ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮಳೆ ಕೊಯ್ಲಿನ ಮೌನ ಕ್ರಾಂತಿ : ಪ್ಲೋರೈಡ್ ಸಮಸ್ಯೆಗೆ ಮುಕ್ತಿ

ದೇವರ ಕೋಣೆಗಳಷ್ಟೇ ಪಾವಿತ್ರ್ಯ ಸ್ಥಾನ ಪಡೆದುಕೊಂಡ ಮಳೆಕೊಯ್ಲು ಘಟಕಗಳು

ಗದಗ: ಅಲ್ಲಿನ ಜನರ ಹಲ್ಲುಗಳ ಮೇಲೆ ಕಪ್ಪುಕಲೆಗಳು, ಕಳೆ ಹೀನವಾದ ಮುಖ, ಸ್ವಲ್ಪ ಕೆಲಸಕ್ಕೆ ಆಯಾಸವಾಗುವ ದೇಹ – ಇವೆಲ್ಲ ಅಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದವು. ಈ ಎಲ್ಲ ಸಮಸ್ಯೆಗಳಿಂದಾಗಿ, ಆ ಗ್ರಾಮಗಳಿಗೆ ಹೆಣ್ಣು ಪಡೆದುಕೊಳ್ಳಲು ಹಾಗೂ ಕೊಡಲು ಬೇರೆ ಗ್ರಾಮದವರು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಆ ಎಲ್ಲ ಸಮಸ್ಯೆಗಳಿಗೆ ಭೈಫ್ ಸಂಸ್ಥೆ ಅಂತ್ಯ ಹಾಡಿದೆ.

ಹೌದು! ಭೈಫ್ ಸಂಸ್ಥೆಯು, ಸಚೇತನ ಕುಡಿಯುವ ನೀರಿನ ಯೋಜನೆಯನ್ನು ಹಾಕಿಕೊಳ್ಳುವ ಮೂಲಕ ಜಿಲ್ಲಾ ಪಂಚಾಯತಿಯ ಸಹಭಾಗಿತ್ವದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ೧೦ ಗ್ರಾಮಗಳಲ್ಲಿ ಮಳೆ ನೀರು ಕೊಯ್ಲಿನ ಘಟಕಗಳನ್ನು ಸ್ಥಾಪಿಸಿ, ಜನಸಾಮಾನ್ಯರಿಗೆ ಇರುವ ನೀರಿನ ಬವಣೆಯನ್ನು ನೀಗಿಸಲು ಮೌನ ಕ್ರಾಂತಿಯನ್ನು ಮಾಡಿದೆ.

 ಅವು ಪ್ಲೋರೈಡ್ ಯುಕ್ತ ಗ್ರಾಮಗಳಾಗಿದ್ದವು

 malekoylu-2ಒಂದು ಕಾಲದಲ್ಲಿ ಪ್ಲೋರೈಡ್ ಎಂದರೆ ಸಾಕು, ಜನರು ಮುಂಡರಗಿ ತಾಲೂಕಿನೆಡೆಗೆ ಮುಖ ಮಾಡುತ್ತಿದ್ದರು. ಅಷ್ಟೊಂದು ಪ್ರಮಾಣದಲ್ಲಿ ಈ ತಾಲೂಕಿನಲ್ಲಿ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿತ್ತು. ಇದೆಲ್ಲವನ್ನೂ ಗಮನಿಸಿ, ೨೦೦೬ರಿಂದ ಭೈಫ್ ಸಂಸ್ಥೆಯ ಮುಂಡರಗಿ ತಾಲೂಕಿನ ಮುಷ್ಠಿಕೊಪ್ಪ, ವಿರೂಪಾಪೂರ, ಕಲಕೇರಿ, ಬೂದಿಹಾಳ, ತಿಪ್ಪಾಪೂರ, ಬೆನ್ನಳ್ಳಿ, ಬಸಾಪೂರ, ಮಕ್ತುಂಪೂರ, ಹಾರೋಗೇರಿ, ವಿರೂಪಾಪೂರ ತಾಂಡಗಳಲ್ಲಿ ಮಳೆಕೊಯ್ಲಿನ ಘಟಕಗಳನ್ನು ನಿರ್ಮಿಸಿ ಕೊಡುವ ಮೂಲಕ ಜನರ ನೆಮ್ಮದಿಗೆ ಕಾರಣವಾಗಿದೆ.

