ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಈ ಸಂಸ್ಥೆಯ ತ್ಯಾಜ್ಯ ನೀರು ಚರಂಡಿ ಸೇರುವುದಿಲ್ಲ

ಅದೊಂದು ಬೃಹತ್ ತರಬೇತಿ ಸಂಸ್ಥೆ. ಹತ್ತಾರು ಎಕರೆಗಳ ಕ್ಯಾಂಪಸ್, ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ, ಹಾಸ್ಟೆಲ್‌ಗಳಲ್ಲಿ ವಾಸವಿದ್ದಾರೆ, ಕ್ಯಾಂಪಸ್‌ನಲ್ಲಿರುವ ಮೆಸ್ ಮೂರು ಹೊತ್ತೂ ವಿದ್ಯಾರ್ಥಿಗಳು, ಅಧ್ಯಾಪಕರು ಹಾಗೂ ಅತಿಥಿಗಳಿಂದ ತುಂಬಿರುತ್ತದೆ.

ನಿತ್ಯ ಸಾವಿರಾರು ಲೀಟರ್ ನೀರಿನ ಬಳಕೆಯಾಗುವ ಇಲ್ಲಿ, ಒಂದು ತೊಟ್ಟು ನೀರೂ ಸಹ ಚರಂಡಿ ಸೇರುವುದಿಲ್ಲ. ಕಟ್ಟಡದ ಹಿಂಬದಿಯಲ್ಲಿ ನಾಲ್ಕು ಹಂತಗಳ ಶೋಧಕ ವ್ಯವಸ್ಥೆ ಅಳವಡಿಸಿದ್ದು, ಎಲ್ಲಾ ತ್ಯಾಜ್ಯಯುಕ್ತ ನೀರು ಅಲ್ಲಿ ಶೋಧಿಸಲ್ಪಡುತ್ತದೆ. ಇದನ್ನು ಅಳವಡಿಸಿಕೊಂಡಿರುವುದು ಚಂಡೀಗಢದ National institute of Technical Teachers Training and Research (NITTTR) ಸಂಸ್ಥೆ. ಅಲ್ಲಿನ ಸೆಕ್ಟರ್ ೨೬ರಲ್ಲಿ ಈ ಸಂಸ್ಥೆ ಹಬ್ಬಿದೆ.

ಈ ನಾಲ್ಕು ಹಂತಗಳಲ್ಲಿ, ಮೊದಲನೆಯ ಹಂತದಲ್ಲಿ ಒಂದು ತ್ಯಾಜ್ಯಯುಕ್ತ ನೀರಿನ ಶೇಖರಣಾ ತೊಟ್ಟಿ ಇರುತ್ತದೆ. ಇಲ್ಲಿ ತ್ಯಾಜ್ಯ ನೀರಿನಲ್ಲಿನ ಘನರೂಪದ for chandigarh article 1ಉಳಿಕೆಗಳು ಸಂಗ್ರಹವಾಗುತ್ತದೆ. ಈ ತೊಟ್ಟಿಯಲ್ಲಿ ಎರಡು ಭಾಗಗಳಿದ್ದು, ಒಂದು ಭಾಗದಲ್ಲಿ ಮೆಸ್‌ನಿಂದ ಬರುವ ತ್ಯಾಜ್ಯ ನೀರು ಸಂಗ್ರಹವಾಗುತ್ತದೆ, ಮತ್ತೊಂದು ಭಾಗದಲ್ಲಿ ಎರಡು ಹಾಸ್ಟೆಲ್‌ಗಳ ಸ್ನಾನಗೃಹಗಳಿಂದ ಬರುವ ತ್ಯಾಜ್ಯ ನೀರು ಸಂಗ್ರಹವಾಗುತ್ತದೆ. ಇಲ್ಲಿ ಉಳಿಕೆಗಳು ಸಂಗ್ರಹಗೊಂಡು, ಶೋಧಗೊಂಡ ನೀರು ಮುಂದಕ್ಕೆ ಹರಿದುಹೋಗುತ್ತದೆ. ಈ ಶೇಖರಣಾ ತೊಟ್ಟಿಯ ಉದ್ದ ೧.೨೦ ಮೀಟರ್, ಅಗಲ ೦.೭೦ ಮೀಟರ್ ಮತ್ತು ಆಳ ೧.೫೦ ಮೀಟರ್ ಅಳತೆ ಇರುತ್ತದೆ. ವಾಸನೆ ಬಾರದಿರಲು ಇದನ್ನು ಸಂಪೂರ್ಣ ಮುಚ್ಚಲಾಗಿರುತ್ತದೆ.

