ಅಂಕೆಯಲ್ಲಿರುವ 'ಅಂಕಿ-ಅಂಶಗಳು'!
ಮೀಸೆ ಅಡಮಾನವಾಗಿಟ್ಟು ಸಾಲ ಪಡೆಯುವ ಪುರಾತನ ಪದ್ಧತಿ ಬಗ್ಗೆ ನೀವು ಕೇಳಿದ್ದೀರಾ? ಅದು ಬಿಡಿ, ಈಗ ವರ್ತಮಾನದಲ್ಲಿ ನಮ್ಮ ಯುವಕರಿಗೆ ಮೀಸೆ ಭಾರವಾದಂತಿದೆ..! ಎಂದು ನೀವು ನನ್ನ ಕಾಲೆಳೆಯಬಹುದು.
ಆಗ ಮೀಸೆಯ ಗಮ್ಮತ್ತು ಕೇಳಿ.. ಸಾಲ ಕೊಂಬುವವರು ತಮ್ಮ ಉದ್ದನೇಯ ಹತ್ತೆಂಟು ಮೀಸೆಗಳನ್ನು ಹುರಿಗೊಳಿಸಿ, ಸಿಂಬಿ ಕಟ್ಟಿ ವಸ್ತು ಅಥವಾ ಹಣ ಕೊಡುವ ಸಾಹುಕಾರನಿಗೆ ನೀಡುತ್ತಿದ್ದರು. ಆತ ಭದ್ರವಾಗಿ ಅವುಗಳನ್ನು ತನ್ನ ತಿಜೂರಿಯಲ್ಲಿ ಎತ್ತಿಟ್ಟುಕೊಳ್ಳುತ್ತಿದ್ದ. ವಾಯಿದೆ ಮುಗಿಯುವುದರ ಒಳಗಾಗಿ ಸಾಲ ಕೊಂಡವ ಬಡ್ಡಿ ಸಮೇತ (ಜೀವ ಒತ್ತೆ ಇಟ್ಟಾದರೂ ಸರಿ) ವಾಪಸ್ ಮಾಡಿ, ತನ್ನ ಮೀಸೆಗಳ ಕಟ್ಟು ವಾಪಸ್ ಪಡೆದು, ಕೊಟ್ಟ ಮಾತು ಹಾಗು ನಂಬಿಕೆ ಎರಡನ್ನೂ ಉಳಿಸಿಕೊಳ್ಳುತ್ತಿದ್ದ. ಈಗ ಸಾಲ ಸಿಗುವುದು ತೀರ ಕಷ್ಟವೇನಲ್ಲ. ಆದರೆ ಬ್ಯಾಂಕ್ ಸಾಲ ವಸೂಲಿ ಮಾತ್ರ ಗುಂಡಾ ಪಡೆ ಕಳುಹಿಸಿ..!
ಆ ಕಾಲ ಹೇಗಿತ್ತು? ವ್ಯಕ್ತಿಗೆ ಬೆಲೆ ಇತ್ತು. ಕಾಗದಕ್ಕಿಂತ ಆತನ ಮಾತಿಗೆ ಗೌರವವಿತ್ತು. ವ್ಯಕ್ತಿತ್ವಕ್ಕೆ, ಬದುಕಿನ ನೈತಿಕ ಮೌಲ್ಯಗಳಿಗೆ ಮನ್ನಣೆ ಇತ್ತು. ಸಾರ್ವಜನಿಕ ಜೀವನದಲ್ಲಿ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದರು. ಜನ ನಂಬಿಕೆಯ ಮೇಲೆ ತಮ್ಮ ವ್ಯವಹಾರ ನಡೆಸುತ್ತಿದ್ದರು. ಲೇಖಿ ಇರುತ್ತಿರಲಿಲ್ಲ. ಸ್ವಾಭಿಮಾನದಿಂದ ಹಿರಿಯರು ತಮ್ಮ ಜೀವನ ನಡೆಸಿ, ಸಮಾಜದ ಬದುಕು ರೂಪಿಸಿದ್ದರು. ಹಾಸಿಗೆ ಇದ್ದಷ್ಟು ಕಾಲು ಚಾಚಿದವರು ಅವರು. ಅಲ್ಪ ತೃಪ್ತರು ಎಂದರೂತಪ್ಪಿಲ್ಲ. ಸಾಲ ಶೂಲಕ್ಕೆ ಸಮ ಎಂದು ನಂಬಿದ್ದರು. ಕೈ ಮೀರಿದ ಹೊತ್ತಿನಲ್ಲಿ ಅನಿವಾರ್ಯವಾಗಿ ಸಾಲ ಮಾಡುತ್ತಿದ್ದರು.
