ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಪರಿಸರ ಕಾಳಜಿಯ ವಿಶಿಷ್ಟ ಸ್ವಾಮೀಜಿ

ಶ್ರಾವಣ ಬಂತೆಂದರೆ ನಾಡಿನ ಎಲ್ಲ ದೇವಸ್ಥಾನಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ವಿವಿಧ ಪೂಜೆ, ಧಾರ್ಮಿಕ ಆಚರಣೆಗಳು ಸರ್ವೆಸಾಮಾನ್ಯ. ಇನ್ನು ಮಠಗಳಲ್ಲಿ ಹೇಳುವುದೇ ಬೇಡ ಗದ್ದುಗೆಗಳಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ಆದರೆ ಶ್ರಾವಣ ಬಂದರೆ ಈ ಮಠದ ಸ್ವಾಮಿಗಳು ಊರೂರಿಗೆ ತೆರಳಿ ಮನೆ ಮನೆಗೆ ಹೋಗಿ ಭಕ್ತರಿಗೆ ಸಸಿಕೊಟ್ಟು ಇವುಗಳನ್ನು ಬೆಳೆಸುವಂತೆ ಹೇಳುತ್ತಾರೆ ಎಂದರೆ ಸೋಜಿಗ ಅಲ್ಲವೇ?!. ಒಂದರ್ಥದಲ್ಲಿ ಹೌದು. ಸಮಾಜಮುಖಿಯಾಗಿ ಕೆಲಸ ಮಾಡುವ ಜನ ನಮ್ಮಲ್ಲಿ ಇದ್ದಾರೆ. ಆದರೆ ಅವರು ಪ್ರಚಾರಕ್ಕೆ ಬರುವುದು ಅಪರೂಪ. ಅಪರೂಪದ ಒಬ್ಬರುMANJUNATH BOMMANAKATTI ಸ್ವಾಮೀಜಿಯನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ.

ನಾಡಿನ ವೀರಕ್ತಮಠಗಳು ಸಮಾಜಿಮುಖಿಯಾಗಿ ಕೆಲಸ ಮಾಡುವಲ್ಲಿ ಮುಂಚೂಣಿಯಲ್ಲಿವೆ. ಜೊತೆಗೆ ವೈಚಾರಿಕ ನಡೆ, ಜನಪರ ಕಾಳಜಿಯೊಂದಿಗೆ ಜೀವಪರ ಚಿಂತನೆಗಳಿಗೆ ಜೀವ ನೀಡಿವೆ. ಇಂತಹ ಮಠಗಳ ಪೈಕಿ ಶಿಗ್ಗಾವಿ ವೀರಕ್ತಮಠ ಕೂಡಾ ಒಂದು. ಈ ಮಠಕ್ಕೆ ೬೦೦ಕ್ಕೂ ಹೆಚ್ಚು ವರ್ಷಗಳ ಇತಹಾಸವಿದೆ. ಮಠಕ್ಕೆ ೧೧ನೇ ಪೀಠಾಧಿಪತಿ ಶ್ರೀ ಸಂಗನಬಸವ ಮಹಾಸ್ವಾಮಿಗಳು.

