ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮನಗುಂಡಿಯಲ್ಲಿ ಹೊಸ ಮನ್ವಂತರ

“ಮೊದಲು ಸಂಜೆಯಾದ್ರ ಸಾಕು ಜೀವ ಕೈಯಾಗ ಹಿಡಕೊಂಡು ಊರ ಹೊರಗ ಬಯಲಿಗೆ ಹೋಗಬೇಕಾಗುತ್ತಿತ್ರಿ. ಹುಳ ಹುಪ್ಪಡಿ ಕಾಟ ಒಂದ ಕಡೆ,  ಇನ್ನೊಂದ ಕಡೆ ಯಾರಾರ ಗಂಡಸರು ಬಂದರ ಎದ್ದು ನಿಲ್ಲುವ ಅನಿವಾರ್ಯತೆ. ಯಾರಿಗೂ ಬ್ಯಾಡ್ರಪಾ ಈ ಗೋಳು.. ಈಗ ಅದೇನಿಲ್ರಿ. ನೆಮ್ಮದಿಯಿಂದ ಅದೇನ್ರಿ…ನನಗೂ ಈಗ ಅರ್ಥ ಆಗಾಕತ್ತೈತ್ರಿ…”

neelavva badigerಹೀಗೆ ತಮ್ಮ ಗೋಳು ಹೇಳಿದ್ದು ಧಾರವಾಡ ತಾಲೂಕಿನ ಮನಗುಂಡಿಯ ನೀಲಮ್ಮ ಬಡಿಗೇರ ಎಂಬ ವೃದ್ಧೆ. ಅಂದ ಹಾಗೆ, ಈ ಅಜ್ಜಿ ಹೇಳಿದ ಗೋಳು ನಮ್ಮ ಹಳ್ಳಿಗಳಲ್ಲಿ ಮಾಮೂಲು. ಇದು ನಿತ್ಯವೂ ಜೀವಹಿಂಡುವ ಬಯಲುಶೌಚಕ್ಕೆ ಹೋಗುವ ಗ್ರಾಮೀಣ ಜನರ ಗೋಳು. ಬದಲಾದ ಸನ್ನಿವೇಶದಲ್ಲಿ, ನೀಲಮ್ಮ ಅಜ್ಜಿ ಈ ರೂಢಿ ಕೈ ಬಿಟ್ಟಿದ್ದಾರೆ. ಮನೆ ಆಚೆಯೇ ಶೌಚಾಲಯ ಕಟ್ಟಿಕೊಂಡು ಸಮಸ್ಯೆಗೆ ಬೈ ಹೇಳಿದ್ದಾಳೆ.

೨ ವರ್ಷದ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ ಮಗನ ಕಳೆದುಕೊಂಡ ದು:ಖ ಇನ್ನೂ ಮಡುಗಟ್ಟಿದೆ. ಬ್ರೆಡ್ ಫ್ಯಾಕ್ಟರಿಯಲ್ಲಿ ಸೊಸೆ ಮಾಡುವ ಕೆಲಸದಿಂದ ಬರುವ ಸಂಬಳ ಇವರ ಜೀವನನಿರ್ವಹಣೆಗೆ ಆಧಾರ. ಈ ಮಧ್ಯೆ  ಮೊಮ್ಮಗಳು ಗರ್ಭಿಣಿಯಾಗಿದ್ದು ಬಾಣಂತನಕ್ಕೆ ಬರುವವಳಿದ್ದಾಳೆ. ಬೀಗರು ಶೌಚಾಲಯ ಕಟ್ಟಿಸಿಕೊಂಡರೆ ಮಾತ್ರ ಸೊಸೆಯನ್ನು ಬಾಣಂತನಕ್ಕೆ ಕಳುಹಿಸುವುದಾಗಿ ಹೇಳಿದಾಗ, ನೀಲಮ್ಮಳಿಗೆ ಶೌಚಾಲಯದ ಮಹತ್ವ ಮತ್ತು ಅಗತ್ಯತೆಯ ಅರಿವಾಗಿದೆ. ಅದರ ಫಲಶೃತಿ ಮನೆ ಎದುರು ನಿರ್ಮಾಣಗೊಂಡ ಶೌಚಾಲಯ.

