ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

“ನಾಳಿನ ನೀರ ನೆಮ್ಮದಿಗಾಗಿ”

ಶ್ರೀ ಮುರುಘರಾಜೇಂದ್ರ ಬೃಹನ್ಮಠ, ಚಿತ್ರದುರ್ಗದ ಸಹಯೋಗದೊಂದಿಗೆ, ಮಠದ ಆವರಣದಲ್ಲಿರುವ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ, “ನಾಳಿನ ನೀರ ನೆಮ್ಮದಿಗಾಗಿ” ಎಂಬ ಕಾರ್ಯಾಗಾರವನ್ನು ಮೇ ೨೩, ೨೦೧೬ರಂದು ಸಿಡಿಎಲ್ ಸಂಸ್ಥೆಯು ಆಯೋಜಿಸಿತು.  ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯಲ್ಲಿ ಜಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ೩೩ ಪತ್ರಕರ್ತರು, ಹವ್ಯಾಸಿ ಬರಹಗಾರರು ಹಾಗೂ ಸಂಸ್ಥೆಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದರು. 

???????????????????????????????ಗಿಡಕ್ಕೆ ನೀರೆರೆಯುವ ಮೂಲಕ, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಡಾ. ಶ್ರೀ. ಶಿವಮೂರ್ತಿ ಮುರುಘಶರಣ ಸ್ವಾಮಿಗಳು, ನಂತರ ಕನ್ನಡ ಇಂಡಿಯಾ ವಾಟರ್ ಪೋರ್ಟಲ್‌ನಲ್ಲಿ ಪ್ರಕಟಗೊಂಡ ಆಯ್ದ ಲೇಖನಗಳ ಸಂಕಲನವಾದ “ನೀರ ನಿರಾಳವನ್ನು ಬಿಡುಗಡೆ ಮಾಡಿದರು.  ಈ ಸಂದರ್ಭದಲ್ಲಿ ಮಾತನಾಡುತ್ತ, “ಮಾನವನ ಬಾಯಾರಿಕೆಯು ಕೇವಲ ನೀರಿನಿಂದ ನೀಗುವುದೇ ವಿನಃ, ಅದಕ್ಕೆ ಪರ್ಯಾಯವಿಲ್ಲ.  ಹಿಂದಿನ ಅರಸರು ತಮ್ಮ ಪ್ರಜೆಗಳ ಹಾಗೂ ರಾಜ್ಯದ ಉಪಯೋಗಕ್ಕಾಗಿ ಕೆರೆ-ಕುಂಟೆಗಳನ್ನು ನಿರ್ಮಾಣ ಮಾಡಿದರು.  ಆದರೆ, ಇಂದು ಆಡಳಿತದ ಚುಕ್ಕಾಣಿ ಹಿಡಿದವರು ಈ ನೀರಿನ ಆಗರಗಳನ್ನು ಅಲಕ್ಷ್ಯ ಮಾಡಿರುವುದೊಂದೇ ಅಲ್ಲ, ಕೆರೆಗಳ ಒತ್ತುವರಿ ಹಾಗೂ ನಿರ್ವಹಣೆಯ ಕೊರತೆಯತ್ತಲೂ ಗಮನ ಹರಿಸಿಲ್ಲ.  ಕೆರೆಗಳು ಹಾಗೂ ನೀರಿನ ಆಗರಗಳ ಸಂರಕ್ಷಣೆ ಮಾಡಿದಾಗ, ಅಂತರ್ಜಲವು ಹೆಚ್ಚುತ್ತದೆ. ನೀರಿಲ್ಲದೆ ಭೂಮಿಯು ಬರಡಾಗುತ್ತದೆ,” ಎಂದರು. ನೀರಿನ ಆಗರಗಳ ಸಂರಕ್ಷಣೆಯ ಮಹತ್ವವನ್ನು ಒತ್ತಿ ಹೇಳಿದ ಸ್ವಾಮೀಜಿ, ಹಿಂದಿನ ಶತಮಾನದಲ್ಲಿ ಆಹಾರದ ಕೊರತೆ ಕಂಡುಬಂದರೆ, ಪ್ರಸ್ತುತ ಶತಮಾನದಲ್ಲಿ ತೀವ್ರವಾದ ನೀರಿನ ಕೊರತೆ ಕಂಡು ಬಂದಿದೆ; ಆಹಾರವನ್ನು ಆಮದು ಮಾಡಿಕೊಳ್ಳಬಹುದು, ಆದರೆ ನೀರನ್ನಲ್ಲ ಎಂದೂ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಡಿಎಲ್‌ನ ಉಪನಿರ್ದೇಶಕಿಯಾದ ಶ್ರೀಮತಿ ಹೇಮಾ ಪ್ರಸನ್ನರವರು, ಕರ್ನಾಟಕದ ೩೦ ಜಿಲ್ಲೆಗಳಲ್ಲೂ ನೀರಿನ ಯಶೋಗಾಥೆಗಳು ಜಲ ಸಂರಕ್ಷಣೆಯ ಮಾದರಿಗಳು, ಹಾಗೂ ವಿವಿಧ ರೀತಿಯ ಜಲ-ಸಂಬಂಧಿತ ಸಮಸ್ಯೆಗಳು ಇವೆಯೆಂದು ಹೇಳುತ್ತಾ, ಕನ್ನಡ ಇಂಡಿಯಾ ವಾಟರ್ ಪೋರ್ಟಲ್, ಈ ಎಲ್ಲವನ್ನೂ ಒಂದೇ ಸೂರಿನಡಿ ತರುವ ಯತ್ನವೆಂದು ತಿಳಿಸಿದರು.  