ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಪುಟ್ಟೇನಹಳ್ಳಿಯ ಪುಟ್ಟಕೆರೆ

ಬೆಂಗಳೂರಿನ ಹೃದಯ ಭಾಗದಿಂದ ಎಂಟು ಕಿ.ಮಿ. ದೂರದಲ್ಲಿ ಪುಟ್ಟೇನಹಳ್ಳಿ ಇದೆ. ಬೆಂಗಳೂರು ನಗರದ ಹೊರವಲಯ, ಅದರ ದಕ್ಷಿಣ ಭಾಗದಲ್ಲಿ ಪುಟ್ಟೇನಹಳ್ಳಿ ಕೆರೆ ಇದೆ. ಬ್ರಿಗೇಡ್ ಮಿಲ್ಲೇನಿಯಂ ಹಾಗೂ ಸೌತ್ ಸಿಟಿ ವಸತಿ ಸಮುಚ್ಛಯಗಳ ನಡುವೆ ಇರುವ ಈ ಕೆರೆ ೧೩ ಎಕರೆ, ೨೫ ಗುಂಟೆ ವ್ಯಾಪ್ತಿಯನ್ನು ಹೊಂದಿದೆ.

ಸುಮಾರು ಎಪ್ಪತ್ತರ ದಶಕದವರೆಗೂ, ನಗರದ ಥಳಕು ಸೋಕದೆ ಹಳ್ಳಿಯಾಗಿಯೇ ಉಳಿದಿತ್ತು ಈ ಪುಟ್ಟೇನಹಳ್ಳಿ. ಆದರೆ, ಬೆಂಗಳೂರಿಗೆ ಧಾವಿಸಿ ಬರುವ ವಲಸಿಗರ ಸಂಖ್ಯೆ ಹೆಚ್ಚಾದಂತೆ, ಬೆಂಗಳೂರಿಗೇ ಸೇರಿ ಹೋಗಿ, ಹಳ್ಳಿಯ ಸಹಜತೆ ಮರೆಯಾಗುತ್ತಾ ಬಂತು. ದೊಡ್ಡದೊಡ್ಡ ವ್ಯಾಪಾರೀ ಮಳಿಗೆಗಳು, ಶಾಲೆ, ದೇವಸ್ಥಾನಗಳು, ಬ್ಯಾಂಕುಗಳು, ಪಾರ್ಕು – ಹೀಗೆ ಹಳ್ಳಿ ಸಣ್ಣ ನಗರವಾಗಿ ಬೆಳೆಯುತ್ತಾ ಬಂತು.

ಆವರೆಗೂ ‘ಕೆರೆ’ ಯಾಗಿಯೇ ಉಳಿದಿದ್ದ ಇದು, ಕಸ ಕೊಳಚೆಗಳ ತಾಣವಾಯಿತು. ಹಕ್ಕಿಗಳು ಸಂತಸದಿಂದ ಸಂಭ್ರಮಿಸುವ ತಾಣವಾಗಿದ್ದ ಇದು, ಬೆಂಗಳೂರುputtenahalli1 ಜಲ ಮಂಡಳಿಯವರ ನಿರ್ಲಕ್ಷ್ಯದಿಂದಾಗಿ ಗಬ್ಬು ನಾರುವಂತಾಯ್ತು. ಹಾಗಾಗಿಯೇ, ಸೈಬೀರಿಯಾ ಮುಂತಾದೆಡೆಯಿಂದ ಹಕ್ಕಿಗಳು ವಲಸೆ ಬರುವದು ನಿಂತು ಹೋಗಿ, ಕೇವಲ ‘ಸೆಪ್ಟಿಕ್‌ಟ್ಯಾಂಕ್’ ಆಗಿ ಉಳಿಯಿತು.