ಇವರ ನಡೆ-ನುಡಿ ವಿಶಿಷ್ಟವಾಗಿವೆ. ಎಲ್ಲ ಸ್ವಾಮಿಗಳಂತೆ ಆಡಂಬರಕ್ಕೆ ಇವರ ಬಳಿ ಜಾಗವಿಲ್ಲ. ಏನಿದ್ದರೂ ನೇರಾನೇರ. ಇದ್ದಂತೆ ಹೇಳಿ, ಹೀಗೆ ಇರಲು ಸಾಧ್ಯ ಎಂದು ಹೇಳುವ ಮೂಲಕ ಡಾಂಬಿಕತೆಯನ್ನು ಅಲ್ಲಗಳೆಯುತ್ತಾರೆ. ಜೊತೆಗೆ ಸ್ವಾಮಿಗಳಾದವರು ಮಾಡುವ ಕೆಲಸ ಸಾಕಷ್ಟಿದೆ ಅಂತಹ ಕೆಲಸಗಳನ್ನು ಮಾಡಬೇಕು ಅನ್ನೊ ಮಹತ್ವಾಕಾಂಕ್ಷೆ ಇವರದು. ಇವರಿಗೆ ಪರಿಸರದ ಬಗ್ಗೆ ವಿಶೇಷ ಕಾಳಜಿ. ಪರಿಸರದೊಳಗೆ ಬೆಳೆದಿರುವ ಇವರಿಗೆ ಪರಿಸರದ ಮಹತ್ವ ಗೊತ್ತಿದೆ. ನಮ್ಮನ್ನು ಕಾಪಾಡಬಲ್ಲ ಏಕೈಕ ದೈವವೆಂದರೆ ಅದು ‘ಪರಿಸರ’ ಎನ್ನುವುದನ್ನು ಪೂಜ್ಯರು ಚನ್ನಾಗಿ ಅರ್ಥಮಾಡಿಕೊಂಡಿದ್ದಾರೆ.

ಊರೂರಿಗೆ ಸಸ್ಯ ಶ್ರಾವಣ

5ಪರಿಸರದ ಕಾಳಜಿಯ ಚಿಂತನೆಯ ಫಲವಾಗಿ ಕಳೆದ ಎರಡು ವರ್ಷಗಳಿಂದ ಸಸ್ಯ ಶ್ರಾವಣ ಕಾರ್ಯಕ್ರಮ ಮಾಡುತ್ತಿದ್ದಾರೆ. ಶ್ರಾವಣದಲ್ಲಿ ಎಲ್ಲರೂ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಇಟ್ಟುಕೊಂಡರೆ ಇವರು ತಮ್ಮ ಶಿಗ್ಗಾವಿ ತಾಲೂಕಿನಲ್ಲಿರುವ ವಿವಿಧ ಹಳ್ಳಿಗಳಿಗೆ ಹೋಗಿ ಗ್ರಾಮದ ಮನೆ ಮನೆ ಬಾಗಿಲಿಗೆ ತೆರಳಿ ಸಸಿಗಳನ್ನು ನೀಡುತ್ತಿದ್ದಾರೆ. ಇವುಗಳನ್ನು ಹಚ್ಚಿ ನಿಮ್ಮ ಮಕ್ಕಳಂತೆ ಬೆಳೆಸುವಂತೆ ಆಶೀರ್ವಾದದ ವಾಣಿ ದಯಪಾಲಿಸುತ್ತಿದ್ದಾರೆ. ಪೂಜ್ಯರು ಶ್ರಾವಣದಲ್ಲಿ ಮನೆ ಬಾಗಿಲಿಗೆ ಬಂದಿದ್ದಾರೆಂದು ಭಕ್ತರು ಪಾದಪೂಜೆಗೆ ನೀರು ಹಾಕಿ ಊದುಬತ್ತಿ ಬೆಳಗಲು ಬಂದರೆ, ನೀರನ್ನು ಆ ಸಸಿಗೆ ಹಾಕಿಸಿ ಅಗರಬತ್ತಿಯನ್ನು ಸಸಿಗೆ ಬೆಳಗುವಂತೆ ಹೇಳಿ ಪರಿಸರ ಜಾಗೃತಿ ಮೂಡಿಸುವ ಮೂಲಕ ಮುಂದಿನ ಬಾಗಿಲಿಗೆ ತೆರಳುತ್ತಾರೆ.

