ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಬಟ್ಟೆ ಬರೆಗೆ ಶುಭ್ರ ಕಾಂತಿ, ಕೆರೆಗಳಲ್ಲಿ ಹಸಿರು ಕ್ರಾಂತಿ!

ಸಸ್ಯಗಳು ಚೆನ್ನಾಗಿ ಬೆಳೆಯಲು ಮಣ್ಣಿನಲ್ಲಿ ರಂಜಕ ಇರಬೇಕು; ಇದೇ ರಂಜಕವೇ ನಾವು ನಿತ್ಯ ಬಳಸುವ ಸಾಬೂನು, ಡಿಟರ್ಜಂಟ್ಗಳಲ್ಲಿ ಅವಿತಿದ್ದು, ಅದು ಕೆರೆಗಳಲ್ಲಿ ಕಳೆ ಸಸ್ಯವನ್ನು ಪೋಷಿಸುತ್ತ, ಕೃಷಿಗೂ ನೀರಿಲ್ಲದಂತೆ ಮಾಡುತ್ತಿದೆ. ಒಂದೊಮ್ಮೆ ಕೃಷಿಗೆ ಉಪಕಾರಿಯಾಗಿದ್ದ ರಂಜಕ ಈಗ ಅಪಾಯಕಾರಿ..!?  ಹರ್ಷವರ್ಧನ ವಿ. ಶೀಲವಂತರವರ ಲೇಖನ.

ಹಿಂದೊಮ್ಮೆ ನವಿಲುಗಳ ನಾಡಾಗಿದ್ದರಿಂದ ಅದು ‘ನವಿಲೂರು’.. ಆ ಊರಿನ ಕೆರೆಗೆ ಒಂದೊಮ್ಮೆ ಇಟ್ಟಿದ್ದ ಹೆಸರು ‘ತಾವರೆಕೆರೆ’. ಸದ್ಯ ಅದು ‘ಐಕಾರ್ನಿಯ ಕಳೆ’ಯ ಕೆರೆ! ಒಟ್ಟು ಇಲ್ಲಿ ‘ಹಸಿರು ಕ್ರಾಂತಿ’!

ಧಾರವಾಡದಿಂದ ಹುಬ್ಬಳ್ಳಿಗೆ ಹೋಗುವ ರಸ್ತೆಯ ಮೇಲೆ ಕೇವಲ ೭ ಕಿ.ಮೀ. ದೂರದಲ್ಲಿ ಎಡಬದಿಗೆ ರಾಷ್ಟ್ರೀಯ ಹೆದ್ದಾರಿ ಪಕ್ಕವೇ, ನವಿಲೂರು ಊರಿಗೆ ಹೋಗುವ ಕೂಡು ರಸ್ತೆಗೆ ಗಟಾರು ಪಕ್ಕವೇ ಸಣ್ಣ ನೀರಾವರಿ ಇಲಾಖೆ ಫಲಕವಿದೆ. ಜಲಾನಯನ ಅಭಿವೃದ್ಧಿ ಯೋಜನೆ ಅಡಿ ಸಣ್ಣ ನೀರಾವರಿ ಇಲಾಖೆ ಸುಪರ್ದಿಗೆ ಈ ಕೆರೆ ಇದೆ ಎಂದು ಫಲP ಹೇಳುತ್ತದೆ. ಸುಮಾರು ೮೫ ಲಕ್ಷದ ರೂಪಾಯಿ ಖರ್ಚಿಸಿ ಮಾಜಿ ಶಾಸಕ ಚಂದ್ರಕಾಂv ಬೆಲ್ಲದ ಅವರು ಕೆರೆಯನ್ನು ಪುನರುಜ್ಜೀವಿತ ಗೊಳಿಸಿ, ಒಳನಾಡು ಮೀನುಗಾರಿಕೆಗೆ ಅನುವು ಮಾಡಿಕೊಟ್ಟಿದ್ದರಂತೆ. ಈಗ ಅದಾವ ಕುರುಹೂ ಇಲ್ಲಿಲ್ಲ. ಮೇಲಾಗಿ, ಯಾಲಕ್ಕಿಶೆಟ್ಟರ್ ಕಾಲೋನಿ, ಕೆಇಬಿ ಹೌಸಿಂಗ್ ಸೊಸಾಯಿಟಿ, ನವಿಲೂರು, ನವಿಲೂರು ಅಗಸಿ, ಹೊಸಯಲ್ಲಾಪುರದ ಹಿಂಭಾಗ.. ಹೀಗೆ ಎಲ್ಲ ದಿಕ್ಕುಗಳಿಂದ ಹರಿದು ಬರುವ ಮಲಿನ ನೀರನ್ನು ನೇರವಾಗಿ ಪೈಪ್‌ಗಳ ಮೂಲಕ ಕೆರೆಗೆ ಜೋಡಿಸಲಾಗಿದೆ!