ನೀರಿನ ವಿಷಯಗಳನ್ನು ಕುರಿತಾಗಿ ಜನರ ಗಮನವನ್ನು ಸೆಳೆಯಲು ಕೈಗೊಂಡ ಇದೊಂದು ಲಾಭೇತರ ಯತ್ನವೆಂದೂ, ನೀರಿನ ಬಗ್ಗೆ ಬರೆಯಲು ಆಸಕ್ತಿ ಹೊಂದಿದವರು ಪೋರ್ಟಲ್‌ಗಾಗಿ ಲೇಖನಗಳನ್ನು ಬರೆಯಬಹುದೆಂದು ತಿಳಿಸಿದರು.  ಪೋರ್ಟಲ್ ನೀರಿಗೆ ಸಂಬಂಧಿಸಿದ ವಿಷಯಗಳ ಆಗರವಾಗಿದ್ದು, ಇಲ್ಲಿ ಪ್ರಕಟಗೊಂಡ ಮಾಹಿತಿಯನ್ನು ಜನರು ಮುಕ್ತವಾಗಿ ಬಳಸಬಹುದೆಂದು ತಿಳಿಸಿದರು.  ಜಿಲ್ಲಾಮಟ್ಟದಲ್ಲಿ ನಡೆಯುವ ಪೋರ್ಟಲ್ ಕಾರ್ಯಾಗಾರಗಳು, ತಮ್ಮ ಜಿಲ್ಲೆಗಳಲ್ಲಿನ ನೀರಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳಿಗಾಗಿ, ವಿಶೇಷವಾಗಿ ಪೋರ್ಟಲ್‌ಗಾಗಿ ಬರಹಗಾರರು ಬರೆಯುವುದನ್ನು ಉತ್ತೇಜಿಸುವ ಸಲುವಾಗಿ ಆಯೋಜಿಸಲಾಗಿದ್ದು, ಈ ಮೂಲಕ ರಾಜ್ಯದಲ್ಲಿನ ಸಮಗ್ರ ಚಿತ್ರಣವನ್ನು ಪ್ರತಿಬಿಂಬಿಸುವ ಯತ್ನವಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಜಲ ತಜ್ಞ ಶ್ರೀ. ಎನ್. ದೇವರಾಜ ರೆಡ್ಡಿಯವರು, ೩,೦೦೦ ಎಮ್.ಎಮ್. ವಾರ್ಷಿಕ ಮಳೆಯಾಗುವ ಕರ್ನಾಟಕದ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲೂ, ಇಂದು ಟ್ಯಾಂಕರುಗಳಲ್ಲಿ ನೀರು ಸರಬರಾಜು ಆಗುತ್ತಿರುವುದು ಶೋಚನೀಯ ಸಂಗತಿ ಎಂದರು.  ಈಗ, ಮಲೆನಾಡಿನ ಜನರೂ ಸಹ ಮಳೆನೀರು ಕೊಯ್ಲನ್ನು ಪ್ರಾರಂಭ ಮಾಡಿದ್ದಾರೆ. ಭವಿಷ್ಯದಲ್ಲಿ ‘ಜಲ ಚಿಂತೆ’ಯನ್ನು ಕಡಿಮೆ ಮಾಡುವ ಅತ್ಯಂತ ಪ್ರಮುಖ ಮಾರ್ಗವೆಂದರೆ ಮಳೆನೀರಕೊಯ್ಲೆಂದು ಅವರು ತಿಳಿಸಿದರು.  ನೀರಿನ ಲಭ್ಯತೆಯನ್ನು ಕುರಿತಾಗಿ ಅನೇಕ ತಪ್ಪು ಕಲ್ಪನೆಗಳಿವೆ.  ಸಮುದ್ರ ಮಟ್ಟದವರೆಗೆ ಕೊಳವೆಬಾವಿಗಳನ್ನು ಕೊರೆದರೆ ನೀರು ಲಭ್ಯವಾಗುವುದೆಂದು ಅನೇಕ ಜನರು ನಂಬಿದ್ದಾರೆ.  ಕರಾವಳಿಯ ಕೊಳವೆಬಾವಿಗಳನ್ನು ಕೊರೆಯಲು ಅನುಮತಿ ಇಲ್ಲವೆಂದು ಅನೇಕ ಜನರಿಗೆ ತಿಳಿದಿಲ್ಲ.  ಹಾಗಾಗಿ, ಜಲ ಸಂರಕ್ಷಣೆ, ನೀರಿನ ಮಿತ ಬಳಕೆ, ಇತ್ಯಾದಿ ವಿಷಯಗಳನ್ನು ಕುರಿತಾಗಿ ಅರಿವನ್ನು ಮೂಡಿಸುವುದು ಅತ್ಯಗತ್ಯವೆಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.

