ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅದೃಷ್ಟದ ಕೋಟೆಗಳು: ಮರಾಠರು ನೀರನ್ನು ಉಳಿಸಿದ ಪರಿ

ಜಲ ಕೊಯ್ಲು ಹಾಗೂ ಸಂರಕ್ಷಣೆಯ ಅಮೂಲ್ಯ ಪಾಠಗಳನ್ನು ಮಹಾರಾಷ್ಟ್ರದ ಬೆಟ್ಟದ ಕೋಟೆಗಳು ಒದಗಿಸುತ್ತವೆ

Forts of fortune - 1ಹಿಂದಿನ ಕಾಲದಲ್ಲಿ, ಜನರಿಗೆ ನೀರಿನ ಮಹತ್ವದ ಅರಿವಿತ್ತು ಹಾಗೂ, ಜಲ ಸಂಪನ್ಮೂಲಗಳನ್ನು ನಿರ್ವಹಿಸಿ, ಸಂರಕ್ಷಿಸುವ ವಿವಿಧ ವಿಧಾನಗಳನ್ನು ಅವರು ಕಂಡುಕೊಂಡಿದ್ದರು.  ಜನರ ನೀರಿನ ಅಗತ್ಯತೆಗಳನ್ನು ಪೂರೈಸುವುದರೊಂದಿಗೆ, ಅವ್ಯಾಹತವಾಗಿ ಹರಿಯುವ ನದಿಗಳಿಲ್ಲದ ಪ್ರದೇಶಗಳಲ್ಲಿ ಜಾನುವಾರುಗಳು ಹಾಗೂ ಕೃಷಿಯ ಉಳಿವಿಗೆ, ಹಾಗೂ, ಮಳೆಯ ಮೇಲೆ ಅವಲಂಬಿತವಾಗಿ, ಆಗಾಗ ನೀರಿನ ಅಭಾವ ಅಥವಾ ಬರಗಳನ್ನು ಎದುರಿಸುವ ಜನರಿಗೆ ನೆರವಾಯಿತು.

ಮಹಾರಾಷ್ಟ್ರದಲ್ಲಿ ತಲೆದೋರುವ ವಾರ್ಷಿಕ ಬರಗಳು, ಪ್ರಸ್ತುತ ಲಭ್ಯವಿರುವ ಜಲ ಸಂಪನ್ಮೂಲಗಳ ಮೇಲೆ ತೀವ್ರವಾದ ಒತ್ತಡವನ್ನು ಹೇರಿದೆ.  ಜೊತೆಗೆ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾಕಷ್ಟು ಪ್ರಮಾಣದ, ಕುಡಿಯಲು ಯೋಗ್ಯವಾದ ನೀರನ್ನು ಜನರಿಗೆ ಒದಗಿಸುವಲ್ಲಿ ಸರ್ಕಾರದ ಅಸಾಮರ್ಥ್ಯದಿಂದ, ನೀರನ್ನು ಬಳಸುವ ಹಾಗೂ ಉಳಿಸುವ ವಿಕೇಂದ್ರೀಕೃತ ಹಾಗೂ ಸ್ಥಳೀಯ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವು ಮತ್ತಷ್ಟು ಮಹತ್ವವನ್ನು ಪಡೆಯತೊಡಗಿತು.  ಮಳೆನೀರು ಕೊಯ್ಲು ಇಂತಹ ಒಂದು ವಿಧಾನವಾಗಿದೆ [೧].

ನೀರಿನ ಅಭಾವವು ಭಾರತಕ್ಕೆ ಹೊಸತೇನೂ ಅಲ್ಲ, ಆದರೀಗ ಅದು ಅಪಾಯಕಾರಿ ಹಂತಗಳನ್ನು ತಲುಪಿದೆ.  ನಮ್ಮ ಸಿರಿವಂತ ಇತಿಹಾಸದತ್ತ ಒಂದು ಇಣುಕುನೋಟ ಬೀರಿದರೆ, ಪ್ರದೇಶವೊಂದರ ವಿಶಿಷ್ಟ ಭೂವಿನ್ಯಾಸವನ್ನು ಆಧರಿಸಿ, ನೀರಿನ ಕೊಯ್ಲು ಮಾಡುವ ರಚನೆಗಳನ್ನು ವಿನ್ಯಾಸಗೊಳಿಸುವ ಮೂಲಕ, ಬದಲಾಗುತ್ತಿರುವ ಹವಾಮಾನ ಮಾದರಿಗಳು ಹಾಗೂ ನೀರಿನ ಬೇಡಿಕೆಗಳನ್ನು ನಮ್ಮ ಪೂರ್ವಜರು ನಿರ್ವಹಿಸಿದ ರೀತಿಯಿಂದ ನಾವು ಅನೇಕ ಪಾಠಗಳನ್ನು ಕಲಿಯಬಹುದು.

