ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಅಮ್ಮಂದಿರ ಮೂಲಕವೇ ಶೌಚಾಲಯ ಕಟ್ಟಿಸಿದ್ದು ಈ ಫೆಲೊ ಬೆಂಚ್‌ಮಾರ್ಕ್!

ಕೋಲಾರ/ ಮುಳಬಾಗಿಲು (ದೊಡ್ಡಮಾದೇನಹಳ್ಳಿ) ಮತ್ತು ಗದಗ (ಕಣವಿ): ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಫೆಲೊ ಅನ್ನಪೂರ್ಣಾ ಬೆಣಚಮರಡಿ ಅವರ ವಿಶೇಷತೆ ಎಂದರೆ, cistern 3ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಟರ್‌ನ್ಯಾಷನಲ್ ಡಿಪ್ಲೊಮಾ ಇನ್ ರಿಪ್ರೊಡಕ್ಟಿವ್ ಹೆಲ್ತ್ ಮ್ಯಾನೇಜ್‌ಮೆಂಟ್ ಓದಿದ್ದು. ಹಾಗಾಗಿ, ತಾಯಂದಿರ ಮೂಲಕವೇ ನೀರು-ನೈರ್ಮಲ್ಯದ ವಿಷಯ ಕುಟುಂಬಗಳಿಗೆ ಅರಹುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಗರ್ಭಿಣಿಯರು, ಮೊಲೆಯೂಡಿಸುವ ತಾಯಂದಿರು, ಅವಧಿಗೆ ಮುನ್ನ ಜನಿಸಿದ ಕಂದಮ್ಮಗಳ ಅಮ್ಮಂದಿರು, ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹೊತ್ತ ತಾಯಂದಿರಿಗೆ ಶೌಚ ಮತ್ತು ನೈರ್ಮಲ್ಯದ ಅವಶ್ಯಕತೆ ತಿಳಿ ಹೇಳಿ, ವೈಯಕ್ತಿಕ ಶೌಚಾಲಯ ಹೊಂದಲೇಬೇಕಾದ ಅನಿವಾರ್ಯತೆ ಮನವರಿಕೆ ಮಾಡಿದ್ದರಿಂದ, ಅವರು ಕೆಲಸ ಮಾಡಿದ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ದೊಡ್ಡಮಾದೇನಹಳ್ಳಿ ಹಾಗೂ ಗದಗ ಜಿಲ್ಲೆ ಹರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣವಿಯಲ್ಲಿ ಬಯಲು ಮಲ-ಮೂತ್ರ ವಿಸರ್ಜನೆಯಿಂದ ಉಂಟಾಗುತ್ತಿದ್ದ ಜಲಮೂಲಗಳ ‘ಜೈವಿಕ ಮಾಲಿನ್ಯ’ (ಬಯಾಲಾಜಿಕಲ್ ಕಂಟ್ಯಾಮಿನೇಷನ್) ಸಿದ್ಧಮಾಡಿ, ಮನೆಗೊಂದು ವೈಯಕ್ತಿಕ ಶೌಚಾಲಯ ಕಟ್ಟಿಸುವಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.

ಫೆಲೊ ಅನ್ನಪೂರ್ಣಾ ಬೆಣಚಮರಡಿ ಅವರು, ಫೆಲೊಷಿಪ್ ಸೇರುವ ಮುನ್ನ ಕೋಲಾರದಲ್ಲಿ ಮಹಿಳೆಯರ ಆರೋಗ್ಯ ಸಂಬಂಧಿ – ಮಹಿಳಾ ಸಮಖ್ಯಾ ಕರ್ನಾಟಕದಲ್ಲಿ ೪ ವರ್ಷ ಕೆಲಸ ಮಾಡಿದ ಕ್ಷೇತ್ರ ಅನುಭವ ಹೊಂದಿದವರು. ಬಳ್ಳಾರಿಯಲ್ಲಿ ಸೆಂಟರ್ ಫಾರ್ ವುಮೆನ್ಸ್ ಡೆವಲಪ್‌ಮೆಂಟ್ ಸ್ಟಡೀಸ್ ವತಿಯಿಂದ ಎರಡೂವರೆ ವರ್ಷ ಟೀಮ್ ಲೀಡ್ ಆಗಿ, ಸಂಶೋಧನಾ ಅಧ್ಯಯನ ಮಾಡಿದವರು. ಹಾಗಾಗಿ, ಹಳ್ಳಿಯ ಸಮಸ್ಯೆಗಳು ಅವರಿಗೆ ಹೊಸದಾಗಿ ಪರಿಚಯವಾದ ಸಂಗತಿಗಳೇನಲ್ಲ. ಆದರೆ, ವಸ್ತುಸ್ಥಿತಿ ಭಿನ್ನ.

ಅನ್ನಪೂರ್ಣಾ ಕೂಡ ಗ್ರಾಮೀಣ ಹಿನ್ನೆಲೆಯ ಕೃಷಿಕ ಕುಟುಂಬದಿಂದ ಬಂದವರು. ಧಾರವಾಡ ತಾಲೂಕು ಹೆಬ್ಬಳ್ಳಿ ಅವರು ಹುಟ್ಟಿದ ಊರು. ಅವರ ಅಣ್ಣ ಇಂದಿಗೂ ಕೃಷಿಯಲ್ಲಿಯೇ ತೊಡಗಿದ್ದಾರೆ. ಮೇಲಾಗಿ ಅವರದ್ದು ಕೂಡು ಕುಟುಂಬ.

ನಿರಾಸೆ ಕಾಯ್ದಿತ್ತು!

ಫೆಲೊಷಿಪ್‌ಗೆ ಆಯ್ಕೆಯಾಗಿ, ತಮ್ಮ ಈ ಮೊದಲಿನ ಕಾರ್ಯಕ್ಷೇತ್ರ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕು ದೊಡ್ಡಮಾದೇನಹಳ್ಳಿಗೆ ಅವರು ಗ್ರಾಮ ವಾಸ್ತವ್ಯಕ್ಕೆ ತೆರಳುತ್ತಾರೆ. ೧೩೦ ಮನೆಗಳಿರುವ ಪುಟ್ಟ ಗ್ರಾಮವದು. ತುಂಬ ಉತ್ಸಾಹ ಹಾಗೂ ಆತ್ಮವಿಶ್ವಾಸದಿಂದ ತೆರಳಿದ ಅವರಿಗೆ ಬಳ್ಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಮಾದೇನಹಳ್ಳಿಯಲ್ಲಿ ನಿರಾಸೆ ಕಾಯ್ದಿತ್ತು.Drainage cleaning 1

