ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ದೇವತೆಗಳಾಗಿ ನದಿಗಳು

ಪುರಾತನ ಕಾಲದಿಂದಲೂ, ನದಿಗಳು ಹಾಗೂ ನದಿಗಳ ನೀರನ್ನು ಅತ್ಯಂತ ಪೂಜ್ಯಭಾವನೆಯಿಂದ ಪರಿಗಣಿಸಲಾಗಿದೆ.  ಸಾಂಪ್ರದಾಯಿಕವಾಗಿ, ಗಂಗ, ಯಮುನಾ, ನರ್ಮದಾ, ಇತ್ಯಾದಿ ನದಿಗಳನ್ನು ದೇವತೆಗಳಾಗಿ ಪರಿಗಣಿಸಿ, ಆದರಿಸಲಾಗುತ್ತದೆ.  ಸಂಪ್ರದಾಯಸ್ಥ ಭಾರತೀಯರು ತಮ್ಮ ಮೇಲೆ ನೀರಿನ ಹನಿಗಳು ಪ್ರೋಕ್ಷಣೆ ಮಾಡಿಕೊಂಡು, ದೇಹದ ಶುದ್ಧಿಗಾಗಿ ಪೂಜ್ಯನೀಯ ನದಿಗಳನ್ನು ಈ ರೀತಿಯಲ್ಲಿ ಆವಾಹನೆ ಮಾಡುತ್ತಾರೆ – “ಈ ಜಲದಲ್ಲಿ, ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಹಾಗೂ ಕಾವೇರಿ ನದಿಗಳ ಪವಿತ್ರ ಜಲಗಳನ್ನು ಆವಾಹನೆ ಮಾಡಿ, ಅದು ಈ ಜಲವನ್ನು ಪರಿಶುದ್ಧ ಹಾಗೂ ಪರಮಾನಂದಕರವಾಗಿಸಲಿ.”

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ, ಸಾಂಪ್ರದಾಯಿಕ ಪವಿತ್ರ ಸಂಗೀತ ಹಾಗೂ ಮಂತ್ರಘೋಷಗಳ ನಡುವೆ, ಬೆಳಗಿದ ಹಣತೆಗಳೊಂದಿಗೆ ನಿತ್ಯವೂ ಗಂಗೆಯ ಆರಾಧನೆಯನ್ನು ಹರಿದ್ವಾರದ ಗಂಗೆಯ ತಟದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ನಾವು ನೋಡಬಹುದು.

ಸಟ್ಲಜ್ ಹಾಗೂ ಯಮುನಾ ನದಿಗಳನ್ನು ಬರಿದು ಮಾಡುತ್ತಿದ್ದ, ಕ್ರಿ.ಪೂ. ೩೦೦೦ಕ್ಕೆ ಮುನ್ನ, ಪ್ರಾಚೀನ ಭಾರತದ ಅತ್ಯಂತ ದೊಡ್ಡ ನದಿಗಳಲ್ಲಿ ಒಂದಾಗಿದ್ದುದು, ಸರಸ್ವತಿ ನದಿ.  ಹರಪ್ಪ ನಾಗರಿಕತೆಯ ಅಂತ್ಯದ ವೇಳೆಗೆ, ಸರಸ್ವತಿ ನದಿಯು ಒಣಗಿ, ಸುಮಾರು ಕ್ರಿ.ಪೂ. ೧೯೦೦ರ ವೇಳೆಗೆ, ಅದು ಹರಪ್ಪ ನಾಗರಿಕತೆಯ ಅಂತ್ಯವನ್ನೇ ತಂದಿತು.  ಸಮುದ್ರ/ಸಾಗರದೊಳಗೆ ಸೇರುತ್ತಿದ್ದ ಸರಸ್ವತಿ ನದಿಯ ಹಲವಾರು ಉಲ್ಲೇಖಗಳು ವೇದಗಳಲ್ಲಿ ಇದೆ. ಋಗ್ವೇದದಲ್ಲಿ, ಇತರ ನದಿಗಳ ಬಗೆಗಿಂತ, ಸರಸ್ವತಿ ನದಿಯ ಬಹಳಷ್ಟು ಉಲ್ಲೇಖಗಳಿವೆ.  ಆಕೆಯನ್ನು ಸರಸ್ವತಿ ದೇವಿ ಎಂದು ಪರಿಗಣಿಸಲಾಗುತ್ತದೆ.  “ಅಂಬಿತಮೆ (ಎಲ್ಲ ತಾಯಂದಿರಿಗೂ ಮಿಗಿಲಾದವಳು), ನದಿತಮೆ (ಎಲ್ಲ ನದಿಗಳಿಗಿಂತಲೂ ಮಿಗಿಲಾದವಳು), ದೇವಿತಮೆ (ಎಲ್ಲ ದೇವತೆಗಳಿಗಿಂತಲೂ ಮಿಗಿಲಾದವಳು) ಸರಸ್ವತಿ (ಋಗ್ವೇದ ೨.೪೧.೧೬)

