ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಹನಿ ನೀರು-ಜೇನು ಒಂದಾಗದೇ ಜೇನ್ನೊಣಕ್ಕಿಲ್ಲ ಉಳಿಗಾಲ?

ಧಾರವಾಡ: ರಾಣಿ ಜೇನಿನ ಆಣತಿಯಂತೆ ಸಾವಿರಾರು ಹೂವುಗಳಿಗೆ ಭೇಟಿ ನೀಡಿ, ಆಯ್ದ ನೂರಾರು ಹೂವುಗಳಿಂದ ಒಂದು ಹನಿ ಮಕರಂದ ಇಡೀ ದಿನ ಸಂಗ್ರಹಿಸಿ ತರುವ ಕಾರ್ಮಿಕ ಜೇನು ನೊಣ ‘ಬ್ಯೂಸಿ ಬೀ’ಗಳು, ಅಗತ್ಯ ಬಿದ್ದಾಗ ನೂರಾರು ಬಾರಿ ಎಡತಾಕಿ ಹನಿ ಶುದ್ಧ ನೀರನ್ನು ಸಹ ಹೊತ್ತು ತಂದು ಆ ಹನಿ ಜೇನಿಗೆ ಪ್ರೋಕ್ಷಿಸಿ, ತುಪ್ಪವನ್ನು ಹದದಿಂದ ತಿಳಿಗೊಳಿಸಿ ಆಹಾರವಾಗಿಸಿಕೊಳ್ಳುತ್ತವೆ!

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದು ಅವುಗಳಿಗೆ ಕರಗತವಾಗಿರುವ ಬದುಕುವ ಕಲೆ!

???????????????????????????????ಮೊದಲು ಗಳಿಸು, ಗಳಿಸಿದ್ದರಲ್ಲಿ ಉಳಿಸು, ಬಾಕಿ ಬಳಸು ಎಂಬುದು ಜೇನಿನ ಸುಸ್ಥಿರ ಬದುಕು! ಹೂವಿನಿಂದ ಹೂವಿಗೆ ಪರಾಗ ರೇಣುಗಳನ್ನು ಹೊತ್ತೊಯ್ದು ನೈಸರ್ಗಿಕ ಅರಣ್ಯೀಕರಣಕ್ಕೆ, ನಿರಂತರವಾಗಿ ಸಸ್ಯ ಸಂಪತ್ತಿನ ಕಾಡು ಸದೃsಶ ಬೆಳವಣಿಗೆಗೆ ಕಾರಣವಾಗುವ ಅಪರೂಪದ ಜೀವಿಗಳು –ಜೇನ್ನೊಣ! ಹತ್ತಾರು ಬಾರಿ ಅಡ್ಡಾಡಿದ ಮೇಲೂ ಹೋದ ದಾರಿ ಸರಿಯಾಗಿ ನೆನಪಿರದ ನಮಗೆ, ಜೇನ್ನೊಣಗಳ ‘‘ನೇವಿಗೇಷನ್’ ಸಾಮರ್ಥ್ಯ ಅಚ್ಚರಿ ಹುಟ್ಟಿಸುವಂಥದ್ದು.

ಷಟ್ಕೋನ ಆಕೃತಿಯ ಮನೆಯಲ್ಲಿ, ಪಿರಮಿಡ್ ಮಾದರಿಯಲ್ಲಿ ಎರಡು ತ್ರಿಭುಜಗಳಾಗಿ ವಿಭಜಿಸಿಕೊಂಡು ಜೇನನ್ನು ವರ್ಷಾನುಗಟ್ಟಲೇ ಆ ಹೆಜ್ಜೆಯಲ್ಲಿ ಕೆಡದಂತೆ ಸಂಗ್ರಹಿಸುವ, ಗಾಳಿ-ಮಳೆ-ಬಿಸಿಲಿಗೆ ಡೋಲಾಯಮಾನವಾಗಿ ಹರಿದು ಬೀಳದಂತೆ ಮೇಣದ ಗೂಡನ್ನು ಕೋನಕ್ಕೆ ಸಮೀಕರಿಸಿ ಹೆಣೆಯುವ, ಜಮ್ಮುವಿನಿಂದ ಕನ್ಯಾ ಕುಮಾರಿಯವರೆಗೆ ಗೂಡಿನೊಳಕ್ಕೆ ಥರ್ಮಾಮೀಟರ್ ತೂರಿಸಿ ತಾಪಮಾನ ಅಳೆದರೆ, ೨೯ ಡಿಗ್ರಿ ಸೆಲ್ಶಿಯಸ್! .೫ ಡಿಗ್ರಿಯೂ ವ್ಯತ್ಯಾಸವಾಗದು! ಈ ಅದ್ಭುತ ಎಂಜಿನಿಯರಿಂಗ್ ಕೌಶಲ್ಯ ಸಾಧಿಸಿದ ಜೇನ್ನೊಣಗಳ ಪರಿಸರ ಸ್ನೇಹಿ ಬದುಕು ಆಶ್ಚರ್ಯ ಮೂಡಿಸುತ್ತದೆ. ಈ ಎಲ್ಲ ಕೆಲಸಗಳಿಗೆ ಶುದ್ಧ ನೀರು ಮೂಲಾಧಾರ.

