ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೃಷಿ ಹೊಂಡದಿಂದ ನೀರಿನ ಬವಣೆಗೆ ಕಡಿವಾಣ: ಶಂಕರ ಲಂಗಟಿಯವರ ಸಂದರ್ಶನ

ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಗುಂಡ್ಯಾನಟ್ಟಿಯ ಕೃಷಿಕ ಶಂಕರ ಲಂಗಟಿ ಕೃಷಿಹೊಂಡದ ಮೂಲಕ ನೀರನ್ನು ಇಂಗಿಸಿ ಬರವನ್ನು ನೀಗಿಸುವ ಕೆಲಸ ಮಾಡಿದ್ದಾರೆ. ಮೂರು ವರ್ಷದ ಹಿಂದೆ ಈ ಕೆಲಸಕ್ಕೆ ಕೈಹಾಕಿ ಯಶ ಕಂಡಿರುವುದು ವಿಶೇಷ. ತಮ್ಮ ಕೊಳವೆಬಾವಿಯಲ್ಲಿ ಉಂಟಾದ ನೀರಿನ ಕೊರತೆ ಹಾಗೂ ವಿವಿಧ ತರಬೇತಿಗಳಲ್ಲಿ ಭಾಗವಹಿಸಿ ಪಡೆದ ಮಾಹಿತಿಯಿಂದ ನೀರಿಂಗಿಸುವ ಅಗತ್ಯದ ಅರಿವು ಇವರಿಗಾಗಿತ್ತು.

ಇವರ ಜಮೀನು ಉತ್ತರ-ದಕ್ಷಿಣವಾಗಿದೆ. ಹೊಲದ ಮೂರು ದಿಕ್ಕಿನಿಂದ ಹರಿದು ಬಂದ ನೀರು ಪಶ್ಚಿಮ ದಿಕ್ಕಿನಲ್ಲಿರುವ ಹಳ್ಳವನ್ನು ಸೇರುತ್ತಿತ್ತು. ಹೀಗೆ ಹೊಲದಿಂದ ಓಡುತ್ತಿರುವ ನೀರನ್ನು ತಡೆಯುವುದಕ್ಕಾಗಿ ೪೦ ಅಡಿ ಉದ್ದ, ೪೦ ಅಡಿ ಅಗಲ ಹಾಗೂ ೧೦ ಅಡಿ ಆಳದ ಕೃಷಿ ಹೊಂಡ ನಿರ್ಮಿಸಿದರು. ನೀರಿನ ಸಂಗ್ರಹದ ಜೊತೆಗೆ ಮಣ್ಣು ಸಂರಕ್ಷಣೆಗೂ ಆದ್ಯತೆ ನೀಡಿದರು. ಕೃಷಿಹೊಂಡದ ಸುತ್ತಲೂ ಬದು ನಿರ್ಮಿಸಿ ಅದರ ಮೇಲೆ ಗಿಡಮರಗಳನ್ನು ನೆಟ್ಟಿದ್ದಾರೆ. ನೀರಿಂಗಿಸಿದ ಪರಿಣಾಮ ಕೊಳವೆ ಬಾವಿ ನೀರಿನ ಮಟ್ಟ ಕಡಿಮೆಯಾಗಿಲ್ಲ. ‘ನೀರನ್ನು ಎಷ್ಟು ಬೇಕೋ ಅಷ್ಟು ಉಪಯೋಗ ಮಾಡ್ತೇವೆ. ಖರ್ಚು ಮಾಡೋದಿಲ್ಲ. ಹಾಗಾಗಿ ನೀರಿನ ಕೊರತೆ ಕಾಣಿಸಿಲ್ಲ’ ಎನ್ನುತ್ತಾರೆ. ಒಂದು ವರ್ಷದಿಂದ ಸಣ್ಣ ಪ್ರಮಾಣದಲ್ಲಿ ಮೀನು ಸಾಕಾಣಿಕೆ ಪ್ರಾರಂಭಿಸಿದ್ದಾರೆ. ಅವರ ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ಈ ನೀರಿಂಗಿಸುವ ಕೆಲಸ ಯಾವಾಗ ಪ್ರಾರಂಭ ಹಾಗೂ ಹೇಗೆ ?

krishi honda article photo೨೦೧೨ರಲ್ಲಿ, ನಾನು ಕೃಷಿ ಪ್ರಯೋಗಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ವಿವಿಧ ಕಾರ್ಯಕ್ರಮಗಳಿಗೆ ಹೋಗುತ್ತಿದೆ. ಆ ಸಮಯದಲ್ಲಿ ನೀರಿನ ಬಳಕೆ ಬಗ್ಗೆ ಸಾಧಕರ ಯೋಜನೆಗಳನ್ನು ನೋಡುತ್ತಿದ್ದೆ. ಅದೇ ಪ್ರೇರಣೆಯಾಯಿತು. ನಮ್ಮದು ಅರೆ ಮಲೆನಾಡು, ಮುಂದೆ ನನಗೆ ಇದು ಉಪಯೋಗಕ್ಕೆ ಬರುವುದು ಎಂದು ಕೊಳವೆ ಬಾವಿ ಪಕ್ಕದಲ್ಲಿಯೇ ಈ ಕೃಷಿಹೊಂಡ ನಿರ್ಮಾಣ ಮಾಡಿದೆ.

