ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕಡ್ಡಿರಾಂಪುರದ ಬಾವಿಯ ಪುನರ್ಜನ್ಮ

ಜಲವೃದ್ಧಿಗೆ ನೀರಿನ ಶೇಖರಣಾ ತಾಣಗಳನ್ನು ಕಾಪಿಟ್ಟುಕೊಳ್ಳಬೇಕೆಂಬ ಕೂಗು ಕೇಳಿ ಬರುತ್ತಿದೆ. ಬಾವಿ, ಕೆರೆ-ಕಟ್ಟೆ, ಹಳ್ಳ-ಕೊಳ್ಳ ಇತ್ಯಾದಿಗಳ ಅಸ್ತಿತ್ವವಕ್ಕೇ ಕೊಡಲಿ ಪೆಟ್ಟು ನೀಡುವ ಕೆಲಸ ನಮ್ಮಿಂದಲೇ ಅವ್ಯಾಹತವಾಗಿ ಸಾಗಿದೆ. ಈಗಾಗಿ ನಮ್ಮ ನಡುವೆ ಇರುವ ಬಾವಿ, ಸಣ್ಣ-ಪುಟ್ಟ ನೀರು ಸಂಗ್ರಹ ಸ್ಥಳಗಳನ್ನು ಕಾಪಾಡಿ, ಕೃಷಿ ಮಾಡುವ ಸಂತತಿ ವಿರಳವೇ! ಆದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕು ಕಡ್ಡಿರಾಂಪುರದ ಬಸಯ್ಯಸ್ವಾಮಿ ತನ್ನ ಜಮೀನಿನಲ್ಲಿ ಪಾಳು ಬಿದ್ದ ಬಾವಿಯ ಕಸಕಡ್ಡಿ, ಹೂಳು ತೆಗೆದು, ಸ್ವಚ್ಚಗೊಳಿಸಿ, ಬತ್ತಿದ ಬಾವಿಯಲ್ಲಿ ಪುನಃ ನೀರು ಚಿಮ್ಮುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಪರಿಣಾಮ ಸತತ ಬರದ ಛಾಯೆ ತನ್ನ ಕೈತೋಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಜಾಣ್ಮೆ ಮೆರೆದಿದ್ದಾರೆ. ಆ ಮೂಲಕ ಮೊದಲು ನೀರಿನ ಮೂಲಗಳನ್ನು ಆಸ್ಥೆ ವಹಿಸಿ ಕಾಪಾಡಿದರೆ ಕೃಷಿ ಸುಲಲಿತ ಎನ್ನುವ ಸಂದೇಶ ರವಾನಿಸುತ್ತಿದ್ದಾರೆ!

ಕಡ್ಡಿರಾಂಪುರದ ಬಸಯ್ಯಸ್ವಾಮಿ ಮತ್ತು ಆತನ ಕುಟುಂಬ ತುಂಬಾ ಆಸ್ಥೆವಹಿಸಿ ಒಂದು ಕೈತೋಟ ಮಾಡಿದ್ದಾರೆ. ಅಂದಹಾಗೆ ಈ ಕೈತೋಟದ ಹರವು basaiha bavi (1)ಸುಮಾರು ೩೦ ಸೆಂಟ್ಸ್. ಆ ಕೈ ತೋಟ ತನ್ನ ಹಚ್ಚಹಸಿರಿನಿಂದ ಮನೆಗೆ ಅಷ್ಟದಿಗ್ಬಂಧನ ಹಾಕಿದೆ!. ಮಲೆನಾಡಿನಂತಹ ಪರಿಸರ ಸೃಷ್ಠಿಸಿರುವ ಈ ಕೈ ತೋಟ ಮನೆಯ ಪ್ರಮುಖ ಆಕರ್ಷಣೆ ಕೂಡ. ತರೇವಾರಿ ಹೂವು, ಕಾಯಿ-ಪಲ್ಲೆ ಗಿಡ, ಬಳ್ಳಿಗಳ ಜೊತೆಗೆ ಕೆಲವು ಅಪರೂಪದ ಸಸ್ಯ ಸಂಕುಲಗಳು ಈ ಪುಟ್ಟ ಕೈ ತೋಟದಲ್ಲಿ ಜಾಗ ಪಡೆದಿವೆ. ಕೇವಲ ಕೈತೋಟವಾಗಿದ್ದರೆ ಆ ಮಾತು ಬಿಡಿ. ಇದು ಈ ಭಾಗದ ಪುಟ್ಟ ನರ್ಸರಿ ಕೂಡ. ಬಸಯ್ಯಸ್ವಾಮಿ ಈ ಕೈತೋಟದಲ್ಲಿ ಅಪರೂಪದ ಗಿಡಗಳನ್ನು ಬೆಳಸಿ ಮಾರಾಟ ಮಾಡುತ್ತಾರೆ. ಒಟ್ಟಾರೆಯಾಗಿ ಮನೆಯ ಮೇಲಿನ ಕರ್ಚಿಗೆ, ಅಂದಕ್ಕೆ ಈ ಕೈ ತೋಟವೇ ಆಧಾರ.

ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿದ ಕೈ ತೋಟಕ್ಕೆ ಈ ಮೊದಲು ಗ್ರಾಮ ಪಂಚಾಯಿತಿ ಬಿಡುವ ಕೊಳಾಯಿ ನೀರು ಅಧಾರವಾಗಿತ್ತು. ಕಳೆದ ೨-೩ ವರ್ಷಗಳ ಆಚೆ ಭಾಗಶಃ ಕಾಲ-ಕಾಲಕ್ಕೆ ಮಳೆ ಬಂದಿದ್ದರಿಂದ ಕೈ ತೋಟಕ್ಕೆ ನೀರಿನ ಕೊರತೆ ಕಾಡಲಿಲ್ಲ. ಆದರೆ ನಿಧಾನವಾಗಿ ಬರಗಾಲ ಇಣುಕಿದ್ದರಿಂದ ನಳದಲ್ಲಿ ಒತ್ತರಿಸಿ ಬರುತ್ತಿದ್ದ ನೀರಿಗೆ ಸ್ಥಳೀಯ ಆಡಳಿತ ಮೂಗುದಾರ ಹಾಕಿತು. ಪರಿಣಾಮ ಮನೆಯ ದಿಂಬಿಗೆಗಳ ದಾಹವನ್ನೇ ತೀರಿಸುವಲ್ಲಿ ನಳ ನಕ್ಕೋ ಎನ್ನುವಷ್ಟು ಪರಿಸ್ಥಿತಿ ಹದಗೆಟ್ಟಿತು. ಬಿಂದಿಗೆಗಳೇ ಬಾಯಿ ತೆರೆದುಕೊಂಡಿರುವಾಗ ಇನ್ನೂ ಕೈತೋಟಕ್ಕೆ ನೀರು ಹೇಗೆ ತಾನೆ ಪೂರೈಸಲು ಸಾಧ್ಯ? ಫಲವಾಗಿ ಕೈತೋಟ ನೀರಿನ ಅಭಾವದಿಂದ ದಿನ-ದಿನಕ್ಕೆ ಕಳೆಗುಂದುತ್ತಾ ಸಾಗಿತು. ಕೈತೋಟ ತಮ್ಮ ಕಣ್ಣಮುಂದೆಯೇ ಒಣಗುತ್ತಿರುವುದನ್ನು ಕಂಡ ಮನೆಯವರೆಲ್ಲಾ ಕೈ ಕೈ ಹಿಸಿಕೊಂಡರು. ತೋಟ ನೀರಿಲ್ಲದೆ ಬಾಡುವುದನ್ನು ಅತೋಟಿಗೆ ತರಲು ಇನ್ನಿಲ್ಲದ ಕಸರತ್ತು ನಡೆಸಿದರು.

