ಮಳೆ
ಸಮುದ್ರ, ಮಹಾಸಾಗರಗಳ ನೀರು ಆವಿಯಾಗಿ ಆಕಾಶ ತಲುಪಿ ಅಲ್ಲಿ ಮೋಡಗಳ ರೂಪದಲ್ಲಿ ಸಂಗ್ರಹವಾಗುತ್ತದೆ. ಮೋಡಗಳ ಸಾಂದ್ರತೆ ಹೆಚ್ಚಿ ಮತ್ತು ಅಲ್ಲಿನ ವಾತಾವರಣ ತಂಪಾದಾಗ ಮೋಡಗಳ ತೇವಾಂಶ ಹನಿಗೂಡಿ ಭೂಮಿಯನ್ನು ಸೇರುತ್ತದೆ. ನೆಲದ ಮೇಲೆ ಹೀಗೆ ಬಿದ್ದ ನೀರು ಹಳ್ಳ, ನದಿಗಳ ಮೂಲಕ ಮತ್ತೆ ಸಾಗರವನ್ನು ತಲುಪುವುದು. ಈ ಚಕ್ರ ಮತ್ತೆ ಮುಂದುವರಿಯುವುದು. ಇದನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ಜಲಚಕ್ರ ಎಂದು ಕರೆಯಲಾಗುತ್ತದೆ. ನೆಲದ ಮೇಲಿನ ಮರಗಿಡಗಳು ಸಹ ಗಣನೀಯ ಪ್ರಮಾಣದಲ್ಲಿ ತೇವಾಂಶವನ್ನು ವಾತಾವರಣಕ್ಕೆ ಸೇರಿಸುತ್ತವೆ.
ಮಳೆಯ ಬಗೆಗಳು
ಮಳೆ ಬೀಳಲು ನೆರವಾದ ಕಾರಣ ಮತ್ತು ವಾತಾವರಣದ ಸ್ಥಿತಿಗಳ ಆಧಾರದ ಮೇಲೆ ಮಳೆಯನ್ನು ಈ ಮೂರು ಬಗೆಯವಾಗಿ ವಿಂಗಡಿಸಬಹುದು.
* ಓರೋಗ್ರಾಫಿಕ್ ಮಳೆ
* ಕನ್ವೆಕ್ಟಿವ್ ಮಳೆ
* ಚಂಡಮಾರುತದ ಮಳೆ
ಮಾನವನಿರ್ಮಿತ ಯಂತ್ರಗಳು ಮತ್ತು ಇತರ ಪ್ರದೂಷಣ ಸಾಧನಗಳಿಂದ ಸೂಕ್ಷ್ಮ ಗಾತ್ರದ ವಸ್ತುಕಣಗಳು ಮೋಡದ ಉತ್ಪತ್ತಿಯಲ್ಲಿ ಪಾತ್ರ ವಹಿಸುವುವು. ಒಂದು ವಿಶಿಷ್ಟ ಸಂಗತಿಯೆಂದರೆ ವಾಹನಗಳ ದಟ್ಟಣೆಯಿಂದಾಗಿ ವಾರದ ಮೊದಲ ಭಾಗದಲ್ಲಿ ಮೋಡಗಳ ರಚನೆಯುಂಟಾಗಿ ವಾರಾಂತ್ಯದಲ್ಲಿ ಅವು ಮಳೆ ಸುರಿಸುವ ಸಂಭವ ಹೆಚ್ಚಾಗಿರುತ್ತದೆ. ಇದಕ್ಕೊಂದು ಉದಾಹರಣೆಯೆಂದರೆ ಯು.ಎಸ್.ಎ ನ ಅತಿ ನಿಬಿಡ ಜನವಸತಿ ಮತ್ತು ವಾಹನದಟ್ಟಣೆಯುಳ್ಳ ಪೂರ್ವ ಕರಾವಳಿಯಲ್ಲಿ ವಾರಾಂತ್ಯದಲ್ಲಿ ಬೀಳುವ ಮಳೆಯ ಪ್ರಮಾಣವು ಗಣನೀಯವಾಗಿ ಹೆಚ್ಚು. ನೆಲದ ಮೇಲೆ ಹಸಿರು ಹೆಚ್ಚಿದ್ದಷ್ಟೂ ಮೋಡಗಳ ಉತ್ಪತ್ತಿ ಹೆಚ್ಚಿ ತನ್ಮೂಲಕ ಮಳೆಯ ಪ್ರಮಾಣವೂ ಅಧಿಕವಾಗಿರುತ್ತದೆ. ಆದರೆ ಮಾನವನು ಅವಿರತವಾಗಿ ನಡೆಸಿಕೊಂಡು ಬಂದಿರುವ ಅರಣ್ಯನಾಶದಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕುಸಿಯತೊಡಗಿದೆ.
