ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ದ.ಕ.ದಲ್ಲಿ ಕಸದ ಹೊಸ ಪಾಠ: ಗ್ರಾ.ಪಂ.ನ ಮೂಲದಲ್ಲೇ ಹಸಿ- ಒಣ ಕಸ ವಿಂಗಡಣೆ

ಸಂಪೂರ್ಣ ಸ್ವಚ್ಛತಾ ಆಂದೋಲನ ನಡೆಸಿದ, ನಿರ್ಮಲ ಗ್ರಾಮ ಪುರಸ್ಕಾರಗಳಿಗೂ ಭಾಜನವಾದ, ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆ ಎಂದೂ ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ಕಸ ವಿಲೇವಾರಿ ಬಗ್ಗೆಯೂ ಕಾಳಜಿ ವಹಿಸಿದೆ. ೧೩ ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಿ ಕಸ ವಿಲೇವಾರಿ ಪ್ರಕ್ರಿಯೆಯನ್ನು ಗ್ರಾಮೀಣ ಮಟ್ಟದಲ್ಲಿ ಪ್ರಾರಂಭಿಸಲಾಗಿದೆ. ಕಡಬ ಮತ್ತು ಉಜಿರೆ ಗ್ರಾ.ಪಂ.ಗಳಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ, ದ್ರವ ತ್ಯಾಜ್ಯ ವಿಲೇವಾರಿ ಘಟಕ ಅನುಷ್ಠಾನ ಮಾಡಲಾಗಿದೆ. ಮುಂದಿನ ಹೆಜ್ಜೆಯಾಗಿ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಮೂಲದಲ್ಲೇ ಘನ, ದ್ರವ ತ್ಯಾಜ್ಯ ವಿಂಗಡಿಸುವ ಯೋಜನೆಯನ್ನು ಜಿಲ್ಲಾಡಳಿತ ಹಮ್ಮಿಕೊಂಡಿದೆ.

ಸಂಪೂರ್ಣ ಸ್ವಚ್ಛತೆಯಿಂದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನದತನಕ, ಮಹತ್ವದ ಕಾರ್ಯಕ್ರಮ ರೂಪಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯು ೨೦೧೬ರ ಏಪ್ರಿಲ್ ನ ಒಳಗೆ ಎಲ್ಲ ೨೩೦ ಗ್ರಾಮ ಪಂಚಾಯಿತಿಗಳಲ್ಲಿ ಮೂಲದಲ್ಲೇ ಕಸವನ್ನು ವಿಂಗಡಿಸುವ ಗುರಿ ಇಟ್ಟುಕೊಂಡಿದೆ.

3M-Pipe Compost1ಗ್ರಾಮಗಳ ಎಲ್ಲ ಮನೆ, ಶಾಲೆ, ಅಂಗನವಾಡಿ, ಅಂಗಡಿ ಹಾಗೂ ಇತರ ಸಂಸ್ಥೆಗಳಲ್ಲೂ, ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮತ್ತು ಪ್ಲಾಸ್ಟಿಕ್ ಕಸಗಳನ್ನು ಶುಚಿ ಮತ್ತು ಶುಷ್ಕವೆಂದು ಪ್ರತ್ಯೇಕವಾಗಿ ಸಂಗ್ರಹಿಸಿಡುವ ಗುರಿ ಹೊಂದಿದೆ.

