲ್ಲಿ ಲೀನ.  ಪಾಪ ಇಂದ್ರನ ವಾರ್ಷಿಕ ಹಬ್ಬ ಆಚರಿಸಲು ಮರೆತೇಬಿಟ್ಟರು.  ಇಂದ್ರನಿಗೋ ಯಮಕೋಪ.  ಪಂಚಭೂತಗಳಿಗೆ ಆಜ್ಞೆ ಕೊಟ್ಟ.  ಭೂಮಿ ನಡುಗಿಹೋಯಿತು.  ಗಗನ ಗುಡುಗಿತು.  ಬೆಂಕಿಯ ಮಿಂಚಿನ ಸಂಚಾರ, ಗಾಳಿಯ ಚಂಡಮಾರುತ.  ಮಳೆಯ ಕುಂಭದ್ರೋಣ, ಇಡೀ ದ್ವಾರಕೆಯೇ ಸಮುದ್ರದೊಳಗೆ ಸೇರಿಹೋಗುವಷ್ಟು ಪ್ರವಾಹ.

ಹಸುಗಳೆಲ್ಲಾ ದಿನಾ ವಿಶ್ರಾಂತಿ ಪಡೆಯುತ್ತಿದ್ದ ತಪ್ಪಲಿನ ಗುಡ್ಡದಲ್ಲಿರುವ ಗುಹೆಯತ್ತ ಓಡಿದವು.

ಕೃಷ್ಣನಿಗೂ ಆ ಜಾಗದ ವಿಶೇಷ ನೆನಪಾಯಿತು.  ದನಕಾಯುವವನಿಗೆ ಜನ ಕಾಯುವುದು ಕಷ್ಟವೇ?  ಸಕಲ ಜೀವಜಾತಿಗಳನ್ನೂ ಎತ್ತರದ ಗೋವರ್ಧನಗಿರಿಯ ಗುಹೆಗೆ ಕರೆತಂದ, ಬೆಚ್ಚನೆಯ ಗುಹೆಯಲ್ಲಿರಿಸಿದ.  ಇಂದ್ರ ಎಷ್ಟು ದಿನ ಹಾರಾಡಬಲ್ಲ?

ಅವನ ಆಸ್ಥಾನದ ಬುದ್ಧಿಜೀವಿಗಳು ತಿರುಗಿಬಿದ್ದರು.  ಸೋತ ಇಂದ್ರ. ಜನಪ್ರಿಯನಾದ ಕೃಷ್ಣ.  ಹೀಗೆ ಜೀವನಾಧಾರಕ ಹಸುಗಳ ಜೀವ ಉಳಿಸಿದ್ದು ಜನರ ಮನದಲ್ಲಿ ನಿಂತಿತು.  ಅವುಗಳಿಗೆ ಪೂಜೆ ಪ್ರಾರಂಭ.  ಮುಂದೆ ಹೈನುಗಾರಿಕೆ ಮಹತ್ವ ಇಡೀ ದೇಶಕ್ಕೆ ಹಬ್ಬಿತು.  ದೇಶದಾದ್ಯಂತ ಹಸುಗಳೂ ಪೂಜನೀಯವೆನಿಸಿದವು.  ಹೀಗೆ ಕಾರ್ತಿಕ ಶುಕ್ಲ ಪಾಡ್ಯದ ದಿನ, ಶ್ರೀಕೃಷ್ಣನ ಪ್ರೀತಿಯ ಹಸುಗಳ, ದ್ವಾರಕೆಯ ನಂದಗೋಕುಲದ ಜನರ ಜೀವ ಉಳಿಸಿದ ಹಸುಗಳ ಪೂಜಾ ದಿನವಾಯ್ತು.

