ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿಹೊಂಡವೆಂಬ ಸಂಜೀವಿನಿ

“ಜುಲೈ ಅರ್ಧಭಾಗ ಕಳೆದರೂ ಒಂದೇ ಒಂದು ಮಳೆ ಬಂದಿಲ್ಲ. ಆದರೂ ಕೃಷಿಹೊಂಡ ನಮ್ಮ ಬದುಕನ್ನೇ ಬದಲಾಯಿಸಿಬಿಟ್ಟಿದೆ” ಎನ್ನುತ್ತಾ ನಾಗರಕಟ್ಟೆಯ ರಾಜಪ್ಪನವರು ನಮ್ಮನ್ನೆಲ್ಲಾ ಕೃಷಿಹೊಂಡದ ಬಳಿ ಕರೆದೊಯ್ದರು. ನೀರು ಕೊನೆಯ ಹಂತದಲ್ಲಿ ಇತ್ತು. ಐದು ಎಚ್‌ಪಿ ಪಂಪ್ ನೀರೆಳೆಯುತ್ತಿತ್ತು. ಎರಡು ದಿನಕ್ಕೊಮ್ಮೆ ನಾಲ್ಕೂವರೆ ತಾಸುಗಳ ಕಾಲ ನೀರಿನ ಪೂರೈಕೆ. ಮೂರೂವರೆ ಎಕರೆ ಚೌಳು ನೆಲದ ದಾಹ ತಣಿಕೆ. ಇದರ ಮುಂದೆ ಬೋರ್‌ವೆಲ್ ಯಾವ ಲೆಕ್ಕ ಸಾರ್,” ರಾಜಪ್ಪನವರು ನಳನಳಿಸುತ್ತಿದ್ದ ತೆಂಗಿನತೋಟವನ್ನು ತೋರಿಸುತ್ತಾ ಹೇಳಿದರು.

ನಬಾರ್ಡ್ ಜಲಾನಯನ ನಿರ್ವಹಣೆ ಯೋಜನೆಗಳನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ನಿಸರ್ಗ ಸಂಸ್ಥೆಯವರು ನಿರ್ವಹಿಸುತ್ತಿದ್ದಾರೆ. IMG_8804ಜಂತಿಕೊಳಲು ಜಲಾನಯನ ಪ್ರದೇಶದಲ್ಲಿ ಕೃಷಿಹೊಂಡ ತೆಗೆಸಲು ಮನವೊಲಿಕೆ ಪ್ರಾರಂಭ. ಮಳೆಯೇ ಇಲ್ಲದ, ಕೆರೆಯೇ ತುಂಬದ ಊರಲ್ಲಿ ಕೃಷಿಹೊಂಡ ಏನು ಸಹಾಯ ಮಾಡೀತು ಎನ್ನುವ ಉಪೇಕ್ಷೆ ರೈತರದು. ನಾಗರಕಟ್ಟೆಯಲ್ಲಿ ಪಿ.ಟಿ. ಈಶ್ವರಪ್ಪ, ಡ್ರಿಪ್ ಮಲ್ಲಿಕಾರ್ಜುನ, ಎನ್.ಇ. ಈಶ್ವರಪ್ಪ, ರಾಜಪ್ಪ ಬಿನ್ ನಾಶಪ್ಪ, ಮಲ್ಲಿಕಾರ್ಜುನಯ್ಯ ಮಾಸ್ತರ್ ಮುಂತಾದವರು ತಮ್ಮ ಜಮೀನುಗಳಳ್ಲಿ ಕೃಷಿಹೊಂಡ ನಿರ್ಮಿಸಿಕೊಂಡರು. ಹೊಲದ ಸುತ್ತಲೂ ಬದುಗಳನ್ನು, ಮಧ್ಯದಲ್ಲಿ ಟ್ರಂಚ್‌ಗಳನ್ನು ಮಾಡಿಸಿದರು. ಇದರಿಂದ ಬಿದ್ದ ಮಳೆ ಅಲ್ಲಿಯೇ ಇಂಗಿತು. “ಹೀಗೆ ಮಾಡಿದ ಮೇಲೆ ನಮ್ಮ ಹೊಲದಿಂದ ಒಂದು ತೊಟ್ಟು ನೀರೂ ಸಹ ಕೋಡಿ ಸೇರಿ ಹರಿದುಹೋಗಿಲ್ಲ. ಎಲ್ಲವೂ ತಮ್ಮ ಹೊಲದಲ್ಲೇ ಡಿಪಾಸಿಟ್ ಆಗಿದೆ” ಎಂಬ ಹೆಮ್ಮೆ ಅವರೆಲ್ಲರದು.

