ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಎಲ್ಲಾ ಮಾಯ… ಇನ್ನು ನಾವು ಮಾಯ..

ಮಗಾ, ಬ್ಯಾಲಿ ಮೇಲೆ ಹೋಗಿ ಒಂದ್ ನಾಲ್ಕ ಬ್ಯಾಲಿ ಬೇರ ಕಿತ್ಕೊಂಡ್ ಬಾರಾ ನಿಮ್ಮಜ್ಜಗೆ ಕಾಲ್ ನೋವಂತೆ ಕಷಾಯ ಮಾಡಿ ಕೊಡ್ತಿನಿ. ಚಿಕ್ಕವರಾಗಿದ್ದಾಗ ನಮ್ ಅಜ್ಜಿ ಇಷ್ಟ್ ಹೇಳಿದ್ರೆ ಸಾಕು, ಓಡ್ ಹೋಗಿ ಒಂದೆರೆಡಲ್ಲ ಒಂದ್ ಹೊರೇನೆ ತರ‍್ತಿದ್ವಿ. ಯಾಕಂದ್ರೆ ಸಣ್ಣಿದ್ದಾಗೆಲ್ಲ ‘ಬ್ಯಾಲಿ ಗುಡ್ಡೆ’ ಅಂದ್ರೆ ನಮ್ಗೆ ಸ್ವರ್ಗ ಇದ್ಹಾಗೆ. ಇಡೀ ದಿನ ಅಲ್ಲೇ ಬಿದ್ಕೊಂಡಿರ‍್ತಿದ್ವಿ. IMG-20160512-WA0003ಗುಬ್ಬಿಗೂಡು ಕಟ್ಟೋದು, ಮಣ್ಣಿನ ಹೆಟ್ಟೇಲಿ ಡಪ್ಪಾಂಡುಪ್ಪಿ ಆಡೋದು, ಲಗೋರಿ, ಆನೆ ಆಟ ಒಂದಾ ಎರಡಾ ನೆನಪ್ ಮಾಡ್ಕೋತಾ ಕೂತ್ರೆ ದೊಡ್ಡ ಪುಸ್ತಕಾನೇ ಬರೀಬೋದು. ಅಷ್ಟು ಸಮೃದ್ಧವಾಗಿತ್ತು ಆ ದಿನಗಳು. ಆದರೆ ಈಗ ಅಜ್ಜೀನೂ ಇಲ್ಲ ಜೊತೆಗೆ ಬಾಲ್ಯದ ಸ್ವರ್ಗದಂತಿದ್ದ ಬ್ಯಾಲೆಗುಡ್ಡೆಯನ್ನೂ ಕಳೆದುಕೊಳ್ಳುತ್ತಿದ್ದೇವೆ.

ನಮ್ಮ ಉತ್ತರ ಕನ್ನಡ ಜಿಲ್ಲೆಯು  ಪ್ರಾಕೃತಿಕ ಸೌಂದರ್ಯಗಳೊಂದಿಗೆ ಅಪಾರ ನೈಸರ್ಗಿಕ ಸಂಪನ್ಮೂಲಗಳನ್ನು ಹೊಂದಿದೆ.  ಈ ಪರಿಸರದಲ್ಲಿ ಸಿಗುವ ಅತ್ಯಮೂಲ್ಯ ಸಂಪತ್ತುಗಳಲ್ಲಿ ಸಿಲಿಕಾ ಸ್ಯಾಂಡ್ ಕೂಡ ಒಂದು. ‘ಸಿಲಿಕಾ ಸ್ಯಾಂಡ್’ ಕರಾವಳಿ ತೀರಗಳಲ್ಲಿ ವಿರಳವಾಗಿ ಸಿಗುವ ಸಣ್ಣ ಹರಳಿನ ಮರಳು. ಸಿಲಿಕಾ ಸ್ಯಾಂಡ್‌ನ ಅಧಿಕ ಪ್ರಮಾಣದ  ಶೇಖರಣೆಯಿಂದ ಮರಳುದಿಬ್ಬಗಳ ರಚನೆಯಾಗುತ್ತದೆ. ಇದು ಪರಿಸರ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು ಕರಾವಳಿ ನಿಯಂತ್ರಣ ವಲಯದ ಪರಿಸರ ಸೂಕ್ಷ್ಮ ಪ್ರದೇಶದ ಅಡಿಯಲ್ಲಿ ಬರುತ್ತದೆ. ‘ಸಿಲಿಕಾ ಸ್ಯಾಂಡ್’ ನೋಡಲು  ಮರುಭೂಮಿಯ ಮರಳಿನ ಹಾಗೆ ಕಂಡರೂ ಸಹ ಫಲವತ್ತತೆಯಿಂದ ಕೂಡಿದೆ. ಈ ಮಣ್ಣಿನಲ್ಲಿ ಕಲ್ಲಂಗಡಿ, ಗೆಣಸು, ಈರುಳ್ಳಿಗಳಂತಹ ಹಣ್ಣು-ತರಕಾರಿಗಳನ್ನು ಬೆಳೆಯುತ್ತಾರೆ.

