ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಯುವಛಲ ಶುದ್ಧ ಜಲ

ನಿಪ್ಪಾಣಿ ಬಳಿಯ ದೇವಚಂದ ಕಾಲೇಜಿನ ಎನ್.ಎಸ್.ಎಸ್ ಸ್ವಯಂಸೇವಕರು, ೨೦೧೫ರ ಜನವರಿಯಲ್ಲಿ ತಮ್ಮ ಶ್ರಮದಾನದ ಮೂಲಕ ಹಳ್ಳವೊಂದಕ್ಕೆ ಚೆಕ್‌ಡ್ಯಾಮ್ ನಿರ್ಮಿಸಿ, ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರನ್ನು ನೀಡಿದ್ದಾರೆ. ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗಿದ್ದ ಕೆಲಸವನ್ನು, ಶ್ರಮದಾನದ ಮೂಲಕವೇ ಮುಗಿಸಿದ್ದಾರೆ. ಆ ಮೂಲಕ ಕಾಟಾಚಾರಕ್ಕೆ ನಡೆಯುವ ಎನ್.ಎಸ್.ಎಸ್. ಕ್ಯಾಂಪುಗಳಿಗೆ ಮಾದರಿಯಾಗಿದ್ದಾರೆ. ಅದರ ವಿವರ ಇಲ್ಲಿದೆ.

ಕರ್ನಾಟಕದ ನಿಪ್ಪಾಣಿ ಗಡಿಯಿಂದ ೭ ಕಿ.ಮೀ ದೂರದಲ್ಲಿ ಬರುವ ಖಡಕೆವಾಡಾ, ಸುಮಾರು ೬೫೦೦ ಜನಸಂಖ್ಯೆಯಿರುವ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಗಲ್ ತಾಲ್ಲೂಕಿನ ಒಂದು ಸಣ್ಣ ಹಳ್ಳಿ. ಊರಿನ ಸುತ್ತ ಒಂದು ಹಳ್ಳ ಇದೆ. ಮಳೆಗಾಲದಲ್ಲಿ ಈ ಹಳ್ಳದ ನೀರು ಹರಿದು, ಚಿಕೋತ್ರಾ ನದಿಗೆ ಸೇರುತ್ತದೆ. ಚಿಕೋತ್ರಾ ನದಿಯೂ ಸಹ ಗ್ರಾಮಕ್ಕೆ ಕೇವಲ ೩೦೦ ಮೀಟರ್ ದೂರದಲ್ಲಿ ಹರಿಯುತ್ತದೆ. ಈ ನದಿಯ ನೀರೇ ಗ್ರಾಮಕ್ಕೆ ಕುಡಿಯುವ ನೀರಿಗೆ ಆಧಾರ. ನದಿ ಪಕ್ಕ ನೀರೆತ್ತುವ ಘಟಕ ಸ್ಥಾಪಿಸಿದ್ದು, ಅದರ ಮೂಲಕ ವರ್ಷದ ಬಹುತೇಕ ತಿಂಗಳು ನೀರು ಪೂರೈಸಲಾಗುತ್ತದೆ.