ಬದಲಾವಣೆ ಗಾಳಿ

toilet1ಇದು ಬರೀ ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಕುಟುಂಬಗಳು ಇಂದು ಮನಗುಂಡಿಯಲ್ಲಿ ಸ್ಕೋಪ್ ಸಂಸ್ಥೆ ಮಾರ್ಗದರ್ಶನ ಹಾಗೂ ಗ್ರಾಮ ಪಂಚಾಯಿತಿ ಸಹಕಾರದಿಂದ ಬದಲಾವಣೆಯ ಹಾದಿ ತುಳಿಯುತ್ತಿವೆ. ಮನಗುಂಡಿಯಲ್ಲಿ ನೀರು ಮತ್ತು ನೈರ್ಮಲ್ಯ ವಿಚಾರದಲ್ಲಿ ಸದ್ದಿಲ್ಲದೇ ಕ್ರಾಂತಿ ನಡೆಯುತ್ತಿದೆ. ಜನ ನೀರಿನ ಮಹತ್ವ ಮತ್ತು ಸ್ವಂತ ಶೌಚಾಲಯ ಕಟ್ಟಿಕೊಳ್ಳುವುದರಿಂದ ಆಗುವ ಉಪಯೋಗ ಅರಿಯಲಾರಂಭಿಸಿದ್ದಾರೆ. ಆ ಮೂಲಕ ನೆಮ್ಮದಿಯ ಬದುಕಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಬಯಲು ಶೌಚದಿಂದ ಆಗುವ ಮುಜುಗರ ತಪ್ಪಿಸಿಕೊಳ್ಳಬೇಕೆನ್ನುವ ಮನೋಭಾವ ಬಂದಿದೆ. ಆರಂಭದಲ್ಲಿ, “ಏ ಹೋಗಪಾ ನೀನೇಣು ಹೇಳ್ತಿ ನಾವು ಮುಂಚೆಯಿಂದಲೂ ಹೀಗೆ ಹೋಗೋದು”, ಅಂದವರೀಗ ಯಾವಾಗ ಟಾಯ್ಲೆಟ್ ಕಟ್ಟಿಸಿಕೊಡ್ತೀರಿ ಅಂತ ಫಯಾಜ್‌ನ ಬೆನ್ನು ಬಿದ್ದಿದ್ದಾರೆ.

ಈ ಹಿಂದೆ ಬೇಕಾಬಿಟ್ಟಿ ನೀರು ಬಳಕೆ ಇಲ್ಲಿ ಸಾಮಾನ್ಯವಾಗಿತ್ತು. ಅವೈಜ್ಞಾನಿಕ ವ್ಯವಸ್ಥೆಯಿಂದಾಗಿ, ಸಿಕ್ಕವರಿಗೆ ಸಿಕ್ಕಿತು ಇಲ್ಲದವರಿಗೆ ಇಲ್ಲ ಎನ್ನುವಂತಿತ್ತು new nalliಇಲ್ಲಿ ನೀರು ಪೂರೈಕೆ ವ್ಯವಸ್ಥೆ. ಇದಕ್ಕೊಂದು ಪರಿಹಾರ ಕಂಡು ಹಿಡಿದದ್ದು ಸ್ಕೋಪ್‌ನ ಪ್ರತಿನಿಧಿ ಉತ್ಸಾಹಿ ಯುವಕ ಫಯಾಜ್. ಸಂಸ್ಥೆಯ ರೂವಾರಿ ಡಾ. ಪ್ರಕಾಶ ಭಟ್‌ರ ಮಾರ್ಗದರ್ಶನ, ಸಲಹೆ ಸೂಚನೆಯಂತೆ ಎಲ್ಲಾ ಗ್ರಾಮಸ್ಥರಿಗೆ ಸಮಪಾಲು ನೀರು ಸಿಗುವಂತಾಗಿಸುವಲ್ಲಿ ಕಾರ್ಯೋನ್ಮುಖವಾಗಿ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದ್ದಾನೆ. ಈತನ ಈ ಕೆಲಸದಲ್ಲಿ ಕೈ ಜೋಡಿಸಿದ್ದು ಉತ್ಸಾಹಿ ಯುವ ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಾನಂದ ಗೋರೋಜಿಯವರ್, ಯಲ್ಲಪ್ಪಾ ಸೋಮೋಜಿಯವರ್, ನೀಲವ್ವ ಕಳವಿ, ಶಿವಾನಂದ ನಾಯ್ಕರ್, ಗಂಗಾಧರ ಸೇರಿದಂತೆ ಹಲವರು.

