ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅವಸಾನದ ಅಂಚಿನಲ್ಲಿರುವ ಬೇಗೂರು ಕೆರೆ

ಮನಿಗೆ ಹಂಡಿಯೊಳಗಿನ ನೀರು ಹೆಂಗ ಆಸರೆನೋ ಹಂಗ ಊರಿಗೆ ಊರ ಮುಂದಿನ ಕೆರಿ

ನಾಗರೀಕತೆಗಳು ಮುಂದುವರಿದಂತೆ ಅರಣ್ಯಗಳು ಹಿಮ್ಮೆಟ್ಟುತ್ತಿವೆ. ಮರುಭೂಮಿಗಳು ನಮ್ಮನ್ನು ಹಿಂಬಾಲಿಸುತ್ತವೆ ಎನ್ನುವ ಮಾತಿಗ ಈ ಮೊದಲು ಗಾರ್ಡನ್ ಸಿಟಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಈಗ ಕಾಂಕ್ರೀಟ್ ಕಾಡಾಗಿರುವುದು ಒಂದು ನೈಜ ಉದಾರಹಣೆಯಷ್ಟೆ.

ಕೈಗಾರಿಕೀಕರಣ ಮತ್ತು ನಗರೀಕರಣದಿಂದಾಗಿ, ಅಭಿವೃದ್ದಿಯತ್ತ ದಾಪುಗಾಲಿಡುತ್ತಿರುವ ಬೆಂಗಳೂರು ಉದ್ಯೋಗ ಅರಸಿ ಬರುವ ಎಲ್ಲರಿಗೂ ಸಹ ನೆಲೆಯೊದಗಿಸಿದೆ. ಆದರೆ, ಆ  ಭರಾಟೆಯಲ್ಲಿ ಇಲ್ಲಿನ ಜನಸಂಕುಲ ಮಾತ್ರ ಮೂಲಭೂತ ಸೌಕರ್ಯದ ನೆಪದಲ್ಲಿ ಪ್ರಕೃತಿಯನ್ನು ನಾಶಮಾಡ  ಹೊರಟಿರುವುದು ನಿತ್ಯದ  ಮತ್ತು ದುರಂತದ ಸಂಗತಿಯಾಗಿದೆ. ಬೆಂಗಳೂರಿನಲ್ಲಿ ಹಳೆಯ ಕೆರೆಗಳ ಹೆಸರು ದಾಖಲಾತಿಗಳಲ್ಲಿವೆಯೇ ಹೊರತು, ಅವು ನಮಗೆ ಕಾಣಸಿಗುವುದು ಅಪರೂಪ, ಅಥವಾ, ಇಲ್ಲವೇ ಇಲ್ಲ ಎಂತಲೂ ಹೇಳಬಹುದು. ಅಂತಹ ಕೆರೆಗಳ ಸಾಲಿಗೆ ಸೇರ ಹೊರಟಿರುವ ಮತ್ತೊಂದು ಕೆರೆ, ಬೆಂಗಳೂರಿನ ದಕ್ಷಿಣದ ಬೇಗೂರು ಕೆರೆ. ಈ ಕೆರೆಯನ್ನು  ಗಂಗರು-ಚೋಳರು ನಿರ್ಮಿಸಿದರೆಂಬ ಪ್ರತೀತಿ ಇದೆ.

begur lake - for mukhaputaಬೇಗೂರಿನ ಕೆರೆಯು ಬೆಂಗಳೂರಿನ ಅತಿ ಹಳೆಯ ಕೆರೆಗಳಲ್ಲೊಂದು, ಇದರ ಒಟ್ಟೂ ವಿಸ್ತಾರ ಸರಿ ಸುಮಾರು ೧೩೮ ಹೆಕ್ಟೇರ್‌ಗಳಷ್ಟು ಇದೆ (ಹಳೆಯ ದಾಖಲೆಗಳ ಪ್ರಕಾರ ಸರ್ವೆ ನಂ ೯೪). ಕೆರೆಯು ಸುಮಾರು ೧೩೦೦ ವರ್ಷಗಳಷ್ಟು ಹಳೆಯದಾದ ಶ್ರೀ ನಾಗನಾಥೇಶ್ವರ ದೇವಾಲಯದ ಪಕ್ಕದಲ್ಲೇ ಇದೆ. ೨೦೦೦ನೇ ಇಸವಿಯವರೆಗೂ ಕೆರೆ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿತ್ತಲ್ಲದೆ, ಪ್ರವಾಹ ಪರಿಸ್ಥಿತಿಯನ್ನು ಉಂಟುಮಾಡಬಲ್ಲ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಅದೆಲ್ಲವೂ ಈಗ ನೆನಪು ಮಾತ್ರ.