ಅಮಾವಾಸ್ಯೆಯ ಸಂಜೆಗೆಲ್ಲಾ ಮನೆ, ಕೊಟ್ಟಿಗೆಗಳ ಬಾಗಿಲಿಗೆಲ್ಲಾ ಮಾವಿನತೋರಣ, ಚೆಂಡುಹೂ, ಪಚ್ಚೆತೆನೆ ಮುಂತಾದ ಹೂಗಳ ಮಾಲೆ ಕಟ್ಟಾಣ.  ಮುಂಜಾನೆ ಹಸುಕರುಗಳ ಮೈ ತೊಳೆಸಿ ಕೆಮ್ಮಣ್ಣು, ಬಿಳಿಜೇಡಿ ಹಚ್ಯಾಣ, ಕೋಡುಗಳಿಗೆ ಕೆಂಪು, ಹಸಿರು ಬಣ್ಣ ಬ್ಯಾಗಡೆ ಜರಿಯ ಸುತ್ತಾಣ, ಪುಂಡಿ ಹುರಿಯ ದಂಡ (ಕೊರಳಪಟ್ಟಿ) ಕಟ್ಟಾಣ.  ಅದಕ್ಕೆ ಗಂಟೆ ಲೊಡಗಗಳ ಜೋಡಣ, ಹೊಸ ಕಣ್ಣೆ ಹಗ್ಗದಿಂದ ಹಸುಕರುಗಳನ್ನು ತಂದು ಗೋಪೂಜೆಯ ಕಂಬಕ್ಕೆ ಕಟ್ಟೋಣ.

ಗೋಪೂಜೆಯ ಕಂಬಗಳಿಗೆ ಚಿತ್ತಾರದ ಸಿಂಗಾರ.  ಗೋವಿನ ಪಾದದ ರಂಗೋಲಿ, ಚೆಂಡುಹೂವಿನ ಮಾಲೆಗಳನ್ನು ಹಸು ಕರುಗಳಿಗೂ ಕಟ್ಟಿ ಗೊಪೂಜೆಯ ಕಂಬಕ್ಕೂ ಕಟ್ಟುತ್ತಾರೆ.

ಅರಿಸಿನ ಕುಂಕುಮ ಹಚ್ಚಿ ಕಲಶದೊಂದಿಗೆ ಆರತಿ ಬೆಳಗಿ, ಸುತ್ತುವರಿದು ನಮಸ್ಕರಿಸುತ್ತಾರೆ.  ಬೆಲ್ಲ, ಕಾಯಿ, ಅಕ್ಕಿ, ಬಾಳೆಹಣ್ಣುಗಳೊಂದಿಗೆ ಅಂದಿನ ವಿಶೇಷ ಭಕ್ಷ್ಯಗಳಾದ ಹೋಳಿಗೆ, ಅಪ್ಪಚ್ಚಿ, ಕಜ್ಜಾಯಗಳನ್ನು ಗೋಗ್ರಾಸವೆಂದು ನೀಡುತ್ತಾರೆ.   ಪೂಜೆಯ ಸಮಯದಲ್ಲಿ ಹಸು ಕರುಗಳು ಸಗಣಿ ಹಾಕಿ ಗಂಜಲ ಹೊಯ್ದರೆ ತುಂಬಾ ಶುಭ ಎನ್ನುವ ನಂಬಿಕೆ.

ಎತ್ತುಗಳನ್ನು ಮೈತೊಳೆಸಿ, ಕೆಮ್ಮಣ್ಣು, ಬಿಳಿಜೇಡಿ ಹಚ್ಚಿ, ಕೋಡುಗಳಿಗೆ ಬಣ್ಣ ಬಳಿದು ಬಣ್ಣದ ರಿಬ್ಬನ್ ಕಟ್ಟಿ ಅಲಂಕರಿಸುತ್ತಾರೆ.  ಚೆಂಡುಹೂ, ಸೇವಂತಿಗೆ ಹೂಗಳಿಂದ, ಬೆಂಡಿನಿಂದ, ನವಿಲುಗರಿಗಳಿಂದ ಅಲಂಕರಿಸಿದ ಬಿದಿರಿನ ಬಾಸಿಂಗವನ್ನು ಕೋಡುಗಳಿಗೆ ಕಟ್ಟುತ್ತಾರೆ.  ಮನೆಯ ಬಾಗಿಲಿನಲ್ಲಿ ಹೆಂಗಳೆಯರಿಂದ ಜೋಡೆತ್ತುಗಳಿಗೆ ಆರತಿ.  ಊರತುಂಬಾ ಮೆರವಣಿಗೆ.  ಊರ ಜನರೆಲ್ಲಾ ಸೇರಿ ಸುತ್ತುವಾರಿ ಪೂಜೆ, ಆರತಿ, ಅಕ್ಷತೆ, ಕಾಯಿಹಣ್ಣು ನೈವೇದ್ಯ ಮಾಡುತ್ತಾರೆ.  ಕಾಯಿ ಒಡೆಯುವ ಸ್ಪರ್ಧೆ, ಪಟಾಕಿ, ಸಿಡಿಮದ್ದುಗಳ ಆರ್ಭಟ.  ಎಲ್ಲಾ ಮುಗಿದ ಮೇಲೆ ಜಾನುವಾರುಗಳನ್ನು ಮೇಯಲು ಗೋಮಾಳಕ್ಕೆ ಅಟ್ಟುತ್ತಾರೆ.