DSC_0073 copyಸಮಸ್ಯೆ ಎಂದರೆ, ಗ್ರಾಮದ ಚರಂಡಿಯ ಮಲಿನ ನೀರನ್ನು ಊರಿನ ಸುತ್ತ ಹರಿಯುವ ಹಳ್ಳಕ್ಕೆ ಬಿಡಲಾಗುತ್ತಿದೆ. ಈ ಮಲಿನ ನೀರು ಹರಿದು, ಈಗಾಗಲೇ ಹೇಳಿದಂತೆ, ಚಿಕೊತ್ರಾ ನದಿಯಿಂದ ಊರಿಗೆ ಸರಬರಾಜಾಗುವ ನೀರೆತ್ತುವ ಘಟಕದ ಬಳಿಯೇ ಶೇಖರಣೆಯಾಗುತ್ತದೆ.  ನದಿಯ ಶುದ್ಧ ನೀರಿನೊಂದಿಗೆ ಈ ಅಶುದ್ಧ ನೀರು ಮಿಶ್ರಣವಾಗಿ ಅನಾಹುತವಾಯಿತು. ಆ ನೀರು ಸೇವಿಸಿದ ಜನತೆ, ಹಲವು ಸಾಂಕ್ರಾಮಿಕ ರೋಗಗಳಿಗೆ ತತ್ತರಿಸಿತ್ತು. ಎಷ್ಟೋ ಜನ ಆಸ್ಪತ್ರೆ ಸೇರಿ ಹಣ ವ್ಯಯಮಾಡಿದ್ದರು. ಇದನ್ನರಿತ ಪ್ರಜ್ಞಾವಂತ ನಾಗರಿಕರ ತಂಡ, ವಿವಿಧ ಸರಕಾರಿ ಕಛೇರಿಗಳನ್ನು ಅಲೆದು, ಮಲಿನ ನೀರು ನದಿಗೆ ಸೇರದಂತೆ ತಡೆಯಲು ಚೆಕ್‌ಡ್ಯಾಮ್ ನಿರ್ಮಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಆದರೆ, ಸರಕಾರಿ ಅಧಿಕಾರಿಗಳು ಅನುದಾನವಿಲ್ಲವೆಂದು ಹೇಳಿ ಜವಾಬ್ದಾರಿಯಿಂದ ನುಸುಳಿಕೊಂಡಿದ್ದರು. ನೀವೇ ಹಣ ವ್ಯಯಿಸಿ ಕೆಲಸ ಮಾಡಿಕೊಳ್ಳಿ ಎಂಬ ಉತ್ತರ ಸಿಕ್ಕಿತು. ಆದರೆ, ಪ್ರಯತ್ನ ಬಿಡದ ಊರಿನ ಜನ, ಶಾಲಾ ಕಾಲೇಜುಗಳ ಎನ್.ಎಸ್.ಎಸ್ (ರಾಷ್ಟ್ರೀಯ ಸ್ವಯಂ ಸೇವಕ) ಘಟಕಗಳಿಗೆ ಭೇಟಿ ನೀಡಿ ಸಹಾಯ ಕೋರಲು ಮುಂದಾದರು.

DSC_5319ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ ನಿಪ್ಪಾಣಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿಯ ಮೇಲೇ ಇರುವುದು ದೇವಚಂದ್ ಮಹಾವಿದ್ಯಾಲಯ. ಈ ಕಾಲೇಜಿನ ಒಂದು ವೈಶಿಷ್ಟ್ಯವೆಂದರೆ, ಕಾಲೇಜಿನ ಮುಂಭಾಗ ಕರ್ನಾಟಕದಲ್ಲಿದ್ದರೆ, ಕಟ್ಟಡ ಮಹಾರಾಷ್ಟ್ರದಲ್ಲಿದ್ದು, ಎರಡೂ ರಾಜ್ಯಗಳ ವಿದ್ಯಾರ್ಥಿಗಳನ್ನು ಹೊಂದಿ, ಸಂಸ್ಕೃತಿಯ ಕೊಂಡಿಯಾಗಿದೆ. ಕಾಲೇಜಿನ ಎನ್.ಎಸ್.ಎಸ್ ಘಟಕ, ಈ ವರ್ಷ ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಬೇಕು ಎಂದು ಅದೇ ಸಮಯಕ್ಕೆ ಆಲೋಚನೆ ಮಾಡಿತ್ತು. ಅಂತೆಯೇ,  ಖಡಕೆವಾಡಾದ ಜನರ ತಂಡವೂ ಈ ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿ, ಆನಂದಗಾಡಿವಡ್ಡರರನ್ನು ಭೇಟಿಯಾದರು. ಎರಡು ಸಲ ಗ್ರಾಮಕ್ಕೆ ಭೇಟಿ ನೀಡಿದ ಅವರು, ಜಲ ಮಾಲಿನ್ಯ ತಡೆದು, ಶುದ್ಧ ನೀರು ಪೂರೈಸುವುದು ಜಟಿಲವಾದ ಕೆಲಸವಾದರೂ ಒಪ್ಪಿದರು. ಮಹಾವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ, “ನೀವೀಗ ಮಹತ್ವದ ಗ್ರಾಮ ಸುಧಾರಣೆಯ ಕೆಲಸಕ್ಕೆ ಹೊರಟಿರುವಿರಿ. ಗಾಂಧೀಜಿಯವರಿಗೆ ಬಹು ಇಷ್ಟವಾದ ಶ್ರಮದಾನ ಮಾಡಿ, ಒಂದು ಹಳ್ಳಿಯ ಬದುಕನ್ನು ಬದಲಾವಣೆ ಮಾಡಬೇಕಾಗಿದೆ, ಆ ಮೂಲಕ ರಾಷ್ಟ್ರದ ಏಳಿಗೆಯಲ್ಲಿ ನೀವೂ ಪಾಲುದಾರರಾಗುವ ಕಾಲ ಕೂಡಿ ಬಂದಿದೆ”, ಎಂದು ಹುರಿದುಂಬಿಸಿ ನೀಲ ನಕ್ಷೆಯೊಂದಿಗೆ ಗ್ರಾಮಕ್ಕೆ ಕಾಲಿಟ್ಟರು.