ಕಳೆದ ಕೆಲವು ವರ್ಷಗಳಿಂದ ಕರಾವಳಿ ತೀರ ಪ್ರದೇಶಗಳಲ್ಲಿ ‘ಸಿಲಿಕಾ ಸ್ಯಾಂಡ್’ನ ಅಕ್ರಮ ಕಳ್ಳ ಸಾಗಾಣಿಕೆ ಅವಿರತವಾಗಿ ನಡೆಯುತ್ತಿದ್ದು ಈ ಕಳ್ಳತನದಿಂದ ಮರಳುದಿಬ್ಬಗಳು ದೊಡ್ಡ ಕಂದಕಗಳಾಗಿ ಮಾರ್ಪಾಡಾಗಿದೆ. ‘ಸಿಲಿಕಾ ಸ್ಯಾಂಡ್’ನ್ನು ಕಟ್ಟಡ ನಿರ್ಮಾಣಕ್ಕಾಗಿ ಬಳಸುವುದಿಲ್ಲ. ಇದನ್ನು ಸಂಸ್ಕರಿಸಿ ಗ್ಲಾಸ್ ಹಾಗೂ ಸಿರಾಮಿಕ್ಸ್ ನಿರ್ಮಾಣದ ಫ಼್ಯಾಕ್ಟರಿಗಳಲ್ಲಿ ಬಳಸಲಾಗುತ್ತಿದೆ. ಸಾಮಾನ್ಯ ಮರಳಿಗಿಂತ ದುಪ್ಪಟ್ಟು ಬೆಲೆ ‘ಸಿಲಿಕಾ ಸ್ಯಾಂಡ್’ಗೆ ಇದೆ; ಆದುದರಿಂದಲೇ ಇದರ ಕಳ್ಳ ಸಾಗಾಣಿಕೆ ಅವಿರತವಾಗಿ ನಡೆಯುತ್ತಿದೆ. ರಾತ್ರೋರಾತ್ರಿ ದೊಡ್ಡ ಲಾರಿಗಳಲ್ಲಿ ಈ ಮರಳು ಸಾಗಣೆಯಾಗುತ್ತದೆ.