ಕೆರೆಯ ಪಕ್ಕದಲ್ಲಿ ನಿವೇಶನಗಳಾಗದೇ ಅಳಿದುಳಿದ ಹೊಲಗಳಲ್ಲಿ ಹಸಿರು ಕ್ರಾಂತಿ ಜೂನ್ ತಿಂಗಳ ಮಳೆಗಾಲದಲ್ಲಿ ಆರಂಭಗೊಂಡು, ನವೆಂಬರ್ ಒಳಗೆ ಕೊನೆಗೊಳ್ಳುತ್ತದೆ. ಆಮೇಲೆ ನವಿಲೂರು ಕೆರೆಯಲ್ಲಿ ಹಸಿರು ನಳನಳಿಸುತ್ತದೆ. ಈ ಋತುಮಾನ ವ್ಯತ್ಯಾಸ ಹೊರತುಪಡಿಸಿ, ಎರಡೂ ಬಗೆಯ ಹಸಿರು ಕ್ರಾಂತಿಗೆ ಸಾರಜನಕ ಮತ್ತು ರಂಜಕಗಳೇ ಅಪ್ಪ-ಅಮ್ಮ.

 ‘ಎನ್-ಪಿ-ಕೆತ್ರಿವೇಣಿ ಸಂಗಮ

ಸಂಪೂರ್ಣವಾಗಿ ಕಲುಷಿತವಾದ ಕೆರೆಯ ನೀರು

ಮೈ ಕೊಳೆ ತೊಳೆಯಲು, ಬಟ್ಟೆ ಒಗೆಯಲು, ಪಾತ್ರೆ ತಿಕ್ಕಲು ಬಳಸುವ ಸೋಪ್ ಮತ್ತು ಡಿಟರ್ಜಂಟ್‌ಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ, ರಂಜಕ (ಫಾಸ್ಪರಸ್ -ಪಿ) ಇದೆ. ಇದು ಕೆರೆಯ ಒಡಲು ಸೇರಿದರೆ ಕಳೆ ಸಸ್ಯಗಳಿಗೆ ಪ್ರೊಟೀನ್ ಒದಗಿಸಿದಂತೆ! ಒಂದರ್ಥದಲ್ಲಿ ಹುಲುಸಾದ ರಸಗೊಬ್ಬರ. ಜೊತೆಗೆ ನಮ್ಮ ಪಾಯಖಾನೆ ತ್ಯಾಜ್ಯ, ಗಟಾರು ನೀರು, ಆಕಳು-ಎಮ್ಮೆಗಳ ಗಂಜಲು ಸಾರಜನಕವನ್ನೂ ಸೇರಿಸಿ, ಅಲ್ಲಲ್ಲಿ ಗುಡ್ಡೆಗಟ್ಟಲೆ ಬಿಸಾಕಿದ ಬೂದಿ ರಾಶಿಯಿಂದ ಪೊಟ್ಯಾಷ್ ಸೇರಿಕೊಂಡು ‘ಎನ್-ಪಿ-ಕೆ’ ತ್ರಿವೇಣಿ ಸಂಗಮವೇ ನವಿಲೂರು ಕೆರೆಯನ್ನು ಗಬ್ಬೆಬ್ಬಿಸಿದೆ. ಹಯಾಸಿಂಥ್ ಸಸ್ಯ ಇಡೀ ಕೆರೆಯನ್ನೇ ಆಪೋಷಿಸಲು ಹೊಂಚು ಹಾಕಿದೆ.

