ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲದ ಬರಕ್ಕೆ ತೆರೆ ಎಳೆದ ನೀರಿನ ಬ್ಯಾಂಕ್

ತುಮಕೂರು: ಶಾಶ್ವತ ನದಿಗಳಿಲ್ಲದ ತುಮಕೂರು ಜಿಲ್ಲೆ ಬಯಲುಸೀಮೆಯಲ್ಲಿ ಹಬ್ಬಿಕೊಂಡಿದೆ. ಕಳೆದ ೧೦ ವರ್ಷಗಳಿಂದಲೂ ಬರಗಾಲದ ಮೇಲೆ ಬರ ಬರುತ್ತಿದೆ. ಕೃಷಿ ಜಮೀನುಗಳೆಲ್ಲ ಖಾಲಿ, ಖಾಲಿ ಇವೆ. ನೀರಿನ ಸಮಸ್ಯೆ ಆಗಾಧವಾಗಿ ಜಟಿಲವಾಗುತ್ತಿದೆ. ರಾಜಸ್ತಾನದ ನಂತರ ಕರ್ನಾಟಕ ಭಾರತದ ೨ನೇ ಮರುಭೂಮಿಯಾಗುತ್ತಿದೆ ಎಂದು ಜಲತಜ್ಞರು ಆತಂಕ ಪಡುತ್ತಿದ್ದಾರೆ.

ತುಮಕೂರು ಜಿಲ್ಲೆಯ ಜನರಿಗೆ ಜಲಪ್ರಜ್ಞೆಯೇ ಇಲ್ಲ. ಜಲಸಾಕ್ಷರರು ಇರುವುದು ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ. ಇಂದು ನೀರಿನ ಸಮಸ್ಯೆ ಜಗತ್ತನ್ನೇ ಕಾಡುತ್ತಿದೆ. ಆಧುನಿಕ ಸಂದರ್ಭದ21a-Tmk1ಲ್ಲಿ ಮಳೆನೀರನ್ನು ಕೊಯ್ಲು ಮಾಡಿ, ಜನ, ಜಾನುವಾರುಗಳು ಕುಡಿಯುವುದಕ್ಕೆ, ವ್ಯವಸಾಯಕ್ಕೆ ಬಳಸಿಕೊಳ್ಳಬಹುದು. ಜೊತೆಗೆ ಪಕ್ಷಿಗಳಿಗೂ ನೀರು ಒದಗಿಸಬಹುದು ಎಂದು ಅಲ್ಲೊಬ್ಬ, ಇಲ್ಲೊಬ್ಬ ಪ್ರಜ್ಞಾವಂತ ರೈತರು ಮಾಡಿರುವ ಯಶಸ್ಸಿನ ಪ್ರಯೋಗಗಳನ್ನು ನೋಡಿಯೂ ನೋಡದಂತೆ ನಮ್ಮ ರೈತರು ಇದ್ದಾರೆ. ಪ್ರತಿಯೊಂದಕ್ಕೂ ಸವಲತ್ತಿಗೂ ಸರ್ಕಾರದ ಕಡೆಯೇ ನೋಡುವುದನ್ನು ಬಿಡಬೇಕು. ನಮ್ಮ ಪಾರಂಪರಿಕ ಜ್ಞಾನದಲ್ಲೇ ಇರುವ ತಂತ್ರಜ್ಞಾನವನ್ನು ಅಳವಡಿಸಿಕೊಂಡು ನೀರನ್ನು ಸಮೃದ್ಧವಾಗಿ ಬೆಳೆಗಳಿಗೆ ಬಳಸಿಕೊಳ್ಳಬಹುದು ಎಂದು ಜಿಲ್ಲೆಯಲ್ಲಿ ಹಲವಾರು ರೈತರು ಸಾಧನೆ ಮೂಲಕ ತೋರಿಸಿಕೊಟ್ಟಿದ್ದಾರೆ.