IMG-20160512-WA0004ಸಾಮಾನ್ಯವಾಗಿ ಕರಾವಳಿ ಪ್ರದೇಶದಲ್ಲಿ ರೈತರು ಭತ್ತವನ್ನ ಬೆಳೆಯುತ್ತಾರೆ. ಹೆಚ್ಚಿನ ಪ್ರದೇಶಗಳಲ್ಲಿ ಸಮುದ್ರ ಮತ್ತು ಗದ್ದೆಗಳ ನಡುವೆ  ಸಿಲಿಕಾ ಮರಳಿನ ದಿಬ್ಬಗಳಿವೆ. ಸಮುದ್ರದ ನೀರು ಗದ್ದೆಗಳಿಗೆ ನುಗ್ಗದಂತೆ ಇವು ರಕ್ಷಣೆ ನೀಡುತ್ತವೆ. ಸಿಲಿಕಾ ಮರಳಿನ ಕಳ್ಳತನ ಅವಿರತವಾಗಿ ನಡೆಯುತ್ತಿರುವುದರಿಂದ ಸಮುದ್ರದ ಉಪ್ಪುನೀರು ನೇರವಾಗಿ ಗದ್ದೆಗಳಿಗೆ ನುಗ್ಗುವ ಸಂಭವ ಇದೆ, ನುಗ್ಗಿದ ಉದಾಹರಣೆಗಳೂ ಇವೆ. ಕೆಲವು ಪ್ರದೇಶಗಳಲ್ಲಿ ಉಪ್ಪು ನೀರು ನುಗ್ಗಿದ ಪರಿಣಾಮ ಅಂತರ್ಜಲ ಮೂಲಗಳಾದ ಬಾವಿ, ಕೆರೆಗಳೂ ಸಹ ಉಪ್ಪಿನಂಶದಿಂದ ಕೂಡಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ.

ನಾವು ನಮತಿ- ಸೆಂಟರ್ ಫಾರ್ ಪಾಲಿಸಿ ರೀಸರ್ಚ ಪರಿಸರ ನ್ಯಾಯ ಯೋಜನೆಯ ಮೂಲಕ ಕರಾವಳಿ ಜಿಲ್ಲೆಗಳಲ್ಲಿ ಪರಿಸರದ ಕಾನೂನುಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಸಂಶೋಧನಾ ಕಾರ್ಯವನ್ನು ಮಾಡುತ್ತೇವೆ. ಕಾಗಾಲ-ಹುಬ್ಬಣಗೇರಿ ಊರಿನ ಕೆಲವರು ನಮ್ಮ ಗ್ರಾಮದಲ್ಲಿ ಅವಿರತವಾಗಿ ಮರಳು ಕಳ್ಳತನ ನಡೆಯುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ಸಹೋದ್ಯೋಗಿಗಳೊಂದಗೆ ಸ್ಥಳ ಪರಿಶೀಲನೆ ನಡೆಸಿದಾಗ,  ಸುಮಾರು ೨ ಎಕರೆಗೂ ಹೆಚ್ಚು ಕಂದಕ ಬಿದ್ದಿರುವುದು, ಇದರ ಪರಿಣಾಮ ಅಕ್ಕ ಪಕ್ಕದ ಮನೆಗಳು ಕುಸಿದು ಬೀಳುವ ಹಂತದಲ್ಲಿದ್ದು ಮತ್ತು ಸಮುದ್ರದ ನೀರು ಬಾವಿ, ಗದ್ದೆಗಳಿಗೆ ನುಗ್ಗುವ ಸಂಭವ ಇರುವುದು ಕಂಡುಬಂತು. ಈ ಕುರಿತು ಸೂಕ್ತ ಅಧ್ಯಯನ ಕೈಗೊಂಡಾಗ ಸಂಬಂಧಪಟ್ಟ ಕಾನೂನಿನ ಉಲ್ಲಂಘನೆಯಾಗಿರುತ್ತದೆ. ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2011ರ ನಿಯಮ 3(x)(b)ರಲ್ಲಿ ಹೇಳುವಂತೆ, ಮರಳು ಗಣಿಗಾರಿಕೆಗೆAction Letter Scan copy ನಿರ್ಬಂಧವಿದೆ ಮತ್ತು ನಿಯಮ 3(xiii)ರಲ್ಲಿ ಹೇಳುವಂತೆ, ಮರಳು ದಿಬ್ಬಗಳನ್ನು ತಿದ್ದುವುದು ಅಥವಾ ಬದಲಾಯಿಸಲು ನಿರ್ಬಂಧವಿದೆ ಮತ್ತು ಕರ್ನಾಟಕ ಮರಳುನೀತಿ 2011ರ ನಿಯಮ ಸಂಖ್ಯೆ 4 ಮತ್ತು 7 ಹೇಳುವಂತೆ ಕರಾವಳಿ ಪ್ರದೇಶದಲ್ಲಿ ಮತ್ತು ಪಟ್ಟಾ ಭೂಮಿಯಲ್ಲಿ ಮರಳುಗಾರಿಕೆಗೆ ಅವಕಾಶವಿರುವುದಿಲ್ಲ. ಈ ಕಾನೂನುಗಳನ್ನು ಉಪಯೋಗಿಸಿ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನ ಭೇಟಿ ಮಾಡಿ ಅರ್ಜಿ ಸಲ್ಲಿಸಲಾಯಿತು.  ಈ ಅರ್ಜಿಗೆ ಅನುಸಾರವಾಗಿ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಂಡ ವಿಧಿಸಿ ನೆಲಭರ್ತಿ ಮಾಡಲು ಆದೇಶ ನೀಡಿದ್ದಾರೆ. ಜಿಲ್ಲೆಯಾದ್ಯಂತ ಈ ರೀತಿ ಮರಳು ಕಳ್ಳತನಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಲ್ಲಿ, ಸರ್ಕಾರದ ಸಂಪನ್ಮೂಲದ ರಕ್ಷಣೆ ಆಗುವುದರೊಂದಿಗೆ, ಜಿಲ್ಲೆಯ ಪರಿಸರ ಮತ್ತು ಜೀವನ ಶೈಲಿಯನ್ನು ರಕ್ಷಿಸಿದಂತಾಗುತ್ತದೆ.