'ಇರುವ ಭಾಗ್ಯವ ನೆನೆದು, ಬಾರೆನೆಂಬುದನ್ನು ಬಿಡು. ಹರುಷಕ್ಕಿದು ದಾರಿ' -ಕನ್ನಡದ ಸೂರ್ಯ, ದಾರ್ಶನಿಕ ಡಿ.ವಿ.ಗುಂಡಪ್ಪ ಅವರ ಅನುಭಾವದ ಮಾತುಗಳಿಗೆ ತಕ್ಕಂತಿದ್ದರು ನಮ್ಮ ಹಿರೀಕರು.
ಈ ಮಾತು ಈಗೇಕೆ? ಎಂಬ ಪ್ರಶ್ನೆ ತಮ್ಮಲ್ಲಿ ಮೂಡಿರಬಹುದು. ಏಕೆಂದರೆ, ನಮ್ಮ ಈಗಿನ ದೃಷ್ಟಿಯಲ್ಲಿ 'ಹಿರಿಯರಷ್ಟು ಮೂರ್ಖರು ಮತ್ಯಾರಿಲ್ಲ; ನಮ್ಮಷ್ಟು ಜಾಣರು ಹಿಂದೆ ಹುಟ್ಟಿದ್ದಿಲ್ಲ..ಮುಂದೆ ಹುಟ್ಟುವುದೂ ಇಲ್ಲ'..! ಎಂಬ ಧೋರಣೆ ಬಲಗೊಳ್ಳುತ್ತಿರುವ ಕಾಲವಿದು. ನಮಗೆ ಅಕ್ಷರಗಳ ಅರಿವಿದೆ. ಅಂಕಿ-ಸಂಖ್ಯೆಗಳ ಅಬ್ಬರದಲ್ಲಿ ಎಲ್ಲರನ್ನೂ..ಎಲ್ಲ ಕಾಲದಲ್ಲಿಯೂ ಯಾಮಾರಿಸುವ (ಕು)ತಂತ್ರಗಾರಿಕೆ ಬಹುವಾಗಿ ಸಿದ್ಧಿಸಿದೆ. ಅವರಿಗಿದ್ದುದು ಜ್ಞಾನದ ಬಲ. ನಮಗೆ ಅಕ್ಷರ, ಅಂಕಿ-ಸಂಖ್ಯೆಗಳ ಸೈನ್ಯ. ಅವರು ಶಿಕ್ಷಣಸ್ಥರಾಗಿದ್ದರು. ನಾವು ಅತಿ ಬುದ್ಧಿವಂತರಾಗಲು ಹವಣಿಸಿದ್ದೇವೆ.
