ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಾಫಿ ತೋಟದಲ್ಲಿ ತೊಟ್ಟಿಲುಗುಂಡಿ, ಗದ್ದೆಬಯಲಲ್ಲಿ ನೀರು ಗುಂಡಿ

ಮಲೆನಾಡಿನಲ್ಲಿ ಎಂಟು ತಿಂಗಳು ಜಡಿ ಮಳೆ. ಅದೇ ಬೇಸಿಗೆ ಬಂತೆಂದರೆ ಜಲಕ್ಷಾಮ. ಹಾಗಾಗಿ ಬೇಸಿಗೆಯಲ್ಲಿ ಬೆಳೆರಕ್ಷಣೆಗಾಗಿ ಆ ಭಾಗದ ಕೃಷಿಕರು ಕೆಲವೊಂದು ಪಾರಂಪರಿಕ ಜಲ ಸಂರಕ್ಷಣಾ ವಿಧಾನಗಳನ್ನು ಅನುಸರಿಸುತ್ತಾರೆ. ಅವುಗಳ ಪರಿಚಯ ಇಲ್ಲಿದೆ…..

 ತೊಟ್ಟಿಲು ಗುಂಡಿ:Thottilugumdi 1

ಬೇಸಿಗೆಯಲ್ಲಿ ಕಾಫಿ ಗಿಡಗಳನ್ನು ತಂಪಾಗಿಡಲು ತೊಟ್ಟಿಲು ಗುಂಡಿ ಅಥವಾ ಕತ್ತರಿ ಗುಂಡಿ ರಚಿಸುತ್ತಾರೆ. ಇಳಿಜಾರಿಗೆ ಅಡ್ಡಲಾಗಿ ‘ತೊಟ್ಟಿಲು ಆಕಾರದಲ್ಲಿ’ ಈ ಗುಂಡಿಗಳನ್ನು ನಿರ್ಮಿಸುವುದು ವಾಡಿಕೆ. ಇಂಥಹ  ತೊಟ್ಟಿಲು ಗುಂಡಿಗಳನ್ನು ‘ಕತ್ತರಿ ಆಕಾರ’ದಲ್ಲಿ ತೋಟದುದ್ದಕ್ಕೂ ನಿರ್ಮಿಸುವುದರಿಂದ ಇವುಗಳಿಗೆ ‘ಕತ್ತರಿ ಗುಂಡಿಗಳು’ ಎಂಬ ಹೆಸರಿದೆ.

ಸಾಮಾನ್ಯವಾಗಿ ನಾಲ್ಕು ಕಾಫಿ ಗಿಡಗಳ ನಡುವೆ ಒಂದು ಗುಂಡಿಯನ್ನು ನಿರ್ಮಿಸಲಾಗುತ್ತದೆ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ನೀರು ಹಾಗೂ ಅದರೊಂದಿಗೆ ಕೊಚ್ಚಿ ಬರುವ ಮಣ್ಣನ್ನು ಈ ಗುಂಡಿಗಳು ತಡೆಯುತ್ತವೆ. ಹೀಗೆ ಫಲವತ್ತಾದ ಮಣ್ಣು ತುಂಬಿಕೊಂಡ ಗುಂಡಿಗೆ ಕಾಫಿ ಗಿಡಗಳ ಎಲೆ ಹಾಗೂ ನೆರಳಿನ ಮರಗಳ ತರಗೆಲೆಗಳು ಜೊತೆಯಾಗುತ್ತವೆ. ಗುಂಡಿಯೊಳಗೆ ಆರೇಳು ತಿಂಗಳು ಕಾಲ ಕೊಳೆಯುವ ತರಗೆಲೆಗಳು ಉತ್ತಮ ಗೊಬ್ಬರವಾಗುತ್ತವೆ. ಇದೇ ಗೊಬ್ಬರವನ್ನು ಪಕ್ಕದಲ್ಲಿದ್ದ ನಾಲ್ಕೂ ಕಾಫಿಗಿಡಗಳಿಗೆ ಬಳಸುತ್ತಾರೆ. ತೊಟ್ಟಿಲು ಗುಂಡಿಗಳು ಹೆಚ್ಚೂ ಕಡಿಮೆ ಖಾಯಂ ರಚನೆಗಳು. ನೀರನ್ನು ಹಿಡಿದಿಡುವ ಹಾಗೂ ಗೊಬ್ಬರವನ್ನೂ ಉತ್ಪಾದಿಸುವ ಇವು ಬಹೋಪಯೋಗಿ.

