ಬರಿದಾಗದ ಅಘನಾಶಿನಿ ಒಡಲು…
ಅದು ಹುಣ್ಣಿಮೆಯ ಮಾರನೇ ದಿನ ಬೆಳಗಿನ ಜಾವ ಏಳು ಗಂಟೆಯ ಸಮಯ -ಅಘನಾಶಿನಿ ನದಿ ದಂಡೆಯಲ್ಲಿ ಜನವೋ ಜನ, ಅಲ್ಲಲ್ಲಿ ಕಾಣಸಿಗುವ ದೋಣಿಗಳ ಹಿಂಡು, ಅಪರೂಪಕ್ಕೆ ನೋಡುವವರಿಗೆ ಇದೇನು ಜಾತ್ರೆಯೋ, ಸಂತೆಯೋ ಅಥವಾ ಯಾವುದಾದರೂ ಅಪರೂಪದ ಘಟನೆ ನಡೆದಿದೆಯೋ ಎನ್ನುವ ಭಾವ. ಮುಂಜಾನೆ ಎರಡು-ಮೂರು ಗಂಟೆಗೆ ಎದ್ದು ಮನೆಯಲ್ಲಿನ ಗಂಡಸರು ಕೊಂಡಲಿಯನ್ನು ಹೆಗಲಿಗೆ ಹಾಕಿಕೊಂಡು ತಮ್ಮ ದೋಣಿಯನ್ನೇರಿ ಬಳಚು ಸಂಗ್ರಹಣೆಗೆ ಹೊರಡುತ್ತಾರೆ. ಅಲ್ಲಿಂದ ಭರತವಾಗುವ ಸಮಯದವರೆಗೆ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಳಚು ಸಂಗ್ರಹಿಸಿಕೊಂಡು ತಿರುಗಿ ಬರುವ ಹೊತ್ತಿಗೆ ಮನೆಯಲ್ಲಿನ ಹೆಣ್ಣುಮಗಳು ಮನೆ ಮಂದಿಗೆಲ್ಲ ಬೆಳಗಿನ ಚಹಾ ಕುಡಿಸಿ ಬುಟ್ಟಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ನದಿಯ ಬೇಲೆಯಲ್ಲಿ ತನ್ನ ಯಜಮಾನನೋ, ಅಪ್ಪನೋ, ಸಹೋದರನೋ ಬರುವಿಕೆಯನ್ನು ಕಾಯುವ ಮೊಗದಲ್ಲಿ ಮಂದಹಾಸ. ಜಾಸ್ತಿ ತಂದರೆ ಸಂತೋಷ, ಕಡಿಮೆ ತಂದರೆ ಪುಟ್ಟ ಬೇಸರ. ತಂದ ಬಳಚುಗಳನ್ನೆಲ್ಲಾ ಚಿಪ್ಪಿ, ಕಸಕಡ್ಡಿಗಳಿಂದ ಬೇರ್ಪಡಿಸಿ, ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಬಂದು ತನ್ನ ಮನೆಯ ದೈನಂದಿನ ಕೆಲಸದಲ್ಲಿ ನಿರತರಾಗುವುದು. ಇದು ಕಳೆದ ಎರಡು ವರ್ಷಗಳ ಹಿಂದೆ ಅಘನಾಶಿನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ನಿರಂತರ ಚಟುವಟಿಕೆಯಾಗಿತ್ತು. ಆದರೆ ಈಚೆಗೆ ಅಘನಾಶಿನಿಯಲ್ಲಿ ಸಿಗುತ್ತಿದ್ದ ಬಳಚು (ಚಿಪ್ಪಿಕಲ್ಲು) ಮಾಯವಾಗಿ ಬಿಟ್ಟಿದೆ. ಕೆಲವರು ಈ ನದಿಯಲ್ಲಿ ಚಿಪ್ಪುಗಣಿಗಾರಿಕೆ ಮಾಡುವುದರಿಂದ,
ಬಳಚು ಕಡಿಮೆಯಾಗಿದೆ ಎಂದರೆ, ಇನ್ನೂ ಕೆಲವರು ಇದು ಮರಳು ತೆಗೆಯುವುದರಿಂದ ಆಗಿದೆ ಎನ್ನುತ್ತಾರೆ. ಕಳೆದೆರಡು ವರ್ಷಗಳಿಂದ ಸರಿಯಾದ ಪ್ರಮಾಣದ ಮಳೆಯಾಗದೆ, ಘಟ್ಟದ ಮೇಲಿನ ಲವಣಾಂಶ ಹರಿದುಬಾರದೇ ಇರುವುದರಿಂದ, ಇಲ್ಲಿ ಬಳಚು ಉತ್ಪತ್ತಿಯಾಗಿಲ್ಲ ಎನ್ನುವುದು ಕೆಲವರ ಅನಿಸಿಕೆ. ಆದರೆ, ವೈಜ್ಞಾನಿಕ ಕಾರಣ ಇನ್ನೂ ದೊರೆತಿಲ್ಲ.
