ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆ-ಹಳ್ಳಗಳ ‘ತರಿ ಭೂಮಿ’ ಮರೆ; ‘ವಲಸೆ ಹಕ್ಕಿಗಳ’ ಬದುಕಿಗೆ ತೆರೆ!

ಇಂಧನ’, ಆರ್ಥಾತ್ ‘ಶಕ್ತಿ ಸಂಚಯನ’ಕ್ಕೆ ಜಾಗತೀಕರಣದ ಈ ಯುಗದಲ್ಲಿ ಎಲ್ಲಿಲ್ಲದ ಒತ್ತಡ; ಎಲ್ಲ ದಿಕ್ಕುಗಳಿಂದಲೂ. ಅತ್ಯಂತ ಕಡಿಮೆ ಇಂಗಾಲವನ್ನು ವಾತಾವರಣಕ್ಕೆ ಉಗುಳುವ ಅಥವಾ ಹರಿಬಿಡುವ, ನವೀಕರಿಸಬಹುದಾದ ಇಂಧನ ಮೂಲಗಳ ಮೂಲಕ ಜನಸಂಖ್ಯೆಯ ಬೇಡಿಕೆಗೆ ತಕ್ಕಷ್ಟು ಶಕ್ತಿಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕಾದ ಸ್ಥಿತಿ ಇದೆ. ಈ ಮಧ್ಯೆ, ಸುಸ್ಥಿರವಾದ, ಪರಿಸರ-ಸ್ನೇಹಿ ಹಾಗೂ ವಲಸೆ ಹಕ್ಕಿಗಳ ಬದುಕನ್ನೂ ಪೋಷಿಸಬಲ್ಲ, ಅವುಗಳ ವಲಸೆ ಪಥ, ಗೂಡು, ಆವಾಸಸ್ಥಾನಗಳನ್ನು ಇಂಧನ ತಂತ್ರಜ್ಞಾನ ಕಡಿಮೆ ಬಾಧಿಸುವ ಅಥವಾ ಹೆಚ್ಚೂ ಕಡಿಮೆ ಬಾಧಿಸದೇ ಇರುವ ರೀತ್ಯಾ ರೂಪುಗೊಳಿಸಬೇಕಿದೆ. ಪ್ರತಿವರ್ಷ, ವಲಸೆ ಋತುವಿನಲ್ಲಿ ನೂರಾರು ಸಂಖ್ಯೆಯ ವಲಸೆ ಪಕ್ಷಿಗಳು ಶಕ್ತಿಯ ಉತ್ಪಾದನಾ ಸ್ಥಳ ಹಾಗೂ ಪ್ರಸರಣ ಮಾರ್ಗಗಳ ಮಧ್ಯೆ ಪ್ರಾಣ ತೆರುವ ಆತಂಕಕಾರಿ ಬೆಳವಣಿಗೆಗಳ ಮಧ್ಯೆ, ಮೇ ೯ ಮತ್ತು ೧೦ ರಂದು ವಲಸೆ ಹಕ್ಕಿಗಳ ಅಂತಾರಾಷ್ಟ್ರೀಯ ದಿನ ಆಚರಿಸಲಾಗುತ್ತಿದೆ.

 ಈ ಬಾರಿ ಆಚರಣೆಯ ಧ್ಯೇಯ - ‘ಶಕ್ತಿ; ಪಕ್ಷಿ ಸ್ನೇಹಿಯಾಗಿ ಉತ್ಪಾದಿಸೋಣ.’  