ಸ್ವಚ್ಛ ಭಾರತ ಮಿಷನ್ ನ ಅಡಿಯಲ್ಲಿ, ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚು ಒತ್ತು ನೀಡಿದ್ದು, ಜನಸಂಖ್ಯೆ ಆಧಾರದಲ್ಲಿ ೨೦ ಲಕ್ಷ ರೂಪಾಯಿಗಳವರೆಗೆ ಅನುದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಯೋಜನಾ ಅನುಷ್ಠಾನ ಕ್ರಿಯಾ ಯೋಜನೆಯಲ್ಲಿ, ಘನ/ದ್ರವ ತ್ಯಾಜ್ಯ ವಿಲೇವಾರಿಗಾಗಿ ೧೦೦ ಗ್ರಾಮ ಪಂಚಾಯಿತಿಗಳ ಗುರಿ ನಿಗದಿಪಡಿಸಿದ್ದು, ಅದರಂತೆ ಈಗಾಗಲೇ ರಾಜ್ಯ ಕಚೇರಿಯಿಂದ ೩೯ ಗ್ರಾಮ ಪಂಚಾಯಿತಿಗಳ ೨೦ ಲಕ್ಷ ರೂ. ಕ್ರಿಯಾ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಇದರಲ್ಲಿ ಬೆಳ್ತಂಗಡಿ ತಾಲೂಕಿನ ಉಜಿರೆ ಮತ್ತು ಧರ್ಮಸ್ಥಳ ಗ್ರಾಮ ಪಂಚಾಯಿತಿಗಳ ಕಾಮಗಾರಿ ಪೂರ್ಣಗೊಂಡಿದ್ದು, ೨೧ ಕಾಮಗಾರಿ ಪ್ರಗತಿಯಲ್ಲಿವೆ. ಉಳಿದ ಗ್ರಾಮ ಪಂಚಾಯಿತಿಗಳ ಜಮೀನು ಕಂದಾಯ ಇಲಾಖೆಯಿಂದ ಹಸ್ತಾಂತರವಾದ ತಕ್ಷಣ, ಕಾಮಗಾರಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಸಿಇಒ, ಪಿ.ಐ.ಶ್ರೀವಿದ್ಯಾ.

೨೦೧೫-೧೬ನೇ ಸಾಲಿನಲ್ಲಿ ೨೦೧೨ರ ಬೇಸ್ಲೈನ್ ಸರ್ವೆಯಲ್ಲಿ ಬಿಟ್ಟು ಹೋದ ಮತ್ತು ಕುಟುಂಬ ವಿಭಜನೆಗೊಂಡು ಹೊಸ ಮನೆ ನಿರ್ಮಿಸಿದ ೨೮೧೦ ಮತ್ತು ಪ್ರಾಯೋಜಕತ್ವದಲ್ಲಿ ೨೧೬೪ ಶೌಚಾಲಯ ರಹಿತ ಕುಟುಂಬಗಳಿಗೆ ಮತ್ತು ಗ್ರಾಮ ಪಂಚಾಯಿತಿಗಳಿಂದ ಬಂದ ಬೇಡಿಕೆಯಂತೆ, ೩೩ ಸಾಮೂಹಿಕ ಶೌಚಾಲಯ ಹಾಗೂ ೭೦ ಸರಕಾರಿ ಪ್ರೌಢ ಶಾಲೆಗಳ ಹೆಣ್ಣು ಮಕ್ಕಳ ಶೌಚಾಲಯಗಳಿಗೆ ಇನ್ಸುಲೇರೇಟರ್ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.

ಸುಸ್ಥಿರತೆಗೆ ವಿನೂತನ ಯೋಜನೆ
ಜಿಲ್ಲೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಿರ್ಮಲ ಗ್ರಾಮ ಪುರಸ್ಕಾರ ಪಡೆದ ಜಿಲ್ಲೆಯಲ್ಲಿ ನೈರ್ಮಲ್ಯದಡಿ ಸುಸ್ಥಿರತೆ ಕಾಯ್ದುಕೊಳ್ಳಲು, ಮಕ್ಕಳ ಆರೋಗ್ಯ ತಜ್ಞರು ಮತ್ತು ಮಕ್ಕಳ ಶಿಕ್ಷಣ ತಜ್ಞರು, ನುರಿತ ಸ್ವಯಂಸೇವಾ ಸಂಘ, ಸಂಸ್ಥೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ರೂಪುರೇಷೆ ತಯಾರಿಸಲಾಗಿದೆ. ಈಗಾಗಲೇ ಜಿಲ್ಲೆಯ ಐದು ತಾಲೂಕು ಪಂಚಾಯಿತಿಗಳಲ್ಲಿ, ತಾಲೂಕು ಮಟ್ಟದ ಘನ/ದ್ರವ ತ್ಯಾಜ್ಯ ವಿಲೇವಾರಿ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿದೆ.