ಕಾಲ ಗತಿಸಿದಂತೆ ಕ್ರಮೇಣ ಕೊಡು-ಕೊಳ್ಳುವ ಸಂಸ್ಕೃತಿ ಬಲಹೀನಗೊಂಡಿತು. ವಸ್ತುಗಳ ಅಪಮೌಲ್ಯ ತಪ್ಪಿಸಲು ವಿನಿಮಯ ಸಾಧನವಾಗಿ ಪರಿಚಯಿಸಲ್ಪಟ್ಟ 'ಹಣ' ಬಲಗೊಂಡಿತು. 'ಹಣದಿಂದ ಎಲ್ಲ ಅಲ್ಲದಿದ್ದರೂ; ಎಲ್ಲವೂ ಹಣದಿಂದಲೇ'! ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿತು. ನಾವು ಆಳಬೇಕಿದ್ದ ಹಣ, ನಮ್ಮನ್ನು ಆಳಲು ಆರಂಭಿಸಲು ತಡವಾಗಲಿಲ್ಲ. ಮನುಷ್ಯನೇ ಅಪಮೌಲ್ಯಕ್ಕೆ ಒಳಗಾದ. ಬಳಕೆಯ ಅನುಕೂಲಕ್ಕಿಂತ..ಲೆಕ್ಕ-ಪತ್ರ ವರಸೆಗಳೇ ಮುಖ್ಯವಾದವು. ಮಾತಿಗಿಂತ ಕಾಗದದ ಲೇಖಿ ಹೆಚ್ಚು ಪ್ರಸ್ತುತವೆನಿಸಿತು. ಆತ್ಮಸಾಕ್ಷಿಗಿಂತ ಕೋರ್ಟ್-ಕಚೇರಿಗಳೇ ಸತ್ಯ ಶೋಧಿಸುವ ಉಪಕ್ರಮಗಳಾದವು. ಸ್ವಹಿತಾಸಕ್ತಿ ಮೇಲುಗೈ ಸಾಧಿಸಿತು. ಸಂಸ್ಕೃತಿ ಭೂಇಷ್ಟ ದೇಶ..ಕೊಳ್ಳುಬಾಕ, ಭೋಗ ಪ್ರಧಾನವಾಯಿತು. ಮತ್ತೆ ಇದನ್ನು ಸಾಬೀತುಪಡಿಸಲು ಅಂಕಿ-ಅಂಶಗಳೇ ಸಾಧನ!
ಹಾಗಾಗಿ ಎಲ್ಲ ಕ್ಷೇತ್ರಗಳಲ್ಲಿ ಎಲ್ಲೆ ಮೀರಿ ಅಂಕಿ-ಸಂಖ್ಯೆಗಳ ಜಾತ್ರೆ ಶುರುವಾಯಿತು. ಈ ಅಂಕಿ-ಅಂಶಗಳು ಎಷ್ಟು ಅವಶ್ಯಕ ಎನ್ನುವುದು ಪ್ರಶ್ನೆಯಲ್ಲ. ಎಷ್ಟರ ಮಟ್ಟಿಗೆ ಈ ಅಂಕಿ-ಅಂಶಗಳನ್ನು ಆಶ್ರಯಿಸಬೇಕು ಎಂಬುದು ನಮ್ಮ ಮುಂದಿರುವ ಯಕ್ಷಾತೀತ ಪ್ರಶ್ನೆ! ಉದಾಹರಣೆಗೆ..ನಾವು ಪರೀಕ್ಷೆಯಲ್ಲಿ ಪಡೆಯುವ ಅಂಕಗಳಿಗೂ, ಜೀವನದಲ್ಲಿ ಯಶಸ್ವಿಯಾಗಿ ಸಮಾಜದಿಂದ ಪಡೆಯುವ ಮನ್ನಣೆಗೂ ಏನಾದರೂ ಸಂಬಂಧ? ಹಾಗೆಯೇ, ಸರಕಾರಿ ಕಡತಗಳ ಅಂಕಿ-ಅಂಶಗಳಿಗೂ ಅಲ್ಲಿನ ಬೇರು ಮಟ್ಟದ ವಾಸ್ತವ ಸ್ಥಿತಿಗೂ ಅಜಗಜಾಂತರ! ಯೋಜನಾ ವೆಚ್ಚಕ್ಕೂ, ನಡೆದ ಕಾಮಗಾರಿಗೂ ಇರುವ ಸಾಮ್ಯತೆ-ಭಿನ್ನತೆ, ಅಂತಿಮವಾಗಿ ಸಲ್ಲಿಕೆಯಾಗುವ ಅಂಕಿ-ಸಂಖ್ಯೆಗಳು ರಾಮಾಯಣಕ್ಕೆ ಸಮ.