ಅಘನಾಶಿನಿ ಈ ಭಾಗದ ಜನರಿಗೆ ಎಷ್ಟರ ಮಟ್ಟಿಗೆ ಉಪಯುಕ್ತವಾಗಿದೆಯೆಂದರೆ ಎರಡು ವರ್ಷದಲ್ಲಿ ಆದಂತಹ ಬದಲಾವಣೆಗಳೇ ಸಾಕ್ಷಿ. ಸರಿಯಾದ ಬಳಚು ಸಿಗುತ್ತಿದ್ದ ಸಮಯದಲ್ಲಿ ೧೨೦೨ ಕುಟುಂಬಗಳು ಈ ಉದ್ಯೋಗವನ್ನೇ ನಂಬಿ ಜೀವನ ನಡೆಸುತ್ತಿದ್ದವು, ಮಾರುವ ಕುಟುಂಬಗಳ ಸಂಖ್ಯೆ ೪೦೮ ಎಂದು ಅಂದಾಜಿಸಲಾಗಿತ್ತು. ಸುಮಾರು ೨೫೦೦ ಜನರು ಪ್ರತಿದಿನ ಬಳಚು ಸಂಗ್ರಹಣೆ ಮಾಡುತ್ತಿದ್ದರು. ಒಂದು ವರ್ಷಕ್ಕೆ ಸುಮಾರು ೫ ಕೋಟಿ ರೂಪಾಯಿಗಳಷ್ಟು ವಾರ್ಷಿಕ ಉತ್ಪನ್ನ ಕೇವಲ ಬಳಚು ಸಂಗ್ರಹಣೆಯಿಂದಲೇ ಬರುತ್ತಿತ್ತು. ಕಳೆದೆರಡು ವರ್ಷಗಳಿಂದ ಅಘನಾಶಿನಿಯಲ್ಲಿ ಬಳಚು ಸಿಗುತ್ತಿಲ್ಲ. ಹೇರಳವಾಗಿ ಸಿಗುವ ಬಳಚು ನಾಶವಾಗಿರುವ ಸಂದರ್ಭದಲ್ಲಿ, ಆಪತ್ ಕಾಲದಲ್ಲಿ ಹುಲ್ಲುಕಡ್ಡಿ ಆಸರೆಯಾಯ್ತು ಎನ್ನುವಂತೆ ಮೊದಲಿನಿಂದಲೂ ಸಿಗುತ್ತಿದ್ದ ನೀಲಿಕಲ್ಗ (Green mussel), ಕಲ್ಗ (Oyster) ಹೆಚ್ಚಿನ ಪ್ರಮಾಣದಲ್ಲಿ ಸಿಗಲಾರಂಬಿಸಿತು. ನೀಲಿಕಲ್ಗವನ್ನು ವೈಜ್ಞಾನಿಕ ಭಾಷೆಯಲ್ಲಿ Perna viridis ಎಂದು ಕರೆಯುತ್ತಾರೆ. ಇವು Molluscs ಗುಂಪಿಗೆ ಸೇರಿದವುಗಳಾಗಿವೆ. ನೀಲಿಕಲ್ಲುಗಳು ಆಘನಾಶಿನಿ ಅಳಿವೆ ಪ್ರದೇಶದಲ್ಲಿ ಸಿಗುವ್ಯದರಿಂದ, ಈ ಉದ್ಯೋಗವನ್ನು ಸದೃಢ ಸಾಹಸಿ ಯುವಕರು ಮಾಡುವಂತದ್ದಾಗಿದ್ದು, ದಿನವೊಂದಕ್ಕೆ ೧೦೦೦ದಿಂದ ೫೦೦೦ ರೂಪಾಯಿವರೆಗೆ ದುಡಿಯುತ್ತಾರೆ. ಇಲ್ಲಿನ ಕೆಲವು ಮಹಿಳೆಯರು ಕಲ್ಗದ ಮಾಂಸವನ್ನು ಶೇಖರಿಸಿಕೊಂದು ಬಿಂದಿಗೆಗೆ ೧೦೦–೧೫೦ ರೂಪಾಯಿಗೆ ಮಾರಾಟ ಮಾಡಿ, ಅದರಿಂದ ಆದಾಯ ಗಳಿಕೆಯಲ್ಲಿ ನಿರತರಾದರು. ಈ ಕಲ್ಗಗಳನ್ನು ವೈಜ್ಞಾನಿಕ ಭಾಷೆಯಲ್ಲಿ Crassostrea madrasensis ಎಂದು ಕರೆಯುತ್ತಾರೆ. ಇದಲ್ಲದೇ ಸಾಂಪ್ರದಾಯಿಕ ಮೀನುಗಾರಿಕೆ, ಸಿಗಡಿ ಕೃಷಿ, ಉಪ್ಪು ಉತ್ಪಾದನೆ, ಏಡಿ ಹಿಡಿಯುವಿಕೆ ಹಾಗೂ ಪ್ರವಾಸೋದ್ಯಮ ಇವೆಲ್ಲ
ಚಟುವಟಿಕೆಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಆಧಾರ ನೀಡುತ್ತಾ ಬಂದಿದೆ. ತದಡಿಯಲ್ಲಿರುವ ಮೀನುಗಾರಿಕಾ ಬಂದರಿನಲ್ಲಿ ಸುಮಾರು ೧೦೦೦೦ದಷ್ಟು ಜನರು ಮೀನುಗಾರಿಕಾ ಉದ್ಯೋಗದಲ್ಲಿ ನಿರತರಾಗಿದ್ದಾರೆ, ಈ ಭಾಗದ ಸಾಂಪ್ರದಾಯಿಕ ಮೀನುಗಾರಿಕೆಗಳಾದ ಚಾಚುಬಲೆ, ಗೋರುಬಲೆ, ಗೂಟಬಲೆ, ಕಂಟ್ಲೆಬಲೆ, ಬೀಸುಬಲೆ, ಎಳೆಬಲೆ, ಬಳ್ಕಂಟ್ಲೆ ಹೀಗೆ ಹಲವಾರು ವಿಧಾನಗಳ ಮೀನುಗಾರಿಕೆಯಿಂದಲೇ ಸುಮಾರು ೩೫೦ ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇಲ್ಲಿನ ಜನರಿಗೆ ಜಾಸ್ತಿ ಪ್ರಮಾಣದ ಭೂಮಿ ಇಲ್ಲದಿರುವ್ಯದರಿಂದ, ಈ ನದಿಯನ್ನೇ ನಂಬಿ ಯಾವುದೇ ಹೂಡಿಕೆ ಇಲ್ಲದೇ ಉದ್ಯೋಗ ಮಾಡುತ್ತಾ ಬಂದಿದ್ದಾರೆ. ಇವುಗಳಲ್ಲದೆ, ಘಟ್ಟದ ಕೆಳಭಾಗದ ಜನರು ಈ ನದಿಯನೀರನ್ನೇ ಬಳಸಿಕೊಂಡು ಕೃಷಿ, ಮತ್ತು ತೋಟಗಾರಿಕೆ ಮಾಡುತ್ತಾರೆ.
