ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ನಾಳಿನ ನೀರ ನೆಮ್ಮದಿಗಾಗಿ

ಕೋಲಾರ ಜಿಲ್ಲಾ ಪತ್ರಕರ್ತರ ಭವನದಲ್ಲಿ, ಸಿಡಿಎಲ್ ಸಂಸ್ಥೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ “ನಾಳಿನ ನೀರ ನೆಮ್ಮದಿಗಾಗಿ” ಕಾರ್ಯಾಗಾರವನ್ನು ೨೫ ಮೇ, ೨೦೧೬ರಂದು ನಡೆಸಲಾಯಿತು.  ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ೫೦ ಹಿರಿಯ ಪತ್ರಕರ್ತರು, ಹವ್ಯಾಸಿ ಬರಹಗಾರರು, ರೈತ ಸಂಘದ ಸದಸ್ಯರು ಹಾಗೂ ಸಂಸ್ಥೆಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. 

ಸಿಡಿಲ್ ನ ಉಪನಿರ್ದೇಶಕಿಯಾದ ಹೇಮ ಪ್ರಸನ್ನರವರು ಎಲ್ಲರನ್ನೂ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತ, ಸಿಡಿಎಲ್ ಸಂಸ್ಥೆಯು ನೀರಿನ ಸಮಸ್ಯೆ ನಿರ್ವಹಣೆ, ಸಾಂಪ್ರದಾಯಿಕ ನೀರಿನ ಮೂಲಗಳ ಸಂರಕ್ಷಣೆ, ಮಳೆ ನೀರು ಸಂಗ್ರಹಣೆ, ಇತ್ಯಾದಿ ವಿಚಾರಗಳ ಮೇಲೆ ಬೆಳಕು ಚೆಲ್ಲಲು, ಕನ್ನಡ ಭಾಷೆಯಲ್ಲಿ ವಾಟರ್ ಪೋರ್ಟಲ್ ಆರಂಭಿಸಲಾಗಿದೆ ಎಂದು ಹೇಳಿದರು, ಇದಾದ ನಂತರ, ಸಿಡಿಎಲ್ ನ ಗಣಪತಿ ಹೆಗಡೆಯವರು, ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ನ ಕಿರುಪರಿಚಯವನ್ನು ನೀಡಿದರು.

IMG_20160525_113450ಈ ಸಂದರ್ಭದಲ್ಲಿ ಮಾತನಾಡುತ್ತ, ಮೂರು ದಶಕಗಳ ಹಿಂದೆಯೇ, ಶ್ರೀ ಸಂಜೊಯ್ ದಾಸ್ ಗುಪ್ತಾರವರು, ಕೋಲಾರದ ಕೆರೆಗಳನ್ನು ಪುನರುಜ್ಜೀವನ ಮಾಡದಿದ್ದಲ್ಲಿ, ಇಲ್ಲಿನ ಜನರು ತೀವ್ರತರವಾರದ ನೀರಿನ ಅಭಾವವನ್ನು ಎದುರಿಸಬೇಕಾಗುವುದೆಂದು ಎಚ್ಚರಿಸಿದ್ದರೆಂದು ಹಿರಿಯ ಪತ್ರಕರ್ತರಾದ ಬಿ.ವಿ.ಗೋಪಿನಾಥ್ ರವರು ಸ್ಮರಿಸಿಕೊಂಡರು.  ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜನರು ಸ್ವೇಚ್ಛಾಚಾರವಾಗಿ ನೀರಿನ ಬಳಕೆ ಮಾಡುವ ಜೊತೆಗೆ, ಅಂತರ್ಜಲದ ಮೇಲೆ ಬಲಾತ್ಕಾರ ಮತ್ತು ದೌರ್ಜನ್ಯ ನಡೆಸಿರುವುದರಿಂದ, ನೀರಿನ ಸಮಸ್ಯೆ ಉಂಟಾಗಿದೆಯೆಂದು ವಿಷಾದ ವ್ಯಕ್ತಪಡಿಸಿದರು.   ಮನುಷ್ಯನ ಸ್ವಯಂಕೃತ ಅಪರಾಧ ಮತ್ತು ಹಣದ ದಾಹ, ಸ್ವಾರ್ಥದಿಂದಾಗಿ ಸಮಸ್ಯೆ ಉಲ್ಭಣವಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿದ್ದ ನೀರಿನ ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡಿರುವ ಹಿನ್ನಲೆಯಲ್ಲಿ ಅಂತರ್ಜಲಕ್ಕಾಗಿ ೧,೫೦೦ ಅಡಿಗೆ ಹೋಗಿದ್ದು, ಇಂದು ಕೊರೆಯುತ್ತಿರುವ ಶೇ.೪೦ರಷ್ಟು ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ, ಒಂದು ವೇಳೆ ನೀರು ಸಿಕ್ಕಿದರೂ ಒಂದೆರಡು ದಿನಗಳಲ್ಲಿ ಖಾಲಿಯಾಗುತ್ತದೆ.  ಸಿಗುವ ವಿಷಪೂರಿತ ನೀರನ್ನು ಕುಡಿದರು, ಬದುಕುವ ನಂಬಿಕೆಯೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಳೆಯಾಧಾರಿತ ಜಿಲ್ಲೆಯಾಗಿರುವ ಕೋಲಾರ ಜಿಲ್ಲೆಯಲ್ಲಿ ಹಿರಿಯರು ೨,೮೯೦ ಕೆರೆಗಳನ್ನು ಕಟ್ಟಿದ್ದರು.  ಆದರೆ, ಇಂದು ಇದರಲ್ಲಿ ಶೇ.೫೦ರಷ್ಟು ಕೆರೆಗಳು ಮಾಯವಾಗಿದೆ ಎದು ದೂರಿದ ಅವರು, ಶಾಶ್ವತ ನೀರಾವರಿ ಯೋಜನೆ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ಚಕಾರವೆತ್ತುತ್ತಿಲ್ಲವೆಂದು ದೂರಿದರು.  ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳನ್ನು ಜನಪ್ರತಿನಿಧಿಗಳ ಹಿಂಬಾಲಕರು, ಬೆಂಬಲಿಗರು ಇತ್ತುವರಿ ಮಾಡಿಕೊಂಡಿದ್ದು, ಒಂದು ವೇಳೆ ಕೆರೆಗಳ ಸಂರಕ್ಷಣೆಗೆ ಮುಂದಾಗುವ ಅಧಿಕಾರಿಗಳಿಗೆ ವರ್ಗಾವಣೆ ಕಟ್ಟಿಟ್ಟ ಬುತ್ತಿಯಾಗಿದೆ ಎಂದರು.