ಅಂತಹ ಸಾಧನೆಯ ಪಟ್ಟಿಗೆ ಕೊರಟಗೆರೆ ತಾಲೂಕಿನ ಪಾತಗಾನಹಳ್ಳಿಯಲ್ಲಿರುವ ಪಿ.ಎನ್. ನಟರಾಜ್ ಮತ್ತವರ ಸಹೋದರರು ತೋರಿಸಿಕೊಟ್ಟಿದ್ದಾರೆ. ಸುಮಾರು ೬೫ ವರ್ಷ ವಯಸ್ಸಿನ ನಟರಾಜ್ ಬಿಎಸ್ಸಿ ಪದವೀಧರರು. ರಸಾಯನಿಕ ಕೃಷಿ ರೈತರ ಕುತ್ತಿಗೆಗೆ ಕುತ್ತು ತರುತ್ತದೆ. ನೈಸರ್ಗಿಕ ಕೃಷಿ ಪದ್ಧತಿಯಿಂದ ರೈತ ನೆಮ್ಮದಿಯನ್ನು ಕಾಣಬಹುದು ಎಂದು ತೋರಿಸಿಕೊಟ್ಟಿದ್ದಾರೆ. ೧೯೮೫ರಿಂದ ಇತ್ತೀಚಿನ ಕೆಲ ವರ್ಷಗಳ ಹಿಂದಿನವರೆಗೂ ತಮಗೆ ಸೇರಿದ ಒಟ್ಟು ೩೦ ಎಕರೆ ಭೂಮಿಯಲ್ಲಿ ೮ ಕೊಳವೆಬಾವಿಗಳನ್ನು ಕೊರೆಸಿದರೂ ನೀರು ಸಮೃದ್ಧವಾಗಿ ದೊರೆಯಲಿಲ್ಲ. ಆತಂಕ, ತಲ್ಲಣಗಳ ನಡುವೆ ನೀರನ್ನು ಹೇಗೆ ಸಂಗ್ರಹಿಸಬೇಕು. ಬಳಸಬೇಕೆಂದು ರಾಜ್ಯದೆಲ್ಲೆಲ್ಲಾ ಅಲೆದಾಡಿದರು. ಕೊನೆಗೆ ಪಾರಂಪರಿಕ ಜ್ಞಾನ ನೀಡುವ ಪುಸ್ತಕವೊಂದು ಅವರ ರೈತ ಬದುಕನ್ನೇ ಬದಲಾಯಿಸಿತು.

