ಇನ್ನಷ್ಟು

“ನೀರಿನ ಕಲರವದ ದನಿಯು ನಮ್ಮ ತಂದೆಯ ತಂದೆಯದು. ನದಿಗಳು ನಮ್ಮ ಸಹೋದರರು. ಅವು ನಮ್ಮ ದಾಹವನ್ನು ಇಂಗಿಸುತ್ತವೆ. ನಮ್ಮ ದೋಣಿಗಳನ್ನು ಒಯ್ದು, ನಮ್ಮ ಮಕ್ಕಳಿಗೆ ಆಹಾರ ನೀಡುತ್ತವೆ. ನಿಮ್ಮ ಸಹೋದರನಿಗೆ ನೀಡುವ ಮಮತೆಯನ್ನೇ ನೀವು ನದಿಗಳಿಗೆ ನೀಡಬೇಕು – ಚೀಫ಼್ ಸಿಯಾಟಲ್, ಇಸವಿ ೧೮೫೪ “ನಾವು ನಮ್ಮ ಸಾಗರಗಳನ್ನು ರಕ್ಷಿಸಿದಾಗ, ನಮ್ಮ ಭವಿಷ್ಯದ ರಕ್ಷಣೆ ಮಾಡಿದಂತೆ ಎಂಬುದು ತಿಳಿದಿರುವ ಸಂಗತಿ.” - ಬಿಲ್ ಕ್ಲಿಂಟನ್ “ನೀರಿಗಿಂತ ಮೃದುವಾದುದು ಅಥವಾ ನಮ್ಯವಾದುದು ಬೇರೊಂದಿಲ್ಲ, ಆದರೆ ಅದನ್ನು ತಡೆಯುವವರೂ ಯಾರಿಲ್ಲ” - ಲವೊ ತ್ಸು, ಪುರಾತನ ಚೀನೀ ತತ್ವಜ್ಞಾನಿ ಹಾಗೂ ಬರಹಗಾರ ಜಗತ್ತಿನಲ್ಲಿರುವ ಸುಮಾರು ೯೭% ನೀರು ಉಪ್ಪು ನೀರು ಅಥವಾ ಕುಡಿಯಲು ಯೋಗ್ಯವಲ್ಲದ ನೀರಾಗಿದೆ. ಉಳಿದ ೨% ಮಂಜಿನ ಗಡ್ಡೆಗಳಲ್ಲಿ ಬಂಧಿಯಾಗಿದೆ. ಹಾಗಾಗಿ, ನಮ್ಮೆಲ್ಲ ಆಗತ್ಯಗಳಿಗೆ ಲಭ್ಯವಿರುವ ನೀರು ಕೇವಲ ೧%!

ಮೂರು ವರ್ಷಗಳ ಬಳಿಕ ತುಂಬಿತು ಕೆಂಗೆಟ್ಟೆ ಕೆರೆ

ಕೆರೆಯೊಂದು ಅಭಿವೃದ್ಧಿಗೊಂಡರೆ ಊರೊಂದು ಅಭಿವೃದ್ಧಿಗೊಂಡಂತೆ ಎಂಬ ಮಾತು ಅಕ್ಷರಶಃ ಸತ್ಯ. ನಾವು ಇಂದು ಮಾಡಬೇಕಾದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಕೆರೆ ಅಭಿವೃದ್ಧಿಯು ಒಂದು. ಕೆರೆಯ ಹೂಳೆತ್ತುವ ಮೂಲಕ ಮಳೆಗಾಲದ ನೀರನ್ನು ಇಂಗಿಸಿ ಆ ಮೂಲಕ ಆ ಊರಿನ ನೀರ ಸಮಸ್ಯೆಯನ್ನು ದೂರವಾಗಿಸಿದ ಉದಾಹರಣೆಯೊಂದು ಸೊರಬ ತಾಲೂಕಿನ ಹಾಯ ಗ್ರಾಮದಲ್ಲಿದೆ.

