ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

“ನಾನು ಸ್ಕೋಪ್ನವ; ಅಭಿವೃದ್ಧಿ ಪಕ್ಷ ನಮ್ಮದು”

ಗದಗ (ಹಿರೇಹಂದಿಗೋಳ): ‘ಮಾಸ್ಟರ್ಸ್ ಇನ್ ಡೆವಲಪ್‌ಮೆಂಟ್ ಮ್ಯಾನೇಜಮೆಂಟ್’ ಕೋರ್ಸ್ ಕಲಿಯಲು ಫೀ ಹಣ ಹೊಂದಿಸಲಾಗದೇ, ಸ್ನಾತಕ ಪದವಿಯ ನಂತರ ಒಂದು ವರ್ಷ ಕೂಲಿನಾಲಿಯನ್ನೂ ಮಾಡಿಕೊಂಡು ಅರೆಹೊಟ್ಟೆ ಉಂಡುಟ್ಟು, ಗಾರೆ ಕೆಲಸದಿಂದ ಗಳಿಸಿದ ಲಕ್ಷ ರೂಪಾಯಿ ಕೈಯಲ್ಲಿ ಹಿಡಿದುಕೊಂಡು ಮರು ವರ್ಷ ಕೋರ್ಸ್ ಸೇರಿ, ಗ್ರಾಮೋದ್ಧಾರದ ಕನಸುಹೊತ್ತು ಛಲದಿಂದ ಓದಿದ ಗ್ರಾಮ್ಯ ಪ್ರತಿಭೆಯ ಕಥಾನಕವಿದು.

ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ಪ್ರಸನ್ನಕುಮಾರ ಡಿ.ಕೆ. ನಮ್ಮೀ ಕಥೆಯ ನಾಯಕ.

ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನ ದಟ್ಟೆಹಳ್ಳಿಯ ಕಡುಬಡತನದಲ್ಲಿ ಬೆಳೆದ ಪ್ರಸನ್ನಕುಮಾರ, ಸ್ವಾಮಿ ವಿವೇಕಾನಂದ ಯುತ್ ಮೂವಮೆಂಟ್ ಸಂಚಾಲಿತ ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್, ಮೈಸೂರು ವಿ-ಲೀಡ್‌ನಲ್ಲಿ ಮಾಸ್ಟರ್ಸ್ ಇನ್ ಡೆವಲಪ್‌ಮೆಂಟ್ ಮ್ಯಾನೇಜ್‌ಮೆಂಟ್ ಓದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಡಾ. ಆರ್. ಬಾಲಸುಬ್ರಮಣಿಯಮ್ ಅವರ ಸಹಕಾರದಿಂದ ಮೈಸೂರು ವಿಶ್ವವಿದ್ಯಾಲಯದಿಂದ ಗಿರಿಜನ ಬಾಲಕನೋರ್ವ ವಿಶಿಷ್ಟ ಪದವಿಗೆ ಪ್ರಥಮ ಬಾರಿಗೆ ಭಾಜನನಾಗುತ್ತಾನೆ; ಇದು ದಾಖಲೆ.

ವಿ-ಲೀಡ್‌ನಲ್ಲಿ ಅಧ್ಯಾಪಕರಾಗಿರುವ ರಮೇಶ ಕಿಕ್ಕೇರಿ ಅವರ ಗ್ರಾಮ್ಯ ಪರಿಸರದಲ್ಲಿ ನೀರು-ನೈರ್ಮಲ್ಯ ನಿರ್ವಹಣೆಯ ಪಾಠ ಮತ್ತು ಪ್ರಾಯೋಗಿಕ ಬೋಧನೆಯಿಂದ ಪ್ರೇರಿತನಾಗಿ ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊಶಿಪ್‌ಗೆ ಉಮ್ಮೇದಿನಿಂದ ಸೇರಿಕೊಂಡವರು ಪ್ರಸನ್ನಕುಮಾರ. ಅವರ ಇತಿಮಿತಿ ತಿಳಿದೂ ಆಯ್ಕೆ ಮಾಡಿದವರು ಸೊಸಾಯಿಟಿ ಫಾರ್ ಕಮ್ಯುನಿಟಿ ಪಾರ್ಟಿಸಿಪೇಷನ್ ಆಂಡ್ ಲರ್ನಿಂಗ್ -‘ಸ್ಕೋಪ್’ ಸಿಇಓ ಡಾ. ಪ್ರಕಾಶ ಭಟ್. ಈ ಆಯ್ಕೆ ನಿಜಕ್ಕೂ ‘ಅಸಾಮಾನ್ಯ ರಿಸ್ಕ್’ ಆಗಿತ್ತು.