ಈ ಸಸ್ಯ ಕೆರೆಯ ನಾಲ್ಕೂ ಬದಿಯಲ್ಲಿ ಶುದ್ಧ ನೀರನ್ನೆಲ್ಲ ನುಂಗಿ, ತೇಲು ಬೇರುಗಳ ಏಕಾಣುಜೀವಿಗಳ ಮೂಲಕ ಮೀಥೇನ್ ಹೊಮ್ಮಿಸುತ್ತ ನೀರಿನಲ್ಲಿನ ಆಮ್ಲಜನಕವನ್ನು ಪೂರ್ತಿ ನಾಶ ಪಡಿಸಿ, ಜಲಚರಗಳನ್ನೆಲ್ಲ ಕೊಂದು, ನಾನಾ ಬಗೆಯ ಸೊಳ್ಳೆ, ಕ್ರಿಮಿ ಕೀಟಗಳಿಗೆ ಆಶ್ರಯ ನೀಡುತ್ತ ಇಡೀ ಜಲಮೂಲವನ್ನೇ ಗಬ್ಬೆಬ್ಬಿಸಿದೆ. ಸದ್ಯ, ನವಿಲೂರು ಕೆರೆಯ ನಾಲ್ಕೂ ಬದಿಗಳು ಬಯಲು ಶೌಚದ ಕೂಪಗಳು.

ರಂಜಕವೇ ಕೆರೆ ಕಳೆಗಳಿಗೆ ರಸಗೊಬ್ಬರ

ಸಾಬೂನಿನಲ್ಲಿರುವ ರಂಜಕವೇ ಕೆರೆ ಕಳೆಗಳಿಗೆ ರಸಗೊಬ್ಬರ ಎಂದು ಸುಮಾರು ೬ ದಶಕಗಳ ಹಿಂದೆ ಕೆನಡಾ ಸರ್ಕಾರ (೧೯೬೦) ಕಂಡುಕೊಂಡಿದೆ. ಮಾತ್ರವಲ್ಲ, ಎಲ್ಲ ಸಾಬೂನುಗಲ್ಲೂ ರಂಜಕವನ್ನು ಕಡಿಮೆ ಮಾಡಿಸಿತು. ಅಮೆರಿಕೆಯಲ್ಲೂ (೧೯೮೦) ಈ ಪ್ರಯತ್ನ ನಡೆದಿತ್ತು. ಆದರೆ, ಸಾಬೂನು ತಯಾರಿಕೆ ಉದ್ಯಮಿಗಳೆಲ್ಲ ಒಟ್ಟಾಗಿ ಸೇರಿ ಸರ್ಕಾರದ ದಾರಿ ತಪ್ಪಿಸಲು ಏನೆಲ್ಲ ಕುತಂತ್ರ ಹೂಡಿದವು. ‘ಮನುಷ್ಯರ ತ್ಯಾಜ್ಯದಿಂದ ಬರುವ ಸಾರಜನಕವೇ ಕೆರೆಗಳ ಉಸಿರುಗಟ್ಟಿಸುತ್ತದೆ’ ಎಂದು ವಾದಿಸಿದರು. ‘ಚರಂಡಿ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸದ ಯಂತ್ರಗಳದ್ದೇ ತಪ್ಪಿದೆ’ ಎಂದರು. ‘ರಂಜಕಯುಕ್ತ ಸಾಬೂನಿಗೆ ನಿಷೇಧ ಹೇರಿದರೆ ಉದ್ಯಮ ಸ್ವಾತಂತ್ರ್ಯಕ್ಕೆ ಭಂಗ’ ಎಂದು ಮುನಿಸಿಪಾಲಿಟಿಗಳ ವಿರುದ್ಧ ದಾವೆ ಹೂಡಿದವು.