ಹಸುಕರು, ಎತ್ತು, ಎಮ್ಮೆಗಳನ್ನು ಗೋಮಾಳಕ್ಕೆ ಅಟ್ಟುವ ಮೊದಲು ಅವುಗಳ ಕೊರಳಿಗೆ ಹಸಿ ಅಡಕೆ, ಸಿಂಗಾರ, ಪಚ್ಚೆತೆನೆ, ತುರಾರೊಟ್ಟಿ ಹಾಗೂ ಅಂಬಾಡಿ ಎಲೆಗಳನ್ನು ಬಾಳೆಪಟ್ಟೆಯಲ್ಲಿ ಕಟ್ಟಿ ಕೊರಳಿಗೆ ಹಾಕುತ್ತಾರೆ.  ಪಡ್ಡೆಹುಡುಗರು ಅವುಗಳನ್ನು ಅಟ್ಟಿಸಿಕೊಂಡುಹೋಗಿ ಕೊರಳಿನಿಂದ ಹರಿದು ತರಬೇಕು.  ಅವು ಹುಚ್ಚು ಹಿಡಿದು ಓಡುವಂತೆ ಜಾಗಟೆ, ಪಟಾಕಿಗಳನ್ನು ಹೊಡೆಯುತ್ತಿರುತ್ತಾರೆ.  ಯಾರು ಹೆಚ್ಚು ಕೊರಳದಂಡೆಯನ್ನು ಹರಿದು ತರುತ್ತಾರೋ ಅವರಿಗೆ ಆ ವರ್ಷ ಜಾನುವಾರುಗಳ ಕೃಪೆಯಿದೆ ಎನ್ನುವ ನಂಬಿಕೆ.

ಊರವರೆಲ್ಲಾ ಸೇರಿ ಹೊಸತು ತರಲು ಹೊರಡುತ್ತಾರೆ.  ಮನೆಯ ಯಜಮಾನ ಭೂತಗಣಗಳಿಗೆ, ಗ್ರಾಮದೇವತೆಗೆ ನೈವೇದ್ಯ ಮಾಡುತ್ತಾನೆ.  ಗೆಡ್ಡೆಗೇರು ಕಾಯಿ ಫಸಲು ತುಂಬಾ ಬಂದರೆ ಆ ವರ್ಷದ ಫಸಲೆಲ್ಲಾ ಹೆಚ್ಚು ಎನ್ನುವ ನಂಬಿಕೆ.

ಮನೆಯಲ್ಲಿರುವ ಕಡೆಗೋಲು (ಮೊಸರು ಕಡೆವ ಸಾಧನ), ಒರಳು, ಒಲೆ, ಒನಕೆ, ಬಾವಿ, ವಾಸ್ತುಕಂಬ, ಹೆಬ್ಬಾಗಿಲು, ಹೊಸ್ತಿಲು, ಕೃಷಿ ಉಪಕರಣಗಳು, ಕತ್ತಿ, ಕುಡುಗೋಲು, ಸುತ್ತಿಗೆ, ಸಗಣಿತಟ್ಟೆ, ಕಸಬರಿಗೆ, ತಕ್ಕಡಿ, ಲಾಟೀನ್, ಸೈಕಲ್ ಮುಂತಾದ ವಾಹನಗಳು ಹೀಗೆ ಮನೆಯಲ್ಲಿರುವ, ನಮಗೆ ದಿನನಿತ್ಯ ಉಪಕರಿಸುವ ಎಲ್ಲಾ ವಸ್ತುಗಳಿಗೂ ಎಲೆ ಅಡಕೆಯಿಟ್ಟು, ಹೋಳಿಗೆ, ಕಜ್ಜಾಯ ನೈವೇದ್ಯ ಮಾಡಿ ಆರತಿ ಎತ್ತಿ ಸುತ್ತುವಾರಿ ಪೂಜೆ ಮಾಡುತ್ತಾರೆ.  ಆಮೇಲೆ ಮನೆಯವರ ಊಟ, ವಿಶ್ರಾಂತಿ.

