ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

‘ನೀರ ನೆಮ್ಮದಿಗೆ ಪತ್ರಿಕೋದ್ಯಮ’

ಜಲ ಜಾಗೃತಿ ಕುರಿತ ಎರಡು ದಶಕಗಳ ಅವಲೋಕನ

 ಜಲಜಾಗೃತಿಗೆ ೨೦ ವರ್ಷ

 ರಾಜ್ಯದಲ್ಲಿ ಜಲ ಸಂರಕ್ಷಣೆ ಕಾರ್ಯ ಕ್ರಿ,ಶ ೧೯೯೬ರಿಂದ ವಿಶೇಷವಾಗಿ ಆರಂಭವಾಯಿತು. ಇದಕ್ಕೂ ಪೂರ್ವದಲ್ಲಿ ಸರಕಾರದ ಇಲಾಖೆಗಳ ಕರಪತ್ರ, ಹೇಳಿಕೆಗಳಲ್ಲಿ ನೀರಿನ ಮಹತ್ವ ಹೇಳುವ ಅಂಕಿಸಂಖ್ಯೆ ಮಾಹಿತಿಗಳಿದ್ದವು. ದೊಡ್ಡ ಅಣೆಕಟ್ಟು, ಕೆರೆ, ಕೊಳವೆ ಬಾವಿ ನಿರ್ಮಿಸುವ ಮೂಲಕ ನಾಡಿನಲ್ಲಿ ನೀರಿನ ಬಳಕೆ ಹೆಚ್ಚಿಸುವ ಯೋಜನೆಗಳಿದ್ದವು. ಮಲೆನಾಡು, ಕರಾವಳಿಯಲ್ಲಿ ಹೇರಳ ಮಳೆ ಸುರಿಯುವದರಿಂದ ಜಲಸಂರಕ್ಷಣೆ ಅನಗತ್ಯವೆಂದು ಜನ ವಾದಿಸುತ್ತಿದ್ದರು. ಜಲಸಂರಕ್ಷಣಾ ವಿಧಾನಗಳತ್ತ ಜನರ ಗಮನ ಸೆಳೆಯುವ ಕಾರ್ಯ ಪುತ್ತೂರಿನ ಅಡಿಕೆ ಪತ್ರಿಕೆಯಿಂದ ಶುರುವಾಯ್ತು. ‘ನೆಲಜಲ ಉಳಿಸುವ ನೂರು ವಿಧಿ’ ಸರಣಿ ಲೇಖನಗಳ ಮೂಲಕ ಪತ್ರಿಕೆ ಸಂಪಾದಕ  ಶ್ರೀ’ಪಡ್ರೆ ಜಲ ಜಾಗೃತಿಗೆ ಪಣತೊಟ್ಟರು, ಜಲಯಾತ್ರೆ ಶುರುವಾಯ್ತು. ಕಾಡು ನೀರಿನ ಸಂಬಂಧಗಳು, ಜಲಕೊಯ್ಲಿನ ವಿಧಾನಗಳು, ಅನುಭವ ಕಥನಗಳ ಮೂಲಕ ಸಂರಕ್ಷಣೆಗೆ ಧ್ವನಿ ಎತ್ತಿದರು. ಸರಕಾರೀ ಯೋಜನೆಗಳಿಗೆ ಆಗ ನದಿ, ಹಳ್ಳಗಳಲ್ಲಿ ಕಾಂಕ್ರೀಟ್ ಕಾಯಕ ಮಾಡುವದಷ್ಟೇ ಗೊತ್ತಿತ್ತು. ಗುಡ್ಡದಲ್ಲಿ ಬಿದ್ದ ಹನಿಯನ್ನು ಬಿದ್ದಲ್ಲಿ ಇಂಗಿಸುವ ಸರಳ ವಿಧಾನಗಳತ್ತ ಗಮನ ಸೆಳೆಯಲಾಯಿತು. ಪಾರಂಪರಿಕ ಮಣ್ಣಿನ ಮಾದರಿಗಳ ಹುಡುಕಾಟ ನಡೆಯಿತು. ಪರಿಣಾಮ ನೀರಿನ ನಿಶ್ಚಿತ ಜಲನಿಧಿಗಳಾದ ಕೆರೆ, ಕುಂಟೆ, ಮದಕ, ಸುರಂಗ, ತಲಪರಿಗೆ, ಕಟ್ಟಗಳತ್ತ ಗಮನ ಹರಿಯಿತು.  ಬರಹ, ಸ್ಲೈಡ್ ಪ್ರದರ್ಶನ, ಉಪನ್ಯಾಸ, ಚರ್ಚೆ, ಕ್ಷೇತ್ರಭೇಟಿ, ಪುಸ್ತಕ ಪ್ರಕಟಣೆಗಳ ಹಲವು ಆಯಾಮಗಳಲ್ಲಿ ಕೆಲಸ ನಡೆಯಿತು.

