ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಸಂಶೋಧನಾತ್ಮಕ ಲೇಖನಗಳು


ವನವಾಸಿಗರ ವನ್ಯಪ್ರಾಣಿ ಬೇಟೆ ಜ್ಞಾನ ‘ಇಕೋ ಟೂರಿಸ್ಟ್’ ಗಳಿಗೆ ವನ್ಯಪ್ರಾಣಿ ಭೇಟಿ ಮಾಡಿಸಲು ಬಳಸಿದರೆ..!


 

03ಪಶ್ಚಿಮಘಟ್ಟದ ಶಿಖರಗಳಲ್ಲಿ, ತಪ್ಪಲಿನಲ್ಲಿ ತಮ್ಮದೇ ಆದ ನೈಸರ್ಗಿಕ ವೈಶಿಷ್ಠ್ಯಗಳಿಂದ ಗಮನ ಸೆಳೆಯುತ್ತಿರುವ ಪ್ರವಾಸಿ ತಾಣಗಳಿಗೆ ಕೊರತೆ ಇಲ್ಲ. ಗುಜರಾತ ರಾಜ್ಯದ ಸಪುತಾರಾ ದಿಂದ ಅಗಸ್ತ್ಯಕುಂಡದ ಸಮೀಪವಿರುವ ಪೋನಮುಡಿ ವರೆಗೆ ಇಂತಹ ಅನೇಕ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಪರಿಸರ ಸ್ನೇಹಿ ಪ್ರವಾಸೋದ್ಯಮದ ಜತೆಜೊತೆಗೆ, ಸಾಹಸ ಕ್ರೀಡೆಗಳಾದ ಚಾರಣ (ಟ್ರೆಕ್ಕಿಂಗ್), ಬಂಡೆ ಏರುವುದು (ರಾಕ್ ಕ್ಲೈಂಬಿಂಗ್), ನದಿಯಲ್ಲಿ ರಾಫ್ಟಿಂಗ್ ಸಾಹಸ (ರಿವರ್ ರಾಫ್ಟಿಂಗ್), ತೂಗು ಹಾರಾಟ (ಹ್ಯಾಂಗ್ ಗ್ಲೈಡಿಂಗ್) ಪ್ರವರ್ಧಮಾನಕ್ಕೆ ಬರುತ್ತಿದ್ದು, ಪ್ರವಾಸಿಗರನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಕರ್ಷಿಸುವಲ್ಲಿ ಸಫಲವಾಗುತ್ತಿವೆ.

ಪರಿಸರ ಪ್ರವಾಸೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅಮೃತ ಜೋಶಿ ಅವರು ಅಭಿಪ್ರಾಯಪಡುವಂತೆ..”ಮೂಲಸೌಲಭ್ಯಗಳ ಕೊರತೆಯೇ ಇಲ್ಲಿನ ಪ್ರವಾಸೋದ್ಯಮದ ಹಿನ್ನಡೆಗೆ ಕಾರಣ ಎಂದು ಉತ್ತರ ಕನ್ನಡ ಜಿಲ್ಲೆಯ ಪರಿಸರಕ್ಕೆ ಹೊಂದಾಣಿಕೆಯಾಗದ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಯತ್ನ ಸದಾ ನಡೆದೇ ಇರುತ್ತದೆ. ಜತೆಗೆ, ಈ ಭಾಗದ ಯುವಜನತೆಗೆ ನಗರದ ಆಕರ್ಷಣೆ; ಹಾಗಾಗಿ, ನೈಸರ್ಗಿಕ ಸೊಬಗಿನ ಹಳ್ಳಿಗಳೆಲ್ಲ ಖಾಲಿಯಾಗಿ ವೃದ್ಧಾಶ್ರಮಗಳಾಗಿ ಪರಿವರ್ತಿತಗೊಳ್ಳುತ್ತಿವೆ. ತೋಟದ ಕೃಷಿಯಲ್ಲಿ ಆದಾಯ ಮೊದಲಿನಂತಿರದೇ ಗಣನೀಯವಾಗಿ ಕುಸಿಯುತ್ತಿರುವುದು ಸಹ ಈ ಬೆಳವಣಿಗೆಗೆ ಪೂರಕವಾಗಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಪರಿಸರ

