ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಕೆರೆನೋಟ-81: ಕೆರೆ ಒತ್ತುವರಿ: ಅಧಿಕಾರ ಇಲ್ಲದಾಗ ಏನೆಂದಿದ್ದರು?-1

“ನುಂಗಣ್ಣರ ಪಾಲಾದ ಕೆರೆ: ತನಿಖೆಗೆ ಕರೆ”— ಇದು ಕುಮಾರಸ್ವಾಮಿ ಅವರು ಅಂದು ವಿಧಾನಸಭೆಯಲ್ಲಿ ಕೆರೆಗಳ ಒತ್ತುವರಿ ಸಂದರ್ಭದಲ್ಲಿ ತಮ್ಮ ಮಾತಿನ ಸಂಕ್ಷಿಪ್ತ ಸಂಗ್ರಹಕ್ಕೆ ನೀಡಿದ್ದ ಶೀರ್ಷಿಕೆ.  “ಬೆಂಗಳೂರು ನಗರದಲ್ಲಿ ಕೆರೆಗಳ ಒತ್ತುವರಿ ಮತ್ತು ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡಿರುವ ನೂರಾರು ಕೋಟಿ ರೂಪಾಯಿಗಳ ಸತ್ಯ ಹೊರಬರಬೇಕಾದರೆ ಮತ್ತು ರಾಜ್ಯ ಸರ್ಕಾರಕ್ಕೆ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಮನಸ್ಸು ಇದ್ದರೆ ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳನ್ನು ಪತ್ತೆ ಹಚ್ಚಲು ಸೂಕ್ತ ತನಿಖೆ ನಡೆಸುವುದು ಇಂದಿನ ಅಗತ್ಯವಾಗಿದೆ”…

LAKE 01ಹೀಗೆಂದು ತಮ್ಮ ಮಾತಿನ ದಾಟಿಯನ್ನು ಅಂದು ಆರಂಭಿಸಿದ್ದ ಕುಮಾರಸ್ವಾಮಿ ಸರ್ಕಾರದ ಇಲಾಖೆಗಳು ಕೆರೆಗಳ ಮಾಹಿತಿಯನ್ನು ಬಚ್ಚಿಡುತ್ತಿವೆ ಎಂದೂ ಹೇಳಿದ್ದರು. ಅಲ್ಲದೆ, ಕೆರೆಗಳ ಒತ್ತುವರಿಗೆ ಅಧಿಕಾರಿಗಳು, ಭೂದಾಹಿಗಳು, ರಿಯಲ್ ಎಸ್ಟೇಟ್ ಮಾಫಿಯಾ ಕಾರಣ ಎಂದೂ ಹೇಳಿದ್ದರು. ಅಲ್ಲದೆ, ಕೆಲವು ಕೆರೆಗಳ ಒತ್ತುವರಿಯ ಚಿತ್ರಣವನ್ನು ಫೋಟೊಗಳ ಮೂಲಕ ಸದನಕ್ಕೆ ಒದಗಿಸಿದ್ದರು.

ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಅವರು ನೀಡಿದ ಮಾಹಿತಿಗಳನ್ನು ಅವರ ಅಂಶಗಳಲ್ಲೇ ಇಲ್ಲಿ ದಾಖಲಿಸಲಾಗುತ್ತಿದೆ.

ದಿನಾಂಕ:06.01.2014ರಂದು ಬೆಂಗಳೂರು ನಗರದಲ್ಲಿ ಕೆರೆ ಒತ್ತುವರಿ ತೆರವುಗೊಳಿಸಲು ಮತ್ತು

ಅನಧಿಕೃತ ಬಡಾವಣೆ ನಿರ್ಮಿಸಿರುವ ವಿರುದ್ದ ಕ್ರಮ ಕೈಗೊಳ್ಳಲು ಕೋರಿ ಮಾನ್ಯ ಮುಖ್ಯಮಂತ್ರಿರವರಿಗೆ ಪತ್ರ.

ಪತ್ರಕ್ಕೆ ಉತ್ತರವಾಗಿ ಮಾನ್ಯ ಮುಖ್ಯಮಂತ್ರಿ ರವರು ಸೂಕ್ತ ಕ್ರಮ ಜರುಗಿಸಲು ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಉತ್ತರ.

ಸರ್ಕಾರಿ ಆದೇಶ ಸಂಖ್ಯೆ: ಪಿ.ಡಬ್ಲ್ಯೂ.ಡಿ. 82 ಐ.ಎಂ.ಬಿ. 85 ದಿನಾಂಕ: 26-7-1985 ರನ್ವಯ ಶ್ರೀ ಎನ್. ಲಕ್ಷ್ಮಣ ರಾವ್, ನಿವೃತ್ತ ಭಾ.ಆ.ಸೇ. ಇವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಸದರಿ ಸಮಿತಿಯು ಬೆಂಗಳೂರು ವ್ಯಾಪ್ತಿಯ ಕೆರೆಗಳ ಪುನರುಜ್ಜೀವನದ ಬಗ್ಗೆ ವಿಸ್ತøತವಾದ ವರದಿಯೊಂದನ್ನು ನೀಡಿದೆ.