ಋಗ್ವೇದ ಸಾಹಿತ್ಯದಲ್ಲಿ, ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ಸಪ್ತ ಸಿಂಧುಗಳೆಂಬ ಏಳು ಬೃಹತ್ ನದಿ ಕಾಲುವೆಗಳಾದ ಸರಸ್ವತಿ, ಶುತಾದ್ರಿ (ಸಟ್ಲಜ್), ವಿಪಾಶ (ಬಿಯಾಸ್), ಅಸಿಕ್ನಿ (ಚೆನಾಬ್), ಪರುಶ್ನಿ (ರವಿ), ವಿತಸ (ಝೇಲಮ್) ಹಾಗೂ ಸಿಂಧು (ಇಂಡಸ್) ಇದ್ದವೆಂದು ಸೂಚಿಸಲಾಗಿದೆ.  ಇವುಗಳ ಪೈಕಿ, ಪರ್ವತಗಳಿಂದ ಹರಿದು, ಸಮುದ್ರದವರೆಗೂ ಹರಿವ, ಅದರಲ್ಲಿ ಸೇರುವ ಬೃಹತ್ ನದಿಗಳೆಂದರೆ, ಸರಸ್ವತಿ ಹಾಗೂ ಸಿಂಧು (ಇಂಡಸ್).  ಸರಸ್ವತಿ ಬಗೆಗಿನ ಸ್ತೋತ್ರಗಳು ಅತ್ಯಂತ ಪುರತಾನವಾದದ್ದಾಗಿದ್ದು, ಅವುಗಳನ್ನು ೮,೦೦೦ ವರ್ಷಗಳಿಗಿಂತ ಮೊದಲೇ ರಚಿಸಲಾಗಿತ್ತು.  ಈ ಮೊದಲೇ ತಿಳಿಸಿದಂತೆ, ವೇದ ಸಾಹಿತ್ಯದಲ್ಲಿ ಅತ್ಯಂತ ಹೆಸರಾಂತ ನದಿಗಳ ಪೈಕಿ ಒಂದು ಸರಸ್ವತಿ.  ಋಗ್ವೇದದಲ್ಲಿ, ತನ್ನ ಅತ್ಯಂತ ಆರೋಗ್ಯಕರ ಹಾಲಿನಿಂದ ಜನರನ್ನು ಪೋಷಿಸುವ ದೇವಲೋಕದ ಹಸುವೆಂದು ಉಲ್ಲೇಖಿಸಲಾಗಿದೆ.

ಸಮೃದ್ಧಿಯನ್ನು ತರುವ ವಸ್ತುವಾಗಿ (ನೀರಾವರಿಯ ಮೂಲಕ) ನೀರಿನ ಮಹತ್ವವನ್ನು ಮನಗಾಣಲಾಗಿತ್ತು.  ಇದು ಕೆಳಗಿನ ಶ್ಲೋಕಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ.

“ಸರಸ್ವತಿಯೇ, ಸಂಪದ್ಭರಿತವಾದ, ಸಿರಿ-ಸಂಪತ್ತನ್ನು ನೀಡುವ, ಉತ್ತಮ ಅದೃಷ್ಟವನ್ನು ಕರುಣಿಸುವ, ನಿನ್ನ ಕುಚಗಳು ಸಂತೋಷದ ಮೂಲವಾಗಿದೆ; ನಮ್ಮ ಪೋಷಣೆಗಾಗಿ, ಈ ಋತುವಿನಲ್ಲಿ ಅದನ್ನು (ಕುಚವನ್ನು) ತೆರೆದಿಡು.” (ಋಗ್ವೇದ ೧.೧೬೪.೪೯)