ಬಳ್ಳ ಗ್ರಾಮ ಪಂಚಾಯ್ತಿ ಭೀಕರವಾದ ಕೊಲೆಗಳಿಗೆ ಕುಖ್ಯಾತಿ ಹೊಂದಿ, ಅಧಿಕಾರಿಗಳೆಲ್ಲ ತಾಲೂಕು ಕೇಂದ್ರ ಮುಳಬಾಗಿಲಿನಿಂದಲೇ ಗ್ರಾಮ ಪಂಚಾಯ್ತಿ ಕೆಲಸ ಮಾಡುವಂತಾಗಿತ್ತು. ಇವರು ಹೋದ ಹೊಸತರಲ್ಲೇ ನೂತನವಾಗಿ ಚುನಾವಣೆಗಳು ನಡೆದು, ಆಯ್ಕೆಯಾದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರ ಕೊಲೆಯಾಗಿ, ವಾತಾವರಣ ಮತ್ತಷ್ಟು ವಿಷಮಗೊಂಡು, ಬೂದಿ ಮುಚ್ಚಿದ ಕೆಂಡದಂತಾಗಿತ್ತು! ಯಾರೇ ಬಳ್ಳ ಗ್ರಾಮ ಪಂಚಾಯ್ತಿಗೆ ಹೋದರೂ, ತಾಸು ಕೆಲಸ ನಿರ್ವಹಿಸಿ ಕೂಡಲೇ ಹೊರಟು ಬರುತ್ತಿದ್ದರು.

ಇಂತಹ ವಿಷಮ ಪರಿಸ್ಥಿತಿಯಲ್ಲಿ ಫೆಲೊ ಅನ್ನಪೂರ್ಣಾ, ಗ್ರಾಮದ ದ್ವೇಷ-ದಳ್ಳುರಿಯ ರಾಜಕಾರಣದ ಮಧ್ಯೆ ಅಭಿವೃದ್ಧಿ ರಾಜಕಾರಣ ಸಾಧಿಸಬೇಕಿತ್ತು!

ಫ್ಲೋರೈಡ್ ಸ್ಲೋರೈಡ್ ಮಾಡುತ್ತಿತ್ತು!

IHHL Kanaviಬಳ್ಳ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಟ್ಟು ೧೪ ಹಳ್ಳಿಗಳನ್ನು ಆಡಳಿತಾತ್ಮಕ ವ್ಯವಸ್ಥೆಯ ದೃಷ್ಟಿಯಿಂದ ಜೋಡಿಸಲಾಗಿತ್ತು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಘುಪತಿ ಅವರು ಫೆಲೊ ಅನ್ನಪೂರ್ಣಾ ಅವರಿಗೆ ಎಲ್ಲ ಸೂಕ್ಷ್ಮತೆಗಳನ್ನು ವಿವರಿಸುತ್ತಾರೆ. ಅನ್ನಪೂರ್ಣಾ ಆಯ್ದುಕೊಂಡ ದೊಡ್ಡಮಾದೇನಹಳ್ಳಿ ಸೇರಿದಂತೆ ಬಳ್ಳ ಗ್ರಾ.ಪಂ. ವ್ಯಾಪ್ತಿಯ ಎಲ್ಲ ೧೪ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಬರ ವಿಪರೀತ. ಮೇಲಾಗಿ, ಅಂತರ್ಜಲ ಸಾವಿರಾರು ಅಡಿ ಕುಸಿದು, ವಿಷವನ್ನೇ ಆಳದಿಂದ ಕೊಳವೆ ಬಾವಿ ಕಕ್ಕುವ ಪರಿಸ್ಥಿತಿ. ಇಡೀ ಹೋಬಳಿಯಲ್ಲಿ ಫ್ಲೋರೈಡ್‌ಯುಕ್ತ ನೀರು ಅವ್ಯಾಹತವಾಗಿ, ಅನಿವಾರ್ಯ ಬಳಕೆಯಾಗುತ್ತಿತ್ತು. ಮೇಲಾಗಿ, ಬಯಲು ಶೌಚದ ಸಮಸ್ಯೆ ಬೇರೆ! ಪರಿಣಾಮವಾಗಿ, ಲಭ್ಯವಿದ್ದ ನೀರಿನಲ್ಲೂ ‘ಬಯಾಲಾಜಿಕಲ್ ಕಂಟ್ಯಾಮಿನೇಷನ್’ ಒಪ್ಪಿತ ಮಾನದಂಡಗಳನ್ನು ಮೀರಿತ್ತು!

ಕೂಡಲೇ ಅನ್ನಪೂರ್ಣಾ, ಸ್ಕೋಪ್ ಸಹಾಯದಿಂದ ಬೆಂಗಳೂರಿನ ಆವಂತಿಕಾ ಪ್ರತಿಷ್ಟಾನದ ಸಹಭಾಗಿತ್ವದಲ್ಲಿ ಕುಡಿಯುವ ನೀರಿನ ‘ಪೊಟೆಬಿಲಿಟಿ’ ಪರೀಕ್ಷಿಸಲು ‘ವಾಟರ್ ಟೆಸ್ಟಿಂಗ್ ಕಿಟ್’ ತರಿಸಿ, ಮೊದಲು ದೊಡ್ಡಮಾದೇನಹಳ್ಳಿಯ ಎಲ್ಲ ಜಲಮೂಲಗಳನ್ನು ಪರೀಕ್ಷಿಸಿ, ದಾಖಲಿಸುತ್ತಾರೆ. ಫಲಿತಾಂಶ ಆಘಾತಕಾರಿ! ಒಂದೇ ಒಂದು ಜಲಮೂಲ ಕೂಡ ಬಳಸಲು ಯೋಗ್ಯವಾದ ನೀರು ಹೊಂದಿರಲಿಲ್ಲ.

೧೨ ಜನ ‘ವಾಟರ್ ಮ್ಯಾನ್’??????????

ಕೂಡಲೇ, ಬಳ್ಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೧೪ ಹಳ್ಳಿಗಳಿಂದ ಆಸಕ್ತ ೧೨ ಜನರನ್ನು ‘ವಾಟರ್ ಮ್ಯಾನ್’ಗಳೆಂದು ನೇಮಿಸಿ, ಗ್ರಾಮ ಪಂಚಾಯ್ತಿ ವತಿಯಿಂದ ಹಳ್ಳಿಗೊಂದರಂತೆ ೧೨ ನೀರು ಪರೀಕ್ಷೆಯ ಕಿಟ್‌ಗಳನ್ನು ಖರೀದಿಸಲು ಮನವೊಲಿಸುತ್ತಾರೆ. ಹಳ್ಳಿ-ಹಳ್ಳಿಯಲ್ಲಿ ಜಲಮೂಲಗಳ ಪರೀಕ್ಷೆ ಆರಂಭಿಸುತ್ತಾರೆ. ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ಗ್ರಾಮ ಪಂಚಾಯ್ತಿಗೆ ಸಲಹೆ ನೀಡಿ, ಲಭ್ಯವಿರುವ ನೀರನ್ನೇ ಕುಡಿಯಲು ಯೋಗ್ಯವಾಗುವ ಹಾಗೆ ಪರಿವರ್ತಿಸಿ ‘ನ್ಯೂಟ್ರಲೈಸ್’ ಮಾಡುವ ತಂತ್ರಜ್ಞಾನ ಪರಿಚಯಿಸುತ್ತಾರೆ. ಕುಡಿಯುವ ನೀರೇ ಫ್ಲೋರೈಡ್‌ನಿಂದ ವಿಷವಾಗಿರುವ ಮಾಹಿತಿ ಜನರ ಬಾಯಿಂದ ಬಾಯಿಗೆ ತಲುಪಿ, ಅನ್ನಪೂರ್ಣಾ ಮಾಡುತ್ತಿರುವ ಕೆಲಸದ ಬಗ್ಗೆ ವಿಶ್ವಾಸ ಮೂಡುತ್ತದೆ.

ಈ ಮಧ್ಯೆ, ಗ್ರಾಮದ ಶಾಲೆಯಲ್ಲಿ ಕುಡಿಯುವ ನೀರು ಸಂಗ್ರಹಿಸುವ ಯಾವ ವ್ಯವಸ್ಥೆಯೂ ಇರದಿರುವುದು ಗಮನಕ್ಕೆ ಬರುತ್ತದೆ. ಸರ್ಕಾರಿ ಉಚ್ಚ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ, ಕುಡಿಯಲು, ಶೌಚಕ್ಕೆ, ಕೈತೊಳೆಯಲು ಮತ್ತು ಮಧ್ಯಾಹ್ನದ ಬಿಸಿಯೂಟ ತಯಾರಿಸಿಕೊಳ್ಳಲೂ ಸಹ ಸಮಸ್ಯೆ ಇರುವುದು ಬೆಳಕಿಗೆ ಬರುತ್ತದೆ. ಭಾನುವಾರ ಶಾಲೆಗೆ ರಜೆ ಹಾಗಾಗಿ, ಹಿಂದಿನ ದಿನ ನೀರು ತುಂಬಿಟ್ಟುಕೊಳ್ಳದೇ ಇರುವುದರಿಂದ ಸೋಮವಾರ ಮಧ್ಯಾಹ್ನದ ಬಿಸಿಯೂಟಕ್ಕೆ ಒಮ್ಮೊಮ್ಮೆ ರಜೆ ನೀಡಬೇಕಾದ ಅನಿವಾರ್ಯ ಸ್ಥಿತಿ. ಗ್ರಾಮ ಪಂಚಾಯ್ತಿ ಮತ್ತು ಸಮುದಾಯ ಮನವೊಲಿಸಿ, ಶಾಲೆಗಾಗಿ ಪಕ್ಕದ ಮನೆಗಳಲ್ಲಿಯೇ ಭಾನುವಾರ ಹೆಚ್ಚುವರಿ ನೀರು ತುಂಬಿಸಿಟ್ಟು ನೀಡುವಂತೆ ಮನವೊಲಿಸುತ್ತಾರೆ.

ಜೊತೆಗೆ, ಶಾಲೆಯ ಮಳೆ ನೀರು ಕೊಯ್ಲಿನ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯಗೊಂಡಿದ್ದನ್ನು ಪುನರ್ ರೂಪಿಸುವಂತೆ ಗ್ರಾಮ ಪಂಚಾಯ್ತಿಗೆ ಮನವರಿಕೆ ಮಾಡುವಲ್ಲಿಯೂ ಯಶಸ್ವಿಯಾಗುತ್ತಾರೆ. ಶಾಲೆಯ ಶೌಚಾಲಯ, ಕೈ ತೊಳೆಯುವ ತೊಟ್ಟಿಗಳನ್ನು ಸುಸ್ಥಿತಿಗೆ ತರುವಲ್ಲಿಯೂ ಅವರು ಯಶಸ್ವಿಯಾಗುತ್ತಾರೆ.

ಹೀಗೆ ೪ ತಿಂಗಳು ಕಳೆಯುವ ವೇಳೆಗೆ, ಅನ್ನಪೂರ್ಣಾ ಅವರ ಆರೋಗ್ಯ ಹದಗೆಟ್ಟು, ಸ್ಕೋಪ್ ಪರವಾನಿಗೆ ಪಡೆದು ಗದಗ ಜಿಲ್ಲೆಯ ಹರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಣವಿಗೆ ಫೆಲೊಷಿಪ್‌ನ ಮುಂದುವರೆದ ಭಾಗವನ್ನು ಇಲ್ಲಿ ಪೂರೈಸಲು ಮನಸ್ಸು ಮಾಡುತ್ತಾರೆ. ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್, ಪರಿಸ್ಥಿತಿ ಅವಲೋಕಿಸಿ ಈ ಬದಲಾವಣೆ ಅನುಮೋದಿಸುತ್ತಾರೆ.

ಹೀಗೆ, ಕೋಲಾರ ಜಿಲ್ಲೆಯಿಂದ ಗದಗ ಜಿಲ್ಲೆಗೆ ಮುಂದಿನ ೬ ತಿಂಗಳ ಫೆಲೊಷಿಪ್ ಕಾರ್ಯ ನಿರ್ವಹಿಸಲು ಆರೋಗ್ಯ ಚೇತರಿಸಿಕೊಳ್ಳುತ್ತಲೇ ಅನ್ನಪೂರ್ಣಾ ಕಣವಿಗೆ ಬಂದಿಳಿಯುತ್ತಾರೆ. ಕೂಡಲೇ ಅವರ ಗಮನ ಹರಿಯುವುದು, ಗಲೀಜಾದ ರಸ್ತೆ, ಕೊಚ್ಚೆತುಂಬಿ ನಿಂತು ಅನಾರೋಗ್ಯ ಹರಡುತ್ತಿರುವ ಇಕ್ಕೆಲದಲ್ಲಿ ಗಟಾರುಗಳು, ಅಲ್ಲಲ್ಲಿ ರಸ್ತೆ ತಿರುವುಗಳಲ್ಲಿ ಕಸದ ಕೊಂಪೆ, ಒಟ್ಟಾರೆ ಕಸದ ಸಮರ್ಪಕ ವಿಲೇವಾರಿ ಮತ್ತು ನಿರ್ವಹಣೆಯ ಕೊರತೆಯಿಂದ ಕಣವಿ ಬಳಲುತ್ತಿರುವ ಸಮಸ್ಯೆಯತ್ತ.

