ನದಿ ನೀರಿಗಿಂತ ಮೂರು ಸಾವಿರ ಪಾಲು ಅಂತರ್ಜಲ ನೆಲದಲ್ಲಿ ಶೇಖರಿತ!
ಭಾರೀ ನೀರಾವರಿ ಯೋಜನೆಗಳ ಕಡೆಯೇ ನಮ್ಮ ಚಿತ್ತ ಹರಿಯುವುದೇಕೆ? ಕಾರಣ, ಆಧುನಿಕ ಜಗತ್ತಿನಲ್ಲಿ ಎಲ್ಲವೂ ‘ಬೃಹತ್’ ಆಕಾರದ್ದಾಗಿದ್ದರೆ ಗಮನ ಸೆಳೆಯುತ್ತದೆ.. ಪುಟ್ಟದಿದ್ದಷ್ಟೂ ಅದು ಉದಾಸೀನಕ್ಕೆ ಮೂಲವ್ಯಾಧಿಯಾಗುತ್ತದೆ!
ನಮ್ಮ ಹಿರೀಕರು ಕಟ್ಟಿಸಿದ ಕಲ್ಯಾಣಿ, ಪುಷ್ಕರಣಿ, ಹೊಂಡಗಳು ಎಂತಹ ವಿಶಿಷ್ಠ ನಿರ್ಮಿತಿ ಹೊಂದಿದ್ದವು? ತಮ್ಮಷ್ಟಕ್ಕೇ ತಾವು ಪುನರುಜ್ಜೀವಿತಗೊಳ್ಳುವ ಪರಿ ಬೆರಗು ಮೂಡಿಸುತ್ತದೆ ಅಲ್ಲವೇ? ಮಳೆ ನೀರು ಮತ್ತು ಅಂತರ್ಜಲ ಈ ನಿರ್ಮಿತಿಗಳಿಗೆ ಜೀವದಾಯಿ ಆಗಿತ್ತು. ನೀರ ನಕಾಶೆ ಆಧರಿಸಿ ವಿನ್ಯಾಸಗೊಳಿಸಿದ ಅಂದಿನ ಜಲ ತಜ್ಞರ ಜ್ಞಾನ ನಮ್ಮ ಜ್ಞಾನ ಕ್ಷಿತಿಜದ ವಿಸ್ತಾರಕ್ಕೆ ನಿಲುಕೀತೆ? ಹಂಪಿಯಲ್ಲಿ ವಿಜಯನಗರದ ಅರಸರು ಕಟ್ಟಿಸಿದ ಐತಿಹಾಸಿಕ ಕೊಳ.. ಒಂದು ಉದಾಹರಣೆ.
ಅಂತರ್ಜಲವನ್ನು ಹಿತ-ಮಿತವಾಗಿ ಬಳಸುವ ಕಡೆ ನಮ್ಮ ಗಮನ ಹೋಗುವುದೇ ಇಲ್ಲ! ಬರಗಾಲ ಬಂದಾಗ ಮಾತ್ರ ಅಂತರ್ಜಲವನ್ನು ಬಳಸುವ ಬಗ್ಗೆ ಉತ್ಸಾಹ ನೂರ್ಮಡಿಯಾಗುತ್ತದೆ. ಅಂತರ್ಜಲ ಸಂಪತ್ತು ಎಲ್ಲೆಡೆಯೂ ದೊರಕುತ್ತದೆ ಎಂಬುವುದು ಈ ಧೋರಣೆಗೆ ಕಾರಣ. ಅಂತರ್ಜಲದ ಗುಣಮಟ್ಟದಲ್ಲಿ ವ್ಯತ್ಯಾಸಗಳಿರಬಹುದು. ಅದನ್ನೇ ಸರಿಯಾಗಿ ಉಪಯೋಗಿಸಿಕೊಂಡರೆ ಪ್ರಾದೇಶಿಕವಾಗಿ ನೀರ ನೆಮ್ಮದಿ ಗಳಿಸಬಹುದು!
