ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಜಲಚಿಂತನೆಯ ಅರ್ಥಪೂರ್ಣ ಮಾತುಕತೆ !

ಹೊಲಕ್ಕೆ ಒಡ್ಡು ಕಟ್ಟದಿದ್ದರೆ ಜಮೀನು ಗೊಡ್ಡೆಮ್ಮೆ ಆದಂತೆ..ನೀರು ಎಲ್ಲದಕ್ಕೂ ಬೇಕ್ರಿ. ಅದ  ಮೂಲ. ಎಷ್ಟು ಮಳೆ ಬಿಳ್ತೈತೋ ಅಷ್ಟ ನೀರ ಹಿಡಿರಿ ಸರಿಯಾಗಿ ಬಳಸ್ರಿ…..ಹೀಗೆಂದು ತಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆ ಮೂಲಕ ಜಲಮಹತ್ವ ಸಾರಿದ್ದು ಬಾಗಲಕೋಟೆಯ ಹುನಗುಂದದ ಡಾ. ಮಲ್ಲಣ್ಣ ನಾಗರಾಳ ಎಂಬ ಪ್ರಗತಿಪರ ಕೃಷಿಕ.

ಸಂದರ್ಭ… ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ ಕಳವೆಯಲ್ಲಿನ ಕಾನ್ಮನೆಯಲ್ಲಿ ಅ.೩ ಮತ್ತು ೪ ರಂದು  ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಆಯೋಜಿಸಿದ್ದ  ಜಲ ವರ್ತಮಾನ ಮತ್ತು ನಾಳಿನ ಭವಿಷ್ಯ ಕುರಿತಾದ ಮಾಧ್ಯಮ ಮಾತುಕತೆ.

 ಎಲೆ ಇಲ್ಲದ ಮರದ ಕೆಳಗೆ (ಬಯಲು)

ಮಲೆ ಇಲ್ಲದ ತಾಯಿ ಕುಂತಾಳ( ಭೂಮಿ)

ಕಾಲಿಲ್ಲದ ಮಗ ಬಂದು ಮಲಿ ಉಂಡಾನ( ಮಳೆ)

k8ಹೀಗೆ, ಜನಪದ ಪದ್ಯಗಳ ಸಾಲುಗಳ  ಮೂಲಕ ತಮ್ಮ ಅನುಭವ ಮಂಟಪವನ್ನು ಬಿಚ್ಚಿಟ್ಟ ಮಲ್ಲಣ್ಣರ ಮಾತಿನಲ್ಲಿ ನೀರಿನ ಮಹತ್ವ ಮತ್ತು ಸಂರಕ್ಷಣೆಯ ಕಾಳಜಿ ಇತ್ತು. ಪುಸ್ತಕದ ತಂತ್ರಜ್ಞಾನಕ್ಕಿಂತ ತಾವು ಕಂಡುಕೊಂಡ ದೇಸಿ ಜ್ಞಾನವೇ ಮೇಲು ಎಂಬುದನ್ನು ಸಾಕ್ಷೀಕರಿಸಿದಂತಿದ್ದವು ಅವರ ಅನುಭವಜನ್ಯ ಮಾತುಗಳು.