 ೨೦೦೬ರಿಂದಾಚೆಗೆ, ಈ ಗ್ರಾಮಗಳಲ್ಲಿ ಸುಮಾರು ೩ಪಿಪಿಎಮ್ ನಿಂದ ೭ಪಿಪಿಎಮ್ ವರೆಗೆ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿತ್ತು. ಇದರಿಂದಾಗಿ, ಜನರಿಗೆ ತಿವ್ರ ತೊಂದರೆಯಾಗಿತ್ತು. ಕುಡಿಯುವ ಶುದ್ಧ ನೀರಿನಲ್ಲಿ ೧ಪಿಪಿಎಮ್ ಪ್ಲೋರೈಡ್ ಅಂಶ ಮಾತ್ರವಿರುಬೇಕು. ಆದರೆ, ಇಲ್ಲಿ ಅದಕ್ಕಿಂತ ಮೂರರಿಂದ ಏಳು ಪಟ್ಟಿನಷ್ಟು ಹೆಚ್ಚು ಪ್ಲೋರೈಡ್ ಅಂಶವಿತ್ತು. ಇದನ್ನು ಗಮನಿಸಿದ ತುಮಕೂರು ಮೂಲದ ಭೈಫ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯು, ಮಳೆನೀರು ಕೊಯ್ಲಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವಲ್ಲಿ ಯಶಸ್ವಿಯಾಯಿತು.

 ಶೇ.೫೦ರಷ್ಟು ಜನರು ಅವಲಂಬಿತರು

ಪ್ರಾರಂಭದಲ್ಲಿ ಸಂಸ್ಥೆ ಸ್ಥಾಪಿಸಿದ ಘಟಕಗಳಿಗೆ ಜನರಿಂದ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಬಾರದಿದ್ದರೂ ಕೂಡ, ಸಂಸ್ಥೆಯ ಸಿಬ್ಬಂಧಿಯ ಕಳಕಳಿಯಿಂದ ಜನ ಜಾಗೃತರಾಗಿ, ತಮ್ಮ ಮನೆಗಳಲ್ಲಿ ಶುದ್ಧ ಕುಡಿಯುವ ನೀರನ್ನು ಪಡೆದುಕೊಳ್ಳುವಲ್ಲಿ ಮಳೆಕೊಯ್ಲು ಘಟಕಗಳನ್ನು ನಿರ್ಮಿಸಿಕೊಳ್ಳಲು ಮುಂದಾದರು. ಅದರ ಪರಿಣಾಮವಾಗಿ, ಇಂದು ಶೇ.೫೦ರಷ್ಟು ಜನರು ಮಳೆಕೊಯ್ಲಿನಲ್ಲಿ ಸಂಗ್ರಹವಾದ ಶುದ್ಧ ನೀರನ್ನೇ ಕುಡಿಯಲು ಬಳಸುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ತಮ್ಮ ಮನೆ ಛಾವಣಿ, ಪಡಸಾಲೆ, ಅಡುಗೆಕೋಣೆ ಸೇರಿದಂತೆ, ತಮಗೆ ಅನುಕೂಲವಾಗುವ ಪ್ರದೇಶದಲ್ಲಿ ಮಳೆಕೊಯ್ಲಿನ ಟ್ಯಾಂಕರ್ ನಿರ್ಮಿಸಿಕೊಂಡಿದ್ದಾರೆ. ದೇವರ ಕೋಣೆಯನ್ನು ಎಷ್ಟು ಶುಚಿಯಾಗಿಟ್ಟಿರುತ್ತಾರೋ, ಅದೇ ರೀತಿ ಮಳೆಕೊಯ್ಲಿನ ಘಟಕಗಳನ್ನು ಶುಚಿಯಾಗಿಟ್ಟು ವರ್ಷಪೂರ್ತಿ ಮಳೆಯಿಂದ ಸಂಗ್ರಹವಾದ ನೀರನ್ನೇ ಇಲ್ಲಿನ ಜನರು ಕುಡಿಯಲು ಬಳಸುತ್ತಿದ್ದಾರೆ.