ಆದರೆ, ಈ ಅಪರೂಪದ ಶ್ರಮ ಜೀವಿಗಳು ಸಂಗ್ರಹಿಸುವ ಮಕರಂದ-ಜೇನು ತುಪ್ಪ ಕಬಳಿಸಲು ನಾವು ಎಸಗುತ್ತಿರುವ ದೌರ್ಜನ್ಯ ಮಾತ್ರ ಥರಹೇವಾರಿ. ಜೇನು ಹುಳುಗಳ ಅಳಿವಿಗೆ ಮಾತ್ರವಲ್ಲ; ಪರಾಗಸ್ಪರ್ಷ ತಪ್ಪಿ ಅಪರೂಪದ ಸಸ್ಯ ಸಂಕುಲದ ಅವನತಿಗೂ ಎಡೆಮಾಡಿದಂತಾಗಿದೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ ಬೃಹದಾಕಾರದ ಮರಗಳಲ್ಲಿ ಏಪಿಎಸ್ ಮೆಲ್ಲಿಫೆರಾ (ತುಡವಿ ಜೇನು/ ಹೆಜ್ಜೇನು) ಹತ್ತಾರು ಸಂಖ್ಯೆಯಲ್ಲಿ ಗೂಡು ಕಟ್ಟಿರುತ್ತಿದ್ದವು. ಈಗ ಚತುಷ್ಪಥ ರಸ್ತೆಗಾಗಿ ಬಿಆರ್‌ಟಿಎಸ್‌ನವರು ೨೦೦ಕ್ಕೂ ಹೆಚ್ಚು, ಶತಮಾನಕ್ಕೂ ಹಳೆಯದಾದ ಮರಗಳನ್ನು ಕಡಿದಿದ್ದಾರೆ. ಅಕ್ಕ-ಪಕ್ಕದ ೮ ಕೆರೆಗಳು ಆಟದ ಮೈದಾನಗಳಂತಾಗಿವೆ. ನೂರಾರು ಜೇನು ಕುಟುಂಬಗಳು ಈಗ ಹೇಳ ಹೆಸರಿಲ್ಲದಂತಾಗಿವೆ.

???????????????????????????????ಸದ್ಯ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಧಾನ ಕಟ್ಟಡ, ಶ್ರೀ ಮುರುಘಾಮಠ, ಕೆಸಿಸಿ ಬ್ಯಾಂಕ್, ಸೇರಿದಂತೆ ಅಲ್ಲಲ್ಲಿ ಟೆಲಿಫೋನ್ ಟವರ್‌ಗಳಿಗೆ ಅನಿವಾರ್ಯವಾಗಿ ಜೋತು ಬಿದ್ದಿವೆ. ಈಗ ಮೂರ್ನಾಲ್ಕು ಹೆಜ್ಜೇನು ಕುಟುಂಬ ಕಂಡರೆ ಅಪರೂಪ.

