ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕರಾವಳಿಯ ನಂದಿನಿ ಹೊಳೆಯಲ್ಲೊಂದು ನೀರಿಗಾಗಿ ಚಿಂತನ ಮಂಥನ

ಹೊಳೆಯ ಸಂಬಂಧವೆಂದರೆ ಭೂಮಿ ಆಕಾಶಗಳ ಸಂಬಂಧ. ಅಪ್ಪ ಅಮ್ಮನ ಸಂಬಂಧದಂತೆ ಪವಿತ್ರ. ನಾಗರಿಕತೆ ಹುಟ್ಟಿದ್ದೇ ನದಿ ತಟಗಳಲ್ಲಿ. ನಾಗರಿಕತೆ ಬೆಳೆದಂತೆಲ್ಲ ನದಿಗಳ ಇರುವಿಕೆಗೆ ಅಪಾಯ ಬಂದಿದೆ. ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಕಸ, ಕೊಳಚೆಗಳ ಕೊಚ್ಚೆ ಗುಂಡಿಯಾಗುತ್ತಿವೆ. ಈ ನಿಟ್ಟಿನಲ್ಲಿ ನದಿಗಳ ರಕ್ಷಣೆಯ ಬಗ್ಗೆ ಚಿಂತನೆ ನಡೆಸಬೇಕೆಂಬ ಚಿಂತನೆಯ ಒಂದು ಪುಟ್ಟ ಪ್ರಯತ್ನ ತುದೆ ತುಲಿಪು (ನದಿಯಲ್ಲಿ ಚಿಂತನ ಮಂಥನ).

ಮಂಗಳೂರು ತಾಲೂಕಿನ ಪಾವಂಜೆ ಸಮೀಪದ ಹಳೆ ಕಡವು ರಾಮಪ್ಪ ಪೂಜಾರಿ ಕಟ್ಟಪುಣಿ ಮುಂಭಾಗದಲ್ಲಿ ಭಾನುವಾರ( ಆ.೨೩ರಂದು) ಬೆಳಗ್ಗೆ ಜಿಟಿಜಿಟಿMNR-23SUR-PAVANJE ಮಳೆ. ಅದಕ್ಕೆ ಸಂವಾದಿಯಾಗಿ ಮಳೆ ಮತ್ತು ಹೊಳೆ ಸಂಬಂಧಿ ಚಿಂತನ ಗೋಷ್ಠಿ. ಕಡವಿನ ಎರಡೂ ಕಡೆಗಳಲ್ಲಿ ಮಣ್ಣು ಸವೆತ ತಡೆಯುವ ಕಾಂಡ್ಲಾ (ಪಾಮ್‌ಗ್ರೋವ್) ಗಿಡಗಳನ್ನು ನೆಡುವ ಮೂಲಕ ಯುವಜನ ಸೇವೆ, ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಅಭಯಚಂದ್ರ ಜೈನ್ ಅವರಿಂದ ಕಾರ್ಯಕ್ರಮಕ್ಕೆ ಚಾಲನೆ. ಇದರ ಜತೆಗೆ ಮಳೆಯೊಂದಿಗೆ ಅನನ್ಯ ಸಂಬಂಧವನ್ನು ಹೊಂದಿರುವ ಕಪ್ಪೆಗಳನ್ನು ನೀರಿಗೆ ಬಿಡುವ ಮೂಲಕ ಪರಿಸರ ಸಂರಕ್ಷಣೆಯ ವಾಗ್ದಾನ.

ದೋಣಿಯ ಮೇಲೆ ಯಾನ: ನದಿಯಲ್ಲಿ ಎರಡು ಬೃಹತ್ ಫೈಬರ್ ದೋಣಿಗಳನ್ನು ಸೇರಿಸಿ ನಿರ್ಮಿಸಿದ ವೇದಿಕೆಯಲ್ಲಿ ವಿಚಾರ ಗೋಷ್ಠಿ ಆರಂಭವಾದಾಗ ಮಳೆ ಸ್ವಲ್ಪ ಬಿಡುವು ನೀಡಿತ್ತು. ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್ ವಿಚಾರ ಮಂಡಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎರಡು ಬೃಹತ್ ಉದ್ಯಮಗಳು ತನ್ನ ಸಾಮರ್ಥ್ಯ ವಿಸ್ತರಿಸುವ ಮೂಲಕ ಜಿಲ್ಲೆಯ ಸಂಸ್ಕೃತಿ ನಾಶ ಮಾಡುತ್ತಿವೆ. ಇವುಗಳ ವಿರುದ್ಧ ಧ್ವನಿ ಎತ್ತಬೇಕೆನ್ನುವ ಕಳಕಳಿ ವ್ಯಕ್ತಪಡಿಸಿದರು. ಆಧ್ಯಾತ್ಮ ಚಿಂತಕ ರಾಧಾಕೃಷ್ಣ ಅವರ ಪ್ರಕಾರ ಮಳೆಯನ್ನು ಸ್ವಾಗತಿಸುವ, ಅನುಭವಿಸುವ ಗುಣ ಇರಬೇಕು. ಇಲ್ಲದಿದ್ದರೆ ನಾವು ಅದರಿಂದ ವಂಚಿತರಾಗುತ್ತೇವೆ. ಹೊಳೆಗಳನ್ನು ಉಳಿಸುವ ಬಗ್ಗೆ ಚಿಂತನೆ ಮಾಡಬೇಕೆನ್ನುವ ಸಲಹೆ ಅವರದು.

