ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಎಲ್ಲರಿಗೂ ಬೇಕು ದುಬಾರಿ ತಂತ್ರಜ್ಞಾನ!!

ಇಸವಿ ೨೦೧೯ಕ್ಕೆ ಚನ್ನೈ ಬಯಸುವ ನೀರು ಎಷ್ಟು ಗೊತ್ತಾ!! ದಿನಕ್ಕೆ ೧೫೬೦ ಮಿಲಿಯನ್ ಲೀಟರ್‌ಗಳು!!!! ಆಗ ಸಿಗುವ ನೀರು ದಿನಕ್ಕೆ ಕೇವಲ ೮೪೦ ಮಿಲಿಯನ್ ಲೀಟರ್‌ಗಳು ಮಾತ್ರಾ. ಇನ್ನುಳಿದ ೭೨೦ ಮಿಲಿಯನ್ ಲೀಟರ್‌ಗಳಷ್ಟು ನೀರನ್ನು ತರುವುದು ಎಲ್ಲಿಂದ? ಈ ಅಂತರವನ್ನು ತುಂಬಲು ಚನ್ನೈನ ಮೆಟ್ರೋಪಾಲಿಟನ್ ವಾಟರ್ ಸಪ್ಲೈ ಮತ್ತು ಸೀವೇಜ್ ಬೋರ್ಡ್ ಇನ್ನೆರಡು ಸವಳು ನಿವಾರಣಾ ಘಟಕಗಳನ್ನು ಅಳವಡಿಸಲು ತಯಾರಿ ನಡೆಸಿದೆ. ಅದು ದಿನಕ್ಕೆ ೧೫೦ ಮಿಲಿಯನ್ ಲೀಟರ್‌ಗಳ ಮತ್ತು ೪೦೦ ಮಿಲಿಯನ್ ಲೀಟರ್‌ಗಳ ಘಟಕಗಳನ್ನು ನಿರ್ಮಿಸಲು ಪರವಾನಿಗೆಗಾಗಿ ಕೊರಿಕೆ ಸಲ್ಲಿಸಿದೆ. ಅದು ಬಹುಷಃ ನಿಮ್ಮೇಲಿಯ ಹತ್ತಿರದ ಹಳ್ಳಿ ಪೆರೂರಿನಲ್ಲಿ ಆಗಲಿದೆ.

ಮಿನ್‌ಜೂರಿನಲ್ಲಿರುವ ಸವಳು ನಿವಾರಣಾ ಘಟಕವು ಭಾರತದ ಅತ್ಯಂತ ದೊಡ್ಡ ಘಟಕ. ಅದನ್ನು ಇಸವಿ ೨೦೧೦ರಲ್ಲಿ ಚನ್ನೈನ ಉತ್ತರದಲ್ಲಿರುವ ಕಟ್ಟುಪಲ್ಲಿಯಲ್ಲಿ ನಿರ್ಮಿಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ಒಂದು ದಿನವೂ ಎಡಬಿಡದೆ ೧೦೦ ಮಿಲಿಯನ್ ಲೀಟರ್ ನೀರನ್ನು ನೀಡುತ್ತಿದೆ. ಎನ್ನೋರೆ, ಮನಾಲಿ, ತಿರುವಟ್ಟಿಯೂರ್, ತೋಂಡಿಯಾರ್‌ಪೇಟ್ ಮತ್ತು ಮಾಧಾವರಮ್‌ಗಳಿಗೆ ಹಂಚಲಾಗುತ್ತಿದೆ. ನಿಮ್ಮೇಲಿ ಇರುವುದು ಚನ್ನೈನ ದಕ್ಷಿಣದಲ್ಲಿ. ಸುಮಾರು ೩೫ ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಈ ಘಟಕವು ಪೂರ್ವ ಕರಾವಳಿ ರಸ್ತೆಗೆ ಹೊಂದಿಕೊಂಡಿದೆ. ಇಸವಿ ೨೦೧೩ರಿಂದ ಪ್ರತಿದಿನ ೧೦೦ ಮಿಲಿಯನ್ ಲೀಟರ್ ನೀರನ್ನು ಸರಬರಾಜು ಮಾಡುತ್ತಿದೆ. ಶೋಲಿಂಗಾನಲ್ಲೂರ್, ನೀಲಂಗಾರೈ, ದೊರೈಪಕ್ಕಮ್, ತಿರುವನ್ಮಿಯೂರ್, ವೇಲಾಚೆರಿ, ತಾರಾಮಣಿ, ಅಡ್ಯಾರ್ ಮತ್ತು ಬಸಂತ್ ನಗರಗಳಿಗೆ ನಿರಂತರ ನೀರನ್ನು ನೀಡುತ್ತಿದೆ.

