ಮಳೆ ಬಂದರೆ ಬೆಂಗಳೂರಿಗೆ ಭೇದಿ

ಮಳೆ ಬಂದರೆ ಬೆಂಗಳೂರಿಗೆ ಭೇದಿ (ಚಿತ್ರ ಕೃಪೆ: www.bangalore.citizenmatters.in)

‘ಮುಂದಿನ ಒಂದೂವರೆ ವರ್ಷದೊಳಗೆ ಮಳೆ ನೀರಿನ ಕಾಲುವೆಗಳನ್ನು ಒಳಚರಂಡಿ ನೀರಿನಿಂದ ಮುಕ್ತಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ’- ಹಾಗಂತ ಅಬಕಾರಿ, ವಾರ್ತಾ. ಬೆಂಗಳೂರು ಜಲಮಂಡಳಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

ಅಂದರೆ, ಇಷ್ಟು ದಿನಗಳ ಕಾಲ ಮಳೆ ನೀರು ಮತ್ತು ಒಳಚರಂಡಿ ನೀರು ಒಂದರಲ್ಲೇ ಹರಿಯುತ್ತಿದ್ದವು ಎಂಬುದನ್ನು ಸಚಿವರು ಸ್ವತಃ ಒಪ್ಪಿಕೊಂಡ ಹಾಗಾಯ್ತು. ಹಾಗಾದರೆ, ಇದು ಅಕ್ರಮ ಎಂಬುದು ಸರ್ಕಾರದ ಗಮನಕ್ಕೆ ಬಂದಿರಲಿಲ್ಲವೆ? ಇದುವರೆಗಿನ ಸರ್ಕಾರಗಳು, ಬಿಬಿಎಂಪಿ, ಬಿಡಿಎ ಮುಂತಾದ ಸಂಸ್ಥೆಗಳು ಅಕ್ರಮವನ್ನು ನೋಡಿಕೊಂಡು ಸುಮ್ಮನೇ ಕೂತಿದ್ದವೆ?

ಬೆಂಗಳೂರನ್ನು ಕಾಡುತ್ತಿರುವ ಮುಖ್ಯ ಸಮಸ್ಯೆ ಇದು. ಮಳೆ ಬಂದರೆ ನೀರು ಚರಂಡಿಯನ್ನಾಗಲಿ, ಮಳೆ ನೀರಿಗೆಂದೇ ರೂಪಿಸಲಾಗಿದ್ದ ರಾಜಕಾಲುವೆಗಳಲ್ಲಾಗಲಿ ಪ್ರವೇಶಿಸುವುದೇ ಅಪರೂಪ. ಬಿದ್ದ ಮಳೆಯೆಲ್ಲ ರಸ್ತೆಯಲ್ಲಿರುತ್ತದೆ. ಅಕ್ಕಪಕ್ಕದ ಕಟ್ಟಡಗಳಿಗೆ ನುಗ್ಗುತ್ತದೆ. ಒಂದು ಸಣ್ಣ ಮಳೆಗೂ ಬೆಂಗಳೂರು ಭೇದಿ ಹತ್ತಿಕೊಂಡ ಮಗುವಿನಂತಾಗುತ್ತದೆ. ಇದು ಸರ್ಕಾರದ ಗಮನಕ್ಕೆ ಬಂದಿದ್ದಿಲ್ಲವೆ?

ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ತಡವಾಗಿ ಜ್ಞಾನೋದಯವಾದಂತಿದೆ. ಅಥವಾ, ಕನಿಷ್ಠ ಅವರೊಬ್ಬರಾದರೂ ಸತ್ಯ ಹೇಳಿದ್ದಾರೆ. ಇತ್ತೀಚೆಗೆ ನಗರ ಪ್ರದಕ್ಷಿಣೆ ನಡೆಸಿದ ಸಚಿವರು ಬೆಂಗಳೂರಿನ ಮಲ್ಲೇಶ್ವರಂ, ಹೆಬ್ಬಾಳ, ಬ್ಯಾಟರಾಯನಪುರ, ಪುಲಿಕೇಶಿನಗರ, ಸರ್ವಜ್ಞನಗರ, ಸಿ.ವಿ. ರಾಮನ್‌ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಓಡಾಡಿ ಪರಿಸ್ಥಿತಿ, ಕ್ಷಮಿಸಿ ದುಃಸ್ಥಿತಿ ವೀಕ್ಷಿಸಿದ ನಂತರ, ಮೇಲಿನ ಮಾತುಗಳನ್ನಾಡಿದ್ದಾರೆ. ಇನ್ನು ಒಂದೂವರೆ ವರ್ಷಗಳಲ್ಲಿ ಮಳೆ ನೀರಿನ ಕಾಲುವೆಗಳನ್ನು ಪ್ರತ್ಯೇಕಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀರಿದ್ದಾರೆ.