“ವಿಪುಲವಾದ ಜಲವೇ, ನೀನು ಐಶ್ವರ್ಯದ ಅಧಿದೇವತೆ; ಉತ್ತಮ ಸಂಪತ್ತು, ಧಾರ್ಮಿಕ ಆಚರಣೆಗಳು, ಹಾಗೂ ಅಮರತ್ವವನ್ನು ನೀನು ಬೆಂಬಲಿಸುವೆ; ನೀನು ಸಂಪತ್ತು ಹಾಗೂ ಸಂತತಿಯ ರಕ್ಷಕಿ; ನಿನ್ನನ್ನು ಹೊಗಳುವವನ ಮೇಲೆ ಸರಸ್ವತಿಯು ಈ ಎಲ್ಲ ವಿಪುಲತೆಯನ್ನೂ ಕರುಣಿಸಲಿ.” (ಋಗ್ವೇದ ೧೦.೩೦.೧೨).

ನಿರ್ದಿಷ್ಟ ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕೃತಿಕ ರೂಪರೇಷೆಗಳ ವಿಕಸನಕ್ಕೆ ನದಿಗಳು ಮೂಲವಾಗಿವೆ.  ಜನಜೀವನವನ್ನು ರೂಪಿಸುವ, ಭೌತಿಕ ಹಾಗೂ ಆಧ್ಯಾತ್ಮಿಕ ಪೋಷಣೆ ಮಾಡುವ ಮೂಲವಾಗಿ, ಭಾರತದಲ್ಲಿ ನದಿಗಳ ಪಾತ್ರವನ್ನು ಅಭಿವಂದಿಸಲಾಗಿದೆ.  ಅತ್ಯದ್ಭುತ ಶಕ್ತಿಗಳನ್ನುಳ್ಳ ಸ್ತ್ರೀರೂಪವಾಗಿ ನದಿಗಳನ್ನು ಪೂಜ್ಯನೀಯ ಭಾವದಿಂದ ವೇದದ ಋಷಿ-ಮುನಿಗಳು ಪರಿಗಣಿಸಿದ್ದಾರೆ.  ಅಗ್ನಿಯಂತೆ, ಜಲವೂ ಎಲ್ಲ ಮಾನವ ಆಗುಹೋಗುಗಳ ದೈವೀಕ ಸಾಕ್ಷಿಯಾಗಿದೆ.  ಇದರ ಫಲವಾಗಿ, ನೀರಿಲ್ಲದೆ ಯಾವುದೇ ಹಿಂದೂ ಧಾರ್ಮಿಕ ವಿಧಿಗಳು ಪೂರ್ಣಗೊಳ್ಳುವುದಿಲ್ಲ.  ಹಿಂದೂ ಆಚರಣೆಗಳಲ್ಲಿ, ನದಿಗಳನ್ನು ಸಾಂಕೇತಿಕವಾಗಿ ಕಳಶ ಅಥವಾ ಕುಂಭದಿಂದ ಪ್ರತಿನಿಧಿಸಲಾಗಿದೆ.  ಇದೇ ಕಾರಣದಿಂದ, ಧಾರ್ಮಿಕ ಆಚರಣೆಗಳಾದ ಮದುವೆಗಳು, ಅಥವಾ ಧಾರ್ಮಿಕ ಆಚರಣೆಗಳು/ವಿಧಿ-ವಿಧಾನಗಳೂ ಸೇರಿದಂತೆ, ಪ್ರತಿ ಸಾಮಾಜಿಕ ಆಚರಣೆಗಳಲ್ಲಿ ಕಳಶಗಳು ಕಾಣಸಿಗುತ್ತವೆ.

“ಇಳಿಜಾರಿನಲ್ಲಾಗಲಿ, ಹಳ್ಳಗಳಲ್ಲಾಗಲಿ, ಎತ್ತರದ ಸ್ಥಳಗಳಲ್ಲಿ ಹರಿವಾಗ, ನೀರಿನಿಂದ ತುಂಬಿರಲಿ ಅಥವಾ ಒಣಗಿರಲಿ, ತಮ್ಮ ನೀರಿನಿಂದ ಎಲ್ಲರನ್ನೂ ಪೋಷಿಸುತ್ತ, ನಮಗೆ ಶುಭಪ್ರದವಾಗಿ ನಮ್ಮನ್ನು ರೋಗ-ರುಜಿನಗಳಿಂದ ದಿವ್ಯ ನದಿಗಳು  ರಕ್ಷಿಸುತ್ತ, ಎಲ್ಲ ನದಿಗಳೂ ಹಾನಿ ಅಥವಾ ಗಾಯ/ಅಪಚಾರವನ್ನು ತೊಡೆದು ಹಾಕಲಿ.” (ಋಗ್ವೇದ ೭.೫೦.೪)