ಸದರಿ ವರದಿಯಲ್ಲಿ ಬೆಂಗಳೂರು ನಗರದಲ್ಲಿ 390 ಕೆರೆಗಳಿದ್ದು, 46 ಕೆರೆಗಳು ಅನುಪಯುಕ್ತ ಕೆರೆಗಳು. 81 ಕೆರೆಗಳು ಜೀವಂತ ಕೆರೆಗಳು ಎಂದು ವರದಿ ನೀಡಿದೆ.

ಮುಂದುವರೆದು, 271 ಹೆಕ್ಟೇರ್ ವಿಸ್ತೀರ್ಣದ ಹೆಬ್ಬಾಳ ಕೆರೆ, 10 ಹೆಕ್ಟೇರ್ ವಿಸ್ತೀರ್ಣದ ಸ್ಯಾಂಕಿ ಕೆರೆ,

6.45 ಹೆಕ್ಟೇರ್ ವಿಸ್ತೀರ್ಣದ ಯಡಿಯೂರು ಕೆರೆ, 14.84 ಹೆಕ್ಟೇರ್ ವಿಸ್ತೀರ್ಣದ ಕೆಂಪಾಂಬುದಿ ಕೆರೆ,

ಹಲಸೂರು ಕೆರೆ, 112 ಹೆಕ್ಟೇರ್ ವಿಸ್ತೀರ್ಣದ ಮಡಿವಾಳ ಕೆರೆ, 21.93 ಹೆಕ್ಟೇರ್ ವಿಸ್ತೀರ್ಣದ ಸಿನಿವಾಗಿಲು ಕೆರೆ, 10 ಹೆಕ್ಟೇರ್LAKE 02 ವಿಸ್ತೀರ್ಣದ ಬೈರಸಂದ್ರ ಕೆರೆ, 4.5 ಹೆಕ್ಟೇರ್ ವಿಸ್ತೀರ್ಣದ ಜಕ್ಕಸಂದ್ರ ಕೆರೆ, 41 ಹೆಕ್ಟೇರ್ ವಿಸ್ತೀರ್ಣದ ಮತ್ತಿಕೆರೆ ಕೆರೆ, 22.57 ಹೆಕ್ಟೇರ್ ವಿಸ್ತೀರ್ಣದ ಕಾಚಕರನಹಳ್ಳಿ ಕೆರೆ ಮತ್ತು 144 ಹೆಕ್ಟೇರ್ ವಿಸ್ತೀರ್ಣದ ಬೆಳ್ಳಂದೂರು ಕೆರೆಗಳನ್ನು ಉಳಿಸಿಕೊಂಡು ಪುನರುಜ್ಜೀವನಗೊಳಿಸುವ ಬಗ್ಗೆ ನಿರ್ದಿಷ್ಟ ಮತ್ತು ನಿಖರವಾದ ಶಿಫಾರಸ್ಸುಗಳನ್ನು ನೀಡಿದೆ.

ವರದಿಯ ಅನುಬಂಧ-2 ರಲ್ಲಿ 46 ನಿರುಪಯುಕ್ತ ಕೆರೆಗಳನ್ನು ಸಂರಕ್ಷಿಸುವ ಬಗ್ಗೆ ಮತ್ತು ಅನುಬಂಧ-4 ರಲ್ಲಿ 81 ಜೀವಂತ ಕೆರೆಗಳನ್ನು ಸಂರಕ್ಷಿಸುವ ಬಗ್ಗೆ ಮತ್ತು ಅನುಬಂಧ-5 ರಲ್ಲಿ ಬೆಂಗಳೂರಿನ ಗ್ರೀನ್ ಬೆಲ್ಟ್ ವ್ಯಾಪ್ತಿಯಲ್ಲಿ ಬರುವ 262 ಕೆರೆಗಳನ್ನು ವಿಸ್ತೀರ್ಣ ಮತ್ತು ಅನುಬಂಧ-6 ರಲ್ಲಿ ಕೆರೆ ಸರ್ವೆ ನಂಬರ್ ಮತ್ತು ವಿಸ್ತೀರ್ಣದೊಂದಿಗೆ ಶಿಫಾರಸ್ಸುಗಳನ್ನು ನೀಡಿದೆ.