ಕಳೆದ ವರ್ಷ ಶ್ರಾವಣದಲ್ಲಿ ೧೦ ಗ್ರಾಮಗಳಿಗೆ ತೆರಳಿ ನೀರಲ, ನೆಲ್ಲಿ, ಸಂಪಿಗೆ, ಪೇರಲ, ತುಳಸಿ, ಹುಣಸೆ, ಬೇವು, ಹೆಬ್ಬೇವು, ಸಾಗುವಾನಿ, ಸೀಲ್ವರ್, ತೇಗು, ಪತ್ರಿ, ಬನ್ನಿ ಹೀಗೆ ವಿವಿಧ ಬಗೆಯ ೭ ಸಾವಿರಕ್ಕೂ ಅಧಿಕ ಸಸಿಗಳನ್ನು ನೀಡಿದ್ದರು. ಸಸಿಗಳನ್ನು ನೀಡಿದಾಗ ಸರಿಯಾಗಿ ಮಳೆ ಆಗಿರಲಿಲ್ಲ. ಆದರೂ ಇವುಗಳಲ್ಲಿ ೪೫೦೦ದಷ್ಟು ಸಸಿಗಳು ಬೆಳೆಯುತ್ತಿವೆ.

ಈ ವರ್ಷ ಚನ್ನಾಗಿ ಮಳೆ ಆಗಿದೆ. ಈ ಸಲ ಸಾಕಷ್ಟು ಸಸಿಗಳು ಹತ್ತುತ್ತವೆ ಎನ್ನುವ ಹುಮ್ಮಸ್ಸಿನಲ್ಲಿ ಸಂಗನಬಸವ ಸ್ವಾಮಿಗಳು ಹತ್ತು ಗ್ರಾಮಗಳಿಗೆ ತೆರಳಿ ೮ಸಾವಿರಕ್ಕೂ ಅಧಿಕ ಸಸಿಗಳನ್ನು ವಿತರಿಸುವ ಕಾಯಕ ಆರಂಭಿಸಿದ್ದಾರೆ. ಸದ್ದಿಲ್ಲದ ಈ ಕ್ರಾಂತಿಯಿಂದ ತಾಪಮಾನ ಕಡಿಮೆ ಮಾಡುವ ಮೂಲಕ ಅನೇಕ ರೀತಿಯಲ್ಲಿ ಪರಿಸರ ನಮಗೆ ಅನಕೂಲ ಮಾಡಲಿದೆ ಎನ್ನುವುದು ಪೂಜ್ಯರ ನಂಬಿಕೆ. ಗ್ರಾಮದ ಹಿರಿಯರನ್ನು ಕರೆದು ಮಾತನಾಡುವುದರೊಂದಿಗೆ ಊರಿನ ಪ್ರತಿ ಮನೆಗೆ ತೆರಳಿ ಸಸಿಗಳನ್ನು ನೀಡುವ ಮೂಲಕ ಅವುಗಳನ್ನು ಬೆಳೆಸುವ ಜಾಗೃತಿ ಮೂಡಿಸುತ್ತಿದ್ದಾರೆ.

ಶ್ರಾವಣದಲ್ಲಿ ಗಿಡಗಳನ್ನು ಕೊಟ್ಟು ಮತ್ತೆ ಮುಂದಿನ ವರ್ಷಕ್ಕೆ ಈ ಕೆಲಸಕ್ಕೆ ಕೈಹಾಕಿದರೆ ಇದರ ಪ್ರಯೋಜನ ಆಗುವುದಿಲ್ಲ ಎನ್ನುವುದನ್ನು ಅರ್ಥಮಾಡಿಕೊಂಡಿರುವ ಪೂಜ್ಯರು, ಸಸಿಗಳನ್ನು ನೀಡಿದ ಗ್ರಾಮಗಳಿಗೆ ಮೇಲಿಂದ ಮೇಲೆ ಭೇಟಿ ಮಾಡಿ ಸಸಿಗಳ ಬಗ್ಗೆ ಕಾಳಜಿವಹಿಸುವಂತೆ ತಿಳಿ ಹೇಳುವ ಕೆಲಸ ಕೂಡಾ ಮಾಡುತ್ತಿದ್ದಾರೆ. ಜೊತೆಗೆ ಆಯಾ ಊರಿನ ಜನರು ಸಿಕ್ಕಾಗ ಅವರಿಗೆ ‘ಆ ಗಿಡಗಳನ್ನು ಬೆಳೆಸಿದರೆ ಅದೇ ನೀವು ನನಗೆ ಕೊಡುವ ಕಾಣಿಕೆ’ ಎಂದು ಅವರೊಳಗಿದ್ದ ಭಕ್ತಿಯ ಜಗುಲಿಯಲ್ಲಿ ಜಾಗೃತಿಯ ದೀಪ ಹೊತ್ತಿಸುವ ಕೆಲಸ ಮಾಡುತ್ತಾರೆ.