ನೀರು ಗುಂಡಿ:

ಇದು ಮಲೆನಾಡಿನ ಗದ್ದೆ ಬಯಲಿನಲ್ಲಿ ಕಾಣುವ ವಿಶೇಷ ಜಲ ಸಂರಕ್ಷಣಾ ವಿಧಾನ. ಈ ರಚನೆಗಳನ್ನು ಬೇಸಿಗೆಯಲ್ಲಿ ಮಾತ್ರ ನಿರ್ಮಿಸುತ್ತಾರೆ. ತೊಟ್ಟಿಲು ಗುಂಡಿ ಕಾಫಿ ತೋಟಗಳಲ್ಲಿ ಕಂಡರೆ, ನೀರು ಗುಂಡಿ ಗದ್ದೆ ಬಯಲಿನಲ್ಲಿರುತ್ತವೆ. ಅಲ್ಲದೆ ತೊಟ್ಟಿಲು ಗುಂಡಿ ಶಾಸ್ವತ ರಚನೆಯಾದರೆ ನೀರು ಗುಂಡಿ ತಾತ್ಕಾಲಿಕ.

neeru gundiಮಲೆನಾಡ ಗದ್ದೆಗಳಲ್ಲಿ ಮಳೆಗಾಲದಲ್ಲಿ ಭತ್ತ ಬೆಳೆದರೆ, ಭತ್ತ ಕಟಾವಾದ ನಂತರ ಬೇಸಿಗೆಯಲ್ಲಿ ಅದೇ ಗದ್ದೆಗಳಲ್ಲಿ ದ್ವಿಧಳ ಧಾನ್ಯ, ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ. ಇಲ್ಲಿ ಬೋರ್‌ವೆಲ್‌ಗಳಿಲ್ಲ, ದೊಡ್ಡ ದೊಡ್ಡ ಕಾಲುವೆಗಳಿಲ್ಲ. ಬೆಟ್ಟ-ಗುಡ್ಡಗಳಿಂದ ಬರುವ ಬಸಿ ನೀರನ್ನು ಶೇಖರಿಸಿ ಬಳಸಿ ಬೆಳೆ ಬೆಳೆಯಬೇಕು. ಇಂಥ ಬಸಿ ನೀರು ಶೇಖರಣೆಯ ಜಲ ಪಾತ್ರೆಯೇ ’ನೀರು ಗುಂಡಿ’ ವಿಧಾನ.

ಭತ್ತ ಕೊಯ್ಲಾದ ಮೇಲೆ ಗದ್ದೆಯಲ್ಲಿ ೧೦-೧೨ ಅಡಿ ಅಗಲ ಅಥವಾ ಅನುಕೂಲಕ್ಕೆ ತಕ್ಕಂತೆ ಉದ್ದದ ಏರುಮಡಿಗಳನ್ನು ಮಾಡುತ್ತಾರೆ. ಇಂತಹ ಎರಡು ಏರುಮಡಿಗಳ ನಡುವೆ ಸಾಲಾಗಿ ಕಿರುಗಾಲುವೆ ತೆಗೆಯುತ್ತಾರೆ. ಕಾಲುವೆಯ ನಡುವೆ (ಅಗತ್ಯಕ್ಕ ತಕ್ಕಂತೆ) ಒರಳಕಲ್ಲಿನ ಆಕಾರದಲ್ಲಿ ಗುಂಡಿಗಳನ್ನು ರಚಿಸುತ್ತಾರೆ. ಇದೇ ನೀರು ಗುಂಡಿ. ಗದ್ದೆ ಮೇಲ್ಭಾಗದಲ್ಲಿರುವ ಕೃಷಿ ಹೊಂಡ, ಬಸಿಗಾಲುವೆ, ತೊಟ್ಟಿಲುಗುಂಡಿಗಳಲ್ಲಿ ಮಳೆಗಾಲದಲ್ಲಿ ಇಂಗಿದ ನೀರು ಬಸಿದು ಬೇಸಿಗೆಯ ಹೊತ್ತಿಗೆ ಈ ಕಿರುಗಾಲುವೆ ಮೂಲಕ ನೀರು ಗುಂಡಿಗಳನ್ನು ತುಂಬಿಕೊಳ್ಳುತ್ತವೆ.

ಬೇಸಿಗೆ ಬೆಳೆಗೆ ಆಸರೆ!

ಭತ್ತ ಕೊಯ್ಲಾದ ಮೇಲೆ ಗದ್ದೆಗಳಲ್ಲಿ ತರಕಾರಿ ಬೆಳೆಯುವುದು ಮಲೆನಾಡಿನ ಸಂಪ್ರದಾಯ. ತರಕಾರಿ ಬೆಳೆಯಲು  ಇದೇ ನೀರು ಗುಂಡಿಯ ನೀರನ್ನು ಬಳಸಲಾಗುತ್ತದೆ. ಇದು ಏತ nela-jala - neerugundiನೀರಾವರಿಗಿಂತಲೂ ಸರಳವಾದ ವಿಧಾನ ಎಂಬುದು ಸ್ಥಳೀಯ ರೈತರ ಅಭಿಪ್ರಾಯ.