ಕಣವಿ ಯುವಜನತೆಯ ಯೂತ್ ಗ್ರೂಪ್

Shramadan 2ಹರ್ತಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುನೀಲ ಅಂಗಡಿ ಅವರ ಸಹಯೋಗದಲ್ಲಿ, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ನೂತನವಾಗಿ ನೇಮಕಗೊಂಡಿದ್ದ ಗ್ರಾಮ ನೀರು ನೈರ್ಮಲ್ಯ ಸಮಿತಿ ವತಿಯಿಂದ ರಸ್ತೆ, ಗಟಾರು ಮತ್ತು ಕಸದ ತಿಪ್ಪೆಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲು ಸನ್ನದ್ಧರಾಗುತ್ತಾರೆ. ಗ್ರಾಮದ ಯುವಜನತೆಯ ಯೂತ್ ಗ್ರೂಪ್ ಅನ್ನಪೂರ್ಣಾ ಅವರಿಗೆ ಬೆನ್ನಲುಬಾಗಿ ನಿಂತು ಕೇವಲ ೧ ತಿಂಗಳ ಅವಧಿಯಲ್ಲಿ ಗ್ರಾಮದ ರಸ್ತೆ, ಗಟಾರು ಮತ್ತು ತ್ಯಾಜ್ಯ ತಿಪ್ಪೆ ಗುಂಡಿಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಕಣವಿಯ ಚಿತ್ರಣವನ್ನೇ ಬದಲಾಯಿಸುತ್ತಾರೆ.

ಕಂಡಕಂಡಲ್ಲಿ, ಬೇಕಾಬಿಟ್ಟಿಯಾಗಿ ಕಸ ಚೆಲ್ಲದಂತೆ, ಉಗುಳದಂತೆ, ಪ್ಲಾಸ್ಟಿಕ್ ಕೈಚೀಲ ಬಳಕೆ ಸಂಪೂರ್ಣ ನಿಷೇಧಿಸಿ, ಗ್ರಾಮದ ಪಾನ್-ಬೀಡಾ, ಕಿರಾಣಿ ಮತ್ತು ಹೊಟೇಲ್ ಮುಂದೆ ಸ್ಕೋಪ್ ಸಹಯೋಗದಲ್ಲಿ ಕಸದ ತೊಟ್ಟಿಗಳನ್ನು ಮಾಲೀಕರಿಂದಲೇ ಇಡಿಸಿ, ಸಂಗ್ರಹಿತ ಕಸವನ್ನು ವಿಂಗಡಿಸಿ ಘನ ತ್ಯಾಜ್ಯದ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮತ್ತು ಕೊಳೆಯಬಹುದಾದ ಹಸಿ ಕಸಕ್ಕೆ ಒಂದು ನಿಗದಿತ ಗುಂಡಿ ಊರ ಹೊರಗೆ ವ್ಯವಸ್ಥೆ ಗೊಳಿಸುತ್ತಾರೆ. ಗ್ರಾಮ ಪಂಚಾಯ್ತಿ ಇಡೀ ವರ್ಷ ಗ್ರಾಮದ ಕಸ ಸಂಗ್ರಹಿಸಿ, ಒಂದೆಡೆ ಎರೆಹುಳು ಗೊಬ್ಬರ ಘಟಕ ರೂಪಿಸಿ, ಫಲವತ್ತಾದ ಎರೆಹುಳು ಗೊಬ್ಬರ ಗ್ರಾಮ ಪಂಚಾಯ್ತಿಯೇ ಹೊಲಗಳಿಗೆ ಪೂರೈಸಬಹುದು ಎಂಬ ದೂರಗಾಮಿ ಯೋಜನೆ ಸಿದ್ಧಗೊಳ್ಳುತ್ತದೆ. ಹತ್ತಾರು ಸಮಾಲೋಚನೆಗಳ ಬಳಿಕ, ಇದು ಗ್ರಾಮ ಪಂಚಾಯ್ತಿಗೆ ಆದಾಯವನ್ನೂ ತಂದುಕೊಡಬಲ್ಲುದು ಎಂದು ನಿಷ್ಕರ್ಷೆಗೆ ಬರಲಾಗುತ್ತದೆ.

ಹಳೆ ಬಾವಿಗೆ ಹೊಸ ರೂಪ!

ಈ ಕೆಲಸದ ಮಧ್ಯೆಯೇ, ಅನ್ನಪೂರ್ಣಾ ತಾವು ದೈನಂದಿನ ಕೆಲಸಕ್ಕೆ ಅಡ್ಡಾಡುವ ಓಣಿಯ ಪಕ್ಕದಲ್ಲೇ ದೊಡ್ಡದಾದ ತೆರೆದ ಬಾವಿಯೊಂದು ಕಸ ತುಂಬುವ ತೊಟ್ಟಿಯಾಗಿ ನಿಂತಿರುವುದನ್ನು ನೋಡುತ್ತಾರೆ. ಕಣವಿಯ ಹಿರಿಯ ಗ್ರಾಮಸ್ಥರೊಂದಿಗೆ ಸಮಾಲೋಚಿಸಿದಾಗ, ವಿಶೇಷ ಸಂಗತಿ ಗೊತ್ತಾಗುತ್ತದೆ. ‘ಹಳೆ ಬಾವಿ’ ಎಂದೇ ಕರೆಸಿಕೊಳ್ಳುವ ಈ ಬಾವಿ, ಸಿಹಿ ನೀರಿನದ್ದಾಗಿದ್ದು ಇಡೀ ಗ್ರಾಮಕ್ಕೆ ದಾಹ ತೀರಿಸುತ್ತಿತ್ತು. ಇದೊಂದೇ ಕುಡಿಯುವ ನೀರಿನ ಮೂಲವೂ ಆಗಿತ್ತು ಸುಮಾರು ೨೦ ವರ್ಷಗಳ ಹಿಂದೆ!

SHG meeting 1ಆಗಿನ್ನೂ ಮನೆ ಮನೆಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಸಂಪರ್ಕ ಜೋಡಣೆಯಾಗಿರಲಿಲ್ಲ. ಕ್ರಮೇಣ ಮನೆ ಬಾಗಿಲಿಗೇ ನೀರು ಲಭ್ಯವಾದ ಮೇಲೆ ತೆರೆದ ಬಾವಿಯ ನೀರಿನ ಜನ ಬಳಕೆ ‘ಇಲ್ಲವೇ ಇಲ್ಲ’ ಎಂಬುವಂತಾಯಿತು. ಬಳಕೆಯಾಗದ ಬಾವಿಯ ನೀರು ಕಪ್ಪಿಟ್ಟಿತು. ಜನ ನೀರು ಕೆಟ್ಟು ಹೋಯಿತು ಎಂದು ಪರಿ ಭಾವಿಸಿ ಕಸದ ಕೊಂಪೆಯಾಗಿಸಿದ ಕರುಣಾಜನಕ ಕಥೆ ಹಿರಿಯರು ಅನಾವರಣಗೊಳಿಸಿದ್ದರು!

ಅನ್ನಪೂರ್ಣಾ, ಈ ತೆರೆದ ಹಳೆ ಬಾವಿಯನ್ನು ‘ಹೊಸ ಬಾವಿ’ಯಾಗಿಸಲು ಪಣತೊಟ್ಟು, ಪ್ರಸ್ತಾವನೆಯೊಂದನ್ನು ಸ್ಕೋಪ್ ಕಚೇರಿಗೆ ರವಾನಿಸುತ್ತಾರೆ. ಬಾವಿಗಳ ಬಗ್ಗೆ ತುಂಬ ಆಸಕ್ತಿ ಇರುವ ಡಾ. ಪ್ರಕಾಶ ಭಟ್, ಕೂಡಲೇ ಬಾವಿಯ ಪುನರುಜ್ಜೀವನ ಕೆಲಸಕ್ಕೆ ಹಸಿರು ನಿಶಾನೆ ತೋರುತ್ತಾರೆ.

