ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಗೌರಿಬಿದನೂರು ಪಟ್ಟಣದಲ್ಲೊಂದು ಛಾವಣಿ ನೀರು ಸಂಗ್ರಹ

ಗೌರಿಬಿದನೂರು ಪಟ್ಟಣವು ಕಳೆದ ಐದಾರು ವರ್ಷಗಳಿಂದ ಕುಡಿಯುವ ನೀರಿಗಾಗಿ ತೀವ್ರವಾದ ಬವಣೆ ಪಡುತ್ತಲೇ ಇದೆ. ಜೊತೆಗೆ ಗೃಹ ಬಳಕೆಯ ಉಳಿದ ನೀರಿಗೂ ಕೊರತೆ ಮುಂದುವರಿಯುತ್ತಲೇ ಇದೆ. ಹಣ ತೆತ್ತು ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಳ್ಳುವ ಅನಿವಾರ‍್ಯತೆ ಬಂದಿದೆ. ಖಾಸಗಿ ಟ್ಯಾಂಕರ್‌ಗಳಿಗೆ ವಿಪರೀತ ಬೇಡಿಕೆ ಇದ್ದು, ಪ್ರತಿ ಬೇಸಿಗೆಯಲ್ಲಿ ಇದೊಂದು ದಂಧೆಯಾಗಿ ಪರಿಣಮಿಸಿದೆ. ಹಣ ಕೊಡಲಾಗದ ಸಾಮಾನ್ಯ ವರ್ಗದವರ ಪಾಡಂತು ವರ್ಣಿಸಲಾಗದು.

DSC00157ಇದಕ್ಕೆ ಪರಿಹಾರ ಎಂಬಂತೆ ಪಟ್ಟಣದ ಜನಪ್ರಿಯ ವೈದ್ಯ ಡಾ|| ಎನ್.ಶಂಕರಭಟ್ಟರು ನೀರಿನ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಾವೇ ಮುಂದೆ ಬಂದಿರುವುದು ಪಟ್ಟಣಿಗರಿಗೆ ಕಣ್ಣು ತೆರೆಯಿಸಬೇಕು. ನೀಲಿ ಬಂಗಾರ ಎನಿಸಿರುವ ನೀರಿಗೆ ಮುಂದೆ ಅಸಲೀ ಬಂಗಾರದಷ್ಟೆ ಬೆಲೆ ತೆರಬೇಕಾಗಿ ಬರಬಹುದು ಮತ್ತು ಪೆಟ್ರೋಲಿನಷ್ಟೆ ಬೆಲೆಯಾಗಬಹುದು ಎಂದು ನೀರಿನ ಭವಿಷ್ಯದ ಬಗ್ಗೆ ಆಳವಾಗಿ ಅರಿತಿದ್ದ ವೈದ್ಯರು ತ್ಯಾಗರಾಜ ಕಾಲೋನಿಯ ತಮ್ಮ ಮನೆಯಲ್ಲಿ ಈ ವಿಧಾನ ಅಳವಡಿಸಿದ್ದಾರೆ. ಮಂಗಳೂರು ಕಡೆಯಿಂದ ಬಂದು ಇಲ್ಲಿ ನೆಲೆಸಿರುವ ಇವರು ಇಲ್ಲಿನ ನೀರಿನ ಬವಣೆ ಅನುಭವಿಸಿದವರು. ಕಳೆದ ೪ ವರ್ಷಗಳಿಂದಲೂ ತಮ್ಮ ಮನೆಯಲ್ಲಿ ‘ಛಾನೀಸಂ’ (ಛಾವಣಿ ನೀರು ಸಂಗ್ರಹಣೆ) ಅಳವಡಿಸಲು ಮನಸ್ಸು ಮಾಡುತ್ತಿದ್ದರೂ ಕೈಗೊಡುತ್ತಿರಲಿಲ್ಲ, ೨೦೦೭ರಲ್ಲಿ ದೃಢ ನಿರ್ಧಾರ ಮಾಡಿ ಕಾರ‍್ಯರೂಪಕ್ಕೆ ತಂದು ಬಿಟ್ಟಿದ್ದಾರೆ. ಇಂದಿಗೂ- ಅಂದರೆ ಎಂಟು ವರ್ಷಗಳ ನಂತರವೂ ಸಹ ಇದು ಬಳಕೆಯಲ್ಲಿದೆ.