ಎರಡನೆಯದು ಶೋಧಕ ತೊಟ್ಟಿ. ಶೇಖರಣಾ ತೊಟ್ಟಿಗೂ ಇದಕ್ಕೂ ಸುಮಾರು ನಾಲ್ಕು ಅಡಿ ಅಂತರವಿರುತ್ತದೆ. ಎರಡೂ ತೊಟ್ಟಿಗಳನ್ನು ಸಂಪರ್ಕಿಸಲು ನೆಲದಾಳದಲ್ಲಿ ಪೈಪ್ ಅಳವಡಿಸಲಾಗಿರುತ್ತದೆ. ಶೋಧಕ ತೊಟ್ಟಿಯ ಉದ್ದ ೪.೨೦ ಮೀಟರ್, ಅಗಲ ೧.೫೦ ಮೀಟರ್ ಮತ್ತು ಆಳ ೧.೫೦ ಮೀಟರ್ ಅಳತೆ ಇರುತ್ತದೆ. ಈ ತೊಟ್ಟಿಯ ತಳಭಾಗದ ಅರ್ಧ ಭಾಗಕ್ಕೆ ೫೦ ಸೆಂಟಿಮೀಟರ್ ಗಾತ್ರದ ಕಾಡುಗಲ್ಲು ಹಾಗೂ ಮೇಲ್ಭಾಗದ ಅರ್ಧ ಭಾಗಕ್ಕೆ ೫೦ ಸೆಂಟಿಮೀಟರ್ ಗಾತ್ರದ ಜಲ್ಲಿ ಕಲ್ಲು ತುಂಬಿರಲಾಗುತ್ತದೆ. ಶೇಖರಣಾ ತೊಟ್ಟಿಯಿಂದ ಹಾದು ಬಂದ ನೀರು ಈ ತೊಟ್ಟಿಯಲ್ಲಿ ಶೋಧಗೊಂಡು, ಪೈಪ್ ಮೂಲಕ ಮುಂದಿನ ತೊಟ್ಟಿಗೆ ಸಾಗುತ್ತದೆ. ನೀರಿನಲ್ಲಿರುವ ಮಲಿನ ಅಂಶಗಳನ್ನು ಹೀರಿಕೊಳ್ಳಲು ಅಲಂಕಾರಿಕ ಸಸ್ಯವಾದ ಚರೆಗುಂಡಿನ ಗಿಡಗಳನ್ನು ಬೆಳೆಸಲಾಗುತ್ತದೆ. ಈ ಗಿಡದ ಬೇರುಗಳು ನೀರಿನಲ್ಲಿನ ಮಲಿನ ಅಂಶಗಳನ್ನು ಹೀರುವ ಗುಣ ಹೊಂದಿರುತ್ತವೆ.

ಎರಡನೇ ತೊಟ್ಟಿಯ ಕೆಳಭಾಗದಲ್ಲಿನ ಮೂರನೇ ತೊಟ್ಟಿಯೂ ಸಹ ಶೋಧಕವಾಗಿಯೇ ಕೆಲಸ ಮಾಡುತ್ತದೆ. ಅಳತೆಯೂ ಸಹ ಅಷ್ಟೇ ಇರುತ್ತದೆ. ಇದರಲ್ಲಿಯೂ ಸಹ ಕಾಡುಗಲ್ಲು ಮತ್ತು ಜಲ್ಲಿಕಲ್ಲುಗಳನ್ನು ಹಾಸಿದ್ದು, ಮೇಲ್ಭಾಗದಲ್ಲಿ ಕಡಲೆ ಗಿಡಗಳನ್ನು ಬೆಳೆಸಲಾಗುತ್ತದೆ.

ನಾಲ್ಕನೇ ಹಂತದ ತೊಟ್ಟಿಯೂ ಸಹ ಶೋಧಕವೇ ಆಗಿದ್ದು, ಅಳತೆಯಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ. ಅಂದರೆ, ಉದ್ದ ೮.೫೦ ಮೀಟರ್ ಇರುತ್ತದೆ. ಅರ್ಧಭಾಗಕ್ಕೆ for chandigarh article 2ಗೋಡೆ ನಿರ್ಮಿಸಿದ್ದು, ತಳಭಾಗದಲ್ಲಿ ನೀರಿನ ಚಲನೆಗೆ ಅನುಕೂಲವಾಗುವಂತೆ ಕಿಂಡಿಗಳಿರುತ್ತವೆ, ತೊಟ್ಟಿಯ ಮೇಲ್ಭಾಗದ ಅರ್ಧದಲ್ಲಿ ಟೈಪ್ಫಾ ಗಿಡಗಳನ್ನು ಹಾಗೂ ಇನ್ನರ್ಧ ಭಾಗದಲ್ಲಿ ಮನಿ ಪ್ಲಾಂಟ್ ಗಿಡಗಳನ್ನು ಬೆಳೆಸಲಾಗಿರುತ್ತದೆ. ಈ ಗಿಡಗಳ ಬೇರುಗಳು ನೀರಿನಲ್ಲಿನ ಮಲಿನ ಅಂಶಗಳನ್ನು ಹೀರಿಕೊಂಡು ಶುದ್ಧಗೊಳಿಸುತ್ತವೆ.