ಸ್ಥಳೀಯರು ಈ ಕುರಿತು ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು, ಸಂಬಂಧಪಟ್ಟವರೊಡನೆ ಚರ್ಚಿಸುತ್ತಿದ್ದರು. ಕೊಳಚೆ ನೀರು ಹರಿದು ಬಂದು, ಸೊಳ್ಳೆ ಕಾಟ ಹೆಚ್ಚಿ, ಆರೋಗ್ಯ ಕೆಡುವ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದರು. ಸ್ಥಳೀಯ ನಿವಾಸಿಗಳ ಒಳ್ಳೆಯ ಉದ್ದೇಶಕ್ಕೆ ಸ್ಪಂದಿಸಿ, ಆಗಿನ ಉಪ ಲೋಕಾಯುಕ್ತರಾದ ಎಸ್.ಬಿ.ಮಜಗ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಜಲಮಂಡಳಿಯ ಬೇಜವಾಬ್ದಾರಿಕೆಯನ್ನು ಖಂಡಿಸಿ ಕೆರೆಯನ್ನು ಪುನಶ್ಚೇತನಗೊಳಿಸಲು ಫೆಬ್ರವರಿ ೨೦೧೪ರಿಂದ ಎರಡು ತಿಂಗಳ ಕಾಲಾವಕಾಶವನ್ನು ನೀಡಿದ್ದರು.

ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಳಪಟ್ಟಿದ್ದರೂ, ಇದೀಗ ಈ ಕೆರೆಯ ಮುತುವರ್ಜಿಯನ್ನು ‘ಪುಟ್ಟೇನಹಳ್ಳಿ ನೇಬರ್ ಹುಡ್ ಲೇಕ್‌ಇಂಪ್ರೂವ್ಮೆಂಟ್‌ಟ್ರಸ್ಟ್’ ವಹಿಸಿಕೊಂಡಿದೆ. ಶ್ರೀಮತಿಯರಾದ ಉಷಾ ರಾಜಗೋಪಾಲ್, ನೂಪುರ್ ಜೈನ್, ಆರತಿ ಮನೋಜ್, ಹಾಗೂ ಶ್ರೀ ರಾಮಸ್ವಾಮಿಯರುಗಳು ಟ್ರಸ್ಟಿಗಳಾಗಿದ್ದಾರೆ. ಇವರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಕೆರೆಯ ಅಭಿವೃದ್ಧಿಯ ಬಗ್ಗೆ ಆಸಕ್ತರಾಗಿದ್ದಾರೆ. ಕೇವಲ ಮಳೆ ನೀರು ಬಂದರೆ ಮಾತ್ರ ತುಂಬುವ ಈ ಕೆರೆಗೆ, ಬೇರೆ ಬೇರೆ ಮೂಲಗಳಿಂದಲೂ ನೀರು ಒದಗಿಸುವ ನಿಟ್ಟಿನಲ್ಲಿಇವರು ಪ್ರಯತ್ನಿಸುತ್ತಿದ್ದಾರೆ.  ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ, ದೇಣಿಗೆ ಸಂಗ್ರಹವನ್ನೂ ಮಾಡುತ್ತಾರೆ. ಪ್ರತಿಕ್ರಿಯೆ ಆಶಾದಾಯಕವಾಗಿದ್ದರೂ, ಹಲವರು “ನಮ್ಮ ಬಡಾವಣೆಯ ಕೆರೆಗೇ ದೇಣಿಗೆ ನೀಡುತ್ತೇವೆ’ ಎಂದು ಕೈ ಚೆಲ್ಲುತ್ತಾರೆ,” ಎನ್ನುತ್ತಾರೆ ಟ್ರಸ್ಟಿಗಳಲ್ಲೊಬ್ಬರಾದ ನೂಪುರ್‌ ಜೈನ್.

ಇಲ್ಲಿ ನೀರು ತುಂಬುವದು ಮಳೆ ಬಂದಾಗ ಮಾತ್ರ. ಇದೀಗ ಪಕ್ಕದ ‘ಸೌತ್ ಸಿಟಿ’ ವಸತಿ ಸಮುಚ್ಛಯದಲ್ಲಿ ಸಂಗ್ರಹವಾಗುವ ಕೊಳಚೆ ನೀರನ್ನು ಪುನರ್ ಪರಿಷ್ಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕೆ ‘ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್’ಅನ್ನು ಅಳವಡಿಸಲಾಗಿದೆ. ಪ್ರತಿನಿತ್ಯ ಖರ್ಚಾಗುವ ೧೧ ಲಕ್ಷ ಲೀಟರ್ ನೀರಿನಲ್ಲಿ ಅಂದಾಜು ೬ ರಿಂದ ೮ ಲಕ್ಷ ಲೀಟರ್ ನೀರು ಈ ಕೆರೆಗೆ ಹರಿದು ಬರುವಂತೆ ಕೊಳವೆಗಳನ್ನು ಅಳವಡಿಸಲಾಗಿದೆ.

