ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮುದ್ದಿನಕೊಪ್ಪದಲ್ಲಿ ಮೂವತ್ತಮೂರು ಕೆರೆಗಳು……….!

ಮುದ್ದಿನಕೊಪ್ಪ ಭೌಗೋಳಿಕವಾಗಿ ಪುಟ್ಟ ಗ್ರಾಮ. ಆದರೆ, ಈ ಗ್ರಾಮದ ವ್ಯಾಪ್ತಿಗೆ ಸಾವಿರಾರು ಎಕರೆ ವ್ಯವಸಾಯದ ಪ್ರದೇಶವಿದೆ. ಮುದ್ದಿನಕೊಪ್ಪ ಗ್ರಾಮಸ್ಥರಷ್ಟೆ ಅಲ್ಲದೆ, ಸುತ್ತಮುತ್ತಲ ಗ್ರಾಮದ ಜನರೂ ಇಲ್ಲಿ ವ್ಯವಸಾಯ ಮಾಡುತ್ತಾರೆ. ಈ ಎಲ್ಲಾ ವ್ಯವಸಾಯದ ಪ್ರದೇಶಕ್ಕೆ ೩೩ ಕೆರೆಗಳೇ ಉಸಿರು. ಆದರೆ, ಇಂದಿನ ತಲೆಮಾರಿನ ಮಕ್ಕಳಿಗೆ, ತಮ್ಮ ಗ್ರಾಮದ ಈ ವೈಶಿಷ್ಠತೆಯ ಬಗ್ಗೆ ತಿಳಿದೇ ಇಲ್ಲ. ‘ನಿಮ್ಮೂರಲ್ಲಿ ಇಷ್ಟೊಂದು ಕೆರೆಗಳಿವೆ’ ಎಂಬ ಮಾತು ಕೇಳಿದರೆ ಹೌದಾ? ಎಂದು ಹೌಹಾರುತ್ತಾರೆ. ಗ್ರಾಮದ ಈ ವೈಭವ ನೋಡಿ ಮುದ್ದಿನಕೊಪ್ಪ ಎಂದು ನಾಮಕರಣ ಮಾಡಿದರು ಎಂದು ಗ್ರಾಮದ ಅಜ್ಜಿಯೊಬ್ಬರು ಈಗಲೂ ನೆನಪಿಸಿಕೊಳ್ಳುತ್ತಾರೆ. ನೀರಿನ ಅಭಾವವೆಂಬ ಕಠೋರ ವಾಸ್ತವ ನಮ್ಮೆದುರಿಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಕೆರೆಗಳು ನಮಗೆ ಪರಿಹಾರ ರೂಪದಲ್ಲಿವೆ. ನಮ್ಮ ಹಿರಿಯರು ನಮಗಾಗಿ ಕೊಟ್ಟ ಈ ಬಳುವಳಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಪ್ರಯತ್ನವಾಗಬೇಕಿದೆ.

mudinkoppa p1 copy-2

ಒಂದು ಹಳ್ಳಿಯಲ್ಲಿ ಹೆಚ್ಚೆಂದರೆ ಮೂರು-ನಾಲ್ಕು ಕೆರೆಗಳಿರಬಹುದು. ಆದರೆ ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲ್ಲೂಕಿನ ಸಾಗರ ರಸ್ತೆಯಲ್ಲಿರುವ ಮುದ್ದಿನಕೊಪ್ಪ ಗ್ರಾಮದಲ್ಲಿ ಒಂದಲ್ಲ ಎರಡಲ್ಲ – ಬರೋಬ್ಬರಿ ಮೂವತ್ತಮೂರು ಕೆರೆಗಳಿವೆ….! ಈ ಕೆರೆಗಳು ರೈತರಿಗೆ, ಮೀನುಗಾರರಿಗೆ, ಕುಂಬಾರರಿಗೆ, ಕುಶಲಕರ್ಮಿಗಳಿಗೆ, ಮಹಿಳೆಯರಿಗೆ ಮತ್ತು ಸುತ್ತಮುತ್ತಲ ಗ್ರಾಮಸ್ಥರಿಗೂ ಜೀವನಾಡಿಯಾಗಿದ್ದವು. ಇವರ ಬದುಕಿನೊಂದಿಗೆ ಬೆಸೆದುಕೊಂಡಿದ್ದವು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಈಗ ಈ ಎಲ್ಲಾ ಕೆರೆಗಳು ಕಾಲಗರ್ಭ ಸೇರುತ್ತಿವೆ.