ಹಳ್ಳಿಯ ಬದುಕು ಪ್ರಸನ್ನಕುಮಾರ ಅವರಿಗೆ ಅರಿಯದ್ದಲ್ಲ್ಲ. ಅಲ್ಲಿಯ ಬಡತನ ಹೊಸದಲ್ಲ. ಆದರೆ, ಮೈಸೂರು ಜಿಲ್ಲೆಯ ಗ್ರಾಮ್ಯ ಪರಿಸರ ಮತ್ತು ನಮ್ಮ ಉತ್ತರ ಕರ್ನಾಟಕದ ಗ್ರಾಮೀಣ ಪರಿಸರ, ಭಾಷೆ ಮತ್ತು ಊಟ ಅವರಿಗೆ ಅರಗಿಸಿಕೊಳ್ಳಲು ಮತ್ತು ಅವರನ್ನು ಇತರರು ಅರಗಿಸಿಕೊಳ್ಳಲು ಪ್ರಾರಂಭದಲ್ಲಿ ತುಂಬ ಕಷ್ಟವಾಗಿತ್ತು. ಸ್ಕೋಪ್ ಸಿಇಓ ಡಾ. ಪ್ರಕಾಶ ಭಟ್ ಅವರ ಪ್ರೋತ್ಸಾಹ, ಇವರ ಮನಸ್ಸನ್ನು ಹಿಡಿದಿಟ್ಟಿತು. ಫಲಿತಾಂಶವಾಗಿ ನಮ್ಮೀ ಕಥೆಗೆ ಹೀರೋ ದಕ್ಕಿದ!

ಗದಗ ಜಿಲ್ಲೆ ಹಿರೇಹಂದಿಗೋಳ

???????????????????????????????ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ, ಸಜ್ಜನ ರಾಜಕಾರಣಿ ಎಚ್.ಕೆ. ಪಾಟೀಲ ಅವರ ಸ್ವಕ್ಷೇತ್ರ. ಹುಲಕೋಟಿಯಿಂದ ಕೇವಲ ೫ ಕಿ.ಮೀ. ದೂರ. ಬಿಂಕದಕಟ್ಟಿ ಗ್ರಾಮ ಪಂಚಾಯ್ತಿಗೆ ಜೋಡಿಸಿಕೊಂಡ ಒಟ್ಟು ಜನಸಂಖ್ಯೆ ೨,೮೩೦ ಮತ್ತು ೪೯೦ ಮನೆಗಳಿರುವ ಊರು. ಕ್ರಿಯಾಶೀಲ ರಾಜಕಾರಣಿ, ಮಾಜಿ ಶಾಸಕ ಡಿ.ಆರ್. ಪಾಟೀಲ ಅವರ ಪ್ರೀತಿಯ ಊರು ಕೂಡ. ಹಾಗಾಗಿ, ನಮ್ಮ ಪ್ರಸನ್ನಕುಮಾರ್‌ಗೆ ವಿಶೇಷ ಸವಾಲು – ಕೇವಲ ಒಂದು ವರ್ಷದ ಅವಧಿಯಲ್ಲಿ ಈ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯದ್ದಾಗಿತ್ತು.

ಹಿರೇಹಂದಿಗೋಳ ಕಂದಾಯ ಗ್ರಾಮ. ಪಿಡಿಓ ರೆಹಮತ್‌ಬಾನು ಕಿರೇಸೂರು ಅವರ ಸಹಕಾರದಲ್ಲಿ ೧೫೯ ಮನೆಗಳನ್ನು ಆಯ್ದುಕೊಂಡು ಪ್ರಸನ್ನಕುಮಾರ ಬೇಸ್‌ಲೈನ್ ಸಮೀಕ್ಷೆಗೆ ಇಳಿಯುತ್ತಾರೆ. ಸರ್ಕಾರಿ ಸಮೀಕ್ಷೆಯ ಅಂಕಿ-ಸಂಖ್ಯೆಯನ್ನು ತಾಳೆ ಹಾಕುತ್ತಾರೆ. ಕೇವಲ ೨೩ ಮನೆಗಳಿಗೆ ಮಾತ್ರ ಶೌಚಾಲಯಗಳಿರುವ, ೨೦೧೨ರಲ್ಲೇ ೨೭ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದರೂ ಸಮರ್ಪಕ ಬಳಕೆ ಇಲ್ಲದ ಮಾಹಿತಿ ಸಿಗುತ್ತದೆ. ಆದರೆ, ಹೊತ್ತೊಯ್ಯಲು ಸೂಕ್ತ ಕ್ಯಾನ್‌ಗಳಿಲ್ಲದೇ ಇರುವುದರಿಂದ ಜನರಲ್ಲಿ ಅನಾಸಕ್ತಿ ಮತ್ತು ಪೋಲು ಜಾಸ್ತಿ ಎಂಬುದೂ ಇವರ ಅನುಭವಕ್ಕೆ ಬರುತ್ತದೆ.

