ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಮತ್ತು ಹಬ್ಬಗಳು

ಆದ್ರೆ ಮಳೆಹಬ್ಬ, ಆಗಲಿ ನೀರುಳಿಸುವ ಹಬ್ಬ

ಮಳೆ ಬರುವುದೇ ರೈತನಿಗೆ ಹಬ್ಬ. ಹೊಲ ಬಿತ್ತಿದ ರೈತ, ಮಳೆರಾಯ ಇಂದು ಬಂದಾನೆ… ನಾಳೆ ಬಂದಾನೆ… ಎಂದು ಕಾಯುತ್ತಿರುತ್ತಾನೆ. ಕಪ್ಪು ಮೋಡಗಳು ಕಿತ್ತೆದ್ದು ಬರುವುದನ್ನೇ ಎದುರು ನೋಡುತ್ತಿರುತ್ತಾನೆ. ಉತ್ತರಕರ್ನಾಟಕದಲ್ಲಿ ಮಿರುಗನ ಮಳೆ (ಮೃಗಶಿರಾ) ಹಬ್ಬಕ್ಕೆ ಸಿದ್ಧ ಮಾಡಿಕೊಂಡರೆ, ಮಲೆನಾಡಿನಲ್ಲಿ ಆದ್ರೆ ಮಳೆ (ಆರಿದ್ರೆ) ಹಬ್ಬಕ್ಕೆ ಅಣಿಯಾಗುತ್ತಾರೆ.         

ಸಾಗರ ಪ್ರಾಂತ್ಯದಲ್ಲಿ ಪ್ರಮುಖ ರೈತ ಜನಾಂಗ ದೀವರದು. ಗದ್ದೆ-ಹೊಲಗಳ ಬೇಸಾಯ ಜೀವನಕ್ಕೆ, ಉಪಕಸುಬು ಹೆಂಡದ ತಯಾರಿ. ಮನೆ-ಹೊಲಗಳ ಕೆಲಸ, ನಿರ್ವಹಣೆಯಲ್ಲಿ ಹೆಣ್ಣುಮಕ್ಕಳದೇ ಸಿಂಹಪಾಲು. ಆದರೆ ಮಳೆ ಹಬ್ಬ ಗಂಡಸರದು !

nira nelege daari - for portal article - krushi habbaಆದ್ರೆ ಮಳೆಹಬ್ಬವು ದಂಡಾಡಿ ಬಂದವರ ಹಬ್ಬ ಎನ್ನುತ್ತಾರೆ ದೀವರ ನಾಯಕ ಕುಗ್ವೆ ಶಿವಾನಂದ. ೧೩ನೇ ಶತಮಾನದಲ್ಲಿ ಬಳ್ಳಾರಿಯ ಕಂಪ್ಲಿಯನ್ನು ಬೇಡರ ದೊರೆ ಕುಮಾರರಾಮ ಆಳುತ್ತಿದ್ದ. ದೆಹಲಿಯ ಮೊಗಲ್ ದೊರೆ ಆತನ ರುಂಡವನ್ನು ಬಯಸುತ್ತಾನೆ.   ಕುಮಾರರಾಮ ವೀರಾವೇಶದಿಂದ ಎದುರಿಸಿ ಹೋರಾಡಿ ದಂತಕತೆಯಾಗುತ್ತಾನೆ. ಅವನೊಂದಿಗೆ ಹೋರಾಡಿ ವೀರಮರಣ ಹೊಂದಿದವರ ಸಂತತಿ ಅವನ ಮುಖವಾಡ ಮಾಡಿ ದೇವನೆಂದು ಪೂಜಿಸುತ್ತಾರೆ. ಮಲೆನಾಡಿನಲ್ಲಿ ಅವನ ಸೈನ್ಯದಲ್ಲಿದ್ದವರೆಂದು ನಂಬುವ ಹಳೇಪುರ (ದೀವರು) ಜನಾಂಗದವರು. ಆದ್ರೆಮಳೆಯ ಸಮಯದಲ್ಲಿ ಹಬ್ಬ ಮಾಡುತ್ತಾರೆ. ಯುದ್ಧಕ್ಕೆ ಹೋಗುವ, ಕಾದಾಡಿ ಮೆರೆವ, ಬೆಂಕಿಗೆ ಹಾರುವ ಸಾಂಕೇತಿಕ ಆಚರಣೆಗಳನ್ನು ನಡೆಸುತ್ತಾರೆ. ಬಹುಶಃ ಏನೆಲ್ಲಾ ಘಟನೆಗಳು ಆದ್ರೆಮಳೆಯ ಕಾಲದಲ್ಲೇ ನಡೆದಿರಬಹುದು. ಹೀಗಾಗಿ ಈ ಹಬ್ಬ ಬಂದಿದೆ ಎನ್ನುವ ಊಹೆ ಕುಗ್ವೆ ಶಿವಾನಂದರದು.