ಇದು ಒಬ್ಬ ಮಲ್ಲಣ್ಣನ ಮಾತಲ್ಲ. ನಾಡಿನ ಮೂಲೆ ಮೂಲೆಯಿಂದ ಬಂದಿದ್ದ ಸುಮಾರು ೨೦ಕ್ಕೂ ಹೆಚ್ಚು ಪ್ರಗತಿಪರ ಕೃಷಿಕರು ಜಲ ವರ್ತಮಾನದ ಬಗ್ಗೆ ತಮ್ಮ ಅನುಭವ ಹಾಗೂ ವಿಚಾರಗಳನ್ನು ಅರ್ಥಪೂರ್ಣವಾಗಿ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಹಾಸನ ಜಿಲ್ಲೆ  ಜಾವಗಲ್‌ನ ಮಂಜುನಾಥ ಅವರು ಇಂದಿನ ವ್ಯವಸ್ಥೆ ಬಗ್ಗೆ ಆಡಿದ ಆಕ್ರೋಶಭರಿತ ಮಾತುಗಳ ಹಿಂದೆ, ಆ ಪ್ರದೇಶದ ಕೃಷಿ ವ್ಯವಸ್ಥೆಯ ಹೀನಾಯ ಸ್ಥಿತಿಯ ವ್ಯಥೆಯಿತ್ತು. ಸಚಿವ ಸಂಪುಟದಲ್ಲಿ ಎಲ್ಲ ಪ್ರಮುಖ ಖಾತೆ ನಿರ್ವಹಿಸಿದ, ಅಷ್ಟೇ ಏಕೆ ದೇಶಕ್ಕೆ ಪ್ರಧಾನಿಯನ್ನು ಕೊಟ್ಟ ಜಿಲ್ಲೆಯ ಖ್ಯಾತಿ ಇದ್ದರೂ, ಜಾವಗಲ್ ಸೀಮೆಯ ಜನರ ಜಲಜಂಜಾಟ ಅವರ ಪ್ರತಿ ಮಾತಿನಲ್ಲೂ ಎದ್ದು ಕಾಣುತ್ತಿತ್ತು. ಪಕ್ಕದಲ್ಲೇ ಇರುವ ಜಾವಗಲ್‌ಗೆ ಬರೀ ಎತ್ತು ಕೊಟ್ಟು ದೂರದ ಕೋಲಾರ ಜನತೆಗೆ ಎತ್ತಿನಹೊಳೆ ಹರಿಸಲು ಹೊರಟ ಸರಕಾರದ ಕ್ರಮದ ಹಾಸ್ಯಾಸ್ಪದ ಚಿಂತನೆ ಬಹಿರಂಗಗೊಂಡಿತು.

ಜಲಸಂಕಟಗಳ ನೂರೆಂಟು ಮಾದರಿ

೧೮೦೦ ಅಡಿ ಕೊರೆದರೂ ಹನಿ ನೀರು ಸಿಗದೇ ಪರಿತಪಿಸುತ್ತಿರುವ ಕೋಲಾರ ಜನರ ಜಲದು:ಖವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ತ್ಯಾಗರಾಜು ಅವರು. ಹವ್ಯಾಸಿ ಪತ್ರಕರ್ತ ಮಲ್ಲಿಕಾರ್ಜುನ ಹೊಸಪಾಳ್ಯ, ತುಮಕೂರಿನ ತಲಪರಿಗೆಗಳ ಮಹತ್ವ ತಿಳಿಸಿಕೊಟ್ಟರು. ಒಂದು ಕಾಲದಲ್ಲಿ ೨,೦೦೦ ಸಂಖ್ಯೆಯಲ್ಲಿದ್ದ ಈ ತಲಪರಿಗೆಗಳ ಸಂಖ್ಯೆ ಇಂದು ೨೦೦ಕ್ಕೆ ಕ್ಷೀಣಿಸಿದ್ದನ್ನು ಹೇಳಿದಾಗ ಜನರ ಜಲನಿರ್ಲಕ್ಷ್ಯದ ಪರಮಾವಧಿಯ ಪರಿಚಯವಾಯಿತು.

ರಾಜಣ್ಣ ನಿಂಬರಗಿ, ನೀರಿಲ್ಲದ ಊರಲ್ಲಿ ಬೇಸಾಯದ ಬದುಕಿನ ಸಾಧನೆಯ ರಹಸ್ಯ ತಿಳಿಸಿದರು.  ಬಿಸಿಲುನಾಡು ಕುಷ್ಟಗಿಯ ಹೊರವಲಯದಲ್ಲಿ, ಶ್ರೀಗಂಧ ಹಾಗೂ ದಾಳಿಂಬೆ ಬೆಳೆಯುವ ಮೂಲಕ ಆರ್ಥಿಕ ಸದೃಢತೆ ಕಂಡುಕೊಂಡ ರಮೇಶ ಬಳೂಟಗಿಯವರ ಯಶೋಗಾಥೆ ಹಲವರನ್ನು ಸಿರಿಗಂಧ ಕೃಷಿಗೆ ಪ್ರೇರೇಪಿಸಿತು. ಕಾಮಣ್ಣ ರಂಗಾಪೂರ ಹಾಗೂ ಚನ್ನಬಸಪ್ಪ ಕೊಂಬಳಿಯವರು ಸಾವಯವ ಹಾಗೂ ನೈಸರ್ಗಿಕ ಕೃಷಿಯ ಖುಷಿಯನ್ನು ಹಂಚಿಕೊಂಡರು.