 ಹೀಗೆ ಡಿಪಾಸಿಟ್ ಆದ ನೀರು ಅಲ್ಲಷ್ಟೇ ಉಳಿಯಲಿಲ್ಲ. ಅಕ್ಕಪಕ್ಕದವರಿಗೂ ಪ್ರೇರೇಪಣೆ ನೀಡತೊಡಗಿತು. ಇಸವಿ ೨೦೧೦ ಆಗಸ್ಟ್‌ನಲ್ಲಿ ಎರಡು ದಿನ ಸತತ ಮಳೆ ಸುರಿಯಿತು. ಪರಿಣಾಮ ಇಡೀ ಊರಿಗೆ ಊರೇ ನೀರುಕ್ಕತೊಡಗಿತು. ಆಗಲೇ ಜನರಿಗೆ ಬದುಗಳ ಹಾಗೂ ಕೃಷಿಹೊಂಡದ ಪವಾಡ ತಿಳಿಯಿತು.

 IMG_8803ರಾಜಪ್ಪನವರಿಗೆ ಸುಮಾರು ಎಂಟು ಎಕರೆ ಮಾವು ಹಾಗೂ ಅಡಿಕೆ ತೋಟವಿದೆ. ಊರಿನಿಂದ ದೂರದ ಚೌಳುಭೂಮಿಯಲ್ಲಿ ಒಂದಿಷ್ಟು ತೆಂಗಿನಗಿಡಗಳನ್ನು ಹಾಕಿ ಬಿಟ್ಟುಬಿಟ್ಟಿದ್ದರು. ಗೊಬ್ಬರ, ನೀರು ಪೂರೈಕೆ, ಹೊಲದ ಸ್ವಚ್ಛತೆ ಇದಕ್ಕೆಲ್ಲಾ ವಿಪರೀತ ಖರ್ಚು. ಅಡಿಕೆ ತೋಟದ ಆದಾಯದಲ್ಲಿ ಇದಕ್ಕೊಂದಿಷ್ಟು ಮೀಸಲು. ಪ್ರತಿವರ್ಷ ತೆಂಗಿನ ತೋಟದ ತ್ಯಾಜ್ಯಕ್ಕೆ ಬೆಂಕಿ. ಅಬ್ಬರದ ಮಳೆಗೆ ಮೇಲಿನ ಮಣ್ಣೆಲ್ಲಾ ಕೊಚ್ಚಿಹೋಗುತ್ತಿತ್ತು. ಇಡೀ ತೋಟಕ್ಕೆ ವಾರ್ಷಿಕ ಸಿಗುತ್ತಿದ್ದ ಫಸಲು ೨೦೦ ತೆಂಗಿನಕಾಯಿಗಳು ಮಾತ್ರ.

 ಕೃಷಿಹೊಂಡವನ್ನು ನಿರ್ಮಿಸಿದ ಪಕ್ಕದ ಹೊಲದ ರುದ್ರಪ್ಪನವರ ತೆಂಗಿನತೋಟ ರಾಜಪ್ಪನವರ ಕಣ್ಣು ಕುಕ್ಕಿತು. ತೆಂಗಿನ ಮಧ್ಯೆ ತರಕಾರಿ, ಗೊಬ್ಬರ ತಯಾರಿಕೆ, ಬದುಗಳ ಮೇಳೆ ಹುಲ್ಲು ಬೆಳೆಸಿದ್ದನ್ನು ನೋಡಿದ ರಾಜಪ್ಪನವರು ನಿಸರ್ಗ ಸಂಸ್ಥೆಯ ಮೇಲ್ವಿಚಾರಕರಾದ ಲೋಕೇಶಪ್ಪ ಹಾಗೂ ಇಂಜಿನಿಯರ್ ರಾಜಪ್ಪನವರನ್ನು ಭೇಟಿಯಾದರು. ಒಂಭತ್ತು ಅಡಿ ಆಳದ, ಅಷ್ಟೇ ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಯೇಬಿಟ್ಟರು. ಟೊಮ್ಯಾಟೋ, ಮೆಣಸಿನ ಸಸಿಗಳನ್ನು ಹಾಕಿಸಿದರು. ಒಂದೇ ವರ್ಷದಲ್ಲಿ ೫೬ ಟ್ರೆಂಚ್‌ಗಳಲ್ಲಿರುವ ತ್ಯಾಜ್ಯಗಳೆಲ್ಲಾ ೧೩೦ ತೆಂಗಿನಗಿಡಗಳಿಗೆ ಗೊಬ್ಬರವಾಗಿದೆ. ಬದುಗಳ ಮೇಲಿನ ಹುಲ್ಲು ಜಾನುವಾರುಗಳಿಗೆ ಮೇವು. ತಿಂಗಳಿಗೆ ಕೂಲಿ ಒಂದು ಸಾವಿರಕ್ಕೂ ಹೆಚ್ಚು ಉಳಿತಾಯ ಹಾಗೂ ಹೆಚ್ಚಿದ ಆದಾಯವನ್ನು ಲೆಕ್ಕ ಹಾಕಿಲ್ಲ ಎನ್ನುತ್ತಾರೆ ರಾಜಪ್ಪ.