 ಮುದ್ದಿನಕೊಪ್ಪದಲ್ಲಿ ಮೂವತ್ತಮೂರು ಕೆರೆಗಳಿರುವುದು ನಿಜವೇ…..? ಎಂಬ ಅನುಮಾನದೊಂದಿಗೆ ಗ್ರಾಮದ ರೈತರಾದ ರಾಜು, ಸ್ನೇಹಿತರಾದ ಪೂರ್ಣಪ್ರಜ್ಞ, ರಾಜು, ಅವರೊಂದಿಗೆ ಕೆರೆಗಳ ಹುಡುಕಾಟಕ್ಕೆ ತೊಡಗಿದೆವು. ಒಂದು ವಾರಗಳ ಕಾಲ ಮೂವತ್ತಮೂರು ಕೆರೆಗಳನ್ನು ಗುರುತಿಸಿದೆವು. ಏಷ್ಯಾ ಖಂಡದಲ್ಲೆ ಬಹುಶಃ ಬೇರೆಲ್ಲ ಇಷ್ಟೊಂದು ಕೆರೆಗಳಿರುವ ಹಳ್ಳಿಗಳು ಸಿಗಲಾರವು. ವಿಶಿಷ್ಟಗಳಲ್ಲಿ ವಿಶಿಷ್ಟ ಮುದ್ದಿನಕೊಪ್ಪದ ಈ ಮುತ್ತಿನ ಕೆರೆಗಳು.

ನಮ್ಮ ಹುಡುಕಾಟದಲ್ಲಿ ಈ ಎಲ್ಲಾ ಕೆರೆಗಳೂ ಜೀವಂತಿಕೆಯನ್ನು ಕಳೆದುಕೊಂಡಿದ್ದವು. ಇವುಗಳ ಆಯುಷ್ಯ ಮುಗಿದಿದೆಯೇ ಅನ್ನಿಸುತ್ತಿತ್ತು. ಈ ಕೆರೆಗಳು ಹೂಳಿನಿಂದ ತುಂಬಿದ್ದವು. ಪೋಷಕ ಕಾಲುವೆಗಳು ಮಾಯವಾಗಿದ್ದವು. ಕೆರೆ ಏರಿ, ಅಂಗಳ, ತೂಬು, ಕೋಡಿಗಳು ಹಾಳು ಬಿದ್ದಿದ್ದವು. ಒತ್ತುವರಿಯಂತಹ ನೂರಾರು ಸಮಸ್ಯೆಗಳು, ಜೊತೆಗೆ ಸಮುದಾಯದ ನಿರ್ಲಕ್ಷ್ಯದಿಂದಾಗಿ ಕೆರೆಗಳು ಈ ಸ್ಥಿತಿಗೆ ಬಂದಿದ್ದವು.

ಮೂವತ್ತಮೂರು ಕೆರೆಗಳ ಹೆಸರುಗಳು

1.     ವಡಕಟ್ಟೆ ಕೆರೆ 2.     ಚಿಕ್ಕ ಕೆರೆ 3.     ಜೋಗಿನ ಕೆರೆ 4.     ಗ್ರಾಮದೇವರ ಕೆರೆ
5.     ಡ್ರೈವರ್‌ಕಟ್ಟೆ ಕೆರೆ 6.     ಹುಲಿಕಟ್ಟೆ ಕೆರೆ 7.     ತಾವರೆ ಕೆರೆ 8.     ಕಲವತ್ತಣ್ಣನ ಕೆರೆ
9.     ದೊಡ್ಡ ಕೆರೆ 10.  ಬಳಸುವ ಕೆರೆ 11.  ಅಗಸನ ಕೆರೆ 12.  ದಾಸನಕಟ್ಟೆ ಕೆರೆ
13.  ಕರಿಯಪ್ಪನಕಟ್ಟೆ ಕೆರೆ 14.  ಕೊಳವಂಕನ ಕೆರೆ 15.  ಪಿಲುಗುಂಡಿ ಕೆರೆ 16.  ಗೂಬೇನ ಕೆರೆ
17.  ಗುಳ್ಳೆನ ಕೆರೆ 18.  ಗೌರಿ ಕೆರೆ 19.  ಹುಣಸೆಕಟ್ಟೆ ಕೆರೆ 20.  ಹೊಸಬಾಸಿನ ಕೆರೆ
21.  ಜಿಗಣಿಕಟ್ಟೆ ಕೆರೆ 22.  ಮುಳ್ಳು ಕೆರೆ 23.  ತೇಜೋರಾಮನ ಕೆರೆ 24.  ಹೆಬಿದ್ರಕಟ್ಟೆ ಕೆರೆ
25.  ಜಡೆ ನಿಂಗಣ್ಣನ ಕಟ್ಟೆ ಕೆರೆ 26.  ತೆಂಗಿನ ಕೆರೆ 27.  ವೀರಭದ್ರಪ್ಪನ ಕೆರೆ 28.  ಪೊಮಡಿಹಳ್ಳದ ಕೆರೆ
29.  ಡಾಕಡಹಳ್ಳಕಟ್ಟೆ ಕೆರೆ 30.  ದೇವಸ್ಥಾನದ ಕೆರೆ 31.  ಕವಲೆಕಟ್ಟೆ ಕೆರೆ 32.  ಬಸಕವಳೆಕಟ್ಟೆ ಕೆರೆ
33.  ಕುಪ್ಪನಕಟ್ಟೆ ಕೆರೆ