ಮೊದಲ ಚೆಕ್‌ಡ್ಯಾಮ್

ಚಿಕೋತ್ರಾ ನದಿ ಪಕ್ಕದ ನೀರೆತ್ತುವ ಘಟಕದ ಹತ್ತಿರ, ಗ್ರಾಮದ ಹಳ್ಳಕ್ಕೆ ಎರಡು ಚೆಕ್‌ಡ್ಯಾಮ್‌ಗಳ ನಿರ್ಮಾಣದ ಅವಶ್ಯಕತೆ ಇತ್ತು. ೧೦೦ ಮೀ. ಅಂತರದಲ್ಲಿ, ಮೊದಲನೆಯದು ಹಾಗೂ ೨೦೦ ಮೀ. ಅಂತರದಲ್ಲಿ ಇನ್ನೊಂದು. ಈ ಚೆಕ್‌ಡ್ಯಾಮ್‌ಗಳ ನಿರ್ಮಾಣಕ್ಕೆ ಅಣಿಯಾದ ಸ್ವಯಂಸೇವಕರು, ಚಿಕೊತ್ರಾ ನದಿಯಿಂದ ಒಬ್ಬರಿಗೊಬ್ಬರು ಮರಳನ್ನು ಎತ್ತುತ್ತಾ, ಚೀಲದಲ್ಲಿ ಶೇಖರಿಸಿದರು. ಕೆಲಸ ಮಾಡಿ ರೂಢಿ ಇರದ ನಗರದ ವಿದ್ಯಾರ್ಥಿಗಳು ಆಯಾಸದಿಂದ ಬಳಲಿದರು. ಊರಿನವರ ಸಹಕಾರ ತೆಗೆದುಕೊಳ್ಳಲು ನಿರ್ಧರಿಸಿ, ಸಾಯಂಕಾಲ ಬಿಡುವಿನ ವೇಳೆ ಬೀದಿ ನಾಟಕದ ಮೂಲಕ ಜಲಜಾಗೃತಿ ಅಭಿಯಾನ ಮಾಡಲು ಅಣಿಯಾದರು. ಇದರ ಪರಿಣಾಮ, ಎರಡನೇ ದಿನ ಊರಿನ ಪ್ರಮುಖ ತರುಣ ಮಂಡಲಿಗಳು ಉತ್ಸಾಹದಿಂದ ಕೆಲಸಕ್ಕೆ ಬರತೊಡಗಿದರು. ಇಲ್ಲಿನ ಹಳ್ಳದ ಹರಿವಿನ ದಾರಿ ಕಿರಿದಾಗಿದ್ದು, ಸುಮಾರು ೧೨ ಟನ್ (೪೬೦ ಚೀಲ) ಮರಳಿನೊಂದಿಗೆ ಮೊದಲನೆಯ ಚೆಕ್‌ಡ್ಯಾಮ್ ನಿರ್ಮಿಸಿದರು. ಕೆಲಸದಲ್ಲಿ ನಿರತರಾದ ಸೇವಕರಿಗೆ, ಅಕ್ಕಪಕ್ಕದ ಜಮೀನಿನ ಜನ ಉಪಹಾರದ ವ್ಯವಸ್ಥೆ ಮಾಡಿದರು.