ಗಡಿನಾಡು ಬೀದರ್‌ನ ಚಂದ್ರಶೇಖರ ಕಾಡಾದಿಯವರು ಒಂದಿಂಚು ಬೋರವೆಲ್ ನೀರಿನಿಂದಲೇ ನೈಸರ್ಗಿಕ ಕೃಷಿ ಪದ್ಧತಿ ಮೂಲಕ ಕಬ್ಬು ಬೆಳೆದು, ಬೆಲ್ಲ ತಯಾರಿಕೆಗೆ ಮುಂದಾಗಿ, ಸೈ ಎನಿಸಿಕೊಂಡಿದ್ದರ ಹಿಂದಿನ ಶ್ರಮ ಹಾಗೂ ಗುಟ್ಟು ತಿಳಿಸಿಕೊಟ್ಟಿದ್ದು ಬರ ಮೆಟ್ಟಿನಿಲ್ಲುವುದು ಅಸಾಧ್ಯದ ಮಾತೇನಲ್ಲ ಎಂಬ ಅದಮ್ಯ ಆತ್ಮವಿಶ್ವಾಸ ತುಂಬಲು ಸಹಕಾರಿಯಾಯಿತು. ಅದೇ ರೀತಿ, ಮುಚ್ಚಿಹೋಗಿದ್ದ ಬೋರವೆಲ್‌ಗಳ ಜಲಮರುಪೂರಣ ಕೆಲಸ ನಿರತ, ಕೋಟೆ ನಾಡು ಚಿತ್ರದುರ್ಗದ ದೇವರಾಜ ರೆಡ್ಡಿಯವರ ಮಾತು ರಾಜ್ಯದ ಗಡಿ ದಾಟಿ ನೆರೆಯ ಆಂಧ್ರ ಸರಕಾರದ ಮನ್ನಣೆ ಪಡೆದ ವಿಷಯ ಬೆಳಕಿಗೆ ಬಂದಿತು. ಆ ಮೂಲಕ, ನಮ್ಮವರ ಅನಾದರವೂ ಬಹಿರಂಗವಾಯ್ತು.