basaiha baviಆಗ ಬಸಯ್ಯಸ್ವಾಮಿ, ಮಗ ಶಿವುಗೆ ಕಂಡಿದ್ದು ಕೈತೋಟದ ಪಕ್ಕದಲ್ಲಿದ್ದ ಪಾಳು ಬಾವಿ!. ಈ ಬಾವಿ ಪಾಳು ಬಿದ್ದು ಅನೇಕ ದಶಕಗಳೇ ಕಳೆದಿದ್ದರಿಂದ ಗ್ರಾಮದ ತ್ಯಾಜ್ಯ, ಹೂಳಿನಿಂದಲೇ ಬಾವಿ ಭರ್ತಿಯಾಗಿತ್ತು. ಇದರಲ್ಲಿ ಬಸಯ್ಯಸ್ವಾಮಿ ಕುಟುಂಬ ನೀರಿಗಾಗಿ ತಡಕಾಡುತ್ತಿರುವುದನ್ನು ನೋಡಿ ಗ್ರಾಮಸ್ಥರೆಲ್ಲಾ ಗಹಗಹಿಸಿ ನಕ್ಕರು. ೪೦೦-೫೦೦ ಅಡಿ ಆಳ ಬೋರ್ ಕೊರೆಯಿಸಿದರೂ ನೀರು ಸಿಗುತ್ತದೆ ಎನ್ನುವ ನಂಬಿಕೆ ಇಲ್ಲದಿರುವುದಾಗ ಇನ್ನೇಲಿ ಈ ಪಾಳು ಬಾವಿಯಲ್ಲಿ ನೀರು? ಎನ್ನುವ ಮಾತುಗಳು ಅಪ್ಪಳಿಸಿ ಬಂದವು. ಆದರೆ ಇವರ ಮನದಲ್ಲಿ ನೀರಿನ ಸೆಲೆ ಕಾಣುವ ಧೃಡ ವಿಶ್ವಾಸವಿತ್ತು. ತುಂಗಭದ್ರೆಯ ಕೃಪೆಗೆ ಈ ಭಾಗ ಪಾತ್ರವಾಗಿರುವುದು ಇವರ ಈ ವಿಶ್ವಾಸಕ್ಕೆ ಕಾರಣ. ಗ್ರಾಮದ ಜನರ ಕೊಂಕು ಮಾತುಗಳಿಗೆ ಕಿವಿಗೊಡದೆ ಮನೆ ಮಂದಿಯೆಲ್ಲಾ ಕಸದ ಗುಂಡಿಯಂತಾಗಿದ್ದ ಬಾವಿಯನ್ನು ಸೋಸುವುದಕ್ಕೆ ಸನ್ನದ್ದರಾದರು. ಹೆಚ್ಚು-ಕಮ್ಮಿ ವಾರ ಪೂರ್ತಿ ಕಸರತ್ತು ಸಾಗಿತು. ಕಸ ಸರಿದಂತೆಲ್ಲಾ ಬಾವಿಯ ಮೂಲ ಆಕಾರ ಕಾಣತೊಡಗಿತು. ಜೊತೆಗೆ ತೇವಾಂಶ ಕೂಡ!. ಇದರಿಂದ ಮತ್ತೊಷ್ಟು ಪ್ರೇರಿತರಾದ ಬಸಯ್ಯಸ್ವಾಮಿ ಮತ್ತು ಕುಟುಂಬ ಹುರುಪಿನಿಂದಲೇ ಮತ್ತೊಷ್ಟು ಆಳಕ್ಕೆ ಹೋದರು. ನಿಧಾನವಾಗಿ ನೀರು ಕಾಣಿಸತೊಡಗಿತು. ಒಟ್ಟಾರೆಯಾಗಿ ೧೨ಘಿ೮ ಅಡಿ ಅಗಲ ೧೪ ಅಡಿ ಆಳಕ್ಕೆ ಬಾವಿಯನ್ನು ಸೋಸಿದ್ದೇ ತಡ ಗಂಗೆ ಉಕ್ಕಿಬಂದಳು. ರಾತ್ರಿ ಕಳೆದು ಬೆಳಗಾಗದರೊಳಗೆ ಬಾವಿಯಲ್ಲಿ ಆಳೆತ್ತರಕ್ಕೆ ನೀರು ನಿಂತಿತು!. ಕೊನೆಗೆ ಬಸಯ್ಯಸ್ವಾಮಿ ಮತ್ತು ಅವರ ಕುಟುಂಬದ ಶ್ರಮ ಫಲಕೊಟ್ಟಿತು.