ಆದ್ರೆಮಳೆ ಭೂಮಿಯನ್ನು ತಂಪುಗೊಳಿಸುವ ಮಳೆ. ಭತ್ತದ ಬಸಿರನ್ನು ಆರೈಕೆ ಮಾಡುವ ಮಳೆ. ಈ ಹಬ್ಬ ಇಡೀ ಊರಿನವರಿಗೆ ಹಬ್ಬ. ಭತ್ತದ ಸಸಿಗಳು ನಾಲ್ಕೆಲೆಯೊಡೆದು ಚಿಗಿತು ನಿಂತ ಸಮಯ. ಆಲ ಹೊಡೆದು, ಕಳೆ ತೆಗೆದು ಮುಗಿದು ಒಂದು ಹಂತದ ಕೆಲಸ ಪೂರೈಸಿದರೆ, ಹೊಡೆಯೊಡೆಯುವವರೆಗೆ ಕೆಲಸಕ್ಕೆ ಬಿಡುವು. ದಣಿದ ದೇಹಕ್ಕೆ ಒಲಿದ ಮಳೆಗೆ ಹಬ್ಬವೆಂಬ ಸತ್ಕಾರ.

ಹಬ್ಬದ ದಿನ ಪೆಟ್ಟಿಗೆಯಲ್ಲಿ ಜೋಪಾನವಾಗಿಟ್ಟ ಕುಮಾರರಾಮನ ಮುಖವಾಡ ಹಾಗೂ ಇನ್ನಿತರ ಮುಖವಾಡಗಳನ್ನು ಹೊರತೆಗೆದು ಪೂಜಿಸುತ್ತಾರೆ. ಊರಿನ ಹೊಸ ಮದುಮಕ್ಕಳಿಗೆ ತೊಡಿಸುತ್ತಾರೆ. ಜನರೊಂದಿಗೆ ಮೆರವಣಿಗೆ. ನಿರ್ದಿಷ್ಟ ಸ್ಥಳದಲ್ಲಿ ನಿಲ್ಲಿಸಿದ ಶೂಲಕ್ಕೆ ಕೋಳಿ ಬಲಿ. ವಿವಿಧ ಗ್ರಾಮದೇವತೆಗಳಿಗೆ ಕುರಿ ಬಲಿ. ನೈವೇದ್ಯವಾಗಿ ಕುರಿತೊಳ್ಳೆ-ವಪೆ, ಗಾಂಜಾ ಹಾಗೂ ಹೆಂಡದ ಅರ್ಪಣೆ. ಮದುವಣಗಿತ್ತಿಯರು ಕೈಜೋಡಿಸಿ ಬೆರಳ ತುದಿಯಲ್ಲಿ ಬತ್ತಿ ಸಿಕ್ಕಿಸಿ, ದೀಪ ಹಚ್ಚಿ, ಹತ್ತು ಬೆರಳಾರತಿ ಮಾಡುತ್ತಾರೆ. ಸಂಜೆ ಕಜ್ಜಾಯದೂಟ. ಮನೆಯಲ್ಲಿ ಮೈನೆರೆಯದ ಹೆಣ್ಣುಮಕ್ಕಳು ಅಥವಾ ಗಂಡಸರು ಅಡುಗೆ ಮಾಡಬೇಕು. ಮರುದಿನ ಭಂಗಿ. ಬಾಡೂಟ ಉಂಡು ಹೆಂಡ ಕುಡಿಯುತ್ತಾರೆ. ಡೊಳ್ಳು ಕಟ್ಟಿ ಕುಣಿಯುತ್ತಾರೆ. ಒಣಮರ ಸುಟ್ಟು ರಾಶಿ ಮಾಡಿದ ನಿಗಿನಿಗಿ ಕೆಂಡದ ಮೇಲೆ ಕುಣಿಯುತ್ತಾರೆ. ಸುರಿವ ಆದ್ರೆ ಮಳೆಯಲ್ಲಿ ತಣ್ಣಗಾಗುತ್ತಾರೆ.