ಶಿಗ್ಗಾವಿ ತಾಲೂಕಿನಲ್ಲಿ ನೂರು ಹಳ್ಳಿಗಳಿದ್ದು ಪ್ರತಿ ಶ್ರಾವಣದಲ್ಲಿ ಹತ್ತು ಗ್ರಾಮಗಳಿಗೆ ಈ ಕಾರ್ಯಕ್ರಮ ಮಾಡುವ ಮೂಲಕ ಹತ್ತು ವರ್ಷಗಳಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿ ಪರಿಸರಕ್ಕೆ ಕಾಣಿಕೆ ನೀಡುವ  ಸಂಕಲ್ಪ ಪೂಜ್ಯರದ್ದಾಗಿದೆ. ಪೂಜ್ಯರ ಈ ಸಸ್ಯ ಶ್ರಾವಣಕ್ಕೆ ಶಾಸಕ ಬಸವರಾಜ ಬೊಮ್ಮಾಯಿ, ಪತ್ರಕರ್ತ, ಸಾಹಿತಿ ಮಂಜುನಾಥ, ಕೃಷಿ ಸಂಶೋಧಕ ಎಸ್.ಎಸ್.ದೇಸಾಯಿ, ಶಿವನಗೌಡ ಪಾಟೀಲ, ಕಲಾವಿದ ಬಸವರಾಜ ಗೊಬ್ಬಿ ತಂಡ ಸೇರಿದಂತೆ ಮುಂತಾದವರು ಕೈಜೋಡಿಸಿದ್ದಾರೆ. ಸಂಗನಬಸವ ಸ್ವಾಮಿಗಳಂತೆ ಸಮಾಜದ ಉನ್ನತ ಸ್ಥಾನದಲ್ಲಿರುವ ಎಲ್ಲರೂ ಕೈಜೋಡಿಸಿದರೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ತಾಪಮಾನವನ್ನು ಕಡಿಮೆ ಮಾಡುವುದು ಸುಲಭ. ಆದರೆ ಇಚ್ಚಾಶಕ್ತಿಯ ಕೊರತೆ, ಅತಿಆಶೆಗಳಿಂದ ಪ್ರಕೃತಿಯ ಮುನಿಸಿಗೆ ನಾವು ಕಾರಣವಾಗಿದ್ದೇವೆ. ಕೇರಳ, ಕೊಡಗು ನೋಡಿಯಾದರೂ ನಮ್ಮ ಬದುಕು ಬದಲಾಗಬೇಕಿದೆ.

ಕೆರೆ ಹೂಳು ತೆಗೆಸಿದ ಜನನಾಯಕ ಈ ಸ್ವಾಮೀಜಿ

4ಶಿಗ್ಗಾವಿಯ ವೀರಕ್ತಮಠದ ಪಕ್ಕದಲ್ಲಿಯೇ ಹಿರೇಕೆರೆ ಇದೆ. ಈ ಕೆರೆಯ ಹೆಸರೇ ಹೇಳುವಂತೆ ಇದು ‘ಹಿರೇಕೆರೆ’ ಈ ಕೆರೆಗೆ ನೀರು ಬಂದರೆ ಹಲವು ವರ್ಷ ನೀರಿನ ಕೊರತೆ ಇರುವುದಿಲ್ಲ. ಈ ಕೆರೆಯಲ್ಲಿ ನೀರಿದ್ದರೆ ಎಲ್ಲ ಕೊಳವೆ ಬಾವಿಗಳಲ್ಲಿ ನೀರೆ ನೀರು. ಇದನ್ನು ಅರಿತುಕೊಂಡ ಪೂಜ್ಯರು ಕಳೆದ ಎರಡು ವರ್ಷಗಳ ಹಿಂದೆ ಈ ಕೆರೆಯ ಹೂಳು ತೆಗೆಸಿದ್ದಾರೆ.