 ಹತ್ತು ಗ್ರಾಮದಲ್ಲಿ ನೂರಾರು ಘಟಕಗಳು

malekoylu-6ಮುಂಡರಗಿ ತಾಲೂಕಿನಲ್ಲಿ ಭೈಫ್ ಸಂಸ್ಥೆ ಜನಸಾಮಾನ್ಯರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸುವ ಮೂಲಕ ಮಾಡಿದ ಪ್ರಯತ್ನ ಮಾತ್ರ ರಾಜ್ಯಕ್ಕೆ ಮಾದರಿಯಾದದ್ದು. ಹಾಗಾಗಿ, ಸಂಸ್ಥೆಯ ಈ ಕಾರ್ಯ ಮಾತ್ರ ಮೌನಕ್ರಾಂತಿಯಾಗಿದೆ. ಮುಷ್ಠಿಕೊಪ್ಪ ಗ್ರಾಮದಲ್ಲಿ ೪ ರಿಂದ ೬ ಪಿಪಿಎಮ್‌ನಷ್ಟು ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿದ್ದು, ಆ ಗ್ರಾಮದಲ್ಲಿ ಸುಮಾರು ೮೭ ಮಳೆಕೊಯ್ಲು ಘಟಕ ನಿರ್ಮಿಸಲಾಗಿದೆ. ವೀರೂಪಾಪೂರ ಗ್ರಾಮದಲ್ಲಿ ೭ಪಿಪಿಎಮ್ ವರೆಗೆ ಪ್ಲೋರೈಡ್ ಅಂಶವಿದೆ. ಆದರೆ ಇಲ್ಲಿ ೭೦ ಜನರು ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಇನ್ನು ೨ ರಿಂದ ೪ಪಿಪಿಎಮ್ ವರೆಗೆ ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿರುವ ಗ್ರಾಮಗಳಾದ ಕಲಕೇರಿಯಲ್ಲಿ-೨೦೦, ಬೂದಿಹಾಳದಲ್ಲಿ-೩೫, ತಿಪ್ಪಪೂರ-೮, ಬೆನ್ನಳ್ಳಿ-೭೫, ಬಸಾಪೂರ-೧೨, ಮಕ್ತುಂಪೂರ-೧೮, ಹಾರೋಗೇರಿ-೧೫೦, ವಿರೂಪಾಪೂರ ತಾಂಡಾ-೧೫ ಘಟಕಗಳನ್ನು ಸ್ಥಾಪಿಸಿದ್ದು, ಸಧ್ಯ ಶೇ.೫೦ರಷ್ಟು ಜನರು ಈಗಾಗಲೇ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ, ಶುದ್ಧ ಕುಡಿಯುವ ನೀರನ್ನು ಸೇವಿಸುವುದರೊಂದಿಗೆ, ಉತ್ತಮ ಆರೋಗ್ಯ ಕಾಯ್ದಯಕೊಳ್ಳುತ್ತಿದ್ದಾರೆ.

 ಜಿಲ್ಲಾ ಪಂಚಾಯತಿಯ ಸಹಭಾಗಿತ್ವ

 ಪ್ರತಿ ಕುಟುಂಬಕ್ಕೆ ೫,೦೦೦ ಲೀಟರ್ ನೀರು ಸಂಗ್ರಹ ಸಾಮಾರ್ಥ್ಯದ ಟ್ಯಾಂಕ್ ನಿರ್ಮಿಸಲಾಗಿದೆ. ಘಟಕ ನಿರ್ಮಾಣಕ್ಕೆ ೧೮,೦೦೦ಕ್ಕೂ ಅಧಿಕ ಹಣದ ಅವಶ್ಯಕತೆmalekoylu-8 ಇದೆ. ಜಿಲ್ಲಾ ಪಂಚಾಯತಿ ಇದಕ್ಕೆ ಹಣಕಾಸಿನ ನೆರವು ನೀಡುವ ಮೂಲಕ ಮಳೆಕೊಯ್ಲು ಘಟಕ ಸ್ಥಾಪನೆಗೆ ನೆರವಾಗಿದೆ. ಇನ್ನು ಎಪಿಎಲ್ ಕಾರ್ಡ ಹೊಂದಿದ ಫಲಾನುಭವಿಗಳು ಶೇ.೨೦ರಷ್ಟು ಹಾಗೂ ಬಿಪಿಎಲ್ ಕಾರ್ಡ ಹೊಂದಿದ ಫಲಾನುಭವಿಗಳು ಶೇ.೧೦ರಷ್ಟು ವಂತಿಗೆಯನ್ನು ತುಂಬಬೇಕು. ಆದರೆ ವಿಧವೆಯರು, ವಿಚ್ಛೇದಿತ ಮಹಿಳೆಯರು, ಪ್ಲೋರೈಡ್ ಸಮಸ್ಯೆಗೆ ಒಳಗಾದ ಮಹಿಳೆಯರು, ಅಂಗವಿಕಲ ಮಹಿಳೆಯರಿಗೆ ಉಚಿತವಾಗಿ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸಿ ಕೊಡಲಾಗಿದೆ.