ಆದರೆ, ಜನರ ಒತ್ತಾಯದಿಂದ, ಡಿಟರ್ಜಂಟ್ ಬಿಲ್ಲೆ ಮತ್ತು ಪುಡಿಗಳಲ್ಲಿ ರಂಜಕದ ಬಳಕೆಯನ್ನು ಶೇ.೧೦ಕ್ಕೆ ಇಳಿಸಬೇಕೆಂದು ರಾಷ್ಟ್ರಮಟ್ಟದಲ್ಲಿ ಕಾನೂನು ಜಾರಿಗೆ ಬಂತು. ಕೆಲ ರಾಜ್ಯಗಳಲ್ಲಿ ಸಾಬೂನಿನಲ್ಲಿ ರಂಜಕದ ಲವಲೇಶವೂ ಇರುವಂತಿಲ್ಲ ಎಂದು ಕಟ್ಟಿನಿಟ್ಟಿನ ಆದೇಶ ಹೊರಟಿತು. ಅಲ್ಲಿ ಬಳಸಲಾಗುವ ಸಾಬೂನಿನ ರಕ್ಷಾಪುಟದ ಮೇಲೆ ರಂಜಕ ಪಿ- ಸೊನ್ನೆ ಎಂದು ನಮೂದಿಸಲೇಬೇಕು. ಇತರ ಕಡೆ ಸಾಬೂನಿಲ್ಲಿ ರಂಜಕ -ಪಿದ ಪ್ರಮಾಣವೆಷ್ಟು? ಎಂಬುದನ್ನು ನಮೂದಿಸಿ ಮಾರುವುದು ಕಡ್ಡಾಯಗೊಳಿಸಲಾಯಿತು. ಚರಂಡಿ ನೀರಿನಿಂದ ರಂಜಕವನ್ನು ಬೇರ್ಪಡಿಸಿ ಕೆರೆಗೆ ನೀಡುವ ಯಂತ್ರೋಕರಣ ಸ್ಥಾಪನೆ ಜಾರಿಗೆ ಬಂತು. ನಗರದ ಕೆರೆಗಳು ಉಸಿರಾಡುವಂತಾಯಿತು.

ಶೇ.೧೮ ರಿಂದ ೨೫ರ ನಡುವೆ ರಂಜಕ!

NOW NAVALURU TANK WITH SEWAGE WATER  AND BUFFELLO

ಒಳಚರಂಣಡಿ ನೀರು ತುಂಬಿದ ಕೆರೆಯಲ್ಲಿ ನಿಂತಿರುವ ಎಮ್ಮೆ

ಧಾರವಾಡದ ಅಂಗಡಿಗಳಲ್ಲಿ ಸಿಗುವ ನಾನಾ ಬಗೆಯ ಡಿಟರ್ಜಂಟ್‌ಗಳಲ್ಲಿ ರಂಜಕ ಇದೆಯೇ? ಇಲ್ಲವೋ? ಗೊತ್ತೇ ಆಗುವುದಿಲ್ಲ. ೨೦೦೭ರಲ್ಲಿ ಮೈಸೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಡಾ. ಮಹದೇವಪ್ಪ ಹಾಗೂ ಅವರ ವಿದ್ಯಾರ್ಥಿಗಳು, ಜನಪ್ರಿಯ ಸಾಬೂನು ಪುಡಿಯ ಮೂರು ಪ್ರತಿಷ್ಟಿತ ಬ್ರ್ಯಾಂಡ್‌ಗಳನ್ನು ಪರೀಕ್ಷಿಸಿ, ಅವುಗಳಲ್ಲಿ ಶೇ.೧೮ ರಿಂದ ೨೫ರ ನಡುವೆ ರಂಜಕವಿರುವುದನ್ನು ಪತ್ತೆ ಮಾಡಿದರು. ಇಷ್ಟು ಭಾರೀ ಪ್ರಮಾಣದ ರಂಜಕ ಸಾಬೂನಿಲ್ಲಿದ್ದರೆ ಊರಿನ ಕೆರೆಯನ್ನು ಬತ್ತಿಸಲು ಎರಡೇ ಲಾಂಡ್ರಿಗಳು ಸಾಕು!