puttenahalli2ಈ ನೀರಿನ ಶುದ್ಧತೆಯ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾನ್ಯತೆ ದೊರಕಿದೆ. “ಕೆರೆಗೆ ಸಂಬಂಧಿಸಿದ ದೊಡ್ಡ ಮೊತ್ತದ ಖರ್ಚುಗಳನ್ನು ಬಿ.ಡಬ್ಲು.ಎಸ್.ಎಸ್.ಬಿ. ನಿರ್ವಹಿಸುತ್ತದೆ. ಉದಾಹರಣೆಗೆ ‘ಸೀವೇಜ್ ಪ್ಲಾಂಟ್’ ಅಳವಡಿಕೆ ಇರಬಹುದು, ಕೆರೆಯ ಸುತ್ತಲೂ ೯೨೦ ಮೀಟರ್ ನಿರ್ಮಿಸಲಾಗಿರುವ ‘ವಾಕ್ ವೇ’ ಇರಬಹುದು, ಇವೆಲ್ಲಕ್ಕೂ ಸರಕಾರದ ಸಹಕಾರವಿದೆ,” ಎನ್ನುತ್ತಾರೆ ‘ನೇಬರ್ ಹುಡ್ ಲೇಕ್‌ಇಂಪ್ರೂವ್ಮೆಂಟ್’ ಟ್ರಸ್ಟ್‌ನ ಅಧ್ಯಕ್ಷೆ, ಶ್ರೀಮತಿ ಉಷಾ ರಾಜ್‌ಗೋಪಾಲ್.

ಕೆರೆ ಶುದ್ಧಗೊಳಿಸುವ ಕಾರ್ಯವನ್ನು ಜಲಮಂಡಳಿ ಮಾಡುತ್ತದೆ. ಹಾಗೆಯೇ ಪಕ್ಕದ ಬ್ರಿಗೇಡ್ ಮಿಲ್ಲೇನಿಯಂ ವಸತಿ ಸಮುಚ್ಛಯದಿಂದ ಹರಿದು ಬರುವ ಕೊಳಚೆ ನೀರನ್ನೂ ಶುದ್ಧೀಕರಣಗೊಳಿಸುವ ‘ಪ್ಲಾಂಟ್’ಅನ್ನೂ ಅಳವಡಿಸಿದರೆ ಕೆರೆಗೆ ಮತ್ತಷ್ಟು ನೀರು ತುಂಬಬಹುದು ಎನ್ನುವ ಆಶಯವನ್ನು ಈ ಟ್ರಸ್ಟಿಗಳು ವ್ಯಕ್ತಪಡಿಸುತ್ತಾರೆ.

ಸಾರ್ವಜನಿಕರಲ್ಲಿ ಪರಿಸರ ಪ್ರೇಮವನ್ನು ಬೆಳೆಸಲು ಹಾಗೂ ಕೆರೆಯ ಬಗ್ಗೆ ಆಸಕ್ತಿ ಮೂಡಿಸಲು, ಈ ಸಂಸ್ಥೆ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತದೆ; ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಪಕ್ಷಿ ಪ್ರೇಮದ ಕುರಿತು ಕಥೆ, ಕವನ, ಪ್ರಬಂಧ, ಕೆರೆಯ ಕುರಿತು ಭಾಷಣ ಮುಂತಾದ ಸ್ಪರ್ಧೆಗಳಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಸುತ್ತಲೂ ಬೆಳೆದಿರುವ ‘ಕಳೆ’ ಕೀಳುತ್ತಾರೆ. ತಮ್ಮದೇ ಪರಿಕಲ್ಪನೆಯ ಕೆರೆ ಚಿತ್ರವನ್ನು ಬರೆಯುತ್ತಾರೆ. ‘ಕೆರೆ ಹಬ್ಬ’ ವನ್ನು ಆಚರಿಸುವ ಉದ್ದೇಶವೂ ಇದೇ ಆಗಿರುತ್ತದೆ. ಇದು ಎಲ್ಲರಿಗೂ ಸೇರಿದ ಕೆರೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಸಂರಕ್ಷಿಸುವದು ನಮ್ಮೆಲ್ಲರ ಹೊಣೆ ಎನ್ನುವ ಆಶಯದೊಂದಿಗೆ ಈ ಆಚರಣೆಗಳನ್ನು ಮಾಡಲಾಗುತ್ತದೆ.