ಅನುಭವ ಹಂಚಿಕೊಂಡ ಪತ್ರಕರ್ತರು

ತುಮಕೂರು ಜಿಲ್ಲೆ ಗುಬ್ಬಿ ಸಮೀಪದ ಮತ್ತಿಕಟ್ಟೆಯ ಆನಂದ, ಛಾವಣಿ ಮೇಲಿನ ಮಳೆ ನೀರು ಹಿಡಿದು ಸಂಗ್ರಹಿಸಿದ ಪರಿ ಮತ್ತು ಅದನ್ನು ಕುಡಿಯಲು ಬಳಸಲು ಕೈಕೊಂಡ ಕ್ರಮಗಳ ಬಗ್ಗೆ ಸ್ಲೈಡ್‌ಶೋ ಮೂಲಕ ತೋರಿಸಿಕೊಟ್ಟಿದ್ದು ಗಮನಸೆಳೆಯಿತು. ಮನುಷ್ಯನ ದುರಾಸೆ ಹಾಗೂ ಮೂರ್ಖತನದ ಪರಮಾವಧಿಯ ಪರಿಣಾಮ, ಬೆಂಗಳೂರು ಕೆರೆಗಳು ಅದ್ಹೇಗೆ ಮಾಯವಾಗುತ್ತಿವೆ ಎಂಬುದನ್ನು ಮತ್ತು ಅದರ ಪುನಶ್ಚೇತನ ಹೆಸರಲ್ಲಿ ಕೋಟ್ಯಂತರ ರೂಪಾಯಿ ಹಣ ಹೇಗೆ ಪೋಲಾಯಿತು ಎಂಬುದರ ಬಗ್ಗೆಯೂ ಸ್ಲೈಡ್‌ಶೋಗಳ ಮೂಲಕ ಪತ್ರಕರ್ತ ಕೆರೆ ಮಂಜುನಾಥ ತಿಳಿಸಿಕೊಟ್ಟರು. ಇನ್ನೊಬ್ಬ ಪತ್ರಕರ್ತ ಗಾಣಧಾಳ ಶ್ರೀಕಂಠ, ಕೋಟೆ ನಾಡಿನ ಜಲಮೂಲಗಳಾದ ಕೆರೆಗಳು ಕಾಲಗರ್ಭ ಸೇರಲು ಸಜ್ಜಾಗಿರುವ ಬಗ್ಗೆ ತಮ್ಮ ಕ್ಷೇತ್ರ ಅನುಭವವನ್ನು ಸ್ಲೈಡ್ ಶೋಗಳ ಮೂಲಕ ತಿಳಿಸುವುದರ ಜೊತೆಗೆ, ಸರಕಾರಿ ವ್ಯವಸ್ಥೆಯ ಅನಾದರದ ಬಗ್ಗೆಯೂ ಹೇಳಿದ್ದು ಮಾರ್ಮಿಕವಾಗಿತ್ತು.

ದಿನ ಬೆಳಗಾದರೆ, ಮಹದಾಯಿ ಹೋರಾಟ, ಎತ್ತಿನಹೊಳೆಗಾಗಿ ಬಂದ್ ಸುದ್ದಿ ಓದಿ, ನೋಡಿ ದಿನವೂ ಇದೇ ಆಯ್ತು ಎಂದುಕೊಂಡ ಎಲ್ಲರಿಗೆ, ಈ ವಿದ್ಯಮಾನಗಳ ಹಿಂದಿನ ಸತ್ಯ ಮತ್ತು ಸಾಧ್ಯಾಸಾಧ್ಯತೆ ಬಗ್ಗೆ ಅಂಕಿ-ಅಂಶ ಸಮೇತ ವಿವರ ಕೊಟ್ಟವರು ಪತ್ರಕರ್ತ ಪ್ರಸನ್ನ ಕರ್ಪೂರ್. ಅದಲ್ಲದೆ, ಅವೈಜ್ಞಾನಿಕ ಹಾಗೂ ಗುತ್ತಿಗೆದಾರರ ಬಾಯಾರಿಕೆ ತಣಿಸುವ ನೀರಾವರಿ ಯೋಜನೆಗಳ ಪ್ರಸ್ತಾಪ ಮಾಡಿದ್ದು ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಮನಮುಟ್ಟಿದ ಮಾದರಿ ಕಾರ್ಯ

