ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನೀರು ನಮ್ಮ ತಿಳಿವಳಿಕೆಯಾಗಲಿ; ಕೊರಗಾಗದಿರಲಿ!

ಧಾರವಾಡ, ಜೂ.೧೫: ನೀರು ನಮ್ಮ ತಿಳಿವಳಿಕೆಯಾಗಬೇಕೆ ವಿನಃ ಕೊರಗಾಗಬಾರದು. ಜಲ ಸಾಕ್ಷರತೆಯ ಮೂಲಕ ಜಲ ಸಂರಕ್ಷಣೆಯತ್ತ ನಾವೆಲ್ಲರೂ ಚತ್ತೈಸುವಂತಾಗಬೇಕು ಎಂದು ‘ಸ್ಕೋಪ್’ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನೆಲ-ಜಲ ನಿರ್ವಹಣೆಯ ತಜ್ಞ ಡಾ. ಪ್ರಕಾಶ ಭಟ್ ಹೇಳಿದರು.

DR PRAKASH BHAT IN AN INTERACTIONಸಮುದಾಯದ ಸಹಭಾಗಿತ್ವ ಮತ್ತು ಸಬಲೀಕರಣ ಸಂಸ್ಥೆ – ಸ್ಕೋಪ್; ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ – ನಬಾರ್ಡ್, ನೇಚರ್ ರಿಸರ್ಚ್ ಸೆಂಟರ್ – ಎನ್‌ಆರ್‌ಸಿ, ಹಾಗೂ ಜಲಾಂದೋಲ ಮತ್ತು ಸ್ಥಳೀಯ ನಾಲ್ಕಕ್ಕೂ ಹೆಚ್ಚು ಸಂಘನೆಗಳ ಸಹಕಾರದಲ್ಲಿ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಇಂದು (೧೫ನೇ ಜೂನ್, ಬುಧವಾರ) ಹಮ್ಮಿಕೊಳ್ಳಲಾಗಿದ್ದ ‘ಜಲ ಸಾಕ್ಷರತೆ – ಜಲ ಸಂರಕ್ಷಣೆ’ ಒಂದು ದಿನದ ಯುವಜನತೆ ಮತ್ತು ನಾಗರಿಕರ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯುವ ಮನಸ್ಸುಗಳಲ್ಲಿ ನೀರಿನ ಹಿತ-ಮಿತ ಬಳಕೆಯ ಬಗ್ಗೆ ವೈಚಾರಿಕ ಬೀಜ ಬಿತ್ತುವ ಪ್ರಯತ್ನ ಈ ಕಾರ್ಯಾಗಾರ. ಆ ಬೀಜಕ್ಕೆ ವೈಚಾರಿಕ ನೀರೇರೆಯುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದ ಡಾ. ಪ್ರಕಾಶ ಭಟ್ ಅವರು, ನೀರಿನ ಸಮಸ್ಯೆಗಳನ್ನು ಗುರುತಿಸಬೇಕು ಎಂಬ ತವಕ ನಮ್ಮಲ್ಲಿ ಪಲ್ಲವಿಸಬೇಕು. ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಏನು ಮಾಡಬೇಕು ಎಂಬ ಅರಿವು ಮೂಡಲು ನೆಲ ಮತ್ತು ಜಲ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳ ಅನುಭವದ ಪ್ರಾಯೋಗಿಕ ಜ್ಞಾನ ನಮಗೆ ಪಾಠ. ನಮ್ಮ ವೈಯಕ್ತಿಕ ಮಟ್ಟದ ಜಲ ಜಾಗೃತಿ ಕೆಲಸಗಳಿಗೂ ಈ ಕಲಿಕೆ  ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

SHEELA BHANDARAKAR ADDRESSING THE GATHERING. DR PRAKASH BHAT SEEN IN THE PHOTOಕಾರ್ಯಾಗಾರದ ಔಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶೀಲಾ ಭಂಡಾರಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಒಣ ಬರದ ಪರಿಸ್ಥಿತಿ ಕಳವಳಕಾರಿಯಾಗಿದೆ. ಕುಡಿಯುವ ನೀರಿಗೆ ಜನ-ಜಾನುವಾರು ಹಾಹಾಕಾರ ಎದುರಿಸುವ ಮಟ್ಟಿಗೆ ಬಂದಿದೆ. ಸವಳು ಮರಭೂಮಿ ಹೆಚ್ಚುತ್ತಿದೆ. ಫಲವತ್ತಾದ ಭೂಮಿ ಅನ್ನವಿಕ್ಕದೆ ಬರಡಾಗುತ್ತಿದೆ. ರಾಜ್ಯದ ೧೭೯ ತಾಲೂಕುಗಳು ಬರ ಪೀಡಿತವಾಗಿವೆ ಎಂದು ಘೋಷಿಸಲಾಗಿದೆ. ಮತ್ತೊಂದೆಡೆ ಜನಸಂಖ್ಯೆ ಬೆಳೆಯುತ್ತಿದೆ. ನೀರು ಜೀವ ದ್ರವ್ಯವಾಗಿದ್ದು, ಬದುಕಿಗೆ ಆಧಾರವಾಗಿದೆ ಎಂದರು.

