ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಹೊಂಡದಿಂದ ನೀರಿನ ಬವಣೆಗೆ ಕಡಿವಾಣ: ಶಂಕರ ಲಂಗಟಿಯವರ ಸಂದರ್ಶನ

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಗುಂಡ್ಯಾನಟ್ಟಿಯ ಕೃಷಿಕ ಶಂಕರ ಲಂಗಟಿ ಕೃಷಿಹೊಂಡದ ಮೂಲಕ ನೀರನ್ನು ಇಂಗಿಸಿ ಬರವನ್ನು ನೀಗಿಸುವ ಕೆಲಸ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಈ ಕೆಲಸಕ್ಕೆ ಕೈಹಾಕಿ ಯಶ ಕಂಡಿರುವುದು ವಿಶೇಷ. (more…)

ಡಾ. ಮಲ್ಲಣ್ಣ ನಾಗರಾಳ ಎಂಬ ನೇಗಿಲಯೋಗಿ

DR MALLANNA NAGARALರೈತ ಮೊದಲು ಹುಟ್ಟಿದ್ನೋ? ಭೂಮಿ ಮೊದಲು ಹುಟ್ಟಿತೋ? ನೋಡ್ರಿ..ಭೂಮಿ ಆ ದೇವರ ಸೃಷ್ಟಿ ಅಂತ ತಾನಾಗಿಯೇ ಬೆಳಿ ಬೆಳಕೊಂತ ಬಂತಲ್ಲ. ಆದರ ಹೆಚ್ಚಿನ ಬೆಳಿ ಬೆಳಿಬೇಕು ಅಂತ ಹೈಬ್ರೀಡ್ ಬೀಜ, ರಾಸಾಯನಿಕ ಗೊಬ್ಬರ ಬಳಸಲಿಕ್ಕೆ ಶುರು ಮಾಡಿದ್ವಿ. ಘನಮಠದ ಶಿವಯೋಗಿಗಳು ಹೇಳಿಧಾಂಗ ಸಾವಯವ ಪದ್ಧತಿ ಕೃಷಿ ಮಾಡಿದ್ರ ನಾಲ್ಕಾರು ಚೀಲ ಕಡಿಮೆ ಬಂದೀತು. ಆದ್ರ ನಮ್ಮ ಭೂಮಿ ಹೆಚ್ಚು ಬಾಳಕಿ ಬರ್ತದ”

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ೨೦೦೬ನೇ ಸಾಲಿನ ೨೦ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾದ ಹುನಗುಂದದ ಪ್ರಗತಿಪರ ಕೃಷಿಕ ಡಾ.ಮಲ್ಲಣ್ಣ ಶಂಕ್ರಪ್ಪ ನಾಗರಾಳ ಅವರ ಹೃದಯಾಂತರಾಳದ ಮಾತುಗಳವು.

ಬಾಗಲಕೋಟೆ ಜಿಲ್ಲೆ, ಹುನಗುಂದದ  ಅವರ ಪುಟ್ಟ ಸಂದರ್ಶನದ ಸಾರ ಇಲ್ಲಿದೆ.

ಒಕ್ಕಲುತನ ತೀವ್ರ ಶ್ರಮದ್ದು. ಇದು ಮಣ್ಣಿನ ಮಕ್ಕಳ ಉಪಜೀವನಕ್ಕೊಂದು ಹಾದಿ. ಆದರೆ ಅವರ ಶ್ರಮದ ಅನ್ನದ ಮೇಲೆ ಜಗತ್ತು ನಿಂತಿದೆ. ರೈತ ಭೂಮಿ ಸೇವೆ ಮಾಡ್ತಾ, ತನ್ನ ಬೆವರು ಅದಕ್ಕೆ ಉಣಿಸ್ತಾ, ಒಕ್ಕಲುತನ ಶರಣ ಸಂಸ್ಕೃತಿ ಅಂತ ನಂಬಿ, ನಿಸರ್ಗ ಪಾಲನೆ, ಪೋಷಣೆ ಧರ್ಮ ಅಂತ ಪಾಲಿಸಿಕೊಂಡು ದನ ಕರುಗಳನ್ನು ಸಾಕಿಕೊಂಡು, ಭೂಮಿ ನಂಬಿ ಬದುಕಿದವ ನೇಗಿಲ ಶರಣ- ರೈತ.