ಕಳವೆಯಲ್ಲಿನ ನಡೆದ ಜಲಸಂರಕ್ಷಣೆಯ ಮಾದರಿ ಕಾರ್ಯವನ್ನು ಕಾಡಿಗೆ ಕರೆದುಕೊಂಡು ಹೋದ ಶಿವಾನಂದ ಕಳವೆ ಪ್ರಾತ್ಯಕ್ಷಿಕೆ ಮೂಲಕ ತಿಳಿಹೇಳಿದ್ದು k5ಮನಮುಟ್ಟುವಂತಿತ್ತು. ಮಾಧ್ಯಮ ಮಾತುಕತೆಗೆ ಬಂದಿದ್ದ ಎಲ್ಲರೂ, ಕೆರೆ ವೀಕ್ಷಣೆ ನಂತರ ಸೊಪ್ಪಿನ ಬೆಟ್ಟಕ್ಕೆ ಹೋಗುವ ದಾರಿ ಮಧ್ಯೆ ಈ ಗಿಡ ಯಾವುದು ಈ ಸೊಪ್ಪು ಯಾವುದು ಎಂದು ಕೇಳೋದೇ ತಡ, ಇದು ಇಂತಹ ಸೊಪ್ಪು ಇದರಲ್ಲಿ ಈ ಔಷಧಿ ಗುಣವಿದೆ ಎಂದು ಅರಳು ಹುರಿದಂತೆ ಮಾಹಿತಿ ಬಿಚ್ಚಿಟ್ಟವರು ಶಿವಾನಂದ  ಹಾಗೂ ಈಸಣ್ಣ. ಕಾಡಿನ ಮಧ್ಯೆ ಸಾಗುವಾಗ, ಕಾಡಿನ ಜೆಸಿಬಿ ಎಂತಲೇ ಖ್ಯಾತ ಹಂದಿಗಳು ಓಡಾಡಿದ ಜಾಗೆಯಲ್ಲಿನ ಹೆಜ್ಜೆಗುರುತುಗಳನ್ನು ನೋಡಿ ಹಲವರು ನಕ್ಕಿದ್ದೂ ಆಯ್ತು. ಟ್ರೆಂಚ್‌ಗಳ ಮೂಲಕ, ಅಲ್ಲಲ್ಲಿ ಜಲಸಂಗ್ರಹಿಸಿದ ಕಾರ್ಯ ಎಲ್ಲರಲ್ಲೂ ಸ್ಫೂರ್ತಿ ತುಂಬುವಲ್ಲಿ ಯಶಸ್ವಿಯಾಯಿತು. ಅರಣ್ಯಾಭಿವೃದ್ಧಿ ಸೇರಿದಂತೆ ವಿವಿಧ ಜಲಸಂರಕ್ಷಣಾ ರಚನಾತ್ಮಕ ಮಾದರಿಗಳನ್ನು ಎಲ್ಲರೂ ವೀಕ್ಷಿಸಿದರು.