ಸರ್ಕಾರ, ಸಂಸ್ಥೆಗಳಿಗೆ ಕಾಯದೆ ಜೆಸಿಬಿ ತರಿಸಿ ಕೆಲಸ ಶುರು ಮಾಡಿದರು. ಒಂದು ಟ್ರೀಪ್(ಟ್ರ್ಯಾಕ್ಟರ್)  ಮಣ್ಣಿಗೆ ೫೦ ರೂಪಾಯಿ ದರ ನಿಗಧಿ ಮಾಡಿದರು. ಕೆರೆಯ ಮಣ್ಣು ಹೊಲಗಳಿಗೆ ಉತ್ತಮ ಎಂದು ಗೊತ್ತಿದ್ದ ರೈತರು ಮಣ್ಣಿಗಾಗಿ ಮುಗಿಬಿದ್ದರು. ಈ ಕೆಲಸ ಕಂಡು ಜೆಸಿಬಿ ಇರುವ ಅನೇಕರು ಡಿಸೇಲ್ ಹಾಕಿಸಿಕೊಂಡು ಕೆಲಸ ಮಾಡಿಸಿ ಎಂದು ತಮ್ಮ ಸಹಕಾರ ನೀಡಿದರು. ೨೦ ವರ್ಷಗಳಿಂದ ಹೂಳು ತುಂಬಿಕೊಂಡಿದ್ದ ೨೮ ಎಕರೆ ವಿಸ್ತಾರದ ಕೆರೆ ಒಂದು ತಿಂಗಳಲ್ಲಿ ಹೂಳು ಹೊರಹಾಕಿ ಮತ್ತಷ್ಟು ನೀರು ಹೀರುವ ಹೀರೇಕೆರೆ ಆಯಿತು. ಪೂಜ್ಯರ ಜೀವಜಲದ ಕಾಳಜಿಯಿಂದ ಮಣ್ಣು ಮಾರಿದ ರೊಕ್ಕದಲ್ಲಿಯೇ ಎಲ್ಲ ಖರ್ಚು ತೆಗೆದು ೧೫೦೦ ರೂಪಾಯಿ ಉಳಿಕೆ ಆಯಿತು.

ಸರ್ಕಾರದ ಲೆಕ್ಕದಲ್ಲಿ ೫೦ ಲಕ್ಷಕ್ಕೂ ಅಧಿಕ ಹಣದ ಕೆಲಸ ಇಲ್ಲಿ ಆಗಿದೆ. “ಆದರೆ ಸರ್ಕಾರದ ವ್ಯವಸ್ಥೆಯಲ್ಲಿ ಈ ಕೆಲಸ ಮಾಡಿದ್ದರೆ ಹಣವೇನೂ ಖರ್ಚಾಗಿರುತ್ತಿತ್ತು. ಇಷ್ಟು ಕೆಲಸ ಆಗುತ್ತಿರಲಿಲ್ಲ” ಎಂದು ಶಿಗ್ಗಾವಿ ಸುತ್ತ-ಮುತ್ತಲಿನ ಜನರ ಬಾಯಲ್ಲಿ ಕೇಳಿಬರುವ ಮಾತಾಗಿದೆ. ಇದೀಗ ಕೆರೆ ಸಂಪೂರ್ಣ ತುಂಬಿದ್ದು ಶಿಗ್ಗಾವಿಯ ಎಲ್ಲ ಕೊಳವೆ ಬಾವಿಗಳಲ್ಲಿ ಗಂಗಾಜಲ ಎದ್ದು ಕಾಣುತ್ತಿದೆ.