ಈಗಾಗಲೇ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಭರವಸೆಯ ಮಾತುಗಳು ಇವೇ ಚರಂಡಿಗಳ ಮೂಲಕ ಹರಿದಹೋಗಿಯಾಗಿದೆ. ಈಗ ಮತ್ತೊಂದು ಭರವಸೆಯ ಮಳೆ ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳೊಡನೆ ಶೀಘ್ರವೇ ಕೇಂದ್ರ ನಗರಾಭಿವೃದ್ಧಿ ಸಚಿವ ಎಸ್. ಜೈಪಾಲ್ ರೆಡ್ಡಿ ಅವರನ್ನು ಭೇಟಿಮಾಡಿ ಮಳೆ ನೀರಿನ ಕಾಲುವೆಗಳನ್ನು ಒಳಚರಂಡಿ ನೀರಿನಿಂದ ಮುಕ್ತಗೊಳಿಸಲು ನರ್ಮ್ (NURM) ನಡಿ 1000 ಕೋಟಿ ರೂ. ಗಳನ್ನು ಒದಗಿಸಲು ಕೋರಲಾಗುವುದು ಎಂದು ತಿಳಿಸಿದರು.

ಸರಿ. ಉದ್ದೇಶವೇನೋ ಒಳ್ಳೆಯದೇ. ಆದರೆ, ಇವರು ಕೇಳಿದ ಮಾತ್ರಕ್ಕೆ ಕೇಂದ್ರ ಸರ್ಕಾರ ದುಡ್ಡು ಕೊಟ್ಟುಬಿಡುತ್ತದಾ? ಇವೇ ಉದ್ದೇಶಗಳಿಗಾಗಿ ಇದುವರೆಗೆ ರೂಪಿಸಿದ್ದ ಯೋಜನೆಗಳು, ಬಿಡುಗಡೆಯಾಗಿದ್ದ ಹಣ ಏನಾಯ್ತು? ಒಂದು ವೇಳೆ ಕೇಂದ್ರ ಸರ್ಕಾರ ನೆರವಿಗೆ ಧಾವಿಸದಿದ್ದರೆ, ರಾಜ್ಯ ಸರ್ಕಾರದ ಮುಂದಿನ ಹೆಜ್ಜೆ ಏನು? ಈ ವಿಷಯಗಳ ಬಗ್ಗೆ ಸಚಿವ ನಾಯ್ಡು ಏಕೆ ಮಾತನಾಡುತ್ತಿಲ್ಲ.