the_2015_world_migratory_bird_day_theme_energy__ma_by_sanctuaryindia-d8sykq3೨೦೨೦. ಭಾರತ ನೀರಿಗಾಗಿ ಹಪಹಪಿಸುವ ರಾಷ್ಟ್ರವಾಗಿ ಪರಿವರ್ತನೆಯಾಗಲಿದೆ. ಸುಮಾರು ೧೬೦ ಮಿಲಿಯನ್ ಭಾರತೀಯರು ಶುದ್ಧ ಕುಡಿಯುವ ನೀರಿನ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ಶೌಚಾಲಯಗಳು ಕೇವಲ ೫೦ ಪ್ರತಿಶತ ಜನರನ್ನು ಮಾತ್ರ ತಲುಪುವಲ್ಲಿ ಯಶಸ್ವಿಯಾಗಿದ್ದು, ನಮ್ಮ ದೇಶದ ಕೇವಲ ೧೦ ಪ್ರತಿಶತ ನಗರಗಳು ಒಳಚರಂಡಿ ವ್ಯವಸ್ಥೆ ಹೊಂದಿವೆ. ಜನಸಂಖ್ಯೆ ಹೀಗೆಯೇ ಬೆಳೆಯುತ್ತ ಸಾಗಿದ, ಅನಾರೋಗ್ಯ-ಪೂರಿತ ಶೌಚ ಸ್ಥಳಗಳು ಹಾಗೂ ಸ್ವಚ್ಛ-ಶುದ್ಧ ಕುಡಿಯುವ ನೀರಿನ ಅಲಭ್ಯತೆಯಿಂದ ಬದುಕು ದುರ್ಭರವಾಗಲಿದೆ.

 ೨೦೧೦ರ ಈ ದಶಕದಲ್ಲಿ, ೩೭ ಮಿಲಿಯನ್ ಜನ ಜಲಮೂಲದ ಕಾಯಿಲೆಗಳಿಗೆ ಈಗಾಗಲೇ ತುತ್ತಾಗಿ ಬಳಲಿದ್ದಾರೆ. ೨೦೧೫ರಲ್ಲಿ ಬಯಲುಶೌಚ ಪದ್ಧತಿಯಿಂದ ಒಟ್ಟು ಜನಸಂಖ್ಯೆಯ ೨೧ ಪ್ರತಿಶತದಷ್ಟು ಜನ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಮೇ ೯, ೧೦

ವಲಸೆ ಪಕ್ಷಿಗಳ ಅಂತಾರಾಷ್ಟ್ರೀಯ ದಿನಾಚರಣೆ ಮೇ ೯, ೧೦. ಧಾರವಾಡದ ನವಿಲೂರು ಹಾಗೂ ಕೆಲಗೇರಿ ಕೆರೆಗಳಿಗೆ ಕಳೆದ ಮೇ ೧೪ ರಿಂದ ಜೂನ್ ೨೮ರ ಮಧ್ಯೆ ಬಣ್ಣದ ಕೊಕ್ಕರೆಗಳು (ಪೇಂಟೆಡ್ ಸ್ಟಾರ್ಕ್) ಬಂದಿಳಿದಿದ್ದವು. ಸುಮಾರು ೧೦ ಜೋಡಿಗಳಿದ್ದವು. ಪುಟ್ಟ ಹಾಗೂ ದೊಡ್ಡ ನೀರ್ಕಾಗೆಗಳು (Little and Large Cormorant), ಬಿಳಿ ಐಬೀಸ್ (White Ibis), ತೆರೆದ ಕೊಕ್ಕಿನ ಕೊಕ್ಕರೆ (Open Billed Stork) ಚಮಚೆ ಕೊಕ್ಕು (Spoon Bill), ಕೊಳದ ಬಕ (Pond Heron), ರಾತ್ರಿ ಬಕ (Night Heron), ಹಾವಕ್ಕಿ (Darter) ಹಾಗೂ ಸಣ್ಣ, ಮಧ್ಯಮ ಮತ್ತು ದೊಡ್ಡ ಬೆಳ್ಳಕ್ಕಿಗಳು (Little, Medium and Large Egrets) ಆದರೆ ಈ ಬಾರಿ ನಮ್ಮ ಭೌತಿಕ ಅಭಿವೃದ್ಧಿ ಕೆಲಸಗಳು ಇಲ್ಲಿ ಭರದಲ್ಲಿ ಸಾಗಿದ್ದರಿಂದ, ಅವರು ಯಾರೂ ಇತ್ತ ತಲೆ ಹಾಕಿಲ್ಲ!

ಆದರೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಈ ಎಲ್ಲ ವಲಸೆ ಹಕ್ಕಿ ದಂಪತಿಗಳ ಸಂಖ್ಯೆ ೨ ರಿಂದ ೩ ಸಾವಿರದಷ್ಟು! ಕೆಲವೊಮ್ಮೆ ಮಿಕ್ಕಲೂಬಹುದು. ಜತೆಗೆ ಹದಿಮೂರು ವಿವಿಧ ಪ್ರಬೇಧಗಳ ಪಕ್ಷಿಗಳು ವಲಸೆ ಬಂದು, ಸಂತಾನಾಭಿವೃದ್ಧಿಯಲ್ಲಿ ತೊಡಗಿ ನಂತರ ಹಾರಿ ಹೋಗುತ್ತವೆ. ರಂಗನತಿಟ್ಟಿಗೆ ಬಂದವರಿಗೆ ಎದ್ದು ಕಾಣುವುದು ವಂಶಾಭಿವೃದ್ಧಿಗೆ ಇಲ್ಲಿಗೆ ಬರುವ ಪಕ್ಷಿಗಳು. ಆದರೆ ನನ್ನಂತಹ ಪರಿಸರದ ವಿದ್ಯಾರ್ಥಿಗೆ, ಧಾರವಾಡ ಹಾಗೂ ಜಿಲ್ಲೆಯಾದ್ಯಂತ ಇರುವ ಕೆರೆಗಳಲ್ಲಿ ಹಾಗೂ ಸುತ್ತಮುತ್ತಲಿನ ಹೊಲಗದ್ದೆಗಳಲ್ಲಿ, ತೋಟಗಳಲ್ಲಿ ಒಂದೇ ದಿನದಲ್ಲಿ ೫೦ ರಿಂದ ೬೦ ಪ್ರಬೇಧದ ವಲಸೆ ಹಕ್ಕಿಗಳನ್ನು ಗುರುತಿಸುವುದು ಸಾಧ್ಯವಾಗುತ್ತಿತ್ತು.

ರಂಗನತಿಟ್ಟು ಪಕ್ಷಿಧಾಮದಲ್ಲಿ

ತಂದೆ-ತಾಯಿ ಹಕ್ಕಿ, ಮೂರು ಮರಿಗಳಿರುವ ೨೦೦೦ ಕುಟುಂಬಕ್ಕೆ ದಿನವೊಂದಕ್ಕೆ ೪೦ ರಿಂದ ೬೦ ಕ್BLACK CROWNED NIGHT HERONವಿಂಟಲ್‌ಗಳಷ್ಟು ಮೀನುಗಳು ಆಹಾರವಾಗಿ ಬೇಕು. ಬಣ್ಣದ ನೀರ್ಕೋಳಿಗಳ ಸಂಖ್ಯೆಯಂತೂ ಇವುಗಳಿಗಿಂತ ಎರಡು-ಮೂರು ಪಟ್ಟು ಹೆಚ್ಚಾಗಿದ್ದು, ನಮ್ಮ ಭಾಗದಲ್ಲಿ ನಿತ್ಯವೂ ಕಾಣಸಿಗುವ ಸಮೂಹ ಅವುಗಳದ್ದು. ಅವುಗಳಿಗೂ ಮೀನೇ ಪ್ರಮುಖ ಆಹಾರ. ಈಗ ನೀವೇ ಊಹಿಸಿ -ಅವುಗಳೊಟ್ಟಿಗೆ ಬಕ ಪಕ್ಷಿ, ಹೆಜ್ಜಾರ್ಲೆ, ಬೆಳ್ಳಕ್ಕಿ, ಟಿಟ್ಟಿಭ ಹೀಗೆ ಎಲ್ಲವನ್ನೂ ಸೇರಿಸುವುದಾದರೆ ಪ್ರತಿ ದಿನ ಈ ಹಕ್ಕಿಗಳಿಗೆ ಬೇಕಾದ ಮೀನಿನ ಪ್ರಮಾಣ ೫೦೦ ಕ್ವಿಂಟಲ್ ಗಳಿಗಿಂತಲೂ ಹೆಚ್ಚು! ಅವುಗಳ ದೈನಂದಿನ ಈ ಬೇಡಿಕೆಯನ್ನು ಪೂರೈಸುವಷ್ಟು ನಮ್ಮ ಕೆರೆಗಳು ಸಮೃದ್ಧವಾಗಿವೆ ಎಂದರೆ, ನಾವೆಲ್ಲ ಮೂಗಿನ ಮೇಲೆ ಬೆರಳಿಡಬೇಕು.