ಕೆಂಗೆಟ್ಟೆ ಕೆರೆ ಸುಮಾರು ೪.೨೫ ಎಕರೆ ವಿಸ್ತೀರ್ಣವನ್ನು ಹೊಂದಿದೆ. ಕೆರೆಗೆ ಸುಮಾರು ೯ರಿಂದ ೧೨ನೇ ಶತಮಾನಕ್ಕಿಂತಲೂ ಹಿಂದಿನ ಇತಿಹಾಸವಿದೆ. ಈ ಮಾತಿಗೆ ಪೂರಕವಾಗಿ ಕೆರೆಯ ಹತ್ತಿರ ಗತಕಾಲದ ಕಲ್ಲೇಶ್ವರ ದೇವಾಲಯವಿದೆ. ಸುಮಾರು ಮೂರು ವರ್ಷಗಳ ಹಿಂದೆ ಕೆರೆಯಲ್ಲಿ ಸದಾ ನೀರಿರುತ್ತಿತ್ತು. ದಿನಕಳೆದಂತೆ ಕೆರೆಯಲ್ಲಿ ಹೂಳು ತುಂಬಿ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಯಿತು. ಕೆರೆ ಸಂಪೂರ್ಣ ಬತ್ತಿ ಹೋಯಿತು. ಪರಿಣಾಮವಾಗಿ ಬೋರ್‌ಗಳು ಬತ್ತಿದುವು. ಊರಿಗೆ ಪ್ರಮುಖ ಜಲಮೂಲವಾಗಿದ್ದ ಕೆರೆ ಬತ್ತಿದ್ದಂತೆ ಇಲ್ಲಿನ ಭೂಮಿ ಬರಡಾಗುತ್ತಾ ಹೋಯಿತು.

ಊರವರ ಸಹಭಾಗಿತ್ವದಡಿ ಕೆರೆಯ ಹೂಳೆತ್ತಿದರು :

1ಕಳೆದ ವರ್ಷ ಶ್ರೀಕ್ಷೇತ್ರ ದರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀ ಹೆಗ್ಗಡೆಯವರ ಮಾರ್ಗದರ್ಶನದಂತೆ ಸುಮಾರು ರೂ. ೧೦ ಲಕ್ಷ ವೆಚ್ಚದಲ್ಲಿ ಕೆರೆಯ ಹೂಳೆತ್ತುವ ಕೆಲಸವನ್ನು ಮಾಡಿ ಮುಗಿಸಿದೆ. ಸುಮಾರು ೯೦೦೦ ಟ್ರಾಕ್ಟರ್ ಲೋಡ್ ಹೂಳನ್ನು ತೆಗೆಯಲಾಗಿದ್ದು ಹೂಳನ್ನು ರೈತರು ತಮ್ಮ ಹೊಲ, ಗದ್ದೆಗಳಿಗೆ ಬಳಸಿಕೊಂಡಿದ್ದಾರೆ. ಹೊಲ ಗದ್ದೆಗಳಿಗೆ ರಸ್ತೆಯನ್ನು ನಿರ್ಮಿಸಿಕೊಂಡಿದ್ದಾರೆ. ಪಕ್ಕದ ದೇವಸ್ಥಾನದ ವಠಾರವನ್ನು ಸಮತಟ್ಟುಗೊಳಿಸಿದ್ದಾರೆ. ಹೂಳೆತ್ತುವ ಕೆಲಸದಲ್ಲಿ ಊರ ಮಂದಿ ಸ್ವಯಂ ಪ್ರೇರಣೆಯಿಂದ ತೊಡಗಿಸಿಕೊಂಡಿದ್ದು ಕೆರೆಯ ಸುತ್ತ ಸ್ವಚ್ಛತಾ ಕೆಲಸವನ್ನು ಮಾಡಿದ್ದಾರೆ. ಅಲ್ಲದೆ ೨೨೦ ವಿವಿಧ ಜಾತಿಗೆ ಸೇರಿದ ಸಸಿಗಳನ್ನು ಕೆರೆ ಸುತ್ತ ನೆಡಲಾಗಿದೆ. ಸುಮಾರು ೨೦ ದಿನಗಳ ಕಾಲ ಹೂಳೆತ್ತುವ ಕೆಲಸ ನಡೆದಿರುತ್ತದೆ. ಪರಿಣಾಮವಾಗಿ ಕಳೆದ ಬಾರಿಯ ಮಳೆಗಾಲದ ನೀರು ಕೆರೆಯಲ್ಲಿ ತುಂಬಿದೆ. ಇದರಿಂದಾಗಿ ಈ ಬಾರಿಯ ಬೇಸಿಗೆಯಲ್ಲಿ ಈ ಊರಿಗೆ ಊರಿನ ಸಮಸ್ಯೆ ಅಷ್ಟಾಗಿ ಕಾಡಲಿಲ್ಲ. ಸುಮಾರು ತೊಂಬತ್ತರಿಂದ ನೂರು ಕುಟುಂಬಗಳದಿ ಈ ಕೆರೆಯ ನೀರಿನ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಅಂದರೆ ಎರಡು ಸಾವಿರ ಮಂದಿಗೆ ನೀರ ವ್ಯವಸ್ಥೆಯನ್ನು ಕೆರೆ ಕಲ್ಪಿಸಿದೆ.