'ಲ್ಯಾಬ್ ಟು ಲ್ಯಾಂಡ್' -ಪ್ರಯೋಗಾಲಯದಿಂದ ಕ್ಷೇತ್ರದ ವರೆಗೆ ಸಿದ್ಧಾಂತ ನೀವು ಕೇಳಿದ್ದೀರಿ. ಹೊಸ ವೈದ್ಯನಿಗಿಂತ..ಹಳೆ ರೋಗಿಯ ಸಲಹೆ ಉತ್ತಮ ಎನ್ನುವಂತೆ..ನಮ್ಮ ಕೃಷಿಕರ ಅನುಭವಗಮ್ಯ ಕಮತ ಚಿಕಿತ್ಸೆಯ ವೈದ್ಯಕೀಯಕ್ಕೂ, ಅಂಕಿ-ಸಂಖ್ಯೆಗಳ ಆಧಾರದ ಮೇಲೆ ಗುಣಾಣು ಹೊಂದಿಸಿ ನಮ್ಮ ತಜ್ಞರು ಪರಿಚಯಿಸುವ ಚಿಕಿತ್ಸಾ ಕ್ರಮಗಳಿಗೂ ಇರುವ ಬಾದರಾಯಣ ಸಂಬಂಧ ಅಷ್ಟಕಷ್ಟೇ. ಅವರದ್ದು ಕೃಷಿ ಬದುಕಿನ ಅನಿವಾರ್ಯತೆಗಳಿಗಾಗಿ ಸಂಶೋಧನೆ. ಇವರದ್ದು ಸಂಶೋಧನೆಗಳಿಗಾಗಿ 'ಸಂ'ಶೋಧನೆ! ಹಾಗಂತ ಅಂಕಿ ಅಂಶಗಳ ಅವಶ್ಯಕತೆಯನ್ನು ಅಲ್ಲಗಳೆಯುವಂತಿಲ್ಲ. ಕೇಂದ್ರ ಅದಕ್ಕಾಗಿಯೇ ಸಂಖ್ಯಾ ಮಂತ್ರಾಲಯ 'ಸ್ಟಾಟಿಸ್ಟಿಕಲ್ ಡಿಪಾರ್ಟ್ ಮೆಂಟ್' ಹುಟ್ಟುಹಾಕಿದೆ. ರಾಷ್ಟ್ರ ಹಾಗು ರಾಜ್ಯ ಸ್ಥರದಲ್ಲಿ ಯೋಜನೆಗಳನ್ನು ರೂಪಿಸುವ ಸರಕಾರಗಳಿಗೆ, ಫಲಾನುಭವಿಗಳನ್ನು ಗುರುತಿಸುವ ನೂರೆಂಟು ಇಲಾಖೆಗಳಿಗೆ ಇವು ತೀರ ಅತ್ಯವಶ್ಯ.
ಲೇಖನಗಳನ್ನು ಬರೆಯುವಾಗ ನಾವು ಪ್ರಯತ್ನಪೂರ್ವಕವಾಗಿ ಅಂಕಿ-ಅಂಶಗಳನ್ನು ನಮ್ಮ ತಿಳಿವಳಿಕೆಗಾಗಿ ಮೀಸಲಿಡುತ್ತೇವೆ. ಅವುಗಳ ಯೋಗ್ಯ ಮತ್ತು ಘೋರ ಪರಿಣಾಮಗಳನ್ನು ಮಾತ್ರ ಓದುಗರ/ ಕೇಳುಗರ ಹಾಗು ನೋಡುಗರ ಅನುಕೂಲಕ್ಕಾಗಿ ವಿಶ್ಲೇಷಿಸುತ್ತೇವೆ. ಕೇವಲ ಅಂಕಿ-ಅಂಶಗಳೇ ತುಂಬಿದ್ದರೆ ಓದುಗರಿಗೆ ಭ್ರಮನಿರಸನವಾಗುತ್ತದೆ. ಕೆಲವೊಮ್ಮೆ 'ನೀರಿಳಿಯದ ಗಂಟಲೊಲ್ ಕಡುಬಂ ತುರುಕಿದಂತೆ'! ಲೇಖಕ ಪರಿಣಾಮ ಎದುರಿಸಬೇಕಾಗುತ್ತದೆ.