ಬೃಹದಾಕಾರವಾಗಿ ಬೆಳೆಯುವ ವೃಕ್ಷಗಳ ರೆಂಬೆ-ಕೊಂಬೆಗಳಿಗೆ ಭಾರವಾಗಿ ತೂಗುವ ಜೇನು ಗೂಡುಗಳನ್ನು ಕಟ್ಟುವವು ಹೆಜ್ಜೇನುಗಳು. ಇರುವೆಯ ಹುತ್ತ (ಹುತ್ತದ ಜೇನು), ಬಿದಿರಿನ ಪೊಟರೆ, ಮೆಳೆ ಹೊದರಿನ ದಟ್ಟ ಆವರಣದಲ್ಲಿ ಗೂಡು ಕಟ್ಟುವವು ಎಪಿಎಸ್ ಸೆರೆನಾ ಇಂಡಿಕಾ ಅಥವಾ ಹೊಂದೇನು. ಪುಟ್ಟ ಗಿಡಗಂಟಿಗಳಿಗೆ ಜೋತು ಬೀಳುವ ಪುಟ್ಟ ನೊಣಗಳಿಗೆ ಕೋಲ್ಜೇನು ಎಂದು ಕರೆಯುತ್ತಾರೆ. ಇವು ಹೆಜ್ಜೇನಿಗಿಂತ ಆಕಾರದಲ್ಲಿ ಕೊಂಚ ಚಿಕ್ಕವು. ಮನೆಯ ಕಟ್ಟಡಗಳ ಮೂಲೆಗಳಲ್ಲಿ ರಂಧ್ರ ಮಾಡಿಕೊಂಡು ಪುಟ್ಟ ಸಂಸಾರ ಹೂಡುವ ಮೂಲಿ ಜೇನುಗಳು ಅತ್ಯಂತ ಚಿಕ್ಕ ಜೇನುನೊಣಗಳು.

ಈ ಜೇನುಗೂಡುಗಳಿಂದ ಜೇನು ಸಂಗ್ರಹಿಸುವ ಜನಗಳ ಇತ್ತೀಚಿನ ಪರಿ, ಜೇನ್ನೊಣದ ಇಡೀ ಕುಟುಂಬವೇ ನಿರ್ನಾಮವಾಗುವ ಸಾಧ್ಯತೆಯೇ ಹೆಚ್ಚು. ಈ ಕೆಲಸ ಮಾಡಿಸಲೂ ಗುತ್ತಿಗೆದಾರರಿದ್ದಾರೆ! ಬೆಂಡೆ (ಕಿಡಿಯಾ ಕ್ಯಾಲಿಸಿನಾ) ಅಥವಾ ಕೌರಿ (ಹೆಲೆಕ್ಟ್ರಸ್ ಐಸೋರಾ) ಗಿಡದ ನಾರಿನಿಂದ ಹೊಸೆದ ಹಗ್ಗ ಮತ್ತು ಏಣಿ ಬಳಸಿ ರಾತ್ರಿಯ ವೇಳೆ ಹೆಜ್ಜೇನು ಬಿಡುಸುವವರ ದಂಡೇ ಗಾಬರಿ ಹುಟ್ಟಿಸುತ್ತದೆ.

ಜೇನು ಗೂಡಿನ ಮೇಲ್ಭಾಗದಲ್ಲಿ ಮಾತ್ರ ಜೇನು ತುಪ್ಪ ಸಂಗ್ರಹಿಸುವ ನೊಣಗಳು, ಕೆಳ ಭಾಗದಲ್ಲಿ ಮೊಟ್ಟೆ, ಲಾರ್ವಾ, ಮರಿ ಮತ್ತು ಆಹಾರ ಸಂಗ್ರಹಣೆಯ ???????????????????????????????ಕೋಣೆಗಳನ್ನು ನಿರ್ವಹಿಸುತ್ತವೆ. ಕೀಟ ಜಗತ್ತಿನ ಬದುಕುವ ಪರಿ ವೈಜ್ಞಾನಿಕವಾಗಿ ತಿಳಿದುಕೊಳ್ಳುವ ಯಾವ ಪ್ರಯತ್ನವನ್ನೂ ಮಾಡದೇ, ಇಡೀ ಜೇನು ಕುಟುಂಬವನ್ನೇ ಸೆದೆ ಬಡಿದು ಜೇನು ಕಸಿಯುವ ರೀತಿಗೆ ಏನೆನ್ನುವುದು? ಅವು ಜೇನು ತುಪ್ಪವನ್ನು ತಮಗಾಗಿ ಸಂಗ್ರಹಿಸುತ್ತವೆ ಹೊರತು, ನಮಗಾಗಿ ಅಲ್ಲ ಎಂಬ ಸಾಮಾನ್ಯ ಜ್ಞಾನವೂ ನಮಗಿಲ್ಲದಾಯಿತೇ?