ಮನೆಮನೆಗೆ ಭೇಟಿ


fayaz---for-portalಫಯಾಜ್ ಜತೆಗೂಡಿ ಇಂದು ಗ್ರಾಪಂ ಸದಸ್ಯರು ಮನೆಮನೆಗೆ ತೆರಳಿ ಅರ್ಧ ಇಂಚಿನನಲ್ಲಿ ಪೈಪ್ ಅಳವಡಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ವಾಟರಮನ್, ಬಿಲ್ ಕಲೆಕ್ಟರ್ ಹಾಗೂ ಆತನ ಸಹಾಯಕನೊಬ್ಬನನ್ನು ಕರೆದುಕೊಂಡು ಕೈಯಲ್ಲಿ ನಲ್ಲಿ ಕೂರಿಸಲು ಬೇಕಾಗುವ ಸರಂಜಾಮು ಹಿಡಿದು, ಮನೆಮನೆಗೆ ಹೊರಡುತ್ತಾರೆ. ಮನೆ ಮಾಲೀಕರ ಎದುರು ಹೊಸ ಟ್ಯಾಪ್ ಕೂರಿಸುತ್ತಾರೆ. ಪಂಚಾಯಿತಿಯ ಅನುಮತಿ ಪಡೆಯದೇ ನಳ ಹಾಕಿಕೊಂಡಿದ್ದಲ್ಲಿ, ೧೦೦೦ ರೂಪಾಯಿ ದಂಡ ತುಂಬಲು ೨ರಿಂದ ೩ ದಿನ ಕಾಲಾವಕಾಶ ಕೊಡ್ತಾರೆ. ಪರಿಚಯದವರು, ದೊಡ್ಡವರು ಇಂತಹ ಯಾವುದೇ ಲಾಬಿ ಇಲ್ಲಿ ನಡೆಯುವುದಿಲ್ಲ. ಈ ಮುಂಚೆ ಕೆಲವರು ಹಾಕಿಕೊಂಡಿದ್ದ ಮುಕ್ಕಾಲು ಅಥವಾ ೧ ಇಂಚಿನ ಪೈಪ್‌ನ್ನು ನಿರ್ದಾಕ್ಷಿಣ್ಯವಾಗಿ ಬದಲಿಸುತ್ತಾರೆ. ತಮ್ಮ ಕೆಲಸದ ಹಿಂದಿನ ಉದ್ದೇಶ ಮತ್ತು ಹೆಚ್ಚುವರಿ ಅಳತೆಯ ಪೈಪ್ ಲೈನ್‌ನಿಂದ ಇತರರಿಗಾಗುವ ತೊಂದರೆ ಬಗ್ಗೆ ವಿವರಿಸಿ ಅವರ ಮನವೊಲಿಸುತ್ತಾರೆ.

ಈ ಮೊದಲು ಗ್ರಾಮದ ಜನರು ನಲ್ಲಿ ಮುಂಭಾಗ ಟ್ಯಾಪ್ ಹಾಕಿಕೊಳ್ಳುತ್ತಿರಲಿಲ್ಲ. ನೇರ ಪೈಪ್ ಹಾಕಿಕೊಂಡು ನೀರು ಬಳಸುತ್ತಿದ್ದರು. ಅವಶ್ಯಕತೆ ಇಲ್ಲದಿದ್ದಾಗ new nalaಪೈಪ್‌ನ್ನು ಹಾಗೆ ಗಟಾರ್ ಗೆ ಹೊಂದಿ ಬಿಡುತ್ತಿದ್ದರು. ಇದರಿಂದ ನೀರು ಪೋಲಾಗುತ್ತಿತ್ತು. ಆದರೆ ಇದೀಗ ಈ ಸಮಸ್ಯೆ ಮುಕ್ತಿ ಕಂಡಿದೆ. ಟ್ಯಾಪ್ ಅಳವಡಿಸಿದರ ಪರಿಣಾಮ ನೀರಿನ ಪೋಲಿಗೆ ಕಡಿವಾಣ ಹಾಕಲಾಗಿದೆ. ಗ್ರಾಮದ ಪ್ರತಿ ವಾರ್ಡ್‌ನಲ್ಲಿ ಈ ರೀತಿ ನಳ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಒಟ್ಟು ೬೯೨ ನಳಗಳನ್ನು ಅಳವಡಿಸುವ ಗುರಿ ಹೊಂದಲಾಗಿದ್ದು ಈಗಾಗಲೇ ೩೧೦ ರಷ್ಟು ನಳ ಜೋಡಣೆ ಮುಗಿದಿದೆ. ಇನ್ನೂ ೪೦೦ ರಷ್ಟು ಬಾಕಿ ಇದೆ.