ಪ್ರವಾಸೋದ್ಯಮ ಕುರಿತಂತೆ ‘ನಮ್ಮದೇ ಮಾದರಿ’ಯೊಂದನ್ನು ಕಂಡುಕೊಂಡಿದ್ದೇ ಆದರೆ ಸಾಕಷ್ಟು ಲಾಭವಾಗಲಿದೆ. ‘ನಮ್ಮ ಮಾದರಿ’ ಎಂದರೆ, ವಿಶೇಷ ಮಾದರಿ ಅಂತೇನೂ ಅಲ್ಲ. ಸ್ಥಳೀಯ ಪರಿಸರಕ್ಕೆ ಯಾವ ಮಾದರಿ ಹೊಂದಾಣಿಕೆಯಾಗುತ್ತದೆಯೋ ಅದೇ ನಮ್ಮ ಮಾದರಿ! ಕೇರಳದಲ್ಲಿ, ಗೋವಾದಲ್ಲಿ ಅಥವಾ ಮಡಿಕೇರಿಯಲ್ಲಿ ಯಶಸ್ವಿಯಾದ ಪ್ರಯೋಗ ನಮ್ಮಲ್ಲಿ ಯಥಾವತ್ ಹೊಂದುತ್ತದೆ ಅಂತೇನೂ ಇಲ್ಲ. ಹಾಗಾಗಿ, ಇತರೆ ಪ್ರಯೋಗಗಳನ್ನು ನಕಲು ಮಾಡದೇ, ಕೇವಲ ಒಳ್ಳೆಯ ಅಂಶಗಳನ್ನು ಕ್ರೊಢೀಕರಿಸಿಕೊಂಡು, ಪ್ರೇರಣೆ ಪಡೆದು ನಮ್ಮ ಮಾದರಿ ಹೊಂದುವುದು ಉತ್ತಮ” ಎನ್ನುತ್ತಾರೆ.

02ಪ್ರವಾಸಿಗರ ಆದ್ಯತೆಗಳು ಈಗ ಮೊದಲಿನಂತೆ ಇಲ್ಲ. ಅಭಿರುಚಿಗಳಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ‘ಪ್ರವಾಸ’ದ ವ್ಯಾಖ್ಯಾನ ಕೂಡ ಬದಲಾಗುತ್ತಿದೆ. ಪ್ರವಾಸಿ ತಾಣವೆಂದರೆ ಅದು ಐತಿಹಾಸಿಕ ಮಹತ್ವವುಳ್ಳ ಕ್ಷೇತ್ರವಾಗಿರಬೇಕು..ಸಮುದ್ರದ  ದಂಡೆ ಅಥವಾ ಜಲಪಾತವಾಗಿರಬೇಕು ಎಂಬ ಹಳೆಯ ಕಲ್ಪನೆ ಈಗ ಬದಲಾಗುತ್ತಿದೆ. ಪ್ರವಾಸಿಗರು ಇಲ್ಲಿಯ ವರೆಗೆ ನೋಡದೇ ಇದ್ದ ಅಥವಾ ತಮ್ಮ ಊರಿನಲ್ಲಿ ಕಾಣಸಿಗದ ಸ್ಥಳ, ವಿಷಯ, ವಸ್ತು ಯಾವುದೇ ಆದರೂ ನೋಡಲು ಬಯಸುತ್ತಾರೆ. ಉದಾಹರಣೆಗೆ, ಕಬ್ಬಿನ ರಸದಿಂದ ಬೆಲ್ಲ, ಕಾಕಂಬಿ ಉತ್ಪತ್ತಿಯಾಗುವ ಮಣ್ಣಿನ ಕಾರ್ಖಾನೆ ಆಲೆಮನೆ ಈಗ ಪ್ರೇಕ್ಷಣೀಯ ಸ್ಥಳ!, ಸಾಣೆಕಟ್ಟಾದ ಸಮುದ್ರದ ನೀರಿನಿಂದ ಉಪ್ಪು ತಯಾರಿಸುವ ಘಟಕಗಳು ಆಕರ್ಷಣೆಯ ತಾಣ!, ಎರಡು ವರ್ಷಕ್ಕೊಮ್ಮೆ ಶಿರಸಿಯಲ್ಲಿ ಆಚರಿಸಲಾಗುವ ಹೋಳಿ ಹಬ್ಬದ ಬೇಡರ ವೇಷ ಕುಣಿತ!, ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ, ನಾಟಿ ವೈದ್ಯರು, ಅಳಲೆ ಕಾಯಿ ಪಂಡಿತರು, ಸೊಲಗಿತ್ತಿಯರು, ಅಶ್ಚರ್ಯವೆನಿಸಬಹುದಾದ ಸಾಂಪ್ರದಾಯಿಕ ಜ್ಞಾನವನ್ನು ತಮ್ಮ ತಲೆಅಲ್ಲಿ ತಲೆತಲಾಂತರದಿಂದ ಹುದುಗಿಸಿಟ್ಟುಕೊಂಡು ಬಂದ ಔಷಧೀಯ ಸಸ್ಯ ತಜ್ಞರು, ಪಕ್ಷಿ ತಜ್ಞರು, ಪ್ರಾಣಿ ತಜ್ಞರು, ಕೃಷಿ ತಜ್ಞರು, ಹಾಲಕ್ಕಿಗಳ ಸುಗ್ಗಿ ಕುಣಿತ, ಸಿದ್ಧಿಗಳ ಪುಗಡಿ ನೃತ್ಯ, ಗಣೇಶಪಾಲ್ ನ ಸುಂದರ ಶಿಲ್ಪ ಲೋಕ, ಅಣಶಿಯ ಮಹಾವೃಕ್ಷ, ತಲೆ ತಲಾಂತರದಿಂದ ಬಂದ ನಮ್ಮ ಅಜಮ್ಮನ ಮನೆಗಳು, ಗದ್ದೆ, ತೋಟ, ಅಲ್ಲಿನ ಪಕ್ಷಿ, ಪ್ರಾಣಿ ಎಲ್ಲವೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ.