೨೦೧೫-೧೬ನೇ ಸಾಲಿನಲ್ಲಿ ‘ನಮ್ಮ ಗ್ರಾಮ ಸ್ವಚ್ಛ ಗ್ರಾಮ’ ಧ್ಯೇಯದೊಂದಿಗೆ, ಪ್ರತಿ ಮನೆ, ಶಾಲೆ ಅಂಗನವಾಡಿ ಕೇಂದ್ರ ಮತ್ತು ವಾಣಿಜ್ಯ ಕೇಂದ್ರಗಳಲ್ಲಿ ಹಸಿಕಸವನ್ನು ತಿಪ್ಪೆಗುಂಡಿ, ಕೃಷಿಗೆ ನೇರ ಬಳಕೆ, ಪೈಪ್ ಕಾಂಪೋಸ್ಟ್, ಬಯೋ ಬಿನ್ ಅಥವಾ ಎರೆ ಹುಳ ಗೊಬ್ಬರ ವಿಧಾನಗಳಲ್ಲಿ ಬಳಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

3M-Pipe Compost11ಪ್ಲಾಸ್ಟಿಕ್, ಗ್ಲಾಸ್, ಲೋಹ, ರಬ್ಬರ್ ಇತ್ಯಾದಿ ಒಣ ಕಸಗಳನ್ನು ಪ್ರತ್ಯೇಕವಾಗಿ ಒಣ, ಶುಚಿಯಾಗಿ ಸಂಗ್ರಹಿಸಿ ಇಟ್ಟು, ಗುಜರಿ ವ್ಯಾಪಾರಿಗಳಿಗೆ, ಪ್ಲಾಸ್ಟಿಕ್ ಕಸಗಳನ್ನು ಕೆನರಾ ಪ್ಲಾಸ್ಟಿಕ್ ಅಸೋಸಿಯೇಶನ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಪೆಟ್ರೋಲ್ ತಯಾರಿಕಾ ಘಟಕಕ್ಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಗ್ರಹಿಸಿದ ಇ- ತಾಜ್ಯಗಳನ್ನು ಈಶ್ವರಿ ಮೆಟಲ್ ಇಂಡಸ್ಟ್ರಿ ವತಿಯಿಂದ ಸಂಗ್ರಹಿಸಲು ಯೋಜನೆ ರೂಪಿಸಿದೆ. ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳ ಎನ್ಎಸ್ಎಸ್ ತಂಡದ ಸಂಯೋಜಕರಿಗೆ ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಮಾಹಿತಿ ಕಾರ್ಯಗಾರ ಏರ್ಪಡಿಸಿ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಜನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.

ಗ್ರಾಮಗಳ ನೀರು ಮತ್ತು ನೈರ್ಮಲ್ಯ ಸಮಿತಿ ಚುನಾಯಿತ ಪ್ರತಿನಿಧಿ, ಎಲ್ಲ ಶಾಲೆ, ಅಂಗನವಾಡಿ ಕೇಂದ್ರ, ಧಾರ್ಮಿಕ ಕೇಂದ್ರ ಮತ್ತು ವರ್ತಕರನ್ನು ಒಗ್ಗೂಡಿಸಿಕೊಂಡು, ಕಸವನ್ನು ಮೂಲದಲ್ಲೇ ವಿಂಗಡಿಸಿ, ಹಸಿ ಕಸವನ್ನು ತಮ್ಮ ಹಂತದಲ್ಲಿ ವಿಲೇವಾರಿ ಮಾಡಿ, ಶುಚಿಯಾಗಿ ಸಂಗ್ರಹಿಸಿಟ್ಟ ಕಸ ಉತ್ಪಿತ್ತಿಯಾಗುವ ಪ್ರಮಾಣದ ಆಧಾರದಲ್ಲಿ, ಒಣ ಕಸವನ್ನು ವಾರ, ತಿಂಗಳು, ಮೂರು ತಿಂಗಳಿಗೊಮ್ಮೆ ಗ್ರಾಮ ಪಂಚಾಯಿತಿ ವತಿಯಿಂದ ಸಂಗ್ರಹಿಸಿ, ನೇರವಾಗಿ ಗುಜಿರಿ ವ್ಯಾಪಾರಿಗಳಿಗೆ ನೀಡಲು ಕ್ರಮ ವಹಿಸುವಂತೆ ಜಿಲ್ಲೆಯ ೨೩೦ ಗ್ರಾಮ ಪಂಚಾಯತ್ಗಳಿಗೆ ಸೂಚನೆ ನೀಡಲಾಗಿದೆ.