ಶಿರಗುಪ್ಪಿ ಮಾದರಿ

ಮನಗುಂಡಿಯ ಪ್ರಸ್ತುತ ಗ್ರಾಮ ಪಂಚಾಯಿತಿ ಸದಸ್ಯರು ಹೊಸತನದ ತುಡಿತ ಹಾಗೂ ಬದಲಾವಣೆ ಬಯಸುವ ಮನೋಭಾವದವರು. ಇವರಿಗೆ ಗ್ರಾಮದ ಹಿರಿಯರು ಸಾಥ್ ಕೊಟ್ಟ ಪರಿಣಾಮ ಇಂದು ಮನಗುಂಡಿಯಲ್ಲಿ ಅಭಿವೃದ್ಧಿ ಎನ್ನುವ ಪದ ಸಾರ್ಥಕ್ಯ ಕಂಡುಕೊಳ್ಳುತ್ತಿದೆ. ಇವರ ಕಂಗಳಲ್ಲಿ ನಮ್ಮ ಗ್ರಾಮ ಮಾದರಿಯಾಗಬೇಕೆನ್ನುವ ಕನಸು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಏನೆಲ್ಲಾ ಯತ್ನಗಳು ಬೇಕೋ ಅದನ್ನೆಲ್ಲಾ ಮಾಡಲು ಮುಂದಾಗಿರುವ ಇವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ್ದಾರೆ. ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿರುವ ಶಿರಗುಪ್ಪಿ ಗ್ರಾಮ ಹಾಗೂ ಅಲ್ಲಿನ ಪಂಚಾಯಿತಿಯ ಕಾರ್ಯವೈಖರಿ ಕಂಡು ತಾವೂ ಅದರಂತಾಗಲು ನಿರ್ಧರಿಸಿದ್ದಾರೆ.

ಡಸ್ಟಬಿನ್ ವ್ಯವಸ್ಥೆ

dustbinಕಾಲಕ್ರಮೇಣ ಮನಗುಂಡಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಊರ ತುಂಬೆಲ್ಲಾ ಕಾಂಕ್ರೀಟ್ ರಸ್ತೆಗಳು ಆಗಿವೆ. ಅಲ್ಲಲ್ಲಿ ಅಂಗಡಿಗಳು ಸಾಕಷ್ಟಾಗಿವೆ. ಈ ಅಂಗಡಿ ಹೊರಗೆ ನಮಗೆ ಡಸ್ಟಬಿನ್ ಕಂಡು ಬರುತ್ತದೆ. ಅಂಗಡಿಗೆ ಬರುವ ಗ್ರಾಹಕರು ತಾವು ತಿಂದುಳಿದ ಕವರ್ ಅಥವಾ ಕೊಂಡುಕೊಡ ವಸ್ತುವಿನ ಪ್ಲಾಸ್ಟಿಕ್ ಅಥವಾ ಇನ್ನ್ಯಾವುದೇ ಚೀಲವಿದ್ದಲ್ಲಿ ಇದರಲ್ಲಿ ಹಾಕಬೇಕು. ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಸ್ಕೋಪ್ ಸಂಸ್ಥೆ ಈ ಡಸ್ಟ್‌ಬಿನ್‌ಗೆ ತಗಲುವ ಅರ್ಧ ವೆಚ್ಚ ಭರಿಸಿದರೆ, ಉಳಿದರ್ಧ ಹಣ ಅಂಗಡಿ ಮಾಲೀಕ ಭರಿಸಬೇಕು. ಇದರಿಂದ ಗ್ರಾಮದ ರಸ್ತೆಗಳು ಸ್ವಚ್ಛವಾಗಿವೆ. ವಾರಕ್ಕೊಮ್ಮೆ ಈ ಡಸ್ಟಬಿನ್‌ನಲ್ಲಿನ ಕಸ ವಿಲೇವಾರಿ ನಡೆಯುತ್ತದೆ.