ಹೀಗೆ ಪ್ರವಾಸೋದ್ಯಮದ ವಿವಿಧ ಹಂತಗಳಲ್ಲಿ ಸ್ಥಳೀಯರ ಸಹಭಾಗಿತ್ವವನ್ನು ‘ಹೋಂ ಸ್ಟೇ’ ಪರಿಕಲ್ಪನೆಯೊಂದಿಗೆ ಸಾಕಾರಗೊಳಿಸಬಹುದೇ? ಪರಿಸರ ಸ್ನೇಹಿ ಪ್ರವಾಸೋದ್ಯಮದ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯರ ಪಾಲ್ಗೊಳ್ಳುವಿಕೆ ಮಹತ್ವದ್ದು. ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗಿ, ಸ್ಥಳೀಯರೇ ಆ ಲಾಭ ಪಡ್ದುಕೊಳ್ಳುವಂತೆ ಮಾಡುವುದು ಗುರಿಯಾಗಬೇಕು. ತನ್ಮೂಲಕ ಸ್ಥಳೀಯ ಜನತೆಯಲ್ಲಿರುವ ಪಾರಂಪರಿಕ ಜ್ಞಾನವನ್ನು ಸದ್ಬಳಕೆ ಮಾಡಿ, ರಕ್ಷಿಸಿಡಲು ಸಾಧ್ಯವಾಗಬಹುದು. ಉದಾಹರಣೆಗೆ, ಅಮೃತ ಜೋಶಿ ಅವರ ಅನುಭವ ಉಲ್ಲೇಖಿಸುವುದಾದರೆ, ಉತ್ತರ ಕನ್ನಡ ಜಿಲ್ಲೆಯ ವನವಾಸಿ ಬಂಧುಗಳಲ್ಲಿ ಪ್ರಾಣಿಗಳನ್ನು ಬೇಟೆಯಾಡಲು ಅನುಕೂಲವಾಗುವಂತೆ ಕಾಡು ಪ್ರಾಣಿಗಳ ಚಲನವಲನಗಳ ಬಗ್ಗೆ ಪೂರಕ ಮಾಹಿತಿ ಆಶ್ಚರ್ಯವೆನ್ನಿಸುವಷ್ಟು ಗಟ್ಟಿಯಾಗಿದೆ. ಅವುಗಳ ‘ಕಾರಿಡಾರ್’ ಬಗ್ಗೆ ನಿಖರ ಮಾಹಿತಿಯೂ ಅವರ ಅನುಭವ ಜ್ಞಾನ ಭಂಡಾರದಲ್ಲಿ ಗಟ್ಟಿಯಾಗಿದೆ. ಈ ಜ್ಞಾನವನ್ನು ಪ್ರಾಣಿಗಳ ಬೇಟೆಗೆ ಅವರು ಬಳಸದಂತೆ, ಪ್ರವಾಸಿಗರಿಗೆ ಕಾಡಿನ ಪ್ರಾಣಿಗಳನ್ನು ಭೇಟಿ ಮಾಡಿಸುವ ಸಾಧನವನ್ನಾಗಿ ಬಳಸಿಕೊಳ್ಳಲು ನಾವು ಮಾರ್ಗದರ್ಶನ ಮಾಡಿದರೆ, ಪರಂಪರಾಗತ ಜ್ಞಾನ ಭಂಡಾರವನ್ನು ಪರಿಸರ ಸ್ನೇಹಿ ಮಾದರಿಯಲ್ಲಿ ಬಳಸಿಕೊಂಡಂತಾಗುತ್ತದೆ; ಮಾತ್ರವಲ್ಲದೇ, ವನವಾಸಿಗಳಿಗೂ ಉದ್ಯೋಗ ನೀಡಿ ಪ್ರವಾಸೋದ್ಯಮದ ಲಾಭದಲ್ಲಿ ಪಾಲುದಾರರನ್ನಾಗಿಸಲು ಸಾಧ್ಯವಿದೆ. ಸ್ಥಳೀಯ ಕರಕುಶಲಿಗಳು ನಿರ್ಮಿಸುವ ಉತ್ಪನ್ನಗಳಿಗೆ ನೇರವಾದ ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಪ್ರವಾಸೋದ್ಯಮದ ಮೂಲಕ ಕಲ್ಪಿಸಲು ಸಾಧ್ಯವಿದೆ.