ಮಂಗಳೂರು ವಿವಿಯು ಜಿಲ್ಲಾ ಪಂಚಾಯಿತಿಗೆ ಒಂದು ಎಕರೆ ಜಮೀನನ್ನು ೧೦ ವರ್ಷ ಅವಧಿಗೆ ಒಪ್ಪಂದದ ಮೇರೆಗೆ ಕೊಣಾಜೆ, ಹರೇಕಳ, ಪಾವೂರು, ಪಜೀರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿಗಾಗಿ ನೀಡಿರುವುದು ಮುಂದಿನ ಯಶಸ್ವಿ ಅನುಷ್ಠಾನಕ್ಕೆ ಕೊಡುಗೆ ಎಂದು ಶ್ರೀವಿದ್ಯಾ ಹೇಳುತ್ತಾರೆ.
ಎಲ್ಲ ೨೩೦ ಗ್ರಾಮ ಪಂಚಾಯಿತಿಗಳಲ್ಲೂ ರಾಷ್ಟ್ರೀಯ ಸ್ವಚ್ಛತಾ ಸಪ್ತಾಹ ಅಂಗವಾಗಿ ವಿಶಿಷ್ಟವಾಗಿ – ಶಾಲೆ, ಅಂಗನವಾಡಿ, ಅಂಗಡಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪರಿಶಿಷ್ಟ ಜಾತಿ ಮತ್ತು ಪಂಗಡ, ಬಿಪಿಎಲ್ ವರ್ಗದ ಕುಟುಂಬಗಳಿಗೆ ಪೈಪ್ ಕಾಂಪೋಸ್ಟ್ ಘಟಕ ಅಳವಡಿಕೆ ಮಾಡಲಾಗಿದೆ.

ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯಿತಿಯಲ್ಲಿ, ಸ್ವಚ್ಛ ಭಾರತ ಅಭಿಯಾನದಡಿ, ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಅನುಷ್ಠಾನಗೊಳಿಸಿ, ಪ್ರತಿ ಮನೆಗಳಿಗೆ ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆ ಸಂದೇಶವನ್ನು ರವಾನಿಸಲು ಕ್ರಮಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಸ್ವಯಂಸೇವಾ ಸಂಸ್ಥೆಗಳು, ಮಕ್ಕಳ ಆರೋಗ್ಯ ತಜ್ಞರು, ಮಕ್ಕಳ ಶಿಕ್ಷಣ ತಜ್ಞರು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದ ಪರಿಸರ ಮತ್ತು ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ಸಂಗ್ರಹಿಸಿ, ತ್ಯಾಜ್ಯಗಳ ಸೂಕ್ತ ವಿಲೇವಾರಿ ಹೇಗೆ? ಎಂಬ ಬಗ್ಗೆ ಕಿರು ಸಾಕ್ಷ್ಯಚಿತ್ರ ‘ಭುವಿ’ ಚಿತ್ರೀಕರಿಸಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜನಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

೨೨,೪೫೫ ಪೈಪ್ ಕಾಂಪೋಸ್ಟ್ ಸ್ಥಾಪನೆ
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ೨೩೦ ಗ್ರಾಮ ಪಂಚಾಯಿತಿಗಳಲ್ಲೂ ರಾಷ್ಟ್ರೀಯ ಸ್ವಚ್ಛತಾ ಸಪ್ತಾಹ ೨೨,೪೫೫ ಪೈಪ್ ಕಾಂಪೋಸ್ಟ್ ಘಟಕ ಅಳವಡಿಕೆ ಮಾಡಲಾಗಿದೆ. ಮಂಗಳೂರು ತಾಲೂಕಿನಲ್ಲಿ ೨೪೧೮, ಬಂಟ್ವಾಳದಲ್ಲಿ ೫೫೧೮, ಪುತ್ತೂರಿನಲ್ಲಿ ೬೧೪೭, ಸುಳ್ಯದಲ್ಲಿ ೩೧೨೧ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ೫೨೫೧ ಘಟಕ ಸ್ಥಾಪಿಸಿದ್ದು, ಹಸಿ ಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ, ಪಿ.ಐ.ಶ್ರೀವಿದ್ಯಾ ಅವರ ಮಾತು.

ಚಿತ್ರ-ಲೇಖನ: ಸುನಿಲ್ ಪುತ್ತೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*