ಚಿಂತನೆಗೆ ನಾಂದಿ

k2ರಾಜ್ಯದಲ್ಲಿ ತಲೆದೋರಿರುವ ಜಲಬಿಕ್ಕಟ್ಟಿಗೆ ಪರಿಹಾರೋಪಾಯಕ್ಕಿಂತ, ಬರ ನಿರ್ವಹಣೆ ಹಾಗೂ ಇರುವ ನೀರಿನ ಸಮರ್ಪಕ ಬಳಕೆ ಹೇಗೆ ಎಂಬುದಕ್ಕೆ ಪೂರಕವಾಗಿ ನೆರೆದಿದ್ದ ಜಲಯೋಧರು ತಮ್ಮ ತಮ್ಮ ಅನುಭವ ಹಾಗೂ ಕಂಡುಕೊಳ್ಳಬಹುದಾದ ಕ್ರಮಗಳನ್ನು ಪರಸ್ಪರ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಜಿಲ್ಲೆಯಿಂದ ಜಿಲ್ಲೆಗೆ ಭೌಗೋಳಿಕ ಲಕ್ಷಣಗಳು ಭಿನ್ನವಾಗಿದ್ದರೂ ನೀರಿನ ಕೊರತೆ ಸಮಸ್ಯೆ ಸರ್ವತ್ರವಾಗಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಪರಿಹಾರಕ್ಕೆ ಮಾಧ್ಯಮದ ಕೊಡುಗೆ ಏನು ಮತ್ತು ಮಾಧ್ಯಮಗಳಿಂದ ಕೃಷಿಕರ ನಿರೀಕ್ಷೆ ಏನೆಂಬುದರ ಚರ್ಚೆಯೂ ನಡೆಯಿತು. ಹಿರಿಯ ಪತ್ರಕರ್ತರಾದ ಲೋಕೇಶ ಕಾಯರ್ಗ, ರವಿಂದ್ರ ಭಟ್ ಐನಕೈ ಅವರಿಂದ  ಸಹಕಾರದ ಮಾತುಗಳು ಜಲಸಂಕಷ್ಟದ ಪರಿಹಾರದ ನಿಟ್ಟಿನಲ್ಲಿ ಪೂರಕವಾಗಿ ಕೇಳಿ ಬಂದರೆ, ಜಲತಜ್ಞರಾದ ಶ್ರೀಪಡ್ರೆ ಹಾಗೂ ಡಾ. ಪ್ರಕಾಶಭಟ್‌ರು ಜಲಸಾಕ್ಷರತೆ ಹಾಗೂ ಸಮುದಾಯದ ಸಹಭಾಗಿತ್ವದ ಬಗ್ಗೆ ಬೆಳಕು ಚೆಲ್ಲಿದರು. ಶ್ರೀಸಾಮಾನ್ಯನೂ ಸಹ ಈಗ ನೀರಿನ ಬಗ್ಗೆ ಮಾತನಾಡುವಷ್ಟು ತಿಳಿವಳಿಕೆ ಪ್ರಜ್ಞೆ ಅಳವಡಿಸಿಕೊಂಡಿದ್ದು, ಅವನಿಗೆ ವಾಸ್ತವಾಂಶ ತಿಳಿಸಿಕೊಡುವುದುರ ಜೊತೆಗೆ, ಜಲಸಂರಕ್ಷಣೆಯ ಮಹತ್ವ ಹೇಳುವ ತುರ್ತು ಅಗತ್ಯತೆ ಇಂದಿನದು ಎಂದು ಡಾ ಪ್ರಕಾಶ ಭಟ್ ಉದಾಹರಣೆ ಮೂಲಕ ಹೇಳಿದ್ದು ಎಲ್ಲರಿಗೂ ಮನವರಿಕೆ ಆಯಿತು. ಪಕ್ಕದ ಕೇರಳಕ್ಕೆ ಹೋಲಿಸಿದಲ್ಲಿ, ನಮ್ಮಲ್ಲಿ ಜಲಸಾಕ್ಷ್ಷರತೆ ಕಡಿಮೆ ಎಂದು ಹೇಳಿದ ಹಿರಿಯ ಜಲಪತ್ರಕರ್ತ ಶ್ರೀ ಪಡ್ರೆಯವರು ಆ ನಿಟ್ಟಿನಲ್ಲಿ ಅಲ್ಲಿನ ಮಾಧ್ಯಮ ಮಾಡಿದ್ದೇನು? ಮತ್ತು ಇಲ್ಲಿನ ಮಾಧ್ಯಮಗಳ ಪ್ರಯತ್ನಗಳೇನಾಗಬೇಕು ಎಂಬುದನ್ನು ಹೇಳಿದರಲ್ಲದೆ, ಈ ನಿಟ್ಟಿನಲ್ಲಿ ಕೃಷಿಕರ, ಜನರ ಸಹಭಾಗಿತ್ವವೂ ಅಷ್ಟೇ ಪ್ರಮುಖ ಎಂದಿದ್ದು ವಿಶೇಷವಾಗಿತ್ತು.

ಸಮಾರೋಪ ಸಮಾರಂಭಕ್ಕೆ ಬಂದಿದ್ದ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಸುಕೋ ಬ್ಯಾಂಕ್ ಅಧ್ಯಕ್ಷ ಮನೋಹರ್ ಮಸ್ಕಿ ನೀರಿನ ಸಮಸ್ಯೆಗೆ ಬೃಹತ್ ಯೋಜನೆಗಳು ಮಾತ್ರ ಪರಿಹಾರವಲ್ಲ. ಬಿದ್ದ ಹನಿಯನ್ನು ಬಿದ್ದಲ್ಲಿ ಇಂಗಿಸುವ, ಹಿಡಿದಿಡುವ ಕೆಲಸ ಮುಖ್ಯವಿದೆ. ಚೆನ್ನೈ ನಗರದ ಮಳೆಕೊಯ್ಲು ಮಾದರಿಯಿಂದ ಪ್ರೇರಣೆ ಪಡೆದು, ಬೆಂಗಳೂರು ನಗರದಲ್ಲಿ ನೀರಿಂಗಿಸುವದನ್ನು ಕಡ್ಡಾಯಗೊಳಿಸುವ ಪ್ರಯತ್ನ  ನಡೆದಿತ್ತು. ಕಾನೂನು ಬಿಗಿಗೊಳಿಸಿ ಪರಿಣಾಮಕಾರಿಯಾಗಿ ಜಲಸಂರಕ್ಷಣಾ ಮಾದರಿ ಅಳವಡಿಸಲು ಸರಕಾರ, ಸಾರ್ವಜನಿಕರು ಪ್ರಯತ್ನಿಸಬೇಕು. ಆಗ ಜಲಕ್ಷಾಮ ಎದುರಿಸಬಹುದು ಎಂದು ಸಲಹೆ ಕೊಟ್ಟರು.