ಹೀಗೆ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಪ್ರತಿಯೊಂದು ಗ್ರಾಮ ವಿಶ್ವವಿದ್ಯಾಲಯದ ಸರಿಸುಮಾರು ಜ್ಞಾನ ಭಂಡಾರವನ್ನು ಹುದುಗಿಸಿಟ್ಟುಕೊಂಡಿರುವ ಜ್ಞಾನದೇಗುಲ ಎಂದರೆ ಅತಿಶಯೋಕ್ತಿಏನಲ್ಲ. ಹಾಗೆಯೇ, ಉತ್ತರ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ, ವಿಶೇಷವಾದ ಪರಿಸರ ಪ್ರವಾಸೋದ್ಯಮ ನೀತಿಯನ್ನು ನಿರೂಪಿಸಿ, ಸ್ಥಳೀಯರ ಪಾಲ್ಗೊಳ್ಳುವಿಕೆಯ ಮೂಲಕ ಅನುಷ್ಠಾನಗೊಳಿಸಿದಲ್ಲಿ ಜಿಲ್ಲೆಯ ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ವಿಕಾಸಕ್ಕೆ ಪುಟ್ಟದೊಂದು ಹೆಜ್ಜೆ ನಾವು ಇಟ್ಟಂತಾಗುವುದಿಲ್ಲವೇ?