ಕೋಟೆಗಳಿಂದ ಕಲಿತ ಪಾಠಗಳು

ಮಹಾರಾಷ್ಟ್ರದ ಬೆಟ್ಟಗಳಲ್ಲಿನ ಪುರಾತನ ಕೋಟೆಗಳಲ್ಲಿ ಸುತ್ತಮುತ್ತಲೂ ಗುಡ್ಡಗಾಡು ಪ್ರದೇಶಗಳ ಜನರ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಜಲ ಕೊಯ್ಲು ರಚನೆಗಳಲ್ಲಿ ತೋರಿದ ಪೂರ್ವಜರ ಚಾಣಾಕ್ಷತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ೧೬ನೆಯ ಶತಮಾನದಲ್ಲಿ ಆಳಿದ ಮರಾಠ ವೀರ ಛತ್ರಪತಿ ಶಿವಾಜಿ ಮಹಾರಾಜರ ಆಳ್ವಿಕೆಯಲ್ಲಿ ಬಹುತೇಕ ಕೋಟೆಗಳ ನಿರ್ಮಾಣವನ್ನು ಮಾಡಲಾಯಿತು.  ವೈರಿಗಳಾದ ಮುಘಲರ ವಿರುದ್ಧ ಕಾರ್ಯತಾಂತ್ರಿಕ ಮೇಲುಗೈ ಸಾಧಿಸುವ ರೀತಿಯಲ್ಲಿ ಈ ಕೋಟೆಗಳ ವಿನ್ಯಾಸವನ್ನು ಮಾಡಲಾಗಿತ್ತು [೨].

ಮಹಾರಾಷ್ಟ್ರದ ಕೋಟೆಗಳ ಬಗೆಗಿನ ತಜ್ಞರಾದ ಪುಣೆಯ ಡೆಕ್ಕನ್ ಕಾಲೇಜಿನ ಪುರಾತತ್ವಶಾಸ್ತ್ರಜ್ಞರು ಹಾಗೂ ಸಂಶೋಧಕರಾದ ಸಚಿನ್ ಜೋಷಿಯವರು, “ಈ ಕಾಲದಲ್ಲಿ ಸುಮಾರು ೫೫೦ ಕೋಟೆಗಳ ನಿರ್ಮಾಣವನ್ನು ಮಾಡಲಾಯಿತು, ಹಾಗೂ ಅವುಗಳಲ್ಲಿ ಸುಮಾರು ೪೫೦ ಉಳಿದಿದ್ದು, ಅವುಗಳಲ್ಲಿ ಬಹುತೇಕ ಬೆಟ್ಟದ ಮೇಲೆ ನಿರ್ಮಾಣ ಮಾಡಿದ ಕೋಟೆಗಳಾಗಿವೆ.  ಪ್ರದೇಶದ ಭೂವಿನ್ಯಾಸ ಹಾಗೂ ಲಭ್ಯವಿರುವ ಜಲ ಸಂಪನ್ಮೂಲಗಳನ್ನು ಗಣನೆಗೆ ತೆಗೆದುಕೊಂಡು, ಈ ಕೋಟೆಗಳಲ್ಲಿನ ಜಲ-ಕೊಯ್ಲು ವಿಧಾನಗಳನ್ನು ವಿನ್ಯಾಸಗೊಳಿಸಲಾಗಿದೆ,” ಎನ್ನುತ್ತಾರೆ.