MNR-23SUR-PAVANJE9ಸ್ಥಳ ಇತಿಹಾಸದ ವಿವರಣೆ: ವಿಚಾರ ಗೋಷ್ಠಿ ನಡೆಯುತ್ತಲೇ ದೋಣಿಗಳು ಅಡೆಪುದ ಕಂಡೇವು, ಬಟ್ಟಲ್‌ಗುಂಡಿ, ಉಪ್ಪು ನೀರ ಕಟ್ಟ ಮುಂತಾದ ಕಡೆ ಸಾಗಿದಾಗ ಆ ಸ್ಥಳಗಳ ಬಗೆಗಿನ ಐತಿಹ್ಯವನ್ನು ಡಾ.ಗಣೇಶ್ ಅಮೀನ್ ಸಂಕಮಾರ್ ವಿವರಿಸಿದರು. ಅಡೆಪುದ ಕಂಡೇವು ಅಂದರೆ ಖಂಡಿಗೆ ಜಾತ್ರೆ ಸಂದರ್ಭ ಮೀನು ಹಿಡಿಯುವ ಹಬ್ಬದ ಹಿನ್ನೆಲೆಯಲ್ಲಿ ನೀರು ಹಾಗೂ ಮೀನುಗಳು ಹೊರಗೆ ಹೋಗದಂತೆ ತಡೆಯುವ ಕಿಂಡಿ ಅಣೆಕಟ್ಟು ಎಂಬ ಮಾಹಿತಿ ನೀಡಿದರು. ಹೊಳೆಯ ಆಚೆ ಬದಿಯಲ್ಲಿದ್ದ ಪಾವಂಜೆ ದೇವಸ್ಥಾನಕ್ಕೆ ಈಜಿಕೊಂಡು ಪೂಜೆ ಮಾಡಿ ಬರುತ್ತಿದ್ದ ಅರ್ಚಕರ ಅನುಕೂಲಕ್ಕಾಗಿ ನದಿಯೇ ತನ್ನ ಪಾತ್ರವನ್ನು ಬದಲಿಸಿ ಅನುಕೂಲ ಮಾಡಿಕೊಟ್ಟ ಸಂದರ್ಭದಲ್ಲಿ ದೇವಸ್ಥಾನದ ಬಟ್ಟಲು ಕಳೆದುಹೋದ ಜಾಗವೇ ಬಟ್ಟಲ್ ಗುಂಡಿ ಎಂದು ಪ್ರಸಿದ್ಧಿ ಪಡೆಯಿತು ಎನ್ನುವ ವಿವರಣೆಯನ್ನೂ ನೀಡಿದರು ಸಂಕಮಾರ್.

ಭೀಕರ ಕ್ಷಾಮದ ಭೀತಿ: ಪತ್ರಕರ್ತ ಕುಮಾರನಾಥ್ ಮಾತನಾಡಿ, ಕೇರಳ ಮಾದರಿಯಲ್ಲಿ ನದಿಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಅಗತ್ಯ ಇದೆ. ಈ ಮೂಲಕ ನದಿಗಳನ್ನು ಸಂರಕ್ಷಿಸಬೇಕಿದೆ. ಪ್ರತಿಯೊಂದನ್ನೂ ಕಮರ್ಷಿಯಲ್ ದೃಷ್ಟಿಕೋನದಿಂದ ನೋಡದೆ ಇಂಥ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಮಾಧ್ಯಮಗಳೂ ಪ್ರೋತ್ಸಾಹಿಸಬೇಕು ಎಂದರು. ನದಿ ಎಂದರೆ ಟ್ಯಾಪ್ ವಾಟರ್ ಅಲ್ಲ . ಅದು ಎಲ್ಲಿಂದ ಬರುತ್ತದೆ ಎನ್ನುವ ಅರಿವನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕಿದೆ. ೧೯೩೭ ಹಾಗೂ ೧೯೪೭ರಲ್ಲಿ ಬೃಹತ್ ಕ್ಷಾಮ ಬಂದಿತ್ತು. ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ಭೀಕರ ಕ್ಷಾಮ ತಲೆದೋರುವ ಅಪಾಯವಿದೆ ಎಂದರು.