ಶೌಚಕ್ರಾಂತಿ

ಇದು ನಳ ಜೋಡಣೆಯ ಕೆಲಸದ ವಿಚಾರವಾದರೆ, ಇದಕ್ಕಿಂತ ಮಿಗಿಲಾದ ಮಹತ್ತರ ಕೆಲಸ ಈ ಗ್ರಾಮದಲ್ಲಿ ನಡೆದಿರೋದು ಎಂದರೆ  ಶೌಚಾಲಯ ಕಟ್ಟಿಕೊಳ್ಳಿಸುವಂತಹದು. ಬಯಲುಶೌಚ ಪದ್ಧತಿಗೆ ಮುಕ್ತಿ ಕಾಣಿಸಲು ಪಣ ತೊಟ್ಟಿರುವ ಫಯಾಜ್, ದಿನ ಬೆಳಗಾದರೆ ಸಾಕು, ಯಾರ ಮನೆಯಲ್ಲಿ ಶೌಚಾಲಯವಿಲ್ಲವೋ ಅವರ ಮನೆಗೆ ಹೋಗಿ ಆದಷ್ಟು ಬೇಗ ಶೌಚಾಲಯ ಕಟ್ಟಿಸಿಕೊಳ್ಳಿ, ಬಯಲುಬಹಿರ್ದೆಸೆ ಸರಿಯಾದುದಲ್ಲ, ಮರ್ಯಾದೆ ಪ್ರಶ್ನೆ ಎಂದೆಲ್ಲಾ ಗಂಟು ಬೀಳುತ್ತಾನೆ. ಪ್ರತಿ ವಾರ್ಡಿನ ಹಿರಿಯ ನಾಗರಿಕರು ಹಾಗೂ ಸದಸ್ಯರ ಜತೆಗೂಡಿ, ಮನೆ ಮನೆಗೆ ಭೇಟಿ ನೀಡಿ, ಅವರನ್ನು ಕಾಡಿ ಬೇಡಿ ಶೌಚಾಲಯ ನಿರ್ಮಿಸಿಲು ಮುಂದಾಗುವಂತೆ ಪ್ರೇರೇಪಿಸುತ್ತಾನೆ. ಈ ಕಾರಣದಿಂದಲೇ ಗ್ರಾಮದ ತುಂಬೆಲ್ಲಾ ಫಯಾಜ್ ಬಂದನೆಂದರೆ ಟಾಯ್ಲೆಟ್ ಸಾಹೇಬ್ ಬಂದ ಎನ್ನುವ ಮಾತು ಕೇಳಿ ಬರುತ್ತದೆ.

ಇದೀಗ ಗ್ರಾಮ ಪಂಚಾಯಿತಿಯಿಂದಲೂ ಶೌಚಾಲಯ ಕಟ್ಟಿಸಿಕೊಳ್ಳಲು ಆರ್ಥಿಕ ಸಹಾಯ ಕಲ್ಪಿಸಲು ಅವಕಾಶವಿದೆ. ಆರಂಭದಲ್ಲಿ ೧೨ ರಿಂದ ೧೫ ಸಾವಿರರೂ ಖರ್ಚು ಮಾಡಿ ಶೌಚಾಲಯ ನಿರ್ಮಿಸಿಕೊಳ್ಳಬೇಕು. ಎಲ್ಲರಿಗೂ ಈ ತರಹ ಮೊದಲು ವ್ಯಯಿಸಿ ಶೌಚಾಲಯ ಕಟ್ಟಿಸಿಕೊಳ್ಳಲು ಸಾಧ್ಯವಿಲ್ಲ. ಕಾರಣ ಆರ್ಥಿಕ ಸಂಕಷ್ಟ. ಗ್ರಾಮಸ್ಥರಲ್ಲಿ ಬಹುಪಾಲು ಜನ ಕೃಷಿಕರು. ಈ ವರ್ಷ ಮೊದಲೇ ಮಳೆ ಇಲ್ಲ ಬೆಳೆಯೂ ಇಲ್ಲ.