???????????????????????????????ಸ್ಕೋಪ್ ಸ್ವತಃ ೧೦,೩೫೦ ರೂಪಾಯಿ ಒದಗಿಸಿ ಶುದ್ಧ ಕುಡಿಯುವ ನೀರಿನ ೨೦ ಲೀಟರ್ ಕ್ಯಾನ್‌ಗಳನ್ನು ಮತ್ತು ಕಡಿಮೆ ವೆಚ್ಚದ ಒಂದೇ ಗಾಲಿಯ ತಳ್ಳು ಯಂತ್ರವನ್ನು ಆಯ್ದ ಫಲಾನುಭವಿಗಳಿಗೆ ಒದಗಿಸುತ್ತದೆ. ವ್ಯವಸ್ಥೆಯಲ್ಲಿ ಕಳಚಿದ್ದ ಸೂಕ್ಷ್ಮ ಕೊಂಡಿಯನ್ನು ಪ್ರಸನ್ನಕುಮಾರ ಮರು ಜೋಡಿಸುತ್ತಾರೆ. ಶುದ್ಧ ನೀರಿನ ಸದ್ಬಳಕೆ ಹಾಗೂ ಗ್ರಾಮದ ರಸ್ತೆ ಮತ್ತು ಗಟಾರುಗಳ ನೈರ್ಮಲ್ಯ ಖಾತ್ರಿ ಪಡಿಸಲು ೭ ಓಣಿಗಳ ಉಸ್ತುವಾರಿ ಸಮಿತಿಗಳನ್ನು ಸಂಘಟಿಸುತ್ತಾರೆ. ಪಾನ್-ಬೀಡಾ ಸೇರಿದಂತೆ ಊರಿನ ಹೊಟೇಲ್ ಮಾಲಿಕರನ್ನು ಮಾತನಾಡಿಸಿ, ಸಮುದಾಯ ಮತ್ತು ಸ್ಕೋಪ್ ಸಹಯೋಗದಲ್ಲಿ ೪,೨೦೦ ರೂಪಾಯಿ ಖರ್ಚಿಸಿ ಅಂಗಡಿಗಳ ಮುಂದೆ ಕಸದ ಡಬ್ಬಿಗಳನ್ನು ಇಡಲಾಗುತ್ತದೆ. ವ್ಯವಸ್ಥಿತವಾಗಿ ಕಸದ ವಿಂಗಡಣೆ ಮತ್ತು ವಿಲೇವಾರಿಗೆ ಹುಟ್ಟುವ ಸ್ಥಳದಲ್ಲೇ ಸಂಸ್ಕರಿಸುವ ಪ್ರಯತ್ನ ಯಶಸ್ವಿಯಾಗುತ್ತದೆ.

ಬಯಲು ಶೌಚ; ಇಲ್ಲಿ ಹವ್ಯಾಸ!

ಪ್ರಸನ್ನಕುಮಾರ ಹಿರೇಹಂದಿಗೋಳದಲ್ಲಿ ಬಯಲುಶೌಚದ ಸಮಸ್ಯೆಗೆ ಆದಿ ಮತ್ತು ಅಂತ್ಯಗಳಿಲ್ಲದ್ದನ್ನು ಗುರುತಿಸುತ್ತಾರೆ. ಜನರ ಮನವೊಲಿಸುವ ಕೆಲಸಕ್ಕೆ ಮುಂದಾಗುತ್ತಾರೆ. ಕೇವಲ ೮ ತಿಂಗಳಲ್ಲಿ ಸ್ಕೋಪ್ ಸಹಯೋಗದಲ್ಲಿ ೧೩೫ ಮನೆಗಳಲ್ಲಿ ಸ್ವಂತದ ಶೌಚಾಲಯಗಳು ನಿರ್ಮಿಸಲ್ಪಟ್ಟು ಬಳಕೆಗೆ ಅಣಿಯಾಗುತ್ತವೆ. ಇಲ್ಲಿ ಯೋಜನೆ, ಕಾನೂನು ಎಲ್ಲವೂ ಬದಿಗೆ ಸರಿದು ಪ್ರಸನ್ನಕುಮಾರ ಅವರ ಪ್ರೀತಿಯ ಆಗ್ರಹಕ್ಕೆ ಜನ ಶೌಚಾಲಯ ಬಳಸಲು ಕಷ್ಟದಿಂದ ಒಗ್ಗಿಕೊಳ್ಳುತ್ತಾರೆ! ಸಮುದಾಯದ ಮನೋಸ್ಥಿತಿ ಬದಲಾಗುತ್ತದೆ.