ಮಳೆಯ ವರ್ಗೀಕರಣ
ಪ್ರತಿ ಗಂಟೆಗೆ ಬೀಳುವ ಪ್ರಮಾಣಕ್ಕೆ ಅನುಗುಣವಾಗಿ ಮಳೆಯನ್ನು ಕೆಳಕಂಡಂತೆ ವರ್ಗೀಕರಿಸಬಹುದು.
* ತುಂತುರು ಮಳೆ - ಗಂಟೆಗೆ ೦.೨೫ ಮಿಲಿಮೀಟರಿಗಿಂತ ಕಡಿಮೆ ಪ್ರಮಾಣ.
* ಹಗುರ ಮಳೆ - ಗಂಟೆಗೆ ೦.೨೫ ಮಿಲಿಮೀಟರಿನಿಂದ ೧.೦ ಮಿಲಿಮೀಟರ್ ವರಗೆ.
* ಸಾಧಾರಣ ಮಳೆ - ಗಂಟೆಗೆ ೧.೦ ಮಿಲಿಮೀಟರಿನಿಂದ ೪.೦ ಮಿಲಿಮೀಟರ್ ವರಗೆ.
* ಭಾರೀ ಮಳೆ - ಗಂಟೆಗೆ ೪.೦ ಮಿಲಿಮೀಟರಿನಿಂದ ೧೬.೦ ಮಿಲಿಮೀಟರ್ ವರಗೆ.
* ಅತಿ ಭಾರೀ ಮಳೆ - ಗಂಟೆಗೆ ೧೬.೦ ಮಿಲಿಮೀಟರಿನಿಂದ ೫೦.೦ ಮಿಲಿಮೀಟರ್ ವರಗೆ.
* ಅತ್ಯಂತ ಭಾರೀ ಮಳೆ - ಗಂಟೆಗೆ ೫೦.೦ ಮಿಲಿಮೀಟರಿಗಿಂತ ಹೆಚ್ಚು.
ಸಾಮಾನ್ಯವಾಗಿ ಮಳೆಯ ಸಣ್ಣ ಹನಿಗಳು ಪೂರ್ಣ ಗೋಲಾಕಾರದಲ್ಲಿರುತ್ತವೆ. ದೊಡ್ಡ ಹನಿಗಳು ಬುಡದಲ್ಲಿ ಮಟ್ಟಸವಾಗಿರುತ್ತವೆ. ಅತಿ ದೊಡ್ಡ ಹನಿಗಳು ಪ್ಯಾರಾಚೂಟ್ ಆಕಾರದಲ್ಲಿರುವುವು. ಮಳೆಯ ಹನಿಗಳ ಗಾತ್ರವು ಸಾಮಾನ್ಯವಾಗಿ ೧ ರಿಂದ ೨ ಮಿಲಿಮೀಟರ್ ಗಳಷ್ಟು. ೫ ಮಿ.ಮೀ. ಗಿಂತ ದೊಡ್ಡ ಹನಿಗಳು ಅಸ್ಥಿರಗೊಂಡು ಒಡೆದು ಸಣ್ಣಸಣ್ಣ ಹನಿಗಳಾಗಿ ಮಾರ್ಪಡುತ್ತವೆ. ಈವರೆಗೆ ದಾಖಲಾಗಿರುವಂತೆ ೨೦೦೪ರಲ್ಲಿ ಬ್ರೆಜಿಲ್ ಮತ್ತು ಮಾರ್ಷಲ್ ದ್ವೀಪಗಳಲ್ಲಿ ೧೦ ಮಿ.ಮೀ. ಗಾತ್ರದ ಭಾರೀ ಮಳೆಹನಿಗಳು ಬಿದ್ದುವು. ಆದರೆ ಇಂತಹ ವಿದ್ಯಮಾನ ಬಲು ಅಪರೂಪ.
ಮಳೆಯ ಲಕ್ಷಣಗಳು
ಸಮುದ್ರಮಟ್ಟದಲ್ಲಿ ಮತ್ತು ಬೀಸುಗಾಳಿಯಿಲ್ಲದಿರುವಾಗ ೦.೫ ಮಿ.ಮೀ. ಮಳೆಹನಿಯು ನೆಲಕ್ಕೆ ಸೆಕೆಂಡಿಗೆ ೨ ಮೀಟರ್ ವೇಗದಲ್ಲಿ ಇಳಿದರೆ ೫ ಮಿ.ಮೀ. ಗಾತ್ರದ ಹನಿಯು ಸೆಕೆಂಡಿಗೆ ೯ ಮೀಟರ್ ವೇಗದಲ್ಲಿ ಅಪ್ಪಳಿಸುವುದು. ನೀರಿನ ಮೇಲೆ ಮಳೆಹನಿಯು ಬಿದ್ದಾಗ ಉಂಟಾಗುವ ವಿಶಿಷ್ಟ ಸದ್ದಿಗೆ ನೀರಿನಡಿಯಲ್ಲಿ ಗಾಳಿಯ ಗುಳ್ಳೆಗಳ ಕಂಪನವೇ ಕಾರಣವಾಗಿರುತ್ತದೆ. ವಾತಾವರಣದಲ್ಲಿನ ಇಂಗಾಲಾಮ್ಲವು ಮಳೆಹನಿಗಳಲ್ಲಿ ಕೊಂಚ ಪ್ರಮಾಣದಲ್ಲಿ ಕರಗಿ ಕಾರ್ಬಾನಿಕ್ ಆಮ್ಲದ ಅಲ್ಪ ಅಂಶವನ್ನು ಮಳೆಯ ನೀರಿನಲ್ಲಿ ಸೇರಿಸುತ್ತದೆ. ಕೆಲ ಮರುಭೂಮಿ ಪ್ರದೇಶಗಳಲ್ಲಿ ಧೂಳಿನಲ್ಲಿ ಕೊಂಚ ಕ್ಯಾಲ್ಸಿಯಮ್ ಕಾರ್ಬೊನೇಟ್ ಅಂಶವು ಬೆರೆತಿರುವುದರಿಂದ ಅಲ್ಲಿ ಮಳೆಯಾದರೆ ಆ ನೀರು ಕೊಂಚ ಮಟ್ಟಿಗೆ ಕ್ಷಾರಯುಕ್ತವಾಗಿರುವ ಸಂಭವವಿದೆ.