ಡಾ.ಮಲ್ಲಣ್ಣ ಅವರು ಅಭಿಪ್ರಾಯ ಪಡುವಂತೆ, ನಾವು ಈಗ ಪ್ರತಿಪಾದಿಸುತ್ತಿರುವ ಸಾವಯವ ಕೃಷಿ ಇಂದು-ನಿನ್ನೆಯದಲ್ಲ. ದನ-ಕರುಗಳ ತ್ಯಾಜ್ಯ, ಜೀವಾಂಮೃತ, ಹೊಲದ ಕಸ-ಕಡ್ಡಿ ಕೊಚ್ಚಿ ಹಾಕಿ ಹಿರಿಯರು ಮಾಡಿಕೊಳ್ಳುತ್ತ ಬಂದ ಅನ್ನ ಬೆಳೆಯುವ ಕಾರ್ಯ. ಅದು ಐತಿಹಾಸಿಕವಾದದ್ದು. ಈ ತತ್ವ ಘನಮಠ ಶಿವಯೋಗಿಗಳು ಪ್ರತಿಪಾದಿಸಿದ್ದು. ಅದನ್ನೇ ನಮ್ಮ ಅಪ್ಪ, ಅಜ್ಜ ಈಗ ನಾನು ಪಾಲಿಸಿಕೊಂಡು ಹೊರಟೀನಿ ಎನ್ನುತ್ತಾರೆ.

ಇವತ್ತು ಅನಿವಾರ್ಯ ಪಕ್ಷ ಶಗಣಿ ಗೊಬ್ಬರ ಎಲ್ಲಾಕಡೆ ಕಡಿಮೆ ಪ್ರಮಾಣದಲ್ಲಿ ಸಿಗುತ್ತಿದೆ. ಯಂತ್ರೋಪಕರಣ ಹೊಲಗಳಿಗೆ ನಾಲ್ಕೂ ಕಡೆಯಿಂದ ಲಗ್ಗಿ ಹಾಕ್ಯಾವು. ಭೂಮಿ ಅತೀ ಹೆಚ್ಚು ನೀರು ಉಂಡಾಗ ೧ ಕೂರಿಗೆ ಅಂದ್ರ ೪ ಎಕರೆಗೆ ಬಿಳಿ ಜೋಳ ಬೆಳೆಯಲು ರಾಸಾಯನಿಕ ಗೊಬ್ಬರ ೨ ಚೀಲ ಡಿ.ಏ.ಪಿ, ೧ ಚೀಲ ಯೂರಿಯಾ ಅಥವಾ ೪ ಎಕರೆ ಕಡ್ಲಿ ಬಿತ್ತಿದರ ೨ ಚೀಲ ಡಿ.ಏ.ಪಿ ಹಾಕ್ತೀವಿ.
ಆದರ ಇದರಿಂದ ನಮಗೇನು ಹೆಚ್ಚು ಇಳುವರಿ ಕಂಡುಬಂದಿಲ್ಲ. ಮೊದಲಿನ ಸಾವಯವ ಪದ್ಧತಿಯೊಳಗ ಬೆಳೆದಾಗ ೮ ರಿಂದ ೧೦ ಚೀಲ ಜೋಳ ಬಂದಿತ್ತು. ಈಗ ರಾಸಾಯನಿಕ ಬಳಸಿದರ ೧೦ ರಿಂದ ೧೨ ಚೀಲ ೧ ಎಕರೇಕ ಪೀಕು ಬಂದದ ಅಷ್ಟ! ಅಂತ ಡಾ.ಮಲ್ಲಣ್ಣ ಅನುಭವ ಹಂಚಿಕೊಂಡ್ರು.