ಜಲ ಯೋಧ ಅಯ್ಯಪ್ಪ ಮಸಗಿ ಅವರ ಮಾತು ‘ನೀರಿನ ಪೂರೈಕೆ ಕಡಿಮೆಯಾಗಿಲ್ಲ; ಅಕಾಲಿಕ ಪೂರೈಕೆ ಜಾಸ್ತಿಯಾಗಿ ವ್ಯತ್ಯಾಸವಾಗುತ್ತಿದೆ’  ಎಂಬುದನ್ನು ಉಲ್ಲೇಖಿಸಿದ ಶೀಲಾ ಅವರು, ಓಡುವ ಮಳೆ ನೀರನ್ನು ನಡೆಯುವಂತೆ, ಹಾಗೆ ನಡೆಯುವ-ಹರಿಯುವ ನೀರನ್ನು ತೆವಳುವಂತೆ, ತೆವಳುವ ನೀರನ್ನು ನಿಲ್ಲುವಂತೆ, ನಿಂತ ನೀರನ್ನು ಇಂಗುವಂತೆ ಮಾಡಬೇಕಾದ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ. ಸೃಜನಶೀಲ ಮಾದರಿಯ ಜಲ ಸಂರಕ್ಷಣೆ ಯೋಚನೆಗಳು ಬದಲಾವಣೆಯ ಹರಿಕಾರವಾಗಿ ಯುವಜನತೆಯಿಂದ ಹೊರಹೊಮ್ಮಲಿ ಎಂಬ ಉದ್ದೇಶದಿಂದ, ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.

ಆತ್ಮದೀಪ ಪರಿಸರ ಸಂಘಟನೆಯ ಡಾ. ಸಂಜೀವ್ ಕುಲಕರ್ಣಿ ಅವರು ಬರೆದ, ನನ್ನ ನಾಡಿನ ನದಿಗಳೆಲ್ಲ ಬಾಯಾರಿವೆ; ಬತ್ತಿ ಆರಿದ ಕಣ್ಣ ಕೆರೆಗಳು, ಇಂಗಿ ಹೋದ ಕರುಳ ಒರತೆ, ಒಣಗಿ ನಿಂತ ಎದೆಯ ಹೂಗಳು, ಹರಿದ ಸೀರೆ ಬಿರಿದ ಒಡಲು.. ಕಾವ್ಯವನ್ನು ಪ್ರಾರ್ಥನೆಯಾಗಿ ಬಾಲ ಬಳಗ ಶಾಲೆಯ ೧೦ನೇ ತರಗತಿಯ ವಿದ್ಯಾರ್ಥಿ ಸೌರಭ ಸುಶ್ರಾವ್ಯವಾಗಿ ಹಾಡಿದ್ದು ವಿಶೇಷವಾಗಿತ್ತು.

ಸ್ಕೋಪ್ ಸಂಸ್ಥೆಯ ರಂಗನಾಥ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು. ನೇಚರ್ ರಿಸರ್ಚ್ ಸೆಂಟರ್‌ನ ಪ್ರಕಾಶ ಗೌಡರ ವಂದಿಸಿದರು.

ಕಾರ್ಯಾಗಾರ:

ನಂತರ ನಡೆದ ಕಾರ್ಯಾಗಾರದಲ್ಲಿ ಡಾ. ಪ್ರಕಾಶ ಭಟ್ ಅವರು ಎಷ್ಟು ಮಳೆ-ಎಷ್ಟು ನೀರು, ಛಾವಣಿ ನೀರು ಸಂಗ್ರಹ ಬಗ್ಗೆ, ಡಾ. ಸಂಜೀವ ಕುಲಕರ್ಣಿ ಅವರು ಹಸಿರು ಮತ್ತು ನೀರು ವಿಷಯವಾಗಿ, ಶಿರಸಿಯ ಶಿವಾನಂದ ಕಳವೆ ಬರ ಮತ್ತು ಬದುಕು – ಕರ್ನಾಟಕz ಚಿತ್ರ ವಿಷಯವಾಗಿ, ಕೃಷಿ ವಿವಿಯ ಡಾ. ರಾಜೇಂದ್ರ ಪೋದ್ದಾರ ಕೃಷಿಯಲ್ಲಿ ಜಲ ಸಂಪನ್ಮೂಲ ನಿರ್ವಹಣೆ-ಸವಾಲುಗಳು ಎಂಬ ವಿಷಯವಾಗಿ, ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ರಮೇಶ ನಾಯ್ಕ್ ಅವರು ಸಂಸದರ ಆದರ್ಶ ಗ್ರಾಮ ಹಾರೋಬೆಳಡಿಯಲ್ಲಿ ಕೈಗೊಂಡ ತೆರೆದ ಬಾವಿ ಮತ್ತು ಹೊಂಡಗಳ ಪುನರುಜ್ಜೀವನ ಕಾರ್ಯದ ಅನುಭವ ಹಂಚಿಕೊಂಡರು.