ರಂಗನತಿಟ್ಟು ದಾಟಿ, ಶ್ರೀರಂಗಪಟ್ಟಣವನ್ನು ಎರಡು ಕವಲಾಗಿ ಒಡೆದು ಮುಂದೆ ಸಾಗುವ ಕಾವೇರಿಯ ಮುಂದಿನ ೪೦ ರಿಂದ ೫೦ ಕಿ.ಮೀ.ಗಳ ಹಾದಿ..ಈ ದಾರಿಯಲ್ಲಿ ತಿ.ನರಸೀಪುರದ ಬಳಿ ಕಬಿನಿ, ಅಲ್ಲಿಂದ ಮುಂದೆ ಸುವರ್ಣಾವತಿ ಹಾಗೂ ಗುಂಡಾಲ್ ನದಿಗಳು ಕಾವೇರಿ ಸೇರುತ್ತವೆ. ಈಶಾನ್ಯ ದಿಕ್ಕಿನಲ್ಲಿ ತಿರುಗುವ ಕಾವೇರಿ ನದಿ ಶಿವನಸಮುದ್ರದ ಬಳಿ ಗಗನಚುಕ್ಕಿ-ಭರಚುಕ್ಕಿ ಜಲಪಾತಗಳಾಗಿ ಭೋರ್ಗರೆಯುತ್ತ ನೆಗೆಯುತ್ತದೆ. ಈ ಕೊರಕಲಿನ ಹಾದಿಯಲ್ಲಿ ಭೀಮೇಶ್ವರ, ಮುತ್ತತ್ತಿ, ಸಂಗಮಗಳ ನಡುವೆ ವಿಶಿಷ್ಟ ಜಲ ಪರಿಸರ ರೂಪುಗೊಂಡಿದೆ.

ಭೀಮೇಶ್ವರ ಹಾಗೂ ಮುತ್ತತ್ತಿ ಮತ್ತು ಸಂಗಮಗಳಿಗೆ ಅಮೇರಿಕ, ಬ್ರಿಟನ್, ಸ್ವೀಡನ್, ಸಿಂಗಾಪುರ, ಸ್ಕಾಟಲ್ಯಾಂಡ್, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ವರ್ಷವರ್ಷವೂ ತಂಡೋಪತಂಡವಾಗಿ ಬಂದು ಬಿಡಾರ ಹೂಡುತ್ತವೆ. ಇದಕ್ಕೆ ಕಾರಣವೆಂದರೆ ಕಾವೇರಿಯ ಈ ಭಾಗಗಳಲ್ಲಿ ವಿಶೇಷವಾಗಿ ಮಶೀರ್ ಮೀನುಗಳು ಲಕ್ಷ-ಲಕ್ಷ ಸಂಖ್ಯೆಯಲ್ಲಿ ಬದುಕುತ್ತಿರುವುದು.