ವೈವಿಧ್ಯಮಯ ಕೆರೆಗಳು

ಮರಳುಕಟ್ಟೆಕೆರೆ, ಹುಣಸೆಕಟ್ಟೆಕೆರೆ, ಕವಲುಕಟ್ಟೆಕೆರೆ ಹೀಗೆ……. ಮೂವತ್ತ ಮೂರು ಕೆರೆಗಳ ಹೆಸರು ಆಕರ್ಷಣೀಯ. ಸಂಧರ್ಭಕ್ಕೆ ಅನುಗುಣವಾಗಿ ಈ ಕೆರೆಗಳಿಗೆ ನಾಮಕರಣ ಮಾಡಲಾಗಿದೆ. ಪ್ರತಿಯೊಂದು ಕೆರೆಯ ಹುಟ್ಟಿಗೂ ಒಂದೊಂದು ಇತಿಹಾಸವಿದೆ. ನಮ್ಮ ಪೂರ್ವಜರು ಈ ಕೆರೆಗಳನ್ನು ಒಂದೆಡೆ ಮಾತ್ರ ನಿರ್ಮಿಸದೆ, ಗ್ರಾಮದ ಅಷ್ಟ ದಿಕ್ಕುಗಳಲ್ಲಿಯೂ ಕೆರೆಗಳನ್ನು ನಿರ್ಮಾಣ ಮಾಡಿ ಬುದ್ದಿವಂತಿಕೆಯನ್ನು ಮೆರೆದಿದ್ದಾರೆ. ಕೆರೆಗಳು ರಚನೆಗೊಂಡ ಪರಿ, ತೂಬು, ಕೋಡಿ, ಏರಿಗಳ ವಿನ್ಯಾಸ ಇಂದಿನ ಇಂಜಿನಿಯರ್‌ಗಳನ್ನು ನಾಚಿಸುವಂತಿವೆ. ಪ್ರತಿ ಕೆರೆಗೂ ೧ ಎಕರೆಯಿಂದ ೪ ಎಕರೆ ಪ್ರದೇಶದಷ್ಟು ನೀರು ನಿಲ್ಲುವ ಕೆರೆಯಂಗಳವಿದ್ದು, ೩೦ ಎಕರೆಯಿಂದ ೮೦ ಎಕರೆಯ ಅಚ್ಚುಕಟ್ಟು ಪ್ರದೇಶವನ್ನು ಹೊಂದಿವೆ. ಮಂಡಿ ಬಸಪ್ಪನಗುಡ್ಡ, ಶಂಕರಗುಡ್ಡ, ಕುಂಚೇನಹಳ್ಳಿ ಗುಡ್ಡಗಳಿಂದ ಈ ಕೆರೆಗಳಿಗೆ ನೀರು ಹರಿದು ಬರುತ್ತದೆ. ಈ ಎಲ್ಲಾ ಕೆರೆಗಳೂ ಸರಣಿ ಕೆರೆಗಳಾಗಿದ್ದು, ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಎರೆಕೊಪ್ಪ, ಕೊನಗವಳ್ಳಿ, ಸಿದ್ದಾಪುರ, ಸೋಮಿನಕೊಪ್ಪ ಸೇರಿದಂತೆ, ಇನ್ನೂ ಹಲವು ಗ್ರಾಮದ ಕೆರೆಗಳಿಗೂ ಈ ಕೆರೆಗಳಿಂದಲೇ ನೀರು ಹರಿಯಬೇಕು.