**************************************

ಗೋಷ್ಟಿ - ೧  ಡಾ. ಪ್ರಕಾಶ ಭಟ್: ಎಷ್ಟು ಮಳೆ-ಎಷ್ಟು ನೀರು, ಛಾವಣಿ ನೀರು ಸಂಗ್ರಹ

DR. PRAKASH BHAT ADDRESSING THE GATHERING. SHEELA BHANDARAKAR SEEN IN THE PHOTOಮಳೆ ಜೀವದ್ರವ್ಯ ನೀರಿಗೆ ಮೂಲ. ನಮಗೆ ಬೇಕಷ್ಟು ಮಳೆ ಸಕಾಲಕ್ಕೆ ಒದಗಿಬಾರದಿದ್ದರೂ ಅದು ಬರಗಾಲ. ಹಾಗಾಗಿ, ಇನ್ನು ಮುಂದೆ ಬರ ನಿರೋಧಕ ಜಾಣ್ಮೆ ನಮ್ಮೆಲ್ಲರಿಗೂ ಅನಿವಾರ್ಯ. ಭೂಮಿಯ ಮೇಲೆ ಲಭ್ಯವಿರುವ ಒಟ್ಟೂ ನೀರಿನ ಶೇ.೨.೫ ರಷ್ಟು ಮಾತ್ರ ಸಿಹಿ ಮತ್ತು ಬಳಕೆಗೆ ಯೋಗ್ಯವಾಗಿದೆ. ಮನೆಯ ಮೇಲ್ಛಾವಣಿ ಮೇಲೆ ಬೀಳುವ ಮಳೆ ನೀರು ಕೊಯ್ಲು ಇನ್ನು ಮುಂದೆ ಕಡ್ಡಾಯ. ಹೀಗೆ ಮಾಡಿದಲ್ಲಿ ಮಾತ್ರ ಸರ್ಕಾರ ನಿರ್ಮಿಸುವ ರಸ್ತೆಗಳು ಸರ್ವ ಋತು ಸುಸ್ಥಿತಿಯಲ್ಲಿ ಇರಲು ಸಾಧ್ಯ. ೪೦x೬೦ ಸುತ್ತಳತೆಯ ನಿವೇಶನ ಒಂದರಲ್ಲಿ ವಾರ್ಷಿಕ ಸರಾಸರಿ ೭೫೦ ಮಿ.ಮೀ. ಮಳೆ ಬೀಳುವ ಧಾರವಾಡದಂತಹ ಪ್ರದೇಶದಲ್ಲಿ ೧೨೦ ಘನ ಮೀಟರ್ ಒಟ್ಟು ಪ್ರದೇಶದಲ್ಲಿ ಬೀಳುವ ಮಳೆಯ ಪ್ರಮಾನ ೯೦ ಸಾವಿರ ಲೀಟರ್! ನಾಲ್ಕು ಜನ ಇರುವ ಕುಟುಂಬವೊಂದು ತಲಾ ೧೫೦ ಲೀಟರ್ ನೀರು ನಿತ್ಯ ಬಳಕೆ ಮಾಡಿದರೂ ೬೦೦ ದಿನಗಳಿಗೆ ಈ ಮೇಲ್ಛಾವಣಿಯಿಂದ ಗಳಿಸಿದ ಮಳೆ ನೀರು ಸಾಕಾಗುತ್ತದೆ. ಹಾಗಾಗಿ, ಇತ್ತೀಚೆಗೆ ಕೈಗೊಳ್ಳಲಾಗಿರುವ ಹತ್ತಾರು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಗಿಡದಿಂದಲೇ ಮಳೆ ಎಂಬುದು ಸಾಬೀತಾಗಿದೆ. ಕಡಿಮೆ ಮಳೆ ಬಂದ್ರೆ ಮುದ್ದಾಮ್ ಗಿಡ ನೆಡಲೇ ಬೇಕು.