ಅನುಭವಕ್ಕೆ ಹತ್ತಿರವಾದ ಉದಾಹರಣೆ ಕೊಡುವುದಾದರೆ..ನಮ್ಮ ಆಕಾಶವಾಣಿಯ 'ಕೃಷಿ ರಂಗ' ಕಾರ್ಯಕ್ರಮ! ಅರ್ಥಾತ್, ರೈತರಿಗೆ ರಾಸಾಯನಿಕ, ಕೀಟನಾಶಕ, ಗೊಬ್ಬರ, ಬೀಜ ಇವುಗಳ ಕೇವಲ ಅಂಕಿ-ಸಂಖ್ಯೆಗಳ ವರದಿಯನ್ನು ಒಪ್ಪಿಸುವ ಕಾರ್ಯಕ್ರಮವಾಗಿತ್ತು. ಅಂಕಿ-ಅಂಶಗಳೇ ತುಂಬಿ ತುಳುಕುತ್ತಿದ್ದ ಕಾರಣ ಅನ್ನದಾತನನ್ನು ಸಹ ಅದು ಸಮರ್ಪಕವಾಗಿ ತಲುಪುತ್ತಿರಲಿಲ್ಲ. ಇನ್ನು ಉಳಿದವರು 'ಕರಿ ಯತ್ತ...ಕಾಳಿಂಗ..ಬಿಳಿ ಎತ್ತ ಮಾನಿಂಗ..' ಸಿಗ್ನೇಚರ್ ಟ್ಯೂನ್ ತೇಲಿ ಬರುತ್ತಿದ್ದಂತೆಯೇ ರೇಡಿಯೋ ಕಿವಿ ತಿರುವುತ್ತಿದ್ದರು! ಒಂದರ್ಥದಲ್ಲಿ ರೇಡಿಯೋ..'ಮಾತಾಡಿಯೋ' ಆಗಿತ್ತು! ಈಗ ಕೊಂಚ ಸ್ವರೂಪ ಬದಲಾಗಿದೆ ಎಂದು ಕೇಳಿದ್ದೇನೆ.