ಬೆಟ್ಟದ ಮೇಲಿನ ಪ್ರತಿಯೊಂದು ಕೋಟೆಯಲ್ಲೂ – ದಿನಸಿ ಸಾಮಾನಿನಿಂದ ಶಸ್ತ್ರಾಸ್ತ್ರಗಳವರೆಗೂ – ಎಲ್ಲ ಲಭ್ಯವಿರುವ ಸ್ವತಂತ್ರ ಪಟ್ಟಣದಂತೆ ಇತ್ತು, ಹಾಗೂ ವೈರಿಯ ದಾಳಿಯಾದಾಗ, ಅಲ್ಲಿನ ಜನ-ಜಾನುವಾರುಗಳಿಗೆ ಬೇಕಾಗುವಷ್ಟು ದಾಸ್ತಾನನ್ನೂ ಹೊಂದಿರುತ್ತಿತ್ತು.  ಅದೇ ರೀತಿ, ಜನರ ದೈನಂದಿನ ನೀರಿನ ಅಗತ್ಯಗಳನ್ನು ಪೂರೈಸಲು ಕೋಟೆಗೆ ನೀರನ್ನು ಹೊತ್ತೊಯ್ಯುವುದು ಸಾಧ್ಯವಾಗದ ಮಾತಾಗಿದ್ದರಿಂದ, ನೀರನ್ನೂ ಸರಿಯಾದ ರೀತಿಯಲ್ಲಿ ಶೇಖರಣೆ ಮಾಡಿಟ್ಟುಕೊಳ್ಳುವ ಅವಶ್ಯಕತೆಯೂ ಇತ್ತು [೩].  ನೆಲದಡಿಯ ನೀರಿನ ಟ್ಯಾಂಕ್‌ಗಳು, ಜಲಾಶಯಗಳು, ನೀರುತೊಟ್ಟಿಗಳು, ಹಾಗೂ ಕೃತಕ ಕೆರೆಗಳನ್ನು ಈ ಕೋಟೆಗಳ ಮೇಲೆ ನಿರ್ಮಾಣ ಮಾಡಲಾಗುತ್ತಿತ್ತು [೩].

ಜಲ-ಕೊಯ್ಲಿನ ರಚನೆಗಳು  

ಪುಣೆಯ ಸಿಂಹಘಡ ಬೆಟ್ಟದ ಕೋಟೆಯಲ್ಲಿ ಅನೇಕ ನೀರಿನ ಕೊಳಗಳನ್ನು/ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದೆ.  “ವಾಸ್ತವದಲ್ಲಿ ಇವು ಬಂಡೆಯಿಂದ ಕೊರೆದ ಟಾಕೆ ಅಥವಾ ಟ್ಯಾಂಕ್‌ಗಳೆಂದು ಕರೆಯಲ್ಪಡುವ ನೀರುತೊಟ್ಟಿಗಳಾಗಿದ್ದು, ಮಳೆನೀರನ್ನು ಒಟ್ಟುಗೂಡಿಸಿ, ಶೇಖರಣೆ ಮಾಡುತ್ತದೆ.  ಕೋಟೆಗಳ ನಿರ್ಮಾಣ ಮಾಡಲು ಬೇಕಾದ ಬಂಡೆಗಳನ್ನು ಭೂಮಿಯಿಂದ ಕೊರೆದಾಗ ಈ ಟ್ಯಾಂಕ್‌ಗಳು ಸೃಷ್ಟಿಯಾದವು.  ಕೋಟೆಯಲ್ಲಿ ಒಟ್ಟಾರೆ ೪೮ ಟಾಕೆಗಳನ್ನು ನೋಡಬಹುದು.  ಕೆಲವು ಸ್ಥಳಗಳಲ್ಲಿ, ಟ್ಯಾಂಕ್‌ಗಳ ಎತ್ತರ ಹಾಗೂ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು, ಈ ಟ್ಯಾಂಕ್‌ಗಳ ಸುತ್ತಲೂ ಕಲ್ಲಿನ ಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ,” ಎನ್ನುತ್ತಾರೆ ಜೋಷಿ. ಮಳೆಗಾಲವಾದ ನಂತರ, ಈ ಟ್ಯಾಂಕ್‌ಗಳಲ್ಲಿ ನಾಲ್ಕರಿಂದ ಆರು ತಿಂಗಳವರೆಗೂ ನೀರು ಶೇಖರಣೆ ಮಾಡಬಹುದಾಗಿತ್ತು.