04ಪರಿಸರಸ್ನೇಹಿ ಪ್ರವಾಸೋದ್ಯಮ ವ್ಯಾಖ್ಯೆ ಹೇಳುವಂತೆ, ಪರಿಸರವನ್ನು ತನ್ನ ಉದರದಲ್ಲಿ ಕಾಪಿಟ್ಟುಕೊಂಡು, ಅಲ್ಲಿನ ಜನರ ಸುಸ್ಥಿರ ಬದುಕಿಗೆ ತೊಟ್ಟಿಲಾಗಿರುವ ನೈಸರ್ಗಿಕ ತಾಣಗಳಿಗೆ ಜವಾಬ್ದಾರಿಯುತ ಪ್ರವಾಸ! ಅರ್ಥಾತ್, ಪರಿಸರ ಪ್ರವಾಸೋದ್ಯಮ ಅಲ್ಲಿನ ಪರಿಸರ ಹಾಗೂ ಸ್ಥಳೀಯ ಸಂಸ್ಕೃತಿಗಳ ಮೇಲೆ ನಮ್ಮ ಪ್ರಭಾವವನ್ನು ಅತ್ಯಂತ ಕಡಿಮೆ ರೀತಿಯಲ್ಲಿ ಬೀರಿ, ನಿಜಾರ್ಥದಲ್ಲಿ ಪರಿಸರ-ಜೀವಿವೈವಿಧ್ಯ ಎಂದರೇನು? ಎಂಬುದನ್ನು ನಮಗೆ ಕಲಿಸಿಕೊಡಬಲ್ಲ ನಿಸರ್ಗ ಪಾಠ ಶಾಲೆ. ಇನ್ನೊಂದು ಅರ್ಥದಲ್ಲಿ, ಪರಿಸರ ಸ್ನೇಹಿ ಪ್ರವಾಸಿಗ ಅತ್ಯಂತ ಕಡಿಮೆ ಬೇಡಿಕೆಉಳ್ಳವ; ಅತ್ಯಂತ ಸಹಕಾರಿ ಮನೋಭಾವ ಹೊಂದಿದವ, ಜತೆಗೆ ಸ್ಥಳೀಯವಾಗಿ ಲಭ್ಯವಿರುವ ಕನಿಷ್ಠ ಸೌಲಭ್ಯಗಳನ್ನು ಹಿತಮಿತವಾಗಿ ಬಳಸಿಕೊಂಡು ನಿಸರ್ಗ ಕನ್ಯೆಯ ಸೌಂದರ್ಯವನ್ನು ನಿಜಾರ್ಥದಲ್ಲಿ ಆಸ್ವಾದಿಸಲು ಬಂದವ..ಆದಷ್ಟು ತನ್ನ ಹೆಜ್ಜೆ ಚಿಕ್ಕದಾದಷ್ಟು ಒಳಿತು ಎಂಬ ಮನೋಭಾವ ಹೊಂದಿದವ!

ಕ್ರಮೇಣ ಪಶ್ಚಿಮಘಟ್ಟದ ಇಂತಹ ಒಬ್ಬ ಪ್ರವಾಸಿಗ ಅಲ್ಲಿನ ಪ್ರತಿಯೊಂದು ಸ್ಥಳ, ವಸ್ತು, ಪ್ರಾಣಿ, ಪಕ್ಷಿ, ಜನ ಹಾಗೂ ಜೀವನ, ಸಂಸ್ಕೃತಿಯೊಂದಿಗೆ ಭಾವನಾತ್ಮಕ ಸಂಬಂಧ ಉದ್ದೀಪಿಸಿಕೊಳ್ಳುತ್ತಾನೆ. ಈ ಎಲ್ಲ ವೈವಿಧ್ಯಮಯ ಜೀವ-ಕೊಂಡಿಗಳ ಸುಸ್ಥಿರತೆಗೆ ತನ್ನ ಕೈಲಾದಷ್ಟು ಸಹಾಯ-ಸಹಕಾರ ನೀಡಲು ಪಣತೊಡುತ್ತಾನೆ. ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಎಲ್ಲ ಪ್ರಯತ್ನಗಳಿಗೆ ನೈತಿಕ ಬೆಂಬಲ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಾನೆ. ಈ ಮಧ್ಯೆ ಸರಕಾರ ಹಾಗೂ ಖಾಸಗಿ ಯವರು ಮುಂದಾಗಿ ಸ್ಥಾಪಿಸಿದ ‘ಇಕೋ ಲಾಡ್ಜಿಸ್’, ‘ಜಂಗಲ್ ಲಾಡ್ಜಿಸ್’ ಪಶ್ಚಿಮ ಘಟ್ಟಗಳಲ್ಲಿ ತಲೆ ಎತ್ತಿನಿಂತು, ಪ್ರವಾಸಿಗರ ಆಶಯಗಳಿಗೆ ಅನುಗುಣವಾಗಿ ಬೇಕು-ಬೇಡಗಳನ್ನು ಪೂರೈಸಲು ಆರಂಭಿಸಿವೆ!

