ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬತ್ತಿದ ಕೊಳವೆ ಬಾವಿಗೆ ಮರುಜೀವ ನೀಡಿದ ಕೆರೆ

ಪ್ರತಿ ಗ್ರಾಮದಲ್ಲೂ ಒಂದೋ, ಎರಡೊ ಕೆರೆಗಳು ಇವೆ. ರಾಜರ ಕಾಲದಲ್ಲಿ ರಚಿಸಲ್ಪಟ್ಟ ಕೆಲವೊಂದು ಕೆರೆಗಳು ಇದೀಗ ಒತ್ತವರಿಯಾಗಿ ಅವುಗಳ ಕುರುಹುಗಳೆ ಕಾಣಸಿಗುತ್ತಿಲ್ಲ. ಒಂದು ಊರಿನಲ್ಲೊಂದು ಕೆರೆ ಇದ್ದರೆ ಆ ಊರು ಸಮೃದ್ಧಿಯಾಗಿ ಇದೆ ಎಂದೇ ಅರ್ಥ. IMG-20180530-WA0020ಕೆರೆಗಳ ಅಭಿವೃದ್ಧಿ ಕೆಲಸಗಳನ್ನು ಪ್ರತಿವರ್ಷ ಸರಕಾರವು ಮಾಡುತ್ತಿದೆ. ಆದರೆ ಗ್ರಾಮಸ್ಥರ ಮನಗೆಲ್ಲುವಲ್ಲಿ ಅವು ಸಫಲವಾದದ್ದು ಅಷ್ಟಕಷ್ಟೇ. ಕೆರೆಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಅದರ ಸಂರಕ್ಷಣೆ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಕೆಲಸಗಳನ್ನು ಮಾಡಿದವರು ಕಡಿಮೆಯೆಂದೆ ಹೇಳಬಹುದು. ಅಂತಹ ಒಂದು ಅಪರೂಪದ ಕೆಲಸವನ್ನು ಕಳೆದೆರಡು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||ಡಿ.ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ.

ಕೆರೆಯೊಂದು ಮರು ವೈಭವವನ್ನು ಪಡೆದರೆ ಅದರಿಂದಾಗುವ ಪ್ರಯೋಜನ ಅಷ್ಟಿಷ್ಟಲ್ಲ. ಈ ಮಾತಿಗೆ ಉತ್ತಮ ಉದಾಹರಣೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಕೆಂಗುಂಟೆ ಕೆರೆ. ಹೂಳೆತ್ತಿದ ಪರಿಣಾಮವಾಗಿ ಕೆರೆಯಲ್ಲಿ ಇದೀಗ ಸಂಪೂರ್ಣವಾಗಿ ನೀರು ತುಂಬಿದೆ. ಅಲ್ಲದೆ ಊರಿನ ಕೊಳವೆ ಬಾವಿಗಳಿಗೆ ಮರುಜೀವ ನೀಡುವ ಕೆಲಸವನ್ನು ಈ ಕೆರೆ ಮಾಡುವ ಮೂಲಕ ಎಲ್ಲಾರ ಮೆಚ್ಚುಗೆಗೆ ಪಾತ್ರವಾಗಿದೆ.

ಪುರಾತನ ಕಾಲದ ಕೆರೆ :

  ಕೆಂಗುಂಟೆ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಈ ಕೆರೆಯೂ ಬಹು ಪ್ರಾಚೀನ ಕಾಲದ್ದು. ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ತೀರ್ಥವಾಗಿ ಕೆರೆಯ ನೀರನ್ನು ಉಪಯೋಗಿಸಲಾಗುತ್ತಿತ್ತು. ಕಳೆದ ಏಳು ವರ್ಷಗಳ ಹಿಂದೆ ಕೆರೆ ತುಂಬಿತ್ತು . ಕಳೆದ ವರ್ಷ ನೀರಿಲ್ಲದೆ ಬತ್ತಿ ಹೋದ ಕೆರೆಯ ಹೂಳೆತ್ತಿದ ಪರಿಣಾಮ ಇದೀಗ ನೀರಿನಿಂದ ತುಂಬಿದೆ.

ಧರ್ಮಸ್ಥಳ, ಸ್ಥಳೀಯರ ಸಹಭಾಗಿತ್ವದಲ್ಲಿ ಹೂಳೆತ್ತಿದರು :

  IMG-20180530-WA0029ಎರಡು ಎಕರೆ ವಿಸ್ತೀರ್ಣದ ಕೆರೆಯ ಹೂಳೆತ್ತುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಇಲ್ಲಿನ ಗ್ರಾಮ ಪಂಚಾಯತಿ, ಸ್ಥಳೀಯರು ಸೇರಿ ಮಾಡಿ ಮುಗಿಸಿದ್ದಾರೆ. ಒಟ್ಟು ರೂ.೧೩.೨೫ ಲಕ್ಷ ಖರ್ಚಾಗಿದ್ದು ಇದರಲ್ಲಿ ರೂ.೬.೫೦ ಲಕ್ಷವನ್ನು ಧರ್ಮಸ್ಥಳ ನೀಡಿದೆ. ಸುಮಾರು ೩೮೭೦ ಲೋಡ್ ಹೂಳನ್ನು ಗ್ರಾಮಸ್ಥರು ತಮ್ಮ ಹೊಲ, ತೋಟಗಳಿಗೆ ಬಳಸಿಕೊಂಡ ಪರಿಣಾಮ ಈ ಬಾರಿ ಫಸಲು ಸಮೃದ್ಧವಾಗಿದೆ. ಮಳೆಗಾಲದ ನೀರು ದೂರದಿಂದ ಹರಿದು ಬಂದು ಕೆರೆಗೆ ಸೇರಲು ರಾಜ ಕಾಲುವೆಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಊರಿನ ಹೊಲ, ಗದ್ದೆಗಳಿಗೆ ಬಿದ್ದ ನೀರು ನೇರವಾಗಿ ಕೆರೆ ಸೇರುತ್ತಿದೆ.