ಸಂಜೆ ಗೋಮಾಳದಿಂದ ಎತ್ತುಗಳನ್ನು ಕರೆತಂದು ಬಾಸಿಂಗದ ಅಲಂಕಾರ ಮಾಡುತ್ತಾರೆ.  ಊರ ಹೊರಗಿನ ಗುಡಿ ಎದುರು ಜಮಾವಣೆ, ಊರಿನ ಸಮಸ್ತರೂ ಅಲ್ಲಿ ಸೇರುತ್ತಾರೆ.  ಕಬಡ್ಡಿ, ಉಪ್ಪಾಟ ಮುಂತಾದ ಗ್ರಾಮೀಣ ಆಟಗಳು, ಸ್ಪರ್ಧೆಗಳು ನಡೆಯುತ್ತವೆ.  ಬಾಸಿಂಗದ ಎತ್ತುಗಳನ್ನು ಊರೆಲ್ಲಾ ಸುತ್ತಿಸಿ ಮೆರವಣಿಗೆಯಲ್ಲಿ ಮನೆಗ ಹಿಂತಿರುಗುತ್ತಾರೆ.  ಊರು ತಿರುಗಿ ದಣಿದು ಬಂದ ಎತ್ತುಗಳಿಗೆ ದೃಷ್ಟಿ ತಾಗದಂತೆ ಕೆಂಪು ಕುಂಕುಮದ ಹಾನ (ನೀರು) ಮಾಡಿ ಚೆಲ್ಲುತ್ತಾರೆ.  ಆಮೇಲೆ ಕಾಯಿ ಒಡೆದು ಆರತಿ ಬೆಳಗುತ್ತಾರೆ.  ಕೊಟ್ಟಿಗೆ ಹಸುಕರುಗಳಿಗೂ ಆರತಿ ಬೆಳಗುತ್ತಾರೆ.

ರಾತ್ರಿಯವರೆಗೆ ಪೂಜಿಸಿದ ಬಲೀಂದ್ರನನ್ನು ಬಾವಿಕಟ್ಟೆಯ ಬಳಿ ಪೂಜಿಸಿ, ಪಾತಾಳಕ್ಕೆ ಕಳುಹಿಸುತ್ತಾರೆ.  ಪುಂಡಿಕೋಲುಗಳಿಗೆ ಬಟ್ಟೆ ಸುತ್ತಿ ಹರಳೆಣ್ಣೆಯಲ್ಲಿ ಅದ್ದಿ ಮನೆಯ ಸುತ್ತಲೂ ದೀಪ ಹಚ್ಚುತ್ತಾರೆ.  ಕೆಲವರು ಕೊಟ್ಟಿಗೆಯ ಹೊಸ್ತಿಲಲ್ಲಿಟ್ಟು ಪೂಜಿಸಿ ದೀಪ ಹಚ್ಚುತ್ತಾರೆ.  ಮನೆಯ ಮಾಡಿಗೆ ಆಕಾಶಬುಟ್ಟಿ, ಹೊರಗಿನ ಗೋಡೆಯಲ್ಲಿರುವ ಗೂಡಿಗೆ ಹಣತೆ ದೀಪ ಇಡುತಾರೆ.  ರಾತ್ರಿ ಯುವಕರು ಅಂಟಿಗೆ-ಪಂಟಿಗೆ ಹಾಡುತ್ತಾ ದೇವಸ್ಥಾನದಿಂದ ಹೊರಟು ಊರೂರು ಸುತ್ತುತ್ತಾರೆ.

ಇಲ್ಲಿಗೆ ದೊಡ್ಡಹಬ್ಬ ಮುಗಿಯಲಿಲ್ಲ!  ಪೂಜೆಗಿಟ್ಟ ಗಂಗಾಜಲವನ್ನು ದೀಪಾವಳಿ ಹಬ್ಬದ ಮರು ಬೆಳಗಿನ ಜಾವ, ಅರುಣೋದಯದಲ್ಲಿ ಗೊಬ್ಬರದ ಗುಂಡಿಗೆ ಸುರಿಯುತ್ತಾರೆ.  ಅಲ್ಲಿ ಗೊಬ್ಬರವನ್ನು ಪೂಜಿಸುತ್ತಾರೆ.  ಅದರಿಂದ ಗೊಬ್ಬರ ಫಲವತ್ತಾಗುತ್ತದೆನ್ನುವ ನಂಬಿಕೆ.  ಅಂದು ವರ್ಷತೊಡಕು ಹಬ್ಬ.  ಯಾವುದೇ ಕೃಷಿ ಕೆಲಸ, ಶುಭ ಕೆಲಸಗಳಿಗೆ ಬಿಡುವು, ಐದನೆಯ ದಿನ ಅಳಿಯಂದಿರು ಬರುವ ಹಬ್ಬ.  ಕಾರ್ತಿಕ ಮಾಸ ಪೂರ್ತಿ ಹಾಗೂ ಮಾರ್ಗಶಿರ ಮಾಸದ ಷಷ್ಠಿಯವರೆಗೆ ಮನೆಯ ಮುಂದೆ ದೀಪ ಹಚ್ಚಿಡುವುದು ಪದ್ಧತಿ.  ಪ್ರತಿದಿನ ಪಾಳಿಯಲ್ಲಿ ದೇವಸ್ಥಾನದ ದೀಪೋತ್ಸವ.