ಪ್ರಕ್ರಿಯೆ: ವೈದ್ಯರ ಮನೆಯ ಛಾವಣಿಯಲ್ಲಿ ಎರಡು ಭಾಗಗಳಿದ್ದು, ಒಂದು ಭಾಗ ೩೦x೨೮ ಅಡಿ ಹಾಗೂ ಮತ್ತೊಂದು ಭಾಗ ೧೪x೮ ಅಡಿಗಳಷ್ಟು ಇದೆ. ಛಾವಣಿ ಸಮತಟ್ಟಾಗಿರಲಿಲ್ಲ. ಪಶ್ಚಿಮ ದಿಕ್ಕಿನಲ್ಲಿ ಎರಡು ದೋಣಿ ಪೂರ್ವ ದಿಕ್ಕಿನಲ್ಲಿ ೨ ದೋಣಿ ಇದ್ದು, ಬಿದ್ದ ಮಳೆ ನೀರೆಲ್ಲಾ ಅವುಗಳ ಮೂಲಕ ವ್ಯರ್ಥವಾಗಿ ಹರಿದು ಹೋಗುತ್ತಿತ್ತು. ಪಶ್ಚಿಮ ದಿಕ್ಕು ತಗ್ಗಿನಲ್ಲಿದ್ದು ಅದನ್ನು ಸೀಮೆಂಟು, ಸುಣ್ಣ ಬಳಸಿ ಪೂರ್ವ ದಿಕ್ಕಿನ ಸ್ಥಳಕ್ಕೆ ಸಮನಾಗಿ ಎತ್ತರಿಸಿ ಇಡೀ ಛಾವಣಿ ಸಮತಟ್ಟಾಗಿರುವಂತೆ ಮಾಡಲಾಯಿತು. ಎರಡು ಭಾಗಗಳ ಮಳೆ ನೀರು ದೋಣಿಗಳಲ್ಲಿ ಹರಿದು ಒಂದೇ ಪೈಪಿಗೆ ಹರಿದು ಬರುವಂತೆ ಸಂಪರ್ಕ ಕಲ್ಪಿಸಲಾಗಿದ್ದು, ಮತ್ತೆ ಇದು ಎರಡು ಭಾಗಗಳಲ್ಲಿ ಹರಿದು ಹೋಗುವಂತೆ ಮಾಡ ಲಾಗಿದೆ. ಒಂದು ಪೈಪಿನ ನೀರು ಶುದ್ಧೀಕರಣದ ಸಲುವಾಗಿ ಫಿಲ್ಟರ್‌ನಲ್ಲಿ ಪ್ರವೇಶಿಸುತ್ತದೆ. ಮತ್ತೊಂದು ಪೈಪಿನಲ್ಲಿನ ನೀರು ನೆಲದ ಮೇಲೆ ಬಿದ್ದು ಹರಿದು ಹೋಗುತ್ತದೆ. ಪ್ರಥಮ ಮಳೆ ನೀರು ಇದಾಗಿದ್ದು, ಅಶುದ್ಧವಾಗಿರುವ ಪ್ರಯುಕ್ತ ನೆಲದ ಮೇಲೆ ಬಿಡಲಾಗಿದೆ. ಎರಡೂ ಪೈಪುಗಳಲ್ಲಿ ಅಗತ್ಯಕ್ಕೆ ತಕ್ಕಂತೆ ತೆರೆಯಲು ಮತ್ತು ಮುಚ್ಚಲು ವಾಲ್ವ್‌ಗಳನ್ನು ಅಳವಡಿಸಲಾಗಿದೆ.

೧೦೦ ಲೀ. ನೀರು ಹಿಡಿಸುವ ಪ್ಲಾಸ್ಟಿಕ್ ಡ್ರಮ್‌ನ್ನು ಛಾವಣಿಯಿಂದ ಬರುವ ನೀರನ್ನು ಶುದ್ಧೀಕರಣಗೊಳಿಸಲು ಅಳವಡಿಸಿದೆ. ಇದರಲ್ಲಿ ಬಳಸಿರುವ ವಸ್ತುಗಳು ಅಗ್ಗದ ದರದ ಸಾಮಾನ್ಯವಾದ ವಸ್ತುಗಳು. ಅತ್ಯಂತ ತಳದಲ್ಲಿ ದಪ್ಪ ಜಲ್ಲಿ, ಅದರ ಮೇಲೆ ನಂತರದ ಗಾತ್ರದ ಜಲ್ಲಿ, ಅದರ ಮೇಲೆ ಬೇಬಿ ಜಲ್ಲಿ, ಅದರ ಮೇಲೆ ಇದ್ದಿಲು, ಅದರ ಮೇಲೆ ನೈಲಾನ್ ಪರದೆ, ಅದರ ಮೇಲೆ ದಪ್ಪ ಮರಳು, ಅದರ ಮೇಲೆ ಸ್ಪಾಂಜ್ ಇಡಲಾಗಿದೆ. ಮೊದಲು ಮತ್ತು ೨ನೆಯ ಮಳೆ ನೀರು ನೆಲದ ಮೇಲೆ ಬಿದ್ದು ಹರಿದುಹೋದರೆ ಉಳಿದ ಮಳೆಯ ನೀರು ಈ ಮೂಲಕ ಶುದ್ಧೀಕರಣಗೊಂಡು ಸಂಪಿನಲ್ಲಿ ಪ್ರವೇಶಿಸುತ್ತದೆ.

