ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರಿನ ‘ಧರ್ಮ’

ಜಲ ಚಕ್ರ ಹಾಗೂ ಜೀವನ ಚಕ್ರವೊಂದೇ ಎಂಬುದನ್ನು ನಾವು ಮರೆಯುತ್ತೇವೆ”

-        ಜ಼ಾಕ್ವೆಸ್ ಕೊಸ್ಟೊ, ಜಲ ಸಂರಕ್ಷಕ

rivers wallpapersನೀರು ಪರಿಶುದ್ಧತೆ, ಸ್ಪಷ್ಟತೆ ಮತ್ತು ಪ್ರಶಾಂತತೆಯ ಸಂಕೇತ. ಈಗ ನಿಮ್ಮನ್ನು ನೀವೇ ಶುದ್ಧ ನೀರು ಎಂಬಂತೆ ಪರಿಭಾವಿಸಿಕೊಳ್ಳಿ: ಯಾರೋ ಬಂದು ನಿಮ್ಮನ್ನು ಎತ್ತಿ ಒಂದು ಸಣ್ಣ ಬಟ್ಟಲಿಗೆ ಸುರಿದರು ಎಂದುಕೊಳ್ಳಿ, ಆ ಬಟ್ಟಲಿನ ನೀರಾಗಿರುವ ನಿಮ್ಮನ್ನು ಬಳಸಿ ಅವರ ಕೊಳೆಯಾಗಿದ್ದ ಮುಖ, ಕೈ ಕಾಲುಗಳನ್ನು ತೊಳೆದುಕೊಂಡರು ಎಂದಾಗ ನೀವು ಕೊಳಕಾದಿರಿ ಅಂದರೆ ಪರಿಶುದ್ಧ ನೀರು ಕೊಳಕಾಯಿತು; ಕೊಳಕಾಗಿದ್ದ ಅವರು ತಾತ್ಕಾಲಿಕವಾಗಿ ಸ್ವಚ್ಚವಾದರು. ಆದರೆ ವಿನಾಕಾರಣ ಶಾಶ್ವತವಾಗಿ ಕೊಳಕಾಗಬೇಕಾಗಿ ಬಂದ ನಿಮ್ಮ, ಅಂದರೆ ನೀರಿನ ಮನಸ್ಥಿತಿ ಹೇಗಿರುತ್ತದೆ ಊಹಿಸಿಕೊಳ್ಳಿ. ಹೀಗೆ ಮನುಷ್ಯನ ಅಗತ್ಯ, ಅವಶ್ಯಕತೆ ಹಾಗೂ ಬಯಕೆಗಳಿಗೆ ತಕ್ಕಂತೆ ವಿವೇಚನೆಯಿಲ್ಲದೆಯೇ ನೀರನ್ನು ಬಳಸುತ್ತ ಬಂದ ಮಾನವನಿಂದಾಗಿ ಭೂಮಿಯಲ್ಲಿನ ಸುಮಾರು ಒಂದೂವರೆ ಕೋಟಿ ಜೀವಿಗಳ ಜೀವಜಲವಾಗಿರುವ ನೀರು ಪಾಷಾಣವಾಗುತ್ತಿದೆ.

ನೀರಿಗೆ ಕೊಳೆಯನ್ನು ತೊಳೆಯುವ ಗುಣವಿದೆ, ಅದರ ಈ ಗುಣವೇ ಅದು ಅತ್ಯಂತ ಕಲುಷಿತಗೊಳ್ಳಲು ಕಾರಣವಾಗಿದೆ. ಅಂದರೆ ನೀರು ಕಶ್ಮಲಗಳೊಂದಿಗೆ ಸೇರಿ ತನ್ನ ಮೂಲ ಗುಣವನ್ನು ಕಳೆದುಕೊಳ್ಳುವುದಿಲ್ಲ ಬದಲಿಗೆ ಕಶ್ಮಲಗಳನ್ನು ತನ್ನ ಒಡಲಲ್ಲಿ ಹೊತ್ತು ಸಾಗಿಸುತ್ತದೆ. ಇದು ನೀರಿನ ದೊಡ್ಡತನ. ಕಲುಷಿತಗೊಂಡ  ನೀರನ್ನು ಸೋಸಿ ಬಳಕೆ ಯೋಗ್ಯ ಮಾಡಬಹುದೆಂಬ ಕಾರಣದಿಂದಾಗಿ ಇನ್ನೂ ನಾವೆಲ್ಲ ಜೀವಂತವಾಗಿದ್ದೇವೆ. ಮನುಷ್ಯನ ದೇಹದ ಶೇ. ೮೦ ಭಾಗ ನೀರಿನಿಂದ ಕೂಡಿದೆ, ಆಹಾರವಿಲ್ಲದಿದ್ದರೂ ಕೆಲ ಕಾಲ ಇರಬಹುದು, ಗಾಳಿ ಮತ್ತು ನೀರಿಲ್ಲದೆ ಇರಲಾಗುವುದಿಲ್ಲ ಅಂತ ಎಲ್ಲರಿಗೂ ಗೊತ್ತು. ಇಂತಾ ನೀರಿಗೆ ನಾಗರಿಕತೆಯ ಆರಂಭದಿಂದಲೂ ಹೆಚ್ಚಿನ ಮಹತ್ವವನ್ನು ಮಾನವ ನೀಡಿದ್ದಾನೆ, ಅಂತೆಯೇ ಮನುಷ್ಯ ಸೃಷ್ಟಿಸಿಕೊಂಡಿರುವ ಈ ಭೂಮಿಯ ಮೇಲಿನ ಎಲ್ಲ ಧರ್ಮಗಳಲ್ಲೂ ನೀರಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ.