ಕೊಳವೆಬಾವಿಗಳಲ್ಲಿ ಅಂತರ್ಜಲ ಇಳಿಮುಖವಾದರೆ ರೈತರು ಅಧೀರರಾಗುವುದು ಬೇಡ. ಬಿದ್ದ ಮಳೆ ನೀರು ವ್ಯರ್ಥವಾಗದಂತೆ ಜಮೀನಿನಲ್ಲೇ ಹಿಡಿದಿಡಬೇಕು. ಅಂತಹ ನೀರನ್ನು ಕೊಳವೆಬಾವಿಗಳಿಗೆ ಮರುಪೂರಣ ಮಾಡಬೇಕು. ಅಂದರೆ ಕೊಳವೆಬಾವಿ ಸುತ್ತ ಹಿಂಗುಗುಂಡಿಯನ್ನು ನಾವು ನಿರ್ಮಿಸಿಕೊಂಡಿದ್ದರಿಂದ ನಮ್ಮ ೩೦ ಎಕರೆ ಭೂಮಿಗೆ ನೀರು ವಿಫಲವಾಗಿ ದೊರೆತಿದೆ ಎನ್ನುತ್ತಾರೆ. ೧೦ ಅಡಿ ಆಳ, ೧೦ ಅಡಿ ಅಗಲ, ೧೦ ಅಡಿ ಉದ್ದದ ಹಿಂಗುಗುಂಡಿಯನ್ನು ನಿರ್ಮಿಸಬೇಕು. ಕೊಳವೆಬಾವಿಯ ಕೇಸಿಂಗ್ ಪೈಪಿಗೆ ಹಲವಾರು ರಂಧ್ರಗಳನ್ನು ಕೊರೆದು ಆಕ್ವಾಮೆಷ್, ನೈಲಾನ್‌ಮೆಷ್ ಮತ್ತು ಮರಳುಶೋಧಕವನ್ನು ಅಳವಡಿಸಬೇಕು. ನಂತರ ೫ ಅಡಿ ಎತ್ತರ ದಪ್ಪ ಜೆಲ್ಲಿಕಲ್ಲುಗಳು, ಆ ನಂತರ ೨ ಅಡಿ ಎತ್ತರ ಜೆಲ್ಲಿಕಲ್ಲುಗಳನ್ನು ತುಂಬಿ, ಮೇಲ್ಭಾಗದಲ್ಲಿ ೩ ಅಡಿ ಎತ್ತರ ಮರಳು ತುಂಬಬೇಕು. ಹಿಂಗುಗುಂಡಿ ಸುತ್ತ ತಡೆಗೋಡೆ ರಚಿಸಬೇಕು. ಜಮೀನುಗಳಲ್ಲಿ ಬಿದ್ದ ಮಳೆ ನೀರು ಸಣ್ಣ, ಸಣ್ಣ ಕಾಲುವೆಗಳ ಮೂಲಕ ಹಿಂಗುಗುಂಡಿಗೆ ಬರುವಂತಹ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಸ್ವಲ್ಪ ಸ್ಥಿತಿವಂತ ರೈತರಾದರೆ ನಮ್ಮ ಹಾಗೆ ಹಿಂಗುಗುಂಡಿಯನ್ನು ೧೦೦*೧೦೦ ಅಡಿ ಉದ್ದಗಲ, ೧೬ ಅಡಿ ಆಳ ಮಾಡಿಕೊಳ್ಳಬಹುದು. ಆಗ ಜಮೀನಿನಲ್ಲಿ ಬಿದ್ದ ಮಳೆನೀರೆಲ್ಲಾ ಸಣ್ಣ ಕಾಲುವೆಗಳ ಮೂಲಕ ಹಿಂಗುಗುಂಡಿಗೆ ಹರಿಯುವಂತೆ ವ್ಯವಸ್ಥೆ ಮಾಡಬೇಕು. ಇಂತಹ ವ್ಯವಸ್ಥೆ ಮಾಡುವ ಮೊದಲು ನಮ್ಮದೊಂದು ಕೊಳವೆಬಾವಿಯಲ್ಲಿ ಒಂದೂವರೆ ಇಂಚು ನೀರು ಬರುತ್ತಿತ್ತು. ಆದರೆ ಹಿಂಗುಗುಂಡಿ ನಿರ್ಮಾಣದ ನಂತರ ಎರಡೂವರೆ ಇಂಚು ನೀರು ಬರುತ್ತಿದೆ. ನೀರು ಸಿಕ್ಕಿತೆಂತು ಹಿಗ್ಗಾಮುಗ್ಗಾ ಬಳಸಬಾರದು. ಅಡಿಕೆ, ತೆಂಗು, ಬಾಳೆ ಯಾವುದೇ ಬೆಳೆ ಇರಲಿ ತೋಟದಲ್ಲಿ ಉತ್ಪತ್ತಿಯಾಗುವ ಕಸ, ಕಡ್ಡಿಗಳನ್ನು ತೆಗೆಯದೆ ಅಚ್ಚಾದನ (ಮಲ್ಚಿಂಗ್) ಮಾಡಬೇಕು. ಜೊತೆಗೆ ಹುರುಳಿ, ಅಲಸಂದೆಯನ್ನು ಬೆಳೆದು ಅವೆಲ್ಲವೂ ಒಣಗಿ ಅಲ್ಲೇ ಗೊಬ್ಬರವಾಗುವಂತೆ ನೋಡಿಕೊಳ್ಳಬೇಕು. ತೋಟದ ಸುತ್ತ ಗ್ಲಿಸಿಡಿಯಾ (ಗೊಬ್ಬರದಗಿಡ) ಇದ್ದರೆ ಅದರ ಸೊಪ್ಪನ್ನು ಅಚ್ಚಾದನಕ್ಕೆ ಬಳಸಿಕೊಳ್ಳಬಹುದು. ನುಗ್ಗೆಸೊಪ್ಪನ್ನು ಬಳಸಿಕೊಂಡರೆ ನೈಟ್ರೇಟ್ ಅಂಶ ಹೆಚ್ಚುತ್ತದೆ. ಒಟ್ಟಾರೆ ಅವರ ಅನುಕೂಲಕ್ಕೆ ತಕ್ಕಂತೆ ಈ ವ್ಯವಸ್ಥೆ ಮಾಡಿಕೊಳ್ಳಬೇಕು. ಆಗ ತೋಟದಲ್ಲಿ ಯಾವುದೇ ಬೆಳೆ ಹೆಚ್ಚು ನೀರು ಕೇಳುವುದಿಲ್ಲ. ಅಚ್ಚಾದನ ಮಾಡುವುದರಿಂದ ಎರೆಹುಳುಗಳ ಸಂತತಿ ಹೆಚ್ಚಾಗುತ್ತದೆ. ಯಾವುದೇ ಅಡಿಕೆ, ತೆಂಗು, ಬಾಳೆ  ಅಥವಾ ಯಾವುದೇ ಗಿಡ,ಮರದ ಬುಡಕ್ಕೆ ನೀರು ಹರಿಸಬಾರದು. ಕನಿಷ್ಟ ಮೂರ‍್ನಾಲ್ಕು ಅಡಿ ದೂರದಲ್ಲಿ ನೀರು ಕೊಟ್ಟರೆ ಬೇರುಗಳು ಅಲ್ಲಿಯವರೆಗೆ ಬೆಳೆದು ಮರ ಗಟ್ಟಿಮುಟ್ಟಾಗಲು ಕಾರಣವಾಗುತ್ತದೆ. ನಮ್ಮ ಇಡೀ ತೋಟವೇ ಅಂತಹ ವ್ಯವಸ್ಥೆಯಿಂದ ಕೂಡಿದೆ ಎಂದು ಹೆಮ್ಮೆಯಿಂದ ಪ್ರತಿಯೊಂದು ಗಿಡದ ಬಗ್ಗೆಯೂ ಮಾಹಿತಿ ನೀಡುತ್ತಾರೆ.