Samudaaya Kolave Baavi Marupoorana, Kabbigere Maraathipalyaಭೂಮಿಯಿಂದ ೩ ಅಡಿ ಎತ್ತರದವರೆಗೆ ಇಟ್ಟಿಗೆಯ ವೇದಿಕೆ ರಚಿಸಿ ಫಿಲ್ಟರ್ ಡ್ರಮ್‌ನ ಅರ್ಧ ಭಾಗ ವೇದಿಕೆಯ ಒಳಗೆ ಉಳಿದರ್ಧ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಹಾಗೆ ಇಡಲಾಗಿದೆ. ನೀರಿನ ಪೈಪ್ ಮೇಲಿಂದ ಫಿಲ್ಟರ್‌ನಲ್ಲಿ ಪ್ರವೇಶಿಸುವ ಸ್ಥಳದಲ್ಲಿ ಸಹಜವಾಗಿಯೇ ಸೂಕ್ಷ್ಮಾತಿ ಸೂಕ್ಷ್ಮರಂಧ್ರಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಮೂಲಕ ಗಾಳಿ, ಸೂಕ್ಷ್ಮ ಕ್ರಿಮಿಗಳು ಒಳಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ. ಆದ್ದರಿಂದ ಅಂತಹ ರಂಧ್ರಗಳನ್ನೆಲ್ಲಾ ಮುಚ್ಚುವ ಎಚ್ಚರವಹಿಸಲಾಗಿದೆ. ಫಿಲ್ಟರ್ ಡ್ರಮ್‌ನ ಅರ್ಧ ಭಾಗ ವೇದಿಕೆಯ ಒಳಗಡೆ ಇಟ್ಟಿದ್ದು, ಡ್ರಮ್ ನಿಂದ ನೀರು ನೇರವಾಗಿ ಪೈಪಿನ ಮೂಲಕ ಸಂಪಿನಲ್ಲಿ ಪ್ರವೇಶಿಸುತ್ತದೆ. ಸದರಿ ಪೈಪನ್ನು ಭೂಮಿಯ ಒಳಗಡೆ ಹಾದು ಹೋಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ.

೬ ಸಾವಿರ ಲೀ. ಸಾಮರ್ಥ್ಯದ ಸಂಪನ್ನು ಕಾರ್ ಷೆಡ್ಡಿನಲ್ಲಿ ಭೂಮಿಯ ಒಳಗಡೆ ರಚಿಸಲಾಗಿದೆ. ಇದರಿಂದ ಅಷ್ಟು ಸ್ಥಳ ಉಳಿಸಿದಂತಾಯಿತು. ಸಂಪಿನ ಉದ್ದ ೧೧ ಅಡಿ, ಅಗಲ ೪.೫ ಅಡಿ ಹಾಗೂ ಆಳ ೪.೭೫ ಅಡಿ. ತಳದಲ್ಲಿ ಸಿಮೆಂಟ್ ಕಾಂಕ್ರೀಟ್ ಬೆಡ್ ಹಾಕಲಾಗಿದೆ.  ಮೇಲ್ಭಾಗದಲ್ಲಿ ಕಲ್ಲಿನ ಚಪ್ಪಡಿಗಳನ್ನು ಹಾಸಲಾಗಿದೆ. ಗೋಡೆಗಳಿಗೆ ಸಿಮೆಂಟ್ ಹಾಗೂ ಸುಣ್ಣದ ಪ್ಲಾಸ್ಟರ್ ಹಾಕಲಾಗಿದೆ. ಸಂಪಿನಲ್ಲಿ ಒಬ್ಬರು ಪ್ರವೇಶಿಸುವಷ್ಟು ಸ್ಥಳ ಬಿಡಲಾಗಿದೆ. ಒಳಗಡೆ ಇಳಿಯಲು ಒಂದು ಮೆಟ್ಟಿಲು ಇಡಲಾಗಿದೆ. ಪ್ರವೇಶ ದ್ವಾರವನ್ನು ಮುಚ್ಚಳದಿಂದ ಭದ್ರವಾಗಿ ಮುಚ್ಚಲಾಗಿದೆ. ಗಾಳಿಯಾಗಲಿ, ಸೂಕ್ಷ್ಮ ಕ್ರಿಮಿ -ಕೀಟಗಳಾಗಲೀ ಪ್ರವೇಶಿಸದ ಹಾಗೆ ಎಚ್ಚರ ವಹಿಸಲಾಗಿದೆ. ಬಿಸಿಲು ಪ್ರವೇಶಿಸುವ ಪ್ರಶ್ನೆಯೇ ಇಲ್ಲ.