ಸಾಗರ ಪ್ರಾಂತ್ಯದಲ್ಲಿ ಯಲಕುಂದ್ಲಿ, ಹಿರೇನೆಲ್ಲೂರು, ಹುಣಸೂರು, ಕುಗ್ವೆ, ಸೂರನಗದ್ದೆ, ಮನ್ಮನೆ, ಮರ್ತೂರು, ತಡಗಳಲೆ ಹೀಗೆ ಅನೇಕ ಊರುಗಳಲ್ಲಿ ಹಬ್ಬ ಇದೆ. ಆದ್ರೆ ಮಳೆ ಬೀಳುವ ಹದಿನೈದು ದಿನವೂ ಒಂದಿಲ್ಲೊಂದು ಕಡೆ ಹಬ್ಬ ಇದ್ದೇ ಇರುತ್ತದೆ. ದೇವರು ವಿಭಿನ್ನವಾದರೂ ಅಚರಣೆಯ ರೀತಿ ಒಂದೇ. ಕುಮಾರರಾಮನ ಮುಖವಾಡ ಬಳಸದ ಊರುಗಳೂ ಇವೆ. ಇದನ್ನೆಲ್ಲಾ ಅಧ್ಯಯನ ಮಾಡುತ್ತಿರುವ ಡಾ. ಮೋಹನ್ ಎಚ್.ಎಸ್. ಚಂದ್ರಗುತ್ತಿಯವರು ಇದೊಂದು ಆದ್ರೆಮಳೆಯ ಕಾಲದಲ್ಲಿ ಆಚರಿಸುವ ಬೆಳೆ ಹಬ್ಬ. ಮದ್ಯ, ಮಾಂಸ ಹಾಗೂ ಮೈಥುನಕ್ರಿಯೆಗಳಿಂದ ಬೆಳೆ ಹುಲುಸಾಗಿ ಬೆಳೆಯುತ್ತದೆ ಎನ್ನುವ ನಂಬುಗೆ ರೈತರದು. ಹಿಂದೆ ಸಾಮೂಹಿಕವಾಗಿ ಭತ್ತದ ಗದ್ದೆಗಳಲ್ಲೇ ಇದೆಲ್ಲಾ ನಡೆಯುತ್ತಿತ್ತು. ಮುಂದೊಂದು ದಿನ ಇದು ಬರೀ ಕುಡುಕರ ಹಬ್ಬ ಆದೀತು ಎನ್ನುವ ಆತಂಕವೂ ಅವರಿಗೆ ಇದೆ.

ಜೀವನ ತುಡಿತ, ಜೀವಪರ, ಜಲತತ್ವ ಹೊಂದಿದ ಮಳೆಹಬ್ಬ ಕಾಲಕ್ರಮದಲ್ಲಿ ಬದಲಾಗುತ್ತಿರುವುದು ಏಕೆ? ಇಡೀ ಹಬ್ಬ ಆದ್ರೆಮಳೆ, ರೈತ ಹಾಗೂ ಬೆಳೆಗಳ ಸುತ್ತಲೂ ಇದೆ. ಮಳೆ ಕಡಿಮೆ ಅಥವಾ ಮಳೆ ಬರಲಿಲ್ಲ ಎನ್ನುವ ಕಾರಣಕ್ಕೆ ಹಬ್ಬ ನಿಂತಿಲ್ಲ. ಹಬ್ಬದಲ್ಲಿ ಕುರಿ ಕಡಿಯುವುದು ನಿಂತಿಲ್ಲ. ಹೆಂಡದ ಹೊಳೆ ನಿಂತಿಲ್ಲ. ಇದೆಲ್ಲಾ ಬರದೊಂದಿಗೆ ಹೆಚ್ಚಿನ ಬವಣೆಗಳು. ಹಬ್ಬ ಆಚರಿಸಲೇಬೇಕೆನ್ನುವ ಮುಖಂಡರ ಅಪ್ಪಣೆ. ಕೇಡುಂಟಾಗಬಹುದೆಂಬ ಮೂಢನಂಬಿಕೆ. ಹೀಗೆ ಏನೆಲ್ಲಾ ಬಿಕ್ಕಟ್ಟಿನ ಮಧ್ಯೆ ಈ ಜನಾಂಗದವರು ಇಕ್ಕಟ್ಟಿಗೆ ಸಿಕ್ಕಿದ್ದಾರೆ.