ಘಟಕದ ಕಾರ್ಯ ನಿರ್ವಹಣೆ      

೧೦೦ ಮಿಲಿಯನ್ ಲೀಟರ್ ನೀರನ್ನು ಸಂಸ್ಕರಿಸಿ ಸವಳು ರಹಿತ ಮಾಡಲು ಸಮುದ್ರದಿಂದ ೨೩೭ ಮಿಲಿಯನ್ ಲೀಟರ್ ನೀರನ್ನು ತೆಗೆದುಕೊಳ್ಳಲಾಗುತ್ತದೆ. ಕೆಲಸ ಮುಗಿದ ಮೇಲೆ ಉಳಿದ ನೀರನ್ನು ಪುನಃ ಸಮುದ್ರಕ್ಕೆ ಚಲ್ಲಲಾಗುತ್ತದೆ. ದಡದಿಂದ ಸುಮಾರು ೬೫೦ ಮೀಟರ್‌ಗಳಷ್ಟು ದೂರ ಪೈಪಿನಲ್ಲಿ ಸಮುದ್ರದೊಳಗೆ ಸಾಗಿಸಿ ಅಲ್ಲಿ ಸೇರಿಸಲಾಗುತ್ತದೆ. ಇದು ದಾಖಲೆಯಲ್ಲಿರುವ ಮಾಹಿತಿ. ಆದರೆ ವಾಸ್ತವವನ್ನು ನೋಡಬೇಕೆಂದರೆ ನೀವು ನಿಮ್ಮೆಲಿಯ ಸಮುದ್ರ ತೀರಕ್ಕೆ ಹೋದರೆ ಕಾಣಿಸುತ್ತದೆ. ತ್ಯಾಜ್ಯ ನೀರು ತೀರದಲ್ಲೇ ಹರಿಯುತ್ತಾ ಸಮುದ್ರವನ್ನು ಸೇರುವ ಪರಿ.

poorna

 

 

(ತಮಿಳುನಾಡಿನ ನಿಮ್ಮೇಲಿಯಲ್ಲಿರುವ ಸವಳು ನಿವಾರಣಾ ಘಟಕದಿಂದ ಹೊರ ಬರುವ ನೀರು, ಸೌಜನ್ಯ; ಕೊಸ್ಟಲ್ ರಿಸೋರ‍್ಸ್ ಸೆಂಟರ್)

 