ಮುಂಜಾಗರೂಕತಾ ಕ್ರಮವಾಗಿ ೩ ಅಥವಾ ೬ ತಿಂಗಳಿಗೊಮ್ಮೆ ಕ್ಲೋರಿನ್ ಅಥವಾ ಸುಣ್ಣದ ತಿಳಿ ನೀರನ್ನು ಸಂಪಿನಲ್ಲಿ ಬಿಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸಂಪಿನಿಂದ ನೀರು ಎತ್ತಲು ಅರ್ಧ ಹೆಚ್‌ಪಿ ಮೋಟಾರ್ ಅಳವಡಿಸಲಾಗಿದೆ. ಅಡಿಗೆ ಮನೆಯಲ್ಲಿನ ಸಂಪಿನ ನಲ್ಲಿಗೆ ಇಲ್ಲಿಂದ ಸಂಪರ್ಕ ಕಲ್ಪಿಸಲಾಗಿದೆ. ವರ್ಷಕ್ಕೊಮ್ಮೆ ಸಂಪನ್ನು ಸ್ವಚ್ಛಗೊಳಿಸುತ್ತಾರೆ..

ಗೌರಿಬಿದನೂರು ಪಟ್ಟಣದಲ್ಲಿ ವಾರ್ಷಿಕ ಸರಾಸರಿ ೬೦೦ರಿಂದ ೭೦೦ ಮಿ.ಮೀ. ಮಳೆಯಾಗುತ್ತದೆ. ಡಾ|| ಎನ್. ಶಂಕರಭಟ್ಟರ ಛಾವಣಿಯ ವಿಸ್ತೀರ್ಣ ೧೦ ಚ.ಮೀ. ಇದ್ದು ಇದರಿಂದ ವರ್ಷಕ್ಕೆ ಅಂದಾಜು ೬ ಸಾವಿರದಿಂದ ೭ ಸಾವಿರ ಲೀ. ನೀರು ಸಿಗಬಹುದು. ವೈದ್ಯರ ಮನೆಯಲ್ಲಿ ಹಾಲಿ ಇಬ್ಬರು ಮಾತ್ರ ಖಾಯಂ ಆಗಿ ಇರುತ್ತಾರೆ. ಆಗಾಗ್ಗೆ ಮಗಳು ಅಳಿಯ ಬಂದರೆ ಕೆಲವು ದಿನ ಇದ್ದು ವಾಪಸ್ಸಾಗುತ್ತಾರೆ. ಪಟ್ಟಣದಲ್ಲಿ ನೀರಿನ ತೀವ್ರ ಕೊರತೆ ಕಾಣಿಸಿಕೊಳ್ಳುವುದು ಅಂದಾಜು ೬ ತಿಂಗಳು. ಈ ಕೊರತೆಯ ಅವಧಿಯನ್ನು ಸಿಗುವ ಮಳೆ ನೀರಿನಿಂದ ಸಮರ್ಪಕವಾಗಿ ನಿರ್ವಹಣೆ ಮಾಡಬಹುದಾಗಿದೆ.  ವರ್ಷದುದ್ದಕ್ಕೂ ನಿರ್ವಹಣೆ ಮಾಡಬೇಕೆನಿಸಿದಲ್ಲಿ ಪ್ರತಿದಿನದ ನೀರಿನ ಬಳಕೆ ತಗ್ಗಿಸ ಬೇಕು, ಇಲ್ಲವೇ ಸಂಪಿನ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು.

ನೀರಿಲ್ಲ ಎಂದು ಕೊರಗುವ ಬದಲು ಈ ರೀತಿ ಪರ್ಯಾಯಗಳನ್ನು ಅಳವಡಿಸಿಕೊಳ್ಳುವುದು ಜಾಣತನ.

ಚಿತ್ರ-ಲೇಖನ:  ಕೆ.ನಾರಾಯಣಸ್ವಾಮಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*