ಇಂದು ಬಸಯ್ಯಸ್ವಾಮಿ ಹೀಗೆ ದಿನನಿತ್ಯ ಸಂಗ್ರಹವಾಗುವ ನೀರನ್ನು ಮೋಟಾರ್ ಪಂಪ್ ಬಳಿಸಿ ಕೈ ತೋಟಕ್ಕೆ ನೀರು ಬಿಡುತ್ತಿದ್ದಾರೆ. ಈಗ ಇವರ ಕೈ ತೋಟಕ್ಕೆ ಬಾವಿಯ ನೀರೇ ಆಧಾರ. ಫಲವಾಗಿ ಒಮ್ಮೇಲೆ ನೀರಲ್ಲದೇ ಬಾಡಿ ಹೋಗಿದ್ದ ಕೈ ತೋಟಕ್ಕೆ ಮತ್ತೆ ಜೀವ ಕಳೆ ಬಂದಿದೆ. ಜೊತೆಗೆ ತಮ್ಮ ಕೈತೋಟವನ್ನು ಮತ್ತೊಷ್ಟು ವಿಸ್ತರಿಸಿಕೊಂಡು, ಅದರಲ್ಲಿಯೇ ವೈವಿಧ್ಯಮಯ ಪ್ರಯೋಗಗಳನ್ನು ಮಾಡುವ ಮೂಲಕ ಕೈತೋಟದ ಬಗ್ಗೆ ಹೊಸ ಪರಿಕಲ್ಪನೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ಬಸಯ್ಯಸ್ವಾಮಿ ಕೊಳಾಯಿ ನೀರನ್ನು ಮನೆಗೆ, ಈ ಬಾವಿ ನೀರನ್ನು ಕೈ ತೋಟಕ್ಕೆ ಮೀಸಲಿಟ್ಟಿದ್ದಾರೆ. ನೀರಿಲ್ಲವೆಂಬ ಕಾರಣಕ್ಕೆ ಮನೆ ಮುಂದೆ ಇರುವ ಒಂದೆರೆಡು ಗಿಡಗಳನ್ನು ಸಂಬಾಳಿಸಲಿಕ್ಕೆ ಸಾಧ್ಯವಾಗದೆಂದು ಉಪೇಕ್ಷೆ ಮಾಡುವ ಜನರೇ ಇರುವ ಈ ದಿನಗಳಲ್ಲಿ ಬಸಯ್ಯಸ್ವಾಮಿಯ ಯಶೋಗಾಥೆ ಮಾದರಿಯಾಗಿ ನಿಲ್ಲುತ್ತದೆ. ಆ ಮೂಲಕ ನಮ್ಮ ನಡುವೆ ಇರುವ ತೆರೆದ ಬಾವಿಗಳು ಸೇರಿದಂತೆ ನೀರಿನ ತಾಣಗಳನ್ನು ತ್ಯಾಜ್ಯ ಸೇಖರಣೆಗೆ, ಕಟ್ಟಡಗಳನ್ನು ಎಬ್ಬಿಸಲಿಕ್ಕೆ ಬಳಸುವ ಮನಸ್ಥಿತಿಯವರನ್ನು ಚಿಂತನೆಗೆ ಹಚ್ಚುತ್ತದೆ. ಬಸಯ್ಯ ಸ್ವಾಮಿ ಸಂಪರ್ಕಕ್ಕೆ ೯೪೪೯೧೩೩೧೫೪

ಚಿತ್ರ-ಲೇಖನ: ಸ್ವರೂಪಾನಂದ.ಎಂ.ಕೊಟ್ಟೂರು

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*