ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಲೆನಾಡಿನ ನಿತ್ಕಟ್ಟು

ಮಲೆನಾಡು ಅಥವಾ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿನ ಅಡಿಕೆ ಕೃಷಿ ವಿಭಿನ್ನ. ಅತಿಯಾದ ನೀರು ಬಸಿದುಹೋಗಲು ಇದ್ದರೂ, ಮಣ್ಣಿನ ಗುಣದಿಂದಾಗಿ ತೋಟವೇ ಜವುಳಾಗುವ ಸಾಧ್ಯತೆಯಿದೆ. ಬೇಸಿಗೆಯಲ್ಲಿ ತೇವಾಂಶವೆಲ್ಲಾ ಕಡಿಮೆಯಾಗಿ ತೋಟಕ್ಕೆ ನೀರು ಕೊಡಬೇಕಾದ ಪರಿಸ್ಥಿತಿ.

ಈ ಎರಡೂ ವಿಪರೀತಗಳಿಂದ ತಪ್ಪಿಸಿಕೊಂಡು ಒಳ್ಳೆಯ ಇಳುವರಿ ನೀಡಲು ಯಾವ ಅಡಿಕೆ ಮರಗಳಿಗೆ ಸಾಧ್ಯ ಹೇಳಿ.

ಮಳೆಗಾಲ-ಚಳಿಗಾಲ-ಬೇಸಿಗೆ ಕಾಲಗಳಲ್ಲಿ ತೋಟದ ನೀರಿನ ಸಮತೋಲನ ಕಾಪಾಡಲು ಹಿಂದಿನಿಂದಲೂ ಅನುಸರಿಸುತ್ತಾ ಬಂದ ವಿಧಾನ ಉದಿಮಣ್ಣು ಹಾಕಿಸುವುದು. ಉದಿಮಣ್ಣು ಹಾಕುವ ಸಮಯ ಜನವರಿಯಿಂದ ಮೇ ತಿಂಗಳವರೆಗೆ ಅಥವಾ ಮಳೆಗಾಲವನ್ನು ಬಿಟ್ಟು ಯಾವ ಕಾಲದಲ್ಲಾದರೂ ಹಾಕಬಹುದು. ಅಡಿಕೆ ಮರಗಳ ಸಾಲಿನ ಮಧ್ಯೆ ಮಣ್ಣು ಹಾಕಿಸುವ ಈ ಪದ್ಧತಿಗೆ ನಿತ್ಕಟ್ಟು ಹಾಕಿಸುವುದು ಎಂದೂ ಹೇಳುತ್ತಾರೆ.

kanour 098ಮಲೆನಾಡಿನಲ್ಲಿ ತೋಟದ ಅಡಿಕೆ ಮರಗಳ ಪ್ರತಿ ಎರಡು ಸಾಲುಗಳ ನಂತರ ಒಂದು ಕಾಲುವೆ ಇರುತ್ತದೆ. ನಿಯಮಗಳ ಪ್ರಕಾರ ಕಾಲುವೆಯಿಂದ ಕಾಲುವೆಗಿರುವ ಅಂತರ ೧೪ ಅಡಿ ಅಥವಾ ೧೬ ಅಡಿ. ಈ ಕಾಲುವೆಗಳನ್ನು ಕಾದಿಗೆ ಎಂತಲೂ, ಬಸಿಗಾಲುವೆ ಎಂತಲೂ ಹೇಳುತ್ತಾರೆ, ಎರಡು ಕಾಲುವೆಗಳ ಮಧ್ಯದ ಭೂಮಿ. ಸುಮಾರು ೧೪ ಅಡಿ ಅಗಲದ ಪಟ್ಟಿಗೆ ಬಣ್ಣ (ಭರಣ) ಎಂದೂ ಹೇಳುತ್ತಾರೆ.