??????????ವಿಶೇಷವೆಂದರೆ, ಸಾರ್ವಜನಿಕ ೬ ಶೌಚಾಲಯಗಳು ಕಳಪೆ ನಿರ್ಮಿತಿಯಿಂದಾಗಿ ಕಸ ತುಂಬುವ ತಿಪ್ಪೆಗಳಾಗಿ ಬದಲಾಗಿ ಬಳಕೆಗೆ ಅಯೋಗ್ಯವಾಗಿ ನಿಂತಿದ್ದು ಪ್ರಸನ್ನಕುಮಾರ ಅವರ ಮನಕಲಕುತ್ತದೆ. ಸ್ಕೋಪ್ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿ ಶೌಚಾಲಯಗಳ ದುರಸ್ಥಿ ಮತ್ತು ಸ್ವಚ್ಛತೆಗೆ ಮುಂದಾಗುತ್ತಾರೆ. ನೀರಿನ ಅಲಭ್ಯತೆಯ ಸಮಸ್ಯೆಯನ್ನು ಹೊಸ ಪೈಪ್ ಜೋಡಿಸಿ ಪರಿಹರಿಸಲಾಗುತ್ತದೆ. ಅಂದಾಜು ೨ ಲಕ್ಷ ರೂಪಾಯಿ ಮೌಲ್ಯದ ಶೌಚಾಲಯಗಳು ಮರುಬಳಕೆಗೆ ಅಣಿಯಾಗುತ್ತವೆ! ಗ್ರಾಮ ಪಂಚಾಯ್ತಿ ಶೌಚಾಲಯಗಳ ನಿರ್ವಹಣೆಗೆ ಮುತುವರ್ಜಿ ವಹಿಸುವಂತೆ ವಾತಾವರಣ ಸೃಷ್ಟಿಸಲಾಗುತ್ತದೆ.

ಪ್ರಸನ್ನಕುಮಾರ ಈ ಮಧ್ಯೆ ಮಹಿಳೆಯರ ಸಾರ್ವಜನಿಕ ಶೌಚಾಲಯದ ದುಃಸ್ಥಿತಿ ಕಂಡು, ಅವರ ಬಯಲುಶೌಚದ ಅನಿವಾರ್ಯ ಪರಿಸ್ಥಿತಿ ಗಮನಿಸಿ ಅವುಗಳನ್ನೂ ಸಹ ಪುನರುಜ್ಜೀವಿತಗೊಳಿಸಲು ಯೋಜನೆ ರೂಪಿಸುತ್ತಾರೆ. ಸ್ಕೋಪ್ ೧೫ ಸಾವಿರ ರೂಪಾಯಿ, ಗ್ರಾಮ ಪಂಚಾಯ್ತಿ ೯,೯೨೪ ರೂಪಾಯಿಗಳ ಸಹಯೋಗ ಧನ ಪಡೆದು, ಮನೆ ಅಂಗಳದಲ್ಲಿ ಶೌಚಾಲಯ ಕಟ್ಟಿಕೊಳ್ಳಲು ಜಾಗೆ ಇರದವರಿಗಾಗಿ ಮೀಸಲಿರಿಸಿ ಸುಸ್ಥಿತಿಗೆ ತರಲಾಗುತ್ತದೆ. ಸದ್ಯ ೧೨ ಕುಟುಂಬಗಳ ೨೪ ಮಹಿಳೆಯರು ಈ ಶೌಚಾಲಯಗಳನ್ನು ಬಳಸುತ್ತಿದ್ದಾರೆ.

ಶಂಕರಪ್ಪ ಗೌಡನಾಯಕರ ಎಂಬ ಶೌಚಾಲಯ ಶಿಲ್ಪಿ

???????????????????????????????ವಿಶೇಷವೆಂದರೆ, ಹಿರೇಹಂದಿಗೋಳ ಗ್ರಾಮದ ಶಂಕರಪ್ಪ ಗೌಡನಾಯಕರ ಎಂಬುವವರು ಶೌಚಾಲಯಗಳನ್ನು ತುಂಬ ಸುಂದರವಾಗಿ ನಿರ್ಮಿಸುವ ಕೌಶಲ್ಯ ಮಂಗಳೂರಿನಿಂದ ಕಲಿತು ಬಂದವರು. ಪ್ರಸನ್ನಕುಮಾರ್ ಅವರೊಟ್ಟಿಗೆ ಕೈಜೋಡಿಸಿ ಗ್ರಾಮದಲ್ಲಿ ಮನೆ-ಮನೆಯ ಶೌಚಾಲಯ ಕಟ್ಟಲು ಅವರು ಮುಂದಾಗುತ್ತಾರೆ. ಸ್ಕೋಪ್ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ‘ಕಾರ್ಪೋರೆಟ್ ಬ್ಯಾಂಕಿಂಗ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ’ ಅಡಿ ಅಗತ್ಯವಿರುವವರಿಗೆ ಸಹಾಯಧನ ಒದಗಿಸಿ ಕಟ್ಟಿಕೊಡಲು ಒಡಂಬಡಿಕೆ ರೂಪಿಸಲಾಗುತ್ತದೆ. ಸರ್ಕಾರದಿಂದ ಫಲಾನುಭವಿಗೆ ಹಣ ಸಂದಾಯವಾದಾಗ ಮರುಪಾವತಿಸುವ ಯೋಜನೆ ಇಲ್ಲಿ ರೂಪುಗೊಳ್ಳುತ್ತದೆ.