ಕೆರೆಯ ಹೂಳೆತ್ತಿದ ನಂತರ ಹಾಯ ಗ್ರಾಮದಲ್ಲಿರುವ ಬೋರ್‌ಗಳು ಬತ್ತಿಲ್ಲ. ಕಳೆದ ವರ್ಷ ಬತ್ತಿದ್ದ ಬಾವಿಗಳಲ್ಲಿ ಈ ಬಾರಿ ನೀರು ತುಂಬಿದೆ. ಜಾನುವಾರುಗಳಿಗೆ ಕುಡಿಯಲೂ ಈ ನೀರಿನ ಬಳಕೆಯಾಗುತ್ತಿದೆ.

ಭತ್ತ ಕೃಷಿಗೆ ಟ್ಯೂಬ್ ಮೂಲಕ ನೀರು :

7ಭತ್ತದ ಕೃಷಿಗೆ ಪ್ರತಿವರ್ಷ ಇದೇ ಕೆರೆಯಿಂದ ನೀರುಣಿಸಲಾಗುತ್ತದೆ. ಇದೀಗ ಟ್ಯೂಬ್ ಮೂಲಕ ಸುಮಾರು ೨೫೦ ರಿಂದ ೩೦೦ ಎಕರೆಗೆ ನೀರುಣಿಸಿ ಭತ್ತ ಬೆಳೆಯಲಾಗುತ್ತಿದೆ. ಕಾಡುಪ್ರಾಣಿಗಳಿಗೂ ಕೆರೆ ನೀರೊದಗಿಸುತ್ತಿದ್ದು ಈ ಬಾರಿಯ ಮಲೆಗಾಲದ ನೀರು ತುಂಬಿದ ನಂತರ ಇದರಲ್ಲಿ ಮೀನು ಸಾಕಣೆ ಆರಂಭಿಸಬೇಕೆಂಬ ಯೋಚನೆ ಸ್ಥಳೀಯರದ್ದು.

‘ಕೆರೆಯ ಹೂಳೆತ್ತಿದ ಪರಿಣಾಮವಾಗಿ ಈ ಬಾರಿಯ ಇಲ್ಲಿನ ನೀರಿನ ಸಮಸ್ಯೆ ಕಡಿಮೆಯಾಗಿದೆ. ಸಾಕಷ್ಟು ಮಂದಿ ಭತ ಬೆಳೆಯಲು ಆರಂಭಿಸಿದ್ದಾರೆ. ಒಣ ಭೂಮಿ ಹಸಿರಾಗುತ್ತಿದೆ. ಬತ್ತಿದ ಕೆರೆ, ಬೋರ್‌ಗಳಲ್ಲಿ ಜಲಮರುಪೂರಣವಾಗಿದೆ. ಕೆರೆಯ ಹೂಳೆತ್ತುವ ಕೆಲಸಗಳು ಊರವರ ಸಹಭಾಗಿತ್ವದಡಿ ನಡೆದ ಕಾರಣ ಊರಿನವರ ನಡುವೆ ಪ್ರೀತಿ, ಬಾಂಧವ್ಯ, ಒಗ್ಗಟ್ಟು ಮೂಡಿದೆ. ಬಡತನ ತಕ್ಕಮಟ್ಟಿಗೆ ನಿವಾರಣೆ ಆಗಿದೆ. ಜನರಲ್ಲಿ ನೀರಿನ ಮಹತ್ವದ ಅರಿವು ಮೂಡಿದೆ’ ಎನ್ನುವುದು ಇಲ್ಲಿನ ಸ್ಥಳೀಯರೋರ್ವರ ಅನುಭವದ ಮಾತು.

ಕೆರೆಗಳ ಹೂಳೆತ್ತುವ ಕೆಲಸವನ್ನು ಗ್ರಾಮಸ್ಥರು ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ. ಆ ಮೂಲಕ ‘ನಮ್ಮೂರ ನಮ್ಮ ಕೆರೆ’ಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ವರ್ಗಾಹಿಸೋಣ.

                                                           ಚಿತ್ರ-ಲೇಖನ:  ಚಂದ್ರಹಾಸ ಚಾರ್ಮಾಡಿ

Share on FacebookTweet about this on TwitterShare on LinkedIn

Leave a Reply

Your email address will not be published. Required fields are marked *


*