ಅವರ ಪ್ರಕಾರ, ಕಾರ್ಖಾನೆಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಒಳಚರಂಡಿ ನೀರನ್ನು ಮಳೆನೀರಿನ ಕಾಲುವೆಗಳಲ್ಲಿ ನೇರವಾಗಿ ಹರಿಯಲು ಬಿಡುವುದರಿಂದ ಇವುಗಳು ಕಲುಷಿತಗೊಳ್ಳುತ್ತಿವೆ. ಸಾರ್ವಜನಿಕರು ಕಸ ಮತ್ತು ತ್ಯಾಜ್ಯ ವಸ್ತುಗಳನ್ನು ಮಳೆ ನೀರಿನ ಕಾಲುವೆಗಳಲ್ಲಿ ಹಾಕುವುದರಿಂದ ಹಾಗೂ ಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆನೀರು ಸರಾಗವಾಗಿ ಹರಿಯದೇ ಜನವಸತಿ ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸರಿ ಸಚಿವರೇ, ಜನರೇನೋ ತಪ್ಪು ಮಾಡುತ್ತಲೇ ಬಂದಿದ್ದಾರೆ. ಆದರೆ, ಕ್ರಮ ಕೈಗೊಳ್ಳಬೇಕಾದ ಸರ್ಕಾರ ಏನು ಮಾಡುತ್ತಿತ್ತು? ಮೂರು ವರ್ಷಗಳ ಹಿಂದೆ ಶುರುವಾಗಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಏಕೆ ಇದ್ದಕ್ಕಿದ್ದಂತೆ ಎಚ್ಚರತಪ್ಪಿ ಮಲಗಿತು? ಪ್ರತಿ ವರ್ಷದ ಈ ಅವಘಡಗಳನ್ನು ನೋಡಿಯೂ ಸರ್ಕಾರ ಏಕೆ ಸೂಕ್ತ ಯೋಜನೆ ರೂಪಿಸಿ ಜಾರಿಗೊಳಿಸಲಿಲ್ಲ?

ಬಹುಶಃ ಕಟ್ಟಾ ಸುಬ್ರಮಣ್ಯ ನಾಯ್ಡು ಈ ಸಂಭವನೀಯ ಪ್ರಶ್ನೆಗೂ ಸಮಜಾಯಿಷಿ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಜರುಗಿಸಲಾಗುವುದು ಅಂತಾರೆ ಅವರು. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸಂಚಾರಿ ವಾಹನದ ಜೊತೆಗೆ ಅಗತ್ಯ ಸಿಬ್ಬಂದಿಯನ್ನು ನೀಡಿ, ಕಟ್ಟಿಕೊಂಡ ಚರಂಡಿಗಳನ್ನು ಸ್ವಚ್ಚಗೊಳಿಸ್ತಾರಂತೆ. ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಶೀಘ್ರ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಹಾಗೂ ನಗರಾಭಿವೃದ್ಧಿ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರಂತೆ.

ತುಕ್ಕು ಹಿಡಿದ ಹಾಗೂ ಕಡಿಮೆ ವ್ಯಾಸವಿರುವ ನೀರಿನ ಪೈಪುಗಳನ್ನು ಬದಲಾಯಿಸುವ ಕಾರ್ಯವನ್ನು 300 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ, ಇದುವರೆಗೆ ಶೇ .40 ರಷ್ಟು ಈ ಕಾರ್ಯ ಪೂರ್ಣಗೊಂಡಿದೆ. ಚಿಕುಂಗುನ್ಯಾ ಮತ್ತು ಡೆಂಗೆ ಕಾಯಿಲೆ ಹರಡುವ ಸೊಳ್ಳೆಗಳ ನಾಶಕ್ಕೆ ನೀರು ನಿಲ್ಲುವ ಪ್ರದೇಶದಲ್ಲಿ ಔಷಧಿ ಸಿಂಪರಣೆ ಹಾಗೂ ಫಾಗಿಂಗ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಅಂತಾರೆ ಸಚಿವರು.