ಊರಿಂದ ಗೊಬ್ಬರ ತಂದು ಹಾಕಿಸಲು ಟ್ರ್ಯಾಕ್ಟರ್ ಬಳಕೆ, ಕೂಲಿ ಬಳಕೆ ನಿಂತಿದೆ. ನೀರು ಹೊತ್ತು ಹಾಕಿಸುವ ಶ್ರಮ ನಿಂತಿದೆ. ತೆಂಗಿನಮರ ಹಸನಾಗಿದ್ದುIMG_8800 ಇಳುವರಿ ಹೆಚ್ಚಾಗಿದೆ. ಉಪಬೆಳೆ, ಹುಲ್ಲು ಇವೆಲ್ಲಾ ಸಿಗುತ್ತಿದೆ. ಇದನ್ನೆಲ್ಲಾ ಕೇವಲ ಒಬ್ಬನೇ ಸಹಾಯಕನನ್ನು ಇಟ್ಟುಕೊಂಡು ಸ್ವತಃ ರಾಜಪ್ಪನವರೇ ನಿರ್ವಹಿಸುತ್ತಿದ್ದಾರೆ.

“ಸಂಜೆ ಕೃಷಿಹೊಂಡದ ಏರಿ ಮೇಲೆ ಸೇರುವ ನವಿಲುಗಳ ಡ್ಯಾನ್ಸ್, ಅವುಗಳಿಗೆ ಗೀಜಗಗಳ ಸಂಗೀತ ಇವನ್ನೆಲ್ಲಾ ನೋಡಬೇಕು ಸಾರ್” ಎನ್ನುತ್ತಾರೆ ಪಕ್ಕದ ತೋಟದ ಮಲ್ಲಿಕಾರ್ಜುನ್. ಊರಲ್ಲಾದ ಸಾಲು ಸಾಲು ಕೃಷಿಹೊಂಡಗಳಿಂದಾಗಿ ಅವರ ಬಾವಿಯು ಉಕ್ಕಿಹರಿಯುತ್ತಿದೆ. ಇಡೀ ಊರೊಳಗಿನ ೧೦೦ಕ್ಕೂ ಹೆಚ್ಚು ಬೋರ್‌ವೆಲ್‌ಗಳು ಉಕ್ಕಿಹರಿಯುತ್ತಿವೆ. ೨೫ಕ್ಕೂ ಹೆಚ್ಚು ಒಣಗಿಹೋದ ಬಾವಿಗಳು ತುಂಬಿವೆ ಎನ್ನುವ ದಾಖಲಾತಿಯನ್ನು ನಿಸರ್ಗದ ಮೇಲ್ವಿಚಾರಕ ಲೋಕೇಶಪ್ಪ ನೀಡುತ್ತಾರೆ.

ನಾಗರಕಟ್ಟೆಯ ರೈತರಿಗೆ ಬರ ಎದುರಿಸುವ ಧೈರ‍್ಯ ಬಂದಿದೆ. ಸಾಲಗಳನ್ನೆಲ್ಲಾ ತೀರಿಸಬಲ್ಲೆವೆಂಬ ವಿಶ್ವಾಸ ಮೂಡಿದೆ. ಕೃಷಿಹೊಂಡ ಹಾಗೂ ಬದುಗಳು ಮಾಡಿದ ಪವಾಡವಿದು.

 

ಚಿತ್ರ-ಲೇಖನ: ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*