???????????????????????????????ಕೃಷಿ ಬರಹಗಾರರಾದ ಶ್ರೀ. ಮಲ್ಲಿಕಾರ್ಜುನ ಹೊಸಪಾಳ್ಯರವರು ಕನ್ನಡ ಇಂಡಿಯಾ ವಾಟರ್ ಪೋರ್ಟಲ್‌ನೊಂದಿಗಿನ ತಮ್ಮ ದೀರ್ಘ ಸಂಬಂಧವನ್ನು ಸ್ಮರಿಸುತ್ತಾ, ನೀರಿನ ವಿಷಯಗಳನ್ನು ಕುರಿತಾದ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.  ನೀರಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವಾಗ, ಎಲ್ಲ ಆಯಾಮಗಳಿಂದಲೂ ಅದನ್ನು ಪರಿಗಣಿಸಿ, ಹೊಸ ಹೊಳಹುಗಳು ಹೊರಹೊಮ್ಮುವಂತೆ, ಸೂಕ್ಷತೆಯಿಂದ ಬರೆಯಬೇಕೆಂದು ತಿಳಿಸಿದರು.  ಕನ್ನಡ ಇಂಡಿಯಾ ವಾಟರ್ ಪೋರ್ಟಲ್, ನೀರನ್ನು ಕುರಿತಾಗಿ ಬರೆಯುವವರಿಗೆ, ವಿಚಾರಗಳ ಸಮಗ್ರ ಆಗರವಾಗಿದ್ದು, ಈ ರೀತಿಯ ಕಾರ್ಯಾಗಾರಗಳು ಹಾಗೂ ವಿಚಾರ ವಿನಿಮಯಗಳು ಪೋರ್ಟಲ್ ಅನ್ನು ಹೆಚ್ಚು ಅರ್ಥಪೂರ್ಣ ಹಾಗೂ ಶ್ರೀಮಂತಗೊಳಿಸಿ, ಎಲ್ಲರಿಗೂ ಉಪಯುಕ್ತವಾಗೊಳಿಸುವುದೆಂದು ಅವರು ಅಭಿಪ್ರಾಯ ಪಟ್ಟರು.  ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತ, ‘ತಲಪರಿಗೆ’ಯಂತಹ ಸಾಂಪ್ರದಾಯಿಕ ಜಲ ಸಂರಕ್ಷಣಾ ವ್ಯವಸ್ಥೆಯ ಬಗ್ಗೆ ನಿರಂತರವಾಗಿ ಬರೆಯುವ ಮೂಲಕ, ಆಡಳಿತಾರೂಢರು ಹಾಗೂ ಸರ್ಕಾರಿ ಮಟ್ಟದಲ್ಲಿ ನಿರ್ಣಯ ಕೈಗೊಳ್ಳುವವರ ಗಮನವನ್ನು ಸೆಳೆಯಲು ಸಾಧ್ಯವಾಯಿತೆಂದು ತಿಳಿಸಿದರು.  ‘ಸ್ಥಳೀಯ ನೀರಿನ ವಿಷಯಗಳ’ ಬಗ್ಗೆ ನಿರಂತರವಾಗಿ ಗಮನವನ್ನು ಸೆಳೆಯುವ ಮೂಲಕ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಬಹುದೆಂದು ಅವರು ಒತ್ತಿ ಹೇಳಿದರು.  