ಕೆರೆಯ ಮಣ್ಣು ಮತ್ತು ನೀರಿನ ಗುಣಗಳು ಉತ್ತಮವಾಗಿವೆಯೆಂದು ತಜ್ಞರೇ ಹೇಳುತ್ತಾರೆ. ಈ ಕೆರೆ ಪ್ರದೇಶದಲ್ಲಿ ಸಾವಿರಾರು ರೀತಿಯ ಸಸ್ಯ ಪ್ರಬೇಧಗಳಿದ್ದು, ಹುಣಸೆ ಮರಗಳು ಕಣ್ಣು ಹಾಯಿಸಿದಷ್ಟು ಕಾಣಸಿಗುತ್ತವೆ. ಮೀನುಗಾರಿಕೆ, ಹೈನುಗಾರಿಕೆ, ಕುಂಬಾರಿಕೆ ಇನ್ನಿತರ ಕುಲ ಕಸುಬುದಾರರಿಗೆ ಸಂಪನ್ಮೂಲದ ಕಣಜ ಈ ಕೆರೆಗಳು.

ಕೆರೆಗಳ ಹುಡುಕಾಟದಲ್ಲಿ ನಮ್ಮ ಜೊತೆಗಿದ್ದ ಮತ್ತೊಬ್ಬ ರೈತ ಮುನಿಸ್ವಾಮಿ ಮುದ್ದಿನಕೊಪ್ಪದ ಮೂವತ್ತಮೂರು ಕೆರೆಗಳ ಹಿಂದಿನ ಸಂಭ್ರಮವನ್ನು ಮೆಲುಕು ಹಾಕುತ್ತಾ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದರು.

ಅಂದು…..

ಹಲವು ದಶಕಗಳ ಹಿಂದೆ ಊರಿನಲ್ಲಿ ಬೇಸಾಯದ್ದೆ ಕಾರುಬಾರು. ಎಲ್ಲೆಲ್ಲೂ ರಾಗಿಹೊಲ, ಭತ್ತದ ಗದ್ದೆ, ತರಕಾರಿ ಮಡಿಗಳು ಜೊತೆಗೆ ಹಣ್ಣಿನ ತೋಟಗಳು, ಬೆಟ್ಟಗುಡ್ಡಗಳು ಹಸಿರು ಹೊದಿಕೆಯಿಂದ ಮುದ್ದಿನಕೊಪ್ಪ ಗ್ರಾಮ ಕಂಗೊಳಿಸುತ್ತಿತ್ತು. ಇದಕ್ಕೆ ಕಾರಣ ಮೂವತ್ತಮೂರು ಕೆರೆಗಳು ಮೈದುಂಬಿಕೊಳ್ಳುತ್ತಿದ್ದವು.

 ಕೆರೆ ನೀರಲ್ಲಿ ಸಾವಿರಾರು ತರಹದ ಕಪ್ಪೆ, ಏಡಿ, ಮೀನು, ನೀರ ಹಾವು ನಳ್ಳಿಯಂತ ಜಲಚರಗಳು ಇರುತ್ತಿದ್ದವು. ಇಂಥ ಜಲಚರಗಳನ್ನು ತಿನ್ನೋಕೆ ಹತ್ತಾರು ಪಕ್ಷಿಗಳು ಬರುತ್ತಿದ್ದವು. ಬಾತುಕೋಳಿ, ನೀರುಕೋಳಿ, ನೀರಕಾಗೆ, ಬೆಳ್ಳಕ್ಕಿ, ಮಿಂಚುಳ್ಳಿ, ಗೀಜಗದಂತ ಪಕ್ಷಿಗಳು ಬರುತ್ತಿದ್ದವು. ಹೀಗೆ ಬಂದ ಪಕ್ಷಿಗಳು ಬೆಳೆಗಳಿಗೆ ಬೀಳೋ ಹುಳ-ಹುಪ್ಪಟೆಗಳನ್ನು ತಿನ್ನುತ್ತಿದ್ದವು. ಆಗ ಗದ್ದೆ ಬಯಲಲ್ಲಿ ಯಾವುದೇ ತರಹದ ಕೀಟಬಾಧೆ ಇರುತ್ತಿರಲಿಲ್ಲ. ಫಸಲು ಕೂಡಾ ಜಾಸ್ತಿಯಾಗುತ್ತಿತ್ತು, ಎಂದು ಮಾತು ಮುಂದುವರಿಸಿದರು.