ಸೀದಾ-ಸಾದಾ ಸ್ವಾಮೀಜಿ  

6ಸಂಗನಬಸವ ಮಹಾಸ್ವಾಮಿಗಳು ಸ್ವಾಮಿಗಳಾಗಲು ಯಾವ ಮಠ-ಮಾನ್ಯಗಳಲ್ಲಿ ಇದ್ದು ಕಲಿತಿಲ್ಲ. ಸರ್ವ ಸಮಾಜದ ಎಲ್ಲ ಬದುಕುಗಳನ್ನು ಕಂಡಿರುವ ಇವರು ಬದುಕನ್ನೆ ಕಲಿತಿದ್ದಾರೆ ಎಂದರೆ ತಪ್ಪಾಗಲಾರದು. ಸ್ವಾಮಿಗಳಾಗಲು ಬೇಕಾದ ಅಗತ್ಯತೆಗಳಿಗೂ ಇವರು ಎಲ್ಲೂ ಹೋಗಿಲ್ಲ. ತಮ್ಮ ಹಿಂದಿನ ಪೂಜ್ಯರಾದ ಲಿಂಗೈಕ್ಯ ಸಂಗನಬಸವ ಮಹಾಸ್ವಾಮಿಗಳ ಕೃಪಾಶೀರ್ವಾದ ಇರುವ ಸಂಗನಬಸವ ಸ್ವಾಮಿಗಳು ವಿವಿಧ ಕಾಯಿಲೆಗಳಿಗೆ ಆಯುರ್ವೇದದ ಔಷದಿ ನೀಡುವ ಸಂಜೀವಿನಿ ಆಗಿದ್ದಾರೆ. ಜಾತಿ-ಮತ-ಪಂಥಗಳೆನ್ನದೆ ಬರುವ ಎಲ್ಲರಿಗೂ ಶಕ್ತಿ ತುಂಬುವ ಮಾರ್ಗದರ್ಶನ ನೀಡಿ ಮಾನವೀಯತೆ ಮೆರೆಯುತ್ತಾರೆ. ಹಿಂದೂ-ಮುಸ್ಲಿಂ ಭಾವೈಕ್ಯದ ಕೊಂಡಿ ಕೂಡಾ ಆಗಿದ್ದಾರೆ.

ಗಾನಯೋಗಿ ಪಂಡಿತ ಪುಟ್ಟರಾಜ ಕವಿಗವಾಯಿಗಳು, ಒಳಬಳ್ಳಾರಿಯ ತಾತನವರುಗಳ ಆಶೀರ್ವಾದ ಚಿತ್ರದುರ್ಗದ ಮುರುಘಾ ಶರಣರು ಮತ್ತು ಗದುಗಿನ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿದ್ದೇನೆ ಎಂದು ವಿನಮ್ರವಾಗಿ ಹೇಳುವ ಸಂಗನಬಸವ ಸ್ವಾಮಿಗಳು ‘ಸಮಾಜಕ್ಕಾಗಿ ನಾನು, ನನಗಾಗಿ ಸಮಾಜ ಅಲ್ಲ’ ಎಂದು ಹೇಳುವ ಮಾತೆ ಎಲ್ಲರನ್ನು ಚಿಂತಿಸುವಂತೆ ಮಾಡುತ್ತದೆ. ಸಮಾಜಕ್ಕೆ ಇಂತಹ ಸ್ವಾಮಿಗಳ ಅಗತ್ಯವಿದೆ. ಇವರು ಕೈಗೊಂಡಿರುವ ಜೀವಪರ ಕೆಲಸಗಳಿಗೆ ನಾವು-ನೀವು ಕೈಜೋಡಿಸುವ ಅಗತ್ಯ ಕೂಡಾ ಇದೆ. ಪೂಜ್ಯರಿಗೆ ಕೈಜೋಡಿಸಲು ಅವರ ಜಂಗಮವಾಣಿ ೯೯೮೬೨೮೦೪೨೪ ಗೆ ಕರೆ ಮಾಡಬಹುದು.

                                   ಚಿತ್ರಲೇಖನ : ಎಂ.ಮಂಜುನಾಥ ಬಮ್ಮನಕಟ್ಟಿ

 

 

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*