 ಜಲಯೋಧರ ಉದಯ

 ಕ್ರಿ,ಶ ೧೯೯೫ರ ಪೂರ್ವದಲ್ಲಿ ಕನ್ನಡದಲ್ಲಿ ನೀರಿನ ಕುರಿತು ಇದ್ದ  ಪುಸ್ತಕಗಳು ಬೆರಳೆಣಿಕೆಯಷ್ಟು ಮಾತ್ರ! ಬಿ.ಪಿ.ರಾಧಾಕೃಷ್ಣ ಹಾಗೂ ಜಿತೇಂದ್ರಕುಮಾರ್ ಬರೆದ ಅಂತರ್ಜಲ, ೧೯೯೨ರಲ್ಲಿ ಭಾರತ ಜನ ವಿಜ್ಞಾನ ಜಾಥಾ ಪ್ರಕಟಿಸಿದ ‘ಜಲವೇ ಜೀವನ’ ಬಿಟ್ಟರೆ ಗಮನ ಸೆಳೆಯುವ ಕೃತಿಗಳಿರಲಿಲ್ಲ. ಪ್ರಕಟಿತ ಪುಸ್ತಕಗಳಲ್ಲಿಯೂ ಜಲಸಂರಕ್ಷಣೆ ಮಾದರಿಯಿರಲಿಲ್ಲ. ಅಡಿಕೆ ಪತ್ರಿಕೆಯ ಬರಹಗಳು ‘ನೆಲ-ಜಲ ಉಳಿಸಿ’ ಪುಸ್ತಕವಾಗಿ ೧೯೯೭ರಲ್ಲಿ ಪ್ರಕಟವಾಯ್ತು. ಕೃಷಿಕರ ಅನುಭವ ಕಥನಗಳು ಪತ್ರಿಕೆಯಲ್ಲಿ ಬಂದವು. ನೀರಿಂಗಿಸುವ ಸಿಹಿ-ಕಹಿಯ ಮಂಥನ ನಡೆಯಿತು. ಜಾಗೃತಿ ಮಾತಿನ ಜೊತೆ ಮಾದರಿ ಪ್ರಾತ್ಯಕ್ಷಿಕೆ ರೂಪಿಸಲಾಯಿತು. ನೀರ ನೆಮ್ಮದಿಗೆ ದಾರಿ ಹುಡುಕುವ ಬರಹಗಾರರ ಯುವಪಡೆ  ಉದಯಿಸಿತು. ಬರದ ಬದುಕು, ಎರೆ SHIVANAND KALAVE PICಹೊಲದ ಜಾಣ್ಮೆ, ಕೆರೆ ಕಾಯಕ, ಕೊಳವೆ ಬಾವಿಗೆ ಮರುಪೂರಣದತ್ತ ಬೆಳಕು ಚೆಲ್ಲುವ ಯತ್ನ ಸಮರೋಪಾದಿಯಲ್ಲಿ ನಡೆಯಿತು. ನೀರಿನ ಕುರಿತು ಇಂದು ಹಲವು ಮೌಲಿಕ ಕೃತಿಗಳು ಪ್ರಕಟವಾಗಿವೆ, ಜಲಸಂರಕ್ಷಣೆಯಲ್ಲಿ ಕೈಗೊಂಡು ಯಶಸ್ವಿಯಾಗಿ ನೀರ ನೆಮ್ಮದಿಯಲ್ಲಿರುವ ಸಾವಿರಾರು ಕುಟುಂಬಗಳಿವೆ. ಕಡುಬರದ ಕೋಲಾರ, ತುಮಕೂರು, ಚಿತ್ರದುರ್ಗಗಳಲ್ಲಿ ಹನಿ ಹಿಡಿದು ಕೃಷಿ ಖುಷಿ ಕಂಡ ನಿದರ್ಶನಗಳಿವೆ.