ನಮ್ಮಂಥ ಶ್ರೀಸಾಮಾನ್ಯರು ಡಿಟರ್ಜಂಟ್ ಉದ್ಯಮಗಳ ಲಾಭ ಗಳಿಕೆಗೆ ನೆರವಾಗುತ್ತ, ಒಂದಾದ ಮೇಲೊಂದರಂತೆ ಊರಿನ ಕೆರೆಗಳನ್ನು ಮುಗಿಸುತ್ತ ಹೋಗುವುದೋ? ಅಥವಾ ವಿಶ್ವ ಬ್ಯಾಂಕಿನ ಸಾಲ ಪಡೆದು ಡ್ರೆಜರ್ ಯಂತ್ರಗಳಿಂದ ಕಳೆ ತೆಗೆಯಬಯಸುವ ಗುತ್ತಿಗೆದಾರರಿಗೆ ಲಾಭಾಂಶವನ್ನು ಹೆಚ್ಚಿಸುತ್ತ ಹೋಗೋಣವೇ? ಅಥವಾ ಕೆರೆಯ ಅಂಗಳದಲ್ಲಿ ಇಟ್ಟಂಗಿ ಭಟ್ಟಿಯನ್ನೆತ್ತಿ ಲಾಭ ಮಾಡಿಕೊಳ್ಳ ಬಯಸುವವರಿಗೆ ಹೂಂ.. ಎನ್ನೋಣವೇ? ಅಥವಾ ಕೆರೆಯನ್ನೇ ನುಂಗಿ ರಿಯಲ್ ಎಸ್ಟೇಟ್ ದಂಧೆ ಮಾಡಬಯಸುವ ನಿವೇಶನ ಹಪಾಹಪಿಗಳಿಗೆ ಜೈ ಎನ್ನೋಣವೇ? ಎಂಬುದನ್ನು ನಿರ್ಧರಿಸಲು ಇದು ಸಕಾಲ.

ವಿದೇಶಗಳಲ್ಲಿ ಖಾಲಿ ಬ್ಯಾಟರಿ ಸೆಲ್‌ಗಳನ್ನೂ, ಉರಿದ ಬಲ್ಬ್‌ಗಳನ್ನೂ ತಯಾರಕರೇ ವಾಪಸ್ ಪಡೆಯಬೇಕೆಂದು ನಿಯಮವಿದೆ. ನಮ್ಮಲ್ಲೂ ಹಾಗೇ ಮಾಡಬೇಕು. ಡಿಟರ್ಜಂಟ್ ತಯಾರಕರೇ ಕೆರೆಯ ಜೊಂಡು ಕಳೆಯನ್ನು ಸ್ವಚ್ಛಗೊಳಿಸಬೇಕು.. ಅಥವಾ ಕಳೆಯನ್ನು ತಮ್ಮ ಫ್ಯಾಕ್ಟರಿಗೆ ಸಾಗಿಸಿಕೊಂಡು ‘ರಿಯೂಸ್’, ‘ರಿಚಾರ್ಜ್’ ಅಥವಾ ‘ರಿ ಸೈಕಲ್’ ಮಾಡಿಕೊಳ್ಳಲಿ. ಆಗ, ರಂಜಕವಿರದ ಸೋಪು ತಯಾರಿಸುವ ಅನಿವಾರ್ಯತೆ ಅವರಿಗೆ ಮನವರಿಕೆಯಾದೀತು.. ಖರೀದಿಸುವಾಗಲೂ ನಾವು ರಂಜಕ ಇರz ಸೋಪುಗಳಿಗೆ ಆದ್ಯತೆ ನೀಡೋಣ.

- ಪಂ. ಮುಂಜಿ. ಗಿನ್ನೀಸ್ ದಾಖಲಿತ ಪರಿಸರವಾದಿ.

ನಾವು, ನಮ್ಮ ಬಟ್ಟೆ, ನಮ್ಮ ವಾಹನಗಳನ್ನು ಶುದ್ಧವಾಗಿಟ್ಟುಕೊಳ್ಳಲು ನಾವು ನಮ್ಮ ಸುತ್ತಲಿನ ಪರಿಸರಕ್ಕೆ ಏನೆಲ್ಲ ರಾಡಿ ಎರಚುತ್ತಿದ್ದೇವೆ. ೪೦ಕ್ಕೂ ಹೆಚ್ಚು ಪ್ರಜಾತಿಯ ವಲಸೆ ಹಕ್ಕಿಗಳು ಬಂದಿಳಿಯುತ್ತಿದ್ದ ನವಿಲೂರು ಕೆರೆಯ ತರಿಭೂಮಿ ಕೊಚ್ಚೆ ರಾಡಿಯಂತಾಗಿರುವುದೇ ಇದಕ್ಕೆ ಸಾಕ್ಷಿ. ಪೇಂಟೆಡ್ ಸ್ಟಾರ್ಕ್, ಸ್ಪೂನ್ ಬಿಲ್, ಪೆಲಿಕಾನ್, ಪಿನ್ ಟೇಲ್ ಡಕ್, ಸ್ಪಾಟ್ ಬಿಲ್ಡ್ ಡಕ್ .. ಹೀಗೆ. ನಮಗಿಂತ ಮೊದಲೇ ಈ ಭೂಮಿಗೆ ಬಂದ ಅನೇಕ ಜೀವಿಗಳು ತಮ್ಮ ಪರಿಸರವನ್ನು ಹೇಗೆ ಶುಚಿಯಾಗಿಟ್ಟುಕೊಳ್ಳುತ್ತವೆ? ಪರಿಸರ ಸ್ನೇಹಿ ಬದುಕು ಅವುಗಳಿಗೆ ಕಲಿಸಿದವರಾರು? ನಮ್ಮಂಥ ವಿಚಾರವಂತರಿಗೆ ಅವು ಬುದ್ಧಿ ಹೇಳುವಂತಾಗಿದೆ ನಮ್ಮ ನಡೆ.