ಕೋಟೆಗಳಲ್ಲಿ ವಿವಿಧ ರೀತಿಯ ನೀರಿನ ತೊಟ್ಟಿಗಳನ್ನು ಕಾಣಬಹುದು – ಕೆಲವು ಆಕಾಶಕ್ಕೆ ತೆರೆದುಕೊಂಡಿದ್ದರೆ, ಕೆಲವು ಬಂಡೆಗಳಲ್ಲಿ ಹುದುಗಿದ ಗುಹೆಗಳಲ್ಲಿದ್ದು, ಮತ್ತೂ ಕೆಲವು ನೆಲದಡಿಯಲ್ಲಿ ಅಗೆದಿದ್ದರೆ, ಕೆಲವು ಇಳಿಜಾರುಗಳಲ್ಲಿ ಇರುತ್ತವೆ [೩].  ಕೆಲವೆಡೆ, ಗುಂಪುಗುಂಪಾಗಿ ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ, ಮೇಲ್ಮೈ ಹರಿವಿನ ನೀರನ್ನು ಅದರೊಳಗೆ ಬೀಳುವಂತೆ ಮಾಡಲಾಗಿತ್ತು ಹಾಗೂ ನೀರನ್ನು ಮರುಪೂರಣಗೊಳಿಸಿ, ಉತ್ತಮ ರೀತಿಯಲ್ಲಿ ಶೇಖರಣೆ ಮಾಡಿಡಲು ಸಾಧ್ಯವಾಗುತ್ತಿತ್ತು [೩].  ಸಿಂಹಘಡ ಕೋಟೆಯಲ್ಲಿ ಇಂದಿಗೂ ಕಾಣಸಿಗುವ ಬಂಡೆಗಳಲ್ಲಿ ಕೊರೆದ ೨೪ ನೀರಿನ ತೊಟ್ಟಿಗಳು ಇದಕ್ಕೆ ಉತ್ತಮ ಉದಾಹರಣೆಯೆಂದು ಜೋಷಿ ತಿಳಿಸುತ್ತಾರೆ.

Forts of fortune - 2ಕೆಲವೊಮ್ಮೆ, ಕೋಟೆಯ ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳ ಬೇಡಿಕೆ ಪೂರೈಕೆಯಾದ ನಂತರ, ನೆಲದಲ್ಲಿನ ಉತ್ಖನನವಾದ ಭಾಗವನ್ನು ಮತ್ತಷ್ಟು ಆಳಕ್ಕೆ ಸಿಡಿಸಿ, ಅದರಿಂದ ಉಂಟಾದ ಬಿರುಕುಗಳ ಮೂಲಕ ನೀರಿನ ಬುಗ್ಗೆಯ ರೂಪದಲ್ಲಿ ಅಂತರ್ಜಲವನ್ನು ನೀರಿನ ತೊಟ್ಟಿಗಳಲ್ಲಿ ಉತ್ಪತ್ತಿ ಆಗುವಂತೆ ಮಾಡಲಾಗುತ್ತಿತ್ತು [೩].  ಸಿಂಹಘಡ ಕೋಟೆಯಲ್ಲಿ ಈ ರೀತಿ ರಚಿಸಲಾದ ನೀರಿನ ತೊಟ್ಟಿಗೆ ಉದಾಹರಣೆಯೆಂದರೆ, ದೇವ್ ಟಕೆ ಎಂದು ಜೋಶಿ ಹೇಳುತ್ತಾರೆ.

