ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮರೀಚಿಕೆಯಾಯ್ತು ವಾರಾಹಿ ನೀರು

ಹಿಂದೆ, ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡ ಬಹೋಪಯೋಗಿ ನೀರಾವರಿ ಯೋಜನೆ. ಸರ್ಕಾರಿ ಖಜಾನೆಯಿಂದ ಕೋಟ್ಯಾಂತರರೂಪಾಯಿಯನ್ನು ಸತತ ಕೊಳ್ಳೆ ಹೊಡೆದ ಯೋಜನೆ; ರಾಜ್ಯದ ೧೫ ಜನ ಮುಖ್ಯ ಮಂತ್ರಿ, ೨೦ ಜನ ನೀರಾವರಿ ಸಚಿವರನ್ನು ಕಂಡಿದೆ! ಪೈಪ್ ಲೈನ್‌ಗಳ ಮೂಲಕ ನಗರ-ಮಹಾನಗರಗಳಿಗೆ ನೀರು ಒದಗಿಸಿದಂತೆ ನಿರ್ಮಿಸಬಹುದಾದಂತಹ ಸಣ್ಣ ನೀರಾವರಿ ಯೋಜನೆಯೊಂದನ್ನು ಬೃಹಾದಾಕರಗೊಳಿಸಿ, ಜನತೆಯ ಕಣ್ಣಿಗೆ ಮಣ್ಣೆರೆಚಿ, ಹಣ ಕೊಳ್ಳೆ ಹೊಡೆಯಲು ನಡೆಸಿದ ಸರ್ಕಾರಿ ಪ್ರಾಯೋಜಿತ ಬೃಹತ್ ಕಾರ್ಯಕ್ರಮ. ಅದು ವಾರಾಹಿ ನೀರಾವರಿ ಯೋಜನೆ.

ಅದು ೧೯೭೯ರ ಮಾರ್ಚ್ ೨೩; ಕರ್ನಾಟಕ ವಿಧಾನ ಸಭೆಯಲ್ಲಿ ನೀರಾವರಿ ಇಲಾಖೆಯಿಂದ ಈ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ. ೧೯೮೦ ಡಿಸೆಂಬರ್ 20140611_165623[1]೩೦, ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಅರ್.ಗುಂಡೂರಾವ್‌ರವರಿಂದ ವಾರಾಹಿ ಏತ ನೀರಾವರಿ ಯೋಜನೆಗೆ ಉಡುಪಿ ಜಿಲ್ಲೆಯ ಸಿದ್ದಾಪುರದ ಬಳಿ ಶಂಕುಸ್ಥಾಪನೆ. ರಾಜ್ಯದ ಆಗಿನ ಆರ್ಥಿಕ ಮಂತ್ರಿ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಸಹ ಜೊತೆಗಿದ್ದರು. ಅಂದು ಕೇವಲ ೯.೪೩ ಕೋಟಿ ರೂಪಾಯಿಯಿಂದ ಯೋಜನೆ ಆರಂಭ.

ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಕನಸು ಕಂಡ ಕೃಷಿಕರಿಗೆ, ವಾರಾಹಿ ವರವಾಗುವ ಬದಲು, ಯೋಜನೆಯ ಹೆಸರಲ್ಲಿ ಇಂದು ಜನತೆಗೆ ಶಾಪವಾಗಿ ಕಾಡುತ್ತಿದ್ದಾಳೆ. ಈ ನೀರಾವರಿ ಯೋಜನೆಯನ್ನೇ ನಂಬಿ ೧೯೮೫ರಲ್ಲಿ ತಲೆ ಎತ್ತಿದ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಸುಮಾರು ೨ ಲಕ್ಷ ಟನ್ ಕಬ್ಬು ಅರೆದಿತ್ತು. ಆದರೆ, ನೀರಾವರಿಯ ಸಮಸ್ಯೆಯಿಂದಾಗಿ ಕಬ್ಬು ಬೆಳೆ ಇಲ್ಲದೆ, ಇಂದು ಕೋಟ್ಯಾಂತರ ರೂಪಾಯಿ ಹೂಡಿಕೆಯ ಕಾರ್ಖಾನೆ ಶವಾಗಾರ ಸೇರಿದೆ. ವಾರಾಹಿ ನೀರು ನಂಬಿ ಕಬ್ಬು ಬೆಳೆಗೆ ಕೈಹಾಕಿದ ನೂರಾರು ಬೆಳೆಗಾರರು ಮರಣ ಶೈಯ್ಯೆಯಲ್ಲಿದ್ದಾರೆ.