-  ಪ್ರೊ. ಗಂಗಾಧರ ಕಲ್ಲೂರ, ವನ್ಯಜೀವಿಗಳ ಗೌರವ ಕ್ಷೇಮ ಪಾಲಕ, ಧಾರವಾಡ ಜಿಲ್ಲೆ

ಕಮಲದ ಪತ್ರ ತೀರಾ ನುಣುಪಾಗಿರುವುದರಿಂದ ನೀರು, ಧೂಳು ಎಲ್ಲ ಜಾರಿ ಹೋಗುತ್ತದೆ ಎಂಬುದು ನಮ್ಮ ಅನಿಸಿಕೆ. ಜರ್ಮನಿಯ ಸಸ್ಯ ವಿಜ್ಞಾನಿಗಳು ಕಮಲದ ಎಲೆಗಳನ್ನು ಸೂಕ್ಷ್ಮ ದರ್ಶಕದ ಮೇಲಿಟ್ಟು ನೋಡಿ, ಆಶ್ಚರ್ಯಗೊಂಡರು. ಎಲೆಗಳ ಮೇಲ್ಮೈ ನುಣುಪಾಗಿರುವ ಬದಲು ಅಲ್ಲಿ ಮೊಳೆ ಮಣೆಯಂತೆ ಚೂಪು ಗುಡ್ಡ, ಆಳ ಕಣಿವೆಗಳೇ ನಿಬಿಡವಾಗಿವೆ. ಧೂಳಿನ ಕಣಗಳು ಚೂಪುಗುಡ್ಡದ ತುದಿಯ ಮೇಲೆ ನಿಂತರೆ, ನೀರಿನ ಹನಿ ಉದುರಿದಾಗ ಚಪ್ಪಟೆಯಾಗುವ ಬದಲು, ಚಂಡಿನಂತೆ ಚೂಪುಗುಡ್ಡದಿಂದ ಚೂಪುಗುಡ್ಡಕ್ಕೆ ದಾಟುತ್ತ ಧೂಲಿನ ಕಣಗಳನ್ನು ಉರುಳಿಸಿಕೊಂಡು ಸಾಗುತ್ತವೆ. ಅದೇ ತತ್ವದ ಮೇಲೆ ಈಗ ನ್ಯಾನೋ ಪೇಂಟ್‌ಗಳು ರೂಪುಗೊಂಡಿವೆ. ಗೋಡೆಗೆ, ಕಾರಿಗೆ ಅದನ್ನೇ ಬಳಿಯಲಾಗುತ್ತಿದೆ. ಈಗ ಇದ್ದುಳ್ಳವರಿಗೆ Pಮಲದ ಎಲೆಯಂಥ ಬಟ್ಟೆಗಳೂ ಬರಬಹುದು.. ಆದರೆ ನವಿಲೂರು ಕೆರೆ ಎಂಬ ತಾವರೆಕೆರೆಗೆ ಆ ಬಟ್ಟೆ ಹೊದಿಸುವವರಾರು?

 - ಪ್ರೊ. ಎಸ್.ಟಿ. ನಂದಿಬೇವೂರ, ಡೀನ್, ಘನ ರಸಾಯನಶಾಸ್ತ್ರ ವಿಭಾಗ, ಕವಿವಿ ಧಾರವಾಡ.


ಚಿತ್ರ-ಲೇಖನ:ಹರ್ಷವರ್ಧನ ವಿ. ಶೀಲವಂತ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*