**************************************

ಗೋಷ್ಟಿ - ೨  ಡಾ. ಸಂಜೀವ ಕುಲಕರ್ಣಿ: ಹಸಿರು ಮತ್ತು ನೀರು

GATHERINGಹಸಿರು ಮತ್ತು ನೀರಿಗೆ ಅವಿನಾಭಾವ ಸಂಬಂಧವಿದೆ. ಕಾಡು ನೀರಿಗೆ ಮತ್ತು ಮಳೆಗೆ ಮೂಲ ಆಧಾರ. ಮರಗಳ ಮೂಲಕ ಸಾವಯವ ಕಣಗಳ ಆಕರ್ಷಣೆಯಿಂದ ಮೋಡಗಳು ನಿಂತು, ಮಳೆ ಸುರಿಸುತ್ತವೆ. ಹೀಗೆ ಸುರಿದ ಮಳೆ ನೀರು ಓಡದಂತೆ ತಡೆಯುವ ನೈಸರ್ಗಿಕ ಒಡ್ಡುಗಳೆಂದರೆ ಮರಗಳೇ. ಹುಲಿ ಸಂರಕ್ಷಣೆಗೆ ಸರ್ಕಾರ ಹಣ ಖರ್ಚಿಸುವುದು ಒಳ್ಳೆಯದೇ ಹೊರತು, ನಗರದ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಹಣಕಾಸು ಒದಗಿಸುವುದು ಎರಡನೇ ಪ್ರಾಧಾನ್ಯತಾ ವಿಷಯವಾಗಲಿ. ಕಾಡನ್ನು ಕಡಿದರೆ, ಊರೇ ಪರಾವಲಂಬಿ! ಈಗ ನಮ್ಮ ದೇಶದ ಒಟ್ಟು ಭೂಭಾಗದ ೧/೩ದಷ್ಟು ಕಾಡಿದ್ದಿದ್ದರೆ ಈ ಪರಿಸ್ಥಿತಿ ನಾವು ಎದುರಿಸುತ್ತಿರಲಿಲ್ಲ. ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ನಾವು ಉಳಿಸಿದ್ದು ಕೇವಲ ಶೇ.೮ ರಷ್ಟು ಕಾಡನ್ನು ಮಾತ್ರ! ಹಾಗಾಗಿ, ಮನುಷ್ಯರು ಊರು ಕೇರಿ ಸುತ್ತಿ ಅನ್ನ ಸಂಪಾದಿಸಿದರೆ, ಮರಗಳು ನಿಂತಲ್ಲೇ ಆಹಾರ ಸಂಪಾದಿಸುವ ಜಾಣ್ಮೆ ಹೊಂದಿವೆ. ಹ್ಯೂಮಸ್ ಈ ಕ್ರಿಯೆಗೆ ಪೂರಕ. ಮರಗಳು ಆಕಾಶಕ್ಕೇ ಲಾಳಿಕೆ ಹಾಕಿಕೊಂಡು ನಿಂತಿವೆ. ತನ್ಮೂಲಕ ನೀರು, ಆರ್ದ್ರತೆ, ಲವಣಾಂಶ ಮತ್ತು ಫಂಗಸ್ ಉತ್ಪಾದಿಸಿ, ಸಂಗ್ರಹಿಸಿ ಬಳಸಿಕೊಳ್ಳುವ ಜಾಣ್ಮೆ ಹೊಂದಿವೆ. ಸದ್ಯ ನಾವೆಲ್ಲ ಸಕ್ಕರೆ ಬಳಕೆ ಬಿಟ್ಟು ಬಿಡಬೇಕು. ಅದು ಬಿಳಿ ವಿಷ. ಕಬ್ಬಿನಿಂದಾಗಿ ಮಹಾಪೂರ ನೀರಾವರಿ ಶುರುವಾಗಿ, ಹನಿ ಮತ್ತು ತುಂತುರು ನೀರಾವರಿ ಪಕ್ಕಕ್ಕೆ ಸರಿಸಲ್ಪಟ್ಟಿವೆ. ಸಾಲು ಮರದ ತಿಮ್ಮಕ್ಕನಂತಹ ನೊಬೆಲ್ ಪುರಸ್ಕೃತ ವಾಂಗಾರಿ ಮುಟ ಮಥಾಯ್ ಮತ್ತು ಮರಭೂಮಿ ನಿಲ್ಲಿಸಿದ ಮಹಾವೀರ ಯಾಕೋಬ್‌ನಂತಹವರಿಂದ ಮರ ಬೆಳೆಸುವ ಹುಚ್ಚು ನಾವು ಮನನ ಮಾಡಿಕೊಳ್ಳಬೇಕು. ಕಾರಣ, ನಾವು ರಾಸಾಯನಿಕ ನಳಸಿ ಮೋಡ ಬಿತ್ತುವ ಅವಶ್ಯಕತೆ ಇಲ್ಲ; ಮರಗಳಿಗೆ ನೈಸರ್ಗಿಕವಾಗಿಯೇ ಮೋಡಬಿತ್ತುವ ಶಕ್ತಿ ಇದೆ.