ನಾವಿಲ್ಲಿ ೧೪ ಅಡಿ ಅಗಲದ ಒಂದು ಬಣ್ಣಕ್ಕೆ ಉದಿ ಹಾಕಿಸುವುದಾದರೆ ಅಕ್ಕಪಕ್ಕದ ಅಡಿಕೆ ಮರಗಳ ಸಾಲಿನ ನಡುವೆಯ ಖಾಲಿ ಸ್ಥಳದಲ್ಲಿ ೪ ಅಡಿ ಅಗಲ ಹಾಗೂ ೩ ಅಡಿ ಎತ್ತರ ಇರುವಂತೆ ಮಣ್ಣಿನ ರಾಶಿ ಹಾಕುತ್ತಾ ಹೋಗಬೇಕು. ನಿಮ್ಮದು ತೀರಾ ಇಕ್ಕಟ್ಟಿನ ಅಂದರೆ ಕೇವಲ ೧೨ ಅಡಿ ಅಗಲದ ಬಣ್ಣವಾದರೆ ಉದಿಮಣ್ಣಿನ ರಾಶಿಯ ಅಗಲವೂ ಕೇವಲ ೨ ಅಡಿ ಇರಬೇಕು. ಅದರ ಎತ್ತರ ಮೂರು ಅಡಿಗಳಿರಬೇಕು. ಹೊಸ ಮಣ್ಣಿನ ಈ ಉದ್ದನೆಯ ಸಾಲೇ ನಿತ್ಕಟ್ಟು

ಹೆಚ್ಚಿನವರು ತೋಟದಂಚಿನ ಧರೆಯ (ಬೆಟ್ಟದಂಚಿನ ಕಡಿದಾದ ಪ್ರಪಾತದ) ಮಣ್ಣನ್ನೇ ಹಾಕಿಸುತ್ತಾರೆ. ಹೊರಗಿನಿಂದ ತಂದು ಹಾಕಿಸುವುದಿದ್ದರೆ ಕೆಂಪು ಗೋಡುಮಣ್ಣನ್ನು ತಂದು ಹಾಕಿಸುವುದು ಒಳ್ಳೆಯದು. ಯಾವ ಮಣ್ಣೇ ಆಗಲಿ ಅದನ್ನು ಹಾಕಿಸಿದ ಪ್ರಾರಂಭದಲ್ಲಿ ಫಲವತ್ತಾಗಿರುವುದಿಲ್ಲ. ಉದಿಮಣ್ಣು ಹಾಕಿಸಿದ ಮೇಲೆ ಗಾಳಿ ಮಳೆಗೆ ಸಿಕ್ಕು, ಕಸಕಡ್ಡಿ, ಸೋಗೆ ತರಗೆಲೆಗಳು ಬೆರೆತು ಜೀವಸಂಚಾರ ಪ್ರಾರಂಭವಾಗುತ್ತದೆ. ಅನಂತರದ ಪ್ರತಿವರ್ಷ ಮರಗಳ ಬುಡದಲ್ಲಿ ಕೊಟ್ಟಿಗೆ ಗೊಬ್ಬರ ಹಾಕಿಸಿದ ಮೇಲೆ ಉದಿಮಣ್ಣನ್ನೇ ಗೊಬ್ಬರದ ಮೇಲೆ ಮುಚ್ಚುತ್ತಾ ಬರಬೇಕು.

ಹೀಗೆ ಉದಿಮಣ್ಣನ್ನು ಮರದ ಬುಡಕ್ಕೆ ಹಾಕುವುದರಿಂದ ಮಳೆಗಾಲದಲ್ಲಿ ನೀರಿನಿಂದ ಸವಕಳಿಯಾದ ಮರಗಳ ಬುಡಕ್ಕೆ ಫಲವತ್ತಾದ ಮಣ್ಣು ಸಿಕ್ಕಂತಾಗುತ್ತದೆ. ಪ್ರತಿವರ್ಷ ೩-೪ ಗುದ್ದಲಿ ಮಣ್ಣನ್ನು ಹೀಗೆ ಸಾಲುರಾಶಿಯಿಂದ ತೆಗೆದು ಮರಗಳ ಬುಡಕ್ಕೆ ಕಾಕುವುದರಿಂದ ಉದಿಮಣ್ಣು ಖರ್ಚಾಗಲು ಸುಮಾರು ೧೦ ವರ್ಷ ಬೇಕು ಎನ್ನುತ್ತಾರೆ ಸಾಗರ ಬಳಿಯ ಶೆಡ್ತಿಕೆರೆಯ ಪ್ರಗತಿಪರ ಕೃಷಿಕ ವಿದ್ಯಾಧರ.