ಆದರೆ, ಜನ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಹಿಂದೇಟುಹಾಕುತ್ತಾರೆ. ಡಾ. ಪ್ರಕಾಶ ಭಟ್, ಫೆಲೊ ಪ್ರಸನ್ನಕುಮಾರ ಅವರೊಂದಿಗೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶ ಸಾಧಿಸುತ್ತಾರೆ. ಪ್ರತಿಯೊಂದು ಶೌಚಾಲಯಕ್ಕೆ ೧೪,೫೦೦ ರೂಪಾಯಿ ಸದ್ವಿನಿಯೋಗವಾಗಿ, ಗಟ್ಟಿಮುಟ್ಟಾಗಿ ನಿರ್ಮಿತಿ ಹೊಂದುವಂತೆ ಗುಣಮಟ್ಟ ಖಾತ್ರಿ ಯೋಜನೆ – ಬಹುಶಃ ಇಡೀ ರಾಜ್ಯಕ್ಕೇ ಮಾದರಿಯಾದ ‘ಪಬ್ಲಿಕ್-ಪ್ರೈವೆಟ್-ಪೀಪಲ್ಸ್ ಪಾರ್ಟಿಸಿಪೇಷನ್’ – ‘೪ಪಿ ಸಿದ್ಧಾಂತ’ ಇಲ್ಲಿ ಸ್ವರೂಪ ಪಡೆಯುತ್ತದೆ. ಅಂತೂ ಪ್ರಾಯೋಗಿಕವಾಗಿ ೧೦ ಮನೆಗಳ ಶೌಚಾಲಯ ಶಂಕ್ರಪ್ಪ ರೂಪಿಸುತ್ತಾರೆ. ಬಾಯಿ ಮಾತಿನಿಂದ ಹರಡಿದ ವಿಷಯ ಜನರ ಮನತಟ್ಟುತ್ತದೆ. ಒಟ್ಟು ೬೦ ಶೌಚಾಲಯ ಈ ಒಡಂಬಡಿಕೆ ಅಡಿ ರೂಪುಗೊಳ್ಳುತ್ತವೆ!

ವಿಶೇಷವೆಂದರೆ, ಬಾಬು ಮಡಿಕೇರಿ ಎಂಬ ಯೋಧ ಕೂಡ ಪ್ರಸನ್ನಕುಮಾರ ಮಾತಿಗೆ ಬೆಲೆ ನೀಡಿ, ತನ್ನ ತಂದೆ-ತಾಯಿ, ಅಕ್ಕ-ತಂಗಿಯರಿಗಾಗಿ ಶೌಚಾಲಯ ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಗ್ರಾಮಸ್ಥ ಪುರದಪ್ಪ ಕುರ್ತಕೋಟಿ ಅವರ ಮನೆಯ ಶೌಚಾಲಯವನ್ನು ಕೇವಲ ೨೫ ದಿನಗಳಲ್ಲಿ ಕಟ್ಟಿನಿಲ್ಲಿಸಲಾಗುತ್ತದೆ.

‘ಐಡಿಯಾ ಕ್ಲಿಕ್ ಆಗಿದೆ!

compain in ourvillage with fellowsಆದರೂ, ‘ಶೌಚಾಲಯ ನಮಗ್ಯಾಕ ಬೇಕ್ರಿ.. ನಮ್ಮದೆಲ್ಲಾ ಹೊಲದಾಗರೀ..” ಎಂಬ ಉಡಾಫೆಯ ಹಟ ಹಿಡಿದವರನ್ನು ದಾರಿಗೆ ತರಲು, ಪ್ರಸನ್ನಕುಮಾರ ಬಳಸುವ ಅಸ್ತ್ರ – ಶೌಚಾಲಯ ಕಟ್ಟಿಕೊಂಡು ಬಳಸುವ ಮನೆಯ ಮಕ್ಕಳಿಗೆ ಮಾತ್ರ ಸಂಜೆ ಇವರಿಂದ ಮನೆ ಪಾಠ! ಕ್ರಮೇಣ ಮಕ್ಕಳ ಸಂಖ್ಯೆ – ೫೦ ತಲುಪುತ್ತದೆ. ಶೌಚಾಲಯ ಹೊಂದಿರದ ಮನೆಯ ಮಕ್ಕಳಿಗೆ ಮುಜುಗರ ಆರಂಭ! ಪಾಲಕರಿಗೆ ದುಂಬಾಲು ಬೀಳುತ್ತಾರೆ.. ಪ್ರಸನ್ನ ಅಣ್ಣನ ಉಚಿತ ಟ್ಯೂಷನ್ ಕ್ಲಾಸ್ ಸೇರಲೇಬೇಕು ಎಂದು ರಂಪ ಮಾಡಿ, ಮನೆಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಾರೆ! ಮಕ್ಕಳ ಹಟದ ಎದುರು ಪಾಲಕರ ಮೊಂಡುತನ ಮಕಾಡೆ ಮಲಗುತ್ತದೆ! ಒಡಂಬಡಿಕೆ ಸಹಿ ಮಾಡಲು ಪ್ರಸನ್ನಕುಮಾರ್‌ಗೆ ಪಾಲಕರು ದುಂಬಾಲು ಬೀಳುತ್ತಾರೆ. ಕಂಡೀಷನ್ ಸ್ಪಷ್ಟ – ಶೌಚಾಲಯ ಕಟ್ಟುವ ಕೆಲಸ ಆರಂಭವಾಗಬೇಕು; ಮಕ್ಕಳು ಟ್ಯೂಷನ್‌ಗೆ ಸೇರಬೇಕು! ‘ಐಡಿಯಾ ಕ್ಲಿಕ್ ಆಗುತ್ತದೆ!’.