ಎರಡನೆಯ ಚೆಕ್‌ಡ್ಯಾಮ್:

ಮೂರನೇ ದಿನ, ೧೦೦ ಮೀ ಅಂತರದಲ್ಲಿ ಇನ್ನೊಂದು ಚೆಕ್‌ಡ್ಯಾಮ್ ನಿರ್ಮಾಣಕ್ಕೆ ಅಣಿಯಾದರು. ಇಲ್ಲಿ, ಹಳ್ಳದ ಹರಿವಿನ ಅಂತರ ಹೆಚ್ಚಿದ್ದರಿಂದ, ನೀರು ನಿಲುಗಡೆಗೆ ಅಗಲವಾದ ಡ್ಯಾಮ್ ನಿರ್ಮಿಸಬೇಕಾಯಿತು. ಇದಕ್ಕೆ ತುಸು ಕಡಿಮೆ ಶ್ರಮ ಹತ್ತಿತು. ಸುಮಾರು ೧೮ ಟನ್ (೭೮೦ ಚೀಲ) ಮರಳಿನಿಂದ ಎರಡನೆಯ ಚೆಕ್‌ಡ್ಯಾಮ್ ನಿರ್ಮಾಣವಾಯಿತು. ಈ ಎರಡೂ ಡ್ಯಾಮ್‌ಗಳಿಗೆ, ಸುಮಾರು ೧೫ ಲಕ್ಷದವರೆಗೆ ಹಣ ವ್ಯಯವಾಗುತ್ತಿತ್ತು ಎನ್ನುತ್ತಾರೆ ಆನಂದಗಾಡಿವಡ್ಡರ್. ಈ ಚೆಕ್ ಡ್ಯಾಮ್‌ಗಳಲ್ಲಿ, ಗ್ರಾಮದ ಕಲುಷಿತ ನೀರು ಶೇಖರವಾಗಿದ್ದರಿಂದ, ನದಿಗೆ ಸೇರ್ಪಡೆಯಾಗುವ ಅಪಾಯ ತಪ್ಪಿ, ಕುಡಿಯುವ ನೀರು ಮಲಿನವಾಗುವುದು ನಿಂತಿತು.