ವೈಜ್ಞಾನಿಕವಾಗಿ ಮತ್ತು ಪ್ರಾಕೃತಿಕವಾಗಿ ‘ಸಿಲಿಕಾ ಸ್ಯಾಂಡ್’ನ ಮರಳು ದಿಬ್ಬಗಳು ಸಮುದ್ರ ಕೊರೆತವನ್ನು ತಡೆಯುವ ಒಂದು ರಕ್ಷಣಾ ಗೋಡೆಯಿದ್ದಂತೆ. ನಮ್ಮ ಸರ್ಕಾರ ಸಮುದ್ರ ಕೊರೆತಕ್ಕೆ ತಡೆಗೋಡೆ ನಿರ್ಮಿಸಲು ಪ್ರತಿ ವರ್ಷ ಕೋಟ್ಯಂತರ ಹಣವನ್ನು ನೀರಿಗೆ ಹಾಕುತ್ತಿದೆ. ಪ್ರಾಕೃತಿಕ ತಡೆಗೋಡೆಯಾದ ಮರಳುದಿಬ್ಬಗಳನ್ನು ಕಳ್ಳಕಾಕರಿಂದ ರಕ್ಷಿಸಿದ್ದಲ್ಲಿ ಸಮುದ್ರ ಕೊರೆತದಂತಹ ಸಮಸ್ಯೆಯಿಂದ ನಮ್ಮ ಕರಾವಳಿಯನ್ನು ರಕ್ಷಿಸಬಹುದು.   ’ಸಿಲಿಕಾ ಸ್ಯಾಂಡ್’ನ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಸರ್ಕಾರ ಸೂಕ್ತ ಕ್ರಮ ಕೈಗೊಂಡು ಫಲವತ್ತಾದ ಮರಳಿಗೆ ರಕ್ಷಣೆ ನೀಡಿ ಕರಾವಳಿ ಪರಿಸರವನ್ನು ರಕ್ಷಿಸಿ ಉಳಿಸಬೇಕೆಂಬುದೇ ಎಲ್ಲರ ಆಶಯ.

 ಚಿತ್ರ-ಲೇಖನ: ವಿನೋದ ಪಟಗಾರ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*