ಇಷ್ಟೆಲ್ಲಾ ಇರುವಾಗ, ಸರಕಾರ ಅಭಿವೃದ್ಧಿಯ ಹೆಸರಿನಲ್ಲಿ ಬಂದರು, ಅಣೆಕಟ್ಟು, ಆಘನಾಶಿನಿ ನದಿತಿರುವುಗಳಂತಹ ಯೋಜನೆಗಳಿಂದ, ನದಿಯ ಮೂಲರೂಪಕ್ಕೆ ಧಕ್ಕೆತಂದು ಇಲ್ಲಿರುವ ಮೂಲ ನಿವಾಸಿಗಳ ಉದ್ಯೋಗಗಳನ್ನು ಬಲಿಪಡೆಯಲು ಹೊರಟಿದೆ. ಕಾರವಾರದಲ್ಲಿ ಸೀಬರ್ಡ ನಿರಾಶ್ರಿತರಂತೆ, ಇಲ್ಲಿನ ಜನರನ್ನೂ ಇಲ್ಲಿಂದ ಹೊರದೂಡುವ ಯತ್ನ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿನ ನದಿಗಳಲ್ಲಿ ತನ್ನ ಮೂಲ ರೂಪವನ್ನು ಹೊಂದಿರುವ ಏಕೈಕ ನದಿ ಈ ಅಘನಾಶಿನಿ. ನಿಜವಾಗಿಯೂ ಈ ಭಾಗದಲ್ಲಿ ಅಭಿವೃದ್ಧಿ ಮಾಡಬೇಕೆಂದರೆ, ನಿರುದ್ಯೋಗಿಗಳಾಗಿರುವ ಇಲ್ಲಿನ ಜನರಿಗೆ ಈ ನದಿಯಲ್ಲಿಯೇ ಪರ್ಯಾಯ ಉದ್ಯೋಗ
ಕಲ್ಪಿಸಿಕೊಡಬೇಕಾಗಿದೆ. ಅಘನಾಶಿನಿ ನದಿಯ ಸುತ್ತಲೂ ಸುಮಾರು ೯೦೦೦೦ದಷ್ಟು ಜನವಸತಿ ಇದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸುಮಾರು ೫೦೦೦೦ ಜನರು ಈ ನದಿಯನ್ನೇ ಅವಲಂಬಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಸರಕಾರದ ಯಾವುದೇ ಯೋಜನೆಯನ್ನು ತಂದರೂ ಇಷ್ಟೊಂದು ಜನರಿಗೆ ಉದ್ಯೋಗ ಕಲ್ಪಿಸಿಕೊಡುವುದು ಸಾಧ್ಯವಿಲ್ಲ. ಇವರೆಲ್ಲರ ಸಾಂಪ್ರದಾಯಿಕ ಜೀವನಶೈಲಿಯನ್ನು ಬಲಿ ಪಡೆದು ಯೋಜನೆ ಮಾಡುವ ಮೊದಲು ಇವೆಲ್ಲವುಗಳಬಗ್ಗೆ ಸರಕಾರ, ಜನಪ್ರತಿನಿಧಿಗಳು ಹಾಗೂ ಜನರಲ್ಲಿ ಚರ್ಚೆಯಾಗಬೇಕಿದೆ.
ಚಿತ್ರ-ಬರಹ: ಮಾರುತಿ ಗೌಡ (ಅಘನಾಶಿನಿ)