ಪ್ರತಿ ಸೋಮವಾರ, ಮನೆಗೊಬ್ಬರಂತೆ ಬಂದು ಕೆರೆಯ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು, ಕೆರೆಯ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುತ್ತಿದ್ದರು. ಕೆರೆಯಂಗಳದಲ್ಲಿ ಹೂಳು, ಗಿಡಗಂಟೆ ತೆಗೆದು ಶ್ರಮದಾನ ಮಾಡುತ್ತಿದ್ದರು. ಕೆರೆಯನ್ನು ನಂಬಿಕೊಂಡು ಹಲವು ಕುಟುಂಬಗಳು ಬದುಕು ಸಾಗಿಸುತ್ತಿದ್ದವು. ಆದ್ದರಿಂದ ಕೆರೆ ಇವರ ಪಾಲಿಗೆ ದೈವೀಸ್ವರೂಪವಾಗಿತ್ತು.

ಇಂದು……

mudinakoppa p2 copy-1

ಹುಲಿಕಟ್ಟೆ ಕೆರೆಯಲ್ಲಿ ಈಗ ಉಳಿದಿರುವುದು ಬೊಗಸೆ ನೀರು ಮಾತ್ರ

ಇಂದು ಮುದ್ದಿನಕೊಪ್ಪದ ಮೂವತ್ತಮೂರು ಕೆರೆಗಳ ಸ್ಥಿತಿಯೂ ಶೋಚನೀಯವಾಗಿದೆ. ಜನ-ಜಾನುವಾರುಗಳಿಗೂ ಕುಡಿಯುವ ನೀರಿಗೂ ಕುತ್ತು ಬಂದಿದೆ. ಕೆರೆಗೆ ನೀರು ಬರುವ ಹಾದಿಗಳೆಲ್ಲಾ ಮುಚ್ಚಿ ಹೋಗಿವೆ. ಕೆರೆಯಂಗಳ ಹೂಳಿನಿಂದ ತುಂಬಿ ಹೋಗಿವೆ. ತೂಬು, ಕೋಡಿ, ಅಚ್ಚುಕಟ್ಟು ಕಾಲುವೆಗಳ ಅವಶೇಷಗಳು ಮಾತ್ರ ಉಳಿದಿವೆ.

 ಹಲವು ದಶಕಗಳ ಹಿಂದೆ ಸಮುದಾಯಕ್ಕಿದ್ದ ಆಸಕ್ತಿ ಇಂದಿಲ್ಲ. ಜಲಾನಯನ, ಅಚ್ಚುಕಟ್ಟು ಪ್ರದೇಶದ ಬಾವಿ, ಬೋರ್‌ವೆಲ್‌ಗಳು ಒಣಗಿವೆ. ಜಲ ಸಂವರ್ಧನೆ ಯೋಜನೆಯಿಂದ ಚಿಕ್ಕಕೆರೆ, ಕಲವತ್ತಣ್ಣನ ಕೆರೆಗಳು ಅಭಿವೃದ್ಧಿಗೊಂಡಿದ್ದು ಬಿಟ್ಟರೆ, ಇನ್ನುಳಿದ ಕೆರೆಗಳು ಇತ್ತ ಸಮುದಾಯಕ್ಕೂ ಬೇಡ, ಸರ್ಕಾರಕ್ಕೂ ಬೇಡವಾಗಿವೆ.