ಮೂಕವಿಸ್ಮಿತರಾದ ಅಧಿಕಾರಿಗಳು

officials inspectionಚೆಕ್‌ಡ್ಯಾಮ್ ನಿರ್ಮಾಣ ಕಾರ್ಯವನ್ನು ನೋಡುತ್ತಿದ್ದ ಊರಿನ ಕೆಲ ಪ್ರಜ್ಞಾವಂತ ಜನರು, ತಾಲೂಕಾ, ಜಿಲ್ಲಾ ಆಡಳಿತಕ್ಕೆ ಸಂಪರ್ಕ ಸಾಧಿಸಿ ಕೆಲಸದ ವಿವರಣೆಯನ್ನು ಕಳಿಸುತ್ತಿದ್ದರು. ಇದನ್ನು ಕಾಣಲು ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಕೃಷಿ ಅಧಿಕಾರಿ, ಮಂಡಲ ಕೃಷಿ ಅಧಿಕಾರಿ, ಕೊಲ್ಲಾಪುರದ ಕಾರ್ಯನಿರ್ವಾಹಕ ಅಧಿಕಾರಿಗಳು ಬಂದು ಕೆಲಸವನ್ನು ಪರಿಶೀಲಿಸಿ, ಶ್ಲಾಘಿಸಿ, ಪ್ರೋತ್ಸಾಹ ನೀಡಿದರು. ಗ್ರಾಮ ಪಂಚಾಯತ ಹಾಗೂ ಇತರ ಸರ್ಕಾರದ ನೆರವಿಲ್ಲದೆಯೇ ಸ್ವಯಂಸೇವಕರ ಈ ಕೆಲಸ ಎಲ್ಲರ ಮೆಚ್ಚುಗೆಯಾಗಿ, ಗ್ರಾಮದ ಏಳಿಗೆಯಲ್ಲಿ ಪ್ರಮುಖ ಪಾತ್ರವಾಯಿತು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಪಿ.ಎಂ.ಹೇರೆಕರ್ ಅವರು, “ಪ್ರಸಕ್ತ ವರ್ಷದಲ್ಲಿ ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್. ಸ್ವಯಂ ಸೇವಕರ ಜಲಜಾಗೃತಿ ಕಾರ್ಯ, ನಾಗರಿಕರ ಉತ್ತಮ ಪ್ರತಿಕ್ರಿಯೆ, ನನಗೆ ತುಂಬಾ ಖುಷಿ ತಂದಿದೆ,” ಎನ್ನುತ್ತಾರೆ.   ಗ್ರಾಮದ ಘೋರ್ಪಡೆ ಎಂಬುವರು, “ಸ್ವಯಂಸೇವಕರ ಸ್ಫೂರ್ತಿದಾಯಕ ಕೆಲಸ ನಮ್ಮನ್ನು ಜಾಗೃತರನ್ನಾಗಿಸಿತು. ನಮ್ಮ ಜಮೀನಿನ ಅಂತರ್ಜಲವು ಕಲುಷಿತಗೊಳ್ಳುವುದನ್ನು ತಡೆಯುವುದರ ಜೊತೆಗೆ, ಶುದ್ಧಕುಡಿಯುವ ನೀರು ದೊರಕಿತು. ಆಸ್ಪತ್ರೆ ಖರ್ಚಿಗಾಗಿ ದುಂದುವೆಚ್ಚ ಮಾಡುವುದು ತಪ್ಪಿತು,” ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ಅಲ್ಲದೆ, ಹಳ್ಳಕ್ಕೆ ನಿರ್ಮಿಸಿರುವ ಈ ಚೆಕ್‌ಡ್ಯಾಮ್‌ಗಳಲ್ಲಿ, ಮುಂದಿನ ಮಳೆಗಾಲದಲ್ಲಿ ಮಳೆ ನೀರು ಶೇಖರಣೆಯಾಗಿ, ಅಂತರ್ಜಲ ಮರುಪೂರಣವಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಗ್ರಾಮಸ್ಥರು. ಕಲುಷಿತ ನೀರು ಅಂತರ್ಜಲದಲ್ಲಿ ಸೇರ್ಪಡೆಗೊಂಡರೆ ಅಪ್ಪಾಯವಲ್ಲವೇ ಎಂಬ ಪ್ರಶ್ನೆ ಬರುವುದು ಸಹಜ. ಆದರೆ, ಭಯಪಡುವ ಅಗತ್ಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಎನ್.ಎಸ್.ಎಸ್. ಅಧಿಕಾರಿಗಳು. ಏಕೆಂದರೆ, ಕಲುಷಿತ ನೀರು ಎರಡೂ ಚೆಕ್‌ಡ್ಯಾಮ್‌ಗಳಲ್ಲಿ ಸೇರುವಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ, ಕಲ್ಮಶ ನೀರು ಸ್ವಲ್ಪ ಪ್ರಮಾಣದಲ್ಲಿದ್ದು, ಮಳೆ ನೀರಿನ ಜೊತೆ ಸೇರಿದಾಗ ಮತ್ತು ಮಣ್ಣಿನಲ್ಲಿಇಂಗಿದಾಗ, ಸಹಜವಾಗಿಯೇ ಕಲ್ಮಶಗಳು ಮೇಲ್ಮಣ್ಣಿನಲ್ಲಿ ಕರಗಿ (ಡೈಲ್ಯೂಟ್), ಶುದ್ಧ ನೀರು ಮಾತ್ರ ಅಂತರ್ಜಲಕ್ಕೆ ಸೇರುತ್ತದೆ.

ಚೆಕ್‌ಡ್ಯಾಮ್ ನಿರ್ಮಾಣಕ್ಕೆ ಮುನ್ನ, ಗ್ರಾಮದ ಎಲ್ಲಾ ಕಲ್ಮಷ ನೀರೂ ಒಟ್ಟಿಗೆ ಸೇರಿ ಹರಿದು, ನದಿಯಲ್ಲಿನ ನೀರೆತ್ತುವ ಸ್ಥಳದಲ್ಲಿಯೇ ಶೇಖರಣೆಯಾಗಿ ಶುದ್ಧ ನೀರಿನ ಜೊತೆ ಮಿಶ್ರವಾಗುತ್ತಿತ್ತು. ಆ ಅಪಾಯ ಈಗ ಇಲ್ಲವಾಗಿದೆ.

 ಚಿತ್ರ ಲೇಖನ: ವಿನೋದ.ರಾ.ಪಾಟೀಲ, ಚಿಕ್ಕಬಾಗೇವಾಡಿ

Share on FacebookTweet about this on TwitterShare on LinkedIn