ಹೆಚ್ಚುತ್ತಿರುವ ಜನಸಂಖ್ಯೆ ಪ್ರಮಾಣ, ಹೆಚ್ಚೂ ಕಡಿಮೆ ಇಪ್ಪತ್ತು ವರ್ಷಗಳಲ್ಲಿ ದ್ವಿಗುಣಗೊಳ್ಳುವಷ್ಟು ‘ವೃದ್ಧಿ ದರ’ ದಾಖಲಿಸಿದೆ. ನಮ್ಮ ದೇಶದ ಜನ ಸಂಖ್ಯೆಯೇ ೧.೪೦ ಬಿಲಿಯನ್! ಇನ್ನೂ ಹೆಚ್ಚುತ್ತಲೇ ಹೋಗುತ್ತಿರುವುದರಿಂದ, ಲಭ್ಯ ಜಲ ಸಂಪತ್ತಿನ ಮೇಲೆ ವಿಪರೀತ ಒತ್ತಡ ಹೆಚ್ಚುತ್ತ ಹೋಗುತ್ತದೆ. ಜನ ಜೀವನ ಸುಧಾರಿಸಿದಂತೆ ದಿನ ಬಳಕೆಯ ನೀರಿನ ಪ್ರಮಾಣವೂ ಹೆಚ್ಚುತ್ತಿದೆ.
ಒಣ ಬರ ಅರ್ಥಾತ್, ನೀರಿನ ಬರದಿಂದ ತಿನ್ನಲು ಧಾನ್ಯ ಬೆಳೆಯಲೂ ಆಗದೇ, ಕುಡಿಯಲೂ ಶುದ್ಧ ನೀರು ದೊರಕದೇ ಪರಿತಪಿಸಬೇಕಾದ ಪರಿಸ್ಥಿತಿ ಬಹುತೇಕ ಗ್ರಾಮೀಣ ಭಾಗದ ಜನರದ್ದು. ಎಚ್ಚರಿಕೆಯ ಹೆಜ್ಜೆಗಳನ್ನಿಟ್ಟು ಸಕಾಲಿಕ ಕ್ರಮ ಕೈಗೊಳ್ಳದೇ ಹೋದರೆ ಜಲ ಸಂಪತ್ತಿನಿಂದ ಕೂಡಿದ ದೇಶ, ನೀರು ನೆರಳಿಲ್ಲದ ಮರಭೂಮಿಯಾಗಿ ಪರಿವರ್ತನೆ ಆಗುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್
ಲಿ ಇಂತಹ ಪರಿಸ್ಥಿತಿ ತಲೆದೋರಿದೆ.
ಈ ಪರಿಸ್ಥಿತಿಗೆ ಅನೇಕ ಕಾರಣಗಳಿವೆ. ಜನ ನೀರನ್ನು ನಾನಾ ವಿಧದಲ್ಲಿ ಉಪಯೋಗಿಸುತ್ತಾರೆ. ಕುಡಿಯಲು ಮಾತ್ರವಲ್ಲದೇ, ಜಿಲ್ಲಾಡಳಿತಗಳು ನಗಣ್ಯ ದರದಲ್ಲಿ ಪೂರೈಸುವ ಶುದ್ಧ ನೀರನ್ನು ದಿನ ಬಳಕೆಗೂ ಬಳಸಲಾಗುತ್ತದೆ. ಕೈಗಾರಿಕೆಗಳಿಗೂ ನೀರು ಬೇಕು. ಜಲ ವಿದ್ಯುತ್ ಉತ್ಪಾದನೆಗೆ, ಆಹಾರ ಧಾನ್ಯ ಬೆಳೆಯುವುದಕ್ಕೆ.. ಹೀಗೆ, ಭಾರೀ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಶೇಖರಿಸಬೇಕಾದ ಅನಿವಾರ್ಯತೆಗೆ ಆಡಳಿತ ಸಿಲುಕುತ್ತದೆ. ಇಷ್ಟಾದರೂ ನೀರಿನ ಸಂಗ್ರಹ ಅಸಮರ್ಪಕವಾಗಿದೆ. ಕಾರಣ ಏನೇ ಇರಲಿ, ನೀರಿನ ಕೊರತೆಯಂತೂ ಬಾಧಿಸುತ್ತಿದೆ.