ಇಸವಿ ೨೦೧೩ರಲ್ಲಿ ಚನ್ನೈನ ಸತ್ಯ ಶೋಧನಾ ಸಮಿತಿಯು ಮೊದಲಿಗೆ ಇದನ್ನು ನೋಡಿ ಆಕ್ಷೇಪವನ್ನು ವ್ಯಕ್ತಪಡಿಸಿತು. ಇದು ಪರಿಸರ ಮತ್ತು ಮಾನವ ಹಕ್ಕು ಉಲ್ಲಂಘನೆ ಎಂದು, ಅದಕ್ಕಾಗಿ ನಿಮ್ಮೇಲಿ ಘಟಕದ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಹೋರಾಟ ಮಾಡಿತು. ಇದರಿಂದ  ಸುತ್ತಲಿರುವ ಹಳ್ಳಿಗಳ ಅಂತರ್ಜಲಕ್ಕೆ ಉಪ್ಪೆಲ್ಲಾ ಸೇರುತ್ತಿರುವುದರ ಅಧ್ಯಯನದ ಮಾಹಿತಿಗಳನ್ನೂ ಸಹಾ ನೀಡಿತು. ಪಟ್ಟಣದ ಜನರ ಒಳಿತಿಗಾಗಿ ಹಳ್ಳಿಗರು ಬೆಲೆ ತೆರಬೇಕಾಗಿರುವ ಪರಿಸ್ಥಿತಿಯನ್ನು ಎತ್ತಿತೋರಿಸಿತು.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯಕ್ಕೆ ಪರವಾನಿಗೆ ಪಡೆಯಲು ನೀಡಿದ ಯೋಜನೆಯಂತೆ ಘಟಕವು ನೀರನ್ನು ೬೫೦ ಮೀಟರ್ ಸಮುದ್ರದೊಳಗೆ ಬಿಡದೇ ತೀರದಲ್ಲೇ ಬಿಡುತ್ತಿರುವ ಕುರಿತು ಕಾನೂನಿನ ಪ್ರಕಾರ ದೂರನ್ನೂ ಸಹಾ ನೀಡಲಾಯಿತು. ಘಟಕವು ತ್ಯಾಜ್ಯ ನೀರಿಗಾಗಿ ಹಾಕಿದ ಪೈಪ್‌ಗಳು ತುಂಬಾ ಕಳಪೆಯಾಗಿತ್ತು. ತ್ಯಾಜ್ಯ ನೀರು ಅದರಲ್ಲಿ ಹರಿಯುವ ಮೊದಲೇ ಅದು ಹಾಳಾಗಿತ್ತು. ಎಲ್ಲೆಲ್ಲಿ ಒಡೆದಿದೆಯೋ ಅಲ್ಲೆಲ್ಲಾ ತ್ಯಾಜ್ಯದ ಹೊಂಡಗಳ ನಿರ್ಮಾಣವಾಗಿತ್ತು. ಮೊನ್ನೆ ಮೊನ್ನೆ ಅಂದರೆ ಇಸವಿ ೨೦೧೬ರ ಡಿಸೆಂಬರ್‌ನಲ್ಲಿ ಸಹಾ ಚನ್ನೈನ ಕೋಸ್ಟಲ್ ರಿಸೋರ್ಸ್ ಸೆಂಟರ್ ಅತ್ಯಂತ ಹೆಚ್ಚು ಉಪ್ಪಿನಿಂದ ಕೂಡಿದ ತ್ಯಾಜ್ಯವನ್ನು ಸಮುದ್ರದ ತೀರದಲ್ಲೇ ಬಿಟ್ಟಿರುವ ಫೋಟೋ ದಾಖಲೆಯನ್ನು ವಾಟ್ಸ್‌ಅಪ್‌ನಲ್ಲಿ ಹಾಕಿದೆ. ಇದರ ಅರ್ಥ ಪರಿಸ್ಥಿತಿ ಇಲ್ಲಿಯರೆಗೂ ಬದಲಾಗಿಲ್ಲ ಎಂದಾಯಿತು.

ಪರಿಸರ ತಜ್ಞ ಸುಲ್ತಾನ್ ಇಸ್ಮಾಯಿಲ್ ಹೇಳುತ್ತಾರೆ; ತ್ಯಾಜ್ಯದಲ್ಲಿರುವ ಅತ್ಯಂತ ಹೆಚ್ಚಿನ ಸವಳು ಹೊಸ ಸೂಕ್ಷ್ಮಜೀವಿಗಳಿಗೆ ಆವಾಸ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇವು ಅಲ್ಲಿಯ ಸಹಜ ಜೀವಿಗಳಲ್ಲ. ಅಲ್ಲಿರುವ ಸಹಜ ಜೀವಿಗಳ ಮೇಲೆ ಆಕ್ರಮಣ ಮಾಡಿ ತಮ್ಮದೇ ಆದ ಸಮುದಾಯವನ್ನು ಕಟ್ಟಿಕೊಳ್ಳುತ್ತವೆ. ಹೀಗೆ ಅಲ್ಲಿಯ ಜೀವಿವೈವಿಧ್ಯ ನಾಶವಾಗುತ್ತದೆ. ಹೊಸ ರೀತಿಯ ಕಾಯಿಲೆಗಳು ಬರುವ ಸಾಧ್ಯತೆ ಉಂಟಾಗುತ್ತದೆ.