ಸಮುದಾಯದ ಸಹಭಾಗಿತ್ವ, ಗ್ರಾಮ ಪಂಚಾಯ್ತಿ ಸದಸ್ಯರ ಸಹಯೋಗದಲ್ಲಿ, ಸ್ಕೋಪ್ ನೀಡಿದ ೧೬ ಸಾವಿರ ರೂಪಾಯಿಗಳ ಧನ ಸಹಾಯದಲ್ಲಿ, ಸತತ ೧೫ ದಿನಗಳ ಕಾಮಗಾರಿ ಬಳಿಕ ಹಳೆಯ ಬಾವಿ ತನ್ನ ಉದರದಲ್ಲಿ ತುಂಬಿಕೊಂಡಿದ್ದ ಹೊಲಸು ಉಗುಳಿ, ಸೆಲೆಯನ್ನು ಶುದ್ಧೀಕರಿಸಿಕೊಂಡು ಮತ್ತೆ ಗತ ಇತಿಹಾಸ ಮರುಕಳಿಸುವಂತಾಯಿತು. ಕೂಡಲೇ, ಇಡೀ ಬಾವಿಗೆ ಕಬ್ಬಿಣದ ರಕ್ಷಣಾ ಗೋಡೆ ರೂಪಿಸಲಾಯಿತು. ಅವಶ್ಯಕತೆ ಇದ್ದಾಗ, ಕೀಲಿ ತೆರೆದು ಕೇವಲ ಬಿಂದಿಗೆಯೊಂದರಿಂದ ನೀರು ಎತ್ತಿಕೊಳ್ಳುವಷ್ಟು ವ್ಯವಸ್ಥೆ ಮಾಡಲಾಯಿತು. ತಡೆಗೋಡೆ ಸಹ ಸುಣ್ಣ-ಬಣ್ಣ ಬಳಿದುಕೊಂಡು ಇದು ಜೀವದಾಯಿ, ಕಸದ ಕೊಂಪೆಯಲ್ಲ ಎಂದು ಸಾರುವ ‘ಮೇಕ್ ಅಪ್’ ಗ್ರಾಮಸ್ಥರ ಗಮನ ಸೆಳೆಯಿತು. ಇತಿಹಾಸದ ಪುಟ ಸೇರಲು ತವಕದಲ್ಲಿದ್ದ ಬಾವಿಯೊಂದನ್ನು ಈಗ ಗ್ರಾಮಸ್ಥರೇ ಕಾಪಾಡುವ ಮಟ್ಟಿಗೆ ಅರಿವು ಮೂಡಿಸಿದ್ದು ಅನ್ನಪೂರ್ಣಾ ಅವರ ಹೆಗ್ಗಳಿಕೆ.

ಗ್ರಾಮದ ಹಿರೀಕರು, ಈ ಬಾವಿಯಿಂದಲೇ ಸುತ್ತಲಿನ ಮನೆಗಳಿಗೆ ಕುಡಿಯುವ ನೀರಿನ ಪೈಪ್‌ಲೈನ್ ಹಾಕಿಸಿ, ನೀರು ಪೂರೈಸುವಂತೆ ದುಂಬಾಲು ಸಹ ಬಿದ್ದಿದ್ದರು! ಅಂದರೆ ಮಾತ್ರ ಬಾವಿ ಉಳಿಯೋದು ಅಂತ ನಂತರ ತಮ್ಮ ವಾದ ಸಹ ಮಂಡಿಸಿದ್ದರು!

ದನಕರುಗಳ ಮೈತೊಳೆಯುವ ಗುಂಡಿ!

ಕಣವಿಯಲ್ಲಿ ಬೋರ್‌ವೆಲ್ ಒಂದಕ್ಕೆ ಸಿಸ್ಟರ್ನ್ ಜೋಡಿಸಿ, ವಿದ್ಯುತ್ ಮೀಟರ್ ಅಳವಡಿಸಿ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಅವ್ಯವಸ್ಥೆಗೆ ಜಾರಿದ್ದು, ಅನ್ನಪೂರ್ಣಾ ಅವರ ಗಮನಕ್ಕೆ ಬಂತು. ಸ್ಥಳಕ್ಕೆ ಹೋಗಿ ನೋಡಿದಾಗ, ಬೋರ್‌ವೆಲ್‌ನಿಂದ ಸಿಸ್ಟರ್ನ್‌ಗೆ ಜೋಡಿಸಲಾದ ಪೈಪ್‌ಲೈನ್ ಒಡೆದು ನೀರು ಪೋಲಾಗಿ ಗುಂಡಿಯೇ ನಿರ್ಮಾಣಗೊಂಡಿತ್ತು! ಇಷ್ಟು ಸಾಲದು ಎಂಬಂತೆ ಜನ ಈ ಗುಂಡಿಯಲ್ಲಿ ಸಂಗ್ರಹವಾಗುವ ನೀರನ್ನೇ ದನಕರುಗಳಿಗೆ ಕುಡಿಸಲು ಮತ್ತು ಸ್ನಾನ ಮಾಡಿಸಲು ಬಳಸುತ್ತಿರುವ, ಹಾಗೋ ಹೀಗೋ ಅದೇ ನೀರು ತುಂಬಿ ಹರಿದು ಮತ್ತೆ ಪೈಪ್‌ಲೈನ್ ಮೂಲಕ ಟ್ಯಾಂಕಿಗೆ ಸೇರುತ್ತಿರುವ, ವಿದ್ಯುತ್ ಮೀಟರ್ ಅಳವಡಿಸಿದ ಪೆಟ್ಟಿಗೆ ಯಾರಿಗಾದರೂ ಪ್ರಾಣಾಪಾಯ ತಂದೊಡ್ಡಬಲ್ಲ ವಿಚಿತ್ರವಾದರೂ ಸತ್ಯ ಸಂಗತಿ ಬೆಳಕಿಗೆ ಬಂತು.