ಬೇಸಿಕ್ ಇಂಗ್ಲಿಷ್, ಟೆಕ್ಸ್ಟ್‌ಬುಕ್ ಇಂಗ್ಲಿಷ್, ಇಂಗ್ಲಿಷ್ ಗ್ರಾಮರ್, ಕಂಪ್ಯುಟರ್ ಬಳಕೆ, ವಿಡಿಯೋ ಸ್ಕ್ರೀನಿಂಗ್, ಉಪಯುಕ್ತ ಚಲನಚಿತ್ರಗಳ ಸ್ಕ್ರೀನಿಂಗ್ ಉಚಿತ ಟ್ಯೂಷನ್ ಕ್ಲಾಸ್‌ನ ಗುಟ್ಟು. ಹಿರಿಯ ಪ್ರಾಥಮಿಕ ವರ್ಗದಿಂದ ಹಿಡಿದು, ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳೂ ಸೇರಿದ್ದು ವಿಶೇಷ.

ಪ್ರಸನ್ನಕುಮಾರ್ ಅವರ ಹಿತಮಿತ ಮಾತು, ದಣಿವರಿಯದ ಕೆಲಸ ಹತ್ತಿರದಿಂದ ಗಮನಿಸಿರುವ ಗ್ರಾಮಸ್ಥ ಶಿವಶಂಕ್ರಪ್ಪ ಆರಟ್ಟಿ ಅಭಿಮಾನದಿಂದ ಹೇಳುವ ಮಾತು.. “ನಮ್ಮ ಪ್ರಸನ್ನಕುಮಾರನಂತಹ ಸ್ನಾತಕೋತ್ತರ ಪದವಿ ಗಳಿಸಿದ ಯುವಕ ಕೈತುಂಬ ಸಂಬಳದ ನೌಕರಿ ಬಿಟ್ಟು ಊರ ಚಾಕರಿಗೆ ಖುಷಿಯಿಂದ ನಿಂತಿದ್ದು, ನನ್ನ ದೃಷ್ಟಿಯಲ್ಲಿ ಜಗತ್ತಿನ ೮ನೇ ವಿಸ್ಮಯ!”

ಪುಟ್ಟ ಅಣೆಕಟ್ಟೆ ಇದೆ

Avani Tank rejuvenation 3ಹಿರೇಹಂದಿಗೋಳದಲ್ಲಿ ಪುಟ್ಟ ಅಣೆಕಟ್ಟೆ ಇದೆ. ಕಾರಣ ಅಲ್ಲಿ ಅಂದಾಜು ೧೦೦ ಎಕರೆ ವಿಸ್ತಾರದಲ್ಲಿ ಹಬ್ಬಿದ್ದ ಕೆರೆಯೊಂದಿತ್ತಂತೆ! ಪ್ರಸನ್ನಕುಮಾರ ಗಮನಿಸಿದಂತೆ, ಈಗ ಅದು ಊರಿನ ಶೌಚದ ಕೊಚ್ಚೆಯಾಗಿ ಪರಿಣಮಿಸಿತ್ತು. ಕಾರಣ, ‘ಸಮುದಾಯದ ಸಾಂಘಿಕ ಜವಾಬ್ದಾರಿ, ಯಾರ ಜವಾಬ್ದಾರಿಯೂ ಅಲ್ಲ’ ಎಂಬ ನಂಬಿಕೆ ಎಲ್ಲರಲ್ಲೂ ಮನೆ ಮಾಡಿತ್ತು! ಇಡೀ ಊರಿನ ಗಟಾರು ನೀರನ್ನು ನೇರವಾಗಿ ಕೆರೆಗೆ ಹರಿದುಬರುವಂತೆ ಜೋಡಿಸಲಾಗಿತ್ತು!