ಯೋಜನೆಯ ಹೆಸರಲ್ಲಿ ಮೂರು ದಶಕಗಳಿಂದ ಬರೀ ಕೋಟಿ ಕೋಟಿ ಹಣದ ಹೊಳೆ ಹರಿದು, ಲೂಟಿ ನಡೆದಿದ್ದು ಬಿಟ್ಟರೆ, ಕಾಲುವೆಗಳಲ್ಲಿ ಬಾಯಿಗೆ ತರ್ಪಣ ಬಿಡುವಷ್ಟು ಕೂಡ ನೀರು ಹರಿದಿಲ್ಲ. ಬುದ್ಧಿವಂತರ ಜಿಲ್ಲೆಯ ಜನರ ಕಣ್ಣುಮುಂದೆ, ಇಂದೂ ಸಹ ಕೋಟ್ಯಾಂತರ ರೂಪಾಯಿ ಹಣದ ನಿರರ್ಥಕ ಕಾಮಗಾರಿ ನಡೆಯುತ್ತಲೇ ಇದೆ.

20140611_170516[1]ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಗುಡ್ಡೆಕೊಪ್ಪದಲ್ಲಿ ವಾರಾಹಿ ನದಿಯ ಉಗಮ. ಸಿದ್ದಾಪುರ-ಹೊಸಂಗಡಿ ಬಳಿಯಲ್ಲಿ ವಾರಾಹಿ ಭೂಗರ್ಭ ವಿದ್ಯುದಾಗಾರದಿಂದ ಹಾಗೂ ಹೋರಿಯಬ್ಬೆ ಜಲಪಾತದ ಮೂಲಕ, ಪಶ್ಚಿಮಘಟ್ಟದಿಂದ ಉಡುಪಿ ಜಿಲ್ಲೆಗೆ ಧುಮುಕುತ್ತದೆ. ಅಲ್ಲಿಂದ ಹರಿಯುವ ನದಿ, ೮೮ ಕಿ.ಮೀ. ಸಾಗಿ, ಕುಂದಾಪುರ ಬಳಿ ಇರುವ ಮರವಂತೆಯ ಹತ್ತಿರದ ಪಂಚ ಗಂಗಾವಳಿಯಲ್ಲಿ ಅರಬ್ಬಿಸಮುದ್ರ ಸೇರುತ್ತದೆ.

ಸಮುದ್ರಕ್ಕೆ ಸೇರುವ ನದಿಯ ಸುಮಾರು ೧,೧೦೦ ಕ್ಯೂಸೆಕ್ಸ್ ನೀರಿನಲ್ಲಿ ೩೦ ಟಿಎಮ್‌ಸಿ ನೀರನ್ನು ಬಳಸಿಕೊಳ್ಳುವುದು. ಹಾಲಾಡಿ ಬಳಿ ಅಣೆಕಟ್ಟು ಕಟ್ಟಿ ಅಥವಾ ಏತ ನೀರಾವರಿ ಮೂಲಕ ಆಗಿನ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ, ಕಾರ್ಕಳ, ಉಡುಪಿ ತಾಲ್ಲೂಕಿನ ೧೬ ಸಾವಿರ ಹೆಕ್ಟೇರ್ ಪ್ರದೇಶದ ಭತ್ತ, ಕಬ್ಬು, ಅಡಿಕೆ ತೆಂಗು, ಇತ್ಯಾದಿ ಬೆಳೆಯ ಭೂಮಿಗೆ ನೀರು ಒದಗಿಸುವುದು ಯೋಜನೆಯ ಆಶಯವಾಗಿತ್ತು.

೪೪ ಕಿ.ಮೀ ಉದ್ದದ ಎಡದಂಡೆ ಕಾಲುವೆ ಉಡುಪಿ, ಕಾರ್ಕಳಕ್ಕೂ, ೪೩ ಕಿ.ಮೀ ಉದ್ದದ ಬಲದಂಡೆ ನಾಲೆಯ ಮೂಲಕ ಕುಂದಾಪುರ ತಾಲ್ಲೂಕಿಗೆ ನೀರುಣಿಸಬೇಕಾಗಿತ್ತು. ಇದಕ್ಕಾಗಿ, ೧೯೮೦ರಲ್ಲಿ ರೂ.೯.೪೩ ಕೋಟಿ, ೧೯೮೧ರಲ್ಲಿ ರೂ.೯೦ ಕೋಟಿ ಬಿಡುಗಡೆ. ೯೪ರಲ್ಲಿ ಮತ್ತೆ ರೂ ೧೮ ಕೋಟಿ ಸರ್ಕಾರಿ ಮಂಜೂರಾತಿ. ನಾಳೆ, ಇಂದು ನೀರು ಬಿಡುತ್ತೇವೆ ಎಂದು ೨೦೦೫ರ ಹೊತ್ತಿಗೆ ಸರ್ಕಾರಿ ಖಜಾನೆಯಿಂದ ೩೬೦ ಕೋಟಿ ರೂಪಾಯಿ ಹೋಮ ಮಾಡಲಾಗಿತ್ತು. ಪ್ರಸ್ತುತ ಕಾಮಗಾರಿ ರೂ.೫೬೯ ಕೋಟಿ ಅನುದಾನದಲ್ಲಿ ಭರದಿಂದ ಸಾಗುತ್ತಿದೆ ಎಂದು ಇಲಾಖೆ ಹೇಳಿಕೊಳ್ಳುತ್ತಿದೆ!