ಸರ್ಕಾರವು ಈ ವಿಚಾರವನ್ನು ಮಾನ್ಯ ಮಾಡುತ್ತಿಲ್ಲ. ಕಾರಣ ಸಮುದ್ರದ ವಿಶಾಲತೆಯ ಎದುರು ಈ ಸೂಕ್ಷ್ಮಜೀವಿಗಳ ಸಮುದಾಯ ತುಂಬಾ ಚಿಕ್ಕದು ಎಂದು ವಾದಿಸುತ್ತಿದೆ. ಹಾಗಂತ ಅಲ್ಲಿನ ಸಮುದ್ರದ ಜೀವಿಗಳ ಮೇಲೆ ಆಗುತ್ತಿರುವ ಪರಿಣಾಮವನ್ನು ಸರ್ಕಾರವು ನೋಡಿದ್ದರೂ ಸಾಕಾಗುತ್ತಿತ್ತು. ಕೆಲವು ಜಾತಿಯ ಮೀನುಗಳು ತಮ್ಮ ಆಹಾರ, ತಳಿ ಸಂವರ್ಧನೆ ಮತ್ತು ಬದುಕನ್ನು ತೀರ ಪ್ರದೇಶದಲ್ಲಿಯೇ ನಡೆಸುತ್ತವೆ. ಅಂತಹಾ ಪ್ರದೇಶದಲ್ಲಿ ಅತಿ ಹೆಚ್ಚಿನ ಸವಳು ನೀರು ಸೇರತೊಡಗಿದರೆ ಮೀನಿನ ಸಂಕುಲಕ್ಕೆ ಅಪಾಯ ಉಂಟಾಗುತ್ತದೆ. ಸಾರ್ಡೈನ್ಸ್, ಮಾಕೆರೆಲ್ಸ್ ಮತ್ತು ಅಂಕೋವೈಸ್ ಜಾತಿಯ ಮೀನುಗಳು ತೀರ ಪ್ರದೇಶದ ಪ್ಲಾವಕಗಳನ್ನು ತಿಂದು ಬದುಕುತ್ತವೆ. ಆದರೆ ಸವಳು ಹೆಚ್ಚಾದರೆ ಪ್ಲಾವಕಗಳು ನಾಶವಾಗುತ್ತವೆ. ಆಗ ಮೀನುಗಳಿಗೆ ಆಹಾರದ ಕೊರತೆ. ಪರಿಣಾಮ ಅವುಗಳ ವೈವಿಧ್ಯ ಮತ್ತು ಸಾಂದ್ರತೆ ಕ್ಷೀಣಿಸುತ್ತದೆ. ನೀರನ್ನು ಮೇಲೆತ್ತಲು ಬಳಸುವ ಪಂಪ್‌ಸೆಟ್‌ಗಳ ಸುತ್ತಲೂ ನೆಟ್‌ಗಳನ್ನು ಹಾಕುತ್ತಾರೆ. ಅದರಲ್ಲಿ ಸಿಕ್ಕ ದೊಡ್ಡ ಜೀವಿಗಳು ತಪ್ಪಿಸಿಕೊಳ್ಳಲಾಗದೇ ಸಾವನ್ನಪ್ಪುತ್ತವೆ. ಈ ರೀತಿ ಇಸ್ಮಾಯಿಲ್‌ರವರ ಪ್ರತಿಪಾದನೆ ಸಾಗುತ್ತದೆ.