ಮಂಗಳೂರು ಆಕಾಶವಾಣಿ ಜಲ ಜಾಗೃತಿ ಕುರಿತಂತೆ ಬಿತ್ತರಿಸಿದ ಸರಣಿ ಕಾರ್ಯಕ್ರಮದಲ್ಲಿ..'ಸಮುದ್ರದ ಒಂದು ಲೀಟರ್ ಉಪ್ಪು ನೀರನ್ನು ಮಹಾನಗರ ಪಾಲಿಕೆ ಸಿಹಿ ನೀರನ್ನಾಗಿ ಪರಿವರ್ತಿಸಲು ಯೋಜಿಸಿದರೆ ಪ್ರತಿ ಲೀಟರಗೆ ೮ ರುಪಾಯಿ ವ್ಯಯಿಸಬೇಕಾಗುತ್ತದೆ. ಹಾಗೆ ವ್ಯಯಿಸಿದರೂ, ಜನ ಕರ ರೂಪದಲ್ಲಿ ಪಾವತಿಸುವುದು ಪ್ರತಿ ಲೀಟರ್ ಕುಡಿಯುವ ಸಿಶಿ ನೀರಿಗೆ .೨೫ ಪೈಸೆ!" ಎಂದಾಗ ಜನ ಹೌಹಾರಿದರು. ಕಳೆದ ೬ ವರ್ಷಗಳ ಪ್ರಯತ್ನದ ಫಲವಾಗಿ ಮಂಗಳೂರು ಜನ ಇಂದು ಜಲ ಸಾಕ್ಷರರಾಗಿದ್ದಾರೆ. ಜಲಯೋಧರಾಗಿದ್ದಾರೆ. ಮಳೆ ನೀರು ಕೊಯ್ಲು, ಮೇಲ್ಛಾವಣಿ ಯಿಂದ ಬಾವಿಗೆ ಕೊಯ್ಲು, ಬೋರವೆಲ್ ಸ್ಥಿರೀಕರಣ, ಬಳಸಿದ ನೀರಿನ ಶುದ್ಧೀಕರಣ ಹಾಗು ಪುನರ್ಬಳಕೆ, ಇಂಗು ಗುಂಡಿಗಳ ನಿರ್ಮಾಣ ತನ್ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ದಿನಂ ಪ್ರತಿ ಕೇವಲ ೩೫ ಲೀಟರ್ ನೀರು ಪ್ರತಿಯೊಬ್ಬರು ಈಗ ಬಳಸುತ್ತಿದ್ದಾರೆ. ಮೊದಲು ೩೫೦ ರಿಂದ ೫೦೦ ಲೀಟರ್ ವರೆಗೆ ನೀರು ಬಳಕೆಯಾಗುತ್ತಿತ್ತು!
ಇದು ಅಂಕಿ-ಸಂಖ್ಯೆಗಳು ಮಂಗಳೂರು ಆಕಶವಾಣಿ ಕೇಳುಗರ ಮೇಲೆ ಮಾಡಿರುವ ಮೋಡಿ.
ಇತ್ತೀಚಿನ ವರೆಗೆ 'ಕಪ್ಪು-ಬಿಳುಪಿ'ನಲ್ಲಿದ್ದ ರೇಡಿಯೋ 'ವರ್ಣಮಯ'ವಾಗಿದೆ. ಏಕಮುಖವಾಗಿದ್ದ ರೇಡಿಯೋ ದ್ವಿಮುಖ ಅಥವಾ 'ಇಂಟರ್ಯಾಕ್ಟಿವ್' ಆಗಿದೆ. ಶ್ರೀಲಂಕಾದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ 'ಬಾದುಲ್ಲ' ಕೂಡ ಒಂದು. ಅಲ್ಲಿ ಇತ್ತೀಚೆಗೆ ಆಧುನಿಕವಾದ ಸಮುದಾಯ ಬಾನುಲಿ ಕೇಂದ್ರ ಅಸ್ತಿತ್ವಕ್ಕೆ ಬಂದಿದೆ. 'ಉವಾ ಕಮ್ಯುನಿಟಿ ರೇಡಿಯೋ' ಎಂಬ ಹೆಸರಿನ ಈ ಕೇಂದ್ರದ ವಿಶೇಷತೆ ಎಂದರೆ ಇದು ಸಂಪೂರ್ಣ ಗಣಕೀಕೃತ. ಇದರ ವ್ಯಾಪ್ತಿ ೩ ಜಿಲ್ಲೆಗಳು. ಈ ಕೇಂದ್ರ ಪ್ರಸಾರ ಮಾಡುವ ಕಾರ್ಯಕ್ರಮಗಳನ್ನು ಆಧರಿಸಿ ೨೬೮ 'ಜ್ಞಾನ ಸಂಘ'ಗಳು (ನಾಲೆಜ್ ಸೊಸಾಯಿಟಿಸ್) ರಚನೆಯಾಗಿವೆ. ಮುಂದಿನ ದಿನಗಳಲ್ಲಿ ನಮ್ಮಲ್ಲೂ ಇಂತಹ ಬಾನುಲಿ ಕೇಂದ್ರಗಳು ರೂಪುಗೊಂಡಾಗ ಖಂಡಿತವಾಗಿಯೂ ಗ್ರಾಮೀಣ ಸಂವಹನ ಹಾಗು ಅಭಿವೃದ್ಧಿಗೆ ವಿಶೇಷ ಚಾಲನೆ ಸಿಗಲಿದೆ. ಈ ಅಂಕಿ-ಸಂಖ್ಯೆ ಓದಿದ ಮೇಲೆ ಹುಬ್ಬೇರಿಸುವ ಸರದಿ ನಿಮ್ಮದು!