ಡಾ. ಎಚ್.ಆರ್.ಕೃಷ್ಣಮೂರ್ತಿ ವೈಜ್ಞಾನಿಕ ವಿಷಯಗಳ ಖ್ಯಾತ ಬರಹಗಾರರು. ನನ್ನನ್ನು ಪ್ರಭಾವಿಸಿದ ಕೆಲವರಲ್ಲಿ ಅವರೂ ಒಬ್ಬರು. ಅವರು ತಮ್ಮ ಲೇಖನವೊಂದರಲ್ಲಿ (ಸುಧಾ ೨೮.೦೧.೧೯೯೦) ‘ತರಿ ಭೂಮಿ’ ಬಗ್ಗೆ ಉಲ್ಲೇಖಿಸಿದ್ದನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಈ ಭೂಮಿಯ ಮೇಲೆ ಬದುಕಿರುವ ಯಾವ ಹಕ್ಕಿಯೂ ಉಪವಾಸ ಸಾಯುವುದಿಲ್ಲ ಎಂದಾದರೆ, ನಮ್ಮ ಗಮನ ಸೆಳೆಯದ ಕೆರೆ-ತೊರೆ, ಗಮನದಲ್ಲಿರುವ ನದಿಗಳಲ್ಲಿ ಹಬ್ಬಿಕೊಂಡಿರುವ ‘ತರಿ ಭೂಮಿ’ಯ ಅಗಾಧವಾದ ಉತ್ಪಾದನಾ ಸಾಮರ್ಥ್ಯದ ತಿಳಿವಳಿಕೆ ನಮ್ಮ ಜ್ಞಾನಕ್ಷಿತಿಜದ ವಿಸ್ತಾರಕ್ಕೆ ನಿಲುಕದ್ದು. ಜೀವ ವಿಜ್ಞಾನಿಗಳ ದೃಷ್ಟಿಯಲ್ಲಿ ಅತ್ಯಂತ ನಾಜೂಕಾದ, ಕ್ರಿಯಾತ್ಮಕ, ಉತ್ಪನ್ನಶೀಲ, ತರಿಭೂಮಿಯನ್ನು ಕಬಳಿಸಲು ಇಂದು ಅದೆಷ್ಟು ಮಂದಿ ಹೊಂಚುಹಾಕುತ್ತಿದ್ದಾರೆ ಗೊತ್ತೆ?

ನಗರಗಳನ್ನು ವಿಸ್ತರಿಸುವ ಸಂಸ್ಥೆಗಳಿಗೆ ತರಿ ಭೂಮಿಯನ್ನು ಒಡೆದು, ನೀರನ್ನು ಬಸಿದು, ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವ ಕನಸು; ಉದ್ದಿಮೆದಾರರಿಗೆ ಕೆರೆ-ಕುಂಟೆ, ಕಾಲುವೆ-ಹರಿ-ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಅದಮ್ಯ ಬಯಕೆ. ಇನ್ನು ಕಾರ್ಖಾನೆ ಆಡಳಿತಗಾರರದ್ದು ತಮ್ಮಿಂದ ಹೊರಬಂದ ವಿಷಯುಕ್ತ ರಾಸಾಯನಿಕಗಳನ್ನು ಸದಿಲ್ಲದೇ ಕೆರೆಗಳಿಗೆ ಹರಿಸಿ, ಕೈತೊಳೆದುಕೊಳ್ಳುವ ಹೊಂಚು; ಕೆರೆಯ ಸುತ್ತಲಿನ ದೊಡ್ಡಕುಳಗಳಿಗೆ ಕೆರೆಯಂಗಳದ ಮಣ್ಣನ್ನು ಮೇಲಕ್ಕೆತ್ತಿ ಇಟ್ಟಂಗಿ ರೂಪಿಸುವ ಯೋಚನೆ! ಕೆರೆಯಂಚಿನಲ್ಲಿರುವ ಶ್ರೀಮಂತರಿಗೆ ಕೆರೆಯನ್ನು ಒತ್ತುವರಿ ಮಾಡಿ ಜಮೀನನ್ನು ವಿಸ್ತರಿಸುವ ಆಸೆ!

ಈ ಎಲ್ಲ ‘ಅಭಿವೃದ್ಧಿ’ ಸದೃಷ ಬೆಳವಣಿಗೆಗಳ ಫಲ?