ಒಟ್ಟಿನಲ್ಲಿ ಜನಸಾಮಾನ್ಯರ ನೀರಿನ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಜಿಲ್ಲಾಪಂಚಾಯತಿಯ ಅನುದಾನದೊಂದಿಗೆ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸುವ ಮೂಲಕ ರಾಜ್ಯಕ್ಕೊಂದು ಮಾದರಿ ಕಾರ್ಯ ಮಾಡಿದ ಬೈಫ್ ಸಂಸ್ಥೆ ಕಾರ್ಯ ಶ್ಲಾಘನೀಯವಾಗಿದೆ.

ಜನರ ಮಾತು……..

ಪುಣ್ಯ ಬರ್ಲಿ
malekoylu-5ನಾವು ಪ್ಲೋರೈಡ್ ಇರೋ ನೀರ್ ಕುಡಿದು ಬದುಕಿ ಸತ್ತಂಗಾಗಿದ್ವಿ, ಆದ್ರ ಭೈಫ್ ಸಂಸ್ಥೆಯೋರು ನಮಗ್ ಮಳೆಕೊಯ್ಲ ಘಟಕ ಕಟ್ಟಿಸಿಕೊಟ್ಟು ಪುಣ್ಯ ಕಟ್ಕೋಂಡಾರ್ರಿ. ಈಗ ನಾವು ಮಳೆ ನೀರು ಕುಡ್ಯಾಕ್‌ಹತ್ತಾಗಿಂದ ನಮಗ್ ಯಾವುದು ಸಮಸ್ಯೆ ಇಲ್ಲ. ದೇವ್ರ ಕೊಣಿಯಷ್ಟ ಪವಿತ್ರವಾಗಿ ಮಳೆ ಕೊಯ್ಲು ಸ್ವಚ್ಛವಾಗಿಟ್ಟುಕೊಂಡಿವ್ರಿ.

- ಬಸನಗೌಡ ಪಾಟೀಲ – ಘಟಕ ನಿರ್ಮಿಸಿಕೊಂಡ ಮುಷ್ಠಿಕೊಪ್ಪ ಗ್ರಾಮಸ್ಥ

ಜನ ಜಾಗೃತರಾಗಲಿ
ಜನರು ಶುದ್ಧ ನೀರನ್ನು ಕುಡಿಯುವ ನಿಟ್ಟಿನಲ್ಲಿ ಮಳೆಕೊಯ್ಲು ಘಟಕಗಳನ್ನು ಸ್ಥಾಪಿಸಿಕೊಳ್ಳುವ ಅವಶ್ಯಕತೆ ಹಾಗೂ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಅನುದಾನದಲ್ಲಿ ಈಗಾಗಲೇ ಹಲವು ಕುಟುಂಬಗಳಿಗೆ ಮಳೆಕೊಯ್ಲು ಘಟಕಗಳನ್ನು ನಿರ್ಮಿಸಿಕೊಡಲಾಗಿದೆ. ಈ ಬಗ್ಗೆ ಇನ್ನು ಹೆಚ್ಚಿನ ಜಾಗೃತಿಹೊಂದಿ ಜನಸಾಮಾನ್ಯರು ಸ್ವ-ಇಚ್ಛೆಯಿಂದ ಮಳೆಕೊಯ್ಲು ಘಟಕ ನಿರ್ಮಿಸಿಕೊಳ್ಳಲು ಮುಂದಾಗಬೇಕು.

- ಜಿ.ವೀರಣ್ಣ – ಸಂಯೋಜನಾಧಿಕಾರಿ ಬೈಫ್ ಸಂಸ್ಥೆ

ಚಿತ್ರ-ಲೇಖನ: ಮಕಾಂದಾರ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*