ಸೌಹರ್ದಾತೆ ಮೆರೆದ ಕೆರೆ :

  ಸುಮಾರು ಒಂದು ತಿಂಗಳುಗಳ ಕೆರೆಯ ಹೂಳೆತ್ತುವ ಕೆಲಸಗಳು ನಡೆದಿದ್ದು ಊರಿನ ಸರ್ವಧರ್ಮಿಯರು ಕೈ ಜೋಡಿಸಿದ್ದಾರೆ. ಕೆರೆಯ ಪುನಶ್ಚೇತನದಿಂದ ಕೆರೆಯ ಸಂರಕ್ಷಣೆಯ ಅರಿವು ಜನರಲ್ಲಿ ಮೂಡಿದೆ. ತಾವೆಲ್ಲ ಒಂದೂ ಎನ್ನುವ ಭಾವನೆಯು ಇವರ ಮನದಲ್ಲಿ ಬೇರೂರುವಂತಾಗಿದೆ. ಇದೀಗ ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪ್ರತಿಯೊಬ್ಬರು ಶ್ರಮಿಸುತ್ತಿದ್ದಾರೆ.

ಪ್ರತಿಫಲ :

IMG-20180530-WA0024  ಕೊಳವೆ ಬಾವಿಗಳು ಈ ಊರಿನ ನೀರಿನ ಪ್ರಮುಖ ಮೂಲವಾಗುತ್ತಿದ್ದವು. ಸುಮಾರು ೨೨೦ ಕೊಳವೆ ಬಾವಿಯನ್ನು ಗ್ರಾಮವೊಂದರಲ್ಲೆ ಕೊರೆಯಲಾಗಿದ್ದು ನೀರು ಸಿಗಬೇಕಾದರೆ ೬೦೦ ರಿಂದ ೮೦೦ ಅಡಿ ತೋಡಬೇಕಿತ್ತು. ಇತ್ತೀಚಿನ ದಿನಗಳಲ್ಲಂತೂ ನೀರು ಸಿಗುತ್ತಿರಲಿಲ್ಲ. ಇದ್ದ ಹೆಚ್ಚಿನ ಕೊಳವೆ ಬಾವಿಗಳು ಬತ್ತಿದ್ದವು. ಕೆರೆ ತುಂಬುತ್ತಿದ್ದಂತೆ ಕೊಳವೆ ಬಾವಿಗಳು ಮರುಪೂರಣಗೊಂಡಿವೆ. ಊರಿನಲ್ಲಿದ್ದ ಮೂರು ಬಾವಿಗಳಲ್ಲೂ ಜಲಮಟ್ಟ ಹೆಚ್ಚಿದೆ. ಗ್ರಾಮದ ೩೬೨ ಮನೆಗಳಿಗೆ ಕೆರೆ ನೀರಿನ ಪ್ರಯೋಜನ ದೊರೆಯುತ್ತಿದೆ. ಕೆರೆಯ ಸುತ್ತ ಸಸಿಗಳ ನಾಟಿ ಮಾಡಿದ್ದು ಪರಿಸರ ಬೆಳೆಸುವ ಪ್ರಯತ್ನ ಇಲ್ಲಿ ನಡೆದಿದೆ, ನಡೆಯುತ್ತಿದೆ. ಕೆರೆ ತುಂಬಿದರಿಂದ ಈ ಬಾರಿ ಊರಿನಲ್ಲಿ ಮೆಕ್ಕೆಜೋಳ, ಅವರೆ, ಉದ್ದು, ರಾಗಿ, ಜೋಳದ ಇಳುವರಿ ಹೆಚ್ಚಿದೆ. ಇಲ್ಲಿನ ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಿದೆ. ಪಕ್ಕದಲ್ಲಿರುವ ದೇವಾಲಯಕ್ಕೆ ಬರುವವರ ಸಂಖ್ಯೆಯು ಹೆಚ್ಚುತ್ತಿದೆ.

ಕೆರೆ ಸಂರಕ್ಷಣೆ ನಮ್ಮೆಲ್ಲಾರ ಹೊಣೆ :

ಹೂಳೆತ್ತಿದ ಕೆರೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲಾರ ಹೊಣೆ. ಕಸಕಡ್ಡಿಗಳನ್ನು ಬಿಸಾಡುವುದು, ಜಾನುವಾರು, ವಾಹನ ತೊಳೆಯುವುದು, ನೀರಿಗೆ ಪ್ಲಾಸ್ಟಿಕ್ ಸೇರಿಸುವುದು, ಬಟ್ಟೆ ಹೊಗೆಯುವ ಮುಂತಾದ ಕೆಲಸಗಳನ್ನು ಮಾಡಬಾರದು. ಪ್ರತಿಯೊಬ್ಬರ ಜವಾಬ್ದಾರಿ ಎಂದು ಅರಿತು ಕೆರೆ ಸಂರಕ್ಷಣೆಯಲ್ಲಿ ತೊಡಗಿದರೆ ಭೂಮಿತಾಯಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಕಷ್ಟದ ಮಾತಲ್ಲ.

ಚಿತ್ರ ಲೇಖನ : ಚಂದ್ರಹಾಸ ಚಾರ್ಮಾಡಿ.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*