ಫೆಲೊ ಅನ್ನಪೂರ್ಣಾ, ಕೂಡಲೇ ಗ್ರಾಮ ಪಂಚಾಯ್ತಿ ಸದಸ್ಯರಾದ ಕಣವಿಯ ಸೋಮಣ್ಣ ಕೋರಿ ಅವರ ಗಮನಕ್ಕೆ ಈ ವಿಷಯ ತಂದರು. ಸ್ಕೋಪ್‌ಗೆ ಪ್ರಸ್ತಾವನೆ ಸಲ್ಲಿಸಿ, ಕಾಮಗಾರಿಗೆ ಧನ ಸಹಾಯ ನೀಡುವಂತೆ ಕೋರಿದರು. ಸಾಂಘಿಕ ಪ್ರಯತ್ನದಿಂದಾಗಿ, ಪೈಪ್‌ಲೈನ್ ದುರಸ್ತಿಗೊಂಡು, ಪಂಚಾಯ್ತಿ ವತಿಯಿಂದ ಸಿಸ್ಟರ್ನ್ ಸ್ವಚ್ಛವಾಗಿ, ಮೀಟರ್‌ಗೊಂದು ಗಟ್ಟಿಮುಟ್ಟಾದ ಬಾಕ್ಸ್ ಬಂತು. ಒಟ್ಟು ಹತ್ತೂವರೆ ಸಾವಿರ ರೂಪಾಯಿ ಸ್ಕೋಪ್ ಈ ಕಾಮಗಾರಿಗೆ ಖರ್ಚಿಸಿದ ಮೇಲೆ ನೀರು ಪೂರೈಕೆ ಹಳಿಗೆ ಬಂತು.

ಗ್ರಾಮ ರಾಜಕಾರಣದ ರಂಗು!

ಈ ಮಧ್ಯೆ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರ ಗ್ರಾಮ ರಾಜಕಾರಣ ರಂಗೂ ಏರಿತ್ತು! ಫೆಲೊ ಅನ್ನಪೂರ್ಣಾ ಅವರಿಗೆ ಇದು ನುಂಗಲಾಗದ ತುತ್ತಾಗಿ ಪರಿಣಮಿಸಿತ್ತು. ಮೂರು ಜನ ಕಾಂಗ್ರೆಸ್ ಪಕ್ಷದ ಪಂಚಾಯ್ತಿ ಸದಸ್ಯರಿದ್ದರೆ, ಐದು ಜನ ಬಿಜೆಪಿ ಪಂಚಾಯ್ತಿ ಸದಸ್ಯರಿದ್ದರು. ‘ಕೇವಲ ಅಭಿವೃದ್ಧಿ ರಾಜಕಾರಣ ಮಾಡಿ; ಮಿಕ್ಕಿದ್ದು ನಿಮ್ಮ ಪಕ್ಷದ ಕಾರ್ಯಕ್ರಮಗಳಿಗೆ ಮೀಸಲಿಡಿ’ ಎಂದು ಅನ್ನಪೂರ್ಣಾ ಒತ್ತಿ ಹೇಳಿದರೂ, ಸ್ಥಳೀಯ ಜನಪ್ರತಿನಿಧಿಗಳಿಗೆ ಇದು ಅರ್ಥವಾಗುವ ಪರಿಸ್ಥಿತಿ ಗ್ರಾಮದಲ್ಲಿರಲಿಲ್ಲ.

ಸಕಾಲಿಕವಾಗಿ ಮಧ್ಯ ಪ್ರವೇಶಿಸಿದ ಮಾಜಿ ಶಾಸಕರಾದ ಡಿ.ಆರ್. ಪಾಟೀಲರು, “ಫೆಲೊ ಅನ್ನಪೂರ್ಣಾ ಅವರು ಕಣವಿ ಗ್ರಾಮ ಉದ್ಧಾರ ಮಾಡಲಿಕ್ಕೆ, ಅಭಿವೃದ್ಧಿ ಪರ ಕೆಲಸಗಳ ಯೋಜನಾನುಷ್ಠಾನ ಮಾಡಲಿಕ್ಕೆ ಬಂದವರೇ ಹೊರತು, ಅವರು ಕಾಂಗ್ರೆಸ್, ಬಿಜೆಪಿ ಪಕ್ಷದವರಲ್ಲ.. ಅವರ ಕೈ ಬಲಪಡಿಸ್ರಿ.. ಜೊತೆಗೂಡಿ ಕೆಲಸ ಮಾಡ್ರಿ.. ಇಲೆಕ್ಷನ್ ಹೊತ್ತಿಗೆ ಮಾತ್ರ ಪಕ್ಷ ಮತ್ತು ರಾಜಕಾರಣ. ಬಾಕಿ ಸಮಯದೊಳಗ ಕಣವಿ ಅಭಿವೃದ್ಧಿ ಒಂದೇ ನಮ್ಮೆಲ್ಲರ ಪಕ್ಷ..” ಅಂತ ಸ್ಪಷ್ಟವಾಗಿ ಸಂದೇಶ ರವಾನಿಸಿದ ಬಳಿಕ, ಗ್ರಾಮ ಪಂಚಾಯ್ತಿ ಕಾರ್ಯವೈಖರಿ ತುಸು ಸಹ್ಯವಾಯಿತು.

‘ಎಕ್ಸಪೋಜರ್ ವಿಸಿಟ್’

ಈ ಮಧ್ಯೆ, ಗ್ರಾಮ ಪಂಚಾಯ್ತಿ ಸದಸ್ಯರು, ನೀರು ನೈರ್ಮಲ್ಯ ಸಮಿತಿ ಸದಸ್ಯರನ್ನು ಸ್ಕೋಪ್ ವತಿಯಿಂದ ಅಥಣಿ ತಾಲೂಕು, ಶಿರಗುಪ್ಪಿ ಗ್ರಾಮ ಪಂಚಾಯ್ತಿಗೆ ‘ಎಕ್ಸಪೋಜರ್ ವಿಸಿಟ್’ಗೆಂದು, ಕ್ಷೇತ್ರ ಭೇಟಿಗೆ ಕರೆದೊಯ್ಯಲಾಯಿತು. ಜನ ಬೇಡಿಕೆಗೆ ಅನುಗುಣವಾಗಿ, ಸಮುದಾಯದ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ಶಿರಗುಪ್ಪಿ ಜನಪ್ರತಿನಿಧಿಗಳ ಮಾತು ಕೇಳಿ, ಕೆಲಸ ನೋಡಿ ಮನಃ ಪರಿವರ್ತನೆಯಾಯಿತು.

ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರೂ ಆದ, ಸಜ್ಜನ ರಾಜಕಾರಣಿ ಎಚ್.ಕೆ. ಪಾಟೀಲ ಅವರ ಸ್ವಕ್ಷೇತ್ರ, ಮತ್ತು ಮಾಜಿ ಶಾಸಕ ಡಿ.ಆರ್. ಪಾಟೀಲ ಅವರ ಕನಸಿನ ಕೂಸು ಕಣವಿಯನ್ನು ಗ್ರಾಮ ನೈರ್ಮಲ್ಯ ಪುರಸ್ಕಾರಕ್ಕೆ ಭಾಜನವಾಗುವ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪ ಅಲ್ಲಿ ನೆರವೇರಿತು. ಪೂರೈಕೆ ಆಧಾರಿತ ಯೋಜನಾನುಷ್ಠಾನಕ್ಕಿಂತ ಬೇಡಿಕೆ ಆಧರಿಸಿ ಯೋಜನಾನುಷ್ಠಾನ ಹೆಚ್ಚು ಫಲಾನುಭವಿಗಳನ್ನು ತಲುಪಿ, ಸಾರ್ಥಕ್ಯ ಪಡೆಯುತ್ತದೆ ಎಂಬ ಸರಳ ಸತ್ಯ ಇಲ್ಲಿ ದರುಶನ ನೀಡಿತ್ತು!