ಪ್ರತಿ ವರ್ಷ ಇಂಥ ಭರವಸೆಯ ಮಾತುಗಳನ್ನು ಬೆಂಗಳೂರು ಕೇಳಿದೆ. ಆದರೆ, ಅವು ಎಲ್ಲಿ ಜಾರಿಯಾಗಿರುತ್ತವೆ ಎಂಬುದು ಮಾತ್ರ ಗೊತ್ತಾಗಲ್ಲ. ಅದು ವಿಧಾನಸೌಧವೇ ಇರಲಿ, ಓಕಳಿಪುರಂನ ಕೊಳೆಗೇರಿಯೇ ಇರಲಿ, ಸಮಸ್ಯೆ ಮಾತ್ರ ಒಂದೇ. ಮಳೆ ಬಂದರೆ ನೀರು ಹರಿಯದೇ ನಿಲ್ಲುತ್ತದೆ ಎಂಬುದು ಮಾತ್ರ ಸತ್ಯ. ದೂರವೇನೂ ಬೇಡ, ವಿಧಾನಸೌಧಕ್ಕೆ ಹತ್ತಿರದಲ್ಲೇ ಇರುವ ಕಂಟೋನ್ಮೆಂಟ್‌ನ ರೈಲ್ವೆ ಕೆಳ ರಸ್ತೆಯಲ್ಲಿ ಸಣ್ಣ ಮಳೆಗೂ ನೀರು ನಿಲ್ಲುತ್ತದೆ. ಟ್ರಾಫಿಕ್‌ ಜಾಮ್‌ ಆಗುತ್ತದೆ. ಉದ್ಘಾಟನೆಯಾಗಿ ಒಂದು ವರ್ಷವೂ ಆಗಿರದ ಪ್ರದೇಶದಲ್ಲೇ ಇಂಥ ಸಮಸ್ಯೆ ಇರುವಾಗ, ಇನ್ನು ಹಳೆಯ ಪ್ರದೇಶಗಳಲ್ಲಿನ ಮಳೆ ನೀರು ಹಾಗೂ ಚರಂಡಿ ಸಮಸ್ಯೆ ಯಾವ ಪ್ರಮಾಣದಲ್ಲಿ ಇರಬಹುದು?

ಮಳೆ ನೀರಿನ ಕಾಲುವೆಗಳಲ್ಲಿನ ಹೂಳನ್ನು ತೆಗೆಯಲು ಜೆ.ಸಿ.ಬಿ. ಯಂತ್ರವನ್ನು ಉಪಯೋಗಿಸಿಕೊಂಡಲ್ಲಿ, ಒಳಚರಂಡಿ ಪೈಪುಗಳು ಹಾಳಾಗುವ ಸಾಧ್ಯತೆಯಿರುವುದರಿಂದ ಕಾಲುವೆಗಳ ಪಕ್ಕದಲ್ಲಿ ಐದು ಮೀಟರ್ ಜಾಗವನ್ನು ವಶಪಡಿಸಿಕೊಂಡು ಅಲ್ಲಿ ಒಳಚರಂಡಿ ಪೈಪುಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ ಸಚಿವರು. ಇನ್ನು ಇದು ಯಾವಾಗ ಜಾರಿಯಾಗುತ್ತದೋ ದೇವರೇ ಬಲ್ಲ.

ಪ್ರಗತಿಯ ಹೆಸರಿನಲ್ಲಿ ಕೆರೆಗಳ ಜಾಲವನ್ನು ಅಸ್ತವ್ಯಸ್ತಗೊಳಿಸಿದ ಪರಿಣಾಮ ಬೆಂಗಳೂರನ್ನು ಈಗ ದೊಡ್ಡಮಟ್ಟದಲ್ಲಿ ಕಾಡುತ್ತಿದೆ. ಇದಕ್ಕೆ ಸಮಗ್ರ ಯೋಜನೆಯನ್ನೇ ರೂಪಿಸಬೇಕಾಗುತ್ತದೆ. ಸಣ್ಣಪುಟ್ಟ ಪರಿಹಾರ ಕ್ರಮಗಳಿಂದ ಇಡೀ ಸಮಸ್ಯೆ ನಿವಾರಿಸುವುದು ಖಂಡಿತ ಸಾಧ್ಯವಿಲ್ಲ. ಅಷ್ಟೊತ್ತಿಗೆ ಈಗಿನ ಸಚಿವರು ಬದಲಾಗಿರುತ್ತಾರೆ. ಮತ್ಯಾರೋ ಬರುತ್ತಾರೆ. ಅವರೂ ಇಂಥವೇ ಭರವಸೆಗಳನ್ನು ನೀಡುತ್ತಾರೆ. ಹೀಗಾಗಿ, ಮಳೆ ಬಂದಾಗೆಲ್ಲ ಬೆಂಗಳೂರಿಗೆ ಭೇದಿ ಹತ್ತಿಕೊಳ್ಳುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಯಾವತ್ತು ದಕ್ಕುತ್ತದೋ!

- ಚಾಮರಾಜ ಸವಡಿ

Post new comment

The content of this field is kept private and will not be shown publicly.