ಆದರೆ, ಈಗ ಕೆರೆಯ ವಿಸ್ತಾರ ಅರ್ಧಕ್ಕಿಂತ ಹೆಚ್ಚು ಭಾಗ ಕಡಿಮೆಯಾಗಿದೆ. ಇದಕ್ಕೆ ಒತ್ತುವರಿ ಪ್ರಮುಖ ಕಾರಣ. ಸ್ಥಳೀಯರು ಕೆರೆ ದಡಕ್ಕೆ ತಾಗಿಕೊಂಡೇ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಜತೆಗೆ ಕೆರೆ ಪಕ್ಕದಲ್ಲಿಯೇ ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಇದರಿಂದಾಗಿ, ಕೆರೆಗೆ ಹರಿದು ಬರುವ ನೀರಿನ ಪ್ರಮಾಣವೂ ಕಡಿಮೆ ಆಗಿದೆ. ಬದಲಾಗಿ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಿಂದ ಬಳಕೆಯಾದ ನೀರು ಕೆರೆಯನ್ನು ಸೇರುತ್ತಿದೆ. ಇದು ಕೆರೆಯ ನೀರನ್ನು ಸಾಕಷ್ಟು ಮಲಿನಗೊಳಿಸುತ್ತಿರುವುದರಿಂದ, ಜಲಚರಗಳ ಪ್ರಾಣಕ್ಕೂ ಸಂಚಕಾರ ಉಂಟಾಗುತ್ತಿದೆ. ಮೇಲಿನಿಂದ ಶುದ್ಧವಾದ ನೀರಿರುವಂತೆ ಕಂಡುಬಂದರೂ, ಕೆರೆ ತನ್ನ ಒಡಲಿನಲ್ಲಿ ಮಲಿನತೆಯನ್ನು ಬಚ್ಚಿಟ್ಟುಕೊಂಡಿದೆ.  ರಾಜಕಾಲುವೆ  ಪಕ್ಕದ ಹೊಂಗಸಂದ್ರ ಮತ್ತು ಬೇಗೂರಿನಿಂದ ಹರಿದುಬರುವ ಚರಂಡಿಯ ನೀರೂ ಸಹ ಕೆರೆ ಮಲಿನವಾಗಲು ಮತ್ತೊಂದು ಕಾರಣ.

begur lake - gh article 2ಈ ಕೆರೆಗೆ ಯಾವುದೇ ರೀತಿಯ ತಡೆಗೋಡೆಯೂ ಇಲ್ಲ. ಇದು ಒತ್ತುವರಿಗೆ ಮಾತ್ರವಲ್ಲದೇ, ಸುತ್ತಲಿನ ಪ್ರದೇಶಗಳಿಂದ ತಂದ ಕಸ ಸುರಿಯಲು, ಕಟ್ಟಡಗಳ ಅವಶೇಷಗಳನ್ನು ಹಾಕಲು ಅವಕಾಶದ ಬಾಗಿಲನ್ನೇ ತೆರೆದಂತಾಗಿದೆ. ಕೆರೆಗೆ ತಾಗಿಯೇ ರಸ್ತೆ ಕೂಡ ಇದೆ. ವಾಹನ ಸವಾರರು ಚೂರು ಎಚ್ಚರ ತಪ್ಪಿದರೂ, ಕೆರೆಗೆ ಬೀಳುವುದು ನಿಶ್ಚಿತ. ಇದನ್ನು ತಪ್ಪಿಸುವುದಕ್ಕಾಗಿ ಕಾಟಾಚಾರಕ್ಕೆ ಒಂದು ಭಾಗಕ್ಕೆ ತಂತಿ ಬೇಲಿ ಹಾಕಲಾಗಿದೆ. ಅದೂ ಅರ್ಧದಷ್ಟು ಭಾಗ ಕಿತ್ತು ಹೋಗಿದೆ. ತಡೆಗೋಡೆ ಇಲ್ಲದಿರುವುದು ಸಾಕಷ್ಟು ಜನರ ನಿತ್ಯಕರ್ಮದ ತಾಣವೂ ಆಗಿದೆ.