toiletಶೌಚಾಲಯ ಕಟ್ಟಿಸಿಕೊಂಡು ಅದರ ಫೊಟೋ ತೆಗೆಸಿ, ಜಿಪಿಎಸ್ ಮಾಡಿ, ಗ್ರಾಮ ಪಂಚಾಯಿತಿ ಮೂಲಕ ಜಿಲ್ಲಾ ಪಂಚಾಯಿತಿಗೆ ಕಳುಹಿಸಕೊಡಲಾಗುತ್ತದೆ. ಅಲ್ಲಿ ಮಂಜೂರಾತಿ ನಂತರ, ನೇರವಾಗಿ ಆ ವ್ಯಕ್ತಿಯ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ, ಇದಕ್ಕೆ ಕೆಲ ತಾಂತ್ರಿಕ ಅಡಚಣೆಗಳೂ ಇವೆ. ಮೊದಲನೆಯದ್ದು, ಪಂಚಾಯಿತಿಯಿಂದ ವರ್ಕ್ ಆರ್ಡರ್ ಪಡೆದಿರಬೇಕು. ನಂತರ ಬ್ಯಾಂಕ್ ಖಾತೆ ಹೊಂದಿರಬೇಕು. ಆದರೆ ಮನಗುಂಡಿಯಲ್ಲಿ ಬ್ಯಾಂಕ್ ಇಲ್ಲ. ಸಮೀಪವೆಂದರೆ ನಿಗದಿಗೆ ಹೋಗಬೇಕು. ಇದು ಬಹುತೇಕರಿಗೆ ಅಗದ ಮಾತು. ಈ ಸಮಸ್ಯೆಯನ್ನು ಪರಿಹರಿಸಲು, ಕರ್ನಾಟಕ ವಿಕಾಸ ಗ್ರಾಮೀಣ್ ಬ್ಯಾಂಕ್ ಮೊರೆ ಹೋದ ಫಯಾಜ್ ಅದರಲ್ಲೂ ಸಕ್ಸಸ್ ಆಗಿದ್ದಾನೆ. ಇನ್ನು ಕೆಲವೇ ಕೆಲ ದಿನಗಳಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ್ ಬ್ಯಾಂಕ್ ಮನಗುಂಡಿಯಲ್ಲಿ ಕಾರ್ಯಾರಂಭ ಮಾಡಲಿದೆ. ಗ್ರಾಮಸ್ಥರಿಗೆ ಕೈಗೆಟಕುವ ಬಡ್ಡಿ ದರದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಾಲ ಸೌಲಭ್ಯ ಸಿಗಲಿದೆ. ನಂತರ, ಗ್ರಾಮದ ಎಲ್ಲ ಮನೆಗಳಲ್ಲೂ ಶೌಚಾಲಯ ನಿರ್ಮಾಣವಾಗುವ ಖಚಿತ ಭರವಸೆ ಗ್ರಾಮಸ್ಥರು, ಸ್ಕೋಪ್ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರದ್ದಾಗಿದೆ.

nalajodaneಒಟ್ಟಾರೆ ಹೇಳುವುದಾದರೆ, ಮನಗುಂಡಿಯಲ್ಲಿ ನೀರು ಮತ್ತು ನೈರ್ಮಲ್ಯ ವಿಚಾರದಲ್ಲಿ ಜಾಗೃತಿ ಮೂಡಿದೆ. ಬದಲಾವಣೆ ಮತ್ತು ಅಭಿವೃದ್ಧಿ ಎರಡೂ ಸಾಕಾರಗೊಳ್ಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿವೆ. ಮಾಸ್ಟರ್ ಆಫ್ ಡೆವಲೆಪಮೆಂಟ್ ಮ್ಯಾನೇಜಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಗ್ರಾಮೀಣಾಭಿವೃದ್ಧಿ ಕನಸು ಕಂಡ ಕೊಪ್ಪಳ ಜಿಲ್ಲೆಯ ಬಂಡಿ ಹರ್ಲಾಪುರ ಮೂಲದ ಉತ್ಸಾಹಿ ಯುವಕನ ಪ್ರೋತ್ಸಾಹಕ್ಕೆ ನೀರೆರೆದು ಪ್ರೋತ್ಸಾಹಿಸುತ್ತಿರುವ ಡಾ. ಪ್ರಕಾಶ ಭಟ್‌ರ ಸ್ಕೋಪ್ ಮನಗುಂಡಿಯ ಜನರಲ್ಲಿ ಅಭಿವೃದ್ಧಿಯ ಹೋಪ್ ಮೂಡಿಸಿದ್ದಂತೂ ಸತ್ಯ.

 

ಚಿತ್ರ-ಲೇಖನ: ನಿತ್ಯಸಿರಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*