ಹೀಗೆ ನಿತ್ಕಟ್ಟು ಹಾಕಿದರೆ ಕೆಲವು ಲಾಭಗಳೂ ಇವೆ.

kanour 099ಅಡಿಕೆ ಮರಗಳ ಮಧ್ಯೆಯ ಈ ಉದಿಮಣ್ಣು ಸಾಕಷ್ಟು ಸಾಂದ್ರವಾಗಿ ನಿಲ್ಲುವುದರಿಂದ ಅತಿ ಮಳೆಯಿಂದಾಗಿ ಹೆಚ್ಚಾದ ನೀರು ಮಣ್ಣಿನಲ್ಲುಳಿಯದೇ ಬಸಿಗಾಲುವೆಗಳಲ್ಲಿ ಬಸಿದುಹೋಗುತ್ತದೆ. ಚಳಿಗಾಲ ಹಾಗೂ ಬೇಸಿಗೆ ಕಾಲಗಳಲ್ಲಿ ಉದಿಮಣ್ಣು ಅಡಿಕೆಮರದ ಬುಡಕ್ಕಿಂತ ೨-೩ ಅಡಿ ಮೇಲಿರುವುದರಿಂದ ಅದು ಗಾಳಿಯಲ್ಲಿನ ತೇವಾಂಶ ಹೀರಿಕೊಂಡು ಭೂಮಿಯಲ್ಲಿ ನೀರಿನ ಪಸೆ ಇರುವಂತೆ ಮಾಡುತ್ತದೆ. ಅದರಲ್ಲೂ ಕಾದಾಳಿ ಅಥವಾ ಬಿಳಿಕೊಟ್ಟಿ ಮಣ್ಣಿರುವ ಬೈರುಂಭೆ ಸೀಮೆಯಲ್ಲಿ ಉದಿಮಣ್ಣು ಬೇಕೇ ಬೇಕು. ಇಲ್ಲದಿದ್ದರೆ ಮಳೆಗಾಲದಲ್ಲಿ ಜವುಳು: ಬೇಸಿಗೆಯಲ್ಲಿ ನೀರು ಕೊಟ್ಟಷ್ಟೂ ಸಾಲದು ಎನ್ನುತ್ತಾರೆ ಗೋಳಿಕೊಪ್ಪದ ಕೃಷಿಕ ಎಂ.ಎಲ್.ಹೆಗಡೆ.