ಆರು ವರ್ಷದ ಹಿಂದೆ ಕೊರೆ21a-Tmk2ದಾಗ ಕೊಳವೆಬಾವಿಯಲ್ಲಿ ನಾಲ್ಕಿಂಚುನೀರು ಬರುತ್ತಿತ್ತು. ನಂತರ ೨ ಇಂಚಿಗೆ ಇಳಿಯಿತು. ಅಂತರ್ಜಲದ ಕುಸಿತದಿಂದ  ಕೊಳವೆಬಾವಿಗಳಲ್ಲಿ ನೀರು ಇಳಿಮುಖವಾಗುತ್ತದೆ. ಆದ್ದರಿಂದ ಒಣ ಜಮೀನಿನೊಂದರಲ್ಲಿ ಹಿಂಗುಗುಂಡಿಯನ್ನು ನಿರ್ಮಿಸಿ, ಅಲ್ಲಿಂದ ಪೈಪಿನ ಮೂಲಕ ಕೊಳವೆಬಾವಿಗೆ ಜಲಮರುಪೂರಣ ಮಾಡಿದ್ದೇವೆ. ಕೊಳವೆಬಾವಿಗಳಲ್ಲಿ ನೀರಿಲ್ಲ ಅಥವಾ ನೀರು ಹಿಂಗಿಹೋಯಿತು ಎಂದು ಚಿಂತೆ ಪಡುವ ಅಗತ್ಯವಿಲ್ಲ. ಬಿದ್ದ ಮಳೆನೀರು ಓಡಿಹೋಗದಂತೆ ನೋಡಿಕೊಳ್ಳಬೇಕು. ಅಂದರೆ ನೀರಿನ ಬ್ಯಾಂಕ್(ಹಿಂಗುಗುಂಡಿ) ನಿರ್ಮಿಸಿಕೊಂಡು ಜಲಮರುಪೂರಣ ಮಾಡಿದರೆ ಸಾಕಷ್ಟು ನೀರು ದೊರೆಯುತ್ತದೆ. ಬೆಳೆಗಳು ಕೈತುಂಬಾ ಬಂದು ರೈತ ನೆಮ್ಮದಿಯ ಉಸಿರು ಬಿಡಬಹುದು ಎಂದು ಎದೆತಟ್ಟಿಕೊಂಡು ಖುಷಿಯಿಂದ ಹೇಳಿದರು. ಅಪ್ಪನ ಮಾತಿಗೆ ಮಗ ನಾಗೇಗೌಡ ಎದೆತುಂಬಿ ಅಪ್ಪನ ಮಾತು ಸತ್ಯವಾಗಿದೆ. ಇಡೀ ತೋಟವೇ ಸಾಕ್ಷಿ ಎನ್ನುತ್ತಾರೆ. ಆಸಕ್ತ ರೈತರು ಮಾಹಿತಿ ಬೇಕಾದರೆ ಮೊ: ೯೪೪೯೫ ೦೦೩೮೨ ಅಥವಾ ೮೨೭೭೧ ೦೧೯೨೫ಕ್ಕೆ ಸಂಪರ್ಕಿಸಬಹುದು.

ಚಿತ್ರ-ಲೇಖನ: ಜಿ. ಇಂದ್ರಕುಮಾರ್.

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*