ಕೇರಳ ರಾಜ್ಯದ ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಮಂತ್ರಾಲಯ ಜಂಟಿಯಾಗಿ ೧೨ ವನ್ಯಜೀವಿ ಅಭಯಾರಣ್ಯಗಳನ್ನು ‘ಪರಿಸರ ಪ್ರವಾಸೋದ್ಯಮ’ಅಡಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುತ್ತಿದ್ದು, ಪ್ರವಾಸಿಗರಿಗೆ ‘ಇಕೋ ಲಾಜಿಸ್’ದಯಪಾಲಿಸಲು ಮುಂದಾಗಿವೆ. ಹಾಗೆಯೇ, ರಾಜ್ಯ ಪರಿಸರ ಅಭಿವೃದ್ಧಿ ನಿಗಮಗಳು ಈಗಾಗಲೇ ಗರಿಷ್ಠ ಪ್ರಮಾಣದಲ್ಲಿ ಪ್ರವಾಸಿಗರ ಭರಾಟೆ ಇರುವ ಸ್ಥಳಗಳಲ್ಲಿ ಮೌಲ್ಯವರ್ಧಿತ ಸೇವೆಗಳನ್ನು ನೀಡುತ್ತಿವೆ. ರಾಜ್ಯ ಅರಣ್ಯ ಇಲಾಖೆಗಳೂ ಸಹ ದಟ್ಟ ಅರಣ್ಯಗಳ ಮಧ್ಯೆ ‘ಇಕೋ ಲಾಡ್ಜಿಸ್’, ‘ಫಾರೆಸ್ಟ್ ಲಾಡ್ಜಿಸ್’, ‘ರೆಸ್ಟ್ ಹೌಸ್’ಕಟ್ಟಿ ಪರಿಸರದ ಕುರಿತು ತಿಳಿ ಹೇಳುವ, ಇಕೋ ಪಾರ್ಕ್ ವ್ಯವಸ್ಥೆ ರೂಪಿಸಿವೆ. ಬಂಡೀಪುರ ಹಾಗೂ ಮಧುಮಲೈ ವನ್ಯಜೀವಿ ಅಭಯಾರಣ್ಯಗಳಲ್ಲಿ ಈ ವ್ಯವಸ್ಥೆ ನೀವು ಕಾಣಬಹುದು.

ಸಾಕಷ್ಟು ಸಂಖ್ಯೆಯಲ್ಲಿ ‘ಇಕೋ ಲಾಡ್ಜಿಸ್’ ಹಾಗೂ ‘ಇಕೋ ರೆಸಾರ್ಟ್’ ಗಳು ವನ್ಯ ಜೀವಿ ಅಭಯಾರಣ್ಯಗಳ ಸಮೀಪವರ್ತಿ ಸ್ಥಳ, ಅರ್ಥಾತ್ ಅಭಯಾರಣ್ಯ ವ್ಯಾಪ್ತಿಗೆ ಒಳಪಡದ ಸ್ಥಳಗಳಲ್ಲಿ ಹುಟ್ಟಿಕೊಂಡಿವೆ. ಬಂಡೀಪುರ ಹಾಗೂ ಮಧುಮಲೈ ಬಳಿಯ ಮಾಸಿನಗುಡಿಯಲ್ಲಿ ವ್ಯವಸ್ಥೆ ಹೀಗಿದೆ. ರಾಜ್ಯದ ಅರಣ್ಯ ಇಲಾಖೆ ಸಹ ಅನೇಕ ‘ನೇಚರ್ ಕ್ಯಾಂಪ್’ಗಳನ್ನು ದಟ್ಟ ಕಾನನಗಳಲ್ಲಿ ಹುಟ್ಟುಹಾಕಿದೆ. ಉದಾಹರಣೆಗೆ: ಕೊಡಗಿನ ನಿಸರ್ಗಧಾಮ, ಉತ್ತರ ಕನ್ನಡ ಜಿಲ್ಲೆಯ ಅಣಶಿ ರಾಷ್ಟ್ರೀಯ ಉದ್ಯಾನ, ಹಾಗೂ ಕುಳಗಿಯಲ್ಲಿ ‘ಕಾಟೇಜ್’ಮತ್ತು ‘ಟೆಂಟ್’ಮಾದರಿಯಲ್ಲಿ ವಸತಿ ಸೌಲಭ್ಯ ಪರಿಸರ ಪ್ರವಾಸಿಗರಿಗೆ ಕಲ್ಪಿಸಿವೆ.