ಬೌದ್ಧ

ಟಿಬೆಟ್‌ನ ಬೌದ್ಧ ಧರ್ಮೀಯರು ಮೊದಲಿಗೆ ಬುದ್ಧನ ಪ್ರತಿಮೆಯ ಮುಂದೆ ಕುಡಿಯುವ ನೀರು ತುಂಬಿದ ಒಂದು ಅಥವಾ ಏಳು ಬಟ್ಟಲುಗಳನ್ನು ಇರಿಸಿ ಪ್ರಾರ್ಥನೆಯನ್ನು ಆರಂಭಿಸುತ್ತಾರೆ.  ಬೌದ್ಧರ ಮರಣದ ಸಂದರ್ಭದಲ್ಲಿ ಮೃತದೇಹ ಹಾಗೂ ಭಿಕ್ಕುಗಳ ನಡುವೆ ಒಂದು ಬಟ್ಟಲನ್ನು ಇರಿಸಿ ಆ ಬಟ್ಟಲಿಗೆ ನೀರನ್ನು ಸುರಿಯಲಾಗುತ್ತದೆ. ನೀರು ತುಂಬಿ ಹೊರಚೆಲ್ಲಿದಂತೆ ಭಿಕ್ಕುಗಳು, “ಮಳೆ ನೀರು ನದಿಗಳನ್ನು ತುಂಬಿ ಹರಿಸಿ ಕಡಲನ್ನು ಸೇರಿಸಿದಂತೆ, ಇಲ್ಲಿ ನೀಡಲಾದುದು ಸತ್ತವರನ್ನು ತಲುಪಲಿ” ಎಂದು ಪಠಿಸುತ್ತಾರೆ.

ಹಿಂದೂ

ನೀರಿಗೆ ಆಧ್ಯಾತ್ಮಿಕವಾಗಿ ಶುದ್ಧೀಕರಿಸುವ ಗುಣವಿದೆಯೆಂದು ನಂಬಿರುವುದರಿಂದ ಹಿಂದೂ ಧರ್ಮದಲ್ಲಿ ನೀರಿಗೆ ವಿಶೇಷ ಸ್ಥಾನವಿದೆ. ಇಲ್ಲಿ ಎಲ್ಲ ಜಲ ಮೂಲಗಳೂ ಪವಿತ್ರ. ವಿಶೇಷವಾಗಿ ನದಿಗಳು; ಗಂಗಾ, ಯಮುನಾ, ಗೋದಾವರಿ, ಸರಸ್ವತಿ ನರ್ಮದಾ, ಸಿಂಧು ಹಾಗೂ ಕಾವೇರಿ ಇವು ಸಪ್ತ ಪವಿತ್ರ ನದಿಗಳೆಂದು ಪರಿಗಣಿತವಾಗಿವೆ. ಹೀಗಾಗಿ ಬಹುಪಾಲು ಎಲ್ಲ ಪ್ರಸಿದ್ಧ ಧರ್ಮ ಕ್ಷೇತ್ರಗಳು ಹಾಗೂ ಸ್ಮಶಾನಗಳು ಯಾವುದಾದರೊಂದು ನದಿಯ ದಡದಲ್ಲೇ ನಿರ್ಮಾಣಗೊಂಡಿರುವುದನ್ನು ಕಾಣಬಹುದು. ಅಂತ ನದಿಗಳ ನೀರು ಎಷ್ಟೇ ಕಲುಷಿತವಾಗಿದ್ದರೂ ಆ ನದಿಯಲ್ಲಿ ಮಿಂದೆದ್ದರೆ ಪಾಪ ನಾಶವಾಗಿ ಪುಣ್ಯ ಶೇಖರವಾಯಿತೆಂದು ಭಾವಿಸಲಾಗುತ್ತದೆ.