ಕೊನೆಯ ಭಾಗದಲ್ಲಿರುವುದೇ ನೀರು ಸಂಗ್ರಹಣಾ ತೊಟ್ಟಿ. ಉದ್ದ ೨.೭೦ ಮೀಟರ್, ಅಗಲ ೧.೨೦ ಮೀಟರ್ ಮತ್ತು ಆಳ ೧.೮೦ ಮೀಟರ್ ಅಳತೆ ಇರುತ್ತದೆ. ಇದರಲ್ಲಿ ಶುದ್ಧ ನೀರು ಸಂಗ್ರಹವಾಗುತ್ತದೆ. ಈ ನೀರಿನಲ್ಲಿ ಮೀನು ಸಾಕಬಹುದು ಅಥವಾ ಗಿಡಗಳಿಗೆ ಹಾಕಲು ಬಳಸಬಹುದು.

ಶುದ್ಧ ನೀರು ಸಂಗ್ರಹಣಾ ತೊಟ್ಟಿಗೂ, ಮೊದಲನೆಯ ಸೆಡಿಮೆಂಟೇಷನ್ ತೊಟ್ಟಿಗೂ ಸುಮಾರು ೫೦ ಅಡಿ ಅಂತರವಿರುತ್ತದೆ. ಇಡೀ ವಾತಾವರಣದಲ್ಲಿ ಯಾವುದೇ ರೀತಿಯ ಕೆಟ್ಟ ವಾಸನೆಯಾಗಲಿ, ಕೊಳಕಾಗಲಿ ಇಲ್ಲದೆ ಸ್ವಚ್ಚವಾಗಿದೆ.

ಭಾರತದ ಮೊದಲ ಯೋಜಿತ ನಗರವಾಗಿರುವ ಚಂಡೀಗಢದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ತೆರೆದ ಚರಂಡಿಗಳಾಗಲಿ, ರಸ್ತೆಯಲ್ಲಿ ತ್ಯಾಜ್ಯ ಎಸೆಯುವುದಾಗಲಿ, ಅತ್ಯಂತ ಕಡಿಮೆ. ಅದರಲ್ಲಿಯೂ ತಾಂತ್ರಿಕ ತರಬೇತಿ ಸಂಸ್ಥೆಯಾಗಿರುವ ಇದು ಈ ರೀತಿ ಮಾದರಿ ವಿಧಾನ ಅಳವಡಿಸಿಕೊಂಡಿರುವುದು ಸಹಜವೇ ಆಗಿದೆ. ೨೦೧೧ರಲ್ಲಿ NITTTR ಮತ್ತು ಐ.ಐ.ಟಿ. ದೆಹಲಿ ವತಿಯಿಂದ ಸಂಶೋಧನಾ ಯೋಜನೆಯಾಗಿ ಪ್ರಾರಂಭವಾದ ಇದು ಯಶಸ್ವಿಯಾಗಿದೆ. ಈವರೆಗೆ ಯಾವುದೇ ತೊಂದರೆಗಳೂ ಎದುರಾಗಿಲ್ಲ.

ಇದೊಂದು ಸರಳ ಹಾಗೂ ಕಡಿಮೆ ವೆಚ್ಚದ ವಿಧಾನವಾಗಿದ್ದು, ದೇಶದ ಯಾವುದೇ ಸಂಸ್ಥೆಯಾಗಲಿ, ಅಪಾರ್ಟ್‌ಮೆಂಟ್‌ಗಳಾಗಲಿ ಅತಿ ಸುಲಭವಾಗಿ ಅಳವಡಿಸಿಕೊಳ್ಳಬಹುದಾಗಿದೆ. ಇದು ಪರಿಸರ ಸ್ನೇಹಿ ವಿಧಾನವೂ ಹೌದು. ಜಲಮಾಲಿನ್ಯ ಅತಿ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಈ ಪ್ರಯತ್ನ ಖಂಡಿತಾ ಅಳವಡಿಕೆ ಯೋಗ್ಯ.

ಚಿತ್ರ ಲೇಖನ: ಮಲ್ಲಿಕಾರ್ಜುನ ಹೊಸಪಾಳ್ಯ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*