ಜೇನು ಗೂಡು ಗುರುತಿಸಿ, ಏಣಿ ಜೋಡಿಸಿ, ಗೂಡಿನ ಕೆಳ ಭಾಗದ ಪದರುಗಳನ್ನು ತುಂಬಿಸಿಕೊಳ್ಳಲು ಕೌರಿ ಗಿಡದ ತೆಳು ಕಡ್ಡಿಗಳಿಂದ ಮಾಡಿದ ಬುಟ್ಟಿ (ಜೇನು ಕುರುಬರ ವಿಧಾನ -ಪೂಣಿ ಎಂಬ ಹೆಸರು), ನಮ್ಮ ಭಾಗದಲ್ಲಿ ಬಿದಿರಿನ ಬುಟ್ಟಿ ಅಥವಾ ಅಲ್ಯೂಮಿನಿಯಂ ಡಬರಿ ಬಳಸುತ್ತಾರೆ. ಜೇನು ತುಂಬಿದ ಎರಿಗಳನ್ನು ಸಂಗ್ರಹಿಸಲು ಅಲ್ಯೂಮಿನಿಯಂ ಟಿನ್ ಡಬ್ಬಿಗಳನ್ನು ಉಪಯೋಗಿಸಲಾಗುತ್ತದೆ. ಜೇನು ತುಪ್ಪದ ಸಗಟು ಖರೀದಿದಾರರು ಜೇನು ಇಳಿಸುವ ಕಾರ್ಮಿಕರಿಗೆ ಈ ಎಲ್ಲ ವ್ಯವಸ್ಥೆ ಮಾಡಿಕೊಡುತ್ತಾರೆ.

ಜೇನು ಕಾರ್ಮಿಕರು, ಕ್ಯಾಸಿಯಾ ಫಿಸ್ಟುಲಾ (ಕಕ್ಕೆ ಗಿಡ)ದ ಸೊಪ್ಪು ಬಳಸಿ ದಟ್ಟವಾಗಿ ಹೊಗೆ ಹಾಕಿ, ಜೇನ್ನೊಣಗಳನ್ನು ಗೂಡಿನಿಂದ ಹೊರಗಿಡುತ್ತಾರೆ. ರಾತ್ರಿಯ ವೇಳೆ ಜೇನು ಹುಟ್ಟು ಬಿಡಿಸುವಾಗ ಛಳಿಗೂ ಈ ಬೆಂಕಿ ಕಾಯಿಸುತ್ತದೆ. ಹಿಲಾಲ್ ನಮೂನೆಯ ಪಂಜಿನಿಂದ ಗೂಡಿಗೆ ಒಂದೇ ಸಮನೆ ರಪರಪ ಬಡಿದು, ಪಂಜಿನ ಪೆಟ್ಟು ಮತ್ತು ಬುಡದ ಬೆಂಕಿಯ ಶಾಖಕ್ಕೆ ನೂರಾರು ಜೇನ್ನೊಣಗಳು ಸಾವನ್ನಪ್ಪುತ್ತವೆ.

ಜೇನು ಬಿಡಿಸಿ ಕೆಳಗೆ ತಂದು, ಮೇಣದ ಹುಟ್ಟನ್ನು ಶಾಖಕ್ಕೆ ಕಾಯಿಸಿದಾಗ ಮರಿ, ಲಾರ್ವಾ ಮತ್ತು ತತ್ತಿ ಸೇರಿದ ಗಿಣ್ಣು ರೂಪುಗೊಳ್ಳುತ್ತದೆ. ಅದನ್ನು ಜೇನು ತುಪ್ಪದಲ್ಲಿ ಅದ್ದಿ ತಿಂದರೆ, ಮತ್ತೆ ಕೆಲವಷ್ಟು ಹುಟ್ಟು ಪೇಟೆಯಲ್ಲಿ ಮಾರಾಟಕ್ಕೆ ಅಣಿಗೊಳ್ಳುತ್ತವೆ. ಪರಿಸರ ಸ್ನೇಹಿ ಜೀವನ ವಿಧಾನವನ್ನು ರೂಢಿಸಿಕೊಂಡಿರುವ ಕೀಟವೊಂದರ ಅವಸಾನ ಹೀಗೆ ಮೂಕವಾಗಿ ನಡೆದು ಹೋಗುತ್ತದೆ.