ಏಷ್ಯಾ ಖಂಡದಲ್ಲಿ ಪ್ರತಿ ನಿಮಿಷಕ್ಕೆ ಒಂದು ಹೆಕ್ಟೇರ್‌ನಷ್ಟು ‘ತರಿಭೂಮಿ’ ಕಣ್ಮರೆಯಾಗುತ್ತಿದೆ; ಕರ್ನಾಟಕದಲ್ಲಿ ವರ್ಷವೊಂದಕ್ಕೆ ೩೫ ಕೆರೆಗಳು ಕಣ್ಮುಚ್ಚುತ್ತಿವೆ. ಧಾರವಾಡ ಜಿಲ್ಲೆಯ ಕೆರೆಗಳಲ್ಲಿ ಶೇಕಡಾ ೩೧ರಲ್ಲಿ ಅಪಾರ ಹೂಳು. ಶೇ. ೧೩ರಷ್ಟು ಕೆರೆಗಳಲ್ಲಿ ಕೈಗಾರಿಕೆಗಳ ಕಲ್ಮಶ. ೪೭ರಲ್ಲಿ ಇಟ್ಟಿಗೆಯ ಗೂಡುಗಳು; ೩೯ರಲ್ಲಿ ಕೃಷಿ ಭೂಮಿಯ ಒತ್ತುವರಿ, ೩೬ರಲ್ಲಿ ಪಕ್ಷಿಗಳ ನಿರಂತರ ಬೇಟೆ. ನೂರಾರು ಕೆರೆ-ಕುಂಟೆಗಳಲ್ಲಿ ವೈವಿಧ್ಯಮಯ ಜೀವರಾಶಿಯ ಬದಲಿಗೆ ದುರ್ವಾಸನೆ ಬೀರುವ, ಕೊಳೆತ ವಸ್ತುಗಳನ್ನು ಒಳಗೊಂಡ, ಸುತ್ತಮುತ್ತಲಿನ ಜೀವಿಗಳಿಗೆ ಮಾರಕವಾದ ನೊರೆತುಂಬಿದ ಹೊಲಸು! ನಮ್ಮ ತರಿಭೂಮಿಯ ಹದಗೆಡುತ್ತಿರುವ ಪರಿಸ್ಥಿತಿಯನ್ನು ಸ್ಪಷ್ಠವಾಗಿ ನೀರ್ಕೋಳಿಗಳು ತೋರಿಸುತ್ತಿವೆ.

ತರಿ ಭೂಮಿಗಳ ಮಹತ್ವದ ಬಗ್ಗೆ ನಮಗಿನ್ನೂ ತಿಳಿದಿಲ್ಲ ಎಂಬುದು ವಿಷಾದನೀಯ. ತರಿಭೂಮಿ, ನೀರಾವರಿಯಿಂದ ಬೆಳೆತೆಗೆಯುವ ಜಮೀನಿಗೆ ಮಾತ್ರ ಸೀಮಿತವಾಗಿಲ್ಲ. ನೀರು-ನೆಲ ಸಂಧಿಸುವ ಎಲ್ಲ ಜಾಗಗಳನ್ನೂ ಈ ಗುಂಪಿಗೆ ಸೇರಿಸಬಹುದು. ಈ ದೃಷ್ಟಿಯಿಂದ ಕೆರೆ, ಸರೋವರ, ಜಲಾಶಯ, ಅಳಿವೆ, ಹಿನ್ನೀರಿನ ಜೌಗು ನೆಲಗಳೆಲ್ಲವೂ ತರಿಭೂಮಿಗಳೇ. ನೀರು ಮತ್ತು ನೆಲ – ಈ ಎರಡೂ ಪ್ರಮುಖ ನೆಲೆಗಳೂ ನೀಡುವ ಅತ್ಯುತ್ತಮ ಪೋಷಣೆಯನ್ನು ಬಳಸಿಕೊಳ್ಳುವ ವೈವಿಧ್ಯಮಯವಾದ ಜೀವಿಪರ ಪ್ರಪಂಚವನ್ನು ನಾವು ತರಿಭೂಮಿಯಲ್ಲಿ ಕಾಣಬಹುದು. ಭರತಪುರದ ಜೌಗುನೆಲ – ವಿದೇಶದ ಅಪರೂಪದ ಕೊಕ್ಕರೆಗಳಿಗೆ ಆಸರೆ; ಕಾಜ಼ಿರಂಗಾ ರಾಷ್ಟ್ರೀಯ ಉದ್ಯಾನದ ಬದಿ ಭೂಮಿ, ಒರಿಸ್ಸಾದ ಚಿಲ್ಕಾ ಸರೋವರ, ಮದ್ರಾಸ್ ಸಮೀಪದ ತಾಡಾ ಹಿನ್ನೀರು ಪ್ರದೇಶ, ರಣ್ ಆಫ್ ಕಛ್‌ನ ಜೌಗು ಬೆಂಗಾಡು, ಸುಂದರಬನ್ ಮ್ಯಾಂಗ್ರೋವ್ ಜೌಗು ಪ್ರದೇಶಗಳು ತರಿಭೂಮಿಗೆ ಹೆಸರುವಾಸಿ.