ಅತ್ಯಂತ ದುರ್ಗಮವೆಂದು ಪರಿಗಣಿಸಲಾದ ಮರಾಠ ಸಾಮ್ರಾಜ್ಯದ ಮೊದಲ ರಾಜಧಾನಿ ರಾಯಘಡದ ಎತ್ತರದ ಕೋಟೆಯಲ್ಲಿ, ಬೃಹತ್ ಪ್ರಮಾಣದ ನೀರನ್ನು ಶೇಖರಣೆ ಮಾಡುವ ಸೌಲಭ್ಯಗಳಿದ್ದವು. ಕೋಟೆಯಲ್ಲಿ ಎರಡು ದೊಡ್ಡ ಕೆರೆಗಳು ಅಥವಾ ತಾಲಾವ್ಗಳು ಹಾಗೂ ಬಂಡೆಯಲ್ಲಿ ಕೊರೆದ ೩೯ ನೀರಿನ ತೊಟ್ಟಿಗಳು ಇದ್ದವು. ರಾಜ್ಯದ ನಿರ್ವಹಣೆಯನ್ನು ಹೊತ್ತ ಮಂತ್ರಿಗಳಿಗೆ ನೀರಿನ ಸಂರಕ್ಷಣೆ ಮಾಡುವುದರ ಮಹತ್ವ ತಿಳಿದಿತ್ತು, ಹಾಗೂ ಪನಾಡೆ ಎಂದು ಕರೆಯಲ್ಪಡುವ ಬಂಡೆಗಳಲ್ಲಿ ಶೇಖರಣೆಯಾದ ನೀರಿನ ಬಗ್ಗೆ ತಿಳುವಳಿಕೆ ಇದ್ದ ತಜ್ಞರನ್ನು ಬಂಡೆಗಳಲ್ಲಿರುವ ಬುಗ್ಗೆಗಳನ್ನು ಗುರುತಿಸಲು ಆಮಂತ್ರಿಸಲಾಗುತ್ತಿತ್ತು.  ನಂತರ, ಬುಗ್ಗೆಗಳಿರುವ ಈ ಬಂಡೆಗಳನ್ನು ಹೊರತೆಗೆದು, ಸಿಡಿಸಿ, ಬುಗ್ಗೆಗಳು ಕಾಣುವಂತೆ ಮಾಡಲಾಗುತ್ತಿತ್ತು.  ರಾಯಘಡ ಕೋಟೆಯಲ್ಲಿನ ಚಂದ್ರ ತಾಲೆಯಲ್ಲಿ ಅಂತಹ ಒಂದು ಬುಗ್ಗೆ ಇತ್ತು.  ನೀರಿನ ಬುಗ್ಗೆಗಳು ಅನೇಕ ಬಾರಿ ತಮ್ಮ ಹರಿವ ದಿಕ್ಕನ್ನು ಬದಲಾಯಿಸುವುದು ಅಥವಾ ಕೋಟೆಗಳಲ್ಲಿ ಉಂಟಾಗುವ ಭಾರಿ ಸಿಡಿಮದ್ದುಗಳ ಶಬ್ದಗಳಿಂದ ಹರಿಯುವುದನ್ನೇ ನಿಲ್ಲಿಸುತ್ತಿದ್ದರಿಂದ, ಬಂಡೆಗಳಲ್ಲಿ ಕೊರೆದ ನೀರಿನ ತೊಟ್ಟಿಗಳು ಹೆಚ್ಚುವರಿ ಶೇಖರಣಾ ತಾಣಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು [೪].

ರಾಯಘಡ ಕೋಟೆಯ ಭೂವಿನ್ಯಾಸವು ವಿಶಿಷ್ಟ ರೀತಿಯಲ್ಲಿದ್ದು, ಕ್ರಮೇಣವಾದ ಇಳಿಜಾರು ಇರುವುದರಿಂದ, ಕೆರೆಗಳ ನಿರ್ಮಾಣಕ್ಕೆ ಸೂಕ್ತವಾಗಿದೆ.  ತಲಾವ್, ಕೋಟೆಯಲ್ಲಿ ಅತ್ಯಂತ ಹೆಚ್ಚಿನ ಶೇಖರಣಾ ಸಾಮರ್ಥ್ಯವಿರುವ ಕೆರೆಯಾಗಿದೆ [೫].

Forts of fortune - 3ಶಿವಾಜಿ ಕಾಲದಲ್ಲಿ ನೀರು ಸರಬರಾಜು

ಶಿವಾಜಿಯ ಕಾಲದಲ್ಲಿ, ಎಲ್ಲ ಕೋಟೆಗಳಲ್ಲೂ ನೀರು ಸರಬರಾಜಿನ ವ್ಯವಸ್ಥೆಯು ಒಂದೇ ಇತ್ತು. ಆಡಳಿತದಲ್ಲಿ ವ್ಯಕ್ತಿಯೊಬ್ಬನು ಹೊಂದಿದ ಹುದ್ದೆಗೆ ಅನುಗುಣವಾಗಿ, ನಿರ್ದಿಷ್ಟ ಪ್ರಮಾಣದ ನೀರನ್ನು ಪ್ರತಿ ವ್ಯಕ್ತಿಗೂ ನಿಯೋಜಿಸಲಾಗುತ್ತಿತ್ತು ಹಾಗೂ, ‘ಪಂಕೆ’ ಎಂದು ಕರೆಯಲ್ಪಡುತ್ತಿದ್ದ ನೀರನ್ನು ಹೊರುವವರು, ಈ ವ್ಯಕ್ತಿಗಳಿಗೆ ಟ್ಯಾಂಕ್‌ಗಳು ಅಥವಾ ಕೆರೆಗಳಿಂದ ಈ ನೀರನ್ನು ಹೊತ್ತೊಯ್ದು ನೀಡಲಾಗುತ್ತಿತ್ತು [೩]. ಕೋಟೆಗಳಲ್ಲಿ ನೀರನ್ನು ಅತ್ಯಂತ ಮುತುವರ್ಜಿಯಿಂದ ಬಳಸಲಾಗುತ್ತಿತ್ತು ಎನ್ನುವುದಕ್ಕೆ ಪುರಾವೆಗಳಿವೆ [೩].