**************************************

ಗೋಷ್ಟಿ – ೩ ಶಿರಸಿಯ ಶಿವಾನಂದ ಕಳವೆ: ಬರ ಮತ್ತು ಬದುಕು – ಕರ್ನಾಟಕದ ಚಿತ್ರ

SHIVANAND KALAVE OF SIRASI ADDRESSING THE GATHERING೧೭೯೧ ರಲ್ಲಿ ವೆಂಕಟರಂಗೋ ಕಟ್ಟಿ ಅವರು ಸಂಪಾದಿಸಿದ ಗೆಝೆಟಿಯರ್‌ನಲ್ಲಿ ‘ಬರಗಾಲದ ಆಹಾರ’ ಎಂಬ ಅಧ್ಯಾಯವಿದೆ. ಚಾರಿತ್ರಿಕ ಮತ್ತು ಬ್ರಿಟಿಷ್ ದಾಖಲೆಗಳ ಪ್ರಕಾರ ಬರ ಕಳೆದ ೨ ಶತಮಾನಗಳಿಂದ ನಮ್ಮ ಬೆನ್ನಿಗೆ ಬಿದ್ದಿದೆ. ಒಂದು ದಶಕದ ಲೆಕ್ಕಾಚಾರ ತೆಗೆದುಕೊಂಡರೂ ೮ ವರ್ಷ ಕಡಿಮೆ ಮಳೆಯಾದರೆ, ಎರಡು ವರ್ಷ ಭರಪೂರ ಮಳೆ ಬಿದ್ದ ದಾಖಲೆಗಳಿವೆ. ಈಗ ಮತ್ತೆ ನಾವು ಮುಗಿಲು ನೋಡುವಂತಾಗಿದೆ. ಮೋಡ ಕಟ್ಟುತ್ತಿಲ್ಲ; ಮಳೆ ಸುರಿಸುತ್ತಿಲ್ಲ. ಕಳೆದ ವರ್ಷದ ಬರ ಮತ್ತೆ ಈ ವರ್ಷ ನೆರಳಿನಂತೆ ನಮಗೆ ಕಾಡುತ್ತಿದೆ. ಬಹುಶಃ ಡೌಗಿ ಬರ ನಮಗೆ ನೆನಪಿಗೆ ಬಂದೀತು. ಅಂದು ಮಹಾರಾಷ್ಟ್ರದಿಂದ ಜನರಿಗೆ ಬೇಕಾದ ಆಹಾರ ಚಕ್ಕಡಿಗಳ ಮೇಲೆ ಹೇರಿಕೊಂಡು ವಿಜಯಪುರಕ್ಕೆ ತಂದ ಉದಾಹರಣೆ ಇದೆ. ಆದರೆ, ಒಂದು ಪಟ್ಟು ಆಹಾರಧಾನ್ಯ ಬರ ಪೀಡಿತ ಪ್ರದೇಶಗಳಿಗೆ ಹೊತ್ತು ತರಲು ಎತ್ತುಗಳಿಗೆ ಎರಡು ಪಟ್ಟು ಮೇವು ಬೇಕಿತ್ತು ಎಂಬುದನ್ನೂ ನಾವು ಮರೆಯಬಾರದು. ಬಯಲು ಸೀಮೆಯ ಪ್ರದೇಶಗಳಲ್ಲಿ ಗಿಡಗಳನ್ನು ಹೆಚ್ಚು ನೆಟ್ಟು ಬೆಳೆಸಬೇಕು; ಬರ ನಿರೋಧಕವಾಗಿ ಮರವೇ ಸೈನಿಕ ಎಂದು ಸತೀಶ್ಚಂದ್ರನ್ ವರದಿಯೂ ಇದೆ. ಪರಿಸ್ಥಿತಿ ನೋಡಿ, ಕೋಲಾರ ಜಿಲ್ಲೆ, ಮಾಲೂರಿನ ದೊಡ್ಡಕಲ್ಹಳ್ಳಿಗೆ ಭೇಟಿ ನೀಡದಾಗ ಪುಟ್ಟ ಬಾಲಕಿ ಎರಡು ಕೊಡ ಹೊತ್ತು ಪಾಳಿಯಲ್ಲಿ ನಾಲ್ಕು ತಾಸು ಬಿಸಿಲಲ್ಲಿ ಕಾಯುತ್ತಿದ್ದ ದೃಶ್ಯ ಯಾವ ಪಾಠ ನಮಗೆ ಕಲಿಸುವುದನ್ನು ಬಾಕಿ ಉಳಿಸಿದೆ? ಕೋಲಾರ ಹೈನುಗಾರಿಕೆಗೆ ಹೆಸರಾಗಿದ್ದ ಜಿಲ್ಲೆ. ಒಂದು ಜರ್ಸಿ ಆಕಳಿಗೆ ದಿನವೊಂದಕ್ಕೆ ಕನಿಷ್ಟ ೭೫೦ ರಿಂದ ೮೦೦ ಲೀಟರ್ ನೀರು ಬೇಕು! ಹಾಗಾಗಿ, ಜನ ಕುರಿ ಸಾಕಾಣಿಕೆಗೆ ಮನಸ್ಸು ಮಾಡಿದರು. ೧,೫೦೦ ಅಡಿ ಬೋರ್‌ವೆಲ್ ಕೊರೆದರು. ನೀರಾವರಿ ನೆಚ್ಚಿದರು. ಈಗ ಊರುಗಳೆಲ್ಲ ವೃದ್ಧಾಶ್ರಮ! ಗುಲಬರ್ಗಾದ ಆಳಂದ ತಾಲೂಕಿನಲ್ಲಿ ನೀರಿನ ಬರ ಎಷ್ಟೆಂದರೆ, ಕೊಳಚೆ ಹೊಂಡದ ನೀರಿನಲ್ಲಿ ಪಾತ್ರೆ ತೊಳೆಯುವ ಚಿತ್ರಣ! ಬೀದರ್, ಗುಲಬರ್ಗಾ ಬಳಿಯ ಕಡಲಂಚಿಯಲ್ಲಿ ದನಕರುಗೆ ಮೇವಿಲ್ಲ. ಹಾಗಾಗಿ, ಮಹಾರಾಷ್ಟ್ರಕ್ಕೆ ನಿತ್ಯವೂ ೪೦ ಟನ್ ದನದ ಮಾಂಸ ಹೋಗುತ್ತಿದೆ! ಶೇ. ೮೦ ರಷ್ಟು ಎತ್ತುಗಳನ್ನು ಈಗಾಗಲೇ ಮಾರಿಯಾಗಿದೆ! “ನಮ್ಮ ಕೂಳಿಗೆ ಕಾಳು ಇಲ್ಲ ಅಂದ್ರೂ ನಡೆದೀತು.. ಎತ್ತಿಗೆ ಮೇವಿಲ್ಲ ಅಂದ್ರ.. ಮೂಕ ಪ್ರಾಣೀನ್ನ ಉಪವಾಸ ಕಣ್ಣಿ ಕಟ್ಟೋದು ಹೆಂಗ್ರಿ ಸಾಹೇಬ್ರ..” ಈ ಮಾತಿಗೆ, ಕಣ್ಣಂಚಿನಲ್ಲಿ ನೀರು ಬಂದೀತ್ತು. ಧುತ್ತರಗಾಂವ್‌ನಲ್ಲಿ ಟ್ಯಾಂPರ್ ನೀಡುವ ೬ ಕೊಡ ನೀರಿನಲ್ಲಿ ೫ ಜನರ ಕುಟುಂಬ ವಾರಗಟ್ಟಲೆ ಬದುಕುವ ಪರಿ ಕರುಣಾಜನಕ. ಗುಂಡಿ ಇಟ್ಟು ಸ್ನಾನ ಮಾಡಿ, ಅದೇ ನೀರಿನಲ್ಲಿ ಬಟ್ಟೆ ಒಗೆಯುವ ಪರಿ.. ಕರುಳು ಹಿಂಡುತ್ತದೆ. ಈ ಊರಿನಲ್ಲಿ ಮಕ್ಕಳು ಶಾಲೆಗೆ ಹೋಗುವುದಕ್ಕಿಂತ ಹರದಾರಿ ನೀರಿಗೆ ಹೋಗಲು ಹೆಚ್ಚು ಪ್ರಾಮುಖ್ಯತೆ ಕೊಡುತ್ತವೆ! ನಮಗೆಲ್ಲ ಹಾಲನ್ನು ಅಳೆದು ಕೊಡುವ ಪರಿಪಾಠವಿದೆ. ಇಲ್ಲಿ, ಹಾಲುಗರೆಯುವ ದನಗಳಿಗೆ ಹೊತ್ತಿಗೆ ಇಂತಿಷ್ಟೇ ನೀರು ಅಳೆದು ಕುಡಿಸುವ ಸ್ಥಿತಿ.. ಒಂದೊತ್ತಿಗೆ ಕೇವಲ ೧೫೦ ಲೀಟರ್ ಹೀಗೆ ಮೂರು ಹೊತ್ತು..! ಕೊಪ್ಪಳ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲು ಜಿಲ್ಲಾಡಳಿತ ಸರ್ಕಸ್ ಮಾಡುತ್ತಿದ್ದರೆ, ಹತ್ತು ಮೈಲು ಮೇವಿನ ಆಸೆಗಾಗಿ ದನಗಳನ್ನು ಹೊಡೆದುಕೊಂಡು ಬಂದ ರೈತನಿಗೆ ತುತ್ತು ಅನ್ನದ ವ್ಯವಸ್ಥೆ ಇರಲಿಲ್ಲ! ದಿಗ್ಗಾಂವಿಯ ಗೋಶಾಲೆಯಲ್ಲಿ ಅನ್ನದಾತನಿಗೂ ಗಂಜಿ ನೀಡಿ ಉಪಕರಿಸಿದ ಕಥೆ ಜನಪ್ರತಿನಿಧಿಗಳಿಗೆ ಗೋತ್ತೇ ಇಲ್ಲ! ಕೆರೆಗಳನ್ನು ಇನ್ನಾದರೂ ಉಳಿಸಿಕೊಳ್ಳೋಣ. ಇದು ಸರ್ಕಾರ ಮಾಡಬೇಕಾದ ಕೆಲಸವಲ್ಲ. ಕೆರೆ ಮಾಡಲು ಹಣ ಬೇಡ; ನಮ್ಮ ಸಂಕಲ್ಪ ಸಾಕು!