ಈಗಿನ ರೈತರು ನಾವು ಶ್ರಮಜೀವಿಗಳಲ್ಲ. ಈ ಮಾತು ಹೇಳಬೇಕಾದ್ರ ದು:ಖ ಆಗ್ತದ. ಮೇಲಾಗಿ ಅಂದ ನಮ್ಮ ಅಜ್ಜ-ಮುತ್ಯಾನ ಕಾಲಕ್ಕ ಜಾನುವಾರುಗಳ ನಮ್ಮ ರೈತನ ಬೆನ್ನೆಲುಬಾಗಿದ್ದವು. ಈಗ ನಮ್ಮ ಕೃಷಿಗೆ ಯಂತ್ರಗಳ ಜೀವನಾಡಿ! ಜಾನುವಾರು ಕಟ್ಟಿದರ ಮೇಯಿಸಿಕೊಂಡು ಬರೋರು ಯಾರು? ಸಗಣಿ ಬಳೆಯೋರು ಯಾರು? ಅವಕ್ಕ ತುರುಸಿ ಮೇವ್ಚು ಹಾಕುವವರು ಯಾರು? ಹಂಗ..ರೈತನ ಮಕ್ಕಳೆಲ್ಲ ಕಲಿತು, ವಿದ್ಯಾವಂತರಾಗಿ ನೌಕರಿ ಹುಡುಕೊಂಡು ಹೊರಟರು. ನಮ್ಮ ಎಲ್ಲಾ ಒಕ್ಕಲುತನದ ಮನೆಗಳೊಳಗ ಈಗ ಈ ಪರಿಸ್ಥಿತಿ ಐತಿ. ರಟ್ಟ್ಯಾಗ ಶಕ್ತಿ ಇರೋರು ಯಾರೂ ನಮ್ಮ ಮನೆಯೊಳಗ ಇಲ್ಲ. ವಯಸ್ಸಾದ ಮುದುಕ ಮಂದಿ ನೇಗಿಲ ಹಿಡಿಯೋ ಅನಿವಾರ್ಯತೆ ಸೃಷ್ಠಿ ಆಗೈತಿ. ಟ್ರ್ಯಾಕ್ಟರ್ ದಿಂದ ಹೊಲ ಹರಗೋದು. ರಾಸಾಯನಿಕ ಗೊಬ್ಬರ ಮಣ್ಣಿಗೆ ಸವರೋದು. ಬೇಕಾಬಿಟ್ಟಿ ಬಿತ್ತೋದು, ಬೆಳೆಯೋದು ಅಷ್ಟ! ನಿಟ್ಟುಸಿರು ಬಿಟ್ರು ಡಾ.ಮಲ್ಲಣ್ಣ.

ಡಾ.ಮಲ್ಲಣ್ಣ ಅವರ ಮುತ್ತ್ಯಾ ರಾಯಪ್ಪ ಅಂತ ಇದ್ರು. ಅವರ ಹೆಸರಿನ ಕೆರಿ ‘ರಾಯಪ್ಪನ ಕೆರಿ’ ಇಂದಿಗೂ ಊರ ಮಂದಿಯ ದಾಹ ತಣಿಸುವ ಕೆರಿ. ೧೯೧೩ ರೊಳಗ ಅವರು ಕೈ ಬರಹದೊಳಗ ಕೃಷಿ ಜ್ನಾನ ಪ್ರದೀಪಿಕೆ ಪುಸ್ತಕ ಪ್ರಕಟಿಸಿದ್ರು. ಮಳೆ ನಂಬಿದ ಶುಷ್ಕಿ ಜಮೀನಿನೊಳಗ ಒಡ್ಡು, ದುಂಡಾವರ್ತಿ, ಸಮಪಾತಳಿ ಬಗ್ಗೆ ವೈಜ್ನಾನಿಕವಾಗಿ ಮಳೆಯಿಂದ ಬಿದ್ದ ನೀರನ್ನ ಹಿಡಿದಿಟ್ಟುಕೊಂಡು ಬೆಳಿ ಪಡೆಯುವ ಬಗ್ಗೆ ಸವಿವರ ಮಾಹಿತಿ ಇದೆ.

ಅದರೊಳಗಿರುವ ಮಾಹಿತಿಯನ್ನ ಆಧರಿಸಿ ಸುಮಾರು ೨೮ ಎಕರೆ ಹೊಲದ ಮಣ್ಣ ಕಡಿದು ಸಮಪಾತಳಿ ಮಾಡಿದ್ರು ಮಲ್ಲಣ್ಣ. ಎಕರೆಗೆ ಒಂದರಂತೆ ನಿವೇಶನ ಮಾಡಿ ಉತ್ಥಾನ ಜಮೀನಾಗಿಸಿ ಹದಗೊಳಿಸಿ ಅಲ್ಲಿ ಬಿದ್ದ ಮಳಿ ನೀರು ಮತ್ತ ಮಣ್ಣು ಹೊರಗ ಹರದ ಹೋಗಬಾರದು ಹಂಗ ತಳ ಒಡ್ಡು ಹಾಕಿ ಕ್ರಿಕೇಟ್ ಗ್ರೌಂಡ್ತDR NAGARALರಹ ಕಾಣುವಹಂಗ ಮಾಡೇನಿ ಅಂದ್ರು ಮಲ್ಲಣ್ಣ.