ನಿರ್ವಹಣೆಗಾಗಿ ಸ್ಥಳೀಯರನ್ನು ತೊಡಗಿಸಿಕೊಳ್ಳುವುದು

ಸರ್ಕಾರ ಹಾಗೂ ಸಮುದಾಯಗಳಿಂದ ಸಂಘಟಿತ ಮತ್ತು ಸೂಕ್ತ ಯತ್ನಗಳ ಕೊರತೆಯಿಂದಾಗಿ, ಈ ರೀತಿಯ ಅನೇಕ ರಚನೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿ, ದುರ್ಬಳಕೆಯಾಗಿವೆ ಎಂದು ಪುಣೆಯ ಪರಿಸರ ತಜ್ಞೆ ಹಾಗೂ ಇತಿಹಾಸದ ಸಂಶೋಧಕರಾದ ಸಯಾಲಿ ಪಲಾಂಡೆ-ದಾತರ್ ಹೇಳುತ್ತಾರೆ.

“ಕೇವಲ ಕೋಟೆಗಳ ಐತಿಹಾಸಿಕ ಹಾಗೂ ರಾಜಕೀಯ ಮಹತ್ವವನ್ನು ಗಣನೆಗೆ ತೆಗೆದುಕೊಂಡು ಕೋಟೆಗಳನ್ನು ಅಭಿವೃದ್ಧಿ ಪಡಿಸಿದರೆ ಸಾಲದು, ಅವುಗಳ ಸುತ್ತಮುತ್ತಲಿನ ವಾತಾವರಣ ಹಾಗೂ ಪರಿಸರವನ್ನೂ ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ,” ಎನ್ನುತ್ತಾರೆ ದಾತರ್.

Forts of fortune - 4“ಸುತ್ತಮುತ್ತಲಿನ ಗ್ರಾಮಗಳು, ಬುಡಕಟ್ಟು ಜನಾಂಗದವರು ಹಾಗೂ ವಲಸಿಗ ಸಮುದಾಯಗಳಿಗೆ ಕೋಟೆಗಳಲ್ಲಿ ಶೇಖರಣೆಯಾದ ನೀರು ಇಂದಿಗೂ ಉಪಯುಕ್ತವಾಗಿದೆ. ಈ ಕೋಟೆಗಳು ದುರ್ಗಮ ಪ್ರದೇಶಗಳಲ್ಲಿ ಇರುವುದರಿಂದ ಹಾಗೂ ನೀರಿನ ಲಭ್ಯತೆಯಿಂದ, ಇಲ್ಲಿನ ಪ್ರಾಣಿ-ಸಸ್ಯ ಸಂಕುಲಗಳು, ಜೀವವೈವಿಧ್ಯತೆ ಹಾಗೂ ವನ್ಯಮೃಗಗಳು ಹಾಗೆಯೇ ಉಳಿದಿವೆ,” ಎಂದು ಅವರು ಹೇಳುತ್ತಾರೆ.

ಇತ್ತೀಚೆಗೆ ಸರ್ಕಾರವು ಈ ಕೋಟೆಗಳನ್ನು ಪಾರಂಪರಿಕ ಹೊಟೇಲ್‌ಗಳಾಗಿ ಪರಿವರ್ತಿಸುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಯೋಜನೆಯ ಘೋಷಣೆಯನ್ನು ಮಾಡಿತು. ಆದರೆ, ಇದರಿಂದ ವಾಣಿಜ್ಯಕ್ಕಾಗಿ ಕೋಟೆಗಳ ದುರ್ಬಳಕೆಯಾಗಿ, ಕೋಟೆಯ ಸುತ್ತಲಿನ ಪಾರಿಸಾರಿಕ ಸಮತೋಲನವನ್ನು ಕೆಡಿಸಿ, ಕೋಟೆಗಳು ಸಾಮಾನ್ಯ ಜನರಿಗೆ ಎಟುಕದಂತೆ ಆಗುತ್ತವೆ ಎಂದು ಪರಿಸರ ತಜ್ಞರು, ಇತಿಹಾಸಕಾರರು ಹಾಗೂ ಸಂರಕ್ಷಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ [೬].

ಅದರ ಬದಲು, ಇದರ ಮುಂದಿನ ಹೆಜ್ಜೆಯಾಗಿ, ಹೆಚ್ಚು ಸಂವೇದನಾಶೀಲ ಪ್ರವಾಸೋದ್ಯಮ ಅಥವಾ ಪರಿಸರ-ಪ್ರವಾಸೋದ್ಯಮದ ಸ್ವರೂಪವನ್ನು ಅಳವಡಿಸಿಕೊಳ್ಳಬೇಕೆಂದು ಅಭಿಪ್ರಾಯ ಪಡುವ ದಾತಾರ್, ಕೋಟೆಗಳ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ, ಕೋಟೆಗಳಲ್ಲಿನ ನೀರನ್ನು ಬಳಸುವ ಸ್ಥಳೀಯ ಸಮುದಾಯಗಳನ್ನು ಇದರಲ್ಲಿ ತೊಡಗಿಸಿಕೊಳ್ಳುವುದು, ಅವುಗಳನ್ನು ‘ಪ್ರವಾಸಿ ತಾಣ’ಗಳಾಗಿ ಅಭಿವೃದ್ಧಿಪಡಿಸುವುದು ಹೆಚ್ಚು ಉತ್ತಮವೆಂದು ಅಭಿಪ್ರಾಯಪಡುತ್ತಾರೆ.

ಕೋಟೆಗಳ ಸ್ವಚ್ಛಗೊಳಿಸುವಿಕೆ ಹಾಗೂ ನಿರ್ವಹಣೆಯ ಜೊತೆಗೆ, ಅವುಗಳನ್ನು ಪುನರುಜ್ಜೀವನಗೊಳಿಸುವ ಬಗೆಗೆ ಅರಿವು ಹಾಗೂ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿರುವ ದುರ್ಗಾವೀರ್ ಪ್ರತಿಷ್ಥಾನದ ಸಂಸ್ಥಾಪಕ ಸಂತೋಷ್ ಹಸುರ್ಕರ್‌ರವರು, ಕೋಟೆಗಳ ನಿರ್ವಹಣೆಯಲ್ಲಿ ಸ್ಥಳೀಯ ಭಾಗವಹಿಸುವಿಕೆಯು ಇರಬೇಕೆಂದು ಒಪ್ಪುತ್ತಾರೆ.  “ನನ್ನ ಪ್ರಕಾರ, ಕೇವಲ ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ.  ಸ್ಥಳೀಯ ಜನರು ಹಾಗೂ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ, ಈ ತಾಣಗಳ ಅಪಾರ ಐತಿಹಾಸಿಕ ಹಾಗೂ ಪಾರಿಸಾರಿಕ ಮಹತ್ವವನ್ನು ಕುರಿತಾಗಿ ಅರಿವು ಮೂಡಿಸಿ, ಸಂವೇದನಾಶೀಲರನ್ನಾಗಿಸಬೇಕು.  ಈ ರೀತಿಯಲ್ಲಿ ಈ ಅಮೂಲ್ಯ ಸಂಪನ್ಮೂಲದ ಸಂರಕ್ಷಣೆ ಮಾಡಲು ನೆರವಾಗುತ್ತದೆ,” ಎನ್ನುತ್ತಾರೆ ಸಂತೋಷ್.