 ‘ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಶಿಬಿರವನ್ನು ಕ್ರಿ,ಶ ೨೦೦೪ರ ಮೇ ೧೪, ೧೫ ಹಾಗೂ ೧೬ರಂದು ನಮ್ಮ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಶಿರಸಿಯಲ್ಲಿ ಸಂಘಟಿಸಿತ್ತು. ಪತ್ರಕರ್ತರಿಗೆ ನೀರಿನ ಕುರಿತು ಅರಿವು ಮೂಡಿಸುವದು ಉದ್ದೇಶವಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ಜಲತಜ್ಞರು, ಪತ್ರಕರ್ತರು ಭಾಗವಹಿಸಿದ್ದರು. ಅಡಿಕೆ ಪತ್ರಿಕೆಯ ಶ್ರೀ’ಪಡ್ರೆ ಶಿಬಿರ ನಿರ್ದೇಶಕರಾಗಿದ್ದರು. ಆಗ ರಾಜ್ಯದ ೨೫ ಜಿಲ್ಲೆಗಳ ೭೧೭೫ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪದಲ್ಲಿತ್ತು. ೩೫೦ ಗ್ರಾಮಗಳು ಟ್ಯಾಂಕರ್ ಮೂಲಕ ನೀರು ಪಡೆಯುತ್ತಿದ್ದವು. ಚೆನ್ನಗಿರಿಯ ಮಲಹಾಳ್ ಹಳ್ಳಿ ಆ ವರ್ಷ ೨೬೦ ಕೊಳವೆ ಬಾವಿ ಕೊರೆಸಿತ್ತು!

 ಈಗಿನ ಸ್ಥಿತಿ

ಜಲ ಸಂರಕ್ಷಣೆಗೆ ಜನ ಜಾಗೃತಿಯ ರಚನಾತ್ಮಕ ಕಾರ್ಯಕ್ಕೆ ಎರಡು ದಶಕ ತುಂಬುತ್ತಿದೆ. ಜಾಗೃತಿಯ ಪಯಣದಲ್ಲಿ ಕಲಿತ ಪಾಠಗಳು ಹಲವಿದೆ. ಆದರೆ ನೀರಿನ ಬಳಕೆ ಹೆಚ್ಚುತ್ತ ವಾರ್ಷಿಕ ಸರಾಸರಿ ಮಳೆ ಸುರಿದರೂ ಕೃಷಿ ಕಷ್ಟ ತಪ್ಪುತ್ತಿಲ್ಲ. ವಾಣಿಜ್ಯ ಕೃಷಿ ಅಬ್ಬರದಿಂದ ಸುರಿವ ಮಳೆಗಿಂತ ಬಳಸುವ ಮಿತಿ ಹೆಚ್ಚಾಗಿ ಬರ ಇನ್ನೂ ಭೀಕರವೆನಿಸಿದೆ. ಮಳೆ  ನೀರು ಹಿಡಿಯುವ ಪಾತ್ರೆಗಳಾಗಿದ್ದ ಕೆರೆ, ಕುಂಟೆಗಳ ಸುಧಾರಣೆ ನಡೆಯಬೇಕು. ಕುಡಿಯುವ ನೀರನ್ನು ಪೇಟೆಯಿಂದ ಹಣಕೊಟ್ಟು ಖರೀದಿಸುವ ತುಮಕೂರಿನ ಹಳ್ಳಿಗರಿಗೆ ಪಕ್ಕದ ಮನೆಯ ಮಳೆಕೊಯ್ಲಿನ ಅರಿವಿಲ್ಲ! ಸಂರಕ್ಷಣೆಯ ಯಶೋಗಾಥೆ ಮಾಧ್ಯಮ ಮೂಲಕ ದೂರದ ರಾಜ್ಯ ತಲುಪಬಹುದು, ಆದರೆ ಪಕ್ಕದ ಕೃಷಿಕರಿಗೆ ಮನದಟ್ಟಾಗುತ್ತಿಲ್ಲ ! ಸಂವಹನ ಸಂಕಟ ಸವಾಲಾಗಿ ಕಾಡುತ್ತಿದೆ. ಜಲ ಸತ್ಯಗಳ ದರ್ಶನಕ್ಕೆ ನಾವು ಇನ್ನೇನು ಮಾಡಬಹುದು? ಪ್ರಶ್ನೆಗಳು ಜನಿಸಿವೆ.