ಆದರೆ ಇಲ್ಲಿ ನಾವು ಗಮನಿಸಬೇಕು. 'ದಿ ಹಿಂದೂ' ಪತ್ರಿಕೆಯಲ್ಲಿ ಗ್ರಾಮೀಣ ವಿಭಾಗದ ಸಂಪಾದಕ, ಬಹು ಚರ್ಚಿತ 'ಎವರಿಬಡಿ ಲವ್ಸ್ ಏ ಗುಡ್ ಡ್ರಾಟ್' ಕೃತಿಕಾರ, ರೆಮೋನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಅಭ್ಯುದಯ ಪತ್ರಕರ್ತ ಪಾಲಗುಮ್ಮಿ ಸಾಯಿನಾಥ್ ತಮ್ಮ ಲೇಖನಗಳಲ್ಲಿ ಅಂಕಿ-ಸಂಖ್ಯೆಗಳನ್ನು ಸ್ಥೂಲವಾಗಿ ಬಳಸುವ ಪರಿ ನನ್ನನ್ನು ಮೋಡಿ ಮಾಡಿದೆ. ಸರಕಾರಿ ಅಂಕಿ-ಅಂಶಗಳ ಮೇಲೆ ಪತ್ರಕರ್ತ ನಿರ್ಭರವಾಗಬಾರದು. ತನ್ನದೇ ಆದ ಮಾನದಂಡದಿಂದ ಅವುಗಳನ್ನು ಅಭ್ಯಸಿಸಿ, ಯೋಗ್ಯವಾದ ನಿಶ್ಕರ್ಷೆಗೆ ಬಂದು, ವರದಿಯಲ್ಲಿ ಸೂಕ್ತ ಅಂಕಿ-ಸಂಖ್ಯೆ ದಾಖಲಿಸುವಂತೆ ಅವರು ಪ್ರೇರೇಪಿಸುತ್ತಾರೆ. ನಂಬಲರ್ಹವಾದ ಕೆಲ ಏಜೆನ್ಸಿಗಳು ನೀಡುವ ಅಂಕಿ-ಸಂಖ್ಯೆ ಮಾತ್ರ ಬಳಸುವಂತೆ, ಮತ್ತು ಓದುಗರ ಮೇಲೆ ಅದು ದೂರಗಾಮಿ ಪರಿಣಾಮ ಬೀರುವುದನ್ನು ಗಮನದಲ್ಲಿಟ್ಟುಕೊಳ್ಳುವಂತೆ ಅವರು ಎಚ್ಚರಿಸುತ್ತಾರೆ.