 “ಕೆರೆಯಯಲ್ಲಿ ತುಂಬಿರುವ ಹೂಳನ್ನು ತೆಗೆದು, ಸ್ವಚ್ಛಗೊಳಿಸಿ, ಸುತ್ತಲೂ ಜನರಿಗೆ ವಾಕಿಂಗ್ ಮಾಡಲು ಅನುವಾಗುವ ಹಾಗೆ ಉದ್ಯಾನವನದ ರೀತಿಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಿದ್ದರೆ ಒಳ್ಳೆಯದಿತ್ತು. ಇದರಿಂದ ಕೆರೆಗೆ ಕಸ ಹಾಕುವುದು ಕಡಿಮೆ ಆಗುತ್ತಿತ್ತೇನೋ” ಎನ್ನುತ್ತಾರೆ ಸ್ಥಳೀಯರು.

begur lake - gh article 3 “ಇದೆಲ್ಲದರ ಜೊತೆಗೆ, ಬೇಗೂರು ಸುತ್ತಲಿನ ಪ್ರದೇಶದಲ್ಲಿ ನೀರಿನ ಅಭಾವ ಸಾಕಷ್ಟಿದೆ. ಇದರ ಪ್ರಯೋಜನ ಪಡೆಯುತ್ತಿರುವವರು ಖಾಸಗಿ ಟ್ಯಾಂಕರ್‌ನವರು. ಅವರು ಬೇಕಾಬಿಟ್ಟಿ ಕೆರೆಯ ನೀರನ್ನು ತುಂಬಿಸಿಕೊಂಡು ಮಾರಾಟ ಮಾಡುತ್ತಾರೆ. ಬೇಸಿಗೆಯಲ್ಲಂತೂ ಇವರನ್ನು ತಡೆಯುವವರೇ ಇಲ್ಲ. ಇದು ಕೂಡ ಕೆರೆಗೆ ಮಾರಕವಲ್ಲವೇ? ಜೊತೆಗೆ, ಮಲಿನಗೊಂಡ ಈ ಕೆರೆಯ ನೀರನ್ನು ಬಳಕೆ ಮಾಡಿದರೆ, ಜನರ ಆರೋಗ್ಯಕ್ಕೂ ತೊಂದರೆಯಲ್ಲವೇ?,” ಎನ್ನುವುದು ಸ್ಥಳೀಯರಾದ ಶ್ರೀನಿವಾಸ ಅವರ ಪ್ರಶ್ನೆ.

ಈ ಬೇಗೂರು ಕೆರೆಯ ಹಳೆಯ ವೈಭವವನ್ನು ಮರಳಿಸುವ ಹಲವಾರು ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಲೂ ಇದೆ. ಕೆರೆಯ ಸುತ್ತಲಿನ ಜನರಿಗೆ ಕೆರೆಗಳ ಮಹತ್ವ, ಅವುಗಳನ್ನು ಪುನಶ್ಚೇತನಗೊಳಿಸುವುದರ ಉದ್ದೇಶ, ಪ್ರಾಮುಖ್ಯತೆ ಮತ್ತದರ ಲಾಭಗಳ ಕುರಿತಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಇದರಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿದೆ. ಆದರೂ ಸ್ಥಳೀಯರು ಕೆರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗದಿರುವುದು ಬೇಸರದ ಸಂಗತಿ.

“ನಮ್ಮ ಕಾಲದಲ್ಲಿ ಬೇಸಿಗೆಯಲ್ಲೂ ಕೆರೆ ನೀರಿನಿಂದ ತುಂಬಿರುತ್ತಿತ್ತು. ಬೇಸಿಗೆಯಲ್ಲೂ ಬೆಳೆ ಬೆಳೆಯಲೂ ಸಾಕಷ್ಟು ನೀರು ನೀರಿರುತ್ತಿತ್ತು. ಆದರೆ ಕಳೆದ ದಶಕದಿಂದೀಚೆಗೆ ಕೆರೆಯ ವಿಸ್ತಾರ ಕಡಿಮೆ ಆಗಿದೆ. ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲದ ಪ್ರಮಾಣವೂ ತೀರ ಕುಸಿದಿದೆ. ಇದರಿಂದಾಗಿ ಸಾವಿರಕ್ಕಿಂತ ಹೆಚ್ಚು ಅಡಿ ಬಾವಿ ಕೊರೆದರೂ ನೀರು ಮಾತ್ರ ದೊರೆಯುತ್ತಿಲ್ಲ” ಎನ್ನುತ್ತಾರೆ ವಯೋವೃದ್ಧರಾದ ಮುನಿಸಾಮಪ್ಪನವರು.