ಎತ್ತಿನಹೊಳೆ ಯೋಜನೆಗೆ ಸರ್ಕಾರ ಎರಡು ಸಾವಿರ ಕೋಟಿಯನ್ನು ವೆಚ್ಚ ಮಾಡಿದ ಮೇಲೆ, ಈಗ ಸೋಶಿಯಲ್ ಇಂಪ್ಯಾಕ್ಟ್ ಸರ್ವೇ ಮಾಡಲು ಹೊರಟಿದೆ ಎಂದು ದೂರಿದರು. ಶಾಶ್ವತ ನೀರಾವರಿ ಯೋಜನೆಯಿಂದ ಜಿಲ್ಲೆಗೆ ನೀರು ಬರುವ ಭ್ರಮೆಯಿಂದ ಜನರು ಹೊರಬರಬೇಕಾಗಿದೆ; ನಮ್ಮಲ್ಲಿನ ಕೆರೆ, ಕುಂಟೆ, ಕಲ್ಯಾಣಿಗಳನ್ನು ಜೋಪಾನ ಮಾಡಿಕೊಂಡು ನೀರನ್ನು ಸಂಗ್ರಹಿಸುವ ಕೆಲಸವಾಗಬೇಕಾಗಿದೆ ಎಂದು ತಿಳಿಸಿದರು.  ಜಿಲ್ಲೆಯಲ್ಲಿ ನೀರಿನ ಹೋರಾಟಗಳು ಪ್ರಚಾರಕ್ಕಾಗಿ ನಡೆಯುತ್ತಿದ್ದು, ಜನಪ್ರತಿನಿಧಿಗಳಿಗೆ ಶಾಶ್ವತ ನೀರಾವರಿ ಯೋಜನೆ ಘೋಷಣೆಯ ಸಾಧನವಾಗಿದೆ ಎಂದು ದೂರಿದರು.  ಮಳೆಕೊಯ್ಲು ಪದ್ಧತಿಯನ್ನು ಜಿಲ್ಲೆಯಲ್ಲಿ ಕಡ್ಡಾಯ ಮಾಡಬೇಕು, ನೀರನ್ನು ಮಿತವಾಗಿ ಬಳಕೆ ಮಾಡಲು ಮೀಟರ್ ಅಳವಡಿಕೆ ಮಾಡಬೇಕು, ಇರುವಂತಹ ನೀರಿನ ಸಂಪನ್ಮೂಲಗಳನ್ನು ಸಂರಕ್ಷಣೆ ಮಾಡುವಂತಹ ಕೆಲಸವಾಗಬೇಕಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ಎಸ್. ಗಣೇಶ್ ಮಾತನಾಡಿ, ಪ್ರತಿ ಮನೆಯಿಂದ ನೀರನ್ನು ಸಂರಕ್ಷಣೆ ಮಾಡುವಂತಹ ಕೆಲಸವಾಗಬೇಕು, ಪ್ರತಿ ಹನಿಯನ್ನೂ ಸಂರಕ್ಷಿಸಬೇಕು – ಇಲ್ಲದಿದ್ದರೆ, ಜಿಲ್ಲೆ ಮರಳುಗಾಡಾಗುವ ಆತಂಕವಿದೆ ಎಂದು ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ, ಶಾಸಕ ಸಿ.ಪಿ. ಯೋಗೇಶ್ವರ್ ಎಂಟು ಹೊಸ ಕೆರೆಗಳನ್ನು ಕಟ್ಟಿ, ಏತ ನೀರಾವರಿ ಮೂಲಕ, ಹಳೆಯ ಕೆರೆಗಳಿಗೆ ನೀರನ್ನು ತುಂಬಿಸಿದ ಕಾರಣ, ಅಲ್ಲಿನ ಜನರಿಗೆ ಬೇಸಿಗೆಯಲ್ಲೂ ನೀರು ಸಿಗುತ್ತಿದೆ.  ಆದರೆ, ಕೋಲಾರ ಜಿಲ್ಲೆಯಲ್ಲಿರುವ ಕೆರೆ-ಕುಂಟೆಗಳನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ನಗರಾಭೆ ಸದಸ್ಯ ತ್ಯಾಗರಾಜ್, ಹಿರಿಯ ಪತ್ರಕರ್ತರಾದ ಕೆ. ಪ್ರಹ್ಲಾದರಾವ್, ಸಿ.ವಿ. ನಾಗರಾಜ್, ಹೂಹಳ್ಳಿ ನಾಗರಾಜ್, ಸುರೇಶ್ ಸೇರಿದಂತೆ, ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಚಿತ್ರ-ಬರಹ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*