ಕೆರೆಯನ್ನು ತತ್ಕಾಲ ಪುನರುಜ್ಜೀವಿತಗೊಳಿಸಲು ಪ್ರಸನ್ನ ಕ್ರಿಯಾಯೋಜನೆ ರೂಪಿಸುತ್ತಾರೆ. ಸ್ಕೋಪ್ ಬೆನ್ನೆಲುಬಾಗಿ ನಿಲ್ಲುತ್ತದೆ. ಇಡೀ ಕೆರೆ, ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೆರೆಗೆ ಬಿಡಲು ಶುದ್ಧೀಕರಣ ಘಟಕ, ಹೊಲಸು ನೀರು ಭೂಮಿಗೆ ಇಂಗಲು ಇಂಗುಗುಂಡಿ ವ್ಯವಸ್ಥೆ, ಕೆರೆಯ ಪಕ್ಕ ಆಳದಲ್ಲಿ ಪ್ರತ್ಯೇಕ ‘ಅಂಡರ್ ಗ್ರೌಂಡ್ ಟ್ಯಾಂಕ್’, ಘನತ್ಯಾಜ್ಯದ ಸಮರ್ಪಕ ವಿಲೇವಾರಿಗೆ ಕಸ ವಿಂಗಡಣೆ ಮತ್ತು ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆಗೆ ಘಟಕವೊಂದರ ಸ್ಥಾಪನೆಗೆ ಯೋಜಿತ ಪ್ರಯತ್ನ ಜಾರಿಯಲ್ಲಿದೆ.

ಈ ಮಧ್ಯೆ, ಪ್ರಸನ್ನಕುಮಾರ್‌ಗೆ ಕೆರೆಯ ದಂಡೆಯ ಮೇಲೆಯೇ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಕಾಣುತ್ತದೆ. ಸುಮ್ಮನೆ ಹೋಗಿ ನೋಡಿದ ಅವರಿಗೆ ಹೌಹಾರಿಸುವ ಚಿತ್ರಣ ಕಾಣಿಸುತ್ತದೆ. ಶಾಲೆಯ ಬಾಲಕಿಯರ ಶೌಚಾಲಯಕ್ಕೆ, ಗಂಡುಮಕ್ಕಳ ಮೂತ್ರಾಲಯಕ್ಕೆ ಮೇಲ್ಛಾವಣಿಯೂ ಇಲ್ಲ! ಬಾಗಿಲೂ ಇಲ್ಲ! ಮೇಲಾಗಿ, ಶಿಕ್ಷಕರು ಬಳಸುತ್ತಿದ್ದಕ್ಕೆ ಬೀಗ ಜಡಿಯಲಾಗಿದೆ. ಬಾಕಿ ಊರವರು ಆಗಾಗ ಬಂದು ಬಳಸಿ, ಗಬ್ಬೆಬ್ಬಿಸಿ ಹೋಗುವ ವಿಷಯ ಮಕ್ಕಳು ಕಳವಳದಿಂದ ಅನಾವರಣಗೊಳಿಸುತ್ತಾರೆ!

ಶಾಲಾ ಸುಧಾರಣಾ ಸಮಿತಿಯನ್ನು ಒಗ್ಗೂಡಿಸಿ, ಮನವೊಲಿಸುವ ಪ್ರಸನ್ನಕುಮಾರ ಗ್ರಾಮ ಪಂಚಾಯ್ತಿಗೆ ಕ್ರಿಯಾಯೋಜನೆ ಸಲ್ಲಿಸುತ್ತಾರೆ. ಸಕಾಲಿಕವಾಗಿ ೭೦ ಸಾವಿರ ರೂಪಾಯಿ ಶೌಚಾಲಯಗಳ ದುರಸ್ಥಿಗೆ ಬಿಡುಗಡೆಯಾಗುತ್ತದೆ. ಸ್ಕೋಪ್ ಕೂಡ ೧೫ ಸಾವಿರ ರೂಪಾಯಿ ನೀಡಿ ಪ್ರಸನ್ನಕುಮಾರ ಆಸೆಗೆ ಬೆನ್ನೆಲುಬಾಗುತ್ತದೆ. ಗ್ರಾಮ ಸಮುದಾಯ ೫ ಸಾವಿರ ರೂಪಾಯಿ ದೇಣಿಗೆ ನೀಡುತ್ತದೆ. ಆಸಕ್ತ ಯುವಜನರನ್ನು ಜೋಡಿಸಿಕೊಂಡು ಪ್ರಸನ್ನ ಶ್ರಮದಾನಕ್ಕೆ ಮುಂದಾಗುತ್ತಾರೆ. ಸ್ವತಃ ಶೌಚಾಲಯದ ಪಿಟ್‌ಗಳನ್ನು ಅಗೆದು, ದುರಸ್ಥಿಗೊಳಿಸಿ ಸುಸ್ಥಿಗೆ ತರುತ್ತಾರೆ. ಗಾರೆ ಕೆಲಸವನ್ನೂ ಮಾಡುತ್ತಾರೆ! ಅಂತೂ ಶಾಲಾ ಮಕ್ಕಳ ಬಳಕೆಗೆ ಯೋಗ್ಯವಾಗಿ ಶೌಚಾಲಯಗಳು ಸಿದ್ಧಗೊಳ್ಳುತ್ತವೆ!