ವರದಿಯಂತೆ ಮೇಲಿನ ಕೆರೆ ವಿಸ್ತೀರ್ಣಗಳನ್ನು ಪರಿಶೀಲಿಸಿದಾಗ ಪ್ರಸ್ತುತ ಕೆರೆ ಕಾಗದದ ದಾಖಲೆಯಲ್ಲಿ ಮಾತ್ರ ನೋಡಬಹುದಾಗಿದೆ. ಉದಾಹರಣೆಗೆ ಮತ್ತಿಕೆರೆಯಲ್ಲಿ 41 ಹೆಕ್ಟೇರ್ ಕೆರೆ ಅಂಗಳದಲ್ಲಿ ಖಾಸಗಿ ಬಡಾವಣೆಯನ್ನು ನಿರ್ಮಿಸಲಾಗಿದೆ.

ಒಟ್ಟಾರೆ ಕೆರೆಗಳ ಸಂರಕ್ಷಣೆಗೆ ಮತ್ತು ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಸಮಿತಿಯ ಶಿಫಾರಸ್ಸುಗಳು ಈ ಕೆಳಗಿನಂತಿವೆ:

  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಥವಾ ಇನ್ನಾವುದೇ ಪ್ರಾಧಿಕಾರದಿಂದ ಕೆರೆಯ ಅಂಗಳದಲ್ಲಿ ಬಡಾವಣೆ ನಿರ್ಮಿಸಲು ಅನುಮತಿ ನೀಡಬಾರದು.
  • ಒಣಗಿರುವ ಕೆರೆಗಳನ್ನು ಪಾರ್ಕ್‍ಗಳಾಗಿ ಮರದ ಉದ್ಯಾನವನಗಳನ್ನಾಗಿ ಅಭಿವೃದ್ಧಿಪಡಿಸಬೇಕು.
  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸಿನಿವಾಗಿಲು ಕೆರೆಯ ಅಂಗಳದಲ್ಲಿ ನಿವೇಶನ ರಚಿಸಲು ಅನುಮತಿ ನೀಡಿದಂತೆ ಬೇರೆ ಕಡೆ ಅನುಮತಿ ನೀಡಬಾರದು.
  • ಕೆರೆಗಳಲ್ಲಿ ಸಾಧ್ಯವಾದಷ್ಟು ನೀರನ್ನು ಉಳಿಸಲು ಹಾಗೂ ಮಲೀನ ಮತ್ತು ಕಲುಷಿತ ತ್ಯಾಜ್ಯ ವಸ್ತುಗಳು ಕೆರೆಯ ನೀರನ್ನು ಕಲುಷಿತಗೊಳಿಸದಂತೆ ಕಾಪಾಡುವುದು.

ಮೇಲಿನ ಶಿಫಾರಸ್ಸುಗಳ ಆಧಾರದ ಮೇಲೆ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ಪತ್ರ ಸಂಖ್ಯೆ:

ಹೆಚ್.ಯು.ಡಿ. 794 ಟಿ.ಟಿ.ಪಿ. 85, ದಿನಾಂಕ: 31-12-1985 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಸಿಟಿ ಕಾರ್ಪೋರೇಷನ್ ಆಯುಕ್ತರಿಗೆ ಮತ್ತು ನಿರ್ದೇಶಕರು, ನಗರ ಯೋಜನೆ ರವರಿಗೆ ಪತ್ರ ಬರೆದು ಕೆರೆ ಅಂಗಳಗಳನ್ನು ಉದ್ಯಾನವನ, ಸಣ್ಣ ಅರಣ್ಯ, ಪ್ರವಾಸಿ ಸ್ಥಳಗಳಾಗಿ ಉಪಯೋಗಿಸಬೇಕೆಂದು ಮತ್ತು ಯಾವುದೇ ಕಾರಣಕ್ಕೂ ಇತರೆ ಬೇರೆ ಉದ್ದೇಶಕ್ಕೆ ಬಳಸಬಾರದೆಂದು ನಿರ್ದೇಶಿಸಿದೆ.

ಹೀಗೆಂದು ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಮಾಹಿತಿ ನೀಡುತ್ತಾ ಮಾತನಾಡಿದ್ದರು. ಇದು ಇನ್ನೂ ಮುಂದುವರಿಯುತ್ತದೆ.  ಮುಂದಿನ ನೋಟಗಳಲ್ಲಿ ಅದರ ಸಂಪೂರ್ಣ ಮಾಹಿತಿ ಇರುತ್ತದೆ. ನಂತರ ವರದಿಯ ನೋಟ ಬಿಡಿಸಿಕೊಳ್ಳಲಿದೆ.

ಚಿತ್ರ-ಲೇಖನಕೆರೆ ಮಂಜುನಾಥ್

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*