ಮಾಧ್ಯಮ ಕ್ಷೇತ್ರದ ಇನ್ನೊಬ್ಬ ಪ್ರತಿನಿಧಿ ಕೆ.ಆನಂದ್ ಮಾತನಾಡಿ, ಮಳೆ ಇದ್ದರೆ ಹೊಳೆ. ಮಳೆ, ಹೊಳೆ ಹಾಗೂ ಪ್ರಕೃತಿಯಿಂದ ಸಿಗುವ ನೈಸರ್ಗಿಕ ಚಿಕಿತ್ಸೆಯೇMNR-23SUR-PAVANJE4 ನಿಜವಾದ ಚಿಕಿತ್ಸೆ ಎಂದರು.

ಅಗೋಳಿ ಮಂಜಣ ಜಾನಪದ ಕೇಂದ್ರ ಪಾವಂಜೆ ಮತ್ತು ಮುಲ್ಕಿ ಪ್ರೆಸ್ ಕ್ಲಬ್ ಇವುಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದು ಒಂದು ಚಲನಶೀಲ ಶಿಬಿರ ಮಾತ್ರವಲ್ಲದೆ ಅಧ್ಯಯನ ಶಿಬಿರವೂ ಆಗಿದೆ. ಅನು ಮತ್ತು ಭವ ಅವರ ಇಂಪಾದ ತುಳು ಗೀತೆಗಳು ಕಾರ್ಯಕ್ರಮಕ್ಕೆ ಹೊಸ ಕಳೆ ನೀಡಿತು.

ಅಗೋಳಿ ಮಂಜಣ ಜಾನಪದ ಕೇಂದ್ರ (ರಿ) ಪಾವಂಜೆ ಇದರ ಗೌರವಾಧ್ಯಕ್ಷ ಚಂದ್ರಶೇಖರ್ ನಾನಿಲ್, ಅಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್ , ಕಾರ್ಯದರ್ಶಿ ಜಯಂತಿ ಸಂಕಮಾರ್, ಮುಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು , ಕಾರ್ಯಕ್ರಮ ಸಂಯೋಜಕರಾದ, ವಸಂತ ಬೆರ್ನಾಡ್, ದೀಪಕ್ ಪೆರ್ಮುದೆ, ಧರ್ಮಪಾಲ, ಎಂ.ಟಿ.ಈಶ್ವರ ದೇವಾಡಿಗ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಸಂಯೋಜಿಸಿದ್ದರು. ದೋಣಿಗಳನ್ನು ಮುನ್ನಡೆಸುವಲ್ಲಿ ಗಣೇಶ್ ಅಮೀನ್ ಸಸಿಹಿತ್ಲು , ಚಂದ್ರ ಕುಮಾರ್ ಸಸಿಹಿತ್ಲು , ಭಾಸ್ಕರ ಸಸಿಹಿತ್ಲು , ಹನೀಫ್ ಮತ್ತಿತರರು ಸಹಕರಿಸಿದರು.

ಎಲ್ಲಿದೆ ಈ ಹೊಳೆ?: ಮಂಗಳೂರು ನಗರದಿಂದ ಸುಮಾರು ೩೦ ಕಿ.ಮೀ. ದೂರದಲ್ಲಿದೆ ಪಾವಂಜೆ ಎಂಬ ಪುಣ್ಯ ಕ್ಷೇತ್ರ. ಈ ಕ್ಷೇತ್ರದ ಮಗ್ಗುಲಲ್ಲೇ ಹರಿಯುತ್ತಿದೆ ನಂದಿನಿ. ಪುಣ್ಯಕ್ಷೇತ್ರ ಶ್ರೀಕಟೀಲು ದೇವಸ್ಥಾನವನ್ನು ಸುತ್ತುವರಿದು ಹರಿದು ಬರುವ ನಂದಿನಿ ನದಿಯು ಚೇಳಾರು ಅಣೆಕಟ್ಟು ದಾಟಿ ಪಾವಂಜೆ ಸೇತುವೆಯಕೆಳಗೆ ಹಾದು ಪಶ್ಚಿಮದತ್ತ ಸಾಗಿ ಮೂಲ್ಕಿ ಕಡೆಯಿಂದ ಬರುವ ಶಾಂಭವಿ ನದಿಯೊಂದಿಗೆ ಸೇರಿಕೊಂಡು ಸಾಗರದೊಂದಿಗೆ ಸಂಗಮಗೊಳ್ಳುತ್ತಿವೆ.

ಚಿತ್ರ-ಲೇಖನ: ಸುನೀಲ್, ಪುತ್ತೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*