ಎಲ್ಲಾ ಸಸ್ಯರಾಜಿಗಳಿಗೂ ನೀರಿನ ಅವಶ್ಯಕತೆಯಿದ್ದೇ ಇರುವುದರಿಂದ ಮಳೆಯು ಸಸ್ಯಗಳ ಬೆಳವಣಿಗೆಯ ಮೇಲೆ ಅತಿ ಮುಖ್ಯ ಪರಿಣಾಮವನ್ನು ಬೀರುತ್ತದೆ. ಆದರೆ ಸಸ್ಯಗಳು ನಿಗದಿತ ಪ್ರಮಾಣ ಮತ್ತು ನಿಯಮಿತ ಅವಧಿಯಲ್ಲಿ ನೀರನ್ನು ಬಯಸುವುದರಿಂದ ಅತಿ ಕಡಿಮೆ ಅಥವಾ ಅತಿ ಹೆಚ್ಚು ಮಳೆ ಎರಡೂ ಸಸ್ಯಗಳಿಗೆ ಹಾನಿಕರ. ಬರದ ವಾತಾವರಣವು ಸಸ್ಯಸಂಕುಲವನ್ನು ಪೂರ್ಣವಾಗಿ ನಾಶಮಾಡಿದರೆ, ಅತಿ ಮಳೆಯು ಸಸ್ಯಗಳಲ್ಲಿ ರೋಗಗಳನ್ನುಂಟುಮಾಡಬಹುದು ಮತ್ತು ಹಾನಿಕಾರಕ ಶಿಲೀಂಧ್ರಗಳ ಉತ್ಪತ್ತಿಗೆ ಕಾರಣವಾಗುವುದು. ಪ್ರತಿ ಜಾತಿಯ ಗಿಡವು ನಿಗದಿತ ಪ್ರಮಾಣದ ನೀರಿನ ಆಸರೆಯಲ್ಲಿ ಮಾತ್ರ ಉತ್ತಮ ಬೆಳವಣಿಗೆ ತೋರುವುದು. ಕಳ್ಳಿ ಗಿಡಕ್ಕೆ ಅತ್ಯಲ್ಪ ಪ್ರಮಾಣದ ನೀರು ಸಾಕಾದರೆ ಉಷ್ಣವಲಯದ ಸಸ್ಯಗಳು ಬದುಕುಳಿಯಲು ವರ್ಷಕ್ಕೆ ನೂರಾರು ಅಂಗುಲ ಮಳೆಯನ್ನು ಬಯಸುತ್ತವೆ. ವಿಶ್ವದ ಎಲ್ಲಾ ದೇಶಗಳು ವ್ಯವಸಾಯಕ್ಕಾಗಿ ಮಳೆಯನ್ನು ನಾನಾ ಪ್ರಮಾಣದಲ್ಲಿ ಅವಲಂಬಿಸಿವೆ. ಭಾರತದಲ್ಲಿ ಕೃಷಿಯು ಮಳೆಯ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಹತ್ತಿ, ಬತ್ತ, ಎಣ್ಣೆಬೀಜಗಳ ಬೆಳೆಗಳು ಪೂರ್ಣವಾಗಿ ಮಳೆಯನ್ನೇ ನೆಚ್ಚಿವೆ. ಮಳೆಗಾಲದ ಆರಂಭವು ಕೆಲವೇ ದಿನಗಳಷ್ಟು ವ್ಯತ್ಯಾಸವಾದರೂ ದೇಶದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾವುಂಟಾಗುವುದು.


Recent comments
4 hours 18 min ago
8 hours 9 min ago
6 days 19 hours ago
1 week 5 hours ago
1 week 4 days ago
1 week 6 days ago
2 weeks 12 hours ago
2 weeks 14 hours ago
2 weeks 3 days ago
2 weeks 3 days ago