**************************************

ಗೋಷ್ಟಿ -೪ ಕೃಷಿ ವಿವಿಯ ಡಾ. ರಾಜೇಂದ್ರ ಪೋದ್ದಾರ: ಕೃಷಿಯಲ್ಲಿ ಜಲ ಸಂಪನ್ಮೂಲ ನಿರ್ವಹಣೆ-ಸವಾಲುಗಳು

ಇಂದು ರೈತರ ಆತ್ಮಹತ್ಯೆಗೆ ಮೂಲ ಕಾರಣ ನೀರಿನ ಅಭಾವ. ಮಳೆಯ ಅಕಾಲಿಕ ಅದೃಶ್ಯತೆ. ಇಡೀ ರಾಜ್ಯದಲ್ಲಿ ೩೩,೨೧೭ ಸಣ್ಣ ನೀರಾವರಿಗೆ ಅಧಾರವಾದ ಕೆರೆಗಳಿದ್ದವು. ಆ ಪೈಕಿ ಬಹುತೇಕ ಇಂದು ಬತ್ತಿವೆ. ಅಂತರ್ಜಲ ಮಟ್ಟ ಕುಸಿಯುವಂತಾಗಿದೆ. ತಾಪಮಾನದ ಏರಿಕೆಯಿಂದ ಬದುಕೇ ಹೇರಾಪೇರಿಯಾಗುವ ಹಂತದಲ್ಲಿದೆ. ನೀರು ನಿರ್ವಹಣೆಯ ಜಾಣ್ಮೆ ಮತ್ತು ಋತುಮಾನಕ್ಕೆ ತಕ್ಕ ಬೆಳೆ ಹೊಂದುವ ಬರ ನಿರೋಧP ಜಾಣ್ಮೆ ನಾವು ಕಳೆದುಕೊಳ್ಳುತ್ತಿದ್ದೇವೆ.