ಈಗಾಗಲೇ ನಾವು ಕೆರೆಯ ರಕ್ಷಣೆಗಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಕೆರೆಯ ಸುತ್ತ ಹಾಳಾಗಿರುವ ತಂತಿ ಬೇಲಿಯನ್ನು ದುರಸ್ತಿಮಾಡುವ ಕೆಲಸಕ್ಕೆ ಚಾಲನೆ ಸಿಗಬೇಕಿದೆ. ಕೆರೆಯ ಒತ್ತುವರಿಯಾದ ಪ್ರದೇಶವನ್ನು  ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವದು ಹಾಗೆಯೇ  ಕೆರೆಯ ನೀರನ್ನು ಸ್ವಚ್ಚಗೊಳಿಸಲು ಬೇಕಾದ ಎಲ್ಲಾತರಹದ ಪ್ರಯತ್ನವನ್ನು ನಮ್ಮ ಕಡೆಯಿಂದ ಮಾಡುವೆವು  ಎನ್ನುವ ಬಿಬಿಎಂಪಿ, ಬಿಡಬ್ಲುಎಸ್‌ಎಸ್‌ಬಿ, ಬಿಡಿಎ, ಬಿಎಲ್‌ಡಿಎಗಳ ಮಾತುಗಳು ಕೇವಲ ಕೇಳಲಷ್ಟೇ ಹಿತವಾಗಿದೆಯೇ ಹೊರತು, ಅದು ನಿಜವಾಗಲೂ ಅನುಷ್ಠಾನಕ್ಕೆ ಬರುವದು ಕನಸಿನ ಮಾತಾಗಿರುವದು  ಬೇಸರ ಮತ್ತು ಕಳವಳದ ಸಂಗತಿ. ಮೊನ್ನೆಯಷ್ಟೇ ಈ ಎಲ್ಲ ಮಂಡಳಿಗಳು ಸಭೆ ಸೇರಿ ಬರುವ ೬ ತಿಂಗಳಿನ ಒಳಗಾಗಿ ಕೆರೆಗಳ ಸ್ವಚ್ಛತೆಗಳ ಮತ್ತು ನಿರ್ವಹಣೆಗಳ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭರವಸೆ ನೀಡಿವೆ. ಈ ಭರವಸೆ ನಿಜವೋ ಸುಳ್ಳೋ ಎನ್ನುವದನ್ನು ಕಾದು ನೋಡಬೇಕಿದೆಯಷ್ಟೇ.

ಮನಿಗೆ ಹಂಡಿಯೊಳಗಿನ ನೀರು  ಹೆಂಗ ಆಸರೆನೋ ಹಂಗ ಊರಿಗೆ ಊರ ಮುಂದಿನಕೆರಿ ಅನ್ನೋ ಮಾತಿತ್ತು. ಆದರೆ, ಇದು ಸ್ವ-ಇಚ್ಚಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯದಿಂದ  ಬರೀ ಮಾತಾಗಿ ಉಳಿದಿದೆ ಅಷ್ಟೇ. ಇದೇ ಬೇಗೂರಿನ ಕೆರೆಯನ್ನ ಸ್ವಚ್ಛಗೊಳಿಸಿದರೆ, ಈಗಾಗಲೇ ನೀರಿನ ಕೊರತೆ ಅನುಭವಿಸುತ್ತಿರುವ ಬೇಗೂರಿನ ಮನೆ-ಮನೆಗೂ ಸ್ವಚ್ಛ ಕುಡಿಯುವ ನೀರನ್ನು ಪೂರೈಸಬಹುದಲ್ಲವೇ? ಜೊತೆಗೆ ಅಂತರ್ಜಲ ಮಟ್ಟವನ್ನೂ ಸಹ ಕಾಪಾಡಿಕೊಳ್ಳಬಹುದಲ್ಲವೇ?  ಇವೆಲ್ಲವನ್ನು ಮಾಡಲು, ಅರೆನಿದ್ರಾವಸ್ಥೆಯಲ್ಲಿರುವ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ, ಮುಂದಿನ ಪೀಳಿಗೆಗೆ ಕೆರೆ ಎಂದರೆ ಹೀಗಿತ್ತು ಎಂದು ಕೇವಲ ಚಿತ್ರಗಳಲ್ಲಿ ತೋರಿಸಬೇಕಾದ ಪರಿಸ್ಥಿತಿ ಬಂದೊದಗೀತು ಜೋಕೆ!

 ಚಿತ್ರ-ಲೇಖನ: ಗಣಪತಿ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*