ಪ್ರವಾಸಿಗರಿಗಾಗಿ ಸಿಂಹಘಡದಲ್ಲಿ ಜುನ್ಕಾ-ಭಾಕ್ರಿ (ಮೆಣಸಿನಕಾಯಿ ಚಟ್ನಿ ಹಾಗೂ ಜೋಳದ ರೊಟ್ಟಿ) ಮಾಡಿಕೊಡುವ ಗ್ರಾಮಸ್ಥನೊಬ್ಬನು, “ಕುಡಿಯಲು ಹಾಗೂ ಅಡುಗೆ ಮಾಡಲು ದೇವ್ ಟಾಕೆಯ ನೀರನ್ನು ಇನ್ನೂ ಬಳಸುತ್ತೇವೆ.  ಅದು ತಣ್ಣಗೆ, ಕುಡಿಯಲು ರುಚಿಕರವಾಗಿದೆ.  ನೀರಿನ ಅಭಾವ ಇರುವ ಸಮಯದಲ್ಲೂ ಗ್ರಾಮಸ್ಥರೂ ಈ ನೀರನ್ನು ಬಳಸುತ್ತಾರೆ,” ಎಂದು ತಿಳಿಸುತ್ತಾನೆ.  ಬೇಸಿಗೆಯಲ್ಲಿ ತೀವ್ರರೀತಿಯ ನೀರಿನ ಅಭಾವವನ್ನು ಅನುಭವಿಸುವ ಬೆಟ್ಟದ ಮೇಲಿನ ಅನೇಕ ಗ್ರಾಮಗಳ ನೀರಿನ ಅಗತ್ಯಗಳನ್ನು ಪೂರೈಸುವಲ್ಲಿ ಈ ಜಲ-ಕೊಯ್ಲು ರಚನೆಗಳ ಕೊಡುಗೆಯನ್ನು ಗುರುತಿಸಿ, ಸಂರಕ್ಷಿಸಲು ಇದು ಸುಸಂದರ್ಭ.

ಉಲ್ಲೇಖಗಳು

  1. ಕೇಂದ್ರೀಯ ಭೂಜಲ ಮಂಡಳಿ (ದಿನಾಂಕವನ್ನು ನಿಗದಿಪಡಿಸಿಲ್ಲ) Ground Water Scenario of Maharashtra. ಆಗಸ್ಟ್ ೩ ೨೦೧೬ರಂದು ನೋಡಲಾಗಿದೆ.
  2. ಪಾಟೀಲ್, ವಿಮಲಾ (೨೦೦೯) Forts and palaces of Maharashtra. ಆಗಸ್ಟ್ ೩ ೨೦೧೬ರಂದು ನೋಡಲಾಗಿದೆ.
  3. ವೈಜಾಪುರ್ಕರ್ ಹಾಗೂ ವೈಜಾಪುರ್ಕರ್ (೨೦೦೭) Study of Ancient Water Storage System on Forts in Nashik District of Maharashtra. ಆಗಸ್ಟ್ ೩ ೨೦೧೬ರಂದು ನೋಡಲಾಗಿದೆ.
  4. ಪರಾಡ್ಕರ್ ಮಿಲಿಂದ್ (೨೦೧೧) ಪ್ರಾಚೀನ್ ಭಾರತೀಯ ದುರ್ಗಶಾಸ್ತ್ರ ಅಣಿ ಹಿಂದ್ವಿ ಸ್ವರಾಜ್ಯಾಚ್ಯ ದೋನ್ ರಾಜ್ ಧಾನ್ಯ, ರಾಜ್ ಘಡ್ ವ ರಾಜ್ ಘಡ್: ಏಕ್ ತುಲನಾತ್ಮಕ್ ಅಭ್ಯಾಸ್. ನೀಲಚಂಪಾ ಪ್ರಕಾಶನ, ಪುಣೆ.
  5. ಘನೇಕರ್, ಪಿ.ಕೆ (೨೦೦೯) ದುರ್ಗಾದುರ್ಗೇಶ್ವರ್ ರಾಯಘಡ್. ಸ್ನೇಹಲ್ ಪ್ರಕಾಶನ್, ಪುಣೆ.
  6. ಸಿಂಘ್, ದೀಪ್ತಿ (೨೦೧೬) Tapping tourism potential: Maharashtra govt plans to convert forts into heritage hotels. ಆಗಸ್ಟ್ ೩ ೨೦೧೬ರಂದು ನೋಡಲಾಗಿದೆ.

ಲೇಖನ: ಆರತಿ ಖೇಲ್ಕರ್-ಖಂಬೇಟ್

ಕನ್ನಡ ಅನುವಾದ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

(ಮೂಲ ಆಂಗ್ಲ ಲೇಖನ ಓದಲು ಇಲ್ಲಿ ಕ್ಲಿಕ್ಕಿಸಿ: http://www.indiawaterportal.org/articles/forts-fortune-how-marathas-saved-water)
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*