ಇತ್ತೀಚೆಗೆ ಒಂದಿಷ್ಟು ಆಚರಣೆಗಳು ಮರೆಯಾಗಿವೆ.  ಹೊಸ ಹುಡುಗರಲ್ಲಿ ಸಂಪ್ರದಾಯ ಆಚರಣೆಗಳ ಕುರಿತಾದ ಆಸಕ್ತಿ ಮಾಯವಾಗಿದೆ.  ಬರದ ನಷ್ಟ, ಹೆಚ್ಚುತ್ತಿರುವ ದಿನಸಿಗಳ ಖರ್ಚುವೆಚ್ಚಗಳನ್ನು ಸರಿದೂಗಿಸಲು ಕೆಲವು ಬಾಬ್ತುಗಳು ಬಿಟ್ಟಿವೆ.  ಬಡಕುಟುಂಬಗಳಲ್ಲಿ ಕೆಲವು ಶಾಸ್ತ್ರದ ಲೆಕ್ಕಕ್ಕಿವೆ.  ಹಬ್ಬಗಳ ಪರಿಕಲ್ಪನೆಯೇ ಛಿದ್ರವಾಗಿದೆ.  ಕೃಷಿಯೇ ಮೂಲವಾಗಿರುವ ಇಂತಹ ಹಬ್ಬಗಳೆಲ್ಲಾ ರೈತರ ಮನಸ್ಸಿನ ನೆಮ್ಮದಿಗೆ, ಹೊಸ ಹುರುಪಿಗೆ, ಅವರ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿರುತ್ತವೆ.  ಹೊಲಗಳಲ್ಲಿ ತಿಂಗಳಾನುಗಟ್ಟಳೆ ಕೆಲಸ ಮಾಡಿದ ರೈತರಿಗೆ ಕೃತಜ್ಞತೆ ಹೇಳಲು ಈ ಹಬ್ಬಗಳೇ ಕಾರಣ.  ಪರಸ್ಪರ ಸಂಬಂಧ, ಆತ್ಮೀಯತೆ ಹೀಗೆ ಏನೆಲ್ಲಾ ಬಲಿಕೊಟ್ಟು ಎಲ್ಲವೂ ಕೇವಲ ಹಣಕ್ಕಾಗಿ, ಹಕ್ಕುಗಳಿಗಾಗಿ, ಅಧಿಕಾರಕ್ಕಾಗಿ ಎನ್ನುವ ಜಾಗತೀಕರಣದ ಅದೃಶ್ಯ ಕಬಂಧಬಾಹುಗಳಲ್ಲಿ ಸಿಲುಕಿ ಹಳ್ಳಿಗಳು ಹಳ್ಳಿಗಳಾಗಿ ಉಳಿದಿಲ್ಲ.  ಹಬ್ಬಗಳು ಹಬ್ಬಗಳಾಗಿ ಉಳಿದಿಲ್ಲ.  ಆದರೆ ಜನಪದರ, ಕೃಷಿಕರ ಕೆಲಸ ಮತ್ತು ಆಚರಣೆಗಳೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಏರುತ್ತಾ, ಇಳಿಯುತ್ತಾ ಉಳಿದುಕೊಂಡಿರುತ್ತವೆ.  ಖಂಡಿತ ನಶಿಸಿಹೋಗುವುದಿಲ್ಲ ಎನ್ನುವುದನ್ನು ಜನಪದ ಸಿದ್ಧಾಂತಗಳು ಪ್ರತಿಪಾದಿಸುತ್ತವೆ.

…..ಮುಗಿಯಿತು….

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*