 ಟ್ಯಾಂಕರ್ ನೀರು ಒದಗಿಸುವದು ತತ್‌ಕ್ಷಣಕ್ಕೆ ಪರಿಹಾರವಾಗಬಹುದು. ಚುನಾವಣೆಯ ಕಾಲಕ್ಕೆ ನೀರು ಹಂಚುವದು ಓಟು ಗೆಲ್ಲುವ ತಂತ್ರವಾಗಿ ಮಾರ್ಪಟ್ಟಿದೆ. ಸಮಸ್ಯೆಯಿಂದ ಪಾಠ ಕಲಿತು ಭವಿಷ್ಯದ ಸುಸ್ಥಿರ ಯೋಜನೆ ರೂಪಿಸುವದು ಮರೆತು ನೀರಿಲ್ಲದ ನಿರ್ಮಾಣಕ್ಕೆ ಹಣ ನೀರು ಮಾಡುವ ವ್ಯವಸ್ಥೆಯಿದೆ. ಕೊಳವೆ ಬಾವಿ ಕೊರೆಸಲು ಹತ್ತಾರು ಲಕ್ಷ ಖರ್ಚು ಮಾಡುತ್ತೇವೆ, ಅದೇ ಬಾವಿಗೆ ಮಳೆ ನೀರು ಇಂಗಿಸಲು ಹತ್ತು ಸಾವಿರ ವಿನಿಯೋಗಿಸುವದಿಲ್ಲವೆಂಬ ಚಿತ್ರದುರ್ಗದ ಜಲತಜ್ಞ ದೇವರಾಜ ರೆಡ್ಡಿಯವರ ಮಾತು ಮಾರ್ಮಿಕವಾಗಿದೆ.  ಬಾವಿಗಳು ಬರಿದಾದಂತೆ ನೀರಿನ ಭವಿಷ್ಯ ಏನಾಗಬಹುದು? ಎಚ್ಚರಿಸುವ ಸಂದರ್ಭ ಎದುರಾಗಿದೆ.

 ಜಲ ಸಂಕಟ

ಪರಿಸರ ಪರಿಸ್ಥಿತಿ ಜಟಿಲವಾಗಿ ಮಳೆಗಾಲದಲ್ಲಿಯೇ ಟ್ಯಾಂಕರ್ ನೀರು ಬಳಸುವ ಸಾವಿರಾರು ಗ್ರಾಮಗಳಿವೆ. ರಾಜ್ಯ ತೀವ್ರ ಬರ ಎದುರಿಸುತ್ತಿದೆ. ಮಳೆಗಾಲದಲ್ಲಿ ತುಂಬಿ ಉಕ್ಕುತ್ತಿದ್ದ ಮಲೆನಾಡಿನ ಬಾವಿಗಳಲ್ಲಿ ಈ ವರ್ಷ ನೀರು ಏರಿಲ್ಲ, ಒರತೆ ಜಲ ಉದಯಿಸಿಲ್ಲ. ಕೃಷಿ ನೀರಾವರಿಗೆ ರೂಪಿಸಿದ ಬೃಹತ್ ಯೋಜನೆಗಳಿಂದ ಬಿಂದಿಗೆ ಕುಡಿಯುವ ನೀರು ಪಡೆಯುವದು ಕಷ್ಟವಾಗಿದೆ. ವಾರ್ಷಿಕ ೩೦೦೦-೪೦೦೦ ಮಿಲಿ ಮೀಟರ್ ಮಳೆ ಸುರಿಯುವ ಕರಾವಳಿ ನೆಲೆಯಲ್ಲಿ ೧೧೦೦ ಮಿಲಿ ಮೀಟರ್ ಸುರಿದಿಲ್ಲ. ಜಲವಿದ್ಯುತ್  ಉತ್ಪಾದನೆ  ಸ್ಥಗಿತವಾಗುವ ಪರಿಸ್ಥಿತಿಯಲ್ಲಿದೆ, ಮಳೆಗಾಲದಲ್ಲಿ ದಿನಕ್ಕೆ ೧೨ ಗಂಟೆ ವಿದ್ಯುತ್ ಕಡಿತವಾಗಿದೆ. ಅರೆಮಲೆನಾಡು, ಬಯಲುಸೀಮೆಗಳಲ್ಲಿ ನದಿ, ಕೆರೆ, ತೆರೆದ ಬಾವಿಗಳಲ್ಲಿ ನೀರಿಲ್ಲ. ಆಳದ ಕೊಳವೆ ಬಾವಿಯಿಂದ ನೀರೆತ್ತಲು ವಿದ್ಯುತ್ ಸಮಸ್ಯೆ ತಲೆದೋರಿದೆ. ಕೃಷಿ, ಕುಡಿಯುವ ನೀರಿನ ಸ್ಥಿತಿ ಆತಂಕದಲ್ಲಿದೆ.