ಸುಂದರ ಸ್ತ್ರೀಗಳು, ತಾಯಂದಿರು, ರಾಜಕುಮಾರರಿಗೆ ಅಥವಾ ರಾಣಿಯರಿಗೆ, ವೇಗವಾಗಿ ಓಡುವ ಕುದುರೆ, ಇತ್ಯಾದಿಗೂ, ಬಹಳ ವೇಗದಿಂದ ಗುಡ್ಡಗಾಡಿನಿಂದ ಇಳಿಯುವ, ತಮ್ಮ ಉಪನದಿಗಳಿಂದ ಪೋಷಿತವಾಗಿ ಉಕ್ಕಿ ಹರಿವ ಅಥವಾ ಮೆದುವಾಗಿ ಹರಿದು, ತಮ್ಮ ಸಿಹಿ ನೀರಿನಿಂದ ಆನಂದವನ್ನು ಹರಡುವುದೆಂದು ನದಿಗಳನ್ನು ವರ್ಣಿಸಿ, ಹೋಲಿಸಲಾಗಿದೆ.

ಹರಿವ ನದಿಗಳನ್ನು ಋಗ್ವೇದದ ಈ ಸ್ತೋತ್ರಗಳು ಹೀಗೆ ವರ್ಣಿಸುತ್ತವೆ: “ಓ ವೇಗವಾಗಿ ಹರಿವ ನದಿಗಳೇ, ನೀವು ಹರಿವ ದಾರಿ ಸುಗಮವಾಗಲೆಂದು ಪೂಜ್ಯ ದೇವನು ಕಾಲುವೆಗಳನ್ನು ಕೊರೆದಿದ್ದಾನೆ.  ನೀವು ಪೋಷಿಸುವ ಭೂಮಿಯು ಅಪಾರವಾದ ಆಹಾರದ ಮೂಲವಾಗುವುದರಿಂದ, ಎತ್ತರರದ ಬಂಡೆಗಳಿಂದ ಬಯಲಿಗೆ ನೀವು ವೇಗವಾಗಿ ಹರಿಯುವಿರಿ.  ಹಾಗಾಗಿ, ನಿರ್ವಿವಾದವಾಗಿ ನೀವು ವಿಶ್ವವನ್ನೇ ಆಳುವಿರಿ. ತಮ್ಮ ಮಕ್ಕಳಿಗಾಗಿ ಅಳುವ ತಾಯಂದಿರಂತೆ ಹಾಗೂ ತಮ್ಮ ಕರುಗಳಿಗಾಗಿ ಹಾಲುಣಿಸಲು ಕಾದ ಹಸುಗಳಂತೆ, ಇತರ ಭೋರ್ಗರೆವ ತೊರೆಗಳು (ಉಪನದಿಗಳು) ಮುಖ್ಯ ನದಿಯತ್ತ ಹರಿಯುತ್ತವೆ.  ನದಿಯ ಎರಡೂ ತಟಗಳಿಗೆ ನೀರುಣಿಸುತ್ತ, ಕಾಳಗಕ್ಕೆ ಹೊರಟ ರಾಜನು ತನ್ನ ಸೈನ್ಯವನ್ನು ಜೊತೆಗೊಯ್ಯುವಂತೆ, ನಿಮ್ಮ ಉಪನದಿಗಳ ನೀರನ್ನು ಜೊತೆಗೊಯ್ಯುವಿರಿ.  ನೇರವಾಗಿ ಹರಿಯುವ, ಶ್ವೇತವರ್ಣದ, ಪ್ರಕಾಶಮಾನವಾದ ಹೊಳೆಯುವ ನದಿಯು ತನ್ನ ತುಂಬು ಹರಿವಿನೊಂದಿಗೆ ಲೋಕದಲ್ಲಿ ಸಂಚರಿಸುತ್ತಾಳೆ; ಪರಮಪಾವನ ನದಿ, ಅಪೇಕ್ಷಿತ ಫಲವನ್ನು ನೀಡುವ ಹಾಗೂ ಅಶ್ವದಂತೆ ಚುಕ್ಕೆಯುಳ್ಳ, ಸ್ಫುರದ್ರೂಪಿಯಾದ ಕನ್ಯೆಯಂತೆ ಸುಂದರವಾಗಿದ್ದಾಳೆ.” (ಋಗ್ವೇದ ೧೦.೭೫.೨.೪.೭)

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*