ಈ ಕೆರೆಯ ಬದಿಯಲ್ಲಿ ನೆಟ್ಟಿರುವ ಮರಗಳಿಗೆ ನೀರುಣಿಸುವ ವ್ಯವಸ್ಥೆ ಸೊಗಸಾಗಿದೆ. ಪ್ರತಿಯೊಂದು ಮರದ ಬುಡಕ್ಕಿಂತ ಸ್ವಲ್ಪ ಮೇಲ್ಭಾಗದಲ್ಲಿ, ಪ್ಲಾಸ್ಟಿಕ್ ಬಾಟಲಿಯನ್ನು ಕತ್ತರಿಸಿ, ತಲೆಕೆಳಗಾಗಿ ಕಟ್ಟಲಾಗಿದೆ. ಮುಚ್ಚಳಕ್ಕೆ ಸಣ್ಣ ರಂಧ್ರ ಮಾಡಲಾಗುತ್ತದೆ. ತಲೆ ಕೆಳಗಾಗಿ ಇಟ್ಟ ಬಾಟಲಿಗೆ ನೀರು ಹನಿಸಿದರೆ, ಮುಚ್ಚಳದ ಮೂಲಕ ಸಣ್ಣದಾಗಿ ನೀರು ಮರಕ್ಕೆ ಬೀಳುತ್ತಲೇ ಇರುತ್ತದೆ. ‘ಇದು ಸಾಂಪ್ರದಾಯಿಕ ಪದ್ಧತಿ’ ಎನ್ನುತ್ತಾರೆ ನೂಪುರ್ ಜೈನ್.

ಪ್ರಶಸ್ತಿಗಳು

ಕೆರೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯನ್ನು ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ:
೧. ೨೦೧೨ರಲ್ಲಿ ‘ನಮ್ಮ ಬೆಂಗಳೂರು’ ಪ್ರಶಸ್ತಿ
೨. ಟಿ.ಸಿ.ಎಸ್ ಸಂಸ್ಥೆ ನಡೆಸಿದ ‘ಮ್ಯಾರಥಾನ್‌ವಾಕ್’ನಲ್ಲಿ ಎರಡನೇ ಬಹುಮಾನ
೩. ಪರಿಸರ ಪ್ರಶಸ್ತಿ
೪. ‘ಸ್ಪಾರ್ಕ್ ದ ರೈಸ್’ ಪ್ರಶಸ್ತಿ

ಈ ಎಲ್ಲ ಪ್ರಶಸ್ತಿಗಳಿಂದ ಬರುವ ಹಣವನ್ನೆಲ್ಲ ‘ಕೆರೆ’ ಅಬಿವೃದ್ಧಿಗಾಗಿಯೇ ಇವರು ಮೀಸಲಿರಿಸಿರುವದು ವಿಶೇಷ! ಕೆರೆಯ ಒಳ ಭಾಗದಲ್ಲಿ, ಸುತ್ತಲೂ ಕುರುಚಲು ಗಿಡಗಳು ಬೆಳೆದು ಪೊದೆಯಾಗಿದೆ. ಅದು ಪಕ್ಷಿಗಳು ಹುದುಗಿಕೊಂಡು, ತಮ್ಮದೇ ಆದ ಸಾಮ್ರ್ಯಾಜ್ಯದಲ್ಲಿ ವಿಹರಿಸಲು ಬಿಟ್ಟಿರುವ ನೈಸರ್ಗಿಕ ತಾಣ ಎಂದು ಉತ್ತರಿಸುತ್ತಾರೆ ಸಂಸ್ಥೆಯವರು.

ಈ ರೀತಿ ಕೆರೆಯ ಬಗ್ಗೆ ಆಸ್ಥೆ-ಆಸಕ್ತಿ ನಾಗರಿಕರಿಗೆ ಮೂಡುವದು ಅತ್ಯವಶ್ಯ. ಈ ಕೆರೆಯಲ್ಲಿ ಮೆಲ್ಲಗೆ ಪಕ್ಷಿಗಳು ತಮ್ಮ ಸಂಸಾರವನ್ನು ಹೂಡಲು ಹವಣಿಸುತ್ತಿವೆ.

ಚಿತ್ರ-ಲೇಖನ: ಆಶಾ ಹೆಗಡೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*