ನಿಮ್ಮೇಲಿಯ ಸುತ್ತಲಿನ ಬೆಸ್ತರು ಸಮುದ್ರವನ್ನೇ ಅವಲಂಬಿಸಿದ್ದಾರೆ. ಸುಲೇರಿಕಟ್ಟು ಕುಪ್ಪಮ್‌ನ ಬೆಸ್ತ ಸಂತೋಷ್ ಹೇಳುತ್ತಾರೆ; ಮೀನುಗಾರಿಕೆಯು ವರ್ಷ ಪೂರ್ತಿ ಇರುತ್ತದೆ. ಆರೇಳು ವರ್ಷಗಳ ಹಿಂದೆ ಇಲ್ಲಿ ಮೀನುಗಳು ಮತ್ತು ಫ್ರಾನ್‌ಗಳು ಹತ್ತಿರದಲ್ಲೇ ತುಂಬಾ ಸಿಗುತ್ತಿದ್ದವು. ಇವರಿಲ್ಲಿ ಬಂದ ಮೇಲೆ ಪೈಪ್‌ಲೈನ್‌ಗೋಸ್ಕರ ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿದ್ದಾರೆ. ತೀರದಲ್ಲಿ ಇವರ ಚಟುವಟಿಕೆಗಳು ಹೆಚ್ಚಾಗಿವೆ. ಇದರಿಂದ ಮೀನುಗಳು ಮತ್ತು ಫ್ರಾನ್‌ಗಳು ದೂರ ಸಮುದ್ರಕ್ಕೆ ಸಾಗಿ ನಮ್ಮ ಕೆಲಸಕ್ಕೆ ಕತ್ತರಿ ಬಿದ್ದಿದೆ.

ನಮ್ಮಲ್ಲಿ ಕುಡಿಯುವ ನೀರು ಮೇಲೆಯೇ ಸಿಗುತ್ತಿತ್ತು. ಆದರೆ ಅದೆಲ್ಲಾ ಇಂದು ಉಪ್ಪುಪ್ಪಾಗಿದೆ. ನಾವೀಗ ದಿನಾಲು ಪಂಚಾಯತ್‌ವತಿಯಿಂದ ಟ್ಯಾಂಕರ್ ನೀರನ್ನು ಪಡೆಯುವ ಸ್ಥಿತಿ ಬಂದಿದೆ. ಈ ಘಟಕವಿರುವುದು ನಗರವಾಸಿಗಳಿಗಾಗಿಯಂತೆ. ಅವರಿಗಾಗಿ ನಾವೇಕೆ ಜೀವಜಲ ತ್ಯಾಗ ಮಾಡಬೇಕು ಎಂದು ಕೇಳುತ್ತಾರೆ ಸಂತೋಷ್. ಇದನ್ನೇ ಸತ್ಯ ಶೋಧನಾ ಸಮಿತಿ ಸಹಾ ಪ್ರಾಮಾಣೀಕರಿಸಿದೆ. ಇಸವಿ ೧೯೯೧ರಿಂದ ೨೦೧೧ರವರೆಗಿನ ಅವಧಿಯಲ್ಲಿ ಅಲ್ಲಿನ ತೀರ ಪ್ರದೇಶ ಅತೀ ಹೆಚ್ಚು ಅತ್ಯಾಚಾರಕ್ಕೆ ಒಳಗಾಗಿದೆ. ಘಟಕದಿಂದಾಗಿಯೇ ಭೂಮಿಯೊಳಗಿನ ಸಿಹಿನೀರು ಸಂಪೂರ್ಣ ಉಪ್ಪಾಗಿರುವುದು ಸತ್ಯಗೋಚರ.

ಮುಂದಿರುವ ಮಾರ್ಗ

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ತಜ್ಞರ ಸಮಿತಿಯು ೨೦೧೭ರ ಜನವರಿಯಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿತು. ಇನ್ನೆರೆಡು ಘಟಕಗಳ ಅಗತ್ಯವನ್ನು ಪ್ರಶ್ನಿಸಿತು. ಅದರಿಂದಾಗಿ ಇಡೀ ತೀರ ಪ್ರದೇಶವೇ ಸೋಂಕಿಗೆ ಒಳಾಗಾಗುವ ಸಾಧ್ಯತೆಯನ್ನು ಚರ್ಚಿಸಿತು. ಪಾರಿಸರಿಕ ಪರಿಣಾಮ ಏನೆಲ್ಲಾ ಆಗಬಹುದು ಎನ್ನುವುದರ ಕುರಿತು ಅದು ಹೊಸದಾದ ಅಧ್ಯಯನವನ್ನು ಮಾಡುತ್ತಿದೆ.image 1