ಕೋಲಾರ ಪ್ರೇರಣೆ

ಕೋಲಾರದ ದೊಡ್ಡ ಕಲ್ಲಹಳ್ಳಿಯ ಏಳು ವರ್ಷದ ಬಾಲಕಿ ಟ್ಯಾಂಕರ್ ನೀರಿಗೆ ನಿಂತಿದ್ದು ಕಂಡಾಗ, ಕಾನ್ಮನೆಯ ಜಲವರ್ತಮಾನ ಕಾರ್ಯಕ್ರಮಕ್ಕೆ ಮುಖ್ಯ ಪ್ರೇರಣೆಯಾಯಿತು. ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಕಳೆದ ೧೪ ವರ್ಷಗಳಿಂದ ಸತತವಾಗಿ ನಡೆಸುತ್ತಿರುವ ಕಾರ್ಯಕ್ರಮಗಳಿಂದ, ನಮ್ಮ k1ಸಂಪರ್ಕಜಾಲ ರಾಜ್ಯದಲ್ಲಿ  ಬೆಳೆದಿದೆ. ನಾವು ಆಹ್ವಾನಿಸಿದ ಜಲತಜ್ಞರು, ಪತ್ರಕರ್ತರ ಭಾಗವಹಿಸುವಿಕೆಯಿಂದ ಮಾತುಕತೆ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಖೇನ ಜಲಜಾಗೃತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸೋಣವೆಂದು ಕಾರ್ಯಕ್ರಮ ಸಂಘಟಕ ಶಿವಾನಂದ ಕಳವೆ ಕೊಟ್ಟ ಕರೆ ಸಾರ್ಥಕವಾಗುವತ್ತ ಸಾಗಿದೆ ಎಂದರೆ ತಪ್ಪಾಗದು. ಎರಡು ದಿನದ ಮಾತುಕತೆಯಲ್ಲಿ ನೀರಿಗೆ ಸಂಬಂಧಪಟ್ಟ ೬೦ ಹೊಸ ಶಬ್ದಗಳು ಬಳಕೆಯಾಗಿದ್ದನ್ನು ಗಮನಿಸಿ, ಅದನ್ನು ದಾಖಲಿಸಿಕೊಂಡು ಮತ್ತು ನವಿರಾದ ನಿರೂಪಣೆಯ ಹೊಣೆ ಹೊತ್ತು ಸದ್ದಿಲ್ಲದೇ ತೆರೆಮರೆಯಲ್ಲಿದ್ದವರು ಪೂರ್ಣಪ್ರಜ್ಞ ಬೇಳೂರು ಅವರು.

ಕರ್ನಾಟಕದಲ್ಲಿ ಈಗ ಪ್ರಪ್ರಥಮವಾಗಿ ನೆಲಮೂಲದಲ್ಲಿ ಕಾರ್ಯನಿರ್ವಹಿಸಿದವರು ಒಂದೆಡೆ ಸೇರಿ, ಶ್ರೀಸಾಮನ್ಯರು ಅಳವಡಿಸಬಹುದಾದ ಸುಲಭ ಸಾಧ್ಯ ವಿಧಾನಗಳನ್ನು  ಮಾಡಿತೋರಿಸಿದವರ ಅನುಭವ ಹಂಚಿಕೆ ನಡೆಯಿತು.  ಬರದ ಸಂದರ್ಭದಲ್ಲಿ, ಜಲ ಜಾಗೃತಿಯ ವಿಚಾರದಲ್ಲಿ  ರಾಜ್ಯದ ಜಲಸಂರಕ್ಷಣೆಯ ಪರಿಣಿತರು ಒಂದಾಗಿ ಕಳವೆಯ ಕಾನ್ಮನೆಯಲ್ಲಿ ಸಮಾಲೋಚನೆ ನಡೆಸಿದ್ದು ವಿಶೇಷವಾಗಿತ್ತು.