**************************************

ಗೋಷ್ಟಿ – ೫ ಸ್ಕೋಪ್ ಮತ್ತು ಅರ್ಘ್ಯಂ ವಾಟ್‌ಸ್ಯಾನ್ ಫೆಲೊ ರಮೇಶ ನಾಯ್ಕ್

ಸಂಸದ ಪ್ರಹ್ಲಾದ ಜೋಶಿ ಅವರ ಆದರ್ಶ ಗ್ರಾಮ, ಹಾರೋಬೆಳವಡಿ. ಮಲಪ್ರಭಾ ನದಿಯ ನೀರು ಗ್ರಾಮದ ಮನೆಗಳಿಗೆ ಪೂರೈಕೆಯಾಗುತ್ತಿದ್ದಂತೆ, ಸಾಂಪ್ರದಾಯಿಕ ಜಲ ಮೂಲಗಳು ಅವಜ್ಞೆಗೆ ತುತ್ತಾಗಿ ಕಾಲನ ಗರ್ಭ ಸೇರಲು ಹವಣಿಸುತ್ತಿರುವ ಬೆಳವಣಿಗೆ ಇಲ್ಲಿತ್ತು. ಹೆಚ್ಚೂ ಕಡಿಮೆ ಬಾವಿ-ಕೆರೆಗಳು ಕಸದ ಕೊಂಪೆಯಾಗಿ ಪರಿವರ್ತಿತ ಗೊಂಡಿದ್ದವು. ಕೂಡಲೇ ರಮೇಶ ವಾಟ್ಸ್ ಆಪ್ ಗ್ರೂಪ್ – ಡಿಜಿಟಲ್ ಹಾರೋಬೆಳವಡಿ ಯೂತ್ ಗ್ರೂಪ್ ಆರಂಭಿಸುತ್ತಾರೆ. ಜನರನ್ನು ಈ ವೇದಿಕೆಗೆ ಜೋಡಿಸುವ ಮೂಲಕ ಸಲಹೆಗಳನ್ನು ಆಹ್ವಾನಿಸುತ್ತಾರೆ. ಈ ‘ಐಡಿಯಾ ಕ್ಲಿಕ್’ ಆಗುತ್ತದೆ! ಯುವಜನತೆ ತಮ್ಮ ಗ್ರಾಮದ ಬಗ್ಗೆ ಚಿಂತಿಸಲು ಆರಂಭಿಸುತ್ತಾRamesh Naik -Harobelwadi Villageರೆ. ಪರಿಣಾಮ, ತಳವಾರ ಓಣಿಯ ಸಿಹಿ ನೀರಿನ ಬಾವಿಯ ಸಂಪೂರ್ಣ ಶುದ್ಧೀಕರಣದ ಕ್ರಿಯಾ ಯೋಜನೆ ಸಿದ್ಧವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆ ಉಡುಪಿಯ ಮಂದಾರ್ತಿ ಪೋಸ್ಟ್‌ನ ರಮೇಶ ಸುಮಾರು ೨೦ ವರ್ಷಗಳ ಕಾಲ ತೆರೆದ ಬಾವಿಯ ನೀರನ್ನೇ ಕುಡಿಯುತ್ತ ಬಂದವರು. ಇಲ್ಲಿನ ಜನರ ಅವಜ್ಞೆ ಕಂಡು ಮರಗುತ್ತಾರೆ. ಸಮುದಾಯದ ಸಹಭಾಗಿತ್ವದಲ್ಲೇ ಬಾವಿಯನ್ನು ಪುನರುಜ್ಜೀವಿತಗೊಳಿಸಲು ಸನ್ನದ್ಧರಾಗುತ್ತಾರೆ. ಮುಂದೆ ಈ ಯಶಸ್ವಿ ಪ್ರಯೋಗ ದೊಡ್ಡೋಣಿ ಬಾವಿಯ ಶುದ್ಧೀಕರಣಕ್ಕೂ ಕಾರಣವಾಗುತ್ತದೆ. ಈಗಾಗಲೇ ಗ್ರಾಮ ಪಂಚಾಯ್ತಿ ವತಿಯಿಂದ ಖಾಸಗಿ ಗುತ್ತಿಗೆದಾರ ಓರ್ವರಿಗೆ ನೀಡಲಾಗಿದ್ದ ಸ್ವಚ್ಛತೆಯ ಗುತ್ತಿಗೆ ಊರ್ಜಿತವಾಗದೇ, ಅವರೂ ಕೂಡ ಕಾರ್ಯಾರಂಭ ಮಾಡದೇ ಕಾಲತಳ್ಳುವ ಯೋಜನೆಯಾಗಿ, ನೀರಿಂಗಿಸುವ ಬದಲು ಹಣ ನುಂಗುವ ಬಾವಿಯಾಗಿ ಪರಿವರ್ತನೆ ಹೊಂದುವ ತವಕದಲ್ಲಿ ಬಾಯ್ದೆರೆದು ನಿಂತಿದ್ದು ಊರ ಯುವಜನತೆಯ ಗಮನಕ್ಕೆ ಬರುತ್ತದೆ. ಕೊನೆಗೆ, ಗ್ರಾಮ ಪಂಚಾಯ್ತಿ ಗಮನಕ್ಕೆ ತಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ದೊಡ್ಡೋಣಿ ಬಾವಿಯ ಶುದ್ಧೀಕರಣ ಮತ್ತು ಪುನರುಜ್ಜೀವನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕೇವಲ ೧೫ ದಿನಗಳಲ್ಲಿ ಬಾವಿ ನಳನಳಿಸುತ್ತದೆ! ತಳವಾರ ಓಣಿ ಬಾವಿ ಮತ್ತು ದೊಡ್ಡೋಣಿ ಬಾವಿಗಳು ಈಗ ಜನರ ಸುಪರ್ದಿಯಲ್ಲೇ ರಕ್ಷಣೆ ಪಡೆಯುತ್ತಿದ್ದು, ಸದ್ಬಳಕೆಗೆ ಮುಕ್ತವಾಗಿದ್ದರೂ, ದುರ್ಬಳಕೆಗೆ ಅವಕಾಶ ಇಲ್ಲದಂತೆ ಜಾಗ್ರತದಳ ರೂಪುಗೊಂಡಿದೆ. ಮನೆ-ಮನೆಯ ಶುದ್ಧ ಕುಡಿಯುವ ನೀರು ಪೂರೈಕೆ ಪೋಲಾಗದಂತೆ ‘ನೀರಗಂಟಿ’ಗಳೂ ಕೂಡ ಗ್ರಾಮ ಪಂಚಾಯ್ತಿಯ ಗೌರವ ಧನದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ರಮೇಶ ಜಾರಿಗೆ ತಂದಿದ್ದಾರೆ.

 ಬರಹ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*