ಗದ್ದೆಗಳ ನಡುವೆ ನೀರು ಗುಂಡಿಗಳ ರಚನೆಯಿರುವುದರಿಂದ ಬೆಳೆಗಳಿಗೆ ನೀರು ಹಾಯಿಸುವುದು ಸುಲಭ ಎನ್ನುವ  ಸಕಲೇಶಪುರ ಸಮೀಪದ ಯೆಡೆಹಳ್ಳಿಯ ವೈ.ವಿ. ಸೋಮಶೇಖರ್ ಅವರು, ಪ್ರತಿ ಬೇಸಿಗೆಯಲ್ಲಿ ನೀರು ಗುಂಡಿಯನ್ನೇ ಅವಲಂಬಿಸಿಕೊಂಡು ಮೆಣಸಿನ ಕಾಯಿ ಬೆಳೆಯುತ್ತಾರೆ. ಯೆಡೆಹಳ್ಳಿಯ ರೈತ ಮಹಿಳೆ ಯಶೋಧಮ್ಮ ಈ ವಿಧಾನದಲ್ಲಿ ನೀರು ಸಂಗ್ರಹಿಸಿ ಬಳಸಿ ಒಂದೆರಡು ಗುಂಟೆಯಲ್ಲಿಯ ತರಹೇವಾರಿ ತರಕಾರಿಗಳನ್ನು ಬೆಳೆಯುತ್ತಾರೆ. ಒಂದು ಸಾಲು ಬೀನ್ಸ್, ಇನ್ನೊಂದು ಸಾಲು ಬದನೆ, ಮತ್ತೊಂದು ಸಾಲಿಗೆ ಮೆಣಸಿನಕಾಯಿ, ನಾಟಿ ಶುಂಠಿ, ಆಲೂಗೆಡ್ಡೆ  ಹೀಗೆ ಮಿಶ್ರ ತರಕಾರಿ ಬೆಳೆಯುತ್ತಾರೆ.

nela-jala- Neeru gundi Traditnal knoledge‘ನೀರು ಗುಂಡಿಯಲ್ಲಿ ಸದಾ ನೀರಿರುತ್ತದೆ. ಖಾಲಿಯಾಗುವುದಿಲ್ಲ. ಇಂದು ಸಂಜೆ ನೀರು ಪೂರ್ತಿ ಖಾಲಿ ಮಾಡಿದರೂ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಜೋಪು ಹರಿದು ನೀರು ತುಂಬಿಕೊಳ್ಳುತ್ತದೆ. ಮತ್ತೆ ಮಳೆಗಾಲದವರೆಗೂ ಹೀಗೆ ನೀರು ಬಳಸಿಕೊಂಡೇ ತರಕಾರಿ ಬೆಳೆಯುತ್ತೇವೆ’ ಎನ್ನುತ್ತಾರೆ ಯಶೋಧಮ್ಮ.

ಬೇಸಿಗೆಯಲ್ಲಿ ನೀರು ಗುಂಡಿಯನ್ನು ಅವಲಂಬಿಸಿ ಈ ಭಾಗದ ರೈತರು ಮಾರಾಟ ಮಾಡುವಷ್ಟು ಪ್ರಮಾಣದಲ್ಲಿ ತರಕಾರಿ ಬೆಳೆದಿರುವುದೂ ಉಂಟು. ಈ ವಿಧಾನದಲ್ಲಿ ಸಾಧ್ಯವಾದಷ್ಟೂ ಎರೆಗೊಬ್ಬರ, ಹಸಿರೆಲೆಗೊಬ್ಬರ ಬಳಸಿ ಸಾವಯವ ಕೃಷಿ ಪದ್ಧತಿಯಲ್ಲೇ ತರಕಾರಿಗಳನ್ನು ಬೆಳೆಯುವುದರಿಂದ, ಇವರ ಮನೆ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಕೊಳ್ಳುವ ಗ್ರಾಹಕರಿಗೂ ಒಳ್ಳೆಯದು. ಅಲ್ಲದೆ ಬಸಿ ನೀರಿನ ಸಮರ್ಥ ಬಳಕೆಯೂ ಆದಂತಾಯಿತು.

ಇಷ್ಟೆಲ್ಲ ಉಪಯೋಗವಾಗುವ ನೀರು ಗುಂಡಿ ರಚನೆ ಶಾಶ್ವತವಲ್ಲ. ಬೇಸಿಗೆಯ ಬೆಳೆ ಕಟಾವಿನ ನಂತರ ಗುಂಡಿಗಳನ್ನು ಮುಚ್ಚಿ ಮಟ್ಟ ಮಾಡಿ ಅದೇ ಜಾಗದಲ್ಲಿ ಭತ್ತ ಬೆಳೆಯಲಾಗುತ್ತದೆ. ಇದು ತುಸು ಶ್ರಮ ಅನಿಸಿದರೂ ಪಂಪು ಮೋಟಾರ್ ಬೇಕಿಲ್ಲದ, ವಿದ್ಯುತ್ ಅವಶ್ಯಕತೆ ಇಲ್ಲದೆಯೇ ನೀರು ಒದಗಿಸಲು ಇದಕ್ಕಿಂತ ಅತ್ಯುತ್ತಮ ವಿಧಾನ ಇನ್ನೊಂದಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.

 ಚಿತ್ರ-ಲೇಖನ: ಗಾಣಧಾಳು ಶ್ರೀಕಂಠ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*