ಆದ್ರೆ ಮಳೆ ಆಗದಿದ್ದರೆ ಮುಂದಿನ ನಾಲ್ಕೈದು ಮಳೆಯೂ ಆಗದು ಎನ್ನುವ ನಂಬಿಕೆ ರೈತರದು. ಪರಿಸರ ನಾಶದಿಂದಲೇ ಮಳೆಯಾಗುತ್ತಿಲ್ಲ ಎನ್ನುವ ಅರಿವು ಇವರಿಗಿಲ್ಲ. ಕೆಲವು ವಿದ್ಯಾವಂತರು ಈ ಸಂಪ್ರದಾಯವನ್ನು ವಿರೋಧಿಸುತ್ತಿದ್ದಾರೆ. ಅದರಲ್ಲಿ ಭಾಗವಹಿಸಲು ಬಯಸುತ್ತಿಲ್ಲ. ಸಾರಾಯಿ ಕುಡಿದು ಕುಣಿಯುವುದು, ನೂರಾರು ಮರಗಳನ್ನು ಕಡಿದು ಸುಡುವುದು ಸರಿಯಲ್ಲ ಎನ್ನುವ ನಿಲುವು ಅವರದು. ನೀರಿನ ದುಂದುಬಳಕೆ, ನೀರಿನ ಬಗ್ಗೆ ನಿರ್ಲಕ್ಷ್ಯ, ಗದ್ದೆಗಳಲ್ಲಿದ್ದ ಮರಗಳನ್ನೆಲ್ಲಾ ಕಡಿದಿರುವುದು, ನೀರಿಲ್ಲದಿದ್ದರೂ ಬೇಸಿಗೆಯಲ್ಲಿ ಭತ್ತ, ಕಬ್ಬು, ಮೆಣಸಿನಕಾಯಿ ಬೆಳೆಯಲು ತೊಡಗಿದ್ದು ತಪ್ಪು. ಇಲ್ಲಿನ ಪ್ರಮುಖ ಜನಾಂಗವೊಂದು ಈ ರೀತಿಯ ಅಂಧಕಾರದಲ್ಲಿ ಇರುವುದು ಅಭಿವೃದ್ಧಿಗೆ ಹಿನ್ನೆಡೆಯಾಗಿದೆ. ಮರಗಳ ಕಳ್ಳಸಾಗಾಣಿಕೆ, ಗೋಮಾಳ ಗುಡ್ಡ-ಬೆಟ್ಟ-ಬ್ಯಾಣಗಳಲ್ಲಿ ತೊಡಗಿದ ಬೇಸಾಯ ಇವೂ ಸಹ ನೀರಿನ ಕೊರತೆಗೆ ಪರೋಕ್ಷ-ಪ್ರತ್ಯಕ್ಷ ಕಾರಣಗಳು.

ಆದ್ರೆಮಳೆ ಹಬ್ಬ, ಮಳೆಹಬ್ಬವೇ ಆಗಬೇಕು. ನೀರುಳಿಸುವ, ಕೆರೆ ಕಟ್ಟೆ ಕಟ್ಟಿಸುವ, ನೀರ ಮಿತಬಳಕೆ ಮಾಡುವ ಎಚ್ಚರ ಇವರಲ್ಲಿ ಬರಬೇಕು. ಊರಿನ ಸುತ್ತಲ ಭೂಮಿಗೆ ಹಸಿರು ಹಚ್ಚುವ ಸಮುದಾಯವೆಲ್ಲಾ ಸೇರಿ ಆ ಸಮಯದಲ್ಲಿ ಸಾವಿರಾರು ಗಿಡ ನೆಡುವ, ತಮ್ಮೂರನ್ನು ಹಸಿರುಗೊಳಿಸುವ ಪಣ ತೊಡಬೇಕು. ಹಳೆಯ ಆಚರಣೆಗಳಿಗೆ ಹೊಸ ಅರ್ಥ ನೀಡಿ ಇಡೀ ಮಳೆಹಬ್ಬವನ್ನೇ ಜೀವಪರವಾಗಿಸಬೇಕು. ಈ ತಿಳುವಳಿಕೆ ವಿದ್ಯಾವಂತ ದೀವರ ಯುವಕರಲ್ಲಿ ಇದ್ದರೂ ಹಳೆಯ ತಲೆಮಾರು, ಹೊಸ ಯೋಜನೆಗಳ ಅಂತರ (ತಲಾಂತರ) ಏನೆಲ್ಲಾ ಕೆಲಸಗಳಿಗೆ ತಡೆಯಾಗಿದೆ.

…..ಮುಂದುವರೆಯುವುದು

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*