ಜಲಸಾಕ್ಷರತೆ, ಜಲಜಾಗೃತಿ ಜೊತೆಗೆ, ಜಲಗೋಳಿಗೆ ಮುಕ್ತಿ ಹಾಡಲು ಕೆರೆ, ನದಿಯಲ್ಲಿನ ಹೂಳಿಗಿಂತ ತಲೆಯಲ್ಲಿನ ಹೂಳು ತೆಗೆಯುವುದರ ಅಗತ್ಯತೆ ಬಗ್ಗೆ  ಹೆಚ್ಚು ಒತ್ತು ಕೊಡಬೇಕೆನ್ನುವ ಸರ್ವಸಮ್ಮತ ಅಭಿಪ್ರಾಯ  ಎರಡು ದಿನದಲ್ಲಿ ವ್ಯಕ್ತವಾಯಿತು.

ಜಲಸಾಕ್ಷರತೆಯ ಮೂಲಕ ಸಂರಕ್ಷಣೆಯ ಮಾರ್ಗದರ್ಶನಕ್ಕೆ, ನೀರಿನ ಮಿತಬಳಕೆಗೆ ಜಾಗೃತಿ ಮೂಡಿಸಲು, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ರೇನ್ ಸೆಂಟರ್‌ಗಳನ್ನು ತುರ್ತಾಗಿ ಆರಂಭಿಸಬೇಕೆಂಬ ಕೂಗು ಎರಡು ದಿನದ ಮಾಧ್ಯಮ ಮಾತುಕತೆಯ ಒಟ್ಟಾರೆ ಆಶಯವಾಗಿ ಹೊರಹೊಮ್ಮಿತು.

ಅರ್ಥಪೂರ್ಣ ಮಾತುಕತೆ

ರಾಜ್ಯದ ಬರದ ತುರ್ತು ಸಂದರ್ಭದಲ್ಲಿ ಆಪತ್ಕಾಲಕ್ಕೆ ಆಗಬೇಕಾದ ಬುದ್ಧಿವಂತಿಕೆಯನ್ನು ಬದುಕಿನಲ್ಲಿ ಅಳವಡಿಸಬೇಕಾಗಿದೆ. ಇದಕ್ಕೆ ಪೂರಕವಾಗಿ, ಮಾಧ್ಯಮ ಹಾಗೂ ಕೃಷಿಕರಿಗೆ ಜಲಸಂರಕ್ಷಣೆಯ ಮಣ್ಣಿನ ಮಾದರಿ ದರ್ಶನಕ್ಕೆ ನೆರವಾಗುವಂತೆ ಬರ ಗೆದ್ದವರ, ನೀರುಳಿಸಿ ನೆಮ್ಮದಿ ಕಂಡವರ ವಿವರಗಳಿರುವ  ‘ಜಲಯೋಧರ ಡೈರಕ್ಟರಿ’ ಪ್ರಕಟಿಸಲು ಸಮಾಲೋಚನಾ ಸಭೆ ನಿರ್ಧರಿಸಿತು.  ರಾಜ್ಯದ ವಿವಿಧ ಪ್ರದೇಶಗಳಿಂದ ಜಲಸಂರಕ್ಷಕರು, ಕೃಷಿ ಸಾಧಕರು, ಜಲಪತ್ರಕರ್ತರು ಭಾಗವಹಿಸಿ ಜಲಪರಂಪರೆ ಮತ್ತು ಪ್ರಸ್ತುತ ಸ್ಥಿತಿಗತಿ ಕುರಿತು ಮಾತುಕತೆ ನಡೆಸಿ ಅರ್ಥಪೂರ್ಣ ಮಾತುಕತೆ ನಡೆಸಿಕೊಟ್ಟರು.

ಚಿತ್ರ-ಲೇಖನ: ನಿತ್ಯಸಿರಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*