ಸಾಗರದ ಕೆಳದಿ ಸೀಮೆಯ ಹೊಸಮನೆ ಕೃಷ್ಣಮೂರ್ತಿಯವರು ಇಸವಿ ೨೦೦೦ದಲ್ಲಿ ತಮ್ಮ ೮ ಗುಂಟೆ ತೋಟಕ್ಕೆ ಉದಿಮಣ್ಣು (ನಿತ್ಕಟ್ಟು) ಹಾಕಿಸಿದ್ದಾರೆ. [೧ಕರೆ=೪೦ ಗುಂಟೆ] ತೋಟದ ಅಂಚಿನ ಬೆಟ್ಟದ ಮಣ್ಣು ಅಗೆದು ತೋಟಕ್ಕೆ ಹಾಕಲು ೪೫ ಆಳು ಕೆಲಸವಾಗಿದೆ. ಒಬ್ಬ ಆಳಿಗೆ ೪೦ರೂ.ನಂತೆ ೮ ಗುಂಟೆಗೆ ಉದಿಮಣ್ಣು ಹಾಕಿಸಲು ಆದ ಖರ್ಚು ೨೦೦೦ ರೂಪಾಯಿಗಳು. ಅಂದರೆ ಒಂದು ಎಕರೆಗೆ ಸುಮಾರು ೧೦,೦೦೦ ರೂಪಾಯಿ ಬೇಕು ಎನ್ನುತ್ತಾರೆ ಕೃಷ್ಣಮೂರ್ತಿ.
ಹೊರಗಿನಿಂದ ಕೆಂಪು ಗೊಚ್ಚುಮಣ್ಣು ಹಾಕಿಸುವುದಾದರೆ ಎಕರೆಗೆ ಕನಿಷ್ಠ ೮೦ ಟ್ರ್ಯಾಕ್ಟರ್ ಮಣ್ಣು ಬೇಕು. ಒಂದು ಟ್ರ್ಯಾಕ್ಟರ್ ಕೆಂಪು ಗೊಚ್ಚುಮಣ್ಣಿಗೆ ೩೦೦ ರೂಪಾಯಿಗಳಾಗುತ್ತದೆ. ಅಂದರೆ ೮೦ ಟ್ರ್ಯಾಕ್ಟರ್ಗೆ ೨೪,೦೦೦ ರೂಪಾಯಿ. ಮಣ್ಣನ್ನು ತೋಟಕ್ಕೆ ಹಾಕಿಸಲು ರೂ. ೧೦,೦೦೦. ಒಟ್ಟು ೩೪,೦೦೦ ರೂಪಾಯಿ ಬೇಕಾಗುತ್ತದೆ.

ಇದು ಭಾರಿ ದುಬಾರಿಯಲ್ಲವೆ ಎಂದ ಕೇಳುವುದುಂಟು. ಆದರೆ ನೆನಪಿಡಿ. ಪ್ರತಿ ಹತ್ತು ವರ್ಷಕ್ಕೊಮ್ಮೆ ಹಾಕಬೇಕಾದ ಬಂಡವಾಳ ಇದು. ವರ್ಷಕ್ಕೆ ಸರಾಸರಿ ೧,೦೦೦ರಿಂದ ೩,೪೦೦ ರೂಗಳವರೆಗೆ ವೆಚ್ಚ ಬೀಳುತ್ತದೆ. ತೋಟದಿಂದ ಪ್ರತಿವರ್ಷದ ಆದಾಯದಲ್ಲಿ ಅಷ್ಟನ್ನೂ ಭೂಮಿಗೆ ಮರಳಿ ಕೊಡದಿದ್ದರೆ ಹೇಗೆ?
ಕೆಳದಿ ಸೀಮೆಯಲ್ಲಿ [ಶಿವಮೊಗ್ಗ] ಮತ್ತು ಬೈರುಂಭೆ ಸೀಮೆ [ಉತ್ತರಕನ್ನಡ]ಗಳಲ್ಲಿ ಪಂಪ್ ಹಾಕಿ ನೀರು ಹಾಯಿಸಿದರೂ ವಿಶೇಷ ಕೃಷಿ ಮಾಡದಿದ್ದರೂ ಉಳಿದೆಲ್ಲಾ ಕಡೆಗಳಿಗಿಂತಲೂ ಅಧಿಕ ಫಸಲು ಪಡೆಯುತ್ತಾರೆ. ಕಾರಣವೆಂದರೆ ಉದಿಮಣ್ಣು [ನಿತ್ಕಟ್ಟು] ಮಾಡುವ ನೀರಿನ ನಿರ್ವಹಣೆಯಾಗಿದೆ. ಹೊಳೆಯ ಅಥವಾ ಕೆರೆಯ ತಗ್ಗಿನಲ್ಲಿ ತೋಟ ಇದ್ದವರಿಗೆ ಜವುಳಿನ ತೊಂದರೆ ತುಸು ಹೆಚ್ಚಿರುತ್ತದೆ. ಅಂಥವರ ಪಾಲಿಗೆ ಉದಿಮಣ್ಣು ಅಥವಾ ನಿತ್ಕಟ್ಟು ತಂತ್ರ ಸುಲಭವಾಗಿ ಸಮರ್ಥವಾಗಿ ನೀರು ನಿರ್ವಹಣೆ ಮಾಡಲು ಉಪಯುಕ್ತ.

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*