ಸಂಪತ್ತಿನ ಕಣಜ ಈ ಕೆರೆಗಳು

ಈ ಮೂವತ್ತಮೂರು ಕೆರೆಗಳು ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿವೆ. ಇದರಿಂದ ನೀರನ್ನು ಮಿತ ಬಳಕೆ ಮಾಡಿ ವರ್ಷಕ್ಕೆ ಎರಡು ಬೆಳೆಗಳನ್ನು ತೆಗೆಯಬಹುದು. ಇದರಿಂದ ಹಲವು ರೈತ ಕುಟುಂಬಗಳು ಬದುಕುತ್ತವೆ. ಮೀನುಗಾರಿಕೆಗೆ ಈ ಕೆರೆಗಳು ಅತ್ಯಂತ ಯೋಗ್ಯವಾಗಿವೆ. ಕೆರೆಯಲ್ಲಿ ನೀರು ಸಂಗ್ರಹಗೊಂಡು, ಮೀನುಗಾರಿಕೆಯಿಂದ ಹೆಚ್ಚಿನ ಆದಾಯ ಮಾಡಬಹುದು. ಇದರಿಂದ ಬಂದ ಹಣದಿಂದಲೇ ಈ ಕೆರೆಗಳ ಮುಂದಿನ ನಿರ್ವಹಣೆ ಮಾಡಿಕೊಳ್ಳಬಹುದು. ಕೆರೆಯಲ್ಲಿ ಸಿಗಬಹುದಾದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ವಿವಿಧ ರೀತಿಯಾದ ಆದಾಯೋತ್ಪನ್ನ ಚಟುವಟಿಕೆಗಳನ್ನು ಮಾಡಬಹುದು. ಕೆರೆಯಲ್ಲಿ ಸಿಗುವ ಜೊಂಡು ಹುಲ್ಲಿನಿಂದ ಪೊರಕೆಗಳ ತಯಾರಿಕೆ, ಬಿದಿರಿನಿಂದ ಕರಕುಶಲ ವಸ್ತುಗಳ ತಯಾರಿಕೆ, ದಿನನಿತ್ಯ ಚಟುವಟಿಕೆಗಳಿಗೆ ಬೇಕಾಗುವ ಬುಟ್ಟಿ, ಮರಗಳಂತ ವಸ್ತುಗಳ ತಯಾರಿಕೆ, ಕುಂಬಾರಿಕೆ, ಇಟ್ಟಂಗಿಬಟ್ಟಿ, ಕೆರೆಯಲ್ಲಿ ಸಿಗುವ ಮೇವುಗಳಿಂದ ಹೈನುಗಾರಿಕೆ ಮಾಡಬಹುದು. ಕೆರೆಯಂಗಳಗಳಲ್ಲಿ ಬೇಸಿಗೆ ಬೆಳೆಗಳನ್ನು ಬೆಳೆದುಕೊಳ್ಳುವುದು, ಹೂಳಿನ ಸದ್ಬಳಕೆ, ಅವಶ್ಯಕವಿರುವ ಈ ಎಲ್ಲಾ ಸಂಪನ್ಮೂಲಗಳೂ ಅಂಗೈಲಿ ಇರುವುದರಿಂದ, ಈ ಮೂವತ್ತಮೂರು ಕೆರೆಗಳು ಗ್ರಾಮಕ್ಕೆ ಕಾಮಧೇನುವಿದ್ದಂತೆ. ಆದರೆ ತುರ್ತಾಗಿ ಈ ಕೆರೆಗಳಿಗೆ ಮರುಜೀವ ನೀಡಬೇಕಿದೆ.

ಕೆರೆಗಳನ್ನು ಉಳಿಸಿ ಕಾಪಾಡಿಕೊಳ್ಳಬೇಕು. ಈ ಬಗ್ಗೆ ಗ್ರಾಮಸ್ಥರು ಜಾಗೃತರಾಗಬೇಕು, ಮಲೆನಾಡಿನ ಪ್ರದೇಶಗಳಲ್ಲಿ ಈಗಾಗಲೇ ಅಂತರ್ಜಲ ನೆಲಕಚ್ಚಿದೆ. ಹೊಸದಾಗಿ ಕೆರೆ ಕಟ್ಟುವುದು ಅಸಾಧ್ಯವಾದ ಮಾತು. ಆದರೆ ಗ್ರಾಮದಲ್ಲಿರುವ ಬರೋಬ್ಬರಿ ಮೂವತ್ತಮೂರು ಕೆರೆಗಳಿಗೆ ಮರುಜೀವ ನೀಡಿದರೆ ರೈತರು, ಕುಲ ಕಸುಬು ಮಾಡುವವರ ಬದುಕು ಮರು ಸೃಷ್ಠಿಯಾಗುತ್ತದೆ. ವಿಶಿಷ್ಟತೆಯನ್ನು ಹೊಂದಿರುವ ಈ ಮೂವತ್ತಮೂರು ಕೆರೆಗಳ ಸೊಬಗು ಮತ್ತೆ ಮರುಕಳಿಸುತ್ತದೆ.

 ಚಿತ್ರ -ಲೇಖನ

ಸೋ.ಸೋ. ಮೋಹನ್ ಕುಮಾರ್

Share on FacebookTweet about this on TwitterShare on LinkedIn