ರಾಷ್ಟ್ರವ್ಯಾಪಿಯಾಗಿ ಅನ್ವಯವಾಗುವ ಮುಂಗಡ ಪತ್ರವನ್ನು ಈ ದೇಶದ ಓರ್ವ ಪ್ರಜೆಗೆ ಅನ್ವಯಿಸಿ ಆತನ ದೈನಂದಿನ ಜೀವನದಲ್ಲಿ ಆಗುವ ಬದಲಾವಣೆಗಳನ್ನು ವಿಶ್ಲೇಷಿಸುವ ಅವರ ಪ್ರಯತ್ನ..ಹಾಗೆಯೇ ನಮ್ಮ ಯೋಜನೆಗಳು, ನಾಗಾಲೋಟದ ವೈಜ್ಞಾನಿಕ ಸಂಶೋಧನೆಗಳು ಸೋರುತ್ತ ಕೊನೆಗೆ ಫಲಾನುಭವಿಗಳಿಗೆ ತಲುಪುವ ರೀತಿಯನ್ನು ಅವರು ಅಂಕಿ-ಸಂಖ್ಯೆಗಳ ಆಧಾರದ ಮೇಲೆ ವಿವೇಚಿಸುವ ಅನನ್ಯ ರೀತಿ ಓದುಗನಲ್ಲಿ ಬೆರಗು ಮೂಡಿಸುತ್ತದೆ.
ಅಭ್ಯುದಯ ಪತ್ರಕರ್ತ, ನೆಲ-ಜಲ ತಜ್ಞ ಶ್ರೀ ಪಡ್ರೆ ತರಬೇತಿ ವೇಳೆ ನಮ್ಮನ್ನು ಎಚ್ಚರಿಸಿದ ಮಾತು ಉಲ್ಲೇಖಿಸಿ ಲೇಖನ ಮುಗಿಸುತ್ತೇನೆ. "ನಾವು ಬರಹಗಾರರು ನಮ್ಮ ಲೇಖನ, ನುಡಿಚಿತ್ರ, ಅಂಕಣ ಅಥವಾ ಕೊನೆ ಪಕ್ಷ ಸಂಪಾದಕರಿಗೆ ಪತ್ರದಲ್ಲಿ ದಾಖಲಿಸುವ ಅಂಕಿ-ಸಂಖ್ಯೆ, ಗುಣಾಂಶಗಳು ಅಥವಾ ಮಾಹಿತಿ ನೂರಾರು ಜನ ಕೃಷಿಕರ ಅನ್ನದ ಬಟ್ಟಲು ಕಸಿಯುವಂತಾದರೆ..ಅಂದಿಗೆ ಬರವಣಿಗೆಗೆ ಪೂರ್ಣವಿರಾಮ ಹಾಕಿಬಿಡುವುದು ಒಳಿತು. ಅಕ್ಷರರೂಪಿ ಭಗವಂತನನ್ನು ಪೂಜಿಸುವವರು ಇದನ್ನು ಶೃದ್ಧೆಯಿಂದ ಪಾಲಿಸುವುದು."
ಲೇಖಕರು
ಇತ್ತೀಚಿನ ಬ್ಲಾಗ್ ಬರಹಗಳು
ಇತ್ತೀಚಿನ ಪ್ರತಿಕ್ರಿಯೆ
- Re: ವೃಷಭಾವತಿ ಎಂಬ ನದಿ ...
1 week 6 days ago - Re: ವೃಷಭಾವತಿ ಎಂಬ ನದಿ ...
2 weeks 1 day ago - Re: ವೃಷಭಾವತಿ ಎಂಬ ನದಿ ...
2 weeks 3 days ago - Re: ವೃಷಭಾವತಿ ಎಂಬ ನದಿ ...
2 weeks 3 days ago - Re: ವೃಷಭಾವತಿ ಎಂಬ ನದಿ ...
2 weeks 3 days ago - Re: ವೃಷಭಾವತಿ ಎಂಬ ನದಿ ...
2 weeks 3 days ago - Re: ಕೃಷಿಹೊಂಡಗಳಿಗೆ ...
3 weeks 1 day ago - Re: ಮಳೆ ಬಂದರೆ ...
3 weeks 2 days ago - Re: ಮಳೆ ನೀರು ಸಂಗ್ರಹಕ್ಕೆ ...
3 weeks 3 days ago - Re: ಅಘನಾಶಿನಿ
4 weeks 10 hours ago
| Subscribe to IWP Kannada list |
| Visit this group |










Post new comment