ಬೆಳಗಿನ ಆರಂಭದ ಶೌಚ, ಪ್ರಾಥಮಿಕ ಸ್ವಚ್ಚತೆಗಳು ಹಾಗೂ ಸ್ನಾನಕ್ಕೆ ನೀರು ತೀರಾ ಅವಶ್ಯಕ. ಇಲ್ಲಿ ಸಾವಿನ ಸಂದರ್ಭದಲ್ಲಿ ಹೂಳುವವರು, ಹೆಣವನ್ನು ಮಣ್ಣು ಮಾಡಿದ ನಂತರ ಸತ್ತವರ ಮಗನ ಹೆಗಲಿಗೆ ನೀರು ತುಂಬಿದ ಮಣ್ಣಿನ ಕೊಡವೊಂದನ್ನು ಇರಿಸಿ, ಸಮಾಧಿಯ ಸುತ್ತ ಮೂರು ಸುತ್ತು ಬರುವಂತೆ ಹೇಳಿ, ಪ್ರತಿಯೊಂದು ಸುತ್ತಿಗೂ ಆ ಕೊಡಕ್ಕೆ ಒಂದೊಂದು ರಂಧ್ರವನ್ನು ಮಾಡುತ್ತಾರೆ, ಆಗ ಸಮಾಧಿಯ ಸುತ್ತ ರೂಪುಗೊಳ್ಳುವ ನೀರಿನ ಮೂರು ಗೆರೆಗಳು ಸತ್ತು ಸಮಾಧಿ ಸೇರಿದ ಮನುಷ್ಯ ಮತ್ತೆ ಪ್ರೇತವಾಗಿ ಹಿಂದಿರುಗದಿರಲಿ ಎಂದು ಹಾಕುವ ಗಡಿರೇಖೆಗಳಾಗಿರುತ್ತವೆ ಎಂಬ ನಂಬಿಕೆ. ಈ ವಿಧಿ ಹೂಳದೆ ಸುಡುವವರಲ್ಲೂ ಇದೆ. ಅಂತ್ಯಕ್ರಿಯೆ ಬಳಿಕ ಸಮೀಪದ ನದಿ ಅಥವಾ ಹಳ್ಳ/ಬಾವಿಯಲ್ಲಿ ಎಲ್ಲರೂ ಮಿಂದು ಮನೆ ಸೇರುತ್ತಾರೆ. ಸತ್ತವರ ಆತ್ಮಕ್ಕೆ ಸದ್ಗತಿ ನೀಡುವುದಕ್ಕಾಗಿ ಬಿಡುವ ತರ್ಪಣ ಎಂಬುದೂ ಸಹ ನೀರಿನಿಂದಲೇ ನಡೆಯುವ ಕಾರ್ಯ.

ಕ್ರೈಸ್ತ

ಕ್ರೈಸ್ತರನ್ನು ಪಾಪಗಳಿಂದ ಶುದ್ಧೀಕರಿಸುವ ಒಂದು ಆಚರಣೆಯಾದ ಬ್ಯಾಪ್ಟಿಸಂನಲ್ಲಿ ನೀರನ್ನು ಪ್ರಮುಖವಾಗಿ ಎಲ್ಲ ಪಂಗಡಗಳ ಚರ್ಚುಗಳಲ್ಲೂ ಬಳಸಲಾಗುತ್ತದೆ. ಪ್ರಾರಂಭದಲ್ಲಿ ಚರ್ಚುಗಳಲ್ಲಿ ಬ್ಯಾಪ್ಟಿಸಂಗೆ ಒಳಗಾಗುವ ಮನುಷ್ಯನನ್ನ ನೀರಿನ ತೊಟ್ಟಿಯಲ್ಲಿ ನಿಲ್ಲಿಸಿ ಮೇಲಿನಿಂದ ನೀರನ್ನು ಸುರಿಯಲಾಗುತ್ತಿತ್ತು ಹಾಗೂ ಆತನನ್ನ ನೀರಿನ ತೊಟ್ಟಿಯಲ್ಲಿ ಮುಳುಗಿಸುತ್ತಿದ್ದುದೂ ಉಂಟು. ಆಧುನಿಕ ಚರ್ಚುಗಳಲ್ಲಿ ಮನುಷ್ಯನನ್ನ ನಿಲ್ಲಿಸಿ ಮೂರು ಸಲ ನೀರನ್ನು ಸುರಿಯಲಾಗುತ್ತದೆ. ಅಲ್ಲದೆ ಪ್ರಾರ್ಥನೆಗಳ ಸಮಯದಲ್ಲಿ ಎಲ್ಲರ ಮೇಲೂ ಪವಿತ್ರ ನೀರನ್ನು ಪ್ರೋಕ್ಷಿಸುವ ಪದ್ಧತಿ ೯ನೇ ಶತಮಾನದಲ್ಲಿ ಆರಂಭವಾಯಿತು. ಚರ್ಚಿನ ಬಾಗಿಲಲ್ಲಿ ಪವಿತ್ರ ನೀರಿನ ಬಟ್ಟಲುಗಳನ್ನು ಇರಿಸಿ, ಒಳಗೆ ಬರುವವರೇ ಪ್ರೋಕ್ಷಿಸಿಕೊಂಡು ಬರುವ ವ್ಯವಸ್ಥೆಯೂ ಇದೆ.