ಈವರೆಗೆ ಇಲ್ಲಿ ನಡೆದಿದ್ದು ಕಣ್ಣುಕಟ್ಟುವ ಕಾಮಗಾರಿಯ ನಾಟಕ. ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು, ತಮಗೆ ಕಂಡಕಂಡವರಿಗೆ ಕಾಮಗಾರಿ ಗುತ್ತಿಗೆ20140611_171057[1] ನೀಡಿದರು. ಅಣೆಕಟ್ಟು, ಏತ ಪದ್ಧತಿ ಎಲ್ಲಿ, ಏನು ಎಂದು ನಿರ್ಧಾರವಾಗುವ ಮೊದಲೇ, ಸಿಕ್ಕಸಿಕ್ಕಲ್ಲಿ ಹೊಂಡ-ಗುಂಡಿ ತೋಡುತ್ತ, ಕಾಲುವೆ, ಕಣಿವೆ ನಿರ್ಮಾಣ ಆರಂಭವಾಗಿತ್ತು. ಅರಣ್ಯ ಇಲಾಖೆಯ ತೀವ್ರ ವಿರೋಧದ ನಡುವೆ, ಮೇಲ್ಗಾಲುವೆ, ಮೇಲ್ಸೇತುವೆ ಅಲ್ಲಲ್ಲಿ ನಿರ್ಮಾಣವಾಯಿತು. ಏತ ನೀರಾವರಿ ಎಂದು ಆರಂಭಗೊಂಡ ಯೋಜನೆ, ಅಣೆಕಟ್ಟು-ಏತ, ಏತ-ಅಣೆಕಟ್ಟು ಎಂದು ಸುಮಾರು ಐದು ಬಾರಿ ಬದಲಾವಣೆ ಕಂಡರೂ, ಯೋಜನೆ ದಡ ಮುಟ್ಟಲಿಲ್ಲ. ಯೋಜನೆಗಾಗಿ ನೂರಾರು ರೈತರು ತಮ್ಮ ೧,೫೦೦ ಹೆಕ್ಟೇರ್‌ಗೂ ಮಿಕ್ಕಿದ ಅಮೂಲ್ಯ ಭೂಮಿ ಕಳೆದುಕೊಂಡಿದ್ದಾರೆ. ಕೆಲವರು ನಿರಾಶ್ರಿತರಾಗಿದ್ದಾರೆ. ಇನ್ನೂ ಕೆಲವರು ಯೋಜನೆಯ ಕಾಮಗಾರಿಗೆ ಸಿಲುಕಿ, ಸೂಕ್ತ ಪರಿಹಾರ ಸಿಗದೆ, ಭೂಮಿ ಕಳಕೊಂಡಿದ್ದಾರೆ. ೧,೬೦೦ ಹೆಕ್ಟೇರ್ ರಕ್ಷಿತಾರಣ್ಯ, ೬೫೦ ಹೆಕ್ಟೇರ್ ಅರಣ್ಯ ನಾಶವಾಗಿದೆ. ಯೋಜನೆಯ ನೆಪದಲ್ಲಿ, ನೆಲ-ಜಲ-ಹಸಿರು ಸಂಪತ್ತಿನ ಸತತ ಲೂಟಿಯೂ ನಡೆದಿದೆ.

ಸಧ್ಯ, ಈ ಯೋಜನೆಯು ಸರ್ಕಾರಿ ಯಂತ್ರದ ದುರ್ಬಳಕೆ, ಜನಪ್ರತಿನಿಧಿಗಳ, ರಾಜಕಾರಣಿಗಳ ಹೊಣೆಗೇಡಿತನದ ಪರಮಾವಧಿ, ಅವರಲ್ಲಿನ ಇಚ್ಛ್ಚಾಶಕ್ತಿಯ ಮಾನದಂಡಕ್ಕಷ್ಟೇ ಸೀಮಿತವಾಗಿದೆ.

ಯೋಜನೆ ಪ್ರದೇಶಕ್ಕೆ ಕಾಲಿಟ್ಟರೆ, ಅಲ್ಲಲ್ಲಿ ಕಾಲುವೆಗಳು ಕಂಡು ಬಂದರೂ, ಮಳೆಗಾಲದಲ್ಲಿ ಮಳೆನೀರು ಹರಿದಿದ್ದು ಬಿಟ್ಟರೆ, ಬೇರಾವ ಪುರುಷಾರ್ಥದ ಕೆಲಸ ಇಲ್ಲಿ ಕಂಡು ಬರುತ್ತಿಲ್ಲ. ಸರ್ಕಾರಿ ಬೊಕ್ಕಸ ನಿರಂತರ ಖಾಲಿ ಮಾಡುತ್ತಲೇ ಇದ್ದಾರೆ. ಕರಾವಳಿ ಜನತೆಗೆ ಮಾತ್ರ ನೀರು ಮರೀಚಿಕೆಯಾಗಿಯೇ ಉಳಿದಿದೆ.

ಚಿತ್ರ-ಲೇಖನ: ಕೆ. ಶಶಿಧರ ಹೆಮ್ಮಣ್ಣ, ಉಡುಪಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*