ಹಾಗೆಯೇ, ಗಣನೀಯ ಸಂಖ್ಯೆಯಲ್ಲಿ ಖಾಸಗಿ ‘ಇಕೋ ರೆಸಾರ್ಟ್’ಗಳು ಸಹ ಅಲ್ಲಲ್ಲಿ ತಲೆ ಎತ್ತಿವೆ. ಕೊಡಗು ಹಾಗೂ ಮನ್ನಾರ್ ಗಳಲ್ಲಿ ಕಾಫಿ ಎಸ್ಟೇಟ್ ಗಳ ಮಧ್ಯೆ, ಕರ್ನಾಟಕದ ದಾಂಡೇಲಿ ಹಾಗೂ ಗೋವಾ ರಾಜ್ಯಗಳ ಗಡಿಗುಂಟ ನೆರ್ಸಾ ಬಳಿ, ಕೇರಳದಲ್ಲಿ ಲಕ್ಕಿಡಿ ಹಾಗೂ ನೆಲ್ಲಿಯಾಂಪೆಥಿ, ನೀಲಗಿರಿ ತಟದಲ್ಲಿ ಬೆಲ್ಲಿಕಾಲ್, ಮಹಾರಾಷ್ಟ್ರದ ದಾಜಿಪುರ ಕಾಡುಕೋಣ ಅಭಯಾರಣ್ಯಗಳಲ್ಲಿ ಖಾಸಗಿ ‘ಎಕೋ ರೆಸಾರ್ಟ್’ಗಳು ಪಾಶ್ಚಾತ್ಯ ರಾಷ್ಟ್ರಗಳ ಪ್ರವಾಸಿಗರ ಬೇಕು-ಬೇಡಗಳನ್ನು ತಣಿಸಲು ತೊಡಗಿವೆ. ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹಬ್ಬಿರುವ ಕರ್ನಾಟಕದ ಬಹುತೇಕ ಕಣಿವೆ ಮನೆಗಳಲ್ಲಿ ‘ಹೋಂ ಸ್ಟೇ’ಪದ್ಧತಿ ಬಲವಾಗಿ ಬೇರೂರುತ್ತಿದೆ. ನಮ್ಮ ರಾಜ್ಯದ ಕೊಡಗು, ದಾಂಡೇಲಿ, ಶಿರಸಿಗಳಲ್ಲಿ ಸ್ಥಳೀಯ ಪರಿಸರ ಪ್ರೇಮಿಗಳ ದೆಸೆಯಿಂದ ವ್ಯವಸ್ಥಿತವಾಗಿ ‘ಹೋಂ ಸ್ಟೇ ಇಕೋ ಟೂರಿಸಮ್’ಪ್ರವರ್ಧಮಾನಕ್ಕೆ ಬರುತ್ತಿದೆ. ಹೀಗೆ ವನವಾಸಿಗಳ ವನ್ಯಪ್ರಾಣಿ ಬೇಟೆ ಜ್ಞಾನವನ್ನು ‘ಇಕೋ ಟೂರಿಸ್ಟ್’ ಗಳಿಗೆ ವನ್ಯಪ್ರಾಣಿ ಭೇಟಿ ಮಾಡಿಸಲು ಬಳಸಿದರೆ ಹೇಗೆ? ಅದೇ ‘ಇಕೋ ಟೂರಿಸಮ್’!

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*