ಇಸ್ಲಾಂ

ದಿನಕ್ಕೆ ಐದು ಬಾರಿ ಮಾಡಲಾಗುವ ಪ್ರಾರ್ಥನೆಗೂ ಮೊದಲು ತಮ್ಮನ್ನು ತಾವು ಹೇಗೆ ನೀರಿನಿಂದ ಸ್ವಚ್ಚಗೊಳಿಸಿಕೊಳ್ಳಬೇಕೆಂದು ಕುರಾನ್‌ನಲ್ಲಿ (೫:೭/೮) ಹೇಳಿದೆ. ಸಾಮಾನ್ಯವಾಗಿ ಮಸೀದಿಗಳಲ್ಲಿ ಶುದ್ಧ ನೀರಿನ ಕಡಿಮೆ ಆಳದ ಕೊಳವೊಂದು ಇದ್ದೇ ಇರುತ್ತದೆ. ಅಲ್ಲಿ ಮೊದಲಿಗೆ ಮುಖವನ್ನು ತೊಳೆದುಕೊಳ್ಳಬೇಕು ನಂತರ ತಲೆಯನ್ನು ತೇವದ ಕೈಗಳಿಂದ ಸವರಿಕೊಳ್ಳಬೇಕು. ಎರಡೂ ಕೈಗಳನ್ನು ವಿಶಿಷ್ಟ ಶೈಲಿಯಲ್ಲಿ ಮೊಣಕೈವರೆಗೆ ತೊಳೆದುಕೊಳ್ಳಬೇಕು. ಕಾಲುಗಳನ್ನು ಹಿಮ್ಮಡಿಯಿಂದ ಮೇಲೆ ಮೊಣಕಾಲುಗಳವರೆಗೆ ತೊಳೆದುಕೊಳ್ಳಬೇಕು. ನೀರು ಲಭ್ಯವಿಲ್ಲದೆಡೆ, ಉದಾ; ಮರಳುಗಾಡುಗಳಲ್ಲಿ ನೀರಿನ ಬದಲು ಮರಳನ್ನು ಬಳಸಿ ಸ್ವಚ್ಚಗೊಳಿಸಿಕೊಳ್ಳಬೇಕಾಗುತ್ತದೆ. ಈ ಧರ್ಮದಲ್ಲಿ ಪರಿಶುದ್ಧಗೊಳ್ಳುವ ಕಾರಣಕ್ಕಾಗಿ ಮೂರು ಸಂದರ್ಭಗಳಲ್ಲಿ ಸ್ನಾನ ಮಾಡುವುದು ಕಡ್ಡಾಯ, ಲೈಂಗಿಕ ಕ್ರಿಯೆ ನಡೆಸಿದ ನಂತರ ಸ್ನಾನ ಮಾಡುವುದು ಕಡ್ಡಾಯ, ಶುಕ್ರವಾರದ ಪ್ರಾರ್ಥನೆಗೆ ಮೊದಲು ಹಾಗೂ ಎರಡು ಪ್ರಮುಖವಾದ ಹಬ್ಬಗಳ ದಿನಗಳಲ್ಲಿ ಹಾಗೂ ಕುರಾನ್ ಗ್ರಂಥವನ್ನು ಮುಟ್ಟುವ ಮೊದಲು, ಮತ್ತು ಸತ್ತವರನ್ನು ಹೂಳುವ ಮೊದಲು ಶವಕ್ಕೆ ಸ್ನಾನ ಮಾಡಿಸುವುದು ಕಡ್ಡಾಯ.

ಕೆಲವು ಧಾರ್ಮಿಕ ವಿಧಿಗಳು ಪ್ರಾರಂಭದ ಹಂತದಲ್ಲಿ ಸ್ವಚ್ಛತೆಯ ದೃಷ್ಟಿಯಿಂದ ಕಡ್ಡಾಯಗೊಂಡವಾದರೂ, ಕಾಲಾನುಕ್ರಮದಲ್ಲಿ ಕೆಲವೊಮ್ಮೆ ಅರ್ಥರಹಿತ ಆಚರಣೆಗಳಾಗಿಯೂ ಕಂಡುಬರಬಹುದು.

ಲೇಖನ: ಕುಚ್ಚಂಗಿ ಪ್ರಸನ್ನ, ಬೆಂಗಳೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*