ಎಷ್ಟೋ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕ ತಲುಪುತ್ತಿಲ್ಲ. ಶೌಚಾಲಯಗಳಿಲ್ಲ. ಸರ್ಕಾರಿ ಅನುದಾನ ಮತ್ತು ಯೋಜನೆ ಅಡಿ ಕಟ್ಟಿಕೊಂಡ ಪಾಯಖಾನೆ ಬಳಕೆಯಾಗುತ್ತಿಲ್ಲ. ಪ್ರತಿ ವರ್ಷ ಲಕ್ಷಾಂತರ ಮಂದಿ ಕಲುಷಿತ ನೀರು ಸೇವಿಸಿ ಮಲೇರಿಯಾ, ಕಾಲರಾ ಮತ್ತು ಟೈಫಾಯಿಡ್ ಖಾಯಿಲೆಗಳಿಗೆ ಬಲಿಯಾಗಿ ಜೀವ ಕಳೆದುಕೊಳ್ಳುವಂತಾಗಿದೆ. ವಿಶೇಷವಾಗಿ ಮಕ್ಕಳು. ಶುದ್ಧ ಕುಡಿಯುವ ನೀರು ಎಲ್ಲರಿಗೂ ಒದಗಿಸುವುದು ಸರ್ಕಾರಗಳ ಮುಖ್ಯ ಕರ್ತವ್ಯ.
ಬರ್ತಾ, ಬರ್ತಾ ನೀರಿನ ಲಭ್ಯತೆಯ ಪ್ರಮಾಣ ಕಡಿಮೆಯಾಗುತ್ತ ಬಂದಿದೆ ಎಂಬ ತಪ್ಪು ಭಾವನೆ ನಮ್ಮಲ್ಲಿ ಬಲಗೊಳ್ಳುತ್ತ ಬಂದಿದೆ. ನೀರಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ನೀರಿನ ಬೇಡಿಕೆ ಮಾತ್ರ ದ್ವಿಗುಣಗೊಳ್ಳುತ್ತಿದೆ. ಹಾಗಾಗಿ, ಕುಡಿಯುವ ನೀರು ಬಹುಜತನದಿಂದ ಕಾಯಬೇಕು. ‘ನೀರೆಚ್ಚರ’ ದಿಂದ ಬಳಸಬೇಕು.
ಒಟ್ಟು ಲಭ್ಯ ನೀರಿನ ಪ್ರಮಾಣದ ಶೇ.೯೭ರಷ್ಟು ಭಾಗ ಸಮುದ್ರದ ನೀರು. ಅದು ತೀರ ಉಪ್ಪಾಗಿರುವುದರಿಂದ ಸದ್ಯಕ್ಕೆ ಉಪಯೋಗಕ್ಕೆ ಬಾರದ ನೀರು. ಈ ಮಾಹಿತಿ ಕೋಷ್ಠಕ ಗಮನಿಸಿ..
ನದಿಗಳಲ್ಲಿ ದೊರೆಯುವ ನೀರಿಗಿಂತ ಮೂರು ಸಾವಿರ ಪಾಲು ಹೆಚ್ಚಿನ ನೀರು ನೆಲದಲ್ಲಿ ಶೇಖರವಾಗಿದೆ! ಎಂದು ಮೇಲಿನ ಕೋಷ್ಠಕ ಹೇಳುತ್ತದೆ.
ಒಟ್ಟಾರೆ ಭೂಮಿಯ ಮೇಲೆ ನೀರು ಹಿಮ ಗಡ್ಡೆಗಳಾಗಿ, ಮಂಜಾಗಿ, ಹರಿಯುವ ನದಿಯಲ್ಲಿನ ನೀರಾಗಿ, ನೆಲದಲ್ಲಿ ಇಂಗಿದ ಜಿನುಗುನೀರಾಗಿ ಪಲ್ಲವಿಸಿದೆ. ಬರ ನಿರೋಧಕ ಜಾಣ್ಮೆ ನಮ್ಮದಾಗಬೇಕಾದರೆ, ಕ್ಷಟದ ದಿನಗಳನ್ನು ಎದುರಿಸಲು ಮಳೆ ನೀರನ್ನು ಅದು ಬಿದ್ದ ಸ್ಥಳದಲ್ಲಿಯೇ ತಡೆ ಹಿಡಿದು ಹಾಗೆ ಶೇಖರಿಸಿದ ನೀರನ್ನು ಮಳೆ ಬಾರದ ಕಾಲದಲ್ಲಿ ಮಿತವಾಗಿ ಎಚ್ಚರಿಕೆಯಿಂದ ಉಪಯೋಗಿಸಿಕೊಳ್ಳುವ ಜಾಣತನವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.
ಚಿತ್ರ ಲೇಖನ : ಹರ್ಷವರ್ಧನ ವಿ. ಶೀಲವಂತ