 ಏನು ಮಾಡಬಹುದು?

ನೀರನ್ನು ಮಿತ ಮಿತವಾಗಿ ಬಳಸಲು ಎಚ್ಚರಿಸುವ  ಕಾಲ ಬಂದಿದೆ. ನೀರಿನ ಕಷ್ಟ ಕೃಷಿ ಜೀವನದ ಮೇಲೆ ತೀವ್ರ ಆರ್ಥಿಕ ಸಂಕಷ್ಟ ತಂದಿದೆ. ಜಲಕ್ಷಾಮಕ್ಕೆ ಪರಿಹಾರ ತೋರಿಸುವ, ಮಾದರಿ ಪರಿಚಯಿಸುವ, ಸ್ಥೈರ್ಯ ತುಂಬುವ ಕಾರ್ಯ ಹೆಚ್ಚಬೇಕಾಗಿದೆ. ಜಲ ಕಾಯಕದ ವಿವಿಧ ಮಾದರಿಗಳ ಅವಲೋಕನ  ಮಾಡುವದು, ದಶಕಗಳ ಪರಿಸರ ಬದಲಾವಣೆಯ ಹಿನ್ನೆಲೆಯಲ್ಲಿ ನಾಳಿನ ಪರಿಸ್ಥಿತಿಯನ್ನು ಪರಸ್ಪರ ಅರಿಯುವದು ಮುಖ್ಯವಿದೆ. ಜನರ ಆಸಕ್ತಿ, ಕೃಷಿ ಪರಿವರ್ತನೆ ಪರಿಣಾಮ, ಸರಕಾರದ ನೀತಿಗಳನ್ನು ಅರ್ಥಮಾಡಿಕೊಂಡು ಕೆರೆ, ನದಿ, ಅರಣ್ಯ ಸಂರಕ್ಷಣೆಗೆ ಪರಿಣಾಮಕಾರಿ ಮಾರ್ಗ ಹುಡುಕಬೇಕು. ಹಳ್ಳಿ ನಗರಗಳಲ್ಲಿನ ಜಲಕೊಯ್ಲು, ಕೆರೆ ಸಂರಕ್ಷಣೆ ಸಮಸ್ಯೆ ಸವಾಲುಗಳನ್ನು ಅರಿತು  ರಾಜ್ಯದ ಶ್ರೀಸಾಮಾನ್ಯರ ನೆಲೆಯಲ್ಲಿ ‘ವಾಟರ್ ಅಡಿಟ್’ ನಡೆಸುವ ಮೂಲಕ ನಿಖರ ಸಾಕ್ಷ್ಯಗಳ ಜೊತೆ ನೀರಿನ ಸತ್ಯ ದರ್ಶನ ಪಡೆಯುವದು ನಮ್ಮ ಮುಖ್ಯ ಗುರಿಯಾಗಿದೆ.

 ಚಿತ್ರ-ಲೇಖನ: ಶಿವಾನಂದ ಕಳವೆ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*