ತಮ್ಮ ಹೊಲಕ್ಕ ಉತ್ತಮ ಗೊಬ್ಬರ ೨೫ ಗಾಡಿ, ಮಧ್ಯಮ ೨೦ ಗಾಡಿ, ಕನಿಷ್ಠ ೧೫ ಗಾಡಿ ೧ ಎಕರೆಗೆ ಗೊಬ್ಬರ ಹಾಕಬೇಕು. ಎರಿ ಭೂಮಿ ಇದ್ರ ಒಮ್ಮೆ ಗೊಬ್ಬರ ಹಾಕಿದ್ರ ಕಾಲಗೈ ಮಾಡಿಕೊಂತ ಹೋದ್ರ ೧೦-೧೨ ವರ್ಷ ಒಳ್ಳೆಯ ಪೀಕು ಬರತೈತಿ ಅಂತ ಘನಮಠ ಶಿವಯೋಗಿಗಳು ನಮಗೆಲ್ಲ ಹೇಳಿದ್ರು. ೧೯೬೨ ರೊಳಗ ನಾವು ೧ ಎಕರೆ ಪ್ಲಾಟ್ ಗೆ ೨೫ ಗಾಡಿ ಗೊಬ್ಬರ ಹಾಕಿ, ೨ ಸಾಲು ಮಡಕಿ ಹೊಡದು, ೫ ರಿಂದ ೬ ಸಾಲು ಹರಗಿ, ೬ ರಿಂದ ೧೫ ಚೀಲ ಜೋಳ ಬೆಳದಿದ್ವಿ ಈ ಒಣ ಹೊಲದೊಳಗ ಅಂತಾರ ಮಲ್ಲಣ್ಣ. ಮುಂದ ಆಸೆ ಹುಟ್ಟಿ ಧನ್ನೂರು, ಧಮ್ಮೂರು, ರಾಮೋಟಗಿ, ಬಿಂದ್ವಾಡ, ಹಗೇದಾಳ ಊರಾಗ ಅಡ್ಡಾಡಿ ಗೊಬ್ಬರ ಶೇಖರಿಸಿ ಹೊಲಗಳಿಗೆ ಗೊಬ್ಬರ ತುಂಬಿದ್ವಿ. ೮ ಎಕರೆಗೆ ೨-೩ ಸಾಲು ಗೊಬ್ಬರ ಎಳದ್ವಿ, ಹಸುರೆಲೆ ಗೊಬ್ಬರ ಹಾಕಿದ್ವಿ, ಕುರಿ ತರಬಸೋ ಕಾಯಕ ಮಾಡಿದ್ವಿ. ಹಿಂಗ ೧೪ ಎಕರೇಕ ನಾವು ಎಷ್ಟು ಬೆಳೆದಿದ್ವಿ ಅಂದ್ರ ೧೫೦ ಚೀಲ! ೨೦ ಎಕರೇಕ ೨೦೦ ಚೀಲ, ೮ ಎಕರೆ ಪ್ಲಾಟ್ ಗೆ ೮೦ ಚೀಲ ಜೋಳ ಬಂತು. ದನ-ಕರುಗಳಿಗೆ ಗೊಬ್ಬರ ಜೊತೆಗೆ ಕಾಲಗೈ ಎರಡೂ ನಮ್ಮ ಖುಷ್ಕಿ ಬೇಸಾದವರನ್ನ ಬದುಕಿಸ್ಯಾವು.

ನೀರಾವರಿ ಹೊಲ/ತೋಟ ಇರೋರು ಉರುಳು ಹಾಕಿಕೊಳ್ಳೊ ಮಟ್ಟಕ್ಕ ಇಳಿದಾಗ ನಾವು ಭೂಮಿ ಪ್ರೀತಿಸಿ ಬದುಕಿ ತೋರಿಸಿವಿ ಇದಲ್ಲ ಮತ್ತ ಅಂತ ಸವಾಲು ಹಾಕಿದ್ರು ಮಲ್ಲಣ್ಣ. ೧೯೭೦ರಿಂದ ತಂದಿ ಶಂಕ್ರೆಪ್ಪನವರಿಗೆ ಬಲಗೈ ಆಗಿ ಕೃಷಿ ಕಾಯಕ ನಂಬಿ ಬದಿರೋ ಮಲ್ಲಣ್ಣನಿಗೆ ಗೌರವ ಡಾಕ್ಟರೇಟ್ ಸಿಕ್ಕಿದ್ದು ಅರ್ಥಪೂರ್ಣ ಅಂತ ಅನಿಸ್ತು.