ಖರ್ಚು ಮತ್ತು ವಿಸ್ತೀರ್ಣದ ಬಗ್ಗೆ ಹೇಳಿ?

ಸರ್ಕಾರಿ ಇಲಾಖೆಗಳ ಬಾಗಿಲಗೆ ಅಲೆದಾಡಿದರೆ ವಿಳಂಬವಾಗುವುದು ಖಚಿತ. ಇದನ್ನು ಅರಿತು ಸಬ್ಸಿಡಿಯ ಹಂಗು ತೊರೆದು ಸ್ವಂತ ೧೮ ಸಾವಿರ ಖರ್ಚು ಮಾಡಿ ಕೃಷಿ ಹೊಂಡ ನಿರ್ಮಿಸಿದ್ದೇನೆ. ೪೦ ಅಡಿ ಅಗಲ, ೪೦ ಅಡಿ ಉದ್ದ ಹಾಗೂ ೧೦ ಅಡಿ ಆಳ ಇದೆ. ಅದರಿಂದ ಹೊರತೆಗೆದ ಮಣ್ಣನ್ನು ಜಮೀನಿನ ತಗ್ಗುಗಳಿಗೆ ಹಾಕಿ ಸಮ ಮಾಡಿದ್ದೇನೆ. ಹಾಗಾಗಿ ಸಮತಟ್ಟು ಮಾಡುವ ಖರ್ಚು ಕೂಡಾ ಊಳಿತಾಯವಾಯಿತು. ಹೀಗೆ ಕೃಷಿಹೊಂಡ ಬಹುಪಯೋಗಿಯಾಯಿತು.

ಇದರಿಂದ ಏನೇನು ಅನುಕೂಲವಾಗಿದೆ?

IMG_20150623_145634ಮುಖ್ಯವಾಗಿ ಭತ್ತ, ತರಕಾರಿಗಳಿಗೆ ಬಳಕೆ, ಅದರಲ್ಲಿ ಕೈತೋಟ ಮಾಡಲು ಈ ನೀರೇ ಉಪಯೋಗವಾಗುತ್ತದೆ ಹಾಗೂ  ಜಮೀನಿನ ಇಳಿಜಾರಿಗೆ ಈ ಹೊಂಡ ಇರುವದರಿಂದ ನೀರೆಲ್ಲಾ ಇದರಲ್ಲಿಯೇ ಶೇಖರಣೆಯಾಗುತ್ತದೆ. ಇದರ ಸುತ್ತಮುತ್ತ ಸುಮಾರು ೨೦೦ ಗಿಡಗಳಿವೆ. ಹೆಬ್ಬೇವು, ಚೊಗಚಿ, ಮಾವು, ಬಾಳೆ  ಗಿಡಗಳನ್ನು ನೆಟ್ಟು, ಅದರಿಂದಲೂ ಆದಾಯ ಪಡೆಯುತ್ತಿದ್ದೇನೆ. ಹೊಂಡದಲ್ಲಿ ನೀರು ನಿಂತ ಫಲವಾಗಿ ನನ್ನ ಜಮೀನಿನ ಸುತ್ತಲೂ ಒಂದು ಜೈವಿಕ ಕ್ರಿಯೆ ನಡೆಯುವುದರಿಂದ, ಬೆಳೆಗಳಿಗೂ ಇದು ಅನಕೂಲವಾಗಿದೆ. ಮುಂಚೆ ಕೊಳವೆ ಬಾವಿ ತೆಗೆಸಿದಾಗ ನನಗೆ ದೊರೆತ ನೀರು ಕೇವಲ ೧.೫ ಇಂಚು, ಅದು ಕೂಡಾ ಗ್ಯಾಪ್  ಮಾಡಿ ನೀರು ಕೊಡುತ್ತಿತ್ತು, ಇದರಿಂದ ಕೃಷಿ ಮಾಡುವುದು ಕಷ್ಟಕರವಾಗಿತ್ತು. ನಂತರ ಹೊಂಡದಲ್ಲಿ ನಿಂತ ನೀರು ನೆಲದಲ್ಲಿ ಇಂಗಿ ಈಗ ಕೊಳವೆಬಾವಿ ರಿಚಾರ್ಜ್ ಆಗಿ ನಿರಂತರವಾಗಿ ನೀರು ದೊರೆಯತ್ತ್ತಿದೆ. ಹೊಂಡ ನಿರ್ಮಾಣವಾದಾಗಿನಿಂದ ಕೊಳವೆಬಾವಿ ನೀರಿನ ಬಳಕೆ ಕೂಡಾ ಕಡಿಮೆಯಾಗಿದೆ. ಸುಮಾರು ೮ ತಿಂಗಳ ಕಾಲ ಕೃಷಿ ಹೊಂಡ ತುಂಬಿರುತ್ತದೆ. ಬೇಸಿಗೆಯಲ್ಲಿ ಸ್ವಲ್ಪ ಕಡಿಮೆಯಾಗುತ್ತದೆ. ನನ್ನ ಒಟ್ಟು ೩ ಏಕರೆಯಲ್ಲಿ ಬೀಳುವ ಶೇ.೭೫ರಷ್ಟು ಮಳೆ ನೀರು ವೇಸ್ಟ್ ಆಗದೇ ಹೊಂಡ ಸೇರುತ್ತದೆ.