ಈ ಸಂದರ್ಭದಲ್ಲಿ, ಸ್ಥಳೀಯ ಭತ್ತದ ತಳಿಯಾದ ‘ಗಮ್‌ಗಡಲೆ’ಯನ್ನು ಪುನರುಜ್ಜೀವನಗೊಳಿಸುವ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ, ವಿಜಯ ಕರ್ನಾಟಕ ದಿನಪತ್ರಿಕೆಯ ತಮ್ಮ “ಕಣಜ” ಅಂಕಣದಲ್ಲಿ ಶ್ರೀ. ಗಾಣಧಾಳು ಶ್ರೀಕಂಠರವರು ಇದನ್ನು ಕುರಿತಾಗಿ ಬರೆದ ಕಾರಣದಿಂದ, ಮೈಸೂರಿನಲ್ಲಿ ಈ ತಳಿಯನ್ನು ಬೆಳೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಲು ದಾರಿ ಮಾಡಿಕೊಟ್ಟಿತು ಎಂಬುದನ್ನು ಸ್ಮರಿಸಿಕೊಂಡರು.  ನೀರಿನ ವಲಯದಲ್ಲಿನ ಹೊಸ ಬೆಳವಣಿಗೆಗಳು ಹಾಗೂ ಸುದ್ದಿಗಳನ್ನು ಕುರಿತಾಗಿ ತಿಳಿದುಕೊಳ್ಳಲು ನಿರಂತರವಾಗಿ ಓದುತ್ತಿರಬೇಕಾದುದರ ಮಹತ್ವದ ಬಗ್ಗೆ ಒತ್ತಿ ಹೇಳಿದರು.

ವೈಯಕ್ತಿಕ ಅನುಭವ ಹಾಗೂ ವಿವಿಧ ಮೂಲಗಳಿಂದ ಜಲ ಸಂಪನ್ಮೂಲಗಳು ಹಾಗೂ ಅದರ ಕೊರತೆ, ಜೊತೆಗೆ ಅದನ್ನು ಹೊಸ ದೃಷ್ಟಿಕೋನದಿಂದ ನೋಡುವುದರ ಮಹತ್ವವನ್ನು ಕುರಿತಾಗಿ ಪತ್ರಕರ್ತರಾದ ಶ್ರೀ. ಗಾಣಧಾಳು ಶ್ರೀಕಂಠರವರು ತಮ್ಮ ಅನುಭವವನ್ನು ಹಂಚಿಕೊಂಡರು.  ಯಶೋಗಾಥೆಗಳನ್ನು ಬರೆಯುವಷ್ಟೇ ಮಹತ್ವವನ್ನು, ನೀರಿನ ವಿಚಾರಗಳನ್ನು ಕುರಿತಾದ ನಕಾರಾತ್ಮಕ ಅಂಶಗಳು ಹಾಗೂ ವಿಫಲತೆಗಳನ್ನು ಕುರಿತಾಗಿ ಬರೆದಾಗ, ಸಂಭವನೀಯ ಬಿಕ್ಕಟ್ತಿನ ಪರಿಸ್ಥಿತಿಯ ಬಗ್ಗೆ ‘ಎಚ್ಚರಿಕೆಯ ಗಂಟೆ’ಯಾಗಿಯೂ ಅದು ಕಾರ್ಯ ನಿರ್ವಹಿಸುತ್ತದೆ.  ಸಕಾರಾತ್ಮಕ ಹಾಗೂ ನಕಾರಾತ್ಮಕ ಲೇಖನಗಳನ್ನು ಬರೆಯುವುದರೊಂದಿಗೆ, ನೀರಿಗೆ ಸಂಬಂಧಿಸಿದ ತಂತ್ರಜ್ಞಾನದ ಲೇಖನಗಳೂ ಬರೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆ ಜಿಲ್ಲೆಗಳ ಪತ್ರಕರ್ತರು ತಮ್ಮತಮ್ಮ ಜಿಲ್ಲೆಗಳಲ್ಲಿನ ನೀರಿನ ವಿಷಯಗಳನ್ನು ಕುರಿತಾದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಶ್ರೀಮತಿ ಹೇಮಾ ಪ್ರಸನ್ನರವರು ಸಲ್ಲಿಸಿದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

 ಚಿತ್ರ-ಬರಹ: ಕನ್ನಡ ಇಂಡಿಯಾ ವಾಟರ್ ಪೋರ್ಟಲ್ ತಂಡ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*