(ಸುಲೇರಿಕಟ್ಟುಕುಪ್ಪಮ್‌ನಲ್ಲಿ ತೀರವು ಸವಕಳಿಯಾಗಿರುವ ದೃಶ್ಯ ಸೌಜನ್ಯ; ಕೊಸ್ಟಲ್ ರಿಸೋರ‍್ಸ್ ಸೆಂಟರ್)

 

 

ಸವಳು ನಿವಾರಣಾ ಘಟಕಗಳ ತ್ಯಾಜ್ಯ ಸಶೇಷದ ನಿರ್ವಹಣೆಯೊಂದು ಅತ್ಯಂತ ದೊಡ್ಡ ಜವಾಬ್ಧಾರಿ. ಅದನ್ನು ಘನ ತ್ಯಾಜ್ಯವಾಗಿ ಮಾಡುವ ಯೋಜನೆಯೂ ಸಿದ್ದವಾಗಿದೆ. ಅಂತಹಾ ಘನ ತ್ಯಾಜ್ಯವನ್ನು ಗೊಬ್ಬರವಾಗಿ, ಪೋಷಕಾಂಶಗಳಾಗಿ ಅಥವಾ ಕೊರಕಲುಗಳನ್ನು ತುಂಬಲು ಬಳಸಬಹುದೆಂಬ ಸಲಹೆ ನೀಡಲಾಗಿದೆ.

ಇಸ್ರೇಲ್‌ನಲ್ಲಿ ಅತ್ಯಂತ ಹೆಚ್ಚು ಸವಳು ನಿವಾರಣಾ ಘಟಕಗಳಿವೆ ಎಂಬುದು ನಿಜ. ಹಾಗೇ ಅವರು ೮೫ ಶೇಕಡಾ ಕಂದು ನೀರನ್ನು ನೀರಾವರಿ, ಗಾರ್ಡನ್ ಮತ್ತು ಇಂಡಸ್ಟ್ರಿಗಳಿಗೆ ಮರುಬಳಕೆ ಮಾಡುತ್ತಾರೆ. ನೀರನ್ನು ಸಾಗಿಸುವಾಗ ಒಂದು ತೊಟ್ಟು ಸಹಾ ವ್ಯರ್ಥವಾಗದಂತೆ ನಿರ್ವಹಣೆ ಮಾಡುತ್ತಾರೆ. ಅಷ್ಟೇ ಅಲ್ಲ ವರ್ಷಕ್ಕೆರೆಡು ಸಾರಿ ಬೀಳುವ ಮಳೆಯ ಹನಿಹನಿಯನ್ನು ಲೆಕ್ಕವಿಟ್ಟು ಶೇಕರಿಸುತ್ತಾರೆ. ಸವಳು ನಿವಾರಣಾ ಘಟಕಗಳ ಸ್ಥಾಪನೆ ಅವರ ಕೊನೆಯ ಆಯ್ಕೆ.

ನಮ್ಮಲ್ಲೂ ನಾಗರಿಕರಿಗೆ ನೀರು ಸರಬರಾಜು ಮಾಡುವ ಹೊರೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿಯೊಂದಕ್ಕೂ ಅಂದರೆ ಇಂಡಸ್ಟ್ರಿಗಳು, ಕಾರು ತೊಳೆಯಲು ಮತ್ತು ಗಾರ್ಡನ್‌ಗಳಿಗೆ ನಾವು ಕುಡಿವ ನೀರನ್ನೇ ನೀಡಬೇಕೆಂದಿಲ್ಲ. ಶುದ್ಧಗೊಳಿಸಿದ ಕಂದು ನೀರು ಬಳಸುವುದನ್ನು ರೂಢಿ ಮಾಡಿಸಬೇಕಿದೆ. ನೀರು ಸಂಗ್ರಹಾಗಾರಗಳಿಗೆ ಪುನಶ್ಚೇತನ ನೀಡಬೇಕಿದೆ. ಆಗ ನಮ್ಮಲ್ಲೂ ಅತೀ ವೆಚ್ಚದ ಸವಳು ನಿವಾರಣಾ ಘಟಕಗಳ ಅಗತ್ಯ ಉಂಟಾಗದು.

ಚಿತ್ರ ಲೇಖನ : ಪೂರ್ಣಪ್ರಜ್ಞ ಬೇಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*