 ೧೯೯೦ರಿಂದ ೧೯೯೩ರವರೆಗೆ, ಸುಮಾರು ಮೂರು ವರ್ಷಗಳವರೆಗೆ ನಡೆದ ಗಣತಿಯಿಂದ, ೨೬ ದೇಶಗಳ ೧೩೧೯ ತರಿ ಭೂಮಿಗಳ ಸ್ಥಿತಿಗತಿಯ ಬಗ್ಗೆ ಸಾಕಷ್ಟು ನಿಖರವಾದ ಮಾಹಿತಿ ದೊರಕಿದೆ. ಯಾವುದೇ ತರಿಭೂಮಿ ೨೦,೦೦೦ಕ್ಕೂ ಹೆಚ್ಚಿನ ಜಲಪಕ್ಷಿಗಳಿಗೆ ಆಸರೆ ಒದಗಿಸಿ ಪೋಷಿಸಿದರೆ, ಅಂತಹ ತರಿಭೂಮಿಗೆ ಅಂತಾರಾಷ್ಟ್ರೀಯ ಮನ್ನಣೆ, ನೆರವು ದೊರಕುತ್ತದೆ. ಸ್ಥಳೀಯರಾದ ನಾವು ಮನಸ್ಸು ಮಾಡಬೇಕು. ಕಣ್ಮರೆ ಅಂಚಿನಲ್ಲಿರುವ ೬೪ ಪ್ರಬೇಧಗಳಿಗೆ ಸೇರಿದ ನೀರ್ಕೋಳಿಗಳನ್ನು ಗುರುತಿಸಲಾಗಿದೆ.

ಅವುಗಳಲ್ಲಿ ೩೧ ಪ್ರಜಾತಿಯ ನೀರ್ಕೋಳಿಗಳು ಭಾರತದ ತರಿಭೂಮಿಗಳಲ್ಲಿ ಕಾಣಸಿಗುತ್ತವೆ. ಇವುಗಳಲ್ಲಿ ಯಾವುದೇ ಒಂದು ಪ್ರಬೇಧದ ಹಕ್ಕಿ ಸಾಕಷ್ಟು ಪ್ರಮಾಣದಲ್ಲಿ ಒಂದು ಕಡೆ ಸೇರಿದಲ್ಲಿ ಅಂತಹ ತರಿಭೂಮಿಗೂ ಅಂತಾರಾಷ್ಟ್ರೀಯ ಮನ್ನಣೆ ದೊರೆಯುತ್ತದೆ. ಈ ದೃಷ್ಟಿಯಿಂದ ಏಷ್ಯಾಖಂಡದ ತರಿಭೂಮಿ ಕೈಪಿಡಿಯಲ್ಲಿರುವ ೯೪೭ ನೀರಿನಾಸರೆಗಳಲ್ಲಿ ೩೦೦ಕ್ಕೆ ಮನ್ನಣೆ ಈಗಾಗಲೇ ಪ್ರಾಪ್ತ! ಆದರೆ ಅವುಗಳಿಗೆ ಸೂಕ್ತ ರಕ್ಷಣೆ ಇಲ್ಲ ಎಂಬುದು ಕಳವಳಕಾರಿ.

 ನಮ್ಮ ಉಳಿವಿಗಾಗಿ ಅವುಗಳನ್ನು ಉಳಿಸಿಕೊಳ್ಳುವ ಜಾಣತನ ನಾವು ತೋರಬಹುದಲ್ಲ!

 ಚಿತ್ರ-ಲೇಖನ: ಹರ್ಷವರ್ಧನ್ ವಿ. ಶೀಲವಂತ

 

 

 

 

 

 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*