ಬಯಲು ಶೌಚದ ಸಮಸ್ಯೆ

??????????ಕಣವಿಯಲ್ಲಿನ ಬಯಲು ಶೌಚದ ಸಮಸ್ಯೆಯನ್ನು ಸಕಾಲಿಕವಾಗಿ ಅನ್ನಪೂರ್ಣಾ ಜನರ ಮುಂದಿಟ್ಟಿರು. ೬೬೯ ಮನೆಗಳ ಪೈಕಿ ಕೇವಲ ೧೪೨ ಮನೆಗಳಲ್ಲಿ ಮಾತ್ರ ವೈಯಕ್ತಿಕ ಶೌಚಾಲಯಗಳಿದ್ದು, ಬಳಕೆ ಆ ಪೈಕಿ ಶೇ. ೫೦ಕ್ಕಿಂತ ಕಡಿಮೆ ಎಂಬ ವಿಷಯ ಬೆಳಕಿಗೆ ತಂದರು. ಇದರಿಂದಾಗಿ, ಜಲ ಮೂಲಗಳಲ್ಲಿ ಮಲ-ಮೂತ್ರ ಸೇರಿ ‘ಬಯಾಲಾಜಿಕಲ್ ಕಂಟ್ಯಾಮಿನೇಷನ್’ ಹೆಚ್ಚುತ್ತಿರುವ ಬಗ್ಗೆ, ನೀರನ್ನು ಪರೀಕ್ಷಿಸಿ ಸಾಕ್ಷಿ ಒದಗಿಸಿದರು. ಕೇವಲ ಶೇ.೨೨ ರಷ್ಟು ವಯಕ್ತಿಕ ಶೌಚಾಲಯಗಳು ಮಾತ್ರ ಬಳಕೆಯಲ್ಲಿವೆ ಎಂಬ ಸತ್ಯವನ್ನು ಬೆಳಕಿಗೆ ತಂದರು.

ಮಾಹಿತಿ ಗೊತ್ತಾಗುತ್ತಿದ್ದಂತೆ, ೬ನೇ ಬಾರಿಗೆ ಗ್ರಾಮ ಪಂಚಾಯ್ತಿ ಸದಸ್ಯ ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿರುವ ಪರಪ್ಪ ಬನ್ನಕ್ಕನವರ, ಸ್ವತಃ ಮುತುವರ್ಜಿ ವಹಿಸಿ, ಗ್ರಾಮ ಪಂಚಾಯ್ತಿಯಿಂದ ಫಲಾನುಭವಿಗೆ ಅನುದಾನ ಬರುವ ಮೊದಲೇ ೭೦ ಮನೆಗಳಿಗೆ ‘ರೆಡಿಮೇಡ್ ಶೌಚಾಲಯ’ಗಳನ್ನು ತಂದು ಜೋಡಿಸಿದರು. ಬಳಕೆಗೂ ಒತ್ತು ನೀಡಿದರು. ಈ ಬೆಳವಣಿಗೆಗಳ ಮಧ್ಯೆ, ಕೇವಲ ಮೂರು ತಿಂಗಳಲ್ಲಿ ಫೆಲೊ ಅನ್ನಪೂರ್ಣಾ ಗ್ರಾಮದ ಅಮ್ಮಂದಿರ ಮನವೊಲಿಸಿ, ಇದು ನಿಮ್ಮ ಗೌರವದ ಪ್ರತೀಕ ಎಂದು ಮನವರಿಕೆ ಮಾಡಿಸಿ, ೫೦ ಮನೆಗಳಿಗೆ ವೈಯಕ್ತಿಕ ಶೌಚಾಲಯ ಕಟ್ಟಿಕೊಂಡು-ಬಳಸುವಂತೆ ಪ್ರೇರೇಪಿಸುವಲ್ಲಿ ಯಶಸ್ವಿಯಾದರು!

ದೊಡ್ಡ ಕೆರೆ ‘ಇತ್ತು’!

ಕ್ರಮೇಣ ಬಯಲು ಶೌಚದ ಪ್ರಮಾಣ ಕುಸಿಯುತ್ತಿದ್ದಂತೆ, ಫೆಲೊ ಅನ್ನಪೂರ್ಣಾ ಗಮನ ಹರಿಸಿದ್ದು ಕಣವಿ ಗ್ರಾಮದ ಬಸ್‌ಸ್ಟ್ಯಾಂಡ್ ಬಳಿಯ ದೊಡ್ಡ ಕೆರೆಯತ್ತ. ಹೇಗಿದ್ದರೂ ವರ್ಷಗಳ ಕಾಲ ಬರಿದಾಗಿ, ಒಣಗಿ ನಿಂತ ಕೆರೆಯ ಹೂಳೆತ್ತಿಸಿ, ಸ್ವಚ್ಛಗೊಳಿಸುವಂತೆ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಿದರು. ಊರಿನ ಹಿರಿಯರೊಂದಿಗೆ ಸಮಾಲೋಚಿಸಿ, ಕೆರೆಯ ಫಲವತ್ತಾದ ಮಣ್ಣನ್ನು ಕೆರೆಗೆ ಹೊತ್ತು ಒಯ್ಯುವಂತೆ ಪ್ರೇರೇಪಿಸಿದರು. ಕೆರೆಯ ಸುತ್ತಲೂ ಮಲಮೂತ್ರ ವಿಸರ್ಜಿಸದಂತೆ, ಕಸ ಹಾಕದಂತೆ ರಕ್ಷಣಾ ಬೇಲಿ, ಮತ್ತು ಕಾವಲು ಒದಗಿಸುವಂತೆ ಗ್ರಾ.ಪಂ. ಸದಸ್ಯರ ಬಳಿ ಮನವಿ ನೀಡಿದರು. ಪರಿಣಾಮ ಎಂಬಂತೆ, ಊರವರೇ ಶ್ರಮದಾನದ ಮೂಲಕ ತಮ್ಮ ಟ್ರ್ಯಾಕ್ಟರ್‌ಗಳನ್ನು ಬಳಸಿ ಕೆರೆಯ ಹೂಳೆತ್ತಿ ಹೊಲಕ್ಕೆ ಸಾಗಿಸಿದ್ದು, ಕೆರೆಯ ಪಾತಳಿ ಈಗ ಸಾಕಷ್ಟು ಹರವಾಗಿದ್ದು, ಮಳೆಗಾಗಿ ಕಾಯ್ದಿದೆ!

ಹೀಗೆ, ಸ್ಕೋಪ್ ಕಣವಿ ಗ್ರಾಮದ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಖರ್ಚಿಸಿದ ಅಂದಾಜು ಮೊತ್ತ ೪೨ ಸಾವಿರ ರೂಪಾಯಿ ಮಿಕ್ಕುತ್ತದೆ.