ಹೊಂಡದಲ್ಲಿ ಮೀನುಗಾರಿಕೆ ಮಾಡ್ತೀನಿ ಅಂದ್ರಿ, ಅದು ಲಾಭದಾಯಕವೇ?

ನನಗೆ ಇದು ಹೊಸತಾಗಿದ್ದರಿಂದ ಮೊದಲ ಪ್ರಯತ್ನದಲ್ಲಿ ಮೀನುಗಳು ಸತ್ತವು. ಆದರೂ ಪ್ರಯತ್ನ ಬಿಡದೆ ಮತ್ತೆ ಮರಿಗಳನ್ನು ತಂದು ಬಿಟ್ಟೆ, ಇದರ ಫಲವಾಗಿ ಈ ವರ್ಷ ೧೫,೦೦೦ ರೂ. ಆದಾಯ ಪಡೆಯುತ್ತಿದ್ದೇನೆ.

ಕೃಷಿ ಹೊಂಡ ಮಾಡಿದ್ರೆ ಜಮೀನು ವೇಸ್ಟ್ ಅಂತಾರಲ್ಲ ಕೆಲವರು?

ಅದು ತಪ್ಪು ತಿಳಿವಳಿಕೆ, ಒಂದೆರಡು ಗುಂಟೆ ಜಮೀನು ಕೃಷಿ ಹೊಂಡಕ್ಕೆ ಬೇಕು, ಅಷ್ಟು ಜಾಗದಲ್ಲಿ ತುಂಬಾ ಬೆಳೆಯಲು ಆಗುವುದಿಲ್ಲ, ಆದರೆ ಹೊಂಡ ನಿರ್ಮಿಸಿದರೆ ಆಗುವ ಲಾಭಗಳ ಮುಂದೆ ಈ ನಷ್ಟ ಏನೇನೂ ಅಲ್ಲ, ಹೊಂಡವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಜಾಣ್ಮೆ ಇರಬೇಕು.

ಹೊಂಡ ನಿರ್ಮಾಣಕ್ಕೆ ಸರ್ಕಾರದ ಹಲವು ಇಲಾಖೆಗಳು ನೆರವು ನೀಡುತ್ತವೆ, ಅದನ್ನು ಪಡೆಯುವುದು ತಪ್ಪೇ?

ಖಂಡಿತ ತಪ್ಪಿಲ್ರೀ, ಆದರೆ ನನಗೆ ಟೈಮ್ ಇಲ್ಲದಿದ್ರಿಂದ ಇಲಾಖೆಗಳ ಸಹಾಯ ಕೇಳಲಿಲ್ಲ, ಬೇಕಾದವರು ಹೋಗಿ ಸಬ್ಸಿಡಿ ಪಡೆಯಬಹುದು, ಅದರೆ ಸದುಪಯೋಗ ಪಡಿಸಿಕೊಳ್ಳಬೇಕು.

ನೀರಿನ ಕೊರತೆ ಅಷ್ಟಾಗಿಲ್ಲದ, ಅರೆಮಲೆನಾಡಿನ ಶಂಕರಣ್ಣನವರೇ ಕೃಷಿ ಹೊಂಡ ತೆಗೆದು ನೀರು ಸಂರಕ್ಷಣೆಗೆ ಮುಂದಾಗಿರುವಾಗ ಸದಾ ನೀರಿನ ಬವಣೆ ಎದುರಿಸುವ ಬಯಲುಸೀಮೆಯ ಜನರು ಎಚ್ಚೆತ್ತುಕೊಳ್ಳುವುದು ಈಗಿನ ತುರ್ತು.

 ಚಿತ್ರ-ಲೇಖನ: ವಿನೋದ ರಾ ಪಾಟೀಲ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*