ಸ್ವಂತ ಉಣಬೇಕೆಂಬ ಸೀಮಿತ ಬಳಕೆಯನ್ನು ಮೀರಿ, ಅಲ್ಪ ಲಾಭಕ್ಕಾಗಿ ವ್ಯಾಪಕವಾದ ಮಾರುಕಟ್ಟೆಗೆ ಸರಬರಾಜು ಮಾಡುವ ವ್ಯಾಪಾರಿ ಧೋರಣೆಗೆ ಜೇನುಗಳ ಅಪಾಯಕ್ಕೆ ಸಿಲುಕಿವೆ. ಮೇಲಾಗಿ, ನಾವು ನಗರಿಗರು ತೆರೆದ ನೀರಿನ ತೊಟ್ಟಿಗಳಲ್ಲಿ ಕಸ ಬೀಳುವುದೆಂಬ ಮುಂದಾಲೋಚನೆಯಿಂದ ಬಾಯಿ ಬಿಗಿಗೊಳಿಸಿ ನೀರು ತುಂಬುತ್ತಿರುವುದರಿಂದ ಹನಿ ನೀರಿಗೂ ಜೇನಿಗೆ ತತ್ವಾರ ಬಂದಿದ್ದು, ಬಿಸಿಲಿನ ಬೇಗೆಗೆ ಬಳಲಿ, ಬಸವಳಿದು ಹನಿ ನೀರಿಗೆ ಹಪಹಪಿಸಿ ಸಾಯುವ ಸ್ಥಿತಿಗೆ ಜೇನ್ನೊಣ ಬಂದಿವೆ. ಆದರೆ, ಮೌನದ ಸದ್ದು ನಮಗೆ ಕೇಳಿಸುತ್ತಿಲ್ಲ.

ಕಾರ್ಖಾನೆಗಳಲ್ಲಿ ಜೇನು ತುಪ್ಪ ತಯಾರಿಸಿ, ಮಾರುಕಟ್ಟೆಗೆ ಪೂರೈಸುವ ಉದ್ದಿಮೆಯೊಂದು ಜೀವ ತಳೆದಿರುವ ಈ ಕಾಲಘಟ್ಟದಲ್ಲಿ ಪರಾಗಸ್ಪರ್ಶವನ್ನೂ ಫ್ಯಾಕ್ಟರಿಯಲ್ಲೇ ಕೃತಕವಾಗಿ ಮಾಡುವ ಯೋಚನೆ ಈಗ ಶುರುವಾಗಿರಬಹುದು!

ಕಾರಣ, ಹಾಲಿನಷ್ಟೇ ನೀರಿಗೂ ದುಡ್ಡು ಕೊಟ್ಟು ‘ಪ್ಯಾಕೇಜ್ಡ್ ಮಿನರಲ್ ವಾಟರ್’ ಕುಡಿಯಲು ನಾವು ಆರ್ಥಿಕವಾಗಿ ಸಬಲರಿದ್ದೇವೆ.. ಕಾಂಕ್ರೀಟ್ ಕಾಡೂ ದುಡ್ಡಿನಿಂದ ಕಟ್ಟಬಲ್ಲೆವು.. ಆದರೆ ಪಾಪ ಜೇನ್ನೊಣ? ಮರದ ಒಂದು ಟೊಂಗೆ, ಒಂದೇ ಒಂದು ಹನಿಯಷ್ಟು ನೀರಿಗಾಗಿ ಹಪಹಪಿಸುವ ವಾತಾವರಣ ನಿರ್ಮಿಸಿದ್ದೇವೆ.

ಜೇನ್ನೊಣಗಳ ಈ ಪರಿಯ ಮಾರಣ ಹೋಮ ನೋಡಿದ ಮೇಲೆ ಜೇನು ತುಪ್ಪ ತಿನ್ನುವ ಆಸೆಯೇ ಇಂಗಿ ಹೋಯಿತು.

ಚಿತ್ರ-ಲೇಖನ: ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*