ಈ ಎಲ್ಲ ಕೆಲಸಗಳಲ್ಲಿ ಗ್ರಾಮದ ಯೂತ್ ಗ್ರೂಪ್ ಸಹಕಾರ ತುಂಬ ಸಹಾಯ ಮಾಡಿತು ಎಂದು ಕೃತಜ್ಞರಾಗಿ ಹೇಳುತ್ತಾರೆ ಫೆಲೊ ಅನ್ನಪೂರ್ಣಾ. ಹರ್ತಿ ಗ್ರಾಮ ಪಂಚಾಯ್ತಿಗೆ ಹೋಗಿ ಬರಲು, ತಾಲೂಕು ಪಂಚಾಯ್ತಿ ಕಚೇರಿಗೆ ಹೋಗಿ-ಬರಲು, ಸಂಜೆಯ ವೇಳೆ ಗ್ರಾಮ ಸಮೀಕ್ಷೆಗೆ ತೆರಳಿದಾಗ ಗ್ರಾಮದ ಒಬ್ಬರಿಲ್ಲದಿದ್ದರೆ ಮತ್ತೊಬ್ಬರು ಗಾಡಿ ತಂದು ಸುರಕ್ಷಿತವಾಗಿ ಕರೆದೊಯ್ದು ಮತ್ತೆ ಮರಳಿ ಮನೆಗೆ ಬಿಡುತ್ತಿದ್ದ ಕರ್ತವ್ಯ ಸದೃಶ ನಡವಳಿಕೆ, ‘ಕಣವಿ ನನ್ನ ತವರು ಮನೆಯೇ’ ಎಂಬುದರಲ್ಲಿ ಅತಿಶಯೋಕ್ತಿ ಏನಿಲ್ಲ ಎನ್ನುತ್ತಾರೆ ಅನ್ನಪೂರ್ಣಾ.

ಅಣ್ಣಾಮಲೈ ವಿವಿ, ಚೆನ್ನೈ ನಿಂದ ಸಮಾಜ ಕಾರ್ಯ ವಿಷಯದಲ್ಲಿ ಅಂಚೆ ತೆರಪಿನ ಸ್ನಾತಕೋತ್ತರ ಪದವಿ, ಧಾರವಾಡದ ಅಡೆಪ್ಟ್ ಫೌಂಡೇಷನ್ ವತಿಯಿಂದ ಪೋಸ್ಟ್ ಗ್ರ್ಯಾಜ್ಯುಯೆಟ್ ಡಿಪ್ಲೊಮಾ ಇನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಟರನ್ಯಾಶನಲ್ ಡಿಪ್ಲೊಮಾ ಇನ್ ರಿಪ್ರೊಡಕ್ಟಿವ್ ಹೆಲ್ತ್ ಮ್ಯಾನೇಜ್‌ಮೆಂಟ್ ಗಳಿಸಿರುವ ಫೆಲೊ ಅನ್ನಪೂರ್ಣಾ, ಸುಮಾರು ೬ ವರ್ಷಗಳ ಕ್ಷೇತ್ರ ಅನುಭವವಿರುವ ಸಮುದಾಯ ತಜ್ಞೆ.

ಸದ್ಯ, ಬೆಳಗಾವಿಯ ನವ್ಯದಿಶಾ ಟ್ರಸ್ಟ್‌ನಲ್ಲಿ ನೀರು-ನೈರ್ಮಲ್ಯ ವಿಭಾಗದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅನ್ನಪೂರ್ಣಾ, “ಸ್ಕೋಪ್‌ನಲ್ಲಿ ನಮಗೆ ಎಲ್ಲದಕ್ಕೂ ಸ್ಕೋಪ್ ಇತ್ತು..” ಎಂದು ಹೇಳಲು ಮರೆಯುವುದಿಲ್ಲ!

********************************************************************************************ANNAPURNA BENCHAMARADI

ಫೆಲೊ ಅನ್ನಪೂರ್ಣಾ ಬೆಣಚಮರಡಿ ಅವರ ಅನಿಸಿಕೆ –

“ನಾನು ಸ್ವಾನುಭವದಿಂದಲೇ ಹೆಚ್ಚು ಕಲಿತಕ್ಕಿ. ಆದರೂ, ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ‘ಹೊಲಿಸ್ಟಿಕ್, ಸಸ್ಟೇನೆಬಲ್ ಅಪ್ರೋಚ್ ಟು ಡೆವಲಪ್‌ಮೆಂಟ್’ ಎಲ್ಲ ಅವಶ್ಯಕ ಬಿಂದುಗಳನ್ನು, ಪರಿಸರ ಸ್ನೇಹಿಯಾಗಿಯೇ ಆಲೋಚಿಸುತ್ತ ಸುಂದರ ಕಂಠಹಾರವಾಗಿ ಗ್ರಾಮವೊಂದರ ಅಭಿವೃದ್ಧಿ ಸಮಗ್ರವಾಗಿ ಪೋಣಿಸುವ ಬಗೆ, ಕಾಲಮಿತಿಯಲ್ಲಿ ಸಾಧಿಸುವ ಕೌಶಲ್ಯ, ನನಗೆ ಅನನ್ಯ ಕಲಿಕೆಯ ಅನುಭವ ನೀಡಿತು. ಅಲ್ಲಿ ನಮಗೆ, ನಮ್ಮ ವಿಚಾರಗಳಿಗೆ ವಿಶೇಷ ಸ್ವಾತಂತ್ರ್ಯವಿತ್ತು. ನನ್ನ ಎಲ್ಲ ಶೈಕ್ಷಣಿಕ ಕಲಿಕೆಗೆ ಬೆಳ್ಳಿ ಅಂಚು ತೊಡಿಸಿದ್ದು, ಸ್ಕೋಪ್-ಅರ್ಘ್ಯಂ ವಾಟರ್ ಆಂಡ್ ಸ್ಯಾನಿಟೇಷನ್ ಪ್ರೋಗ್ರಾಂ. ಇದು ಮುಂದುವರೆಯಬೇಕು. ಮತ್ತಷ್ಟು ಯುವಜನ ಗ್ರಾಮಾಭಿವೃದ್ಧಿಯಲ್ಲಿ ತನ್ಮೂಲಕ ತೊಡಗಿಕೊಳ್ಳುವಂತಾಗಲಿ..ಈ ಅನುಭವಕ್ಕೆ ಗುರು ಡಾ. ಪ್ರಕಾಶ ಭಟ್ ಅವರಿಗೆ ನಾನು ಋಣಿ.”

 ಸಂಪರ್ಕ: annu.b1985@gmail.com / +91 99862 01367.

******************************************************************************************

ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

ಇದು ಸ್ಕೋಪ್-ಅರ್ಘ್ಯಂ ‘ವಾಟ್ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ’ ಯಶೋಗಾಥೆಯ ಸರಣಿಯ ೧೨ನೆಯ ಲೇಖನ
Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*