ಜನ ಸಮುದಾಯದಲ್ಲಿ ಎಷ್ಟು ಜಾಗ್ರತೆ ಮೂಡಿದೆ ಎಂದರೆ, ದಕ್ಷಿಣದ ಕಾಶಿ ಎಂದೇ ಕರೆಸಿಕೊಳ್ಳುವ ಪಂಚಲಿಂಗೇಶ್ವರ ದೇವಸ್ಥಾನ ಹಿರೇಹಂದಿಗೋಳದಲ್ಲಿದೆ. ಜನ ಸ್ವತಃ ಹಣ ಕೂಡಿಸಿ, ಶ್ರಮದಾನ ಮಾಡಿ ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಅನುವಾಗುವಂತೆ ದೇವಸ್ಥಾನದ ಪಕ್ಕ ಶೌಚಾಲಯ ಮತ್ತು ಸ್ನಾನಗೃಹ ಕಟ್ಟಲು ಮುಂದಾಗಿದ್ದಾರೆ!

ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮತ್ತು ಕೃತಿತ್ವದಿಂದ ಪ್ರಭಾವಿತನಾದ ಯುವಕ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೇವಲ ೧೨ ತಿಂಗಳ ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿಯ ವಾತಾವರಣವನ್ನೇ ಬದಲಿಸಿ, ವಿಶೇಷ ಚಿತ್ರಣ ನಿರೂಪಿಸುತ್ತಾನೆ. ಇದಕ್ಕಿಂತ ಹೆಚ್ಚಿನದ್ದನ್ನು ಸಹೃದಯ ಗೆಳೆಯನೊಬ್ಬನಿಂದ ನಾವು ನಿರೀಕ್ಷಿಸುವುದು ಅವಾಸ್ತವಿಕ ಎಂದೇ ನನ್ನ ಭಾವನೆ.

****************************************************************************************************************************

Prasanna Kumar DK - Hirehandigola Villageಪ್ರಸನ್ನಕುಮಾರ ಡಿ.ಕೆ. ಅವರ ಅನಿಸಿಕೆ –

ಮೊದಲ ಬಾರಿ ಗ್ರಾಮಕ್ಕೆ ಹೋದಾಗ “ನೀವು ಕಾಂಗ್ರೆಸ್‌ನವರಾ; ಬಿಜೆಪಿಯವರಾ?” ಅಂತ ಗ್ರಾಮಸ್ಥರು ಪ್ರಶ್ನಿಸಿದಾಗ “ನಾನು ಸ್ಕೋಪ್‌ನವ; ಅಭಿವೃದ್ಧಿ ಪಕ್ಷ ನಮ್ಮದು” ಅಂದಿದ್ದೆ. “ನೀವು ಹಿರೇಹಂದಿಗೋಳದ ತುಂಬ ಪಾಯಖಾನಿ ಕಟ್ಟಿಸಿದ್ರಿ.. ಈಗ ನೋಡ್ರಿ ನಾವು ಬರಗಾಲ ಅನುಭವಿಸುವಂತಾತು..” ಅಂದಾಗ ಅಧೀರನಾಗಿದ್ದೆ. ಸ್ಕೋಪ್‌ನ ಡಾ. ಪ್ರಕಾಶ ಭಟ್, ವಿ-ಲೀಡ್‌ನ ರಮೇಶ ಕಿಕ್ಕೇರಿ ಸರ್ ಧೈರ್ಯ ನನ್ನ ಕೈಹಿಡಿದು ನಡೆಸಿತು. ಸ್ಕೋಪ್-ಅರ್ಘ್ಯಂ ವಾಟ್‌ಸ್ಯಾನ್ ಫೆಲೊಷಿಪ್ ನನ್ನನ್ನು ಉತ್ತರ ಕರ್ನಾಟಕದವನನ್ನಾಗಿಸಿತು; ಮಾಗಿಸಿತು. ನನ್ನ ಬದುಕಿನ ಶೈಲಿಯನ್ನೇ ಬದಲಿಸಿತು. ಭಾಷೆ ಹೇಗೆ ನಮ್ಮನ್ನು ದೂರ ಮತ್ತು ಹತ್ತಿರ ತಳ್ಳುತ್ತದೆ; ಭಾವನೆ ಮತ್ತು ಮನಸ್ಸುಗಳು ಹೇಗೆ ಬೆಸೆಯುತ್ತವೆ ಎಂಬುದನ್ನು ಇಲ್ಲಿ ಕಲಿತೆ.

ಸಂಪರ್ಕ: prasannakumar2092@gmail.com / +91 8970234326

****************************************************************************************************************************

 ಲೇಖನ: ಹರ್ಷವರ್ಧನ ವಿ. ಶೀಲವಂತ, ಧಾರವಾಡ

ಇದು ಸ್ಕೋಪ್-ಅರ್ಘ್ಯಂ ‘ವಾಟ್‌ಸ್ಯಾನ್’ ಫೆಲೋಷಿಪ್ ಪ್ರೋಗ್ರಾಂ’ ಯಶೋಗಾಥೆಯ ಸರಣಿಯ ನೆಯ ಲೇಖನ

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*